ಲೆನಿನ್‌ಗ್ರಾಡ್ ರಷ್ಯಾದೇಶದ ಒಂದು ಮುಖ್ಯ ನಗರ. ಸುಮಾರು ಎಂಟು ವರ್ಷಗಳ ಹಿಂದೆ ಆಕಸ್ಮಿಕವಾಗಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸವೊಂದನ್ನು ಹುಡುಕಿಕೊಂಡಿದ್ದೆ. ಮೆಟಲರ್ಜಿಯಲ್ಲಿ ಡಿಪ್ಲೊಮಾ ಪಡೆದಿದ್ದ ನನಗೆ ಸುಲಭವಾಗಿಯೇ ಜ್ಯೂನಿಯರ್ ಇಂಜಿನಿಯರ್ ಕೆಲಸ ಸಿಕ್ಕಿತ್ತು. ಬಹುಶಃ ರಷ್ಯನ್ನರು ತಾಂತ್ರಿಕತೆಗೆ, ಅದರಲ್ಲೂ ಕಬ್ಬಿಣದ ಉತ್ಪಾದನೆಗೆ ಹೆಚ್ಚು ಮಹತ್ವ ನೀಡುವುದರಿಂದ ಇದು ಸಾಧ್ಯವಾಗಿತ್ತು.
ಮೊದಲ ಬಾರಿಗೆ ತಾಯ್ನಾಡಿಗೆ ಹೊರಟಿದ್ದೆ. ಆಗಲೇ ಒಂದು ಟೆಲಿಗ್ರಾಂ ಸಿಕ್ಕಿತು. ಎಂದೂ ಇರದಿದ್ದ ಸಂದೇಶ ಇಂದೇನಿರಬಹುದೆಂಬ ಕುತೂಹಲ; ಜೊತೆಗೆ ಏನಾದರೂ ಆಗಬಾರದ್ದು ಆಗಿರಬಹುದೇ ಎಂಬ ಸಂದೇಹ, ಅತಿಯಾದ ಆತಂಕದಿಂದ ಓದಿದೆ. ‘ತಾಯಿಗೆ ಸೀರಿಯಸ್ಸಾಗಿದೆ ಬೇಗ ಬಾ’ ಎಂದು ಇಂಗ್ಲಿಷ್‌ನಲ್ಲಿತ್ತು.
ಇಲ್ಲಿಗೆ ಬರುವುದಕ್ಕಿಂತ ಮುಂಚೆ, ಒಮ್ಮೆ ತಾಯಿಯಾದವಳು ನನ್ನ ಅತ್ತಿಗೆಯೊಂದಿಗೆ ಜಗಳಾಡಿ, `ನಿಮಗೆ ಯಾರಿಗೂ ನನ್ನ ಹೆಣಾ ಕೂಡಾ ಸಿಗದಂತೆ ಸಾಯಿತೀನಿ ಕಣೋ’ ಎಂದು ಊರಿನ ಉತ್ತರಕ್ಕೆ ಇದ್ದ ದಟ್ಟ ಕಾಡಿನತ್ತ ನಡೆಯುತ್ತಿದ್ದಳು. ಆಗ ಯಾರೋ ಕಂಡು ಸಮಾಧಾನಿಸಿ ವಾಪಸ್ಸು ಕರೆತಂದಿದ್ದರೆನ್ನಿ.
ಈಗಲೂ ಅಮ್ಮನಿಗೇನಾದರೂ ಹೀಗೆಯೇ ತಲೆಗಿಲೆ ಕೆಟ್ಟು ನೇಣುಗೀಣು ಅಥವಾ ವಿಷಗಿಷ ಕುಡಿದಿದ್ದಾಳೆಯೇ? ಎಂಬ ಸಂಶಯ ಮೂಡಿತು. ಇಲ್ಲಿಗೆ ಹೊರಟು ಬಂದ ಹೊಸತರಲ್ಲಿ ಮಾತ್ರ ಒಂದೆರಡು ತಿಂಗಳು ಪತ್ರ ವ್ಯವಹಾರ ಮಾಡುತ್ತಿದ್ದು, ನಂತರ ನಾನೇ ಯಾರಿಗೂ ಪತ್ರ ಬರೆಯಬೇಡಿ ಎಂದಿದ್ದೆ. ಆ ವೇಳೆಯಲ್ಲಿಯೇ ಮಧ್ಯ ಪ್ರದೇಶದ ಒಬ್ಬ ವಿದ್ಯಾರ್ಥಿಗೆ ತನ್ನ ಊರಿನಿಂದ, ಅವನ ಗೆಳೆಯನೋ ಏನೋ, ಪತ್ರ ಬರೆದು ಪ್ರಾಕ್ಟಿಕಲ್ ಕಮ್ಯುನಿಜಂ ಬಗ್ಗೆ ನಿನ್ನ ಅಭಿಪ್ರಾಯ ತಿಳಿಸು ಎಂದು ಕೇಳಿದ್ದನಂತೆ. ನಾವು ವಾಸವಾಗಿದ್ದ ಬೀದಿಯಲ್ಲಿಯೇ ಅವನೂ ಇದ್ದದ್ದು. ಭಾರತದವರೆಂಬ ಕಾರಣದಿಂದ ನಮ್ಮ ಪರಿಚಯವಾಗಿ, ಕ್ರಮೇಣ ಸ್ನೇಹವಾಗುವುದರಲ್ಲಿತ್ತು. ಇವನೂ ಸಹ ತಾನು ಕಂಡದ್ದನ್ನು, ಕೇಳಿದ್ದನ್ನು ಎಲ್ಲಾ ಸೇರಿಸಿ, ‘ತಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ, ಬಯಲು ಜೈಲಿನಲ್ಲಿರಿಸಿದಂತಾಗುತ್ತದೆ’ ಎಂದೇನೇನೋ ಬರೆದಿದ್ದನಂತೆ. ಹಾಗೆಂದು ನನಗೂ ಹೇಳಿದ್ದ. ಅದರ ಮಾರನೆಯ ದಿನವೇ ಅವನ ಹೆಣವಿರಲಿ, ಹೆಸರೂ ಸಹ ಸಿಗದಂತೆ ಅವನ ಪತ್ರದೊಂದಿಗೆ ಅವನನ್ನೂ ನಿರ್ನಾಮ ಮಾಡಲಾಗಿತ್ತು. ಹಾಗೆಂದು ರಷ್ಯಾದ ನಮ್ಮ ಭಾರತೀಯರ ಸಂಘದಲ್ಲಿ ಪಿಸುಗುಟ್ಟುತ್ತಾ ಮಾತನಾಡಿದ್ದೆವು. ಏನು ಬರೆದರೂ ಅದು ಸೆನ್ಸಾರ್ ಆಗದೇ ಭಾರತಕ್ಕೆ ಹೋಗಲಾರದೆಂಬ ಅರಿವು ಆಗಲೇ ಜಾಗೃತವಾದದ್ದು. ಅದರಲ್ಲೂ ನನ್ನ ಊರಿನ ಹಳ್ಳಿಯವರು, ಸರಿಯಾಗಿ ಓದು ಬರಹ ಬಾರದಿರುವುದರಿಂದ, ಏನೋ ಬರೆಯಲು ಹೋಗಿ ಏನೋ ಆಗಿ ಇಲ್ಲದ ತಲೆನೋವು ತಂದುಗಿಂದಾರಂದು ಖಡಾಖಂಡಿತವಾಗಿ ಪತ್ರವನ್ನು ಬರೆಯಲೇ ಕೂಡದೆಂದು ತಿಳಿಸಿದ್ದು.
ಅನಂತರ ಇಷ್ಟು ವರ್ಷವೂ ಯಾವುದೇ ಪತ್ರವೂ ಬಂದಿರಲಿಲ್ಲ. ನನಗೂ ಊರಿನ ಬಗ್ಗೆ, ಊರವರ ಬಗ್ಗೆ, ಏನೂ ತಿಳಿಯಲು ಸಾಧ್ಯವಿರಲಿಲ್ಲ. ಅಷ್ಟಕ್ಕೂ ಅವರೇನೂ ಇತಿಹಾಸ ನಿರ್ಮಾತೃಗಳಲ್ಲವಲ್ಲ. ಬಿಡುವಿದ್ದಾಗ ಊರಿನ ಚಿತ್ರಣವನ್ನು ಕಲ್ಪಿಸಿಕೊಂಡು ಡೈರಿಯಲ್ಲಿ ಚಿತ್ರಿಸುತ್ತಿದ್ದೆ- ಊರಿಗೆ ಹೋದಾಗ ಟ್ಯಾಲಿ ಮಾಡಿ ವಾಸ್ತವಕ್ಕೂ, ಕಲ್ಪನೆಗೂ ಇರುವ ಸಾಮರಸ್ಯವನ್ನು ತಿಳಿಯಬಹುದೆಂದು.
ಭಾರತದಲ್ಲಿರುವವರೆಗೂ ಯಾರ ವರ್ತನೆಯನ್ನೂ ನಡವಳಿಕೆಯನ್ನೂ ವಿಮರ್ಶಿಸಿ ನೋಡುತ್ತಿರಲಿಲ್ಲ. ಅತ್ಯಾವಶ್ಯಕ ದೈನಂದಿನ ಚಟುವಟಿಕೆಗಳು ಎಂದುಕೊಂಡಿದ್ದೆ. ಆದರೆ ರಷ್ಯಾಗೆ ಬಂದ ನಂತರ ದೂರನಿಂತು ಕಾದಂಬರಿಯ ಪಾತ್ರಗಳಂತೆ ಎಳೆ ಎಳೆಯನ್ನು ಬಿಡಿಸಿ ಚರ್ಚಿಸುತ್ತಿದ್ದೆ. ಆಗೆಲ್ಲ ಅದೆಷ್ಟೇ ವಾಸ್ತವಿಕ ಕಾದಂಬರಿಯೆಂದರೂ ಅದು ಜೀವನದಿಂದ ತೀರಾ ಭಿನ್ನ ಎಂದುಕೊಳ್ಳುತ್ತಿದ್ದೆ.
ಈಗ ಅಮ್ಮನಿಗೇನಾಗಿರಬಹುದು? ಎಂದುಕೊಳ್ಳುತ್ತಾ ಎಲ್ಲರ ಮುಖಗಳನ್ನೂ ನೆನಪಿನಂಗಳಕ್ಕೆ ಕರೆತರುತ್ತಿದ್ದೆ. ನಾನೆಷ್ಟೇ ಪ್ರಯತ್ನಿಸಿದರೂ ಅವರ ಮುಖವನ್ನಲ್ಲದೇ, ದೇಹವನ್ನು ನೆನಪಿನಲ್ಲಿ ಕರೆತರುವುದು ಕಷ್ಟವೆನಿಸುತ್ತಿತ್ತು. ಯಾರೊ ಒಬ್ಬ ಮಹಾಶಯ ‘ಫೇಸ್ ಈಸ್ ಇಂಡೆಕ್ಸ್ ಆಫ್ ಮೈಂಡ್’ ಎಂದು ಹೇಳಿದ್ದು ತಪ್ಪು ಎನಿಸಿತು. ಜೊತೆಗೆ ‘ಅಫ್ ಕೋರ್ಸ್’ ಎಂಬ ಉದ್ಘಾರವೂ ಬಂತು. `ಓನ್ಲಿ ದ ಫೇಸ್ ಈಸ್ ಇಂಡೆಕ್ಸ್ ಆಫ್ ಹ್ಯೂಮನ್ ಬೀಯಿಂಗ್’ ಎಂದುಕೊಂಡೆ. ಏಕೆಂದರೆ ತಲೆಯಿರದ ದೇಹವನ್ನು ಯಾರೂ ಗುರುತಿಸಲಾರರು; ಮುಖವಿಲ್ಲದ ಫೋಟೋನಿಂದ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಕಷ್ಟ ಎಂಬುದು ವಾದ.
ನನ್ನ ಮನಸ್ಸೇಕೆ ನನ್ನ ಕೈಗೆ ಸಿಗುತ್ತಿಲ್ಲ. ನನ್ನ ತಾಯಿಯ ಬಗ್ಗೆ ಚಿಂತಿಸಬೇಕಾದ್ದು ನನ್ನ ಕರ್ತವ್ಯ. ಆದರೆ ಆಕೆ ಸೀರಿಯಸ್ ಎಂದು ತಿಳಿದಿದ್ದರೂ ನನಗೇಕೆ ಏನೂ ಅನ್ನಿಸುತ್ತಿಲ್ಲ. ಬಹುಶಃ ಬಹಳ ವರ್ಷಗಳಿಂದ ತಪ್ಪಿರುವ ಸಂಬಂಧದ ಸಂಕೋಲೆಯಿಂದ ನನ್ನ ಸಂಬಂಧಿಗಳೂ ನನಗೆ ಯಾರೋ ಆಗಿದ್ದಾರೆಯೇ? ನನ್ನ ನಿರಾತಂಕ, ನಿರುದ್ವಿಗ್ನ ಮನಸ್ಸೇ ಇದಕ್ಕೆ ಕಾರಣವೇ?
ನಾನಲ್ಲಿದ್ದಾಗ ಅಮ್ಮ ಅತ್ತಿಗೆಯನ್ನು ಕಂಡರೆ ಯಾಕೆ ಹಾಗೆ ಸಿಡಿಯುತ್ತಿದ್ದಳು. ಛೇ! ಅಮ್ಮನನ್ನು ಕಂಡರೆ ಅತ್ತಿಗೆಯೇ ಹಾಗೆ ಸಿಡಿಯುತ್ತಿದ್ದಿರಬೇಕು. ಇಬ್ಬರೂ ಒಬ್ಬರನ್ನೊಬ್ಬರು ಕಂಡಾಗ ಸಿಡಿಯುತ್ತಿದ್ದರು ಎಂಬುದಂತೂ ನಿಜ. ಅಣ್ಣ ಏಕೆ ಸುಮ್ಮನಿರುತ್ತಿದ್ದ? ಆಗಲೂ ನಾನು ಅವರಿಬ್ಬರ ವಾದವನ್ನು ಕೇಳಿದ್ದೇನೆ. ಇಬ್ಬರದೂ ಸರಿ ಎನ್ನಿಸುತ್ತಿತ್ತು- ಬೇರೆ ಬೇರೆಯಾಗಿ ಕೇಳಿದಾಗ, “ಎಲ್ಲರೂ ಅವರವರ ಮೂಗಿನ ನೇರಕ್ಕೆ ಹೇಳುತ್ತೀರಿ” ಎನ್ನುತ್ತಿದ್ದ ಅಣ್ಣ. ಹಾಗಾದರೆ ಅವನ ಮೂಗಿನ ನೇರಕ್ಕೆ ಯಾವುದು ಸರಿ. ಹೆಂಡತಿಯದೋ? ಅಮ್ಮನದೋ? ಅವನಂತೂ ಅಭಿಪ್ರಾಯ ಹೇಳುತ್ತಿರಲಿಲ್ಲ. ಜಗಳವಾಡುವಾಗಲೆಲ್ಲಾ ಇಬ್ಬರಿಗೂ ಬಯ್ಯುತ್ತಿದ್ದ ಅಥವಾ ರೇಡಿಯೋವನ್ನು ಜೋರಾಗಿ ಹಾಕುತ್ತಿದ್ದ. ಕರೆಂಟಿನ ಪ್ಯೂಸ್ ತೆಗೆದು (ರಾತ್ರಿಯಾಗಿದ್ದರೆ) ಕತ್ತಲೆ ಮನೆ ಮಾಡುತ್ತಿದ್ದ ಇಲ್ಲವೇ ಚಿಲಕ ಹಾಕಿಕೊಂಡು ಏನೂ ಅರಿಯದವನಂತೆ ಯಾರದಾದರೂ ಮನೆಗೆ ಹೋಗಿ ಬಿಡುತ್ತಿದ್ದ. ಇಲ್ಲಿಗೆ ಬಂದ ಮೇಲೆ ನಾನೂ ಯೋಚಿಸುತ್ತಿದ್ದೆ. ‘ಇವರಿಬ್ಬರಲ್ಲಿ ಯಾರು ಸಾಚಾ?’ ಅವರ ಹೇಳಿಕೆಗಳೆಲ್ಲಾ ನೆನಪಾಗುತ್ತಿದ್ದವು.
“ನಿನ್ನ ಗಂಡ ಇಷ್ಟು ದೊಡ್ಡವನು ಆಗ್ಬೇಕು ಅಂದ್ರೆ ನಾನೆಷ್ಟು ಹೊಟ್ಟೆ ಬಟ್ಟೆ ಕಟ್ಟಿದೀನಿ ಅಂತ ಗೊತ್ತಾ” `ಇವತ್ತು ಬಂದ ನಿಂಗೇ ಇಷ್ಟು ಇರ್ಬೇಕಾದ್ರೆ, ಕಾಲದಿಂದ ಇರೋ ನಂಗೆ ಎಷ್ಟಿರಬೇಕು?’ ಇವು ಅವ್ವನ ಮಾತುಗಳು. ಆದರೆ, ನಮ್ಮ ವ್ಯವಸ್ಥೆಯಲ್ಲಿ ಅಮ್ಮ ಈ ಮನೆಯ ಒಡತಿಯಾದರೂ `ಬಂದವಳು’ ಎಂಬ ಕಾಂಪ್ಲೆಕ್ಸ್‌ನ ಏಕೆ ಇಟ್ಟುಕೊಂಡಿದ್ದಾಳೆಂದು ತಿಳಿಯುತ್ತಿರಲಿಲ್ಲ.
ಅದಕ್ಕೆ ಅತ್ತಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಳೋ ತಿಳಿಯುತ್ತಿರಲಿಲ್ಲ. ಆದರೆ ಆಕೆಯ ಕೆಲ ಮಾತುಗಳು ಸ್ಮೃತಿಪಟಲದಿಂದ ಮರೆಯಾಗಿರಲಿಲ್ಲ.
“ನಿನ್ನ೦ತೋರಿಂದ್ಲೇ ಇಷ್ಟೊಂದು ಜನ ಸೊಸೇರು ದಿನಾ ದಿನಾ ಓಡೋಗ್ತಾ ಇರೋದು. ಸಾಯ್ತಾ ಇರೋದು’; ‘ನೀನು ಸೊಸೇರ ಬಾಳುಸ್ತೈನೇ. ಇಟ್ಟಿದ್ಕೆ ಮುಟ್ಟಿದ್ಕೆಲ್ಲಾ ಮಕಮುಸ್ಣಿ ತಿರುಸ್‌ತಿದ್ರೆ ಯಾರ್ ತಾನೇ ನಿಂತಾವ ಬಾಳ್ತಾರೆ…’ ಇತ್ಯಾದಿ.
ಆಗೆಲ್ಲಾ ಕೋರ್ಟಿನ ನೆನಪಾಗಿ, ಬಹುಶಃ ಜಡ್ಜ್‌ಗೂ ನನ್ನ ತರಾನೇ ಯಾರ ಕಡೆಗೂ ತೀರ್ಪು ನೀಡಲಾಗದೇ ತಿಂಗಳುಗಟ್ಲೇ, ವರ್ಷಗಟ್ಲೇ ಕೇಸ್‌ನ ಮುಂದಕ್ಕೆ ಹಾಕ್ತಾ ಇದ್ದಾರೇನೋ? ಅನಿಸುತಿತ್ತು. ಬಹಳ ಕಷ್ಟ ಜಡ್ಜ್ ಮಾಡುವ ಕೆಲಸ ಎಂದುಕೊಂಡು ಸುಮ್ಮನಾಗುತ್ತಿದ್ದೆ.
ಇನ್ನೂ ಕೆಲವೊಮ್ಮೆ ಈ ಚಿಂತನೆಗೆ ಸಂವಾದಿಯಾಗಿ, ರಷ್ಯಾಕ್ಕೂ ಜರ್ಮನಿಗೂ ಸರಿಯಾಗಿರದೇ ಇರುವುದು, ನಾಜಿ, ಹಿಟ್ಲರ್ ಅಂದರೇ ಸಾಕು ರಷ್ಯನ್ನರೇಕೆ ಸಿಟ್ಟಿಗೇಳುತ್ತಾರೆ ಎಂಬುದು; ಜರ್ಮನಿಯವನೇ ಆದ ಕಾರ್ಲ್‌ಮಾರ್ಕ್ಸ್ ರಷ್ಯಾದ ಆರ್ಥಿಕತೆಯ ಪಿತಾಮಹ ಹೇಗಾದ ಎಂಬುದು ಆತ ಯುರೋಪಿನ ಕೈಗಾರಿಕಾ ದೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಾಂತಿಯ ಸೂತ್ರ ರೂಪಿಸಿದ್ದರೂ ಸಹ ಮೊದಲು ವ್ಯಾವಸಾಯಿಕ, ಸಾಂಪ್ರದಾಯಿಕ ದೇಶವಾಗಿದ್ದ ರಷ್ಯಾದಲ್ಲಿಯೇ ಏಕೆ ಕ್ರಾಂತಿ ನಡೆಯಿತು ಎಂಬುದು; ಪ್ರಜಾಪ್ರಭುತ್ವದ ಅಮೇರಿಕಾ ಮತ್ತೊಂದು
ಪ್ರಜಾಪ್ರಭುತ್ವದ ವಿರುದ್ಧ ಮಿಲಿಟರಿ, ಕಮ್ಯೂನಿಸ್ಟ್ ರಾಷ್ಟ್ರಗಳಿಗೂ; ಕಮ್ಯುನಿಸ್ಟ್‌ನ ರಷ್ಯಾ ದೇಶ ತಾನೇ ಹುಟ್ಟುಹಾಕಿದ ಕಮ್ಯುನಿಸಂನ ವಿರುದ್ಧ ಎಷ್ಟೋ ಸಲ ಪ್ರಜಾಪ್ರಭುತ್ವ ಸರಕಾರಗಳಿಗೂ ಏಕೆ ಉತ್ತೇಜನ ನೀಡುತ್ತಾ ಇವೆ ಎಂದುಕೊಳ್ಳುತ್ತಿದ್ದೆ. ಇವೆಲ್ಲಾ ಶೀತಲ ಸಮರ ಎಂಬ ಪದದಡಿಯಲ್ಲಿ ಸುಲಭವಾಗಿ ಗುರುತಿಸಬಹುದು. ಆದರೆ ವಿರೋಧಾಭಾಸಗಳು ಜೀವನದುದ್ದಕ್ಕೂ ನಡೆಯುತ್ತಿರುತ್ತವೆ ಎಂಬುದಂತೂ ದಿಟ.
ಕಷ್ಟಪಟ್ಟು ಅಮ್ಮ ಸೀರಿಯಸ್ ಆಗಿರಬಹುದಾದ ವಿಧಾನವನ್ನು ಯೋಚಿಸಲಾರಂಭಿಸಿದ. ಆದರೂ ಅದನ್ನು ಮೀರಿ ಹೊರಗಿನ ಭಾವನೆಗಳು ನುಗ್ಗುತ್ತಿದ್ದವು. ‘ರಷ್ಯಾ ನಮ್ಮ ಪರವಾಗಿ ಇದ್ದರೂ ನಾವೇಕೆ ಕಮ್ಯುನಿಸ್ಟರನ್ನು ಲೆಪ್ಟಿಸ್ಟ್ ಎನ್ನಬೇಕು? ಕ್ರಾಂತಿಯನ್ನು ತನ್ಮೂಲಕ ಸಮಾನತೆಯನ್ನು ಬಯಸುವ ಅವರನ್ನು ನಮ್ಮ ಪೊಲೀಸರು ಕೊಲ್ಲಲೂ ಏಕೆ ಹಿಂಜರಿಯುವುದಿಲ್ಲ? ಅಂತೆಯೇ ರಷ್ಯನ್ನರೇಕೆ ಅಹಿಂಸಾವಾದಿ ಗಾಂಧಿಗಿಂತ ಹೆಚ್ಚಾಗಿ ನೆಹರು, ಇಂದಿರಾಗಾಂಧಿಯವರನ್ನು ಇಷ್ಟಪಡುತ್ತಾರೆ? ಕ್ರಿಶ್ಚಿಯನ್ನರು ಏಕೆ ಪಾಶ್ಚಾತ್ಯ ದೇಶಗಳಿಂದ ಬಂದು ತಮ್ಮ ಮತ ಪ್ರಸಾರಕ್ಕಾಗಿಯೇ ಪೌರ್ವಾತ್ಯದಲ್ಲಿ ಅಷ್ಟೊಂದು ಖರ್ಚು ಮಾಡಬೇಕು? ರಷ್ಯನ್ನರೇಕೆ ಭಾರತದಲ್ಲಿ ಕಮ್ಯುನಿಸಂಗೆ ಸಂಬಂಧಿಸಿದ ಸಾಹಿತ್ಯವನ್ನು ಕಡಿಮೆ ಬೆಲೆಯಲ್ಲಿ ಅಥವಾ ಉಚಿತವಾಗಿ ನೀಡಬೇಕು? ನನ್ನಂತಹವರನ್ನು ಕರೆದು ಕೆಲಸವನ್ನೇಕೆ ಕೊಡಬೇಕು?” ಮುಂದುವರೆಯುತ್ತಲೇ ಇತ್ತು ವಿಚಾರ ಸರಣಿ- ನನ್ನ ಪ್ರಯಾಣದಂತೆಯೇ.
ನಗರದಿಂದ ನಾಲ್ಕು ಕಿಲೋಮೀಟರಿನಷ್ಟು ದೂರದಲ್ಲಿರುವ ಹಳ್ಳಿಯಲ್ಲಿ ನಮ್ಮ ಮನೆಯಿದ್ದದ್ದು, ಸ್ಥಿರಾಸ್ತಿಯಾದ್ದರಿಂದ ಧೈರ್ಯದಿಂದಲೇ ಅಲ್ಲಿಗೆ ಹೊರಟೆ. ಆದರೆ ಅದು ಕೇವಲ ಒಂದು ಕಿಲೋಮೀಟರ್‌ನಷ್ಟು ಹತ್ತಿರಕ್ಕೆ ಬಂದಿತ್ತು ಪಟ್ಟಣವಾಗಿ.
ಅಂದಾಜಿನ ಮೇಲೆ ಹುಡುಕಿದಾಗ ಮನೆಯೇನೋ ಅಲ್ಲೇ ಇತ್ತು. ಆದರೆ ಬಾಡಿಗೆಗೆ ಕೊಟ್ಟು ಮನೆಯವರೆಲ್ಲಾ ತೋಟದ ಹತ್ತಿರವಿದ್ದ ಹಳ್ಳಿಗೆ ಹೋಗಿಬಿಟ್ಟಿದ್ದರು. ಅದೇ ಆಟೋದವನನ್ನು ಕರೆದು ನಿರ್ದೇಶಿಸಿದ.
ಆ ಹಳ್ಳಿ ತಲುಪಿದಾಗ ಯಾರೋ ಒಬ್ಬನನ್ನು ಕರೆದು ವಿಚಾರಿಸಿದೆ. ನಮ್ಮ ಮನೆ ಯಾವುದೆಂದು. ಆತ ತೋರಿಸಿದ. ಹೋಗಿ ನೋಡಿದರೆ ಬೀಗ ಹಾಕಿತ್ತು. ಪಕ್ಕದ ಮನೆಯ ಹೆಂಗಸನ್ನು ಕೇಳಿದಾಗ, ಅಮ್ಮನನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಸೇರಿಸಿದ್ದಾರೆಂದು, ಹಬ್ಬಕ್ಕೆಂದು ಸುಣ್ಣ ಬಳಿಯಲು ಹೋಗಿ ಏಣಿ ಜಾರಿ ಬಿದ್ದು ಬಿಟ್ಟಿದ್ದರೆಂದೂ ತಿಳಿಯಿತು. ಆಕೆಯ ಗ್ರಾಮೀಣ ಕನ್ನಡ ಅಸ್ಪಷ್ಟವಾಗಿ ಅರ್ಥವಾಗಿತ್ತು. ನನ್ನದೇ ಭಾಷೆ ನನಗೇ ಅಪರಿಚಿತವಾಗುತ್ತಿರುವ ಭಯ ಊಂಟಾಯಿತು.
ಸರಿ, ಆಟೋ ಮೆಗ್ಗಾನ್ ಆಸ್ಪತ್ರೆಯತ್ತ ಓಡಿತು. ದಾರಿಯಲ್ಲಿ ನಡೆದು ಹೋಗುತ್ತಿದ್ದ ಒಬ್ಬ ನನ್ನ ಗಮನ ಸೆಳೆದ. ಆತ ಸುಮಾರು ಅರ್ಧ ಅಡಿ ಗಡ್ಡ ಬಿಟ್ಟು ಕಾಕಿ ಪ್ಯಾಂಟು, ಕಪ್ಪು ಅಂಗಿ ತೊಟ್ಟಿದ್ದ. ಅದು ಕಾವಿ ಆಗಿದ್ದರೂ ನನಗೇನೂ ಅನಿಸುತ್ತಿರಲಿಲ್ಲ. ಏಕೆಂದರೆ ಕಾವಿಗೂ, ಕಾಕಿಗೂ, ಖಾದಿಗೂ ಅದರದರದೇ ಆದ ವೈಶಿಷ್ಟ್ಯವಿರುತ್ತಲ್ಲ.
ಆಸ್ಪತ್ರೆಯ ನಿಲುವುಗನ್ನಡಿಯ ಬಳಿಯಿದ್ದ ರಿಸೆಪ್ಪನಿಸ್ಟನ್ನು ವಿಚಾರಿಸಿದೆ. ಏಕೆಂದರೆ ನನ್ನಮ್ಮನನ್ನು ನಾನೇ ಗುರುತು ಹಿಡಿಯಲು ಅಸಾಧ್ಯವೆಂದು ಅದೇಕೋ ನನ್ನ ಸಿಕ್ತ್ ಸೆನ್ಸ್ ಹೇಳುತ್ತಿತ್ತು.
ಆಕೆ ರೂಂ ನಂಬರ್, ಬೆಡ್ ನಂಬರ್ ಎಲ್ಲಾ ಹೇಳಿದಳು. ಥ್ಯಾಂಕ್ಸ್ ಹೇಳಿ ತಿರುಗುತ್ತಿದ್ದಂತೆಯೇ ಆಕೆ ‘ಎಕ್ಸ್‌ಕ್ಯೂಸ್‌ಮಿ’ ಎಂದಳು. ನಿಂತು ಕಣ್ಣಲ್ಲಿ ಕಣ್ಣು ಬೆರೆಸಿದೆ. “ನೀವು ಅವರ ಮಗ ಚಿದಂಬರಾ ಅಲ್ವಾ?” ಎಂದಳು. ‘ಹೂಂ’ ಎಂದೆ. ಏಕೆ ಎಂದು ಕೇಳಬಾರದೆಂದು ಸುಮ್ಮನಿದ್ದಾಗ, “ಗ್ರಾಡ್‌ನಿಂದ ಯಾವಾಗ ಬಂದ್ರಿ?” ಎಂದಳು. “ಈಗಷ್ಟೇ” ಎಂದು ವಿಸ್ಮಯದಿಂದ ‘ಬೈ ದಿ ಬೈ…’ ಎನ್ನುವಷ್ಟರಲ್ಲೇ “ನನ್ನ ಗುರುತು ಸಿಗಲಿಲ್ವಾ?” ಎಂದಳು. ಮನಸ್ಸಲ್ಲಿ ಪರಿಚಯವಿದ್ದ ನೂರಾರು ಹುಡುಗಿಯರು ನೆನಪಾಗಿ, ನೆನಪಿನ ಕನ್ನೆಯರಿಗೆ ಬಿಳಿ ಡ್ರೆಸ್ ಉಡಿಸಿ, ಗುರುತಿಸಿ, ನನಗರಿವಿಲ್ಲದೆಯೇ “ಸಂಗೀತಾ…” ಎಂದು ಪ್ರಶ್ನಿಸುವ ಧಾಟಿಯಲ್ಲಿ ಹೇಳಿದಾಗ ‘ಹಾ’ ಎಂದು ಉಬ್ಬಿಹೋದಳು. ಅವಳ ಮುಖದಲ್ಲಿ ಅದೆಂತಹ ಸಂತೃಪ್ತಪೂರ್ಣ ತೇಜಸ್ಸು ತುಂಬಿತು. ಅವಳ ಮುಗುಳ್ನಗುವೇ ನನಗೆ ಅಪ್ಪಿ ಕಚಗುಳಿ ಇಟ್ಟಂತಾಗಿ ಪುಳಕಗೊಂಡೆ, ಆದರೆ ಅಮ್ಮನನ್ನು ಕಾಣುವ ಆತಂಕದ ಆತುರದಲ್ಲಿ `ಆಮೇಲೆ ಪ್ರತ್ಯೇಕ ಭೇಟಿಯಾಗೋಣ’ ಎಂದು ಒಳಹೋದೆ.
ರೂಂ, ಬೆಡ್ ಎಲ್ಲವನ್ನೂ ಸಂಗೀತಾ ಹೇಳಿದಂತೆಯೇ ಗುರುತಿಸಿದೆ. ರೋಗಿಯ ಮುಖ ನೋಡಿದೆ. ಆಕೆ ಬಾಗಿಲಲ್ಲಿ ಬಂದು ಹೋಗುವವರನ್ನು ಸಾಮಾನ್ಯವಾಗಿ ಗಮನಿಸುವಂತೆ ನೋಡಿದಳು. ಆದರೆ ಹೆಚ್ಚು ಹೊತ್ತು ಆಕೆಯ ಮುಖ ನಿರುಕಿಸಲು ಮುಜುಗರ ವಾದದ್ದುದರಿಂದಲೂ, ಆಕೆಯು ನನ್ನನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದರೂ ಗುರುತು ಹಿಡಿಯದಿದ್ದುದರಿಂದಲೂ, ಆಕೆ ನನ್ನಮ್ಮನಲ್ಲದಿರಬಹುದೆಂಬ ನನ್ನ ಅನುಮಾನ ಬಲವಾಗಿ ಬೇರೆ ಬೆಡ್‌ಗಳ ರೋಗಿಗಳನ್ನು ಗಮನಿಸಲಾರಂಭಿಸಿದೆ. ಎಷ್ಟೇ ಪರೀಕ್ಷಕ ದೃಷ್ಟಿಯಿಂದ ಎಲ್ಲರನ್ನೂ ಕಂಡರೂ, ಸಂಗೀತಾ ತಿಳಿಸಿದ ಬೆಡ್ ನಂಬರ್‌ನವಳೇ ನನ್ನ ತಾಯಿ ಎಂದು ಆರನೆಯ ಇಂದ್ರಿಯ ಹೇಳುತ್ತಿತ್ತು. ಆಕೆಯೇ ನನ್ನ ತಾಯಿಯಾಗಿದ್ದಲ್ಲಿ ನಾನು ಗುರುತು ಹಿಡಿಯಲಾಗದಿದ್ದುದನ್ನು ಆಡಿಕೊಂಡು ನಗುತ್ತಾರೆನಿಸಿ, ನಾಚಿಕೆ ಮುಜುಗರವೆನಿಸಿ ಕೊನೆ ಬಾರಿ ಮುಖ ನೋಡಿ ಹೊರಬಂದೆ. ಆಕೆ ನನ್ನ ಅಮ್ಮನೇ ಆಗಿದ್ದರೆ ನನ್ನ ಗುರುತು ಖಂಡಿತಾ ಹಿಡಿಯುತ್ತಿದ್ದಳು’-ಎನಿಸಿತು. ಆದರೆ ನಾನೂ ಬದಲಾಗಿದ್ದೇನೆ ಎಂದು ನಂಬಲು ಸಿದ್ಧನಿರಲಿಲ್ಲ.
ಸಂಗೀತಾಳಲ್ಲಿ ಪುನಃ ಕೇಳಲು ನಾಚಿಕೆಯೆನಿಸಿ ಸ್ವಲ್ಪ ಹೊತ್ತು ಹೊರಗೆ ಕಾದೆ. ಅಷ್ಟರಲ್ಲಿ ಕಾರಿಡಾರಿನಲ್ಲಿ ಬಂದ ನನ್ನ ತಂದೆಯನ್ನು ಗುರುತು ಹಿಡಿದು ಮಾತನಾಡಿಸಿದೆ. ಅವರು ವಿಚಿತ್ರ ಸಂತಸದಲ್ಲಿ ಒಳಗೆ ಕರೆದೊಯ್ದರು. ಆಕೆಯೇ ನನ್ನ ತಾಯಿ! ನಗುವನ್ನು ಬಿಂಬಿಸಲಾಗದೇ, ನೋವಿನ ಮರೆಯಲ್ಲಿ ಮುಖ ನೋಡುತ್ತಿದ್ದರು. ನಂತರ ದೃಷ್ಟಿ ಬದಲಾಯಿಸಲೆಂದು ಕೈ ನೋಡಿದರು. ನಾನು ಅವರಿಗಾಗಿ ಏನನ್ನೂ ತಂದಿರಲಿಲ್ಲ. ಸಂಕೋಚ ನಾಚಿಕೆ ಮುಜುಗರ ಎಲ್ಲಾ ಒಟ್ಟಿಗೇ ಅನುಭವಿಸಿದೆ. ತಕ್ಷಣ ಹೊರ ಹೋಗಿ ಎರಡು ಎಳನೀರು ತಂದೆ. ಅಷ್ಟರಲ್ಲಿ ದಾರಿಯಲ್ಲಿ ಕಂಡಿದ್ದ ಕಾಕಿ ಬಟ್ಟೆಯ ಗಡ್ಡಧಾರಿ ಬಂದಿದ್ದ. ಅಪ್ಪ ಅವನನ್ನು ಸಂಬೋಧಿಸಿದುದನ್ನು ಕೇಳಿ ಅವನೇ ನನ್ನ ಅಣ್ಣನೆಂದು ತಿಳಿಯಿತು. ಅವನು ನನ್ನ ಕಂಡ ಭೇಟಿಯ ಸಂತಸ ಸೂಚಿಸಲು ಶುಷ್ಕನಗೆ ನಕ್ಕರೂ ನನಗೆ ನಗು ಬರಲಿಲ್ಲ. ಗಡ್ಡದಡಿ ಅಣ್ಣನನ್ನು ಹುಡುಕಲು ಪ್ರಯತ್ನಿಸುತ್ತಿದ್ದೆ.
ನಾನು ಎಳನೀರನ್ನು ಲೋಟಕ್ಕೆ ಬಗ್ಗಿಸಿ ಅಮ್ಮನ ಬಾಯಿಗೆ ಬಿಟ್ಟೆ, ಸ್ವಲ್ಪ ಕುಡಿದು ಕೈಚಾಚಿ ತಲೆ ಹತ್ತಿರ ತರುವಂತೆ ಸೂಚಿಸಿದಾಗ ಅಮ್ಮನ ಮುಖದ ಬಳಿ ತಂದೆ. ಮುಖದ ಮೇಲೆಲ್ಲಾ ಕೈಯಾಡಿಸಿ ಅದಾವುದೋ ಸ್ಪರ್ಶ ಸುಖ ಅನುಭವಿಸಿದರು. ಅತೀ ಪ್ರೀತಿಯೆಂದು ಯಾರಾದರೂ ಅಂದುಕೊಂಡಾರೆಂದು ಸಂಕೋಚದಿಂದ ತಲೆ ಎತ್ತಿದೆ. ಅಮ್ಮ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎನಿಸಿತು. ನೀರು ಕುಡಿಸಿದೆ. ಅಣ್ಣನಿಗೂ ನೀರು ಬಿಡುವಂತೆ ಸೂಚಿಸಿದರು. ಅವನೂ ಬಿಟ್ಟ, ಗಂಟಲಲ್ಲಿ ನೀರು ಇಳಿಯಲಿಲ್ಲ. ಕಣ್ಣಲ್ಲಿ ನೀರುಕ್ಕಿತು. ಕಣ್ಣು ತರದೇ ಇದ್ದಂತೆ ಮುಖ ಪಕ್ಕಕ್ಕೆ ವಾಲಿತು. ಅಮ್ಮ ನಿರ್ಜಿವಳಾದಳು. ಅಣ್ಣ-ಅಪ್ಪ ಕಿರುಚಿ ಅಳಲಾರಂಭಿಸಿದರು. ಎಲ್ಲರೂ ನಮ್ಮತ್ತ ನೋಡಿದರು. ಶಬ್ದ ಕೇಳಿ, ‘ಯಾರೋ ಗೊಟಕ್ ಅಂದ್ರು’ ಎಂದುಕೊಳ್ಳುತ್ತಾ ನರ್ಸ್‌ಗಳು ಮತ್ತಿತರ ಸಿಬ್ಬಂದಿಗಳು ಬಂದರು. ಆಳಲು ನನಗೆ ನಾಚಿಕೆಯೆನಿಸಿತು. ಮೇಲಾಗಿ ಮಾಜಿ ಪ್ರೇಯಸಿ ಸಂಗೀತಾ ಸಹ ಅಲ್ಲಿದ್ದಳು. ಕಣ್ಣಲ್ಲಿ ನೋಟವಿಕ್ಕಿ ಅನುಕಂಪ, ವಿಷಾದ ಸೂಚಿಸಿದಳು. ನಾನು ಕೇಸ್ ಶೀಟನ್ನು ಸುಮ್ಮನೆ ಎತ್ತಿಕೊಂಡು ನೋಡಿದೆ. ವಿವರಣೆ ನೋಡುತ್ತಿದ್ದಂತೆಯೇ ‘ಅಮ್ಮಾ…’ ಎಂಬ ಉದ್ಗಾರ ನನಗರಿವಿಲ್ಲದೇ ಬಂದು ಅಮೂಲ್ಯವಾದದ್ದೇನನ್ನೋ ಕಳೆದುಕೊಂಡಂತಾಗಿ, ಅವರ ಅಳುವಿನೊಂದಿಗೆ ನನ್ನ ಸ್ವರವನ್ನೂ ಸೇರಿಸಿದೆ. ಅಮ್ಮನ ಕಾಯಿಲೆ ಮೊಣಕಾಲು ನುಜ್ಜು ಗುಜ್ಜಾಗಿರುವುದು ಅಷ್ಟೇ ಅಲ್ಲದೇ ಬುದ್ಧಿ ಭ್ರಮಣೆಯೂ ಆಗಿತ್ತು. ತಲೆಗೆ ಬಲವಾದ ಪಟ್ಟೇ ಬಿದ್ದು ಮೆದುಳು ನುಚ್ಚಾಗಿ ಪುಡಿಪುಡಿಯಾಗಿರುವ ಚಿತ್ರ ಕಣ್ಮುಂದೆ ಮೂಡಿ ಮಾಯವಾಯಿತು. ಯಾವ ವೈರಿಯೂ ಅನುಭವಿಸಬಾರದಂತಹ ನೋವು, ಅದರಿಂದಾಗಿಯೋ ಏನೋ ಎಂದೂ ಇಲ್ಲದ ಪ್ರೀತಿ ಉಕ್ಕಿ ಬಂದು ಯಾರಾದರೂ ನಕ್ಕಾರು ಎಂಬ ಕಾಂಪ್ಲೆಕ್ಷನ್ನು ಮರೆತು ಅತ್ತೆ. ಆಗಲೇ ಸಾಯುವಾಗ ನೀರು ಕುಡಿದೇ ಏಕೆ ಸಾಯಬೇಕು? (ಗಂಗಾಜಲವೇ ಆಗಬೇಕೆಂಬ ಪದ್ಧತಿ ನಮ್ಮಲ್ಲಿಲ್ಲ.) ‘ಬಾಯಿಗೆ ನೀರು ಬಿಟ್ಟ’ ಎನಿಸಲೇ? ಯಾರಾದರೂ ಸತ್ತಾಗ ಪ್ರೀತಿಯಿರದಿದ್ದರೂ ಏಕೆ ಅಳು ಬಂದಂತಾಗುತ್ತದೆ? ಅಳದೇ ಇದ್ದರೆ ಆಗುವುದಿಲ್ಲವೇ? ಹೀಗೆಲ್ಲಾ ಅನಾವಶ್ಯಕ ಪ್ರಶ್ನೆಗಳು, ಚಿಂತನೆಗಳು ತಲೆಯೊಳಗೆ ಸುತ್ತುತ್ತಿದ್ದವು. ಇದು ಒಂದು ರೀತಿಯ ಮನಸ್ಸನ್ನು ಬೇರೆಡೆಗೆ ಡೈವರ್ಟ್ ಮಾಡುವ ಸಾಧನ.
ಪೋಸ್ಟ್ ಮಾರ್ಟ೦ ಮುಗಿದ ನಂತರ ಬಿಳಿ ಬಟ್ಟೆ ಕಟ್ಟಿದ್ದ ಹೆಣವನ್ನು ಊರಿಗೆ ಕೊಂಡೊಯ್ದೆವು. ಯಾವಾಗಲೂ ಊರ ಹೊರಗೆ ಸತ್ತವರನ್ನು ಊರೊಳಗೆ ತರಬಾರದೆಂಬ ನಿಯಮ ಆ ಹಳ್ಳಿಯಲ್ಲಿದ್ದುದರಿಂದ ಊರ ಹೊರಗಿನ ಹುಣಸೇ ಮರದಡಿ ಮಲಗಿಸಲಾಯಿತು.
ಅಲ್ಲಿಗೆ ಓಡಿ ಬಂದ ಹೆಂಗಸು ಅಮ್ಮನ ದೇಹದ ಮೇಲೆ ಬಿದ್ದು ಪ್ರಲಾಪಿಸತೊಡಗಿದಳು. ಅದು ತಾರಕಕ್ಕೆ ಏರಿದಾಗ ಅಣ್ಣ ಸಿಟ್ಟಾಗಿ ಅವಳ ಹೆಸರನ್ನು ಕರೆದು ರೇಗಿದ. ನಿಲ್ಲದಾದಾಗ ಅವನೇ ಅವಳ ಜುಟ್ಟು ಹಿಡಿದು ‘ಏಳೇ ಮುಂಡೆ ಮ್ಯಾಲೆ, ಕಂಡೌರೆ’ ಎಂದು ಎತ್ತಿದ. ‘ಅತ್ತೆಮ್ಮಾ, ಹೋಗ್ಬಿಟ್ರಾ ಅತ್ತೆಮ್ಮಾ…’ ಎಂದು ಅವಳು ಅಳುವುದನ್ನು, ಅಣ್ಣ ವರ್ತಿಸಿದ್ದನ್ನು ನೋಡಿ ಆಕೆ ಅತ್ತಿಗೆ ಎಂದು ತಿಳಿದುಕೊಂಡೆ. ಆದರೆ ಅಣ್ಣ ಅವಳನ್ನು ಕರೆದದ್ದು ಮಾತ್ರ ಬೇರೆ ಹೆಸರಿನಿಂದ. ಅನುಮಾನದಿಂದ ಪಕ್ಕದ ಯಾರಿಗೋ ಕೇಳಿದೆ: ‘ಆಕೆ ಯಾರು?’ ಎಂದು. ಬಹುಶಃ ಅವನಿಗೆ ನನ್ನ ಗುರುತು ಸಿಕ್ಕಿರಲಿಲ್ಲ. ಅಣ್ಣನನ್ನು ತೋರಿಸಿ `ಅವನ ಎರಡನೇ ಹೆಂಡತಿ’ ಎಂದ.
ಎರಡನೇ ಹೆಂಡತಿ? ಹಾಗಾದರೆ ಮೊದಲಿನವಳೆಲ್ಲಿ? ಅವನನ್ನು ಕೇಳಲು ಬಂದ ಮಾತನ್ನು ತಡೆಹಿಡಿದೆ.
ಹೆಣದ ಮೂಗಿಗೆ ಹತ್ತಿ ಇಟ್ಟು, ಕಣ್ಣಿಗೂ ಬಾಯಿಗೂ ಅಕ್ಕಿಯನ್ನು ಹಾಕಲಾಯಿತು. ನಾನು ಮರೆತಿದ್ದ ಎಷ್ಟೋ ಸಂಪ್ರದಾಯಗಳು ಒಂದೊಂದಾಗಿ ನೆನಪಾಗುತ್ತಿದ್ದವು. ನಾನೇ ಪೇಟೆಯಲ್ಲಿ ಮುಖ್ಯವಾಗಿ ಬರಬೇಕಾಗಿದ್ದವರಿಗೆಲ್ಲಾ ಟೆಲಿಗ್ರಾಂ ಕೊಟ್ಟು ಬಂದಿದ್ದೆ. ಮೊದಲು ಬಂದವಳು ನನ್ನಕ್ಕ. ನಾವಿಬ್ಬರೂ ಪರಸ್ಪರ ಗುರುತು ಹಿಡಿದೆವು. ಆ ಸಂದರ್ಭದಲ್ಲಿ ನನ್ನನ್ನು ಕಂಡು ಆಶ್ಚರ್ಯವಾಗಿದ್ದರೂ ತೋರ್ಪಡಿಸದೇ ಭೇಟಿಯ ಸಂತಸದ ನಗು ನಗದೇ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲವನೆಂತಲೋ ಏನೋ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.
ಗಂಟೆಗಳುರುಳಿದವು. ಬರಬೇಕಾಗಿದ್ದವರೆಲ್ಲ ಬಂದರು. ಬರದಿದ್ದವರಿಗಾಗಿ ಕಾಯುವಂತಿರಲಿಲ್ಲ. ಸಂಜೆಯಾಗುತ್ತಿತ್ತು. ಸ್ಮಶಾನಕ್ಕೆ ಹೆಣವನ್ನು ಕೊಂಡಯ್ಯಲು ಎಲ್ಲ ಸಿದ್ಧವಾಯಿತು. ಇಡೀ ದಿನ ಊಟವಿಲ್ಲದೇ ನಡೆಯಲಾಗುತ್ತಿರಲಿಲ್ಲ. ಹೆಣವನ್ನು ಇಟ್ಟುಕೊಂಡು ಊಟ ಮಾಡುವಂತಿರಲಿಲ್ಲ. ಆದರೆ ಎಲ್ಲರೂ ನನ್ನಂತೇ ಎಂದು ಸುಮ್ಮನಾದೆ.
ಹೆಣದ ಮುಂದೆ ಕೂಳಿನ ಮಡಕೆ ಹಿಡಿದುಕೊಂಡು ಬರಲು ಹೇಳಿದರು. ನಾನು ನಯವಾಗಿ ನಿರಾಕರಿಸಿ ಅಣ್ಣನನ್ನು ತೋರಿಸಿದೆ. ಅವನು (ಬಲಿ ಕೊಡಬೇಕಾಗಿರುವ ಪ್ರಾಣಿಯಂತೆ) ಸಾಧ್ಯವೇ ಇಲ್ಲ ಎಂಬಂತೆ ಎಗರಾಡಿದ. ಕಾರಣ ಅವನು ಹೇಳಲಿಲ್ಲ. ಕೂಳಿನ ಮಡಕೆ ಹೊತ್ತವರಿಗೆ ತಿಥಿಯ ದಿನ ತಲೆ ಬೋಳಿಸಲಾಗುತ್ತದೆ ಎಂದು ನನಗೆ ಗೊತ್ತಿತ್ತು. ಬಹುಶಃ ತನ್ನ ಗಡ್ಡದ ಪರಿಮಿತಿಗೆ ಕತ್ತಿ ಬೀಳುತ್ತದೆಯೆಂದು ನಿರಾಕರಿಸಿರಬಹುದು. ಅಷ್ಟಕ್ಕೂ ಗಡ್ಡವನ್ನೇಕೆ ಅಷ್ಟುದ್ದ ಬಿಟ್ಟಿದ್ದಾನೆಂದೇ ಗೊತ್ತಿರಲಿಲ್ಲ.
`ನಾನು ನಾಲ್ಕು ಜನರೆದುರಿಗೆ ತಿರುಗಬೇಕಾಗಿರುವವನು ಅವನಾದರೆ ಇಲ್ಲಿಯೇ ಇರುತ್ತಾನೆ; ಅವನೇ ಹಿಡಿಯಲಿ’ ಎಂದು ನಾನೂ ವಾದಿಸಿದೆ- ಅವನ ವಿಕಾರ ರೂಪವಾದರೂ ಹೋದೀತೆಂದು. ಅವನು ನನಗಿಂತಲೂ ಹಟಮಾರಿ. ಜಗ್ಗಲೇ ಇಲ್ಲ. ಕೊನೆಗೆ ನಾನೇ ಹೊತ್ತೆ, ಸಾಯಂಕಾಲ, ಚುಕ್ಕೆ ಕಾಣುವವರೆಗೂ ಕಾದು ಹೂಳಲಾಯಿತು. ಆಗ ಮತ್ತಷ್ಟು ರೋದನ. ಕೊನೇ ಬಾರಿ ಮುಖ ನೋಡುವುದೆಂದರೆ ಇದೇ ಏನೋ.
ಹಿಂದಕ್ಕೆ ಬರುವಾಗ ದಾರಿಯಲ್ಲಿ ಸಿಕ್ಕ ಕೆರೆಯಲ್ಲಿ ಕೆಲವರು ಕೈಕಾಲು ಮುಖ ತೊಳೆದರು. ಕೆಲವರು ಸ್ನಾನವನ್ನೂ ಮಾಡಿದರು. ಹೆಂಗಸರೂ ಮಕ್ಕಳೂ ಕೈಯಲ್ಲಿ ಮುಟ್ಟಿ ಮುಟ್ಟಿ ಮನೆಗೆ ಹೋದರು. ಅಪ್ಪ ನೀರು ಮುಟ್ಟಿ ಹೋಗಲು ಆಜ್ಞಾಪಿಸುತ್ತಿದ್ದರು. ಏನು ಇದೆಲ್ಲಾ ವಿಚಿತ್ರ ಸಂಪ್ರದಾಯಗಳು; ಅರ್ಥವಿಲ್ಲದವು. ಆದರೆ ಹಾಗೆಂದು ವಾದ ಮಾಡುವಂತಿರಲಿಲ್ಲ. ಅನುಸರಿಸದಿದ್ದರೆ ಸಂಕಟದ ಮೇಲೆ ನೋವು ಆಗಬಾರದೆಂದು ನಾನೂ ಅನುಸರಿಸಿದೆ.
ರಷ್ಯಾದಲ್ಲಿರುವವರೆಗೆ ನಾನು ಯಾರ ಸ್ಮಶಾನ ಯಾತ್ರೆಗೂ ಹೋಗಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಅವರು ಈ ರೀತಿಯ ನಂಬಿಕೆಯ ಆಚರಣೆಗಳನ್ನು ಅನುಸರಿಸುವುದಿಲ್ಲ. ನಿಜ ಹೇಳಬೇಕೆಂದರೆ ಅಲ್ಲಿ ಸತ್ತವರನ್ನೇ ನೋಡಲಿಲ್ಲ. ಸಾಯುವುದೇ ಇಲ್ಲ ಎಂದು ಅರ್ಥವಲ್ಲ. ಸಾಯುವವರು ಸಾಯಬೇಕಾದವರು ಸಾಯಬೇಕಾದಲ್ಲಿ ಮಾತ್ರ ಸಾಯುತ್ತಾರೆ.
ಅಪ್ಪ ದೀಪ ನೋಡಿ ಹೋಗಿ ಎಂದು ಆಜ್ಞಾಪಿಸಿದರು. ಮನೆಯಲ್ಲಿ ಅಪ್ಪ ಅಮ್ಮನ ಜೋಡಿ ಫೋಟೋ ಒಂದರಲ್ಲಿ (ಅದೊಂದೇ ಇದ್ದುದು ಎನಿಸುತ್ತದೆ) ಅಮ್ಮನ ಹಣೆಗೆ ಕುಂಕುಮ ಹಚ್ಚಿ, ಎದುರಿಗೆ ದೀಪವಿರಿಸಲಾಗಿತ್ತು. ಪ್ರಸ್ತುತ ಅದರಲ್ಲಿ ಅಪ್ಪ ಕಾಣುವುದು ಅಸಮಂಜಸ, ಅಶುಭ ಅನಿಸಿ ಮರೆಮಾಡಬೇಕೆಂದುಕೊಂಡ. ಅಷ್ಟರಲ್ಲಿ ಅಪ್ಪನೇ ದೀರ್ಘವಾಗಿ ಅಡ್ಡಬಿದ್ದು ನಮಸ್ಕರಿಸಿದರು. ನಮ್ಮ ಜಾತಿಯವರು ಮತ್ತು ಮೇಲು ಜಾತಿಯವರು ಒಳಗೆ ಬಂದು ನಮಸ್ಕರಿಸಿದರೆ, ಕೀಳು ಜಾತಿಯವರು ಬಾಗಿಲಲ್ಲಿ ನಿಂತು ದೀಪ ನೋಡಿ ಹಾಗೆಯೇ ಹೊರಟು ಹೋದರು. ಆಗಲೇ ಎಂಟು ವರ್ಷಗಳ ನಂತರ ಭಾರತದಲ್ಲಿರುವ ಜಾತಿ ಪದ್ಧತಿಯ ನೆನಪಾದದ್ದು.
ಎದುರು ಮನೆಯಾತ ಒಳಗೆ ಬಚ್ಚಲಿದ್ದರೂ ಹೋಗುವಂತಿರಲಿಲ್ಲವಾದ್ದರಿಂದ ಹೊರಗೇ ಚಪ್ಪಡಿಕಲ್ಲಿನ ಮೇಲೆ ಕುಳಿತು ನಾಲ್ಕೈದು ಚೆಂಬು ನೀರು ಹಾಕಿಕೊಂಡು ಸ್ನಾನವನ್ನು ನಾಮ್ ಕಾ ವಾಸ್ತೆಗೆ ಮುಗಿಸಿ ಸೂತಕವನ್ನು ಕಳೆದುಕೊಂಡ. ಆದರೆ ತಿಥಿ ಆಗುವವರೆಗೂ ನಮಗೆ ಸೂತಕವಂತೆ!
ರಾತ್ರಿ ಮಲಗುವಾಗ ಅಣ್ಣ ಎಂದು ಕೇಳಿದಾಗ ಅದುವರೆಗೂ ಅಮ್ಮನ ಬಗ್ಗೆ ಮಾತನಾಡುತ್ತಿದ್ದವರ ಗಮನ ಅಣ್ಣನ ಕಡೆಗೆ ಹರಿಯಿತು. “ಸೂಳೆ ಮನ್ಗೋಗವ್ನೆ, ಮಂಕಣಕ್ಕೆ? ಎಂದು ಅಪ್ಪ ಛಾಟಿ ಏಟಿನಂತೆ ನುಡಿದರು. ಅಮ್ಮ ಸತ್ತ ದುಃಖದಲ್ಲಿ ಅಪ್ಪ ಬಹಳ ನೊಂದಂತೆ ಕಂಡಿತು. ವಯಸ್ಸಾದಂತೆ ಸಂಗಾತಿಯ ಜೊತೆಗಿನ ಸಂಬಂಧ ಅನಿವಾರ್ಯವಾಗಿ ಬಲವಾಗುತ್ತೆ ಎಂಬುದು ನಿಜವಿರಬೇಕೆನಿಸಿತು.
“ಈಗ ತಾನೇ ಅವ್ಳ್ ಬಾಯಿಗೆ ಮಣ್ಣಾಕಿ ಬಂದಿದೀವಿ (‘ನಿನ್ನ ಬಾಯಾಗೆ ಮಣ್ಣಾಕಾ’ ಎಂಬುದು ಅವ್ವನ ನೂರಾರು ಬೈಗುಳಲ್ಲಿ ಒಂದು) ಆಗ್ಲೇ ಅವುಸ್ರಾ ಆಗಿತ್ತಾ ಈ ನನ್ಮಗುಂಗೆ? ಒಂದ್ ಗದ್ದೆಗೆ ನೋಡಲ್ಲ, ಒಂದ್ ಮನೆಗೆ ನೋಡಲ್ಲ. ಅಲ್ನೋಡುದ್ರೆ ಸೇಂಗಾನೆಲ್ಲಾ ಮಿಕ ತಿಂದಾಕವೇ; ಇಲ್ನೋಡುದ್ರೆ ಕೊಟ್ಟಿಗೆಗೆ ಸಗಣಿ ತಗದು ಹದಿನೈದು ದಿನ ಆಗದೆ, ಒಂದ್ ಕಡ್ಡಿ ಸೌದೆ ಅಂತ ತರಲ್ಲ ಮನಿಗೆ ಇತ್ಲು ಕಡ್ಡಿ ತಗದು ಅತ್ತಾಗೆ ಇಡಲ್ಲ. ತಿಂತಾನೆ ತಿರುಗ್ತಾನೆ. ಕತ್ಲಾಯ್ತು ಅಂದ್ರೆ ಆ ಸೂಳೆ ಮುಂಡೆ ಮನೀಗೋಕ್ತಾನೆ. ಇಷ್ಟಾದ್ರೆ ಸಾಕಲ್ಲ?” ಎಲ್ಲವನ್ನೂ ಕಾರುವಂತೆ ತನಗೆ ತಾನೇ ಹೇಳಿಕೊಳ್ಳುವಂತೆ ಹೇಳಿದರು. ತಡೆಯಲಾರದೇ ಅಳಲಾರಂಭಿಸಿದರು. ಈ ವಯಸ್ಸಿನಲ್ಲೂ ಅಪ್ಪ ಅಳುವುದೆಂದರೆ, ಜೀವನ ಎಂಬುದು ಮನುಷ್ಯನಿಂದ ಏನೆಲ್ಲ ಮಾಡಿಸಿಬಿಡುತ್ತದೆ. ಅವರ ಮನಸ್ಸಿಗೆಷ್ಟು ಘಾಸಿಯಾಗಿರಬೇಕು? ಅವರಿಗೂ ಹೃದಯ ಎಂಬುದಿರುತ್ತಲ್ಲವೇ?
ನಂತರ ಒಂದೊಂದಾಗಿ ಹೊರಬಂದವು ಸಂಗತಿಗಳು. ಮೊದಲು ಹೆಂಡತಿಯನ್ನು ಬೇರೆ ಕರೆದುಕೊಂಡು ಹೋಗಿ ಹೊಂಚಿ ಹಾಕಲಾಗದೇ ಅವಳು ಯಾರನ್ನೂ ನೋಡಿಕೊಂಡು ಓಡಿಹೋದಳಂತೆ. ಈಗಿರುವವಳಿಗೆ ಮಕ್ಕಳು ಆಗಲಿಲ್ಲವೆಂದು ಯಾರೋ ಒಬ್ಬಳನ್ನು ಇಟ್ಟುಕೊಂಡಿದ್ದಾನಂತೆ. ಅವಳೂ ಈಗಲೋ ಆಗಲೋ ಈ ಮನೆಗೆ ಬರುವ ತಯಾರಿ ಯಲ್ಲಿದ್ದಾಳಂತೆ. ‘ಧರ್ಮಸ್ಥಳಕ್ಕೆ ಹೋಗ್ತಿನಿ ಹರಕೆ ಒಪ್ಪಿಸುವುದಕ್ಕೆ’ ಎಂದು ಗಡ್ಡ ಅವನ ಸೂಳೆ ಬಸುರಿಯಾಗಿರುವುದರಿಂದ ಗಡ್ಡ ಬಿಟ್ಟಿದ್ದಾನೆಂದೂ ಕೆಲವರು ಅನ್ನುತ್ತಾರಂತೆ.
ಸೂಳೆಗೂ, ಪ್ರೇಯಸಿ ಅಥವಾ ಲವರಿಗೂ ಇರುವ ವ್ಯತ್ಯಾಸವನ್ನು ಚಿಂತಿಸಲಾರಂಭಿಸಿದೆ. ಸಂಗೀತಾ ನೆನಪಾದಳು. ಅವಳೊಂದಿಗಿನ ಆ ಮರೆತ ದಿನಗಳು ನೆನಪಾದವು. (ನಾನು ಪ್ರೀತಿಸಿದರೆ ಪ್ರೇಯಸಿ, ಅವನು ಪ್ರೀತಿಸಿದರೆ ಸೂಳೆ ಹೇಗಾಗುತ್ತಾಳೆ. ನಾನು ವಿದ್ಯಾವಂತ ಎಂದೇ ಅಥವಾ ಅಣ್ಣ ಈಗಾಗಲೇ ಮದುವೆಯಾಗಿದ್ದಾನೆ ಎಂದೇ?) ಪ್ರೀತಿಸಲು ಮತ್ತೆ ಶುರು ಮಾಡಿದರೆ ಸಂಗೀತಾ ಸೂಳೆಯಾಗಲಿಕ್ಕಿಲ್ಲ ತಾನೇ? (ಅವಳಿಗೆ ಮದುವೆಯಾಗಿದೆಯೋ ಇಲ್ಲವೋ ಗೊತ್ತಿಲ್ಲ.)
ಆ ಸೂಳೆಗೂ ಈ ಇವನಿಗೂ ಹೇಗೆ ಸಂಬಂಧ ಪ್ರಾರಂಭವಾಯಿತು?
ಎಲ್ಲರೂ ಮಲಗಿದೆವು. ದೀಪ ಆರಿಸಿ ಕತ್ತಲೆ ಕೋಣೆಯಲ್ಲಿಯೇ ಮಾತನಾಡುತ್ತಿದ್ದವು. ಅಣ್ಣನ ಇತಿಹಾಸ ಕುರಿತು ಹೇಳುತ್ತಿದ್ದಾಗ ನಾನು ಹೂಂಗುಡುತ್ತಿದ್ದರೂ ಸಂಗೀತಾಳ ಜೊತೆ ಕಳೆದ ಆ ಕತ್ತಲೆ ರಾತ್ರಿಗಳ ಬಗೆಗೆ ಚಿಂತಿಸುತ್ತಿದ್ದ. ನನಗೇಗೆ ಆಕೆ ಇಷ್ಟೊಂದು ನೆನಪಿಗೆ ಬರಬೇಕು? ಅಮ್ಮ ಸತ್ತ ದುಃಖವೇ ಇನ್ನೂ ತುಂಬಿರುವಾಗಲೇ ಇದೆಂತಹ ಚಪಲ? ಅಣ್ಣನಿಗಿಂತ ನಾನು ಹೇಗೆ ಭಿನ್ನ? ಅಕ್ಕ ಹೇಳುತ್ತಿರುವಂತೆಯೇ ನಾನು ನಿದ್ದೆಯೊಳಗೆ ಜಾರಿದ್ದೆ.
ಮೂರನೆಯ ದಿನ ಹಾಲು ತುಪ್ಪವನ್ನು ಅಮ್ಮನ ಗುಂಡಿಗೆ ಬಿಟ್ಟು ಬಂದೆವು. ಅಲ್ಲಿಯವರೆಗೂ ಸಂಗೀತಾಳನ್ನು ಕಾಣಬಾರದೆಂದು ಕಾಯ್ದುಕೊಂಡಿದ್ದು, ಮಾರನೆ ದಿನ ಬೆಳಗ್ಗೆಯೇ ಅವಳನ್ನು ತೀರಾ ವೈಯಕ್ತಿಕವಾಗಿ ಭೇಟಿಯಾಗಲೆಂದು ನಿರ್ಧರಿಸಿದ್ದೆ. ಆದರೆ ಮಾರನೆಯ ದಿನವೇ, ಅಣ್ಣನ ಸೂಳೆಯ ಕಡೆಯವನೊಬ್ಬನ ಕೊಲೆಯಾಗಬೇಕೇ? ನಾನೂ ಹೆಣ ನೋಡಲು ಹೋದೆ. ಯಾವನೋ ಬೆಳಗ್ಗೆ ಒಂಭತ್ತು ಗಂಟೆಯ ಹಾಡುಹಗಲಲ್ಲೇ ಮಚ್ಚಿನಿಂದ ತಲೆಕಡಿದು ಕೊಂದಿದ್ದ. ಕೇವಲ ಒಂದೇ ಒಂದು ಹೊಡೆತ! ಅಷ್ಟರಲ್ಲಿ ಅಣ್ಣನೂ ಅಲ್ಲಿಗೆ ಬಂದ. ಅವನ ಗಡ್ಡ ನೋಡಿ ನನಗೇಕೋ ಸಿಟ್ಟು ಬಂತು. ಎಲ್ಲರೂ ರೋದಿಸುತ್ತಿದ್ದರು. ಅವನ ತೀರಾ ಕರುಳು ಸಂಬಂಧಿಗಳು ಹಣದ ಮೇಲೆ ಬಿದ್ದು ಬಿದ್ದು ಅಳುತ್ತಿದ್ದರು. ಅಣ್ಣ ಬಂದವನೇ ಅವರೆಲ್ಲರನ್ನೂ ಬೈಯುತ್ತಾ ಹಿಂದಕ್ಕೆಳೆದು, ಹಣದ ಮೇಲೆ ಬಟ್ಟೆ ಹೊದಿಸಿಲ್ಲವೆಂದು, ತನ್ನ ಪಂಚೆಯನ್ನೇ ಬಿಚ್ಚಿ ಹೆಣದ ಮೇಲೆ ಹಾಕಿ ಬರೀ ಚಡ್ಡಿಯಲ್ಲಿಯೇ ನಿಂತಿದ್ದ. ಯಾವನೋ ಕೇಳಿಯೇ ಬಿಟ್ಟಿ: ‘ನೀನ್ಯಾವನೋ ಹೆಣದ ಮೇಲೆ ಬಟ್ಟೆ ಹಾಕೋಕೆ?’ ಅಣ್ಣ ಪ್ರತಿಕ್ರಿಯಿಸಿದ್ದ: ಅವನು ನನ್ನ ಭಾಮೈದ ಕಣೋ?’
ಎಲ್ಲರೆದುರಿಗೇ ಅಣ್ಣ ತನ್ನ ಸಂಬಂಧವನ್ನು ಒಪ್ಪಿಕೊಂಡು ಬಿಟ್ಟ. ಅದುವರೆಗೂ ಗುಟ್ಟಾಗಿದ್ದುದರ ಬಯಲು ಮಾಡುವಿಕೆಯಿಂದ ಮಾತಿನ ಬಿಸಿಯೇರಿ ಕೊಲೆಯೆದುರಿಗೇ ಮತ್ತೊಂದು ಕೊಲೆಯಾದೀತೇ ಎಂಬ ಆತಂಕದಲ್ಲಿ ನಾನು ತವಕಿಸುತ್ತಿದ್ದೆ. ಕೈಗೆ ಕೈಹತ್ತಿಯೇ ಬಿಟ್ಟಿತು ಅವರಿಬ್ಬರಿಗೂ. ನಾನು ಅಣ್ಣನನ್ನು ಬಿಡಿಸಲು ಮುಂದಾದೆ. ಹಿಡಿದ ಕೈ ಬಿಡಿಸಿಕೊಂಡು ಫಟಾರನೇ ನನ್ನ ಕೆನ್ನೆಗೆ ಹೊಡೆದ.
ನನಗೆ ಹೇಗೇಗೋ ಅನ್ನಿಸಿ, ಸುಮ್ಮನಾಗುವುದೆಂದು ನಿರ್ಧರಿಸಿದ. ಅಷ್ಟರಲ್ಲಿ ಪೊಲೀಸ್ ಜೀಪ್ ಬಂದಿದ್ದರಿಂದ ಆಗಬಹುದಾಗಿದ್ದ ಜಗಳ ಅರ್ಧಕ್ಕೇ ನಿಂತಿತು. ಎಲ್ಲರೂ ಅಂದುಕೊಳ್ಳುತ್ತಿದ್ದರು; ನನ್ನಣ್ಣನೇ ಕೊಲೆ ಮಾಡಿರಬಹುದೆಂದು. ಸತ್ತವನು ಇವರಿಬ್ಬರ ಸಂಬಂಧಕ್ಕೆ ವಿರೋಧಿಸುತ್ತಿದ್ದನಂತೆ. ನನಗೇಕೋ ತಲೆ ತಿರುಗಿದಂತಾಯಿತು. ಇಲ್ಲಿಂದ ಎಷ್ಟು ಬೇಗ ರಷ್ಯಾಕ್ಕೆ ಹೋಗಿಬಿಡುತ್ತೇನೋ ಎಂದುಕೊಳ್ಳುತ್ತಿದ್ದೆ.
ಮಾರನೇ ದಿನವೇ ನನ್ನ ಅರ್ಜೆಂಟನ್ನು ಗಮನಿಸಿ ಐದು ದಿನಕ್ಕೇ ತಿಥಿ ಮಾಡಲಾಯಿತು. ನನ್ನ ಸುಂದರ ಕೇಶ ಮೃದು ಮೀಸೆ ಕ್ಷೌರಿಕನ ಮಂಡಗತ್ತಿಗೆ ಬಲಿಯಾಯಿತು.
ನನಗೆ ಸಂಗೀತಾಳನ್ನು ಕಾಣಲಾಗಲಿಲ್ಲ.
ನಾಳೆಯ ದಿನವೇ ರಷ್ಯಾಕ್ಕೆ ಹೋಗುವೆನೆಂದು ಹೇಳಿ ಅಣ್ಣನನ್ನು ಮನೆಯಲ್ಲಿಯೇ ಉಳಿಸಿಕೊಂಡೆ-ಬೆಳಗಿನ ಜಾವಕ್ಕೇ ಸ್ಟ್ಯಾಂಡಿಗೆ ವೇಕಲ್‌ನಲ್ಲಿ ಡ್ರಾಪ್ ಮಾಡಲೆಂದು.
ಮಲಗಿದ್ದಾಗ ಕತ್ತರಿಯಲ್ಲಿ ಅವನ ಗಡ್ಡವನ್ನು ಅಡ್ಡಾದಿಡ್ಡಿ ಕತ್ತರಿಸಿದೆ. ಬೆಳಗ್ಗೆ ಅವನ ಗಡ್ಡದ ಪರಿಧಿ ಅವನಿಗೆ ಗೊತ್ತಿರಲಿಲ್ಲ. ಬಸ್‌ಸ್ಟ್ಯಾಂಡಿಗೆ ಬಂದಿದ್ದ. ರಾಜಧಾನಿಯ ಬಸ್ ಹಿಡಿದು ಕುಳಿತ. ಅವನನ್ನು ಹಿಂದಿರುಗಲು ತಿಳಿಸಿ ಟಾಟಾ ಮಾಡಿ ಇನ್ನಾದರೂ ಚೆನ್ನಾಗಿರು ಎಂದು ಹಾರೈಸಿದೆ.
ಬೆಳಗ್ಗೆ ಇಲಿ ತಿಂದಂತಿರುವ ಅವನ ಗಡ್ಡದ ಅವಸ್ಥೆ ಕಂಡು ಯಾರಾದರೂ ಆಡಿಕೊಳ್ಳುವಾಗ ಹೇಗಿರುತ್ತೆ ಅವನ ಸ್ಥಿತಿ…. ಸೀದಾ ಹೋಗಿ ಗಡ್ಡ ತೆಗೆಸಿಬಿಡಬಹುದು… ಇತ್ಯಾದಿ ಆಲೋಚಿಸುತ್ತ ಕುಳಿತಿದ್ದೆ. ನಾನೂ ಬೋಳಾಗಿರುವುದು ನೆನಪಾಗಿ ತಲೆ ಮೇಲೆ ಕೈ ಆಡಿಸಿದೆ. ಸಂಗೀತಾಳ ನೆನಪಾಯಿತು. ನಂತರ ಆಕೆ ಸಿಕ್ಕಲೇ ಇಲ್ಲವಲ್ಲ. ಅವಳನ್ನೊಮ್ಮೆ ಅಪ್ಪಿ ಬಿಡುವ ಆಸೆ…. ಅಣ್ಣನ ಸೂಳೆಯಂತೆಯೇ ನನ್ನ ಸಂಗೀತಾ? ಅಣ್ಣ ಸೂಳೆಗೋಸ್ಕರ ಆ ಭವ್ಯವಾದ ತೋಟವನ್ನೇನಾದರೂ ಹಾಳುಮಾಡಿಬಿಟ್ಟಾನೆಯೇ? ನಾನು ಬೇಸಿಗೆಯಲ್ಲಿ ದೂರದಿಂದ ನೀರು ಹೊತ್ತು ಹುಯ್ದು ಸಾಕಿದ್ದವು. ನನ್ನ ಮೆಚ್ಚಿನ ಕುಂತೀ (ಮಾವಿನ ಮರಕ್ಕಿಟ್ಟಿದ್ದ ಹೆಸರು) ಮರದ ಮೇಲೆ ಕುಂತು ಕೋಗಿಲೆಯೊಂದಿಗೆ ಆಡುತ್ತಾ ನನ್ನ ಸಂಗೀತಾಳಿಗಾಗಿ ಕವಿತೆಯೊಂದನ್ನು ಬರೆಯಲಿಲ್ಲವಲ್ಲಾ… ಸಂಗೀತಾಳೊಂದಿಗಿನ ಭಾವನಾತ್ಮಕ ವೈಯಕ್ತಿಕ ಭೇಟಿ ಸಾಧ್ಯವಾಗಲೇ ಇಲ್ಲವಲ್ಲ?
ಛೇ…. ಈ ಆತಂಕ, ಈ ತವಕ, ಈ ಉದ್ವಿಗ್ನತೆ ಇಲ್ಲದ ಜೀವನ ಜೀವನವೇ? ರಷ್ಯಾದಲ್ಲಿ ಅನುಭವಿಸಿದ ಭಯಂಕರ ಏಕಾಂಗಿತನಕ್ಕಿಂತ ಇದು ಸಾವಿರ ಪಾಲು ಮೇಲು, ನಿಜ ಹೇಳಬೇಕೆಂದರೆ ಜೀವನದ ಗುಟ್ಟು ಅಡಗಿರುವುದೇ ಈ ಆಸೆಯಲ್ಲಿ ಆತಂಕದಲ್ಲಿ…..
ಯಾಂತ್ರಿಕವಾಗಿ ಹಾಳೆಯಲ್ಲಿ ‘ರಾಜೀನಾಮೆ’ ಬರೆದು ಸಹಿ ಹಾಕಿದೆ. ಒಂದು ರೀತಿಯ ವಿಚಿತ್ರ ನೆಮ್ಮದಿಯೆನಿಸಿತು. ಏನೋ ಸಾಧಿಸಿದಂತಹ ವಿಜಯೋತ್ಸಾಹದಿಂದ, ಸಂಗೀತಾಳ ಕಾಣಲೇಬೇಕೆಂಬ ತವಕದಲ್ಲಿ ಆಸ್ಪತ್ರೆಯತ್ತ ಹೆಜ್ಜೆ ಹಾಕಿದೆ. ಮನಃ ಹೃದಯ ಪ್ರಫುಲ್ಲ ಸಂಗೀತ ತರಂಗದ ಉತ್ತುಂಗದಲ್ಲಿ ಲೀನವಾಯಿತು….
*****
(ಜನವರಿ ೧೯೮೮)