ಭಾಗ-೨
೧೩ ಜನವರಿ, ೧೯೪೩ – ೨೯ ಡಿಸೆಂಬರ್, ೧೯೪೩
೧೩ ಜನವರಿ, ೧೯೪೩
ಪ್ರಿಯ ಕಿಟಿ,
ಇವತ್ತು ಮುಂಜಾನೆಯಿಂದಲೇ ಎಲ್ಲವೂ ನನ್ನನ್ನು ಬೇಸರಗೊಳಿಸಿದವು. ಹಾಗಾಗಿ ಒಂದೇ ಒಂದು ಸಣ್ಣ ಕೆಲಸವನ್ನು ಸರಿಯಾಗಿ ನನ್ನಿಂದ ಮಾಡಲಾಗಲಿಲ್ಲ.
ಹೊರಗಿನ ಪರಿಸ್ಥಿತಿ ನೋಡಿದರೆ ಬಹಳ ಕೆಟ್ಟದಾಗಿದೆ. ಹಗಲು ರಾತ್ರಿ ಎನ್ನದೇ ಈ ಬಡ ದುಃಖಿತ ಜನರನ್ನೆಲ್ಲಾ ಎಳೆದೊಯ್ಯಲಾಗುತ್ತ್ತಿದೆ. ಬೆನ್ನ ಮೇಲೆ ಹೊರುವ ಒಂದು ಚೀಲ ಮತ್ತು ಒಂದಿಷ್ಟು ಸ್ವಲ್ಪ ಹಣ ಇಷ್ಟನ್ನು ಮಾತ್ರ ಅವರು ಒಯ್ಯಬಹುದು. ಮುಂದೆ ದಾರಿಯಲ್ಲಿ ಈ ವಸ್ತುಗಳನ್ನು ಅವರಿಂದ ಕಸಿದುಕೊಳ್ಳಲಾಗುತ್ತದೆ. ಕುಟುಂಬಗಳನ್ನು ವಿಂಗಡಿಸಿ, ಗಂಡಸರು, ಹೆಂಗಸರು, ಮಕ್ಕಳನ್ನು ಎಲ್ಲರನ್ನೂ ಬೇರ್ಪಡಿಸಲಾಗುತ್ತಿದೆ. ಶಾಲೆಯಿಂದ ಹಿಂತಿರುಗಿದ ಮಕ್ಕಳು ತಮ್ಮ ಹೆತ್ತವರು ಕಾಣೆಯಾದದ್ದನ್ನು ನೋಡಬೇಕಾಗುತ್ತದೆ. ಶಾಪಿಂಗಿಗೆ ಹೋದ ಹೆಂಗಸರು ಮನೆಯಲ್ಲಿದ್ದವರೆಲ್ಲ ನಾಪತ್ತೆಯಾದದ್ದನ್ನು ಮನೆಬಾಗಿಲಿಗೆ ಚಿಲಕ ಬಿದ್ದಿರುವುದನ್ನು ಎದುರು ನೋಡಬೇಕಾಗುತ್ತಿದೆ.
ಡಚ್ ಜನರು ಕೂಡಾ ಬಹು ಚಿಂತಿತರಾಗಿದ್ದಾರೆ. ಅವರ ಗಂಡುಮಕ್ಕಳನ್ನೆಲ್ಲಾ ಜರ್ಮನಿಗೆ ಕಳಿಸಲಾಗುತ್ತಿದೆ. ಎಲ್ಲರೂ ಭಯಭೀತಗೊಂಡಿದ್ದಾರೆ.
ಮತ್ತು ಪ್ರತಿರಾತ್ರಿ ಹಾಲೆಂಡಿನ ಮೇಲೆ ಹಾರುವ ನೂರಾರು ವಿಮಾನಗಳು ಅಲ್ಲಿಂದ ಜರ್ಮನಿಯ ನಗರದೆಡೆಗೆ ಹೋಗುತ್ತವೆ. ಅಲ್ಲಿ ಅವರ ಬಾಂಬುಗಳಿಂದಲೇ ಭೂಮಿಯನ್ನು ಊಳಲಾಗಿದೆ. ಪ್ರತಿ ಗಂಟೆಗೂ ರಶಿಯಾ ಮತ್ತು ಆಫ್ರಿಕಾಗಳಲ್ಲಿ ನೂರಾರು ಸಾವಿರಾರು ಜನರನ್ನು ಕೊಲ್ಲಲಾಗುತ್ತಿದೆ. ಯಾರಿಗೂ ಕೂಡಾ ಇದರಿಂದ ರಕ್ಷಿಸಿಕೊಳ್ಳಲಾಗುತ್ತಿಲ್ಲ. ಇಡೀ ಜಗತ್ತು ಯುದ್ಧವನ್ನು ಪೋಷಿಸುತ್ತಿದೆ. ಇದು ಮಿತ್ರ ಪಡೆಗಳಿಗೆ ಪೂರಕವಾಗಿದೆ. ಆದರೆ ಅದರ ಕೊನೆ ಏನಾಗಬಹುದೆಂಬ ದೃಶ್ಯ ಈಗ ಹೇಳಲಾಗದು.
ಈಗ ನಮ್ಮ ಬಗ್ಗೆ ಹೇಳಬೇಕೆಂದರೆ ನಾವು ಬಹಳೇ ಅದೃಷ್ಟವಂತರು. ಹೌದು, ಮಿಲಿಯನ್‌ಗಟ್ಟಲೆ ಜನರಿಗಿಂತ ನಾವು ಅದೃಷ್ಟಶಾಲಿಗಳು. ನಾವಿದ್ದ ಸ್ಥಳ ತುಂಬಾ ಶಾಂತ ಮತ್ತು ಸುರಕ್ಷಿತ. ಅದಕ್ಕಲ್ಲವೇ ನಾವು ರಾಜಧಾನಿಯಲ್ಲಿ ಕೂತು ಹೀಗೆ ಮಾತನಾಡಲು ಸಾಧ್ಯವಾದದ್ದು. ನಾವು ಎಂಥ ಸ್ವಾರ್ಥಿಗಳೆಂದರೆ ಯುದ್ಧದ ನಂತರದ ಸಂಗತಿಗಳ ಬಗ್ಗೆ ಮಾತಾಡುತ್ತೇವೆ, ಹೊಸ ಬಟ್ಟೆ, ಹೊಸದಾದ ಶೂಗಳ ಹೊಂದುವ ಬಗೆಗಿನ ಯೋಚನೆಗಳಿಂದ ಖುಷಿಗೊಳ್ಳುತ್ತಿದ್ದೇವೆ, ನಿಜಕ್ಕೂ ನಾವು ಹಣವನ್ನು ಪೈಸೆ ಪೈಸೆ ಲೆಕ್ಕದಲ್ಲಿ ಸಂಗ್ರಹಿಸಬೇಕು, ಅದನ್ನು ಇತರರ ಸಹಾಯಕ್ಕೆ ಮತ್ತು ಯುದ್ದದ ನಂತರ ಉಳಿಯಬಹುದಾದ ಅವಶೇಷಗಳನ್ನು ಉಳಿಸಲು ಬಳಸಬೇಕು.
ಇಲ್ಲಿಯ ಮಕ್ಕಳು ತುಂಬಾ ತೆಳ್ಳಗಿನ ಬಟ್ಟೆ ಧರಿಸಿ, ಕಾಲಿಗೆ ಮರದ ಚಪ್ಪಲಿಗಳನ್ನು ತೊಟ್ಟು, ಅತ್ತಿಂದಿತ್ತ ಓಡಾಡುತ್ತಿರುತ್ತಾರೆ: ಅವರ ಬಳಿ ಕೋಟುಗಳಿಲ್ಲ, ಹ್ಯಾಟುಗಳಿಲ್ಲ. ಕಾಲುಚೀಲಗಳಿಲ್ಲ. ಅವರಿಗೆ ಯಾರೂ ಸಹಾಯವನ್ನು ಮಾಡುವುದಿಲ್ಲ. ಅವರ ಹೊಟ್ಟೆಗಳು ಹಸಿದಿವೆ. ಆ ವೇದನೆ ತಡೆಯಲು ಅವರು ಕೊಳೆತ, ಒಣಗಿದ ಕ್ಯಾರೆಟ್‌ಗಳನ್ನು ಜಗಿಯುತ್ತಾರೆ, ತಮ್ಮ ಚಳಿ ಹೊದ್ದ ಮನೆಗಳಿಂದ ಕೊರೆವ ಚಳಿಯ ಬೀದಿಗಳಿಗೆ ಹೋಗುತ್ತಾರೆ. ಶಾಲೆಗೆ ಹೋದಾಗ, ಅಲ್ಲಿ ಇನ್ನೂ ಕೊರೆವ ಚಳಿಯ ತರಗತಿಗಳಲ್ಲಿ ನಡುಗುತ್ತಾರೆ. ಹೌದು, ಹಾಲಂಡಿನಲ್ಲಿ ಕಾಣುವ ಇದಕ್ಕಿಂತಲೂ ಧಾರುಣ ಸಂಗತಿ ಎಂದರೆ ಅಲ್ಲಿ ಲೆಕ್ಕವಿಲ್ಲದಷ್ಟು ಮಕ್ಕಳು ದಾರಿಯಲ್ಲಿ ಹೋಗುವ ದಾರಿಹೋಕರನ್ನು ತಡೆದು, ತುಂಡು ಬ್ರೆಡ್ಡಿಗಾಗಿ ಭಿಕ್ಷೆ ಬೇಡುತ್ತಾರೆ. ಯುದ್ದ ಉಂಟುಮಾಡಿದ ಈ ಎಲ್ಲ ಸಂಕಟಗಳಿಗೆ ನನ್ನಿಂದೇನಾದರೂ ಮಾಡುವಂತಿದ್ದರೆ, ಹೀಗೆ ಯೋಚಿಸುತ್ತಾ ಬರಿಯ ಖಿನ್ನತೆಗೆ ನನ್ನನ್ನೆ ನಾನು ಈಡುಮಾಡಿಕೊಳ್ಳುತ್ತೇನೆ. ಈಗ ಈ ಕಾರ್ಪಣ್ಯಗಳಿಗೆಲ್ಲ ಒಂದು ಕೊನೆ ಬರುವವರೆಗೆ ನಾವು ಶಾಂತಚಿತ್ತದಿಂದ ಕಾಯುವುದನ್ನು ಬಿಟ್ಟು ಬೇರೇನೂ ಮಾಡಲಾಗದು. ಯಹೂದಿಗಳು, ಕ್ರೈಸ್ತರು ಇದಕ್ಕಾಗಿಯೇ ಕಾಯುತ್ತಿದ್ದಾರೆ, ಇಡೀ ಜಗತ್ತು ಇದನ್ನೆ ಕಾಯುತ್ತಿದೆ, ಬಹಳಷ್ಟು ಜನರು ಕಾಯುತ್ತಲೇ ಇದ್ದಾರೆ ಸಾವಿಗಾಗಿ..
ನಿನ್ನ,
ಆನ್
*****






