(೧)
ನೀನೊಂದು ಪಾರಿವಾಳ; ನಾನೊಂದು ಪಾರಿವಾಳ.
ಗೂಡುಗಟ್ಟಿದೆವಿಲ್ಲಿ ಬಂದು ಮುಗಿಲ ಮೇಲಿಂದಿಳಿದು.
ಒಲವಿನ ದನಿಯಿ೦ದೊರ್ವರೊರ್ವರನು ಕರೆದೆವು.
ಒಸೆದೆವು, ಕನಸುಗಳ ಕಟ್ಟಿದೆವು, ತುಟಿಗೆ ತುಟಿಯನಿಟ್ಟೆವು.
ತತ್ವಜ್ವಾನವಿರಲಿಲ್ಲ ನಮ್ಮ ನಲುಮೆಯಲ್ಲಿ.
ಪಾಂಡಿತ್ಯವಿರಲಿಲ್ಲ ನಮ್ಮ ಪ್ರೀತಿಯಲ್ಲಿ.
ವೇದಾಂತವಿರಲಿಲ್ಲ ಪ್ರೇಮಸಂವಾದದಲ್ಲಿ.
ಅರ್ಥವಿಲ್ಲದ ಮಾತಿನಲ್ಲಿ ಸಾರ್ಥಕತೆಯ ಕಂಡೆವು.
ತುದಿಮೊದಲಿಲ್ಲದೆ ತೊದಲಿದೆವು ಬಾಳ್ವೆಯ ಸವಿಗನಸು ಕಟ್ಟಿ.
ಓ! ಎನ್ನ ಪಾರಿವಾಳ!
ನನ್ನ ನಿನ್ನ ಗೂಡಿನಲ್ಲಿ ಪಡಿನುಡಿಯಲಿ ನಸುಕಿನ ಹಾಡು.
ನನ್ನ ನಿನ್ನ೦ತರಾಳದಲ್ಲಿ ಚಿಗಿಯಲಿ ಬಾಳಿನ ಬೇರು.
ಗೂಡದು ಮಣ್ಣುಗೂಡಿದಾಗ, ಮುಗಿಲೆ ನಮ್ಮ ನಾಡಾದಾಗ,
ಸಂಸಾರವೆಲ್ಲ ಕನಸಾದಾಗ,
ಕಾಣಿಸಲಿ ದಾರಿಹೋಕರಿಗೆ ನಾವಿಬ್ಬರೊಸೆದಿದ್ದ ಪಾಂಗು,
ಕೇಳಿಸಲಿ ಪಥಿಕರಿಗೆಲ್ಲ ನಾವು ನಲಿದುಲಿದ ರಾಗ!
ಓ! ಎನ್ನ ಪಾರಿವಾಳ!
(೨)
ಓ! ನನ್ನ ಅಂಗೈಯ್ಯ ಅರಗಿಣಿಯೆ!
ಪಂಚಪ್ರಾಣಗಳ ಪಂಚವರ್ಣಾಮೃತವೆ!
ಬಗೆಬಗೆಯ ಮಾತುಗಳನು ನೀನು ಕಲಿಯಬೇಕೆಂದೆ.
ಕಾವ್ಯಶಾಸ್ತ್ರಗಳನು ನೀನು ಪಠಿಸಬೇಕೆಂದೆ.
ನಾನೊಬ್ಬ ಪಂಡಿತನಾಗಿ ನಿನ್ನನು ಪಂಡಿತವಕ್ಕಿಯಾಗಿಸಲೆಳಸಿದೆ!
ಇದೆಂಥ ಹುಚ್ಚು! ಎಂತಹ ಕುರುಡುತನ!
ಪ್ರೇಮದ ರಹಸ್ಯವನೆ ತಿಳಿಯದೆ ಹೋದೆನಲ್ಲ!
ಮನೆಯ ಪಂಜರದಲ್ಲಿ ಸೆರೆಸಿಕ್ಕು ಮಾತು ಕಲಿಯುವ ಹಕ್ಕಿಯಲ್ಲ ಪ್ರೀತಿ:
ಹಸಿರಿನಲ್ಲಿ ಹಸಿರಾಗಿ ಬೆರೆತು ಒಡನುಡಿಯುವ ಮಹಾಶಕ್ತಿಯದು!
ಅಡವಿಯ ಹಕ್ಕಿ! ಏ! ನನ್ನ ಅರಗಿಣಿಯೆ!
ನಿನ್ನ ನಾಡಿನಲೊಯ್ದು ಪ್ರೇಮಮಂತ್ರವನ್ನೂದು,-ಈ ಕಲಿತ ಕಿವಿಗಳಲ್ಲಿ!
ತಳಿರಂತೆ ಮಲಮಲವೆನ್ನಿಸು ಮಲಿನವಾದ ಜೀವವಿದನು.
ಮೋಹಿನಿ ಕರೆದೊಯ್ಯು ನನ್ನ ಕಲಿತವರ ಸೆರೆಮನೆಯಿಂದ!
(೩)
ಓ! ನನ್ನ ಕೋಕಿಲ!
ನಿನ್ನ ಕುಕಿಲು ಕೇಳಲಿ ತಾಯ್ನಾಡ ಮಾಮರದಿಂದ.
ಉರ್ಮಿಳೆಯಂತಹ ನಿರ್ಮಲ ಧ್ವನಿಯೆ!
ಅಖಂಡವಾಗಿ ನೆಲಿಸು ಕರ್ಣರಂಧ್ರಗಳಲ್ಲಿ!
ಸೋಗುನವಿಲುಗಳ ಕಂಡೆನಿಲ್ಲಿ ಸಮುದ್ರದಾಚೆ:
ದನಿ ತೆಗೆದರೆ ಕಿವಿ ಮುಚ್ಚಬೇಕು!
ಒಯ್ಯಾರದ ಅರಸಂಚೆಗಳ ನೋಡಿದೆ,-
ಗೋಣು ಮುರಿಯುವದ ಕಂಡರೆ ಪ್ರಾಣವ ಹಿಂಡಬೇಕೆನಿಸುವದು.
ನಿನಗಿಲ್ಲದ ಚೆಲುವಿಕೆವೆತ್ತ ಬೆಳಕ್ಕಿಗಳ ಸಾಲು ಕಂಡೆ:
ಬೆಳವಗಳ ನೋಡಿದೆ
ಗೊರವಂಕಗಳ ಗರಿಯೆಣಿಸಿದೆ,
ಬುಲ್ ಬುಲದ ವಿಡಾಯವ ಕೇಳಿದೆ:
ಕಣ್ಕಿವಿಗೆ ಬಣ್ಣ-ನುಣ್ಣವಹುದಿವೆಲ್ಲ-
ಒಳಗಣ್ಣಿಗೆ ಮಾತ್ರ ಬರಿ ಸುಣ್ಣ!
ನಾಟ್ಯವೇನು ಜೀವಜೀವದ ಬದುಕೆ?
ರೂಪವೇನು ಪ್ರಾಣಪದಕವೆ?
ಓ! ನನ್ನ ಕೋಕಿಲ!
ಕುಕಿಲು ಮೊದಲಗಿತ್ತಿಯಂತೆ ತಾಯ್ನಾಡ ಮಂಟಪದಿಂದ!
(೪)
ಗಮಗಮಿಸು ನನ್ನ ಸುಗಂಧರಾಜಿಯೆ!
ಅರಳುತರಳಿಸು ಓ! ಸೂರ್ಯಪಾರಿಜಾತವೆ!
ತೆನೆತೆನೆಯಾಗು ಕಾಮಕಸ್ತೂರಿ!
ರೇಶಿಮೆಯ ರಶ್ಮಿಯಾಗು ಸುಂದರಿಹೂವೆ!
ನಿನ್ನ ಪರಿಮಳವೆ ನನ್ನ ಸೌಭಾಗ್ಯ.
ನಿನ್ನ ವಿನಯವೆ ನನ್ನ ಸಂಪತ್ತಿ.
ಯಾವ ಕುಸುಮಗಳು ಸರಿಯಾದಾವು,-ನನ್ನ ವನಸುಮಕೆ?
ವಿಲಾಯತಿಯ ಚಂಡುಹೂವ ನೋಡಿದೆ,
ನೀಲಿ ಹೂವ ಕಂಡೆ,
ತಿಳಿನೀಲಿ ಹೂವ ಚೆಲುವ ಮನಸಿನಲಳೆದೆ.
ಕೌಸ್ಲಿಪ್, ಹೇರಬೆಲ್,
ಪ್ರಿಂರೋಜ್, ಡೇಫೊಡಿಲ್,
ಫಾಃ:ಕ್ಸಗ್ಲೊವ್ಹ್, ಘಾಃ:ರಗೆಟ್ ಮಿ ನಾಃಟ್
ರೋಜ್‌ಮೆರಿ, ಬಟರ್‌ಕಪ್,
ಮೇ ಬ್ಲಾ:ಸಮ್, ಲಿಲಿ,-
ಕಾಮನಬಿಲ್ಲ ಬಣ್ಣ,
ಹೂಬಿಸಿಲ ಬಣ್ಣ,
ಆರಿಶಿಣ ಕಂಕುಮ,
ಮದರಂಗಿ ಕೆಂಪು,-
ಏನಿದ್ದರೇನು?
ಗಂಧವಿಲ್ಲದ ಹೂವೆಂತು ಅಂದವಾಗಬಹುದು?
ವಿಲಾಯತಿಯ ಗುಲಾಬಿಗೆ ಸಹ ಸುಗಂಧದ ಸೋಂಕಿಲ್ಲ!
ಓ! ನನ್ನ ವನಮಲ್ಲಿಗೆ!
ನಿನ್ನ ವನಮಾಲೆಯೇ ಮಾಲೆ!
ಓ! ನನ್ನ ಸೂಜಿಮಲ್ಲಿಗೆ!
ನಿನ್ನ ಕಿರಣವೆ ಕಿರಣ!
ಓ! ನನ್ನ ದುಂಡುಮಲ್ಲಿಗೆ!
ನಿನ್ನ ಕಿರೀಟವೆ ತಾರಾಕಿರೀಟ!
ನಿನ್ನ ಪರಿಮಳವಿಡಗಲಿ ನನ್ನ ಪಂಚಪ್ರಾಣಗಳಲ್ಲಿ!
*****









