ಬರಗಾಲ ಬಂತೆಂದು ರೈತ ಬಳಲಿ ಬೆಂಡಾಗಿ ಸಾಯುವುದಿಲ್ಲ; ಆದರೆ ಪರಿಸ್ಥಿತಿಗಳು ಸಾಯುವಂತೆ ಮಾಡಬಹುದು ಅಥವಾ ಅಸ್ಥಿಪಂಜರದ ಮೇಲೊಂದು ರಕ್ತ ಹಿಂಡಿ ಒಣಗಿಸಿದಂತಿರುವ ಕರಿಯ ನಿರ್ಜೀವ ತೊಗಲನ್ನೊತ್ತು, ಮೈ ಸುಡುವ ಸೂರ್ಯನನ್ನು, ‘ಬಾರೋ ಅಸಮಬಲ ಪರಾಕ್ರಮಿಯೇ… ವಸುಂಧರೆಯ ಕಣ್ಕುಕ್ಕಿ ಬಸುರೊಡೆಸುವವನೇ ಬಾರೋ… ಗಂಡಸಾದರೆ ಬಾರೋ…” ಎಂದು ಸವಾಲು ಹಾಕಬಹುದು.
ಕೋಳಿಗೂಡು ಚುಕ್ಕೆ ಪಡುವಣದಲ್ಲಿ ಆಳೆತ್ತರವಿರುವಾಗಲೇ ಮೊದಲ ಕೋಳಿ ಕೂಗುತ್ತದೆ. ಕೌದಿಯ ಮೇಲೆ ಎದ್ದು ಕುಳಿತು ಕಣ್ಣುಜ್ಜಿ ಕೈಮುಗಿದು ಕಣ್ಣು ಬಿಡುತ್ತಾನೆ. ಕತ್ತಲೆ. ಯಾಕೋ ಚಡ್ಡಿ ನೆನೆದಿರುವಂತೆ ಅನಿಸುತ್ತದೆ. ಅನುಮಾನದಿಂದಲೇ ಬುಡ್ಡಿ ಹಚ್ಚುತ್ತಾನೆ… ಹೌದು… ಕೆಸರ ಗದ್ದೆಯಲ್ಲಿ ನಡೆವಾಗ ಕಪ್ಪೆಯೊಂದು ಪ್ರಾಣ ಭಯದಿಂದ ಬಡಕೊಳ್ಳುತ್ತಿರುತ್ತದೆ… ಅದೇಕಿರಬಹುದೆಂದು ಗೊತ್ತಿದ್ದರೂ ಅದೆಂತಹ ಹಾವು ಇರಬಹುದೆಂದು ಕುತೂಹಲದಿಂದ ಹತ್ತಿರ ಹೋಗುತ್ತಾನೆ… ಭಯಂಕರವಾದ ಹಾವು… ಎರಡಾಳುದ್ದದ ಹಾವು… ಅದನ್ನು ಬಿಡಿಸಬೇಕೆಂದು ಎಂದೂ ಅನ್ನಿಸಿರದಿದ್ದರೂ ಆಗ ಅನಿಸುತ್ತದೆ…. ಕೈ ಎತ್ತುತ್ತಾನೆ….. ಮಿಡಿನಾಗರ ಹಾವೊಂದು ಅದೆಲ್ಲಿತ್ತೋ ಏನೋ; ಹಾವುರಾಣಿಯಂತೆ, ಓತಿಕ್ಯಾತನಂತೆ ಕಂಡಂತಾದರೂ ಮೇಲೆ ಹಾರಿ ಮುಖದ ಮೇಲೆ ಕುಟುಕುತ್ತದೆ…..ಹಾವು ಮಾಯವಾಗಿರುತ್ತದೆ…. ಅಸಂಬದ್ಧ ಕನಸು…
ಪಕ್ಕದಲ್ಲಿ ಮಲಗಿದ್ದ ಹೆಂಡತಿಗೆ ತಿಳಿದರೆ ತನ್ನ ಮರ್ಯಾದೆಯನ್ನು ಮೂರು ಕಾಸಿಗೆ ಎಂದಾದರೂ ಹರಾಜು ಹಾಕಿಯಾಳೆಂದು ಮೆಲ್ಲನೆ ಅರಿವಾಗದಂತೆ ಆಕೆಯ ಆ ಪಕ್ಕದ ಹೆಣ್ಣು ಮಗಳನ್ನು ಎತ್ತಿ ಇವನ ಕೌದಿಯ ಮೇಲೆ ಮಲಗಿಸುತ್ತಾನೆ. ಆ ಹುಡುಗಿ ಕನಸಲ್ಲಿ ಯಾವಾಗಲೋ ನೇರಲೆ ಮರದ ಬುಡದಲ್ಲಿ ಉಚ್ಚೆ ಹುಯ್ದಿರುತ್ತಾಳೆ.
ಒಂದ ಮಾಡಿ, ಮಂಕರಿಗೆ ಗುದ್ದಲಿ ಪಿಕಾಸಿ ಹಾಕಿಕೊಳ್ಳುತ್ತಿದ್ದಂತೆಯೇ ಹೆಂಡತಿ, “ತಂಗ್ಳಿಟ್ಟು ಐತೆ… ಉಂಟ್ಕಂಡೋಗ್ರೀ…” ಎಂದು ಮಗ್ಗುಲಿಗೆ ತಿರುಗಿ ಮಲಗುತ್ತ ಅನ್ನುತ್ತಾಳೆ. ಸಿಂಬೆ ಮಾಡಿದ್ದ ಟವಲನ್ನೇ ಸೊಂಟಕ್ಕೆ ಸುತ್ತಿ, ನೆನೆದ ಚಡ್ಡಿ ಮರೆಮಾಡಿಕೊಂಡು ಬಂದು ಮಿದ್ದಿದ್ದ ಮುದ್ದೆಯನ್ನು ಬಾಯಿಗಂಟಿಕೊಳ್ಳುತ್ತಿದ್ದುದನ್ನೂ ಲೆಕ್ಕಿಸದೇ ಉಣ್ಣುತ್ತಾನೆ. ದಿನಾಲು “ಅದು ಅಂಗಿದೆ; ಇದು ಇಂಗಿದೆ” ಎನ್ನುತ್ತಿದ್ದವನು ಅವತ್ತು ತುಟಿ ಪಿಟುಕ್ಕೆನ್ನದೆ ನುಂಗುತ್ತಾನೆ.
ಹುಲಿಕೆರೆಯತ್ತ ಒಬ್ಬನೇ ನಡೆಯುತ್ತಾನೆ.
ಬಸುರೊಡೆದಿರುವ ಹೆಂಡತಿ, ನಾಲ್ಕೋ ಐದೋ ಹೆಣ್ಣು ಮಕ್ಕಳು ನೆನಪಾಗುತ್ತಾರೆ. ಇದೊಂದು ಇನ್ನೊಂದು ಎನ್ನುತ್ತಾ ಗಂಡು ಮಗು ಹುಟ್ಟಲಿ ಎಂದೇ ಕಾದಿದ್ದಾನೆ…. ಮಾಂಸವಿಲ್ಲದ ಮೂಳೆಯ ಮೇಲೆ ಚರ್ಮದ ರಗ್ಗು ಹೊದ್ದಿರುವ ಶಿವಲಿಂಗಿ ಕಣ್ಮುಂದೆ ಬರುತ್ತಾಳೆ. ವರ್ಷಕ್ಕೊಂದರಂತೆ ಹಡೆದಿದ್ದರೂ, ಸಿದ್ದಲಿಂಗನ ಕಣ್ಣಿಗೆ ರಸಭರಿತ ಹಣ್ಣಿನಂತೆಯೇ ಭಾಸವಾಗುತ್ತಾಳೆ.
ನಾಲ್ಕಾಳುದ್ದದ ಬಾವಿಯಲ್ಲಿ ಬೆಳಗಿನ ಜಾವಕ್ಕೂ ಒಂದು ಹನಿಯೂ ನೀರಿರಲಿಲ್ಲ. ಕುಡಿಯಲಿಕ್ಕೆ ನೀರಿಲ್ಲ ಅಂತಲೇ ತನ್ನ ಗದ್ದೆಯಲ್ಲಿ ತಾನೇ ಬಾವಿ ತೆಗೆಯುತ್ತಿದ್ದ. ಅವತ್ತಿನಿಂದ ಅಷ್ಟೋ ಇಷ್ಟೋ ಇರುತ್ತಿದ್ದುದು ಇವತ್ತು ಎಷ್ಟೂ ಇಲ್ಲದೇ ಒಣಗಿ ಹೋಗಿರುತ್ತದೆ. ಇನ್ನೊಂದು ಎರಡಾಳುದ್ದ ಇಳಿಸನಾ ಎಂತಲೇ ಮಂಕರಿ ಗುದ್ದಲಿ ತಂದಿದ್ದ.
ಒಬ್ಬನೇ ಮಧ್ಯಾಹ್ನದವರೆಗೆ ಗೇದ. ಅವನಿಗೆ ಕಾಲದ ಪರಿವೆಯೇ ಇರಲಿಲ್ಲ. ತಟ್ಟಿಗೆಯಂತ ಮೂಳೆಯ ಹೆಂಡತಿ ಹಿಟ್ಟು ಹೊತ್ತುಕೊಂಡು ಬಂದಾಗಲೇ ವಾಸ್ತವದ ಅರಿವಾಗುವುದು. “ಇದ್ರೌವುನ್ ಬರ್ಗಾಲನಾ ತಂದು, ಹಾಳಾದು ಬಂದು ನಮ್‌ಜೀವ ತಿಂತು” ಎಂದು ಗೊಣಗುತ್ತಲೇ ಮುದ್ದೆ ನುಂಗುವನು.
ಹೆಂಡತಿ ತಾನೂ ಮಣ್ಣು ಹೊರಲು ಬಂದಾಗ “ಬೇಡ ಬೇಡ ನೀನೋಗು ಮನೆಗೆ” ಎಂದು ಕಳುಹಿಸಿದ. ಏಕೆಂದರೆ ‘ಪಿಂಡದಲ್ಲಿರುವುದು ಗಂಡಾಗಿದ್ದರೆ’ ಎಂದು.
ಗೇದೂ ಗೇದೂ ಇವನ ಭ್ರೂಣ ಕರಗುವ ಹೊತ್ತಿಗೆ, ಅದಲ್ಲಿತ್ತೋ ಏನೋ ಸಿದ್ದಲಿಂಗ ಭೂಮಿ ಒಳಗೆ ಇದ್ದದ್ದರಿಂದ ಗೊತ್ತಾಗಲಿಲ್ಲ. ಹುಚ್ಚು ಮಳೆ ಹುಯ್ಕಲಾರಂಭಿಸಿತು. ಹುಯ್ತು ಅಂದರೆ ಅಂತಿಂತ ಮಳೆಯಲ್ಲ. ಆಳು ಗಾತ್ರದ ಆಣಿಕಲ್ಲು ಬೀಳುವಂತ ಮಳೆ, ನೂರಾರು ಸಾವಿರಾರು ವರ್ಷಗಳಿಂದಲೂ ಯಾರಿಗೂ ಗೊತ್ತಿರದಂತಹ ಮಳೆ. ಎಂದೇ ನಾಲ್ಕು ವರ್ಷ ಬರಗಾಲದ ನಂತರ ಅಷ್ಟೂ ವರ್ಷದ ಮಳೆಯನ್ನೂ ಒಂದೇ ದಿನವೇ ಸುರಿಸುವಂತಹ ಮಳೆ. ಸಿದ್ಧಲಿಂಗನ ಕರುಕಾದ ಮೈಲಿ ಮುಖದಲ್ಲೂ ಗೆಲುವಿನ ಛಾಯೆ ಕಾಣಿಸಿತು. ಇನ್ನು ಬಾವಿ ತೋಡುವುದನ್ನು ನಿಲ್ಲಿಸಬಹುದೆಂಬ ಖುಷಿ, ಬರಿದಾದ ಬಯಲಲ್ಲಿ ಬಸುರೊಡೆಸುವ ಚಿಂತೆ. ಚಿಗರೆಯಂತೆ ಛಂಗನೆ ಜಿಗಿದು ಆರು ಹೂಡಲು ಓಡಲಿಲ್ಲ. ಬಾವಿಯ ಗೋಡೆಯ ಪಾರ್ಶ್ವವನ್ನೇ ಮರೆ ಮಾಡಿಕೊಂಡು ಕುಳಿತ. ಆದರೆ ಬಾವಿ ತುಂಬಲಾರಂಭಿಸಿತು. ನಿಂತ… ಮಂಡಿ ಮೀರಿ ನೀರು ಮೇಲೆ ಬಂದಾಗ ಅನಿವಾರ್ಯವಾಗಿ ಮೇಲೇರಲು ಪ್ರಯತ್ನಿಸಿದ. ಆ ಪ್ರಯತ್ನದಲ್ಲೊಮ್ಮೆ ‘ಕುಂಗುಣಿ’ಯಲ್ಲಿ ಮುಗ್ಗರಿಸಿ ಬಿದ್ದ. ಎದ್ದು ಜಾರುವ ವಾದದ ಮೇಲೇ ತಡವರಿಸಿ ಹತ್ತಿ ಮನೆಯತ್ತ ಓಡಲಾರಂಭಿಸಿದ. ಮನೆಯಲ್ಲಿ ರಕ್ಷಣೆ ಇದೆಯೆಂಬ ಆಶಾಭಾವ ಆದರೆ ಮೇಲಿನಿಂದ ಬೀಳುತ್ತಿದ್ದ, ಕವಣೆಯಿಂದ ತೂರಿಬರುವಂತೆ ಬಿರುಸಿನಿಂದ ಬಡಿಯುತ್ತಿದ್ದ ಆಣೆಕಲ್ಲಿ ನಿಂದ ತಪ್ಪಿಸಿಕೊಳ್ಳಲು ಎಲ್ಲಾದರೂ ರಕ್ಷಣೆ ಪಡೆಯಬೇಕಾಗಿತ್ತು. ನಾಲ್ಕು ಮಾರು ಮುಂದಿನ ದೃಶ್ಯವೂ ಬೆಳ್ಳಂಬೆಳ್ಳಗಾಗಿ ಕಾಣುವಷ್ಟು ಮರೆಯಾಗಿ, ದಾರಿಯೇ ತಿಳಿಯದಷ್ಟು ಮಂದವಾಗಿ ಮಳೆ ಹನಿಗಳು ಬೀಳುತ್ತಿದ್ದವು. ಹತ್ತಿರದಲ್ಲಿದ್ದ ಮರವೊಂದನ್ನು ನೆನಪಿಸಿಕೊಂಡು ಅತ್ತ ಓಡಿದ. ಆದರೇನು. ಮರದ ಬೇರು ಹರಿದು ಮುರಿದು ಬಿದ್ದಿತ್ತು. ಆಗಲೇ ಮರದಡಿ ನಿಂತರೂ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆಂಬ ಭಯದ ಉದಯ. ಸ್ವಲ್ಪ ದೂರದಲ್ಲೇ ಇದ್ದ ಗೌಡರ ಗದ್ದೆ ಮನೆಯತ್ತ ಓಡಿದ. ಅಲ್ಲಿ ಆಗಲೇ ಅನೇಕ ಜನರಿದ್ದರು. ಆಗ ಒಬ್ಬಂಟಿತನದ ಭಯ ಮಾಯವಾಗಿ ಧೈರ್ಯ ಬಂತು. ಅಷ್ಟರಲ್ಲಾಗಲೇ ಅದರ ಮೇಲಿದ್ದ ಹೆಂಚುಗಳು ಪುಡಿ ಪುಡಿಯಾಗಿ ನೆಲಕ್ಕೆ ಬಿದ್ದಿದ್ದವು. ಆದರೆ ಉಳಿದ ಜನರಂತೆ ಸಿದ್ದಲಿಂಗನೂ ಮಾಡಿಗೋಡೆಯನ್ನು ಮರೆಮಾಡಿಕೊಂಡು ನಿಂತ. ಆದರೂ ನೆನೆಯುವ ಅಥವಾ ಆಣಿಕಲ್ಲಿನ ಹೊಡೆತ ತಿನ್ನುವ ಪ್ರಕ್ರಿಯೆ ನಿಲ್ಲದಿದ್ದರೂ ಸ್ವಲ್ಪ ಕಡಿಮೆಯಾಗಿತ್ತು.
ಗಂಟೆ ಕಾಲ ಸುರಿದು ತನ್ನಿಂದ ಇನ್ನು ಸಾಧ್ಯವಿಲ್ಲವೆನ್ನುವಂತೆ ಮಳೆ ನಿಂತು ಹೋಯಿತು. ಸಿದ್ಧಲಿಂಗ ಸೇರಿದಂತೆ ಎಲ್ಲರೂ ಅವರವರ ಅಂಗಾಂಗಗಳನ್ನು ನಿಯಂತ್ರಿಸಲೂ ಅಸಾಧ್ಯವಾಗಿ, ಮೂಳೆಯ ಕೇಂದ್ರದಲ್ಲಿಯೇ ಕೊರೆಯುತ್ತಿರುವವರಂತೆ ನಡುಗುತ್ತಿದ್ದರು.
ಮಳೆ ನಿಂತರೂ ಇವರು ನಿಲ್ಲುವಂತಿರಲಿಲ್ಲ…. ಜೀವನವೆಂದರೆ ನಿಂತ ನೀರಲ್ಲವಲ್ಲ….
ಎಂದೇ ಮುಂದಿನ ಕ್ರಿಯೆಯಲ್ಲಿ ಪಾಲ್ಗೊಂಡರು.
ಎಲ್ಲೆಲ್ಲೂ ನೀರು… ಪ್ರವಾಹದಂತೆ… ಇದ್ದ ಒಂದೊಂದು ಮರಗಳು ಮುರಿದು ಬಿದ್ದಿದ್ದರಿಂದ ಇಡೀ ವಾತಾವರಣವೇ ಬಯಲಾಗಿತ್ತು. ಆಕಾಶದಲ್ಲಿ ಕರಿಮೋಡಗಳಿರದಿದ್ದರೂ ಹೊಗೆ ಮೋಡಗಳು ತಮ್ಮ ಇದುವರೆಗೆ ನಿಂತಿದ್ದ ಪ್ರಯಾಣವನ್ನು ಮುಂದುವರಿಸುವವರಂತೆ ಅವಸರದ ಓಟದಲ್ಲಿದ್ದವು. ಗಾಳಿ ಬೀಸಿ ಕೊರೆಯುವ ಮೈಗೆ ಇನ್ನಷ್ಟು ಚಳಿ ತುಂಬಿತು. ಪ್ರಕೋಪ ತಣ್ಣಗಾಗಿ, ಶಾಂತವಾಗಿ ಕತ್ತಲೆಯ ಅಧ್ಯಾಯ ಸೇರಿತ್ತು.
ಬೆಳಗ್ಗೆ ಎದ್ದು ನೋಡುವಾಗ್ಗೆ ರಾತ್ರಿ ಬದುಕಿದ್ದ ದನ ಎಮ್ಮೆಗಳಲ್ಲಿ ಬಹುಪಾಲು ನಿಗಿತುಕೊಂಡಿದ್ದವು. ಕೋಳಿ ನಾಯಿಗಳಿಗೆ ಲೆಕ್ಕವಿಲ್ಲ. ಸಮುದ್ರದಂತೆ ಕಾಣುತ್ತಿದ್ದ ನೀರನ್ನೆಲ್ಲಾ ಬಯಲು ನುಂಗಿತ್ತು. ಹದವಾದ ಮಣ್ಣಿನ ವಾಸನೆ ಮೂಗಿಗೆ ಬಡಿಯುತ್ತಿತ್ತು.
ಲೋನ್‌ನಲ್ಲಿ ಕೊಂಡುಕೊಂಡಿದ್ದ ಎಮ್ಮೆ ದನಗಳ ವಿಲೇವಾರಿ ಮಾಡಲು ಬ್ಯಾಂಕಿನವರು ಬರಬೇಕಾಗಿತ್ತು. ಬೀದಿಗೆಂಟರಂತೆ ಬಿದ್ದಿದ್ದವು ಅವು. ದನಗಳ ಡಾಕ್ಟರೊಬ್ಬ ಬಂದು ಎಲ್ಲವನ್ನೂ ಪರೀಕ್ಷಿಸಿ ವಿಮೆ ಮಾಡಿದ ಪ್ರಾಣಿ ಸತ್ತಿರುವುದು ನಿಜ ಎಂದು ದೃಢೀಕರಿಸಬೇಕಾಗಿತ್ತು.
ಸುತ್ತಮುತ್ತಲ ಹಳ್ಳಿಯಲ್ಲೆಲ್ಲ ಇದೇ ಪಾಡು, ಅದರಿಂದಾಗಿ ಅವರೆಲ್ಲಾ ಬರಲು ಎರಡು ಮೂರು ದಿನಗಳಾಗುತ್ತಿತ್ತು.
ಅಷ್ಟರಲ್ಲಿ ಎಲ್ಲವೂ ಬಿರಿದು ಕೊಳೆತು ನಾರುತ್ತಾ, ಹದ್ದು ನಾಯಿಗಳು ರಣರಂಗದಲ್ಲಿ ನೆರೆಯುವಂತೆ ನೆರೆದಿದ್ದವು. ವಾಸನೆಗೆ ಮುಖವಿಡಲಾರದೇ ಯಾವ ಡಾಕ್ಟರನೂ ಹತ್ತಿರ ಬಂದು ಪರೀಕ್ಷಿಸುವಷ್ಟು ಸುಸಂಸ್ಕೃತನಾಗಿರಲಿಲ್ಲವಾದ್ದರಿಂದ, ಕೇಳಿದವರೆಲ್ಲರಿಗೂ ದೃಢೀಕರಣ ಪತ್ರ ದೊರೆಯಿತು. ಆದರೆ ಎಷ್ಟೋ ಅವುಗಳಲ್ಲಿ ಬದುಕಿದ್ದವು ಎಂಬುದು ವಿಪರ್ಯಾಸ. ಏನೇ ಆದರೂ ಸಿದ್ದಲಿಂಗನೂ ಎರಡೂವರೆ ಸಾವಿರ ಪಡೆದವರಲ್ಲಿ ಒಬ್ಬನಾಗಿದ್ದಂತೂ ನಿಜ.
ಮಾಗಿ ಉಳುಮೆಯು ಭರದಿಂದ ಸಾಗಿತು. ಮುಂಗಾರು ತಡವಾಗಿ ಪ್ರಾರಂಭವಾದ್ದರಿಂದ ಎಲ್ಲರೂ ಆತುರಾತುರವಾಗಿದ್ದರು. ಆದರೇನು, ಊಳಲು ಎತ್ತುಗಳೇ ಇಲ್ಲದಂತಹ ಪರಿಸ್ಥಿತಿ, ಒಳ್ಳೇ ಮಳೆಯಾಗಿ ಕೆರೆಕಟ್ಟೆ ತುಂಬಿದ್ದರಿಂದ ಉತ್ತಮವಾಗಿಯೇ ಬೆಳೆ ಬರುತ್ತದೆಂಬ ಆಶಾಭಾವನೆ ಎಲ್ಲರಲ್ಲೂ ಇತ್ತು. ಎಂದೇ ಹಣವುಳ್ಳವರು ಧಾರಾಳವಾಗಿ ಸಾಲ ಕೊಟ್ಟರು. ವಿಮೆಯ ಹಣ ಇಟ್ಟಿದ್ದವರೂ ಇದ್ದರು. ಟಿಲ್ಲರ್ ಟ್ರ್ಯಾಕ್ಟರ್‌ಗಳನ್ನೇ ಹೊಡೆಸಿ ನಾಟಿಗೆ ಹದಗೊಳಿಸಿದರು. ತಡವಾದರೆ ಚಳಿಗೆ ಸಿಕ್ಕಿ ಒಡೆ ಬರುವುದಿಲ್ಲವೆಂದು ನಾಟಿಯನ್ನೂ ಮಾಡಿದರು.
ಮಳೆ ಒಂದು ಸಲ ಬಂದದ್ದು ನಂತರ ಬರಲೇಯಿಲ್ಲ ಎಂದಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಹಾಗಾಗಲಿಲ್ಲ. ಹೋದರೆ ವಾರಗಟ್ಟಲೆ ಹೊಳವಾಗುವುದು, ಬಂದರೆ ವಾರಗಟ್ಟಲೇ ಕವಿಯುವುದು. ಹದಕ್ಕೆ ಹದ ಬೆರೆಯದೇ ಒಮ್ಮೆ ಜೋರಾಗಿ ಬಂದು ಮತ್ತೆ ಒಂದು ವಾರ ಬೇಸಾಯ ಹೂಡದಂತೆ ಕೆಸರು ಮಾಡಿ ಹೋಗುವುದು, ಒಮ್ಮೆ ಒಣಗಲು ಶುರುವಾದರೆ ಮಣ್ಣೆಲ್ಲಾ ಎಪ್ಪಾಗಿ ಗಟ್ಟಿಕಲ್ಲಂತಾಗಿ ಕಾಲು ಇಡದಂತೆಯೂ ಆಗುತ್ತಿತ್ತು. ಪರಿಣಾಮವಾಗಿ ಹೊಲದ ಕೆಲಸಕ್ಕೆ ಕೈ ಇಟ್ಟರೂ, ಬಿತ್ತಲೂ ಆಗದ ಬಿಡಲೂ ಆಗದ ಪರಿಸ್ಥಿತಿ ಉದ್ಭವವಾಯಿತು. ಮಳೆಯ ಈ ಚೆಲ್ಲಾಟದಿಂದ ಕಳೆಯನ್ನು ನಿಯಂತ್ರಿಸಲಾಗದೆ ಬಿತ್ತಿದ ರಾಗಿ, ಜೋಳ, ಶೇಂಗಾ ಮೊದಲಾದವುಗಳನ್ನು ಕೆಡಿಸುವಂತಾಯಿತು.
ಉಳಿದಿದ್ದ ಒಂದೇ ಒಂದು ಆಶಾಕಿರಣ ಭತ್ತ ಮಾತ್ರ.
ಖುಷಿ ಜಮೀನಿನ ಬೇಸಾಯ ಅನುಕರಣೆಯಲ್ಲಿದ್ದುದು. ಅದರಿಂದಾಗಿ ನೀರು ಕಡಿಮೆಯಾದಾಗ ಕೆರೆ ನೀರು ಬಿಟ್ಟುಕೊಂಡೇ ನಾಟಿ ಮಾಡಿದ್ದರು. ಹೇಗಿದ್ದರೂ ಈ ವರ್ಷ ಉತ್ತಮ ಹಿಂಗಾರೂ ಆಗುತ್ತದೆಂಬ ಆಸೆ ಅವರಲ್ಲಿತ್ತು. ಆದ್ದರಿಂದ ಭವಿಷ್ಯದ ಬಗ್ಗೆ ಯಾರಿಗೂ ಚಿಂತೆಯಿರಲಿಲ್ಲ. ನಾಟಿಯೂ ತುಂಬ ಚೆನ್ನಾಗಿ ಕೂತಿತು. ಸಿದ್ಧಲಿಂಗನಂತೆ ಎಲ್ಲರೂ, ಅಥವಾ ಎಲ್ಲರಂತೆ ಸಿದ್ಧಲಿಂಗನೂ ಗೊಬ್ಬರ ಔಷಧಿಗಳನ್ನು ಸಾಲ ಮಾಡಿ ತಂದರು. ನಾಲ್ಕು ವರ್ಷಗಳ ತೀವ್ರ ಬರಗಾಲದಿಂದ ಹೊಡೆತ ತಿಂದಿದ್ದ ರೈತರಿಗೆ ಈ ವರ್ಷವಾದರೂ ಹೆಚ್ಚಾಗಿ ಬೆಳೆದೇ ತೀರಬೇಕೆಂಬ ಆಸೆ, ಛಲ, ಪರಿಣಾಮವಾಗಿ ಸಾಕಷ್ಟು ಹೆಚ್ಚೇ ಸೀಮೆ ಗೊಬ್ಬರ ಕೊಟ್ಟರು. ರೋಗದ ಮುನ್ಸೂಚನೆ ಕಾಣುವ ಮೊದಲೇ ಕೀಟನಾಶಕ ಸಿಂಪಡಿಸುತ್ತಿದ್ದರು. ಹೇಗೂ ಫಲ ಸಿಗುತ್ತದೆಂಬ ಖಾತ್ರಿ ಇದ್ದುದರಿಂದ ಕೆಲಸ ಮಾಡಲು ಬೇಕಾದ ಉತ್ಸಾಹ ಪುಟಿಯುತ್ತಿತ್ತು. ಅದಕ್ಕೆ ಪೂರಕವಾಗಿಯೇ ಸಾಲವೂ ಸುಲಭವಾಗಿ ದೊರೆಯುತ್ತಿತ್ತು. ಸಾಲ ಕೊಟ್ಟವರಿಗೂ ಈ ವರ್ಷದ ಸುಗ್ಗಿ ಆಶಾದಾಯಕವಾಗಿತ್ತು. ಆದರೆ ಹಾಗೆ ಆಗಲೇ ಬೇಕೆಂಬ ನಿಯಮವೇನಿಲ್ಲವಲ್ಲ.
ಪೈರು ಪ್ರೌಢಾವಸ್ಥೆಗೂ ಬಂತು. ಹೋದ ಮಳೆ ಬರಲೇ ಇಲ್ಲ. ಮಳೆ ತೆಗೆದು ತಿಂಗಳಾಗಿತ್ತು. ಗದ್ದೆಗಳು ಒಣಗುತ್ತಾ ಬಂದವು. ಕಣ್ಣೆದುರಿಗಿದ್ದ ಒಂದೇ ಒಂದು ನೀರಿನ ಆಸರೆಯಾದ ಕೆರೆಯ ಮೇಲೆ ಎಲ್ಲರ ಕಣ್ಣೂ ಬಿತ್ತು. ತೂಬು ಕಿತ್ತು ನೀರು ಹಾಯಿಸಿದರು. ಒಂದೊಂದು ಕರೆಯ ಹಿಂದೆಯೂ ಐವತ್ತು ಅರವತ್ತು ಎಕರೆಗಳಷ್ಟು ನೀರಾವರಿ ಪ್ರದೇಶವಿತ್ತು. ಅದರಲ್ಲಿ ಒಂದಿಂಚೂ ಖಾಲಿ ಇರಲಿಲ್ಲ. ಬಹುಪಾಲು ಎಲ್ಲರ ಗದ್ದೆಯದೂ ಒಂದೇ ವಯಸ್ಸಿನ ಪೈರಾಗಿದ್ದರಿಂದ ಕೆರೆಯ ಏರಿಯ ಮೇಲೆ ನಿಂತು ಸಿಂಹಾವಲೋಕನ ಮಾಡಿದರೆ ಬಹಳ ಖುಷಿಯಾಗುತ್ತಿತ್ತು. ಏಕೆಂದರೆ ಅಂತಹ ಹಚ್ಚ ಹಸಿರು ಬಯಲನ್ನು ನಾಲ್ಕು ವರ್ಷದಿಂದೀಚೆಗೆ ಕಂಡೇ ಇರಲಿಲ್ಲ.
ಮೊದಲ ನೀರು ಹಾಯಿಸುವಷ್ಟರಲ್ಲಿ ತೂಬಿನಿಂದ ನೀರು ಹೊರಬರಲಾರದ ಮಟ್ಟಕ್ಕೆ ಬಂದಿತ್ತು. ಇಷ್ಟೋ ಅಷ್ಟೊ, ಒಟ್ಟಿನಲ್ಲಿ ಪೈರಿನ ಜೀವ ಉಳಿಸಲು ಸಾಕಾಗುವಷ್ಟು ಎಲ್ಲರೂ ಬಿಟ್ಟುಕೊಂಡಿದ್ದರು.
ಹದಿನೈದು ದಿನಗಳು ಕಳೆದವು, ಮತ್ತೆ ಎಲ್ಲ ಒಣಗುತ್ತ ಬಂತು. ಜನ ಮುಗಿಲನ್ನು ನೋಡತೊಡಗಿದರು. ಅವರ ಕಣ್ಣಿಗೆ ಕಂಡಿದ್ದು ಬರೀ ನೀಲಿಯ ರಂಗಪರದೆ, ನೀಲಾಕಾಶ ಮತ್ತೆ ಹದಿನೈದು ದಿನಗಳನ್ನು ಹತಹತಿಸುತ್ತಾ ಕಾದರೂ ಮಳೆ ಬರಲಿಲ್ಲ. ಬೆಳೆ ಕುಂಠಿತಗೊಂಡದ್ದು ಮಾತ್ರವಲ್ಲದೇ ಅಡಿ ಮಗ್ಗುಲಲ್ಲಿ ಒಣಗಲಾರಂಭಿಸಿತು. ಬೇರೆ ದಾರಿ ಕಾಣದೆ ಗೂಡೆ ಹಾಕಿ ನೀರನ್ನು ತೂಬಿಗೆ ಎತ್ತಿ ಹುಯ್ದು ಹಾಯಿಸಲಾರಂಭಿಸಿದರು. ಹೀಗೆ ಎಷ್ಟೊಂದು ಎತ್ತಲಾದೀತು. ಏರಿಯ ಬುಡದಲ್ಲಿದ್ದ ಕೆಲವರಿಗೆ ಅನುಕೂಲವಾಯಿತಷ್ಟೇ. ಉಳಿದವರು?
ಪಂಪ್ ಸೆಟ್ಟು ಏರಿಯನ್ನು ಏರಿತು. ಒಂದನ್ನು ಕಂಡು ಮತ್ತೊಂದು ಮತ್ತೊಂದನ್ನು ಕಂಡು ಮಗದೊಂದು. ಹೀಗೇ ಒಂದೊಂದು ಏರಿಯ ಮೇಲೂ ನಾಲ್ಕು ಐದು ಯಂತ್ರಗಳು ಕೊಟ ಕೊಟನೆಂದು ವಟಗುಟ್ಟಲಾರಂಭಿಸಿದವು.
ಜನ ನಾ ಮುಂದು ತಾ ಮುಂದು ಎಂದು ಪೈಪೋಟಿಯಿಂದ ನೀರು ಹೊಡೆಸ ಲಾರಂಭಿಸಿದರು. ಏಕೆಂದರೆ ಮಿತವಾಗಿರುವಷ್ಟೇ ನೀರು ಎಲ್ಲರಿಗೂ ಬರಬೇಕಲ್ಲ. ಹತ್ತಿರ ಗದ್ದೆ ಇದ್ದವರು ಬದು ತುಂಬಿ ಹೊರಳುವಷ್ಟು ಕಟ್ಟಬೇಕೆಂದಿದ್ದರೆ, ದೂರವಿರುವವರು ಜೀವನಾಂಶಕ್ಕಾಗಿ ಯಾದರೂ ಒಂದು ಸಲ ಹಾಯಿಸಬೇಕೆಂದಿದ್ದರು. ಮಳೆ ಬರುವುದು ನಾಲ್ಕು ದಿನ ತಡವಾದರೂ ಜೀವ ಉಳಿಸಿಕೊಳ್ಳಲಿ ಎಂಬ ಆಸೆ ಮೊದಲಿನವರಿಗೆ, ಸಾಯುವ ಪೈರು ನಾಲ್ಕು ದಿನ ಜಾಸ್ತಿ ಜೀವಿಸಲಿ ಎಂಬ ಬಯಕೆ ಕೊನೆಯವರಿಗೆ, ಹೀಗಿದ್ದಾಗಲೇ ಅಲ್ಲವೇ ಆಸೆ ವಿಪರೀತಕ್ಕೆ ಎಡೆ ಮಾಡಿಕೊಡುವುದು.
ಸಿದ್ಧಲಿಂಗನ ಗದ್ದೆ ಕೆರೆಯಿಂದ ಸಾಕಷ್ಟು ದೂರಕ್ಕೆ ಇತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ ಆತನ ಗದ್ದೆಗೆ ಹೋಗಬೇಕಾಗಿದ್ದ ನೀರು ಬೇರೊಬ್ಬನ ಗದ್ದೆಯಲ್ಲಿ ಹಾದು ಹೋಗಬೇಕಾಗಿತ್ತು. ಕಾನೂನು ರೀತಿ ಕಾಲುವೆ ಇರದ ಕಾರಣ, ಒಂದು ಒಪ್ಪಂದದ ಪ್ರಕಾರ ನೀರನ್ನು ಆ ಇನ್ನೊಬ್ಬನ ಗದ್ದೆಯ ಮೇಲೆ ಹಾಯಿಸಿಕೊಂಡಿದ್ದ. ನೂರು ರೂಪಾಯಿಯನ್ನು ಅದಕ್ಕೆ ಪರಿಹಾರವಾಗಿ ಕೊಡುವುದಾಗಿ ಒಪ್ಪಿಕೊಂಡಿದ್ದ. ಅದನ್ನು ಕೊಡದ ಹೊರತು ತನ್ನ ಗದ್ದೆಯ ಮೇಲೆ ನೀರು ಹಾಯಿಸಲು ಬಿಡುವುದಿಲ್ಲವೆಂದು ಆತ ಹಟ ಹಿಡಿದ. ಸಿದ್ಧಲಿಂಗನ ಬಳಿ ಆಗ ದುಡ್ಡಿರಲಿಲ್ಲ. ಯಾರ್ಯಾರನ್ನೂ ಕೇಳಲು ಹೋದ. ಯಾರ ಬಳಿಯೂ ಹಣ ಸಿಕ್ಕಲಿಲ್ಲ. ಏಕೆಂದರೆ ಎಲ್ಲರೂ ಗದ್ದೆಯ ಮೇಲೆ ಸಾಲ ಮಾಡಿಕೊಂಡು ಬಂಡವಾಳ ಹಾಕಿದ್ದವರೇ. ಹೆಂಡತಿಯ ತಾಳಿಯನ್ನು ಬಿಟ್ಟು ಉಳಿದ ಕಾಸಿನ ಸರವನ್ನು ಪೇಟೆಗೆ ಹೋಗಿ ಮಾರಿ ಬಂದ. ಅದರಿಂದ ಬಂದ ಹಣದಲ್ಲಿ ನೂರು ರೂಪಾಯಿ ಒಪ್ಪಂದದಂತೆ ಕೊಟ್ಟು ಉಳಿದದ್ದರಲ್ಲಿ ನೀರು ಹೊಡೆಸಲು ಖರ್ಚು ಮಾಡಬೇಕೆಂದುಕೊಂಡಿದ್ದ.
ಮನೆಗೆ ಬಂದಾಗ ರಾತ್ರಿಯಾಗಿತ್ತು. ನೂರು ರೂಪಾಯಿಯನ್ನು ಆತನಿಗೆ ಕೊಟ್ಟು, ಒಂದು ಪಂಪ್‌ಸೆಟ್ಟಿಗೆ ನಾಳೆ ಬರುವಂತೆ ತಿಳಿಸಿ ಅಡ್ವಾನ್ಸ್ ಕೊಟ್ಟು ಬಂದ.
ಸಂತೆಯಿಂದ ತಂದಿದ್ದ ಕಾರ ಮಂಡಕ್ಕಿ ಮೆಣಸಿನಕಾಯಿ ಬೋಂಡಾವನ್ನು ಖುಷಿಯಿಂದ ಹೆಂಡತಿ ಮಕ್ಕಳೂ ತಿಂದು ನೀರು ಕುಡಿದು ಮಲಗಿದರು.
ಬೆಳಿಗ್ಗೆ ಎದ್ದು ಗದ್ದೆ ನೋಡಲು ಸಿದ್ಧಲಿಂಗ ಹೊರಟ. ನೋಡುತ್ತಾನೆ…. ಕೆರೆಯಲ್ಲಾ ಖಾಲಿ ಖಾಲಿ.
ಕೊಟ್ಟ ನೂರು ರೂಪಾಯಿಯನ್ನು ವಾಪಸ್ಸು ಕೇಳಿದ. ಆತ ಬಳಸಿಕೊಂಡಿರುವುದಾಗಿಯೂ ಒಂದು ತಿಂಗಳು ಟೈಂ ಕೊಡಬೇಕೆಂದೂ ಹೇಳಿದ. ವಾರವಾಯಿತು; ಪಕ್ಷವಾಯಿತು; ತಿಂಗಳೂ
ಆಯಿತು. ಮಳೆಯು ಮಾತ್ರ ಬಂದಿರಲಿಲ್ಲ. ಕಕ್ಕುಲಾತಿಯಿಂದ ಬದುಗಳನ್ನು ಹೊರಳಿ ಹೋಗುವಂತೆ ನೀರು ಕಟ್ಟಿದ್ದವರ ಗದ್ದೆಗಳೂ ಒಣಗಿ ಬಿರುಕು ಬಿಟ್ಟಿದ್ದವು. ಸಿದ್ಧಲಿಂಗ ಗದ್ದೆಯಿಂದ ಏನನ್ನೂ ನಿರೀಕ್ಷಿಸಿರಲಿಲ್ಲ ಎನ್ನುವಷ್ಟು ಆಸೆ ಬಿಟ್ಟಿದ್ದ. ನೋಡಿದರೆ ಹೊಟ್ಟೆ ಉರಿಯುವಂತಾಗುತ್ತದೆ ಎಂದು ನೋಡುವುದನ್ನೂ ಬಿಟ್ಟ.
ಅದೇ ಸಂದರ್ಭದಲ್ಲಿ ಸಿದ್ಧಲಿಂಗನ ಹೆಂಡತಿ ಶಿವಲಿಂಗಿಗೆ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಸೇರಿಸಬೇಕಾಯಿತು. ಮಗು ಪೂರ್ಣ ಬೆಳೆದಿರಲಿಲ್ಲವಾದ್ದರಿಂದ ಮತ್ತು ಜೋರು ಮಳೆ ಬಂದಾಗ ತಿಂದಿದ್ದ ಏಟುಗಳಿಂದಲೋ ಏನೋ ಮಗುವನ್ನು ಆಪರೇಷನ್ ಮಾಡಿ ತೆಗೆಯಬೇಕು ಎಂದರು ಡಾಕ್ಟರರು. ಅದಕ್ಕಾಗಿ ಅಷ್ಟಿಷ್ಟು ದುಡ್ಡು ಬೇಕಾಗಿತ್ತು. ಆದರೆ ಎಲ್ಲಿಂದ ತರುವುದು, ಕಾಸಿನ ಸರ ಮಾರಿದ್ದೆಲ್ಲಾ ಎಂದೋ ಖರ್ಚಾಗಿತ್ತು. ನಂತರ ಒಪ್ಪಂದದ ಪ್ರಕಾರ ನೀರು ಹಾಯಿಸಲೆಂದು ಹಾಯುವರಿ ಗದ್ದೆಯವನಿಗೆ ಕೊಟ್ಟಿದ್ದ ನೂರು ರೂಪಾಯಿ ಕೇಳಲು ಹೋದ.
“ಒಡೆ ಬಂದು ಕಂಕುಳಲ್ಲಿ ಸಿಗಾಕಂಡ ಪೈರು ನೋಡಿ ನಾನೇ ಹೊಟ್ಟುರಿ ಪಡ್ತಿರುವಾಗ ದುಡ್ಡಂತ ದುಡ್ಡು” ಎಂದು ಆತ “ನಿಂಗೇ ಇಷ್ಟಿರಬೇಕಾದ್ರೆ ಒಣಗಿ ನರಚಲಾಗಿರ ನಂಗೆಂಗಾಗಿರಕ್ಕಿಲ್” ಎಂದು ಈತ. ಕೊನೆಗೆ ಆತ ಕೊಡಲಾಗುವುದಿಲ್ಲವೆಂದವನು, “ನೀನು ಕೊಟ್ಟೇ ಇಲ್ಲ ನಂಗೆ” ಎಂದ. ಕೈ ಕೈ ಮಿಲಾಯಿಸಿತು. ಚೆನ್ನಾಗಿ ಹೊಡೆದಾಡಿದರು. ಅಕ್ಕಪಕ್ಕದವರು ಬಿಡಿಸಿದರು. ಆತ ಹೋಗಿ ಕಂಪ್ಲೇಂಟ್ ಕೊಟ್ಟ.
ಸಂಜೆಯಾಗುತ್ತಿತ್ತು. ಡಾಕ್ಟರರು ಹೇಳಿದ್ದನ್ನು ತರಲು ಬೇಕಾದ ಹಣ ಇನ್ನೂ ಲಭ್ಯವಾಗಿರಲಿಲ್ಲ. ಕೊನೆಗೆ ಇದ್ದ ಎರಡೆಕರೆ ಜಮೀನಿನ ಕ್ರಯಪತ್ರ ಹಿಡಿದುಕೊಂಡು ಪೇಟೆಯತ್ತ ಹೊರಟ. ಯಾರಾದರೂ ಮಾರ್ವಾಡಿಗಳ ಹತ್ತಿರ ಅಡವಿಟ್ಟು ದುಡ್ಡು ಪಡೆಯಬಹುದೆಂದು ಭಾವಿಸಿದ್ದ. ದಾರಿಯಲ್ಲಿ ಸಿಕ್ಕ ಪೊಲೀಸ್ ಇವನು ಏನು ಹೇಳಿದರೂ ಕೇಳದ ಸ್ಟೇಷನ್‌ಗೆ ಕರೆದುಕೊಂಡು ಹೊರಟ. ಕಂಪ್ಲೇಂಟ್ ಕೊಟ್ಟವ ಐದೋ ಹತ್ತೋ ಕೊಟ್ಟಿರಬಹುದು. ಸಿದ್ಧಲಿಂಗನ ಬಳಿ ಕೊಡಲು ಏನೇನೂ ಇರಲಿಲ್ಲ. ಅದನ್ನು ತಿಳಿದೇ ಒಂದಷ್ಟು ಹೊತ್ತು ಬೈದು, ಹೊಡೆದು, ಮಧ್ಯ ರಾತ್ರಿಗೆ ಬಿಟ್ಟರು. ಎದುರಾಳಿಯನ್ನು ಕೊಚ್ಚಿ ಕೊಚ್ಚಿ ಕೊಲ್ಲಬೇಕೆಂಬುವಷ್ಟು ರೋಷ ಬಂದಿತ್ತು.
ಆಸ್ಪತ್ರೆಯತ್ತ ತುಳುಕಾಡುವ ದುಃಖ, ಅವಮಾನ, ಸಿಟ್ಟಿನ ಕೊಡ ಹೊತ್ತು ನಡೆದ. ಶಿವಲಿಂಗಿ ಆಗಲೇ ಹೆಣವಾಗಿದ್ದಳು. ನೆಲ ಬಸಿರು ಮಾಡಿದ್ದ ಸೂರ್ಯ, ಬಸಿರ ಬತ್ತಿಸಿ ಅಪರಾಧೀ ಭಾವದಿಂದ ಭೂಮಿಯ ಮರೆಯಲ್ಲಿ ಅಡಗಿ ಕುಳಿತಿದ್ದ. ಬಸಿರ ಬಯಸಿ ಬಗೆಸಿ ಕೊಂಡವಳು ಸತ್ತು, ಸಿದ್ಧಲಿಂಗ ಹುಚ್ಚನಂತಾಗಿದ್ದ. ಆಗಲೇ ಮಧ್ಯರಾತ್ರಿ ಮೀರುತ್ತಿತ್ತು. ಇದ್ದದ್ದನ್ನೆಲ್ಲ ಇದ್ದಲ್ಲೇ ಬಿಟ್ಟು ಏರಿಯ ಹಿಂದಿನ ಗದ್ದೆಗೆ ನೇರ ನಡೆದ. ಜಗಳಾಡಿ ಕಂಪ್ಲೇಂಟ್ ಕೊಟ್ಟಿದ್ದವನ ಗದ್ದೆಯ ಭತ್ತ ಇದ್ದುದರಲ್ಲೇ ಸ್ವಲ್ಪ ಚೆನ್ನಾಗಿಯೇ ಇದ್ದು ನಾಲ್ಕು ಕಾಳು ಹಿಡಿದಿತ್ತು.
ಬೀಡಿ ಹಚ್ಚಿ ಉಳಿದ ಬೆಂಕಿಯ ಕಡ್ಡಿಯನ್ನು ಪೈರಿನ ಬುಡಕ್ಕೆ ಹಿಡಿದ. ನೀರಿಲ್ಲದೇ ಕಾರಿಹೋಗಿದ್ದ ಸ್ಯಾಡೇಹುಲ್ಲು ಪುರ್ರೆಂದು ಹತ್ತಿಕೊಂಡಿತು. ಹತ್ತಿದ ಬೆಂಕಿ ನಾಲ್ಕು ಕಡೆಗೆ ಹರಡಿಕೊಂಡಿತು. ಸುಯ್ಯನೆ ತಣ್ಣಗೆ ಬೀಸುವ ಗಾಳಿ ಪ್ರಚೋದಿಸುತ್ತಿತ್ತು.
ಎಲ್ಲರೂ ತಂಪು ನಿದ್ದೆಯಲ್ಲಿದ್ದಾಗ ಎಲ್ಲರ ಗದ್ದೆಗಳೂ ಸುಟ್ಟು ಕರಕಲಾಗಿದ್ದವು. ಅವನ ಗದ್ದೆಯಲ್ಲಿಯೇ ಸೀದು ಹೋಗಿದ್ದ ಸಿದ್ಧಲಿಂಗ ಏನೇನೋ ಆಗಿ ಕಂಡ. ಹಕ್ಕುಪತ್ರ ಅಲ್ಲೇ ಪಕ್ಕದಲ್ಲಿ ಬೂದಿಯಾಗಿತ್ತು.
ತಾನಿಲ್ಲದಾಗ ಇಲ್ಲಿ ಏನೇನಾಗಿದೆಯೋ ಎಂದು ನೋಡಲು ಸೂರ್ಯ ಬೆನ್ನ ಹಿಂದೆ ಕೈ ಕಟ್ಟಿಕೊಂಡು ಮೀಸೆ ಮರೆಯಲ್ಲೇ ನಗುತ್ತಾ, ಪೂರ್ವದಿಕ್ಕಿನಿಂದ ಒಂದು ಬೀಟ್ ಶುರು ಮಾಡಿದ್ದ.
*****
(ನವೆಂಬರ್ ೧೯೮೮)