ಇಂದೇನು ಬಾನಿನಲಿ ಅತುಲಲಾವಣ್ಯ,
ಮಂದಮಾರುತನ ಮಿಳಿತದಾಗಮನ;
ಉದಿಸುತಿದೆ ದುರ್ಗದಲಿ ಹೊಸಹುರುಪು ಚೇತನ,
ಮೊಳಗುತಿದೆ ಕಹಳೆಯು ಕೂಡೀವರ್ತನ.
ಭವ್ಯ ದೇವಿಯ ಭವನ ಮುತ್ತಿಹರು ಅವರು,
ನೂರಾರು ಜೀವಿಗಳು ಮಾಯವತಿ ಪೀಠದೆದರು;
ಹಿಡಿಯಲಿ ಮಿನುಗುತಿದೆ ಬಂಟರಾ ಕೈ ಅಲುಕ,
ಮಿತಿಮೀರಿ ಹರಿಯುತಿದೆ ಉತ್ಸಾಹದಾಳುಗಳ ಚಳಕ.
ಕೊಂಬುಕಹಳೆಯ ಕೋಲಾಹಲದ ವಿಸ್ತರಣ,
ತುಂಬುತಿದೆ ಅ೦ಗಳದಿ ಯೋಧವೀರರ ಗಡಣ;
ನೂರಾರು ಜೀವಿಗಳು ಅಡ್ಡ ಬಿದ್ದಿಹರು ಪದತಲದಿ,
ವಿಜಯಹಾದಿಯ ಕೋರಿ ಮಣಿದು ವಿಧವಿಧದಿ.
ಭಗವತಿಯ ಪೀಠದಡಿ ಉರಿಯುತಿದೆ ಸೊಡರು,
ಎತ್ತೆತ್ತ ಹೊಳೆಯುತಿದೆ ನೀಲಾಂಜನದ ಮಿರುಗು;
ತಮಟೆ ಮದ್ದಲ ಕೊಂಬು ಕಹಳೆಯ ಗದ್ದಲ,
ನೂರ್ಮಡಿಸಿ ಮೊರೆಯುತಿದೆ ನರವೀಯಸಪ್ಪಳ.
ಅಂಬುಜನೇತ್ರಿ ಮಾಯವತಿ ಮೊಗದೆದರು,
ನಿಂದಿಹರು ಆಣತಿಗೋಸುಗರವರು ಸೇವಕರು;
ಉತ್ಸಾಹ ಕಂಠದಲಿ ಬೆರಸುತಿದೆ ಗರ್ಜನೆ,
ದಳದಾಳುಗಳ ಹಾದಿಫಲ ಝೇಂಕಾರಸಾಧನೆ.
*****









