ಸಮುದ್ರದಾ ಮ್ಯಾಗೆ ಅಲೆಗಳು ಎದ್ದಾವೋ
ಎದ್ದು ಬಂದು ನಿನ್ನ ಮುಟ್ಟಿದವೊ| ಕನ್ನಡತಿ
ಪಾದಗಳ ಮೇಲೇರಿ ಮರಳಿದವೋ| ನಿನ್ನ
ಪಾದಗಳ ಮೇಲೇರಿ ಮರಳಿದವೋ //ಪ//
ಹೊಂಬಾಳೆಗಳು ತೂಗಿ ಬನದ ಬಾಳೆಯು ಬಾಗಿ
ತಂಪಾದ ಹೂಗಾಳಿ ಬೀಸಿದವೊ| ತಾಯೆ
ನಿನಗಾಗಿ ಹಾಡ ಎರೆದಾವೋ
ನೀರ್‍ಹಕ್ಕಿ ಹಾಡಿದವೊ ನಿನ್ನ ನೆತ್ತಿಯ ಮ್ಯಾಗೆ
ನೀಲಿ ಅಂಬರದಾಗೆ ಆಡಿದವೊ| ತಾಯೆ
ಚಿಲಿಪಿಲಿ ಮೇಳ ನಡೆಸಿದವೋ
ಬೆಳ್ಮುಗಿಲು ತೇಲಿದವೊ ಗಿರಿಶೃಂಗ ತಟ್ಟಿದವೊ
ಸ್ವಾತೀಯ ಮಳೆಯಾಗಿ ಸುರಿದಾವೊ| ತಾಯೆ
ಎಲ್ಲೆಲ್ಲೂ ಪಯಿರು ಚಿಮ್ಮಿದವೋ
ಭೂತಾಯ ಹಿರಿಮಗಳು ವನದೇವಿ ಬಂದವ್ಳೆ
ಹಚ್ಚ ಹಸಿರ ಸೀರೆ ಉಟ್ಟವ್ಳೆ| ತಾಯೆ
ನಿನ ಕುರಿತು ಪದವ ಹಾಡವ್ಳೆ
*****