ನಿತ್ಯ ಸಾಗುತಲಿಹುದು ಜೀವನ ಭರದಿ
ಬೇಕು ಬೇಡಗಳ ತೆಗೆದು ಹಾಕುತಲಿ
ಏರಿಳಿತಗಳ ಮೆಲ್ಲನೆ ದಾಟುತಲಿ
ನಿತ್ಯವೂ ಉರುಳುತಿಹುದು ಬಾಳ ಬಂಡಿ
ನಿಲ್ಲುವುದೆಲ್ಲೋ? ಎಂದೋ ಸಾಗುವ ಬಂಡಿ!
ಎಡೆಬಿಡದೆ ಹಿಡಿದ ಕೆಲಸ ಕಾರ್ಯಗಳು
ಆದರೂ ತೀರದಾ ನಾನಾ ಬಯಕೆಗಳು
ಬದುಕು ನಡೆಸಲು ನಾನಾ ವೇಷಗಳು
ಗಂಡು ಹೆಣ್ಣೆನ್ನದೇ ದುಡಿವರು ಹಗಲಿರುಳು
ಸಾಧಿಸುವ ಛಲವೊಂದೇ ನಿನ್ನ ಉಸಿರಾಗಿರಲು
ಬೇಗನೆ ಮಾಡುವ ಭರದಲಿ ಯಂತ್ರಗಳ ತಂದೆ
ಬೇಗನೆ ಸೇರುವ ತವಕದಲಿ ವಾಹನಗಳ ತಂದೆ
ನಿನ್ನ ಸ್ವಾರ್ಥಕ್ಕಾಗಿ ನಿಸರ್ಗದ ವಿರುದ್ಧ ನೀನಡೆದೆ
ನೀ ಮಾಡುವ ಕೆಲಸಗಳೆಲ್ಲಾ ಆಯ ತಪ್ಪಿದರೆ
ಬಲಿಯಾಗುವ ಮೊದಲ ಜೀವ ನಿನ್ನದೇನೆ!
ಆಸೆಗಳ ಬೆನ್ಹತ್ತಿ ನೀ ಓಡುತಲಿರುವೆ
ಹಗಲು ರಾತ್ರಿಯನ್ನದೇ ದುಡಿಯುತಲಿರುವೆ
ಆಘಾತಗಳ ಅರಿವಿಲ್ಲದೇ ನೀ ಸಾಗುತಲಿರುವೆ
ಸಾವನ್ನೂ ಲೆಕ್ಕಿಸದೇ ಮುನ್ನಡೆಯುತಿರುವೆ
ಓಡುವ ಭರದಲಿ ಎಡವಿ ಬಿದ್ದರೆ ನೀ ಸಾಯುವೆ!
ಆಸೆಗಳ ಅದುಮಿ ಇಟ್ಟುಕೊ ಮನುಜ
ದುರಾಸೆಯೇ ದುಃಖದ ಮೂಲ ಕಣಜ
ಬದುಕು ಒಂದು ಸುಂದರ ಪ್ರಪಂಚ
ದುಡುಕಿ ಹೋದರೆ ಮತ್ತೆಂದೂ ಬಾರದು ಜೀವ
ಅರಿತು ನಡೆದರೆ ನಿನ್ನ ಬಾಳು ಸುಖಾಂತ್ಯ ನಿಜ
ಭೂಮಿಯಲ್ಲಿ ಜನಿಸಿದ ಮಾನವರು
ಕೋಟಿ, ಕೋಟಿ,
ಭೂಮಿಯಲ್ಲಿ ಬದುಕಿದ್ದರೂ ಸತ್ತಂತೆ ಬದುಕುವ
ಜನರು ಹಲವಾದರೆ,
ಭೂಮಿಯಲ್ಲಿ ಸತ್ತರೂ ಕೂಡ ಬದುಕಿದವರಂತೆ
ಅಮರರಾಗಿರುವ ಜನ ಕೆಲವರು
*****