ಪ್ರೀತಿಯ ಕಿಟಿ,
ವ್ಯಾನ್ಡ್ಯಾನ್‌ರು ಮಾಂಸ, ಸಾಸೇಜ್[ಮಸಾಲೆ ಬೆರೆಸಿದ ಹಂದಿ ಮಾಂಸ] ಮತ್ತು ಮಸಾಲೆ ಪದಾರ್ಥಗಳ ವ್ಯವಹಾರ ಮಾಡುತ್ತಿದ್ದರು. ಡ್ಯಾಡಿಯ ವ್ಯವಹಾರದ ಬಹುಪಾಲನ್ನು ಅವರೇ ನಿಭಾಯಿಸುತ್ತಿದ್ದರು. ಕಾರಣ ಅದರಲ್ಲಿ ಅವರಿಗಿದ್ದ ಪರಿಣತಿ. ಆದರೆ ಈಗ ಅವರು ಸಾಸೇಜ್ ವ್ಯವಹಾರಕ್ಕೆ ಮಾತ್ರ ತೊಡಗಿಕೊಂಡಿದ್ದಾರೆ. ಅದನ್ನು ಬೇಡವೆನ್ನಲು ನಮಗೆ ಸಾಧ್ಯವಿಲ್ಲ.
ಕಷ್ಟದ ದಿನಗಳಿಗೆ ಬೇಕಾಗಬಹುದೆಂದು ಒಂದಿಷ್ಟು ಹೆಚ್ಚು ಶೇಖರಿಸಿಡಲು ಜಾಸ್ತಿ ಮಾಂಸಕ್ಕೆ ನಾವು ಆರ್ಡರ್ ಮಾಡಿದ್ದೆವು. ಅದನ್ನು ನೋಡುವುದೇ ಒಂದು ಮೋಜು. ಮೊದಲು ಮಾಂಸದ ತುಂಡುಗಳು ಎರಡು ಮೂರು ಬಾರಿ ಚೂರು ಮಾಡುವ ಯಂತ್ರದಲ್ಲಿ ಚೂರುಚೂರಾಗಿ ಕತ್ತರಿಸಲ್ಪಡುತ್ತವೆ. ಆನಂತರ ಬೇಕಾಗುವ ಇತರ ಮಸಾಲೆ ಸಾಮಾನುಗಳು ಈ ತುಂಡರಿಸಿದ ಮಾಂಸದೊಡನೆ ಬೆರಸಲಾಗುತ್ತದೆ. ಆ ನಂತರ ಈ ಪದಾರ್ಥವನ್ನು ಹಂದಿ ಕರುಳಿನೊಳಗೆ ನಳಿಕೆಯಲ್ಲಿ ತುಂಬಿದಂತೆ ತುಂಬಿ ಸಾಸೇಜ್ ಸಿದ್ಧಮಾಡಲಾಗುತ್ತದೆ. ಆ ದಿನ ರಾತ್ರಿ ನಾವು ಊಟಕ್ಕೆ ಈ ಸಾಸೇಜ ಮಾಂಸವನ್ನು ಹುರಿದು ಊಟದೊಂದಿಗೆ ತಿಂದೆವು. ಆದರೆ ಗೆಲ್ಡರ್‌ಲೆಂಡ್ ಸಾಸೇಜನ್ನು ಮೊದಲು ಚೆನ್ನಾಗಿ ಫ್ರೈ ಮಾಡಬೇಕಾಗಿತ್ತು. ಹಾಗಾಗಿ ನಾವು ಅದನ್ನು ಕಟ್ಟಿಗೆಯೊಂದಕ್ಕೆ ಕಟ್ಟಿ ದಾರದ ಮೂಲಕ ಜಂತಿಗೆ ನೇತು ಹಾಕಿದೆವು. ಆ ಕೋಣೆಗೆ ಬಂದವರೆಲ್ಲಾ ಈ ಕಚ್ಚಾ ಸಾಸೇಜ್‌ನ ಶೋ ದೃಶ್ಯ ನೋಡಿ ನಗಲಾರಂಭಿಸಿದರು. ಅವು ತುಂಬಾ ವಿಚಿತ್ರವಾಗಿ ಕಾಣುತ್ತಿದ್ದವಲ್ಲ.
ಕೋಣೆ ಆಧುನಿಕ ಮೆಸ್‌ವೊಂದರಲ್ಲಿತ್ತು. ವ್ಯಾನ್ಡ್ಯಾನ್‌ರು ತಮ್ಮ ಹೆಂಡತಿಯ ಎಫ್ರಾನ್‌ನ್ನು ತಮ್ಮ ದೊಡ್ಡ ದೇಹಕ್ಕೆ ಸುತ್ತಿಕೊಂಡು[ಮೊದಲಿಗಿಂತ ಅದರಲ್ಲಿ ಇನ್ನಷ್ಟು ದುಂಡಗೆ ಕಾಣುತ್ತಿದ್ದರು] ಮಾಂಸವನ್ನು ಸ್ವಚ್ಛಗೊಳಿಸುತ್ತಿದ್ದರು. ರಕ್ತಮಯ ಕೈಗಳು, ಕೆಂಪಾದ ಮುಖ, ಕೊಳೆಯಾದ ಎಫ್ರಾನ್‌ಗಳಿಂದ ಥೇಟ್ ಮಾಂಸದಂಗಡಿಯ ಮಾದಿಗನಂತೆ ಕಾಣುತ್ತಿದ್ದರು. ಶ್ರೀಮತಿ ವ್ಯಾನ್ಡ್ಯಾನ್ ಎಲ್ಲವನ್ನೂ ಒಂದೇ ಕಾಲಕ್ಕೆ ಮಾಡುವವರಂತೆ ಪ್ರಯತ್ನಿಸುತ್ತಿದ್ದರು., ಒಂದೆಡೆ ಪುಸ್ತಕದಿಂದ ಡಚ್ ಕಲಿಯುತ್ತಿದ್ದರೆ, ಇನ್ನೊಂದೆಡೆ ಸಾರಿಗೆ ಕೈಯಾಡಿಸುತ್ತಾ ಮಾಂಸ ಬೆಂದಿರುವುದೇ ಎಂದು ನೋಡುತ್ತಿದ್ದರು, ನಿಟ್ಟುಸಿರು ಬಿಡುತ್ತಾ, ತಮ್ಮ ಉಳುಕಿದ ಸೊಂಟದ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಬಹುಶಃ ವಯಸ್ಸಾಗುತ್ತ ಹೆಂಗಸರಿಗೆ ತಮ್ಮ ಬೃಹತ್ ಗಾತ್ರದ ಸೊಂಟದ ಬೊಜ್ಜು ಇಳಿಸಲು ಮಾಡುವ ಮೂರ್ಖ ಕಸರತ್ತುಗಳಿಂದ ಹೀಗೆಲ್ಲಾ ಆಗುತ್ತದೆ.
ಡಸೆಲ್‌ಗೆ ಒಂದು ಕಣ್ಣು ಉರಿಯೂತವಾಗಿತ್ತು. ಒಲೆಯ ಮೇಲಿನ ಕೆಮೊಮೈಲ್ ಚಹಾದಿಂದ ಅದನ್ನು ಆಗಾಗ ಸ್ವಚ್ಛಗೊಳಿಸುತ್ತಿದ್ದರು. ಪಿಮ್ ಕಿಡಕಿಯ ಮೂಲಕ ತೂರಿ ಬರುತ್ತಿದ್ದ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಕುರ್ಚಿಯ ಒಂದೇ ಬದಿಗೆ ತಳ್ಳಲ್ಪಟ್ಟವರಂತೆ ಕುಳಿತಿದ್ದರು. ನನಗನ್ನಿಸುತ್ತದೆ ಅವರಿಗೆ ರುಮ್ಯಾಟಿಸಮ [ಸಂಧಿನೋವು] ಚಿಂತೆಗೀಡುಮಾಡಿದೆ. ಯಾಕೆಂದರೆ ಮುಖದಲ್ಲಿ ತುಂಬಾ ದುಗುಡ ತುಂಬಿಕೊಂಡಂತೆ ಕಾಣುವ ಅವರು ವ್ಯಾನ್ಡ್ಯಾನ್ ಮಾಡುವ ಕೆಲಸದತ್ತ ದೃಷ್ಟಿ ಕೀಲಿಸಿ ಕೂತಿದ್ದರು. ಹಳೆಯ ಕಾಲದವರ ಮನೆಯಲ್ಲಿರುವ ನಡಗುತ್ತಾ ಇರುವ ಮುದುಕನಂತೆ ಕಾಣುತ್ತಿದ್ದರು. ಪೀಟರ್ ತನ್ನ ಬೆಕ್ಕಿನೊಂದಿಗೆ ರೂಮಿನ ತುಂಬಾ ಎಕ್ರೋಬ್ಯಾಟ್ ಹಗ್ಗದ ಮೇಲಿನ ನಡಿಗೆಯಂತೆ ಸುತ್ತುತ್ತಿದ್ದ. ಮಮ್ಮಿ, ಮಾರ್‍ಗೊಟ್ ಮತ್ತು ನಾನು ಬಟಾಟೆಯ ಸಿಪ್ಪೆ ಸುಲಿಯುತ್ತಿದ್ದರೂ ಯಾರೊಬ್ಬರೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.ಕಾರಣ ಎಲ್ಲರ ಕಣ್ಣು ವ್ಯಾನ್ಡ್ಯಾನ್‌ರತ್ತ ನೆಲೆಸಿದ್ದವು.
ಅಷ್ಟು ಹೊತ್ತಿಗೆ ಡಸೆಲ್ ತಮ್ಮ ಹಲ್ಲು ತಪಾಸಣೆಯ ಕೆಲಸವನ್ನು ಸುಮ್ಮನೆ ತಮಾಷೆಗೆ ಶುರು ಮಾಡಿದರು. ಅವರ ಮೊದಲ ಪೇಷಂಟ್ ಬಗ್ಗೆ ನಾನು ಹೇಳಲೇಬೇಕು. ಮಮ್ಮಿ ಸುಮ್ಮನೆ ವ್ಯಂಗ್ಯವಾಡುತ್ತಿದ್ದರು. ಶ್ರೀಮತಿ ವ್ಯಾನ್ಡ್ಯಾನ್ ಈ ಪ್ರಯೋಗಕ್ಕೆ ಒಡ್ಡಿಕೊಂಡ ಮೊದಲಿಗರು. ಅವರು ರೂಮಿನ ಮಧ್ಯಭಾಗದಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡರು. ಡಸೆಲ್ ತಮ್ಮ ಕಿಟ್‌ನ್ನು ಒಂದು ರೀತಿಯ ವಿಭಿನ್ನ ಶೈಲಿಯಲ್ಲಿ ತೆರೆಯ ತೊಡಗಿದರು. ಮತ್ತೇನೋ ಔಷಧಿಯನ್ನು ಅಲರ್ಜಿ ನಿವಾರಕಕ್ಕೆಂದು ಕೇಳಿದರು. ವ್ಯಾಕ್ ಬದಲಿಗೆ ವ್ಯಾಸಲೀನನ್ನು ಕೇಳಿದರು.
ಡಸೆಲ್‌ರು ಶ್ರೀಮತಿ ವ್ಯಾನ್ಡ್ಯಾನ್‌ರ ಬಾಯಿಯನ್ನು ತೆರೆದು ಪರೀಕ್ಷಿಸಿದರು. ಎರಡು ಹಲ್ಲುಗಳನ್ನು ಪರೀಕ್ಷಿಸುತ್ತಿದ್ದಂತೆ ಇನ್ನೇನು ಅಲ್ಲಿಂದ ಎದ್ದು ಓಡೇ ಬಿಡುತ್ತಾರೆ ಎಂಬಂತೆ ಅತಿ ನೋವಿನಿಂದ ಕೂಡಿದ ದನಿಯಲ್ಲಿ ಶ್ರೀಮತಿ ವ್ಯಾನ್ಡ್ಯಾನ್ ಚೀರಿದರು. ದೀರ್ಘ ತಪಾಸಣೆಯ ನಂತರ[ವ್ಯಾನ್ಡ್ಯಾನ್‌ರ ಕೇಸಿನಲ್ಲಿ ಅದು ಕೇವಲ ಎರಡೇ ನಿಮಿಷಗಳಾಗಿದ್ದವು] ಹಲ್ಲಿನೊಳಗಿನ ತೂತನ್ನು ಸ್ವಚ್ಛ ಗೊಳಿಸತೊಡಗಿದರು. ಆದರೆ ಹೆದರಿಕೆ ಇರಲಿಲ್ಲ. ಅಲ್ಲಿ ಯಾವ ತೊಂದರೆಯೂ ಆಗಲಿಲ್ಲ. ಡಸೆಲ್ ತಮ್ಮ ಸ್ಕ್ರೇಪರನ್ನು ಕೈಯಿಂದ ಬಿಡುವವರೆಗೆ ರೋಗಿ ತನ್ನ ಎಲ್ಲ ಕೈಕಾಲುಗಳನ್ನು ಹಾಗೇ ಎಲ್ಲ ದಿಕ್ಕುಗಳಿಗೆ ಚದುರಿ ಇಟ್ಟಂತೆ ಬಿಸಾಕಿದ್ದರು. ಯಾಕೆಂದರೆ ಅದು ಶ್ರೀಮತಿ ವ್ಯಾನ್ಡ್ಯಾನ್‌ರ ಹಲ್ಲಿನ ನಡುವೆ ಸಿಕ್ಕಿಕೊಂಡಿತ್ತು.
ಈಗ ನಿಜಕ್ಕೂ ಆ ಧಡೂತಿ ಬೆಂಕಿಯಲ್ಲಿ ಬಿದ್ದಂತೆ ಚಪಡಿಸಿದರು. ಆಕೆ ಚೀರಾಡತೊಡಗಿದರು[ ಆ ಸಲಕರಣೆ ಎಷ್ಟು ಹೊತ್ತಿನವರೆಗೆ ಅವರ ಬಾಯಲ್ಲಿ ಇತ್ತೋ ಅಲ್ಲಿಯವರೆಗೆ] ಬಾಯಿಂದ ಆ ಸಲಕರಣೆಯನ್ನು ತೆಗೆಯಲು ಎಳೆಯತೊಡಗಿದರು. ಆದರೆ ಅದನ್ನು ಇನ್ನಷ್ಟು ಒಳತಳ್ಳಲಾಯಿತೇ ಹೊರತು ಹೊರಗಲ್ಲ. ಡಸೆಲ್ ಸುಮ್ಮನೆ ಶಾಂತವಾಗಿ ಈ ತಮಾಷೆಯನ್ನು ನೋಡುತ್ತಾ ನಿಂತರು. ಉಳಿದವರೆಲ್ಲ ನಗು ತಡೆದುಕೊಳ್ಳಲಾರದೆ ಅಬ್ಬರಿಸಿ ನಕ್ಕರು. ಅದು ನಮ್ಮನ್ನೆಲ್ಲಾ ಕಷ್ಟಕ್ಕೆ ತಂದಿತು. ನನಗೆ ಮಾತ್ರ ಜೋರಾಗಿ ಕಿರುಚಿದಂತೆ ನಗಬೇಕಿತ್ತು. ತುಂಬಾ ಹೊತ್ತು ಹಾಗೆ ಹೀಗೆ ತಿರುಗಿ, ಕೂಗಿ, ಅವರಿವರ ಕರೆದು ಬೊಬ್ಬಿರಿದು ಸರ್ಕಸು ಮಾಡಿದ ನಂತರ ಆ ವಸ್ತು ಕೊನೆಗೂ ಹೊರಬಂದಿತು. ಡಸೆಲ್ ಆನಂತರ ಏನೂ ಆಗಿಲ್ಲ ಎಂಬಂತೆ ತಮ್ಮ ಕೆಲಸದಲ್ಲಿ ತೊಡಗಿದರು.
ಅದನ್ನು ಅವರು ಎಷ್ಟು ವೇಗವಾಗಿ ಮಾಡಿದ್ದರೆಂದರೆ ಶ್ರೀಮತಿ ವ್ಯಾನ್ಡ್ಯಾನ್ ಇನ್ನೊಂದು ಹೊಸ ಸಂಚು ಮಾಡಲು ಸಮಯವೇ ಇರಲಿಲ್ಲ. ಆದರೂ ಡಸೆಲ್‌ರಿಗೆ ಜೀವನದಲ್ಲಿ ಒಮ್ಮೆಯಾದರೂ ಇಷ್ಟು ದೊಡ್ಡ ಖುಷಿಕೊಡುವ ಸಹಾಯ ಅವರಿಗೆ ಸಿಕ್ಕರಲಿಲ್ಲ. ಇಬ್ಬರೂ ಸಹಾಯಕರು ತುಂಬಾ ಸಹಕರಿಸಿದ್ದರು. ವ್ಯಾನ್ಡ್ಯಾನ್ ಮತ್ತು ನಾನು, ನಮ್ಮ ಕರ್ತವ್ಯವನ್ನು ಬಹಳ ಸರಿಯಾಗಿ ಮಾಡಿದ್ದೆವು. ಇಡಿ ದೃಶ್ಯವೂ ಮಧ್ಯಯುಗದಲ್ಲಿ ಪ್ರಸಿದ್ಧವಾದ “A Quack at Work” ಹೆಸರಿನ ಚಿತ್ರದಂತೆ ಕಾಣುತ್ತಿತ್ತು. ಇಷ್ಟಾದರೂ ರೋಗಿಗೆ ತಾಳ್ಮೆ ಇರಲಿಲ್ಲ. ಶ್ರೀಮತಿ ವ್ಯಾನ್ಡ್ಯಾನ್‌ಗೆ ತನ್ನ ಸಾರು ಮತ್ತು ಊಟದ ಕಡೆಗೆ ಹೆಚ್ಚು ಲಕ್ಷ್ಯ. ಒಂದಂತೂ ಸತ್ಯ. ಶ್ರೀಮತಿ ವ್ಯಾನ್ಡ್ಯಾನ್ ಇನ್ನು ಮುಂದೆ ತನ್ನ ತಪಾಸಣೆ ಮಾಡಿಕೊಳ್ಳಲು ತಾ ಮುಂದು ಎಂದು ಎಂದೂ ಹೋಗುವುದಿಲ್ಲ.
ನಿನ್ನ,
ಆನ್
*****






