ಬಿಡುಗಡೆ

ಬಿಡುಗಡೆ

ಇಂದು ಯೋಚನೆ ಕೊನೆಯಿಲ್ಲದೆ ಸಾಗಿತ್ತು. ಯಾವ ದಿಕ್ಕನ್ನೂ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಯೋಚಿಸುತ್ತಿದ್ದಂತೆ ವಿಷಯ ಹೆಚ್ಚು ಸಂಕೀರ್ಣಗೊಂಡಂತೆ ಯೋಚನೆಗೆ ಯಾವ ಸ್ವರೂಪವೂ ಬರುತ್ತಿರಲಿಲ್ಲ. ಈಗ ಅನೇಕ ದಿನಗಳಿಂದ ಮನಸ್ಸಿನಲ್ಲಿ ಉಂಟಾಗಿರುವ ಅಸ್ವಸ್ತತೆಗೆ ಕಾರಣವನ್ನು ಶೋಧಿಸುವುದರಲ್ಲಿ ತನ್ನ ಅನೇಕ ಮಹತ್ವದ ಕ್ಷಣಗಳು ಕಳೆದು ಹೋದುದರ ಅರಿವೇ ಆಗುತ್ತಿರಲಿಲ್ಲ. ಮನಸ್ಸು ಕೆಡುತ್ತಿರುವಂತೆ ಶರೀರದ ಅವಯವಗಳಲ್ಲಿಯೂ ವ್ಯತ್ಯಾಸವಾಗುವ ಅನುಭವ ಅವಳಿಗೆ ತನ್ನ ಕೆಲಸದಲ್ಲಿ, ಚಟುವಟಿಕೆಗಳಲ್ಲಿ ತೊಡಗಿರುವಾಗ ಆಗುತ್ತಿತ್ತು. ತನ್ನ ಸ್ವಭಾವದಲ್ಲಿ ನಡವಳಿಕೆಗಳಲ್ಲಿ ಆದ ವಿಚಿತ್ರ ಪರಿವರ್ತನೆ ಆಕೆಯನ್ನು ಚಿಂತೆಗೆ ಒಳಪಡಿಸಿತ್ತು. ಎಂದು ಇದರಿಂದ ತನ್ನ ಮನೋ ಆರೋಗ್ಯಕ್ಕೆ ಬದುಕಿಗೆ ಎಂತಹ ವಿಪತ್ತು ಬರುವುದೋ ಎಂಬ ಭಯವೂ ಕೆಲವೊಮ್ಮೆ ಕಾಡುತ್ತಿತ್ತು. ತನ್ನಲ್ಲಿಗೆ ಬರುವ ರೋಗಿಗಳಿಗೆ ಅವರ ಕಾಯಿಲೆಗಳನ್ನು ಗುರುತಿಸಿ ಔಷದ ಕೊಟ್ಟು ಗುಣಪಡಿಸುತ್ತ ಇರುವ ಭ್ರಮೆಯಲ್ಲಿ ತಾನೇ ರೋಗಿಯಾಗಿ ಬಿಡುವೆನೋ ಎನ್ನುವ ಒಂದು ಸಂದೇಹವೂ ಅವಳ ಯೋಚನೆಯಲ್ಲಿ ಸೇರಿಕೊಂಡು ತೊಂದರೆ ಕೊಟ್ಟಿತು. ಮಧ್ಯಾಹ್ನದಲ್ಲಿ ಎರಡು ಗಂಟೆಯ ತನಕವೂ ಯೋಚಿಸುತ್ತ ಕುಳಿತು ಕೊಂಡಿದ್ದವಳು ಮನೆಗೆ ಹೋದಾಗ ತಡವಾಗಿತ್ತು. ಸಂಜೆ ಆರರಿಂದ ಈಗ ಹತ್ತು ಗಂಟೆಯ ತನಕ ಒಬ್ಬೊಬ್ಬರೇ ಬಂದ ಪೇಶಂಟ್ಸಗಳನ್ನು ಕಳಿಸಿಯಾದ ಮೇಲೂ ತನ್ನ ಸುತ್ತುವ ಕುರ್ಚಿಯಲ್ಲಿ ಕುಳಿತು ಕೊಂಡು ಯಾವ ಯೋಚನೆಯಲ್ಲಿ ಮಗ್ನಳಾಗಿರುವೆನೆಂದು ಊಹಿಸಲಾಗಲಿಲ್ಲ. ಮೈಗೆ ಹಾಕಿಕೊಂಡ ಎಪ್ರೊನ್ ಕುತ್ತಿಗೆಯಲ್ಲಿ ನೇತಾಡುವ ಸ್ಟೆತೋಸ್ಕೋಪು ಹಾಗೆಯೇ ಇತ್ತು. ಕಣ್ಣೆದುರು ಮೇಜಿನಲ್ಲಿ ತೆರೆದ ಡೈರಿಯಲ್ಲಿ ಬರೆಯಬೇಕೆಂದಿದ್ದ ಲೆಕ್ಕಪತ್ರ ಮರವೆಗೆ ಸರಿದು ಏನೂ ತೋಚದಂತಾಗಿತ್ತು. ನಾಲ್ಕು ತಾಸಿನ ಕೆಲಸದಲ್ಲಿ ತನುಮನ ಸೋತು ಹೋದ ಭಾಸವಾಗಿ ತನಗಿನ್ನೂ ೨೬ ರ ಹರೆಯ ಎಂಬ ಸತ್ಯವೇ ಮರೆತು ಹೋಗಿತ್ತು. ಕಂಪೌಂಡರ್ ಹುಡುಗಿಯನ್ನು ಹೋಗಲಿಕ್ಕೆ ಹೇಳಿ, ಕ್ಲಿನಿಕ್‌ನ ಬಾಗಿಲನ್ನು ಅರ್ಧ ಮುಚ್ಚಿ ಏಕಾಂಗಿ, ಏಕಾಂತದಲ್ಲಿ ತಾನಿನ್ನೂ ಏಕೆ ಕುಳಿತು ಕೊಂಡಿದ್ದೇನೆ. ಆದ ಆಗುವ ಎಲ್ಲ ವಿಷಯಗಳನ್ನು ಕಡೆಗಣಿಸಿ ಬಿಂದಾಸ್ ಇರಬೇಕೆಂದು ಮಾಡಿದ ನಿರ್ಧಾರಗಳು ಏಕೆ ಮುರಿಯುತ್ತಾ ಇವೆ ಎಂದು ಗೊತ್ತಾಗದೆ ಅವಳು ಕುರ್ಚಿಯ ತಲೆಯಲ್ಲಿ ಅರ್ಧತಲೆಯನ್ನು ಚಾಚಿ ಹಣೆ ಮತ್ತು ನೆತ್ತಿಯಲ್ಲಿ ಎಡಗೈಯನ್ನು ಆನಿಸಿ, ಹಣೆಯಲ್ಲಿ ನೋವಿನ ಗೆರೆ, ಮುಖದಲ್ಲಿ ಮ್ಲಾನತೆಯನ್ನು ಹರಡಿ ರೆಪ್ಪೆ ಮುಚ್ಚಿ ಕುಳಿತಿರುವಾಗ ನಿಧಾನವಾಗಿ ಬಾಗಿಲನ್ನು ದೂಡಿ ಒಳಗೆ ಬಂದು ಹಾಗೆಯ ಬಾಗಿಲನ್ನು ಹಿಂದಕ್ಕೆ ಸರಿಸಿ ಅವಳು ಕುಳಿತು ಕುರ್ಚಿಯ ಹಿಂದುಗಡೆ ಸರಿದು ಚಾಚಿದ ಮುಖದ ಕೆನ್ನೆಯ ಮೇಲೆ ಬೆರಳುಗಳನ್ನು ನಯವಾಗಿ ಓಡಿಸಿ, ಕೆಂಪು ತುಟಿಗಳ ಸಂದಿನಲ್ಲಿ ಬೆರಳನ್ನು ಸರಿಸಿ, ಕುರ್ಚಿಯ ಒಳಗಿಂದಲೆ ಬಿಸಿಯಾಗಿ ಅಪ್ಪಿಕೊಂಡವನು ವಿಷ್ಣುವಲ್ಲವೇ? ಅವನ ಅಪ್ಪುಗೆಯಿಂದಲೆ ಮೈ ಪುಲಕಗೊಂಡು ತುಟಿಯನ್ನು ಅರಳಿಸಿ ನಿಡಿದುಸಿರು ಬಿಟ್ಟು ರೆಪ್ಪೆಮಿಟುಕಿಸದೆ ‘ನಿನಗೆಷ್ಟು ತಡ ಬರಲು, ನಿನ್ನನ್ನು ಕಾಯುತ್ತ ಬೇಸತ್ತು ಹೋಗಿದ್ದೇನೆ. ನನ್ನನ್ನು ಆದಷ್ಟು ಬೇಗಬಂದು ಸೇರಲು ಆತುರವಾಗುವುದಿಲ್ಲವೆ. ನನ್ನ ಮೇಲೆ ನಿನಗೆ ನಿಜವಾದ ಪ್ರೀತಿಯೇ ಇಲ್ಲ. ಇಗೋ ನೋಡು ನಾನಾದರೋ ಪೇಶಂಟುಗಳನ್ನೆಲ್ಲ ಬೇಗ ಓಡಿಸಿ ನಿನಗಾಗಿ ನಿನ್ನ ಗುಂಗಿನಲ್ಲಿ ಕಾದು ಕೂತಿದ್ದೇನೆ’ ಎಂದಾಗ ಅವನು ‘ನಾವಿನ್ನು ಒಂದೇ ಕಡೆಯಲ್ಲಿ ಕ್ಲಿನಿಕ್ ಮಾಡುವ, ನನ್ನದರಲ್ಲೆ ನಿನಗೂ ಜಾಗಮಾಡಿಕೊಡುತ್ತೇನೆ. ನಂತರ ಈ ಆತುರ, ನಿರೀಕ್ಷೆ ಎಲ್ಲ ಉಳಿಯುವುದಿಲ್ಲ. ಅದಕ್ಕಾಗಿ ಸ್ವಲ್ಪ ಖರ್ಚಿದೆ. ನೀನು ಇದಕ್ಕೆ ಕೊಡುವ ಬಾಡಿಗೆಯೂ ಉಳಿಯುತ್ತದೆ. ಕೊಟ್ಟ ಡಿಪೋಸಿಟ್ ವಾಪಾಸ್ ಸಿಗುತ್ತದೆ.’ ಎಂದು ಹೇಳುತ್ತ ಅವಳನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡಾಗ ಅವಳ ಮೈಯೆಲ್ಲ ಕರಗಿ ಅವನ ಬಾಹುವಿನೊಳಗೆ ಸೇರಿಕೊಂಡಿತು. ಅವಳು ‘ಮೊದಲು ನಾವೊಂದು ಸ್ವಂತದ ಮನೆ ಮಾಡುವ, ನಿನ್ನ ಮನೆಯಲ್ಲಿ ಏಕಾಂತವಿಲ್ಲ ಸ್ವಾತಂತ್ರ್ಯವಿಲ್ಲ. ಹಿರಿಯರ ಬಿರು ಮಾತುಗಳನ್ನು ಕೇಳುತ್ತ ದಿವಸಾಗಲು ನೊಂದುಕೊಂಡು ಮನಸ್ಸನ್ನು ಕೆಡಿಸಿಕೊಳ್ಳಬೇಕು’ ಎಂದು ಒಳ ಸೇರಿಕೊಂಡಾಗ ವಿಷ್ಣವಿನ ಅಪ್ಪುಗೆ ಸಡಿಲವಾದುದರ ಅನುಭವವಾಗಿ ಅವಳ ಮೈಯಲ್ಲಿ ತಂಪು ಹರಿಯಿತು. ಅವನು ನನ್ನ ಮನೆ, ನಮಗೊಂದು ಕೋಣೆ, ನಮ್ಮವರೆಲ್ಲ ಜೊತೆಯಿರುವಾಗ ಬೇರೆ ಮನೆಯ ಮಾತೇಕೆ. ಅದಕ್ಕೆ ಎಷ್ಟೊಂದು ಹಣ ಬೇಕಾಗುತ್ತದೆ ಗೊತ್ತ. ನಮ್ಮ ಸಂಪಾದನೆ ಸರೀ ಆಗುವಾಗ ಅದರ ಚಿಂತೆ ಮಾಡಿದರಾಯಿತು. ಆ ವಿಷಯ ನೀನು ಮತ್ತೆ ಮತ್ತೆ ಹೇಳಬೇಡ’ ಎನ್ನುತ್ತ ಅಪ್ಪುಗೆಯಿಂದ ಕೈಗಳನ್ನು ದೂರ ಸರಿಸಿ ಎದುರುಬಂದು ಕುಳಿತು ಇನ್ನು ಹೊರಡುವ ಎಂದನು. ಆರತಿಯ ಸಿಟ್ಟು ಮೂಗಿಗೇರಿತು. ‘ನಿನಗೆ ನಿನ್ನವರನ್ನು ಬಿಟ್ಟು ಹೊರಗೆ ಬರುವ ಮನಸ್ಸಿಲ್ಲ, ಮನೋಬಲವಿಲ್ಲ. ಅವರೆಲ್ಲ ನಿನ್ನನ್ನು ಕೊಂಡಾಡುತ್ತಾರೆ, ಪ್ರೀತಿಸುತ್ತಾರೆ. ನಾನು ಎಷ್ಟೆಂದರೂ ಹೊರಗಿನವಳು, ಕಲಿತವಳು. ನನ್ನ ತಾಯಿ-ತಂದೆ ಎಂದರೂ ಅವರಿಗೆ ಅಷ್ಟಕ್ಕಷ್ಟೆ. ಬಂದ ಹೆಣ್ಣನ್ನು ಸೊಸೆಯನ್ನು ಹೊರಗಿನವಳೆಂದು ವ್ಯವಹರಿಸುವ ಸಂಪ್ರದಾಯದವರು ನೀವೆಲ್ಲ’ ಎಂದು ಹೇಳಿದಾಗ ಎಷ್ಟು ಅಸಹನೆಯಿಂದ ‘ಸಾಕು ಈ ಮಾತೆಲ್ಲ, ನನ್ನನ್ನು ಕುಟುಂಬದಿಂದ ದೂರ ಮಾಡುವ ಪ್ರಯತ್ನ ನೀನು ಮಾಡಬೇಡ. ನಮ್ಮ ಸ್ಥಿತಿ ಸುಧಾರಿಸುವ ತನಕ ನೀನು ಅವರೊಡನೆ ಹೊಂದಿಕೊಂಡು ಇರಬೇಕು. ಚಲೋ….ಹೋಗುವ’ ಎಂದು ದೃಢ ಭಾವದಿಂದ ಹೇಳಿ ಎದ್ದಾಗ ‘ನೀನು ಹೇಡಿ ಅಯೋಗ್ಯ, ನಿನ್ನನ್ನು ಮದುವೆಯಾಗಿ ನಾನು ಕೆಟ್ಟೆ…’ ಎಂದು ತಲೆ ಝಾಡಿಸಿದಾಗ ಮುಚ್ಚಿದ ರೆಪ್ಪೆ ತೆರೆಯಿತು. ಎದುರಿನ ಕುರ್ಚಿಯಲ್ಲಿ ಯಾರೂ ಕಾಣಿಸಲಿಲ್ಲ. ಕೋಣೆಯಲ್ಲಿ ಶುಬ್ರ ವಿದ್ಯತ್ ಪ್ರಕಾಶದಲ್ಲಿ ಎಲ್ಲವೂ ಖಾಲಿಯಾಗಿ ಕಾಣಿಸಿತು. ತುಂಬಿ ಕೊಂಡಿದ್ದ ಕೋಣೆ ಖಾಲಿಯಾಗಿ ತನ್ನೊಬ್ಬಳನ್ನೇ ನಿರ್ದಯವಾಗಿ ಈ ಯೋಚನೆಯ ವಿಪಿನಾಂತರದಲ್ಲಿ ಬಿಟ್ಟು ಹೋದುದರ ಅರಿವಾಗಿ ಹತಾಶತೆಯಿಂದ ಎರಡೂ ಕೈಗಳನ್ನು ಮೇಜಿನ ಮೇಲೆ ಗುದ್ದಿದಳು. ಆಗ ಟೆಲಿಫೋನ್ ಗಂಟೆ ಭಾರಿಸಿತು. ಸ್ವಲ್ಪ ಹೊತ್ತು ರಿಸೀವರನ್ನೇ ನೋಡುತ್ತ ತಾನು ನಿರೀಕ್ಷಿಸುತ್ತಿದ್ದ ಕರೆಯೇ ಆಗಿರಬೇಕೆಂದು ನಿರುತ್ಸಾಹ ಉಂಟಾಯಿತು. ಮತ್ತೆ ನಯದ ಮಾತುಗಳು. ನಿಧಾನವಾಗಿ ಏರುತ್ತ ಕಲಹದ ಧ್ವನಿಯಲ್ಲಿ ಮುಕ್ತಾಯವಾಗಿ ರಿಸೀವರನ್ನು ಅಪ್ಪಳಿಸುವುದಕ್ಕೆ ಮನಸ್ಸು ಹಿಂದೇಟು ಹಾಕಿತು. ಗಂಟೆ ಭಾರಿಸುತ್ತಲೇ ಇತ್ತು. ಅವನಲ್ಲಿ ಮಾತಾಡದೆ ಹೋಗುವ ಮನಸ್ಸಿಲ್ಲದೇ ತಾನು ಕುಳಿತಿರುವುದು ಎಂದು ನಿಜವಾದರೂ ತಮ್ಮ ಮಾತುಕತೆ ಧೀರ್ಘವಾಗಿ ಬೆಳೆದು ಮುಗಿಯುವುದೇ ಜಗಳದಲ್ಲಿ ಎಂದು ರಿಸೀವರನ್ನು ಎತ್ತಲು ಹಿಂಜರಿದಳು. ಎಡಗೈ ಆಚೆ ಸರಿದು ರಿಸೀವರನ್ನು ಎತ್ತಿ ಸ್ವಲ್ಪ ಬಿಗಿಯಾಗಿಯೆ ಹೆಲೊ ಎಂದಳು. ಅದು ತಂದೆಯ ಸ್ವರವಾಗಿತ್ತು. ಅವರು ಕೆಲಸ ಮುಗಿಯಲಿಲ್ಲವೆ. ಕೂತಿರು, ನಾನು ಬರುತ್ತೇನೆಂದರು. ತಂದೆ ಬರುವ ತನಕ ಇನ್ನಷ್ಟು ಯೋಚಿಸಬಹುದು. ಆದರೆ ತಾನು ಯೋಚಿಸುವುದಾದರೂ ಏನನ್ನು. ಈ ಪೂರ್ತಿ ಒಂದು ವರ್ಷದಿಂದ ತಾನು ಅವನಿಂದ ದೂರ, ತಾಯಿ-ತಂದೆಯ ಜೊತೆಯಲ್ಲಿರುವ ಪ್ರತಿದಿನವೂ ಕಾಡುತ್ತಿರುವ ಯೋಚನೆಯ ಸ್ವರೂಪವೇನು, ಅದರ ಮೂಲ ಏನು ಎಂದೇ ಅರ್ಥವಾಗದೆ ಮನಸ್ಸಿನ ಗೊಂದಲವೇ ಹೆಚ್ಚಾಗುತ್ತಿರುವುದರ ಅರಿವು ಅವಳಿಗಾಗುತ್ತದೆ. ವಿಷ್ಣು ವಾರದಲ್ಲಿ ನಾಲ್ಕುದಿನವಾದರೂ ಮನೆಗೆ ಅಥವಾ ತನ್ನ ಕ್ಲಿನಿಕ್‌ಗೆ ಬಂದು ಹೋದರೂ ತಮ್ಮ ನಡುವಿರುವ ದೂರ, ಬಿರುಕುಗಳು ತುಂಬಿಕೊಳ್ಳುವ ಬಗೆಯೇ ಕಾಣದ ಪರಿಸ್ಥಿತಿಯಲ್ಲಿ ಏಕಾಕಿಯಾಗಿರುವಾಗ ಪ್ರತಿದಿನವೂ ತಲೆ ಕೆಡಿಸುವ ಯೋಚನೆಗಳು ಏಕೆ ಬರುತ್ತಿವೆ. ತನ್ನ ಕೆಲಸವನ್ನು ಬೇಗ ಮುಗಿಸಿ ಮಗುವಿನ ಮುಖ ನೋಡಲು ಮನೆಗೆ ಹೋಗುವ ಆತುರದ ಜೊತೆಯಲ್ಲಿ ತಾನು ಹೋಗುವುದು ತಂದೆಯ ಮನೆಗೆ ಎಂಬ ನಿರುತ್ಸಾಹ ಅವಳನ್ನು ಹಿಂದೆ ಜಗ್ಗುವಾಗ ಅಸಹಾಯಕತೆಯ ನೋವು ಉಂಟಾಗುತ್ತದೆ. ಹೋಗುವಾಗ ಟ್ಯಾಕ್ಸಿಯಲ್ಲಿ ತಂದೆ ಎಂದಿನಂತೆ ಎಲ್ಲರ ಜೊತೆಯಲ್ಲಿ ಸಹಿಸಿ ಬಾಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಪ್ರೇಮ, ತ್ಯಾಗ, ಸಹನೆ ಹೆಣ್ಣಿನಲ್ಲಿ ಒಳ್ಳೆಯ ಗುಣ ಮಟ್ಟದಲ್ಲಿ ಇರುವುದು ಅವಶ್ಯ. ಯಾವದೇ ವಸ್ತುವಿನ ಮೇಲೆ ತನ್ನ ಸಂಪೂರ್ಣ ಹಕ್ಕನ್ನು ತೋರಿಸುವುದು ಸ್ವಾರ್ಥವಾಗುತ್ತದೆ, ಹಟವಾಗುತ್ತದೆ. ನಿನ್ನ ಗಂಡನ ಮೇಲೆ ಅವನ ತಂದೆ-ತಾಯಿ, ತಂಗಿ ತಮ್ಮ ಇಷ್ಟ ಮಿತ್ರರಿಗೂ ಸ್ವಲ್ಪ ಪ್ರಮಾಣದಲ್ಲಿ ಹಕ್ಕಿದೆ ಎಂದು ಅವರೂ ಅದರ ಶೇರನ್ನು ಪಡಕೊಳ್ಳಲಿ ಎಂಬ ಹೃದಯವಂತಿಕೆಯನ್ನು ತೋರಿಸಬೇಕು’, ಎಂದು ಭೋದನೆಯ ಮಾತುಗಳನ್ನು ಹೇಳುತ್ತಿದ್ದರು. ಈ ವಿಷಯದಲ್ಲಿ ತಂದೆಗೂ ತನಗೂ ಆದ ವಾಗ್ವಾದಗಳ ನೆನಪಾಗಿ ಆರತಿ ಮಾತಾಡಲಿಲ್ಲ. ತಂದೆ ಮುಂದುವರಿಸಿದರು. ‘ನೀನು ಇಲ್ಲಿ ಅವನು ಅಲ್ಲಿ ಇದು ಸರಿಯಾದ ವ್ಯವಸ್ಥೆ ಅಲ್ಲ. ಹೆಣ್ಣಾದವಳು ಗಂಡನ ಮನೆಯಲ್ಲಿರುವುದೆ ಚಂದ. ನೀನು ಹೆರಿಗೆಗೆ ಬಂದವಳು ಮರಳಿ ಹೋಗುವ ಗಟ್ಟಿಮನಸ್ಸು ಮಾಡುವುದೇ ಇಲ್ಲ. ಈಗ ನಿನ್ನ ಮಗುವಿಗೂ ೧೫ ತಿಂಗಳಾಗಿದೆ. ಅವನು ಬಂದು ಹೋಗುವುದರಿಂದ ಮಾತ್ರ ಹೊಣೆಗಾರಿಕೆ ಮುಗಿಯುವುದಿಲ್ಲ. ಮಗು, ನೀನು ಅವನು ಜೊತೆಗಿರುವುದು, ಇತರ ಕೌಟುಂಬಿಕ ಕರ್ತವ್ಯಗಳನ್ನು ಯಥಾಶಕ್ತಿ ಮಾಡುವುದು ನಿಮ್ಮ ಸಹಜ ಧರ್ಮ. ಇದರಿಂದ ನಿಮ್ಮಲ್ಲಿ ಒಂದು ಪ್ರೇಮ ಬಂಧನ ಉಂಟಾಗುತ್ತದೆ. ಸುಖ ಸಂಸಾರಕ್ಕೆ ಇದು ಅವಶ್ಯ. ನಮಗೆ ನೀನು ಭಾರವಾಗುವುದಿಲ್ಲ. ಮಗು ನಮಗೆ ಚಿನ್ನದ ಬೊಂಬೆ. ಅಲ್ಲದೆ ಅವನು ಒಂದು ದಿನ ಬಾರದಿದ್ದರೆ, ಪೋನ್ ಮಾಡದಿದ್ದರೆ ನಿನ್ನ ಮೂಡ್ ಕೆಡುತ್ತದೆ. ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುತ್ತಿ. ನಿಮ್ಮಲ್ಲಿ ಸಾಕಷ್ಟು ಭಾವಬಂಧನವಿದೆ. ಆದರೆ ಅದು ಬಿರುಕು ಬಿಟ್ಟಿದೆ. ನೀವದನ್ನು ಹೊಂದಿಸಿ ಸರಿಮಾಡಿಕೊಳ್ಳಿ. ಅವರ ಕಳಕಳಿಯ ಮಾತುಗಳು ಗಂಭೀರವಾಗಿದ್ದವು. ಭಾರವಾದ ಸ್ವರದಲ್ಲಿ ತಡೆಯದೇ, ಅವಳ ಮುಖವನ್ನು ಸರಿಯಾಗಿ ವೀಕ್ಷಿಸದೆ ಹೇಳುವ ಮಾತುಗಳು ಅನುಭವದ ವೇದ ವಾಕ್ಯದಂತಿದ್ದವು. ಆರತಿಗೆ ಆ ಮಾತುಗಳು ತನ್ನನ್ನೆ ಅಪರಾಧದೆಡೆಗೆ ಎಳೆಯುವಂತೆ, ತನ್ನ ದೋಷವನ್ನೆ ಪ್ರತ್ಯೇಕಿಸಿ ಹೇಳುವಂತೆ ಕಂಡವು. ಈ ವರೆಗೂ ಮನಸ್ಸನ್ನು ಘಾಸಿಗೊಳಿಸಿದ್ದ ಆ ಗುಂಗು ತಲೆಯನ್ನು ಚಿಟ್ಟು ಹಿಡಿಸಿತ್ತು. ಕೆನ್ನೆಯಲ್ಲಿ ನೋವು ತೀಕ್ಷ್ಣವಾಗಿ ಹರಡುವಂತೆಯೆ ತಂದೆಯನ್ನು ಸಿಟ್ಟಿನಿಂದ ನೋಡಿದಳು. ಸರಿಯಾದ ನಾಲ್ಕು ಮಾತು ತಾನೂ ಆಡಬೇಕೆಂದು ನಾಲಿಗೆ ತವಕ ಪಟ್ಟಿತು. ಆದರೂ ನನ್ನನ್ನು ಯಾರೂ ಅರ್ಥಮಾಡಿ ಕೊಳ್ಳುವುದಿಲ್ಲ. ನಿಮಗೂ ನಾನು ಬೇಡವಾಗಿದೆ. ಹೊರೆಯಾಗಿದೆ. ಅವನು ತಾಯಿಯ ಆರೈಕೆಯಲ್ಲಿ ನಮ್ಮ ಗೋಜನ್ನೆ ಬಿಟ್ಟಿದ್ದಾನೆ. ನಾನು ಆ ಮನೆಗೆ ಇರಲು ಹೋಗುವಂತಿಲ್ಲ. ಅವನು ಬೇರೆ ಮನೆ ಮಾಡುವ ಲಕ್ಷಣ ಕಾಣುವುದಿಲ್ಲ. ಎಲ್ಲಿಯಾದರೂ ಆಸ್ಪತ್ರೆಯಲ್ಲಿ ಕೆಲಸ ಮಾಡಿ ದೂರದೂರಿನಲ್ಲಿ ಜೀವಿಸುತ್ತಿದ್ದೆ. ಚಿಕ್ಕ ಮಗುವೊಂದು ಬೇರೆ ಇದೆ…, ಅವಳಿಗೆ ಅಳು ತಡೆಯಲಾಗಲಿಲ್ಲ. ಮಾತು ನಿಲ್ಲಿಸಿ ಟ್ಯಾಕ್ಸಿಯ ಕಿಟಕಿಯಿಂದ ಮುಖ ಹೊರಗೆ ಚೆಲ್ಲಿದಳು, ನೀರು ತುಂಬಿದ ಕಣ್ಣಿಗೆ, ಹೈವೇಯ ಕತ್ತಲಿನಲ್ಲಿ ಏನೂ ಗೋಚರಿಸಲಿಲ್ಲ. ತನ್ನದೊಂದು ಟ್ಯಾಕ್ಸಿ ಮಾತ್ರ ಏಕಾಕಿಯಾಗಿ ಓಡುವಂತನಿಸಿ ಯಾವ ಗುರಿಯೂ ಕಣ್ಣಿಗೆ ಬೀಳಲಿಲ್ಲ.

ವಿವಾಹಾನಂತರ ಹೆಣ್ಣಿನ ಬದುಕಿಗೊಂದು ಹೊಸತಿರುವು ಬಂದು ಬಿಡುತ್ತದೆ. ಚಿಂತೆಯಿಲ್ಲದೆ ಸುಖವಾಗಿ ಕಳೆದ ಮೊದಲ ದಿನಗಳು ನಂತರ ಬರದೇ ಇರಬಹುದು. ಹೊಸದೇ ಆದೊಂದು ಪರಿಸರದಲ್ಲಿ ಹೊಸದಾಗಿ ಪರಿಚಯವಾದ ವ್ಯಕ್ತಿಗಳ ಸಂಪರ್ಕದಲ್ಲಿ ಬದುಕು ಯಾವ ದಿಕ್ಕನ್ನು ಹಿಡಿಯ ಬಹುದೆಂಬ ವಿಷಯ ಕಲನಾತೀತವಾಗಿರುತ್ತದೆ. ಆರತಿ ಮೆಡಿಕಲ್ ವಿದ್ಯಾಭ್ಯಾಸದ ಐದು ವರ್ಷಗಳನ್ನು ಹೊರ ಊರಿನ ಆವರಣದಲ್ಲಿ ಸಮಪ್ರಾಯದ ತರುಣ ತರುಣಿಯರ ಜೊತೆಯಲ್ಲಿ ಕಳೆದಳು. ಮೊದಮೊದಲು ಅನಾಥ ಪ್ರಜ್ಞೆಯ ನೆರಳಿನಲ್ಲಿ ವಿದ್ಯಾರ್ಥಿ ಜೀವನ ದುರ್ಬರವಾದರೂ ಕೊನೆಯ ವರ್ಷಗಳಲ್ಲಿ ಓದಿನ ಬಿರುಸಿನಲ್ಲಿ ದಿನಗಳು ಸುಖದಾಯಕವಾಗಿದ್ದವು. ಡಿಗ್ರಿಯ ನಂತರ ತಾವು ಆಯ್ದುಕೊಂಡ ವೈದ್ಯಕೀಯ ವೃತ್ತಿಯ ಪರಿಕಲ್ಪನೆಯನ್ನು ಮಾಡುತ್ತಿದ್ದಂತೆ ಕಚಕುಳಿಯ ಅನುಭವವಾಗುತ್ತಿತ್ತು. ಈ ದಿನಗಳಲ್ಲಿ ಆರತಿಯ ಜೀವನದಲ್ಲಿ ಜ್ಯೋತಿ ಎಂಬ ಸಹಪಾಟಿ ಮತ್ತು ಡಾ. ವಿನಯ ಇವರ ಪ್ರವೇಶವಾಗಿ ವೈಯಕ್ತಿಕ ಜೀವನದ ಹೊಸ ಆಯಾಮದ ಪರಿಚಯವಾಗ ತೊಡಗಿತ್ತು. ಜ್ಯೋತಿಯ ಸ್ನೇಹ ಅನ್ನೋನ್ಯವಾಗಿ ಬೆಳೆದು ಅತಿ ಚಿಕ್ಕ ವಿಷಯದ ಕುರಿತು ಕಾಳಜಿವಹಿಸಿ ಪ್ರೀತಿಸುವ, ಜಗಳಾಡುವ ಸೆಂಟಿಮೆಂಟಾಗಿ ಬಿಟ್ಟಿತು. ಇದೇ ಒಂದು ದಿನ ನಿಶ್ಚಿತ, ತರ್ಕಹೀನ ಜಗಳದಲ್ಲಿ ಪರ್ಯಾವ್ಯಸನಗೊಂಡು ಅವರ ಸ್ನೇಹ ಒಡೆಯಿತು. ಆರತಿಗೆ ಅನಾವಶ್ಯಕವಾಗಿ ದೊರಕಿದ ಮೊದಲ ಆಘಾತ ಜ್ಯೋತಿಯ ಬೊಯ್‌ಫ್ರೆಂಡಿನ ವಿಷಯದಲ್ಲಿ ತಾನು ರಿಮಾರ್ಕ ಹೇಳಿದ್ದು ತಪ್ಪೆಂದು ಅನೇಕ ಸಾರಿ ಅನಿಸಿತ್ತು. ಅದೊಂದು ಘಟನೆ ನೋವಾಗಿ ಅವಳ ಆಂತರ್ಯದಲ್ಲಿ ಸ್ಥಾಯಿಯಾಗಿ ನೆಲೆಸಿದ್ದ ಅನುಭವ ಅವಳಿಗೆ ಜೋತಿಯ ನೆನಪಾದಾಗಲೆಲ್ಲ ಆಗುತ್ತಿತ್ತು. ಡಾ.ವಿನಯ ಅವರಿಗೆ ಮೆಡಿಸಿನ್ ಹೇಳಿಕೊಡುತ್ತಿದ್ದ ಪ್ರೊಫೆಸರ್. ಆರತಿಯ ಬದುಕಿಗೆ ಬರುವ ಆಸಕ್ತಿಯನ್ನು ತೋರಿಸಿ ಮನಸ್ಸಿಗೆ ತುಂಬಾ ಹಚ್ಚಿಕೊಂಡ ವ್ಯಕ್ತಿ. ಅವಳು ಕೊನೆಯ ವರ್ಷದಲ್ಲಿದ್ದಾಗ ಅವಳ ಕಡೆಗೆ ಆಕರ್ಷಿತನಾಗಿ ಮಾತಾಡುವ ಅವಕಾಶಗಳನ್ನೆಲ್ಲ ಉಪಯೋಗಿಸಿ ಕೊಳ್ಳಲು ಚಡಪಡಿಸುತ್ತಿದ್ದ. ವಿನಯಗೆ ಆರತಿಯಲ್ಲಿ ಪ್ರೇಮವಾಗಿತ್ತು. ಇದರ ಸುಳಿವು ಸಿಕ್ಕಿದ ಆರತಿ ಆದಷ್ಟು ಆತನಿಂದ ದೂರ ಸರಿಯುವ ಪ್ರಯತ್ನವನ್ನೆ ಮಾಡುತ್ತಿದ್ದಳು. ಅವನು ತನ್ನ ಮನಸ್ಸು ವ್ಯಕ್ತ ಪಡಿಸಿದ ಸಂದರ್ಭಗಳಲ್ಲಿ ಆರತಿ ನಾಚಿ ಹೆದರಿಕೊಂಡು ಯಾವದೇ ಪ್ರತಿಕ್ರಿಯೆಯನ್ನು ತೋರಿಸದೆ ಜಾರಿಕೊಂಡಿದ್ದಳು. ವಿದಾಯ ಸಮಾರಂಭದ ಮೊದಲೊಂದು ಸಂಜೆ ಕಾಲೇಜಿನ ಗಾರ್ಡನಿನಲ್ಲಿ ಕುಳಿತು ವಿನಯ ಅವಳಿಗೆ ಮದುವೆಯ ಆಫರ್ ಕೊಟ್ಟ, ಆರತಿ ಎಷ್ಟೋ ಮೌನದ ಕ್ಷಣಗಳನ್ನು ಕಳೆದು ನಿರಾಕರಿಸಿದ್ದಳು. ಕ್ಷಮೆ ಬೇಡಿದ್ದಳು. ಅವಳಿಗೆ ತನ್ನ ಭವಿಷ್ಯದ ಕಲನೆ, ಜಾತಿಯ ಹೊರಗೆ ತಂದೆತಾಯಿಗಳು ನೊಂದು ಕೊಳ್ಳುವರೆಂಬ ಭಯ ಹಾಗೂ ತಾನು ಮಾನಸಿಕವಾಗಿ ಇದಕ್ಕೆ ತಯಾರಿಲ್ಲವೆಂಬ ಅನ್ವೆಶ್ಚಿಕ ಅರಿವು ಅಡ್ಡ ಬಂದಿತ್ತು. ಡಾ. ವಿನಯ ತುಂಬಾ ಹಚ್ಚಿಕೊಂಡಿದ್ದವನು ಒಂದು ಸಾರಿ ಜ್ಯೋತಿಯ ಜೊತೆ ಮಾತಾಡುತ್ತ ಕಣ್ಣೀರು ತುಂಬಿ ಕೊಂಡದ್ದನ್ನು ಜ್ಯೋತಿ ಆರತಿಗೆ ಮದುವೆಯಾದ ಸಂದರ್ಭದಲ್ಲಿ ಬರೆದಿದ್ದಳು.

ಮನೆ ಹತ್ತಿರ ಬರುತ್ತಿದ್ದಾಗ ತಂದೆ ಹೇಳಿದರು ‘ಮಗು ಮುದ್ದು ಮುದ್ದಾಗಿ ಆಡುತ್ತಿದೆ. ಇಂದು ‘ನಾನಾ’ ಎಂದು ಕರೆದು ಹೊರಗೆ ಹೋಗಲು ನನಗೆ ಶರ್ಟುತಂದು ಕೊಟ್ಟಿತು. ಅವರ ಮಾತು ತನಗೆ ಸಾಂತ್ವನ ನೀಡಲು ಹೇಳಿದ್ದೆಂದು ಅವಳಿಗೆ ತಿಳಿದು ‘ನಾಳೆ ನಾನು ಮನೆಯಲ್ಲೇ ಇದ್ದು ಆರಾಮ ಮಾಡುತ್ತೇನೆ. ವಿಷ್ಣು ಎರಡು ದಿನದಿಂದ ಬರಲಿಲ್ಲ. ಮಗುವನ್ನು ನೋಡುವ ಆಶೆಯೂ ಇಲ್ಲದ ಮೇಲೆ ನಾನೇನು ಮಾಡಲಿ… ನನಗೇನೂ ತೋಚುತ್ತಾ ಇಲ್ಲ. ನಾನು ಕಾಯಿಲೆ ಬಿದ್ದರೂ ಬೀಳ ಬಹುದು… ನಿಮ್ಮಲ್ಲಿ ನನಗೆ ಬೇಸರವಿಲ್ಲ. ನಿಮ್ಮನ್ನು ಬಿಟ್ಟರೆ ನನಗೆ ಬೇರೆ ಗತಿಯಾರು?’ ಎಂದು ಉದ್ವಿಗ್ನಳಾಗಿ ಹೇಳಿದಳು. ತಂದೆ ಬೆನ್ನು ಸವರಿ ‘ಮನೆ ಬಂತು ಇಳಿ, ಎಲ್ಲಾ ಸರಿಯಾಗುತ್ತೆ. ಅವನು ಬರಲಿ ಮಾತಾಡುವ’ ಎಂದರು.

ಮಾರನೆಯ ದಿನ ಅವಳು ತಲೆ ನೋವೆಂದು, ಮೈ ಬಿಸಿಯೆಂದು ಕ್ಲಿನಿಕ್‌ಗೆ ಹೋಗಲಿಲ್ಲ. ನಂತರ ಮೈಯಲ್ಲಿ ಜ್ವರ ಕಾಣಿಸಿಕೊಂಡು ಮೂರು ನಾಲ್ಕು ದಿನಗಳಲ್ಲಿ ಅದು ಚಳಿಜ್ವರಕ್ಕೆ ತಿರುಗಿತ್ತು. ಈ ದಿನಗಳಲ್ಲಿ ವಿಷ್ಣು ಎರಡು ಸಾರಿ ಬಂದು ಹೋದ. ೬ ನೆಯ ದಿನ ಆರತಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅವಳ ಪ್ರಜ್ಞೆಯೇ ಇಲ್ಲದ ಅವಸ್ಥೆಯನ್ನು ನೋಡಿ ತಂದೆ-ತಾಯಿ ಕಂಗಾಲಾದರು. ಮಗು ಅಳುವದನ್ನು ಹೆಚ್ಚಿಸಿತು. ಏನೂ ತಿಳಿಯದೆ, ದಿಕ್ಕು ಕಾಣದವನಂತೆ ವಿಷ್ಣು ವಿಚಿತ್ರ ನೋವನ್ನು ಅನುಭವಿಸುತ್ತಿದ್ದ. ಒಂದೇ ನೋಟದಲ್ಲಿ ಇವಳೇ ಆಗಬೇಕೆಂದು ನಿರ್ಧರಿಸಿದ್ದ ಆರತಿಯ ಸೌಂದರ್ಯ ಇಂದು ನಶಿಸಿ ಹೋಗಿದೆ. ಹತ್ತು ದಿನಗಳಲ್ಲಿಯೇ ಅವಳು ಸೊರಗಿದ ರೀತಿಯನ್ನು ನೋಡಿದರೆ ಅವಳದು ಮನೋರೋಗವೆಂದು ಯಾರಾದರೂ ಹೇಳಬೇಕು. ಡಾಕ್ಟರರೂ ಅವಳನ್ನು ಯಾವದೋ ಚಿಂತೆ ಕಾಡುತ್ತಿದೆ, ಅದನ್ನು ತಿಳಿದು ಕೊಳ್ಳುವ ಪ್ರಯತ್ನ ಮಾಡಿರಿ ಎಂದು ಹೇಳಿದ್ದಾರೆ. ಅವಳ ಜೊತೆ ತಂದೆ ಮಾತಾಡತೊಡಗಿದಾಗ ಅವಳು ಅವರ ಮುಖವನ್ನೇ ನೋಡಿ ಏನನ್ನೂ ಹೇಳದೆ ಕಣ್ಣೀರು ಸುರಿಸುತ್ತಾಳೆ. ಇದೇ ರೀತಿಯ ವರ್ತನೆಯಿಂದ ತಾಯಿಯ ಕರುಳನ್ನೂ ಉರಿಸುತ್ತಾಳೆ. ಮದುವೆಯಾದ ನಾಲ್ಕು ವರ್ಷಗಳಲ್ಲಿ ಅವಳಿಗೆ ಯಾವ ಸುಖವೂ ಸಿಗಲಿಲ್ಲ. ಮೆಚ್ಚಿ ಮದುವೆಯಾದ ಗಂಡನಿಂದ ಅಪೇಕ್ಷಿತ ಏನೂ ಲಭಿಸಲಿಲ್ಲ. ತಾನು ಬಾಡಿಗೆಗೆ ಮಾಡಿ ಕೊಟ್ಟ ಕ್ಲಿನಿಕ್‌ನಲ್ಲೂ ಅವಳ ಆಸಕ್ತಿ ಹೋಗಿದೆ. ಬಹಳ ಸೂಕ್ಷ್ಮ ಮತ್ತು ನಾಜೂಕಾದ ಅವಳ ಭಾವನೆಗಳಿಗೆ ಮದುವೆಯಾದ ನಂತರ ನೋವೇ ಸಿಕ್ಕಿತು. ಇದನ್ನೇ ಯೋಚಿಸಿ ಅವಳಿಂದು ಹಾಸಿಗೆ ಹಿಡಿದಿದ್ದಾಳೆ ಎಂದು ತಂದೆ ಅವಳ ಮದುವೆ ಮಾಡಿದ ಗಳಿಗೆಯನ್ನು ನೆನೆದು ಪರಿತಪಿಸುತ್ತಾರೆ.

ಮಗುವನ್ನು ತೊಡೆಯಲ್ಲಿಟ್ಟು ವಿಷ್ಣು ಅವಳ ಪಕ್ಕದಲ್ಲಿ ಕೂತಿದ್ದಾನೆ. ಬಹಳ ಹೊತ್ತಿನ ನಂತರ ಅವಳು ಮಗ್ಗಲು ಬದಲಿಸಿ ಅವನನ್ನು ನೋಡುತ್ತಾಳೆ. ಕಳೆಗುಂದಿದ ಮುಖ ಊದಿಕೋದ ಕಣ್ಣು ಅವಳನ್ನು ಬಹಳ ದಿನದ ರೋಗಿ ಎಂಬುದನ್ನು ತೋರಿಸುತ್ತದೆ. ಮಗುವನ್ನು ನೋಡಿ ಅವಳಿಗೆ ಅಳು ಬಂದಿತು. ಕಡೆಗಣ್ಣಿನಿಂದ ಕಂಬನಿ ಹರಿಯಿತು. ಕೈ ಮುಂದು ಮಾಡಿ ಮಗುವನ್ನು ಮುಟ್ಟ ಬಯಸಿದಳು. ಅದು ತನ್ನ ಮಮ್ಮಿಯ ಸ್ಥಿತಿಯನ್ನು ನೋಡಿ ಅಂಜಿ ತಂದೆಯ ಎದೆಗೆ ಅಂಟಿಕೊಂಡಿತು. ಆರತಿಯ ಹೃದಯದ ಯಾತನೆ ಹೆಚ್ಚಿ ಲಘುವಾಗಿ ನರಳಿದಳು. ವಿಷ್ಣು ಅವಳ ತಲೆ ನೇವರಿಸಿದ. ಇವಳ ಅವಸ್ಥೆಗೆ ತಾನೆ ಕಾರಣವೆಂದು ಅವನ ಮನಸ್ಸು ನೋಯುತ್ತಿತ್ತು. ಹಣೆಗೆ ಕೈ ಹಚ್ಚಿ ಹೇಗಿರುವಿ ಎಂದು ಇಂಗ್ಲೀಷ್‌ನಲ್ಲಿ ವಿಚಾರಿಸಿದ. ಅವಳು ಮೂಕವಾಗಿ ದೃಷ್ಟಿ ಸೂಚಿಯಿಂದ ಸರಿಯಾಗಿರುವೆನೆಂದಳು. ಈಗ ಹದಿನೈದು ದಿವಸಗಳಿಂದ ಒಂದು ಮಾತನ್ನೂ ಆಡದ ತನ್ನ ನೆಚ್ಚಿನ ಗಂಡನ ವರ್ತನೆಯ ಜ್ಞಾನವೇ ಅವಳಿಗಾಗಲಿಲ್ಲ. ತನ್ನವರ ಪಾರಿವಾರಿಕ ಬಂಧನದಲ್ಲಿ ಸಿಕ್ಕಿ ಕೊಂಡಿರುವ ಅವಳ ವಿವಶತೆಯ ಛಾಯೆಯನ್ನೆ ಅವನ ಸಹವಾಸದ ಸಂದರ್ಭದಲ್ಲೆಲ್ಲ ಕಂಡಿದ್ದಳು. ಸುಮಾರು ಎರಡು ವರ್ಷಗಳಿಂದ ದೂರವಾದ ದಾಂಪತ್ಯದಿಂದ ಅವನು ಶರೀರ ಮತ್ತು ಮನಸ್ಸಿನಿಂದ ತನ್ನಿಂದ ದೂರವಾಗಿದ್ದಾನೆ. ಇದು ಅವನಿಗೆ ಹೇಗೆ ಸಹನೆಯೋ. ಇಂತಹ ಸುದೃಢ ಯುವಕರು ತಮ್ಮ ಕರ್ತವ್ಯದಿಂದ ವಿಮುಖರಾಗಿ ಹೆಂಡತಿ ಮಕ್ಕಳನ್ನು ಕಡೆಗಣಿಸಿ ಏನನ್ನೂ ಸಾಧಿಸುವರೊ. ಜ್ವರದ ಗುಂಗಿನಲ್ಲಿ ಅವಳಿಗೆ ಡಾ. ವಿನಯನ ನೆನಪಾಗಿತ್ತು. ಅವನು ಸ್ವತಂತ್ರ ಜೀವಿಯಾಗಿದ್ದ. ಸ್ವಂತ ಮನೆ, ಕ್ಲಿನಿಕ್ ಇದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಅವನು ಪ್ರೀತಿಯನ್ನು ಅರ್ಪಣೆಯ ಭಾವದಿಂದ ಕೊಡಲು ಮುಂದಾದವನು. ವಿಷ್ಣು ಮೊದಲಿನಿಂದಲೂ ತನ್ನ ಪರಿವಾರದ ಒತ್ತಡದಿಂದಲೆ ಹೆಂಡತಿಯನ್ನು ವ್ಯವಹರಿಸಿಕೊಂಡು ಬಂದಿದ್ದಾನೆ. ಆ ಒತ್ತಡದಿಂದ ಹೊರಬಂದು ಸ್ವಂತದ ತನ್ನ ಕಿರು ಪರಿವಾರವನ್ನು ಕಟ್ಟಲು ಅವನಿಂದ ಸಾಧ್ಯವಾಗಲಿಲ್ಲ. ಬಹುಶ ಹೊಣೆ ಹೊರಲು ಮನಸ್ಸಿಲ್ಲದ ಕೌಟುಂಬಿಕವಾಗಿ ಪರಾವಲಂಬನೆಗೆ ಒಳಗಾದ ಸೋಮಾರಿತನವೂ ಆಗಿರಬಹುದು. ಆರತಿ ಮತ್ತೊಮ್ಮೆ ಎದುರು ಸುಮ್ಮನೆ ಕುಳಿತಿರುವ ಗಂಡನ ಮುಖ ನೋಡಿದಳು. ಒಂದು ಬಗೆಯ ದಯೆ ಉಂಟಾಯಿತು. ತನ್ನ ಬಗೆಯನ್ನೇ ಬದಲಿಸಿ ಕೊಳ್ಳುವ ನಿರ್ಧಾರವನ್ನು ಅವಳು ತೆಗೆದು ಕೊಂಡಾಗಿತ್ತು. ತಂದೆಯ ಉಪದೇಶದಂತೆ ಎಲ್ಲವನ್ನು ಸಹಿಸಿ, ವ್ಯವಹಾರಿಕವಾಗಿ ಹೊಂದಿಕೊಂಡು ಸುಖ ಶಾಂತಿಯ ಶೋಧನೆ ಮಾಡುವುದೆ ಹೆಣ್ಣಿಗೆ ಉಳಿದ ದಾರಿಯಲ್ಲವೆ. ಈತನನ್ನು ತ್ಯಜಿಸಲು ಮನಸ್ಸು ಬಾರದು. ಅವಳು ಕ್ಷೀಣ ಸ್ವರದಲ್ಲಿ ನಮ್ಮನ್ನು ಎಂದು ಕರಕೊಂಡು ಹೋಗುತ್ತಿ, ಬಿಡುಗಡೆ ಎಂದಂತೆ’ ಎಂದು ಕೇಳಿದಳು. ವಿಷ್ಣುವಿಗೆ ಅರ್ಥವಾಯಿತೋ ಏನೋ ಮಾತಾಡದೆ ಸುಮ್ಮನೆ ಮಗುವಿನ ಜೊತೆ ಆಡಿದ. ಮಗುವನ್ನು ಅವಳ ಮೈ ಮೇಲೆ ಬಿಟ್ಟ ‘ಗುರುವಾರ ನಾವು ನಮ್ಮ ಮನೆಗೆ ಹೋಗುವ’ ಎಂದು ನಮ್ಮ ಶಬ್ದಕ್ಕೆ ಒತ್ತುಕೊಟ್ಟು ನಗೆ ಸೂಸಿದ. ಕಣ್ಣಿನಲ್ಲಿ ಮಿಂಚು ಹರಿದು ಆರತಿಯ ಮುಖವನ್ನು ಬೆಳಗಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇವು ಬೆಲ್ಲ
Next post ಸಮುದ್ರದಾ ಮ್ಯಾಗೆ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…