ಯಾವ ತಾಳಕ್ಕೆ ಕುಣಿಯುವದು ನನ್ನ ಜೀವ?
ಯಾವ ಬೆಳಸನು ಕಂಡು ಸಮುದ್ರದಾಚೆ ಹಾರಿತು ಜೀವಹಂಸ ?
ಏನನ್ನೆಳಸಿತು! ಏನನ್ನು ಪಡೆಯಿತು!
ಈ ವಿಚಿತ್ರವ ತಿಳಿದು ಬಲ್ಲವರುಂಟೆ?
ಮಾನಸದ ತಿಳಿಗೊಳವ ಬಿಟ್ಟು ತಾಮಸದ ನದಿಗೆ ಹೋದ ಹಂಸವೆ!
ನೀರು ಸಿಗಲಿಲ್ಲ ನಿನಗೆ; ನೀರಡಿಸಿ ತಿರುಗಿ ಬಂದೆ!
ಏಳು ಸಮುದ್ರಗಳ ದಾಟಿದರೂ ದೊರೆಯದಾಯಿತೆ ನೀರಕಾಳು?
ಹನಿಯೊಡೆಯಲಿಲ್ಲವೆ ಮುಗಿಲು? ಹೆಚ್ಚಾಯಿತೆ ದಾಹ?
ಏತಕ್ಕೆಂದು ಹೋದೆ? ಏನನ್ನು ನೆನೆಸಿ ನೊಂದೆ!
ಏಲೆಲೆ! ಜೀವಹಂಸ! ದೈವದ ಮುಂದೆ ಹಾರಿದರುಂಟೆ?
ನಿಬ್ಬಣದ ಮಬ್ಬಿನಲ್ಲಿ ನೆಗೆದ ಹಂಸ,-ಇಬ್ಬಣದಿರುಕಿನಲ್ಲಿ ಗಾಸಿಗೊಂಡಿತ್ತು.
ಜ್ಯೋತಿಮಯನ ಕಾಣಲೊಪ್ಪಿ ಕದಲದ ಕತ್ತಲೆಯನಪ್ಪಿತು.
ಚಿಕ್ಕೆಯ ಸಹ ಕಾಣದೆ ಕಕ್ಕಾವಿಕ್ಕಿಯಾಗಿ
ಮಿಕ್ಕಲು ಶೂನ್ಯತೆಯು, ತಿಕ್ಕಲು ಯಾತನೆಯು,
ದಿಕ್ಕುದಿಕ್ಕಿನಲ್ಲಿ ರೆಕ್ಕೆ ಬಡೆಯಿತಯ್ಯ! ರೆಕ್ಕೆ ಬಡೆದು ದಣಿಯಿತು.
ಬೆಳಕು ಸೀಮೆಯ ಬಿಟ್ಟು ನಿಶೆಯ ರಾಜ್ಯವ ಹೊಕ್ಕುವರುಂಟೆ?
ಹೊಕ್ಕು ಮತ್ತೆ ಬೆಳಕಿಗಾಗಿ ಬಾಯ್ ಬಿಟ್ಟವರುಂಟೆ?
ಉಂಟು! ಉಂಟು!
ಏದೆಗುಂದದಿರೆಲೆ, ಅರಸಂಚೆ! ಜೀವದಾಸೆಯ ಬಿಡದಿರು!
ಹನಿಯೊಡೆಯದಿರೆ ಮುಗಿಲು, -ಎದೆಯೊಡೆದು ಸಹ ನೀರು ಬರಬಹುದು.
ಸುತ್ತೆಲ್ಲ ಕತ್ತಲೆಯು ಮುತ್ತಿರಲೇನು?
ರೆಕ್ಕೆಗಳು ಚಲಿಸಿರಲು,-ಚಿಕ್ಕೆಗಳಂತೆ ಮಿನುಗುವವಲ್ಲ!
ಧೈರ್ಯವಿದ್ದಲ್ಲಿ ಧಾವಿಸುವದು ದೈವಿಕತೆಯ ನಿತ್ಯನಿಯಮ.
ದಿವ್ಯಪ್ರಭೆಯು ದೊರೆಯಲಿಲ್ಲವೆಂದು ಮರುಗದಿರೆಲೆ, ಅರಸಂಚೆ!
ಆ ಪ್ರಭೆಯು ನೀನೆ!
ನಿನ್ನ ಬೆಳಕನ್ನು ತಿಳಿಯಲು,-ನಿಶೆಯ ನಾಡಿನಲ್ಲ ಹಾರಿದೆ ನೀನು!
ಈ ತಿಳಿವಿನಿಂದ ಬಾಳು,-ತಿಳಿವಿನ್ನೊಂದು ಹೊಳೆವತನಕ!
*****








