ಪ್ರಿಯ ಕಿಟಿ,
ಈಗ ಯಾವ ಕ್ಷಣದಲ್ಲಾದರೂ ಆಕ್ರಮಣ ನಡೆಯಬಹುದು, ಇಲ್ಲ ಯುದ್ಧವೇ ಆಗಬಹುದು ಎಂಬ ನಿರೀಕ್ಷೆ ಪಿಮ್‌ನದಾಗಿತ್ತು. ಚರ್ಚಿಲ್‌ರಿಗೆ ನ್ಯೂಮೋನಿಯಾ ಆಗಿದೆ. ಆದರೂ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಸ್ವಾತಂತ್ರ್ಯ ಪ್ರೇಮಿ, ನಾಯಕ ಗಾಂಧೀಜಿ ಆಮರಣ ಉಪವಾಸಕ್ಕೆ ಕೂತಿದ್ದಾರೆ.ಶ್ರೀಮತಿ ವ್ಯಾನ್ಡ್ಯಾನ್ ಹೇಳುದೇನೆಂದರೆ ಇವೆಲ್ಲವೂ ವಿಧಿನಿಯಮ. ಆದರೆ ಯಾವಾಗ ಬಂದೂಕಿನಿಂದ ಗುಂಡುಗಳು ಹಾರಲು ತೊಡಗುತ್ತವೆಯೋ ಆಗ ಅತೀ ಹೆಚ್ಚು ಭಯಗ್ರಸ್ತರಾಗಬಹುದಾದವರು ಯಾರು? ಯಾರೂ ಇಲ್ಲ, ಆದರೆ ಪೆಟ್ರೋನೆಲ್ಲಾ ಒಬ್ಬರನ್ನು ಬಿಟ್ಟು.
ಚರ್ಚಿಗೆ ಹೋಗುವವರಿಗಾಗಿ ಬರೆದ ಬಿಷಪ್‌ರ ಪತ್ರದ ಪ್ರತಿಯೊಂದನ್ನು ಹೆಂಕ್ ನಮಗಾಗಿ ಓದಲು ತಂದಿದ್ದರು.
ಅದು ಬಹಳ ಸ್ಪೂರ್ತಿದಾಯಕ ಹಾಗೂ ವಿಶಿಷ್ಟವಾಗಿತ್ತು. ನೆದರಲ್ಯಾಂಡಿನ ನಿವಾಸಿಗಳೇ, ಇದು ವಿಶ್ರಾಂತಿಯ ಸಮಯವಲ್ಲ. ಪ್ರತಿಯೊಬ್ಬರೂ ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ, ತಮ್ಮ ಜನರಿಗಾಗಿ, ಧರ್ಮಕ್ಕಾಗಿ ತಮ್ಮಲ್ಲಿ ಇರುವಂತಹ ಆಯುಧಗಳನ್ನೆ ಹಿಡಿದು ಹೋರಾಡುತ್ತಿದ್ದಾರೆ. ನೀವು ಸಹಾಯ ಮಾಡಿ, ಉದಾರ ಹೃದಯದಿಂದ ಸಹಕರಿಸಿ, ಭಯಗೊಳ್ಳದಿರಿ ಎನ್ನುತ್ತಾ ತಮ್ಮ ಚರ್ಚಿನ ವ್ಯಾಸ ಪೀಠದ ಮೇಲೆ ಕೂತು ಕೂಗುತ್ತಾ ಹೇಳುವ ಈ ಮಾತುಗಳು ಏನಾದರೂ ಕೆಲಸಕ್ಕೆ ಬರಬಹುದೇ? ಇದ್ಯಾವುದೂ ಕೂಡಾ ನಮ್ಮ ಧರ್ಮದ ಜನರನ್ನು ಕಾಯಲಾರದು.
ಇತ್ತೀಚಿಗೆ ನಮ್ಮ ಮೇಲೆ ಏನೇನು ಆಗುತ್ತಿದೆ ಎಂಬುದನ್ನು ನಿನಗೆ ಊಹಿಸಲೂ ಆಗಲಿಕ್ಕಿಲ್ಲ, ಕ್ರೇಲರ್ ಮತ್ತು ಕೂಫಸ್ ಮುಂತಾದ ಯಾರಿಗೂ ಯಾವ ಮಾಹಿತಿಯನ್ನು ನೀಡದೇ ಈ ಮನೆಯ ಮಾಲೀಕ ಇದನ್ನು ಮಾರಿಬಿಟ್ಟಿದ್ದಾರೆ. ಒಂದು ದಿನ ಬೆಳ್ಳಂಬೆಳಿಗ್ಗೆ ಹೊಸ ಮಾಲೀಕ ಮನೆಯನ್ನು ಒಮ್ಮೆ ಕೂಲಂಕಶವಾಗಿ ನೋಡಿ ಹೋಗುವ ಸಲುವಾಗಿ ಆರ್ಟಿಟೆಕ್ಟ್ ಒಬ್ಬನೊಡನೆ ಬಂದೇಬಿಟ್ಟರು. ಪುಣ್ಯಕ್ಕೆ ಕೂಫಸ್ ಆ ಸಮಯದಲ್ಲಿ ಅಲ್ಲೆ ಇದ್ದದ್ದು ಅದೃಷ್ಟ. ಹಾಗಾಗಿ ಅವರು ಗುಪ್ತಗೃಹದ ಹೊರತಾಗಿ ಉಳಿದೆಲ್ಲ ಭಾಗಗಳನ್ನು ಆ ಯಜಮಾನನಿಗೆ ತೋರಿಸಿದರು. ಅಲ್ಲದೇ ನಮ್ಮ ಗುಪ್ತಗೃಹದ ಭಾಗದ ಕೋಣೆಯ ಬಾಗಿಲಿನ ಕೀಲಿಕೈಯನ್ನು ಮರೆತು ಬಂದಿರುವುದಾಗಿ ಸಬೂಬು ಹೇಳಿದರು. ಹೊಸ ಮಾಲೀಕ ಜಾಸ್ತಿ ಏನೂ ವಿಚಾರಿಸಲಿಲ್ಲ. ಮಾಲೀಕ ಮತ್ತೊಮ್ಮೆ ಇಲ್ಲಿಗೆ ಬರುವವರೆಗೆ ಮತ್ತು ಈ ಗುಪ್ತಗೃಹವನ್ನು ನೋಡಲು ಬಯಸುವವರೆಗೆ ಎಲ್ಲವೂ ಸುರಳಿತ. ಯಾಕೆಂದರೆ ಆನಂತರ ನಮ್ಮ ಸ್ಥಿತಿ ದುಸ್ತರವಾಗಬಹುದು. ಸಂಕಟಕರವಾಗಲೂಬಹುದು.
ಡ್ಯಾಡಿ ನನಗೆ ಮತ್ತು ಮಾರ್‍ಗೊಟ್‌ಳಿಗೆಂದು ಒಂದು ಕಾರ್ಡ ಇಂಡೆಕ್ಸ ಬಾಕ್ಸನ್ನು ಖಾಲಿ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಕಾರ್ಡುಗಳನ್ನು ಇಡುತ್ತಾರೆ. ಅದು ಬುಕ್ ಕಾರ್ಡಗಳನ್ನು ಸಿಸ್ಟ್‌ಮ್‌ನಂತೆ ಇಡುವುದು. ಅಲ್ಲಿ ನಾವು ಓದಿದ ಪುಸ್ತಕಗಳ ಹೆಸರು ಹಾಗೂ ಕೃತಿಕರ್ತೃಗಳ ಹೆಸರು ಒಂದೊಂದು ಕಾರ್ಡಿನಲ್ಲಿ ಬರೆದಿಡುವುದು. ನನಗೆ ವಿದೇಶಿ ಪದಗಳನ್ನು ಬರೆದುಕೊಳ್ಳಲು ಒಂದು ಚಿಕ್ಕ ನೋಟ್ ಪುಸ್ತಕ ಸಿಕ್ಕಿದೆ.
ಬಹಳ ದಿನಗಳ ನಂತರ ಮಮ್ಮಿ ಮತ್ತು ನಾನು ಒಬ್ಬರಿಗೊಬ್ಬರು ಬಹಳ ಚೆನ್ನಾಗಿದ್ದೇವೆ. ಆದರೂ ಒಬ್ಬರನ್ನೊಬ್ಬರು ಎಂದಿಗೂ ಬಹಳ ನಂಬುವುದಿಲ್ಲ. ಮಾರ್‍ಗೊಟ್ ಮೊದಲೆಂದು ಇರದ ರೀತಿಯಲ್ಲಿ ವರ್ತಿಸುತ್ತಿದ್ದಾಳೆ. ಡ್ಯಾಡಿ ಏನೋ ಸಿಕ್ಕಿದ್ದನ್ನು ತಮಗಾಗಿ ಇಟ್ಟುಕೊಳ್ಳುತ್ತಿದ್ದಾರೆ, ಆದರೂ ಅವರು ನನ್ನ ಮೊದಲಿನ ಪ್ರೀತಿಯ ಡ್ಯಾಡಿಯೇ.
ಈಗ ಹೊಸ ಬೆಣ್ಣೆ ಮತ್ತು ಮಾರ್ಗರಿನ್‌ನ ರೇಷನಿಂಗ್ ಟೇಬಲ್ಲ ಮೇಲಿದೆ. ಪ್ರತಿಯೊಬ್ಬನಿಗೂ ಕೂಡಾ ಅವನ ಪಾಲಿನ ಸ್ವಲ್ಪ ಬೆಣ್ಣೆಯನ್ನು ಅವನ ಪ್ಲೇಟಿನಲ್ಲಿ ಬಡಿಸಲಾಗುತ್ತದೆ. ನನ್ನ ಅಭಿಪ್ರಾಯದಲ್ಲಿ ವ್ಯಾನ್ಡ್ಯಾನ್ ಕುಟುಂಬ ಈ ಬೆಣ್ಣೆಯನ್ನು ಎಲ್ಲರಿಗೂ ಸಮಾನವಾಗಿ ಬಡಿಸುವುದಿಲ್ಲ. ಹೀಗಿದ್ದೂ ಮಾತನಾಡಿದರೆ ಜಗಳವಾಗಬಹುದೆಂದು ಮಮ್ಮಿ , ಡ್ಯಾಡಿ ಹೆದರಿ ಸುಮ್ಮನೇ ಉಳಿಯುತ್ತಾರೆ. ನನಗಿದು ಇಷ್ಟವಾಗುವುದಿಲ್ಲ. ಅವರು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಆಗಲೇಬೇಕು. ಟಿಟ್ ಫಾರ್ ಟ್ಯಾಟ್.
ನಿನ್ನ,
ಆನ್
*****






