ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ನಾನು
ಯಾವುದೋ ಒಂದು ತರಗತಿಯಲ್ಲಿ ಓದುತ್ತಿದ್ದೇನೆ.
ಅಲ್ಲ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ಇದ್ದೇನೆ.
ಅದೂ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ನನ್ನ ಹೆಸರಿದೆ.
ತರಗತಿಗೆ ಹೋಗಲು ನನಗೆಲ್ಲಿ ಸಮಯ?
ಕಾಲೇಜಿಗೆ ಬಂದರೆ ನೂರಾರು ಕೆಲಸ
ಹತ್ತಾರು ಸಂಘಗಳ ಸದಸ್ಯನಾನು
ನಾಲ್ಕಾರು ಸಂಸ್ಥೆಗಳ ಕಾರ್ಯದರ್ಶಿ ನಾನು
ಮತ್ತೊಂದು ಪಾರ್ಟಿಯ ಅಧ್ಯಕ್ಷನೇ ನಾನು!
ಕಾಲೇಜಿಗೆ ಬಂದೆ, ಪ್ರಿನ್ಸಿಪಾಲರ ಕಂಡೆ,
ನನ್ನೆಲ್ಲ ವಿಷಯಗಳ ಬಗ್ಗೆ ಮಾತನಾಡಿದೆ,
ಉಳಿದೆಲ್ಲ ಶಿಕ್ಷಕರ ಬಳಿ ಹೋಗಿ ಬಂದೆ,
ಎಷ್ಟೆಲ್ಲ ವಿಷಯಗಳ ಚರ್ಚಿಸಿ ಬಂದೆ
ನಾಲ್ಕಾರು ಗೆಳೆಯರೊಡನೆ ಹರಟುತ್ತಾ ನಿಂತೆ.
ಸಂಗೀತ, ನಾಟಕ, ನೃತ್ಯಗಳ ಬಗ್ಗೆ,
ಚುನಾವಣೆ, ಗ್ರಂಥಾಲಯ, ವಾಚನಾಲಯಗಳ ಬಗ್ಗೆ
ಫ್ರ್‍ಈಶಿಪ್ಪು, ಸ್ಕಾಲರ್‌ಶಿಪ್ಪು, ಲೋನುಗಳ ಬಗ್ಗೆ,
ಭಾಷಣ, ಬಹುಮಾನ, ಸನ್ಮಾನಗಳ ಬಗ್ಗೆ,
ಎನ್ನೆಸ್ಸೆಸ್, ಎನ್ಸೀಸಿ, ಸ್ಪೋರ್ಟುಗಳ ಬಗ್ಗೆ
ಕ್ರಿಕೆಟ್ಟು, ಫುಟ್ ಬಾಲು, ಟೆನ್ನಿಸುಗಳ ಬಗ್ಗೆ
ಗ್ರೂಪ್ ಸಾಂಗ್ಸು, ಗ್ರೂಪ್ ಡಾನ್ಸುಗಳ ಬಗ್ಗೆ
ಏನೆಲ್ಲ ಚಿಂತೆಯು ಎನಗೆ
ವರ್ಷವಿಡೀ ಇರುವುದು ಕಾರ್ಯ ನನಗೆ.
ಜುಲೈನಲ್ಲಿ ಕಾಲೇಜಿಗೆ ಸೇರಿದರೆ ಆಯ್ತು
ಆಗಸ್ಟ್‌ನಲ್ಲಿ ಚುನಾವಣೆಗಳು, ನಾಟಕಗಳು,
ಸೆಪ್ಟೆಂಬರ್‌ನಲ್ಲಿ ತಪ್ಪದೆ ವಾರ್ಷಿಕ ಮುಷ್ಕರ
ಅಕ್ಟೋಬರ್‌ವನ್ನೆಲ್ಲ ರಜದಲ್ಲಿ ಕಳೆದು
ನವೆಂಬರ್‌ನಲ್ಲಿ ಅವಸರದ ಪ್ರವಾಸ ಹೋಗಿ ಬಂದು,
ಡಿಸೆಂಬರ್‌ನಲ್ಲಿ, ನವೆಂಬರ್‌ನ ರಾಜ್ಯೋತ್ಸವ ಮಾಡಿ,
ಜನವರಿಯಲ್ಲಿ ಕ್ರೀಡಾಕೂಟ, ವಾರ್ಷಿಕೋತ್ಸವ ಮಾಡಿ
ಫೆಬ್ರವರಿಯಲ್ಲಿ ಸ್ಪೆಷಲ್ ಕ್ಲಾಸುಗಳ ಚಂಡಿ ಕಾಡಿ
ಮಾರ್ಚ್‌ನಲ್ಲಿ! ಓ ಭಯವಾಗುತಿದೆ ಎನಗೆ
ಭೂತ ಬಂತು ನೋಡಿರಲ್ಲಿ. “ಪರೀಕ್ಷೆ”!
*****
೧೨-೦೧-೧೯೭೫