ನಮ್ಮ ಹುಡುಗಿಗೆ ಬೇಕು ವರ
ಇಂಜಿನಿಯರಿಂಗ್, ಮೆಡಿಕಲ್
ಓದಿರುವ ಶ್ರೀಮಂತ ಕುವರ.
ಇವರು ಬಿಟ್ಟು ಬೇರೆಯ ವರ
ನಮ್ಮ ಪಾಲಿಗೆ ಇಲ್ಲದವನು ನರ.
ರೂಪ-ಗುಣ ನೋಡುವುದಿಲ್ಲ
ಚರಿತ್ರೆ-ಭೂಗೋಳ ಬೇಕೇ ಇಲ್ಲ
ಕೆಲಸವಿದ್ದರೇನು, ಇಲ್ಲದಿದ್ದರೇನು?
ಇವನಿಗಿದೆಯಲ್ಲ ವಿದ್ಯೆಯ ಕಿರೀಟ
ಇವನೇ ಬೇಕೆಂಬುದು ನಮ್ಮ ಹಟ.
ಬೇರೆ ಓದು ಒಂದು ಓದೆ?
ಶ್ರಮದ ಗಳಿಕೆ ಒಂದು ಹಣವೆ?
ಅವನೂ ಒಬ್ಬ ಗಂಡಸೆ?
ವಾಸಿಸಲಿದೆಯ ಭವ್ಯ ಬಂಗಲೆ?
ಓಡಾಡಲು ಬೈಕೇ…ಕಾರೇ?
ನಮ್ಮ ಮಗಳು ಬಲು ಭಾಗ್ಯವಂತಳು
ಬಾಯಲ್ಲಿ ಬೆಳ್ಳಿಯ ಚಮಚ
ಇಟ್ಟುಕೊಂಡೇ ಹುಟ್ಟಿದವಳು.
ನಾವೂ ಕೂಡಾ ಆಗರ್ಭ ಶ್ರೀಮಂತರೇ –
ಹೋದಲ್ಲಿ ಹಣದ ಹೊಳೆ ಹರಿಯಬೇಡವೇ?
ಅದಕ್ಕೇ ಹೇಳಿದ್ದು – ನಮಗೆ ಬೇಕು
ಇಂಜಿನಿಯರಿಂಗ್, ಮೆಡಿಕಲ್
ಓದಿರುವ ಶ್ರೀಮಂತ ವರ ಅಂತ!
ಬಡವರ ಮೇಲೆ ನಮಗೂ ಇದೆ ಕರುಣೆ
ಅವರವರ ಕರ್ಮಕ್ಕೆ ನಾವೇ ಹೊಣೆ?
*****
೨೬-೧೧-೧೯೯೩