ಪ್ರಿಯ ಕಿಟಿ,
ನಿನ್ನೆ ಮಮ್ಮಿ, ಡ್ಯಾಡಿ, ಮಾರಗೋಟ್ ಮತ್ತು ನಾನು ಹೀಗೇ ಸುಮ್ಮನೇ ಸಂತೋಷದಿಂದ ಒಂದೆಡೆ ಕೂತು ಕಾಲಕಳೆಯುತ್ತಿದ್ದೆವು. ಸಡನ್ನಾಗಿ ಅಲ್ಲಿಗೆ ಬಂದ ಪೀಟರ್ ಡ್ಯಾಡಿಯ ಕಿವಿಯಲ್ಲಿ ಏನೋ ಉಸುರಿದ. ಅವನು ಉಸುರುತ್ತಿದ್ದಾಗ ನಾನು ಕೆಲವನ್ನಷ್ಟೆ ಕೇಳಿಸಿಕೊಂಡೆ. ಗೋದಾಮಿನಿಂದ ಬ್ಯಾರಲ್ ಒಂದು ಕೆಳಗೆ ಬಿತ್ತು ಮತ್ತು ಯಾರೋ ಒಬ್ಬರು ಬಾಗಿಲ ಬಳಿ ಸುಳಿದಾಡುತ್ತ ಹುಡುಕಾಡುತ್ತಿದ್ದಂತೆ ಇತ್ತು ಎಂದು ಹೇಳುತ್ತಿರುವುದಷ್ಟೇ ನನಗೆ ಕೇಳಿಸಿತು. ಮಾರ್‍ಗೊಟ್ ಕೂಡ ಇದನ್ನು ಕೇಳಿಸಿಕೊಂಡಳು. ಆದರೆ ಯಾವಾಗ ಪೀಟರ ಮತ್ತು ಡ್ಯಾಡಿ ಇಬ್ಬರೂ ಹೊರಟುಹೋದರೋ ಆಗ ಮಾರ್‍ಗೊಟ್ ನನ್ನನ್ನು ಸುಮ್ಮನಿರಿಸಲು ಪ್ರಯತ್ನಿಸಿದಳು, ಯಾಕೆಂದರೆ ಸ್ವಭಾವತಃ ನಾನು ತುಂಬಾ ನರ್ವಸ್ ಹಾಗೂ ಹೆದರಿಕೆಯಿಂದ ಹಾಳೆಯಂತೆ ಬಿಳಿಚಿಕೊಂಡಿದ್ದೆ.
ನಾವು ಮೂವರು ಉದ್ವಿಗ್ನತೆಯಲ್ಲಿಯೇ ಅಲ್ಲಿ ಕಾದೆವು. ಒಂದೆರಡು ನಿಮಿಷಗಳಾಗುತ್ತಿದ್ದಂತೆ ಪ್ರೈವೇಟ್ ಆಫೀಸಿನಲ್ಲಿ ವೈರಲೆಸ್ ಆಲಿಸುತ್ತಿದ್ದ ಶ್ರೀಮತಿ ವ್ಯಾನ್ಡ್ಯಾನ್ ಮೇಲ್ಮಹಡಿಗೆ ಬಂದರು: ಪಿಮ್ [ಡ್ಯಾಡಿ] ಅವರಿಗೆ ವೈರಲೆಸ್ ಬಂದು ಮಾಡಿ ನಿಧಾನವಾಗಿ ಸದ್ದಾಗದಂತೆ ಮೇಲ್ಮಹಡಿಗೆ ಹೋಗಲು ಹೇಳಿದ್ದರೆಂದು ಅವರು ನಮಗೆ ತಿಳಿಸಿದರು. ಆದರೆ ಕಿಟಿ, ನಿಜಕ್ಕೂ ಏನಾಗುವುದೆಂದು ನಿನಗೆ ಗೊತ್ತು ತಾನೇ? ನಾವೇನಾದರೂ ಬಹಳ ಕಾಳಜಿಯಿಂದ ನಡೆಯಲು ಹೊರಟರೆ ಒಂದೊಂದು ಹೆಜ್ಜೆಗೂ ಆ ಹಳೆಯ ಮೆಟ್ಟಿಲುಗಳು ಎರಡೆರಡು ಬಾರಿ ಕಿರ್‌ಗುಡುತ್ತವೆ. ಐದು ನಿಮಿಷಗಳ ತರುವಾಯ ಪಿಮ್ ಮತ್ತು ಪೀಟರ್ ಮರಳಿ ಬಂದರು. ತಲೆಬುಡದ ಕೆಳಗಿನ ಬಿಳಿಯಂತೆ ಅವರಿಬ್ಬರೂ ಬಿಳಿಚಿಕೊಂಡಿದ್ದರು, ತಮ್ಮ ಅನುಭವಗಳ ವಿವರಿಸಿದರು.
ಅವರಿಬ್ಬರೂ ತಮ್ಮನ್ನು ಮೆಟ್ಟಿಲುಗಳ ಹಿಂದೆ ಅವಿತಿಟ್ಟುಕೊಂಡು ಕಾಯುತ್ತಿದ್ದರು, ಮೊದಮೊದಲು ಅವರಿಗೆ ಯಾವ ಸದ್ದು ಬಂದ ಲಕ್ಷಣವೂ ಕಾಣಲಿಲ್ಲ. ಆದರೆ ನಂತರ ಒಮ್ಮೇಲೆ ಎತ್ತಿ ಎತ್ತಿ ಒಗೆದಂತಹ ಸದ್ದು ಎರಡು ಸಲ ಕೇಳಿಬಂತು. ಅದು ಹೇಗಿತ್ತೆಂದರೆ ಎರಡು ಬಾಗಿಲುಗಳು ಜೋರಾಗಿ ಅಪ್ಪಳಿಸಿದಾಗ ಉಂಟಾಗುವ ಸದ್ದಿನಂತಿತ್ತು. ಒಂದೇ ನೆಗೆತಕ್ಕೆ ಪಿಮ್ [ಡ್ಯಾಡಿ] ಮೇಲಿನ ಮಹಡಿಯಲ್ಲಿದ್ದರು. ಪೀಟರ್ ಎಲ್ಲರಿಗಿಂತ ಮೊದಲು ಡಸೆಲ್‌ರಿಗೆ ಎಚ್ಚರಿಕೆ ಕೊಟ್ಟ. ಅವರು ಹೇಗೆ ಹೇಗೋ ಒಂದಿಷ್ಟು ಗದ್ದಲ ಗೌಜಿ ಮಾಡಿಕೊಂಡೇ ಮೇಲ್ಮಹಡಿಗೆ ಬಂದು ತಲುಪಿದರು. ಆನಂತರ ನಾವೆಲ್ಲ ಕಳ್ಳ ಹೆಜ್ಜೆ ಹಾಕುತ್ತ ವ್ಯಾನ್ಡ್ಯಾನ್ ಇರುವ ಮುಂದಿನ ಇನ್ನೊಂದು ಕೋಣೆಗೆ ಹೋದೆವು. ವ್ಯಾನ್ಡ್ಯಾನ್ ವಿಪರೀತ ಶೀತದಿಂದ ಬಳಲುತ್ತಿದ್ದರು ಮತ್ತು ಅದಾಗಲೇ ಮಲಗಿದ್ದರು, ಹಾಗಾಗಿ ನಾವೆಲ್ಲರೂ ಅವರ ಹಾಸಿಗೆಯ ಸುತ್ತ ನೆರೆದೆವು ಮತ್ತು ನಮ್ಮ ಅನುಮಾನಗಳನ್ನು ಸಣ್ಣದನಿಯಲ್ಲಿ ಅವರಿಗೆ ತಿಳಿಸಿದೆವು.
ಪ್ರತಿಸಲವೂ ವ್ಯಾನ್ಡ್ಯಾನ್ ಜೋರಾಗಿ ಕೆಮ್ಮುತ್ತಿದ್ದರು. ಹಾಗೇ ಕೆಮ್ಮಿದ ಸಮಯದಲ್ಲೆಲ್ಲಾ ನನಗೆ ಮತ್ತು ಶ್ರೀಮತಿ ವ್ಯಾನ್ಡ್ಯಾನ್ ಇಬ್ಬರಿಗೂ ಹೆದರಿಕೆಯಿಂದ ತಲೆಸುತ್ತು ಬಂದಂತೆ ಆಗುತ್ತಿತ್ತು. ಕೊಡೈನ್ ಔಷಧಿವನ್ನು ಅವರಿಗೆ ಕೊಡಲು ಹೇಳುವವರೆಗೆ ಈ ಕೆಮ್ಮು ಅವರನ್ನು ಕಾಡುತ್ತಲೇ ಇತ್ತು. ಔಷಧಿ ಸೇವಿಸಿದ ನಂತರ ಅವರಿಗೆ ಕೆಮ್ಮಿನಿಂದ ವಿರಾಮ ಸಿಕ್ಕಿತು. ಪುನಃ ಅಲ್ಲಿ ಬಹಳ ಹೊತ್ತಿನವರೆಗೆ ನಾವು ಕಾದೇ ಕಾದೆವು. ಆದರೆ ಬೇರ್‍ಯಾವ ಸದ್ದು ಕೇಳಿಸಲಿಲ್ಲ. ಇದರಿಂದ ನಾವೆಲ್ಲ ಒಂದು ತೀರ್ಮಾನಕ್ಕೆ ಬಂದೆವು. ಅದೆಂದರೆ ಇಷ್ಟು ನಿಶ್ಯಬ್ದವಾಗಿರುವ ಮನೆಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಬರುತ್ತಲೂ ಕಳ್ಳರು ಕಾಲಿಗೆ ಬುದ್ದಿ ಹೇಳಿರಬೇಕು ಎಂದುಕೊಂಡೆವು.
ಇನ್ನೊಂದು ದುರದೃಷ್ಟದ ಸಂಗತಿ ಅಂದರೆ ಕೆಳಮಹಡಿಯಲ್ಲಿರುವ ವೈರಲೆಸ್ ಚಾಲನೆಯಲ್ಲಿದ್ದು, ಇಂಗ್ಲೆಂಡಿನ ವೈರಲೆಸ್ ಸ್ಟೇಷನ್‌ನೊಂದಿಗೆ ಸಂಪರ್ಕದಲ್ಲಿತ್ತು. ಮತ್ತು ಆ ಟೇಬಲ್ಲಿನ ಸುತ್ತಲೂ ಕುರ್ಚಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲಾಗಿತ್ತು. ಒಂದಾನುವೇಳೆ ಕೋಣೆಯ ಬಾಗಿಲನ್ನು ವಿಮಾನದಾಳಿಯ ಅಧಿಕಾರಿಗಳೇನಾದರೂ ಬಲವಂತವಾಗಿ ದೂಡಿ ಬಂದು ಇದನ್ನು ಗಮನಿಸಿದ್ದಲ್ಲಿ, ಈ ಸಂಗತಿಯನ್ನು ಪೋಲಿಸರಿಗೆ ತಿಳಿಸಿದ್ದಲ್ಲಿ, ಅದರ ಪರಿಣಾಮ ಮಾತ್ರ ಬಹು ಸಂಕಟದ್ದಾಗುತ್ತಿತ್ತು. ಹಾಗಾಗೇ ವ್ಯಾನ್ಡ್ಯಾನ್ ಹಾಸಿಗೆಯಿಂದ ಎದ್ದು, ತನ್ನ ಕೋಟು ಹ್ಯಾಟುಗಳನ್ನು ಧರಿಸಿ, ಕಾಳಜಿಪೂರ್ವಕವಾಗಿ ಕೆಳ ಮಹಡಿಗೆ ಡ್ಯಾಡಿಯನ್ನು ಹಿಂಬಾಲಿಸಿ ಹೋದರು. ಎಲ್ಲಿಯಾದರೂ ಅಪಾಯ ಎದುರಾದರೆ ಎಂಬ ತುರ್ತುಕ್ರಮಕ್ಕೆ ಮುಂದಾಲೋಚನೆಯಿಂದ ಪೀಟರ್ ಗುದ್ದಲಿಯೊಂದನ್ನು ಎತ್ತಿ ಹಿಡಿದುಕೊಂಡು ಹೊರಟ. ಮೆಲ್ಮಹಡಿಯಲ್ಲಿದ್ದ ಹೆಂಗಸರೆಲ್ಲ [ಮಾರ್‍ಗೊಟ್ ಮತ್ತು ನನ್ನನ್ನೂ ಸೇರಿಸಿಕೊಂಡು] ಮುಂದೆ ಏನಾಗಬಹುದೆಂಬ ಭಯದಲ್ಲಿ ಅವರೆಲ್ಲ ಮರಳಿ ಬರುವವರೆಗೂ ಅವರ ನಿರೀಕ್ಷೆ ಮಾಡುತ್ತಾ ನಿಂತಿದ್ದೆವು. ವಾಪಸ್ಸು ಬಂದವರು ಮನೆಯಲ್ಲಿ ಎಲ್ಲವೂ ಸುರಳಿತ ಇರುವುದಾಗಿ ಹೇಳಿದರು.
ಮತ್ತೀಗ ನಾವು ಶೌಚಾಲಯದ ಪ್ಲಗ್ ಎಳೆಯುದಾಗಲಿ, ಮನೆಯಲ್ಲಿ ಎಲ್ಲಿಯೇ ಆಗಲಿ ನೀರನ್ನು ಸೋರಲು ಬಿಡುವುದಾಗಲಿ ಮಾಡಬಾರದೆಂದು ನಿರ್ಧರಿಸಿದೆವು. ಇದು ಎಲ್ಲಕ್ಕಿಂತ ಹೆಚ್ಚು ಸಂಕಟ ನೀಡಿದ್ದು ನಮ್ಮ ಉದರಗಳಿಗೆ. ಹೊಟ್ಟೆಯಲ್ಲಿಯ ಗುಡುಗುಡು ಹೆಚ್ಚಾಗುತ್ತಿದ್ದಂತೆ ಬೇರೆ ಉಪಾಯವಿರದೆ ನಾವು ಒಬ್ಬರಾದ ಮೇಲೆ ಒಬ್ಬರಂತೆ ಶೌಚಾಲಯಕ್ಕೆ ಹೋಗಿಬಂದೆವು.
ಅದೃಷ್ಟ ದುರದೃಷ್ಟಗಳು ಬರುವಾಗ ಏಕಾಂಗಿಯಾಗಿ ಬರುವುದಿಲ್ಲ. ಅವು ಗುಂಪುಗುಂಪಾಗಿಯೇ ಬರುವುದು ಹೆಚ್ಚು. ಇಲ್ಲಿಯೂ ಹಾಗೇ ಅಯಿತು. ಮೊದಲನೆಯದು ವೆಸ್ಟರ್ ಟೊರೆನ್‌ನ ಗಡಿಯಾರ, ಯಾವುದು ನನಗೆ ಧೈರ್ಯ ತುಂಬುತ್ತಿತ್ತೋ ಅದು ನೆನಪಾಗಲೇ ಇಲ್ಲ. ಎರಡನೆಯದು ವಾಸನ್ ಎಂದಿಗಿಂತ ಅಂದು ಸಂಜೆ ಕೊಂಚ ಬೇಗನೆ ಹೊರಟು ಹೋದದ್ದು. ಹಾಗೇ ಕೀಲಿಕೈಯನ್ನು ತಮ್ಮ ಜೊತೆ ತೆಗೆದುಕೊಂಡು ಹೋಗಿದ್ದರೋ ಏನೋ ಅದು ಕೂಡಾ ಸರಿಯಾಗಿ ನಮಗೆ ಗೊತ್ತಿಲ್ಲ. ಬಹುಶಃ ಹೀಗೂ ಇದ್ದಿರಬಹುದು ಬಾಗಿಲನ್ನೇ ಹಾಕಲು ಮರೆತಿದ್ದಿರಬಹುದು.
ಅದು ಇನ್ನೂ ಸಂಜೆಯ ಹೊತ್ತು. ನಾವು ಅನಿಶ್ಚಿತತೆಯಲ್ಲಿಯೇ ಇದ್ದೆವು. ಹಾಗಿದ್ದೂ ನಮಗೆ ಸ್ವಲ್ಪ ಧೈರ್ಯವಿತ್ತು. ಯಾಕೆಂದರೆ ದರೋಡೆಕೋರ ಮನೆಯ ಮೇಲೆ ದಾಳಿ ಮಾಡಿದಾಗ ಸುಮಾರು ೮ ಗಂಟೆಯಿಂದ ೧೦ ಗಂಟೆಯವರೆಗೂ ನಮಗೆ ಯಾವ ಸದ್ದು ಕೇಳಿರಲಿಲ್ಲ. ಇನ್ನೂ ಸ್ವಲ್ಪ ಧೈರ್ಯ ಇರಲು ಕಾರಣ ಇನ್ನು ಕತ್ತಲಾಗದೆ ಇರುವಾಗ ಸಂಜೆಯ ಈ ಹೊತ್ತಿನಲ್ಲಿ ಕಳ್ಳರು ಬಾಗಿಲನ್ನು ಒಡೆಯುವ ಪ್ರಯತ್ನ ಮಾಡಲಾರರು ಎಂಬುದು ಅಷ್ಟೇ ಅಲ್ಲ ಅಲ್ಲಿ ಇನ್ನೂ ಬೀದಿಗಳಲ್ಲಿ ಜನ ಸಂಚಾರ ಸಾಕಷ್ಟಿತ್ತು. ಅದಕ್ಕೂ ಮಿಗಿಲಾಗಿ ನಮ್ಮಲ್ಲಿ ಒಬ್ಬರು ಹೇಳಿದ್ದೇನೆಂದರೆ ಪಕ್ಕದ ಗೋದಾಮನ್ನು ನೋಡಿಕೊಳ್ಳುವವರು ಇನ್ನೂ ಕೆಲಸದ ಮೇಲಿದ್ದರು ಎಂಬುದು. ಮೊದಲೇ ಗಾಬರಿಯಾದ ಮನಸ್ಸಿಗೆ ಹಾಗೂ ಕಟ್ಟಡದ ಗೋಡೆ ತುಂಬಾ ತೆಳ್ಳಗಿರುವ ಕಾರಣ,ಆ ಸದ್ದು ಇಲ್ಲಿಯೇ ಕೇಳಿಸುತ್ತಿದ್ದಂತೆ ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ಇತ್ತು. ಅದರಲ್ಲೂ ಇಂತಹ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ನಮ್ಮ ಕಲ್ಪನೆಗಳಿಗೆ ರೆಕ್ಕೆ ಪುಕ್ಕ ಬಂದಿರುತ್ತದೆ.
ಆಮೇಲೆ ನಾವೆಲ್ಲ ಮಲಗಲು ಹೋದೆವು. ಆದರೆ ನಮಗಾರಿಗೂ ನಿದ್ರಿಸಲಾಗಲೇ ಇಲ್ಲ. ಡ್ಯಾಡಿ, ಮಮ್ಮಿ, ಡಸೆಲ್ ಎಚ್ಚರವಾಗೇ ಇದ್ದರು. ಮತ್ತು ನಾನೂ ಕೂಡಾ ಒಂದರೆಗಳಿಗೆ ಸಣ್ಣನಿದ್ದೆ ಮಾಡಿದೆ. ಬೆಳಗೆದ್ದು ಹೊರಗಿನ ಬಾಗಿಲು ಇನ್ನು ಮುಚ್ಚಿದೆಯಾ ಎಂದು ತಿಳಿಯಲು ಗಂಡಸರೆಲ್ಲ ಕೆಳ ಮಹಡಿಗೆ ಹೋದರು. ಸದ್ಯ ಸುರಕ್ಷಿತವಾಗಿದ್ದ ಅದನ್ನು ನೋಡಿ ಸಮಾಧಾನದಿಂದ ಹಿಂತಿರುಗಿದರು. ಈ ಸಂಗತಿ ತಿಳಿಯದ ಉಳಿದವರಿಗೆ ನಾವು ಈ ನರ ಹಿಂಡುವಂತಹ ಸುದ್ದಿಯನ್ನು ಹೇಳಿದರೆ ಅವರೆಲ್ಲ ಅದನ್ನು ತಮಾಷೆಮಾಡಿ ನಕ್ಕರು. ಸಂಕಟ ಪರಿಹಾರವಾದ ಮೇಲೆ ಹೀಗೆ ನಗೆಯಾಡುವುದು ಸುಲಭ. ಎಲಿ ವೊಸನ್ ಮಾತ್ರ ನಮ್ಮ ಈ ವಿಚಾರವನ್ನು ಸಿರಿಯಸ್ಸಾಗಿ ತೆಗೆದುಕೊಂಡರು.
ನಿನ್ನ,
ಆನ್
*****






