ಪ್ರಿಯ ಕಿಟಿ,
ಇವತ್ತು ನಿನಗೆ ನಾನು ಇನ್ನೊಬ್ಬ ಹೊಸ ವ್ಯಕ್ತಿಯನ್ನು ಪರಿಚಯಿಸುವೆ. ಅವರೇ ಮಾಮಾ[ಮಮ್ಮಿ]ಪ್ರಾಂಕ್, ಚಾಂಪಿಯನ್ ಆಫ್ ಯೂಥ್! ಯುವ ಜನರಿಗೆ ಹೆಚ್ಚಿನ ಬೆಣ್ಣೆಯ ಅಗತ್ಯ: ಹೊಸ ಪೀಳಿಗೆಯ ಯುವ ಸಮುದಾಯದ ಸಮಸ್ಯೆಗಳು: ಇವೆಲ್ಲಕ್ಕೂ ಎಲ್ಲ ರೀತಿಯಿಂದಲೂ ಮಮ್ಮಿ ಯುವ ಜನರನ್ನು ಬೆಂಬಲಿಸುತ್ತಾರೆ. ಬಹಳ ಸಲ ಒಂದಿಷ್ಟು ವಾಗ್ವಾದಗಳನ್ನು ಎದುರಿಸಿಯಾದರೂ ತಮ್ಮ ವಾದವನ್ನೆ ಸಮರ್ಥಿಸಿಕೊಳ್ಳುತ್ತಾರೆ.
ದೀರ್ಘಕಾಲ ಇಟ್ಟುಕೊಳ್ಳುವುದಕ್ಕಾಗಿ ಒಂದು ಬಾಟಲ್ ತುಂಬಿ ಮೀನು ಸಂಗ್ರಹಿಸಿ ಇಟ್ಟಿದ್ದೆವು. ಆದರೆ ಅದು ಸರಿಯಾಗಿ ಸಂರಕ್ಷಿಸದ ಕಾರಣ ಹಾಗೇ ಹಾಳಾಗಿ ಹೋಯಿತು. ಮೌಶಿ ಮತ್ತು ಬೋಶೆಗೆ ಇಂದು ರಸದೌತಣ. ನಿನಗಿನ್ನು ಬೋಶೆ ಬಗ್ಗೆ ಗೊತ್ತಿಲ್ಲ ಕಾಣುತ್ತದೆ. ಆಕೆ ನಾವು ಇಲ್ಲಿ ರಹಸ್ಯವಾಸಕ್ಕೆ ಬರುವ ಮುಂಚಿನಿಂದಲೂ ಇದ್ದಳು. ಅವಳು ಗೋದಾಮು ಮತ್ತು ಆಫೀಸ ಬೆಕ್ಕು. ಅದು ಉಗ್ರಾಣದ ಕೋಣೆಯಲ್ಲಿರುವ ಇಲಿಗಳ ನಿಯಂತ್ರಣದಲ್ಲಿಡುತ್ತದೆ. ಬೋಶೆಳ ವಿಚಿತ್ರ ರಾಜಕೀಯ ಹೆಸರಿನ ಬಗ್ಗೆ ನಿನಗೆ ವಿವರಣೆ ಕೊಡಬೇಕು, ಕಂಪನಿಯಲ್ಲಿ ಈ ಮೊದಲು ಎರಡು ಬೆಕ್ಕುಗಳು ಇದ್ದವು. ಒಂದು ಗೋದಾಮಿನಲ್ಲೂ ಇನ್ನೊಂದು ಅಟ್ಟದ ಮೇಲೂ ಇದ್ದವು. ಆದರೆ ಈಗ ಒಮ್ಮೊಮ್ಮೆ ಈ ಎರಡು ಬೆಕ್ಕುಗಳು ಪರಸ್ಪರ ಸಂಧಿಸುತ್ತಿರುತ್ತವೆ. ಹಾಗೇ ಸಂಧಿಸಿದಾಗಲೆಲ್ಲಾ ಭೀಕರ ಕಾಳಗವೇ ನಡೆದುಹೋಗುತ್ತದೆ. ಗೋದಾಮಿನ ಬೆಕ್ಕು ಹೆಚ್ಚು ಆಕ್ರಮಣಕಾರಿಯಾದರೂ ಬಹಳಷ್ಟು ಸಲ ಗೆಲ್ಲುವುದು ಮಾಳಿಗೆಯ ಬೆಕ್ಕೆ- ಅದೆಂದರೆ ದೇಶದೇಶಗಳ ಯುದ್ಧ ನಡೆಯುವಂತೆ. ಅದಕ್ಕಾಗಿಯೇ ಗೋದಾಮಿನ ಬೆಕ್ಕು ಜರ್ಮನ್ ಎಂದು ’ಬೋಶೆ’ ಎಂಬ ಹೆಸರನ್ನು ಇಡಲಾಗಿದೆ. ಮತ್ತು ಮಾಳಿಗೆಯ ಮೇಲಿನ ಬೆಕ್ಕು ಇಂಗ್ಲೀಷ ಎಂದು ’ಟಾಮಿ’ ಎಂದು ಕರೆಯಲಾಗಿದೆ. ಟಾಮಿ ಸ್ವಲ್ಪದಿನದ ನಂತರ ಅಲ್ಲಿಂದ ನಾಪತ್ತೆಯಾಯಿತು. ಈಗ ನಾವು ಕೆಳಗಿನ ಮಹಡಿಗೆ ಹೋದಾಗೆಲ್ಲ ಬೋಶೆ ಜೊತೆ ಸಂತೋಷದಿಂದ ಆಟ ಆಡಿ ಖುಷಿಪಡುತ್ತೇವೆ.
ಎಷ್ಟೊಂದು ಚಪ್ಪರದವರೆ ಕಾಳು, ಹುರಳಿಕಾಳುಗಳನ್ನು ಈ ಹಿಂದೆ ತಿಂದಿದ್ದೆವು. ಈಗ ಅವುಗಳ ರೂಪ ಕಣ್ಣಮುಂದೆ ಬಂದಂತೆ ಆಗುವುದನ್ನು ಹೇಗೆ ಸಹಿಸಲಿ. ಅವುಗಳ ಬಗ್ಗೆ ಹೆಚ್ಚು ಹೆಚ್ಚು ಯೋಚಿಸಿದಷ್ಟು ನನಗೆ ನಾನೇ ರೋಗಿಯಾದಂತೆ ಅನ್ನಿಸುತ್ತದೆ. ಈಗೀಗ ಸಂಜೆಗೆ ಬ್ರೇಡ್ ಕೂಡಾ ನಮಗೆ ಸಿಗುವುದಿಲ್ಲ. ಡ್ಯಾಡಿ ಕೂಡಾ ತನ್ನ ಮನಸ್ಥಿತಿ ಸರಿಯಿಲ್ಲವೆಂದು ಈಗಷ್ಟೇ ಹೇಳಿದರು. ಅವರ ಕಣ್ಣುಗಳಲ್ಲಿ ನೋವು ಮಡುಗಟ್ಟಿದೆ. ಪಾಪ!
ಇನಾ ಬಾವ್ಡಿಯರ್ ಬೇಕರ್ ಬರೆದ “The knock at the Door” ಪುಸ್ತಕ ನನ್ನ ಎಷ್ಟು ಹಿಡಿದಿಟ್ಟಿದೆ ಎಂದರೆ ಓದುತ್ತ ಹೋದರೆ ಕೆಳಗಿಡಲು ಮನಸ್ಸೇ ಬರುವುದಿಲ್ಲ. ಆ ಕುಟುಂಬದ ಕಥೆಯಂತೂ ಬಹಳ ಅದ್ಭುತವೆಂಬಂತೆ ಮೂಡಿಬಂದಿದೆ. ಎಲ್ಲಕ್ಕೂ ಹೆಚ್ಚಾಗಿ ಆ ಪುಸ್ತಕ ಯುದ್ಧ್ದ, ಲೇಖಕರ ಸ್ಥಿತಿ, ಸ್ತ್ರೀ ಸ್ವಾತಂತ್ರ್ಯ ಕುರಿತಾಗಿಯೇ ಇದೆ. ನಿಜಕ್ಕೂ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆ ಪುಸ್ತಕದಲ್ಲಿ ನಾನು ಬಹಳೇನು ಆಸಕ್ತಳಾಗಿಲ್ಲ.
ಜರ್ಮನಿಯ ಮೇಲೆ ಭಯಂಕರವಾದ ಬಾಂಬ ಧಾಳಿ ನಡೆಯುತ್ತಿದೆ. ವ್ಯಾನ್ಡ್ಯಾನ್ ಮನಸ್ಥಿತಿ ಚೆನ್ನಾಗಿಲ್ಲ. ಅದಕ್ಕೆ ಕಾರಣ ಸಿಗರೇಟ್‌ಗಳ ಕೊರತೆ. ಸಿಗರೇಟು ಸೇದಲು ಸಿಗದಿದ್ದದ್ದು. ಇನ್ನು ಕ್ಯಾನುಗಳಲ್ಲಿ ಶೇಖರಿಸಿಟ್ಟ ತರಕಾರಿಗಳನ್ನು ಕುರಿತಂತೆ ಅದನ್ನು ಬಳಸಬೇಕೋ ಅಥವಾ ಬೇಡವೋ ಎಂಬ ಚರ್ಚೆ, ನಮ್ಮ ಪರವಾಗಿಯೇ ಕೊನೆಗೊಂಡಿತು.
ಈಗ ನನ್ನ ಕಡೆ ಒಂದೇ ಒಂದು ಜೊತೆ ಚಂದದ ಶೂ ಇಲ್ಲ, ಮಂಜಿನ ಮೇಲೆ ನಡೆಯಲು ಬಳಸುವ ಸ್ಕೈ ಬೂಟುಗಳ ಹೊರತಾಗಿ ಯಾವುದೂ ಸರಿಯಿಲ್ಲ. ಸ್ಕೈ ಬೂಟುಗಳು ಮನೆಯಲ್ಲಿ ಬಳಸಲು ಯೋಗ್ಯವಲ್ಲ. ೬. ೫೦ ಪ್ಲಾರಿನ್ ಬೆಲೆ ತೆತ್ತು ಖರೀದಿಸಿದ ಜೊಂಡಿನಿಂದ ತಯಾರಿಸಿದ ಸ್ಯಾಂಡಲ್ ಒಂದೇ ವಾರಕ್ಕೆ ಹಾಳಾಯಿತು. ಆ ನಂತರ ಅದು ಉಪಯೋಗಕ್ಕೆ ಬರಲೇ ಇಲ್ಲ. ಮೇಪ್ ಹೇಗಾದರೂ ಮಾಡಿ ಇನ್ನೊಂದು ಜೋಡಿ ತಂದು ಕೊಡಬಹುದು.
ನಾನೀಗ ಡ್ಯಾಡಿಯ ತಲೆಗೂದಲು ಕತ್ತರಿಸಬೇಕು. ನಾನೀಗ ಎಷ್ಟು ಚೆನ್ನಾಗಿ ಆ ಕೆಲಸ ಮಾಡುವೆನೆಂದರೆ ಡ್ಯಾಡಿ ಯುದ್ಧ ಮುಗಿದ ನಂತರ ಕೂಡಾ ಬೇರೆ ಯಾವ ಕ್ಷೌರಿಕನನ್ನು ಇಟ್ಟುಕೊಳ್ಳದೇ ನನ್ನಿಂದಲೇ ಕ್ಷೌರ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅದೂ ನಾನು ಕೂದಲು ಕತ್ತರಿಸುತ್ತಾ ಅವರ ಕಿವಿಯನ್ನು ಕತ್ತರಿಸದಿದ್ದಲ್ಲಿ ಮಾತ್ರ.
ನಿನ್ನ,
ಆನ್
*****






