೧
ಜೌವನದ ಬಟ್ಟಲಲಿ ಪ್ರೇಮ ಸುಧೆಯನ್ನೆರೆದು
ಕುಡಿಸುತಿಹ ನನ್ನಾಕೆಯಿರೆ, ಸಗ್ಗವೇಕೆ?
ಜೀವ ಮಧುಕರನವಳ ಮುಖ ಕಮಲದಿ೦ದೊಲಿದು
ಸೌಂದರ್ಯ ಮಧುವೀಂಟುತಿರೆ ಬೊಮ್ಮ ಬೇಕೇ?
೨
ಎತ್ತ ನೋಡಿದರತ್ತವಳ ಮೊಗ ಚಂದಿರನು
ಮುಗಳನಗು ಬೆಳದಿಂಗಳೆರೆಯುತಿರುವಂತೆ
ಚಿತ್ತ ಭಾವದ ಕಣ್ಗೆ ದರ್ಶನವನೊದವಿಸುತ,
ಲೋಪವೆಸಗುವನಿತರ ಚಿಂತೆಗಳ ಸಂತೆ
೩
ಮಡಿಯಲ್ಲಿ ಮಲರಿರುವ, ನಳಿತೋಳ ಶಾಖೆಗಳು
ಕೇಸಗುರ ಬೆರಲುಗಳ ತಳಿರನಾಂತೆಸೆವ,
ನಡೆಯುವೆಳವಳ್ಳಿಯೊಂದತ್ತಿತ್ತ ಮೆಲ್ಮಿಂಚ
ಹರಹುತ್ತ ಸ೦ಚಾರವೆಸಗುವ೦ತಿರುವ-
ನನ್ನಾಕೆಯೆನ್ನ ಜೀವನ ತರುವನಪ್ಪಿರಲು,
ಸಂತಸದ ಸುಮಗಳಿಗೆ ಬರಗಾಲವಿಹುದೇ?
ಬನ್ನಗಳ ಕತ್ತಲೆಯ ಮೊತ್ತಗಳ ಕೆಡುನೆನಪು
ನೇಸರಿದಿರಿನ ಮಂಜುವನಿಯಾಗಹುದೇ?
೪
ಅವಳ ಚೆಲುಗೆನ್ನೆಗನ್ನಡಿಯಲ್ಲಿ ನನ್ನ ತುಟಿ-
ಯೆಸಳುಗಳ ಪಡಿನೆಳಲ ಕಾಣುತಿರುವಾಗ,
ಅವಳ ಮೈಯೊತ್ತಿನಲ್ಲಿ ಕಳಿತೆನ್ನ ಹಸ್ತಗಳು
ಹೆಗಲುಗಳ ಬಳಸುತ್ತ ತಬ್ಬುತಿರುವಾಗ,-
ಅವಳ ಕಂಗಳ ಹೊಳಪು ನನ್ನನಾವರಿಸಿರಲು,
ಸೋ೦ಕಿನಮೃತಾನಂದ ಚಿಮ್ಮುತಿರಲು,
ಕಿವಿಗಳಿಗೆ ಇನಿದನಿಯ ಮೆಲ್ಪೊಸೆದು ಬೆಸೆದಿರಲು,
ಬೇರೆ ಬ್ರಹ್ಮಾನಂದಕಿಹುದು ಸೋಲು!
೫
‘ಬಡತನದಿ ಬೆತೆಯಿಲ್ಲ; ಬಾಳಿನಲ್ಲಿ ಬೆಳಕುಂಟು
ಎರಡು ಜೀವಗಳೈಕ್ಯವಾದ ಬೆಸುಗೆಯಲಿ
ಬಡವೆರೆದ ನಲ್ಮೆಯಲಿ ನೈಜ ಸುಖ ಮುಖ’
ಎಂಬ ಭಾವದ ಬೋಧೆಯರಿತೆನಾಕೆಯಲಿ
*****
೧೯೪೨








