ಪ್ರಿಯ ಕಿಟಿ,
ಈ ಮಧ್ಯೆ ನಮ್ಮ ವಾಗ್ವಾದಗಳ ಬಗ್ಗೆ ಏನೂ ಹೇಳದೇ ಬಹಳ ದಿನವಾಯಿತು. ಅದರಲ್ಲಿ ಅಂತಹ ಯಾವ ಬದಲಾವಣೆಗಳು ಆಗಿಲ್ಲ. ಈ ಭಿನ್ನಮತ, ಅಪಸ್ವರಗಳಿಗೆಲ್ಲ ಬಹುದಿನಗಳಿಂದ ನಾವು ಹೊಂದಿಕೊಂಡೆ ಬಂದಿದ್ದೇವೆ. ಡಸೆಲ್ ಮಾತ್ರ ಪ್ರಾರಂಭದಲ್ಲಿ ಒಂದಿಷ್ಟು ಆಘಾತಗೊಂಡಿದ್ದರು. ಆದರೆ ಬರಬರುತ್ತಾ ಅವರಿಗೂ ಅದು ಅಭ್ಯಾಸವಾಯಿತು. ಈಗವರು ಇದಕ್ಕೆಲ್ಲಾ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಮಾರ್ಗೊಟ್ ಮತ್ತು ಪೀಟರ್ನಿಗೆ ಯಾರೂ ತರುಣರು ಎನ್ನಲಾರರು. ಯಾಕೆಂದರೆ ಅವರಿಬ್ಬರೂ ಎಷ್ಟು ಗಂಭೀರ ಮತ್ತು ಶಾಂತಚಿತ್ತದವರು. ಆದರೆ ನಾನು ಅವರಿಗೆ ತದ್ವಿರುದ್ಧ. ಅದಕ್ಕಾಗಿಯೇ ಯಾವಾಗಲೂ ಮಾರ್ಗೊಟ್ ಮತ್ತು ಪೀಟರ್ ಹೇಗಿದ್ದಾರೆಂದು ನಿನಗೆ ಗೊತ್ತಾಗುವುದಿಲ್ಲವೇ? ನೀನ್ಯಾಕೆ ಅವನ್ನು ಅನುಸರಿಸಬಾರದು? ಇಂತಹ ಮಾತುಗಳನ್ನು ಆಗಾಗ ಕೇಳಬೇಕಾಗುತ್ತದೆ. ಆದರೆ ನಾನದನ್ನು ಸಂಪೂರ್ಣ ದ್ವೇಷಿಸುತ್ತೇನೆ. ಕಿಟಿ, ನಾನಿದನ್ನು ನಿನಗೆ ಹೇಳಲೇಬೇಕು. ನನಗೆ ಮಾರ್ಗೊಟ್ಳ ಹಾಗೇ ಬಾಯಿ ಮುಚ್ಚಿಕೊಂಡಿರಲು ಆಗುವುದಿಲ್ಲ. ನನಗೆ ಹೋಲಿಸಿದರೆ ಆಕೆ ತುಂಬಾ ಸೌಮ್ಯ ಹಾಗೂ ನಿಷ್ಕ್ರೀಯ ಎನ್ನಬೇಕು. ಆಕೆ ತನ್ನ ಬಗ್ಗೆ ಮಾತನಾಡಲು ಇತರರಿಗೆ ಅವಕಾಶ ಕೊಡುತ್ತಾಳೆ. ತನ್ನಲ್ಲಿರುವುದನ್ನು ಕೊಟ್ಟುಬಿಡುತ್ತಾಳೆ. ಆದರೆ ನಾನು ಸಮರ್ಥ ವ್ಯಕ್ತಿತ್ವವಾಗಿರಲು ಬಯಸುವೆ. ಆದರೆ ಇಂತಹ ಸಂಗತಿಗಳನ್ನು ನಾನು ನನ್ನಷ್ಟಕ್ಕೆ ಇಟ್ಟುಕೊಳ್ಳುವೆ. ಯಾಕೆಂದರೆ ಒಂದೊಮ್ಮೆ ನಾನಿದನ್ನೆಲ್ಲಾ ವಿವರಿಸಲು ಹೊರಟರೆ ಅವರು ನನ್ನ ನೋಡಿ ನಗಬಹುದು. ಇನ್ನು ಊಟದ ಟೇಬಲ್ಲಿನ ವಾತಾವರಣ ಯಾವಾಗಲೂ ಬಹಳೇ ಉದ್ವಿಗ್ನತೆಯಲ್ಲಿಯೇ ಇರುತ್ತದೆ. ಆದಾಗ್ಯೂ ಪುಣ್ಯದಿಂದ ಎಂದಾದರೂ ಸೂಪ್ ಈಟರ್ಗಳು ಬಂದಾಗ ಮಾತ್ರ ಅದು ನಗುನಗುವಿನಿಂದ ಕೂಡಿರುತ್ತದೆ. ಸೂಪ್ ಈಟರ್ಗಳೆಂದರೆ ನಿನಗೆ ಗೊತ್ತಾ? ಯಾರು ಆಫೀಸಿನಿಂದ ನಮ್ಮಲ್ಲಿಗೆ ಬರಬಹುದಾದ ಜನರು. ಅವರು ಬಂದಾಗ ಅವರಿಗೆ ಕುಡಿಯಲು ಸೂಪ್ ನೀಡಲಾಗುತ್ತದೆ.
ಇಂದು ಮಧ್ಯಾಹ್ನ ಮಾರ್ಗೊಟ್ ಪುನಃ ಅತಿ ಕಡಿಮೆ ತಿನ್ನುತ್ತಿರುವುದರ ಬಗ್ಗೆ ವ್ಯಾನ್ಡ್ಯಾನ್ ಮಾತನಾಡತೊಡಗಿದರು. “ಬಹುಶಃ ನೀನು ಸ್ಲೀಮ್ ಆಗಿ ಕಾಣಲು ಹೀಗೆ ಮಾಡುತ್ತಿರಬಹುದು” ಆಕೆಯನ್ನು ಛೇಡಿಸುತ್ತಾ ಅವರೆಂದರು. ಪ್ರತಿಸಲವೂ ಮಾರ್ಗೊಟ್ಳನ್ನು ಸಮರ್ಥಿಸುವ ಮಮ್ಮಿಗೆ ಇದು ಸರಿಬರಲಿಲ್ಲ. ಜೋರಾಗಿ ಹೇಳಿಯೇಬಿಟ್ಟರು, “ನಿಮ್ಮ ಇಂತಹ ಮೂರ್ಖ ಮಾತುಕತೆಗಳನ್ನು ಇನ್ನು ಮುಂದುವರಿಸುವುದು ನನಗೆ ಸಹನೆಯಾಗದು” ಎನ್ನುತ್ತಿದ್ದಂತೆ, ವ್ಯಾನ್ಡ್ಯಾನ್ ಮರ್ಯಾದೆಯಾದಂತಾಗಿ ಬಿಳಿಚಿಕೊಂಡರು. ಏನೂ ಮಾತನಾಡದೇ ಸುಮ್ಮನೆ ಮುಂದೆ ನೋಡುತ್ತಾ ಉಳಿದುಬಿಟ್ಟರು. ನಾವು ಎಷ್ಟೋ ಸಲ ಯಾವ ಯಾವುದೋ ಕಾರಣಕ್ಕೆ ನಗುತ್ತೇವೆ. ಇತ್ತೀಚೆಗೆ ಸುಮ್ಮಸುಮ್ಮನೇ ಶ್ರೀಮತಿ ವ್ಯಾನ್ಡ್ಯಾನ್ ಅಸಂಬದ್ಧವಾಗಿ ಮಾತಾಡುತ್ತಿದ್ದರು. ಅವರು ತಮ್ಮ ಗತಕಾಲದ ನೆನಪುಗಳನ್ನು ಮಾಡಿಕೊಳ್ಳುತ್ತಿದ್ದರು: ತಾನು ಮತ್ತು ತನ್ನ ತಂದೆ ಎಷ್ಟು ಚೆನ್ನಾಗಿ ಹೊಂದಿಕೊಂಡಿದ್ದೆವು, ತಾನು ಎಷ್ಟೊಂದು ನಕರಾ ಮಾಡುತ್ತಿದ್ದೆ, “ನಿನಗೆ ಗೊತ್ತೇ” ಎನ್ನುತ್ತಾ ಅವರು ಹೇಳುತ್ತಲೇ ಹೋದರು. ನಿಮಗೆ ಗೊತ್ತಾ, ನನ್ನ ತಂದೆ ಹೇಳುತ್ತಿದ್ದರು.. ಒಂದೊಮ್ಮೆ ಯಾರಾದರೂ ಪುರುಷ ನಿನ್ನ ಮೇಲೆ ಕೋಪಗೊಂಡಿರುವ ಸಂದರ್ಭದಲ್ಲಿ ನೀನು ಹೀಗೆ ಹೇಳಬೇಕು, ಮಿಸ್ಟರ್ ಸೋ ಎಂಡ್ ಸೋ, ನೆನಪಿಟ್ಟುಕೊಳ್ಳಿ, ನಾನೊಬ್ಬಳು ಸುಸಂಸ್ಕೃತ ಹೆಣ್ಣು ಮಗಳು’ ಮತ್ತು ಹಾಗೆಂದ ಕೂಡಲೇ ಆತನಿಗೆ ನೀವು ಹೇಳುವುದು ಅರ್ಥವಾಗುತ್ತದೆ ಎಂದು. ನಾವು ಅದೊಂದು ಜೋಕ್ ಆಗಿರಬಹುದೆಂದು ಬಾಯ್ತುಂಬಾ ನಕ್ಕೆವು. ಪೀಟರ್ ಸಾಮಾನ್ಯವಾಗಿ ಬಹು ಶಾಂತ. ಆದರೆ ಕೆಲವೊಮ್ಮೆ ನಾವೆಲ್ಲ ಬಿದ್ದು ಬಿದ್ದು ನಗುವಂತೆ ಪರಿಹಾಸ್ಯ ಮಾಡುತ್ತಾನೆ. ಆತನಿಗೆ ವಿದೇಶಿ ಭಾಷೆಯ ಬಹುಮೋಹವಿದೆ. ಆದರೆ ಬಹಳ ಸಲ ಆತನಿಗೆ ಆ ಪದಗಳ ಅರ್ಥವೂ ಗೊತ್ತಿರುವುದಿಲ್ಲ. ಒಂದು ದಿನ ಮಧ್ಯಾಹ್ನ ಆಫೀಸಿಗೆ ವಿಸಿಟರ್ಸ ಬಂದ ಕಾರಣ ನಮಗೆ ಪಾಯಿಖಾನೆಗೆ ಹೋಗಲು ಸಾಧ್ಯವಿರಲಿಲ್ಲ. ಆದರೆ ಪೀಟರ್ನಿಗೆ ಅರ್ಜೆಂಟಾಗಿ ಪಾಯಿಖಾನೆಗೆ ಹೋಗಬೇಕಾಗಿತ್ತು. ಆದರೆ ಅಲ್ಲಿ ನೀರನ್ನು ಬಿಡುವ ಹಾಗಿರಲಿಲ್ಲ. ಆಗ ಆತ ಏನು ಮಾಡಿದ ಗೊತ್ತೇ? ತಾನು ಒಳಗಿರುವುದನ್ನು ನಮಗೆ ತಿಳಿಸುವ ಸಲುವಾಗಿ ಶೌಚಾಲಯದ ಬಾಗಿಲಿಗೆ ’ಎಸ್. ವಿ. ಪಿ ಗ್ಯಾಸ್’ ಎಂದು ಬರೆದ ನೋಟಿಸ್ ಒಂದನ್ನು ಅಂಟಿಸಿದ. ನಿಜಕ್ಕೂ ಆತನಿಗೆ ಹೇಳಬೇಕಾಗಿದ್ದು, ’ಗ್ಯಾಸ್ನಿಂದ ದೂರವಿರಿ’ ಎಂದಾಗಿತ್ತು. ಆದರೆ ಆತನಿಗೆ ಹೀಗೆ ಬರೆದದ್ದು ಹೆಚ್ಚು ಸಭ್ಯ ಎಂದು ಅನಿಸಿತ್ತು. ಅದರ ನಿಜ ಅರ್ಥ ನಿನಗೆ ಸಾಧ್ಯವಾಗುವುದಾದರೆ ಎಂಬುದಾಗಿತ್ತು ಎಂದು ಆತನಿಗೆ ಗೊತ್ತಿರಲಿಲ್ಲ. ಇದನ್ನು ಓದಿ ನಾವೆಲ್ಲ ಎಷ್ಟೊಂದು ನಕ್ಕೆವು.
ನಿನ್ನ,
ಆನ್
*****






