ಪಕ್ಕದ ಪೇಟೆ ಕುಂಬಳೆ – ಅದು ಪೇಟೆಯ ಹೆಸರೂ ಹೌದು, ಕೆಲವು ಶತಮಾನಗಳ ಹಿಂದಿದ್ದು ಈಗಿಲ್ಲದ ಒಂದು ಸಣ್ಣ ಅರಸುಮನೆತನದ ಹೆಸರೂ ಹೌದು, ಈಚೆಗೆ ಮಂಗಳೂರಿಗೂ ಆಚೆಗೆ ಕೊಚ್ಚಿ ತಿರುವನಂತಪುರ ಮದರಾಸುಗಳಿಗೂ ಹೋಗುವ ಅತ್ಯಂತ ಹಳೆಯ ದಕ್ಷಿಣ ರೈಲ್ವೆ ಲೈನಿನ ರೈಲು ನಿಲ್ದಾಣದ ಹೆಸರೂ ಹೌದು. ಪಕ್ಕದಲ್ಲೇ ಹರಿಯುವ ಹೊಳೆಯ ಹೆಸರೂ ಹೌದು. ಕುಂಬಳೆ ಯಾರಿಗಾದರೂ ಬೂದು ಗುಂಬಳ ನೆನಪಿಗೆ ತರಬಹುದಾದರೂ ಕುಂಬಳೆ ಪ್ರಸಿದ್ಧವಾಗಿರುವುದು ಗೆದ್ದೆಯಲ್ಲಿ ಬೆಳೆದ ಎಳೆ ಸೌತೆಕಾಯಿ, ತೊಂಡೆಕಾಯಿ, ಹಾಗಲ, ಪಡವಲ, ಬೆಂಡೆ ಮುಂತಾದ ತರಕಾರಿಗಳಿಗೆ ಹಾಗೂ ಬೇಸಿಗೆಯಲ್ಲಿ ಯಥೇಚ್ಛ ಕೊಯ್ಲಿಗೆ ಬಂದು ಅಂಗಡಿ ಮನೆಗಳನ್ನೂ ಬಸ್ಸು, ರೈಲ್ವೆ ನಿಲ್ದಾಣಗಳನ್ನೂ ಆಕ್ರಮಿಸುವ ಕಲ್ಲಂಗಡಿ ಹಣ್ಣುಗಳಿಗೆ. ಅರ್ಧಚಂದ್ರನ ಆಕಾರದಲ್ಲಿ ಕೊರೆದು ಆಗ ತಾನೇ ಕಡಿದ ಮಾಂಸದಂತೆ ದ್ರವಿಸುವ ಈ ಹಣ್ಣುಗಳು ಮನುಷ್ಯರಿಗೂ ನೊಣಗಳಿಗೂ ಸಮಾನ ಆಕರ್ಷಣೆ. ಕುಂಬಳೆಯ ಆಕರ್ಷಣೆ ಇದೊಂದೇ ಅಲ್ಲ, ಸೊಗಸುಗಾರಿಕೆಯ ನಗರವಾದ ಮಂಗಳೂರಿನ ಸೆರಗಿ ನಂತಿರುವ ಈ ಸಮುದ್ರ ತೀರದ ಪೇಟೆ ತಟ್ಟಿದರೆ ತೆರೆಯುವಂತೆ ಎಷ್ಟೋ ಕಾಲದಿಂದ ಹೀಗಿದೆ ಎನ್ನಬಹುದು.
ಇದು ತಿಳಿದೇ ವೆಂಕಣ್ಣಯ್ಯ ತಮ್ಮ ಒಬ್ಬನೇ ಮಗ ವಾಸು – ವಾಸುದೇವ – ನನ್ನು ಕುಂಬಳೆಯಿಂದ ದೂರ ಇರಿಸಿದ್ದು. ಕುಂಬಳೆಯ ಸರಕಾರಿ ಶಾಲೆ ಹತ್ತಿರವಿದ್ದೂ ಅಲ್ಲಿಗೆ ಕಳಿಸದೆ ದೂರದ ಹಳ್ಳಿಯ ಶಾಲೆಗೆ ಕಳಿಸಿದ್ದು. ಒಂದೇ ಬಯಲಿನಿಂದ ಹುಡುಗರೆಲ್ಲರೂ ಚೀಲ ಹೆಗಲಿಗೇರಿಸಿಕೊಂಡು ಮಾರ್ಗಕ್ಕೆ ಬಂದರೆ ಉಳಿದವರೆಲ್ಲರೂ ಪಶ್ಚಿಮಾಭಿಮುಖವಾಗಿ ಕುಂಬಳೆಗೆ ಬಸ್ಸು ಹಿಡಿಯುತ್ತಿದ್ದರು; ವಾಸು ತಾನೊಬ್ಬನೇ ವಿರುದ್ಧ ದಿಕ್ಕಿಗೆ ಬಸ್ಸು ಹತ್ತಿ ಹೋಗಿ ಏನೇನೂ ಆಕರ್ಷಕವಲ್ಲದ ಹಳ್ಳಿಯ ಶಾಲೆ ತಲುಪುತ್ತಿದ್ದ. ಸಂಜೆ ಕೆಲವೊಮ್ಮೆ ಮನೆಗೆ ಮರುಳುತ್ತಿರುವಾಗ ಕುಂಬಳೆ ಹುಡುಗರು, ದಾರಿಯಲ್ಲಿ ಸಿಗುತ್ತಿದ್ದರು. ಅವರು ತಮ್ಮೊಳಗೆ ಸಿಗರೇಟು, ಸಿನಿಮಾ, ಹುಡುಗಿಯರ ಬಗ್ಗೆ ಮಾತಾಡುತ್ತಿರಬೇಕಾದರೆ ವಾಸುವಿಗೆ ಹೊಟ್ಟೆಯಲ್ಲಿ ಹಸೀ ಹುಣಿಸೆ ಕಿವುಚಿದಂತಾಗುತ್ತಿತ್ತು. ಕುಂಬಳೆ ಹುಡುಗರ ಆಟಪಾಠ, ಬಟ್ಟೆಬರೆ, ಮಾತುಕತೆ ಎಲ್ಲದರಲ್ಲೂ ಪೇಟೆಯ ಠೀವಿಯಿದ್ದಂತೆ ತೋರುತ್ತಿತ್ತು. ಕೊನೆಗೆ ಅವರನ್ನು ತಾನು ಅನುಕರಿಸಲಾರೆ, ಅವರ ಪಂಗಡಕ್ಕೆ ಸೇರಲಾರೆ, ಅವರನ್ನು ಎದುರಿಸಲಾರೆ, ಅನಿಸತೊಡಗಿ ಅವರಿಂದ ದೂರವೇ ಇರಹತ್ತಿದ. “ನಾನೂ ಕುಂಬಳೆಶಾಲೆಗೆ ಹೋಗುತ್ತೇನೆ.” ಎಂದು ಅಪ್ಪನನ್ನು ಅಂಗಲಾಚಿದರೂ ಏನೂ ಉಪಯೋಗವಾಗಲಿಲ್ಲ.
ಒಂದು ದಿನ ವಾಸು ಆಗುವುದಾಗಲೆಂದು ಶಾಲೆಬಿಟ್ಟು ಬಸ್ಸು ಹತ್ತಿದವನು ತನ್ನ ಜಾಗದಲ್ಲಿ ಇಳಿಯದೆ ನೇರ ಕುಂಬಳೆಗೆ ಹೋಗಿಯೇ ಬಿಟ್ಟ. ಪೇಟೆಯಲ್ಲಿಳಿದು ಮುಖ್ಯ ಬೀದಿಗಳಲ್ಲೆಲ್ಲ ಸುತ್ತಾಡಿ ಏನೇನು ಅಂಗಡಿಗಳಲ್ಲಿ ಏನೇನು ಇಟ್ಟಿದ್ದಾರೆ ಎಂದು ದೂರದಿಂದಲೇ ನೋಡಿದ. ಈ ಸಾಹಸಕ್ಕೆಂದೇ ಉಳಿಸಿಕೊಂಡಿದ್ದ ಹಣದಿಂದ ಒಂದು ಹೋಟೆಲಿಗೆ ಹೊಕ್ಕು ಕಿಟಿಕಿಯ ಬಳಿ ಕುಳಿತು ಕಾಫಿ, ಆಗತಾನೆ ಗಮಗಮಿಸುತ್ತಿದ್ದ ಎಣ್ಣೆಯಲ್ಲಿ ಕರಿದ ತಿಂಡಿ ಸೇವಿಸಿದ. ಮುಖ್ಯ ಬೀದಿಗೆ ತೆರೆದ ಕಿಟಿಕಿ ಅದು – ಅಷ್ಟು ದೂರಕ್ಕೆ ಪೇಟೆಯೆಲ್ಲಾ ಕಾಣಿಸುತ್ತಿತ್ತು. ಮಂಗಳೂರಿಂದಲೋ ಎಲ್ಲಿಂದಲೋ ದೂಳೆಬ್ಬಿಸುತ್ತ ಬಂದು ನಿಂತ ಬಸ್ಸೊಂದರಿಂದ ಜನ ಇಳಿಯುತ್ತಿದ್ದರು. ಅತ್ಯಂತ ಸಮೀಪದಿಂದ ಉಗಿಬಂಡಿಯ ಸಿಳ್ಳು ಹಾಗೂ ಕಡಲಿನ ಮರ್ಮರ ಕೇಳಿಸುತ್ತಿದ್ದುವು. ಗ್ರಾಮದೊಳಕ್ಕೆ ಕಾಲ್ನಡಿಗೆಯಲ್ಲೇ ಹೋಗಿ ಮೀನು ಮಾರಾಟ ಮಾಡುವ ಹೆಂಗಸರು ಖಾಲಿ ಬುಟ್ಟಿಗಳೊಂದಿಗೆ ವಾಪಸಾಗುತ್ತಿದ್ದರು. ವಾಸುವಿನ ಎದೆ ಡವಡವ ಹೊಡೆದುಕೊಳ್ಳುತ್ತಿತ್ತು-ಈ ಗುಟ್ಟನ್ನು ತಂದೆಯಿಂದ ಮುಚ್ಚಿಡುವುದು ಹೇಗೆ? ಯಾಕೆ ತಡವಾಯಿತೆಂದರೆ ಹೇಳುವುದೇನು? ಇನ್ನೊಮ್ಮೆ ಪೇಟೆಗೆ ಬರುವುದು ಯಾವಾಗ?ಹೀಗೆ ಚಿಂತಿಸುತ್ತಲೇ ಅವನು ಊರಿಗೆ ಹೊರಡಲು ಕಾದಿದ್ದ ಬಸ್ಸೊಂದನ್ನು ಹತ್ತಿದುದು. ಬಸ್ಸಿನಲ್ಲಿ ಪರಿಚಯದವರಿದ್ದರು, ಪಕ್ಕದ ಮನೆಯವರೇ ಇದ್ದರು. ವಾಸುವಿಗೆ ಒಂದು ಕ್ಷಣ ಮೂರ್ಛೆ ಬಂದಂತಾಯಿತು. ಯಾರೊಂದಿಗೂ ಮಾತಾಡದೆ ಯಾರಿಗೂ ಕಾಣಿಸಿಕೊಳ್ಳದಿರಲು ಯತ್ನಿಸುತ್ತ ಮನೆಗೆ ಮರಳಿದ್ದಾಯಿತು. “ನಾಟಕ ಪ್ರಾಕ್ಟೀಸು” ಎಂದು ಹೇಳಿದ – ತಕ್ಷಣ ನಾಲಗೆಗೆ ಬಂದ ಮಾತು ಅದು. “ಅದು ಇನ್ನು ಮುಂದೆ ಬೇಡ” ಎಂದರು ವೆಂಕಣ್ಣಯ್ಯ. ಗುಟ್ಟು ಹೊರಬಿದ್ದುದು ಮರುದಿನವೇ – ಯಾರೋ ಅವರಿಗೆ ಹುಡುಗ ಕುಂಬಳೆಗೆ ಹೋದ ಸಂಗತಿ ಕಿವಿಗೆ ಊದಿದ್ದರು. ಬೆತ್ತ ತೆಗೆದು ಮನಸ್ಸಿಗೆ ತೃಪ್ತಿ ಯಾಗುವಷ್ಟು ಹೊಡೆದರು – ತಾಯಿ ಮಧ್ಯೆ ಬರದಿರುತ್ತಿದ್ದರೆ ವಾಸು ಮರುದಿನ ಮೇಲೇಳುತ್ತಿರಲಿಲ್ಲ. ತಾಯಿಯ ಕೈಯಿಂದಲೇ ನಂತರ ಅವನಿಗೆ ಎಣ್ಣೆಯ ಸ್ನಾನವಾಯಿತು.
ಹಾಗೆಂದು ಕುಂಬಳೆಗವನು ಇದು ತನಕ ಹೋಗಿರಲಿಲ್ಲವೆಂದಲ್ಲ. ವರ್ಷವರ್ಷವೂ ಬರುವ ಜಾತ್ರೆಗೆ ಒಂದು ಪ್ರಯಾಣ ಇತ್ತು. ತಂದೆಯ ಜತೆ ಅಥವಾ ಮಾವ (ತಾಯಿಯ ತಮ್ಮ)ನ ಜತೆ. ಇಡೀ ವರ್ಷ ನಿರ್ದಯಿಯಾಗಿರುತ್ತಿದ್ದ ತಂದೆ ಜಾತ್ರೆಯ ಒಂದು ದಿನ ಮಾತ್ರ ಧಾರಾಳಿಯಾಗುವಂತೆ ತೋರುತ್ತಿತ್ತು. ಆದರೂ ಮಾವನ ಜತೆ ಹೋಗುವಾಗ ಮಾತ್ರವೇ ವಾಸುವಿಗೆ ಉಸಿರು ಬಿಡಲು ಅವಕಾಶ; ಆತ (ಮಾವ)ಅವನನ್ನು ದೇವಸ್ಥಾನ, ಸಂತೆ, ಪೇಟೆ ಎಂದು ಎಲ್ಲ ಕಡೆ ಸುತ್ತಿಸುತ್ತಿದ್ದ; ಹುರಿಗಡಲೆ, ಬೂಂದಿಯ ಲಾಡು, ಸಕ್ಕರೆ ಮಿಠಾಯಿ ಇನ್ನು ಬೆಲೂನು ಮುಂತಾದ ಆಟದ ಸಾಮಾನು ಎಲ್ಲ ಆ ಒಂದು ದಿನ ದೊರಕುತ್ತಿತ್ತು. ಆದರೂ ನಡದು ನಡೆದು ಸುಸ್ತಾಗಿ ಇನ್ನೇನು ದೇವರು ಹೊರಡಬೇಕು ಅನ್ನುವಷ್ಟರಲ್ಲಿ ಕಣ್ಣಿನ ತುಂಬ ನಿದ್ದೆ; ನಿದ್ದೆಗೆ ಬಿಟ್ಟು ಒಂದೆಡೆ ಕೂರಲು ಜಾಗವಿಲ್ಲದಷ್ಟು ಜನ; ಜಾತ್ರೆಗೆಂದೇ ಬಂದು ಈಗ ಮನೆಗೆ ಹೋಗೋಣ ಎನ್ನುವಂತೆಯೂ ಇಲ್ಲ; ಎಂದರೂ ಅಷ್ಟು ದೂರ ರಾತ್ರಿಯಲ್ಲಿ ಯಾರು ನಡೆಯುತ್ತಾರೆ – ಅಂತೂ ಆರಂಭದ ಆನಂದನಂತರ ನರಕವಾಗಿ ಪರಿಣಮಿಸಿ ಮರುದಿನ ಮನೆ ತಲುಪಿದಾಗ ಯಾಕಾದರೂ ಹೋದೆನೋ ಎಂದು ಬಿಟ್ಟು ಮುಂದಿನ ಜಾತ್ರೆಗೆ ಹೋಗುವುದಿಲ್ಲ ಎಂದುಕೊಳ್ಳುತ್ತಿದ್ದ. ಆದರೆ ಕುಂಬಳೆಯ ಆಕರ್ಷಣೆ ಮತ್ತೆ ಮುಂದಿನ ವರ್ಷ ಅವನನ್ನು ತನ್ನ ಕಡೆ ಸೆಳೆಯದಿರುವುದೆ?
ವೆಂಕಣ್ಣ ಸತ್ತರು, ಆದರೆ ಬೇಗನೆ ಸಾಯಲಿಲ್ಲ. ಮಗನಿಗೆ ಮದುವೆ ಮಾಡಿಸಿ ಅವನನ್ನು ಪರಂಪರಾಗತವಾಗಿ ಬಂದ ಅಡಿಕೆ ವ್ಯವಸಾಯದಲ್ಲಿ ತೊಡಗಿಸಿಯೇ ಅವರು ಸತ್ತುದು. ಈ ಮಧ್ಯೆ ವಾಸು ಇಬ್ಬರು ಮಕ್ಕಳೆ ತಂದೆಯಾಗಿದ್ದ. ಬೀಡಿ ಸಿಗರೇಟು ಕುಡಿತ ಹೆಣ್ಣು ಇತ್ಯಾದಿ ಯಾವ ಚಟವನ್ನೂ ಹಚ್ಚಿಕೊಳ್ಳದೆ ಊರ ಸದ್ಗೃಹಸ್ಥನಾಗುವ ಸಕಲ ಲಕ್ಷಣಗಳನ್ನೂ ತೋರಿಸಿದ್ದ. ಕೆಲಸ ಕಾರ್ಯಗಳಿಗೆಂದು ವೆಂಕಣ್ಣಯ್ಯ ಅವನನ್ನು ಕುಂಬಳೆ ಕಾಸರಗೋಡು ಮಂಗಳೂರು ಹೀಗೆ ಹೊರಗೆ ಕಳಿಸಲು ತೊಡಗಿದ್ದರು.
ತಂದೆ ಸತ್ತು ಬೀಗದ ಕೈಗಳ ಗೊಂಚಲು ಕೈಗೆ ಬಂದ ಮೇಲೊಂದು ದಿನ ವಾಸು ಏಕಾಂತದಲ್ಲಿ ಮನೆಯ ಪೆಟ್ಟಿಗೆ ಕಪಾಟುಗಳನ್ನೆಲ್ಲ ಒಂದೊಂದಾಗಿ ತೆರೆದು ನೋಡಿದ. ಅತ್ಯಂತ ಜಿಪುಣತನದಿಂದ ಮನೆ ವಹಿವಾಟು ಮಾಡಿದ್ದ ಅಪ್ಪ ಹೇರಳ ಹಣ ಕೂಡಿಟ್ಟಿರಬೇಕೆಂಬುದು ಅವನ ನಿರೀಕ್ಷೆಯಾಗಿತ್ತು. ಎಲ್ಲೂ ಏನೂ ಸಿಗಲಿಲ್ಲ. ಬ್ಯಾಂಕಿನಲ್ಲೂ ಅವನು ಅಂದುಕೊಂಡಷ್ಟು ಹಣ ಜಮೆಯಾಗಿರಲಿಲ್ಲ. ಹಾಗಾದರೆ ಎಲ್ಲ ಏನಾಯಿತು? ಚಿನ್ನದ ನಾಣ್ಯಗಳ ರೂಪದಲ್ಲಿ ಎಲ್ಲಾದರೂ ಅಡಗಿಸಿಟ್ಟಿರಬಹುದೆ ಎಂಬ ಸಂದೇಹದಿಂದ ಅಪ್ಪನ ಬೆವರು ನಾರುವ ಹಾಸಿಗೆ ತಲೆದಿಂಬುಗಳನ್ನು ಹರಿದು ಹತ್ತಿಯನ್ನೆಲ್ಲಾ ಕೆದಕಿ ಹುಡುಕಿದ್ದೂ ಆಯಿತು. ಮನೆಯವರನ್ನೆಲ್ಲಾ ಹೊರಗೆ ಯಾವುದೋ ನೆಪದಿಂದ ಕಳಿಸಿ ಅಪ್ಪನದೇ ಬೆತ್ತ ತೆಗೆದು ಒಂದಿಂಚು ಸ್ಥಳವನ್ನೂ ಬಿಡದೆ ಕುಟ್ಟಿ ನೋಡಿದ್ದಾಯಿತು. ಹಿತ್ತಿಲಲ್ಲಿ ಕೆದಕಿದ ಹೊಸಮಣ್ಣು ಕಣ್ಣಿಗೆ ಬೀಳುವುದೇ ಎಂದು ಹುಡುಕಿದ. ಇನ್ನು ಅಡಿಕೆ ತೋಟವೊಂದೇ ಉಳಿದಿರುವುದು – ಅಲ್ಲಿ ಎಲ್ಲೆಂದು ಹುಡುಕುವುದು? ಕೊನೆಗೂ ಅವನ ಸಂದೇಹ ನೆಟ್ಟುದು ಮೊದಲು ಮನೆಗೆಲಸಕ್ಕೆಂದು ತೆಗೆದುಕೊಂಡು ನಂತರ ಅಪ್ಪ ಇಟ್ಟುಕೊಂಡಿದ್ದ – ಅಥವಾ ಹಾಗೆ ರಾಜಾರೋಷವಾಗಿ ಹೇಳಿಕೊಳ್ಳದಿದ್ದರೂ ಅಂಥದೊಂದು ಸಂಬಂಧದಲ್ಲಿ ಏರ್ಪಟ್ಟಿದ್ದ ಗೌರಮ್ಮನೆಂಬ ಹೆಂಗಸಿನ ಮೇಲೆ. ಸೀದಾ ಅವಳ ಮನೆಗೆ ಹೋಗಿ “ಏ ಗೌರಮ್ಮ, ಬಾರಿಲ್ಲಿ” ಎಂದು ಹೊರಗೆ ಕರೆದ. ಮೊದಲು ಆಕೆ ಈತ ಏನು ಹೇಳುತ್ತಾನೋ ಅರ್ಥವಾಗದವಳಂತೆ ನಟಿಸಿದಳು. ನಂತರ ಬೇರೆ ರೀತಿಯಲ್ಲಿ ಮಾತಾಡಿದಳು; “ಸತ್ತವರನ್ನು ನಾನೇಕೆ ದೂರಲಿ? ನಿಮ್ಮ ತಂದೆ ಅದೇನು ನನ್ನಲ್ಲಿ ಕಂಡರೋ ಏನು ಬಯಸಿದರೋ ಅವರಿಗೇ ಗೊತ್ತು. ನಾನು ಮಾತ್ರ ಅವರಿಂದ ಒಂದು ಪುಡಿಗಾಸನ್ನು ಕೂಡ ಬಯಸಿದವಳಲ್ಲ. ಈಗ ನೀವು ಹೇಳುತ್ತಿರುವುದು ಕೇಳಿದರೆ ನಾನು ನಿಮ್ಮ ಆಸ್ತಿ ದೋಚಿದ್ದೇನೆ ಅನಿಸಬೇಕು. ನಾನಾಗಲಿ ನನ್ನ ಮಕ್ಕಳಾಗಲಿ ನಿಮ್ಮ ತಂಟೆಗೆ ಬರುವವರಲ್ಲ. ಅವರು ಹೋದ ಸೂತಕದಲ್ಲೇ ನನ್ನನ್ನು ಯಾಕೆ ಗೋಳು ಹೊಯ್ಯಲು ಬಂದಿರಿ – ಮನೆಯಲ್ಲಿ ನಿಮ್ಮ ತಾಯಿಯಿಲ್ಲವೆ” ಎಂದು ಅಳತೊಡಗಿದಳು. ವಾಸು ಏನೂ ಹೇಳದೆ ಮರಳಿದ. ನಂತರ ಅವನಿಗನಿಸಿತು- ಛೇ! ಜೀವಮಾನ ಇಡೀ ನನ್ನನ್ನು ಪೀಡಿಸಿದ ಮನುಷ್ಯ ನನಗೋಸ್ಕರ ಮುಡಿಪು ಕಟ್ಟಿಟ್ಟು ಹೋಗುತ್ತಾನೆಂದು ನಾನೇಕೆ ತಿಳಿದುಕೊಳ್ಳಬೇಕು. ನನಗೆ ನನ್ನ ಸ್ವಾತಂತ್ರ್ಯ ಮುಖ್ಯ.
ಒಂದೆಕರೆಯಷ್ಟು ತೋಟವಿತ್ತು. ಸರಿಯಾಗಿ ನೋಡಿಕೊಂಡು ಬಂದರೆ ಚಿಕ್ಕ ಕುಟುಂಬಕ್ಕೆ ಸಾಕಾಗುವಷ್ಟು, ಅಡಿಕೆಗೆ ಧಾರಣೆ ಜ್ವರದಂತೆ ಏರುತ್ತಿದ್ದ ಕಾಲದಲ್ಲಿ ಒಂದೆಕರೆ ತೋಟವೇನೂ ಸಾಮಾನ್ಯವಲ್ಲ. ಆದರೆ ವಾಸುವಿನ ಮನಸ್ಸು ಇದಾವುದರಲ್ಲೂ ನಿಲ್ಲಲೊಲ್ಲದು – ಎತ್ತರಕ್ಕೆ ಎದ್ದು ನಿಂತು ಗಾಳಿಗೆ ತೊನೆಯುತ್ತಿದ್ದ ಕಂಗುಗಳು ಬೇಸರದ ಪ್ರತೀಕಗಳಂತೆ ಅವನಿಗೆ ತೋರುತ್ತಿದ್ದುವು. ವ್ಯವಸಾಯದ ಹೆಚ್ಹ್ಚಿನ ಜವಾಬ್ದಾರಿಯನ್ನು ಮನೆಮಂದಿಗೆ ರವಾನಿಸಿ ಅವನು ಹೊರಗೆ ಅಡ್ಡಾಡತೊಡಗಿದ. ಮನೆಯಿಂದ ಸುಮಾರು ಒಂದು ಮೈಲಿ ನಡೆದರೆ ಕುಂಬಳೆ ಮಾರ್ಗ. ಈಗ ಧಾರಾಳ ಬಸ್ಸುಗಳು ಬೇರೆ ಬಂದಿದ್ದವು. ಒಂದಕ್ಕೊಂದು ಪೈಪೋಟಿ ಮಾಡುತ್ತ ಅವು ಕೈ ತೋರಿಸದವರನ್ನೆಲ್ಲ ಹೇಗಾದರೂ ತುಂಬಿಕೊಂಡು ಭರ್ರನೆ ಪೇಟೆ ಕಡೆ ಧಾವಿಸುತ್ತಿದ್ದವು. ಮನೆಯಿಂದ ಹೊರಟ ಅರ್ಧ ಮುಕ್ಕಾಲು ಗಂಟೆಗೆಲ್ಲಾ ಅವನು ಕುಂಬಳೆಯಲ್ಲಿ ಇರುತ್ತಿದ್ದ. ಪೇಟೆಯೂ ಈಗ ಮೊದಲಿನಂತಲ್ಲ. ಅನೇಕ ಬದಲಾವಣೆಗಳಾಗಿ ಬಿಟ್ಟಿದ್ದವು – ರೋಡುಗಳಿಗೆ ದಾಮರು, ಅಂಗಡಿ ಬೀದಿಗಳಿಗೆ ವಿದ್ಯುದ್ದೀಪ, ಎರಡು ಮೂರು ಮಾಳಿಗೆಯ ಕಟ್ಟಡಗಳು, ಹೊಸ ಹೋಟೆಲುಗಳು, ಬಸ್ ನಿಲ್ದಾಣ, ಆಸ್ಪತ್ರೆ ಇತ್ಯಾದಿ ಇತ್ಯಾದಿ. ಆದರೂ ಪೇಟೆಯ ಪರಂಪರೆಯೇನೂ ಬದಲಾದಂತಿರಲಿಲ್ಲ. ಹೊಸ ಕಟ್ಟೆಡಗಳ ಬದಿಗೇ ಹಳೆಯ ಹೆಂಚಿನ ಚಿಕ್ಕ ಅಂಗಡಿಗಳು. ಅವುಗಳ ಮುಂದೆ ತೂಗುವ ಬಾಳೆಹಣ್ಣಿನ ಗೊನೆಗಳು, ಎಂದೆಂದಿಗೂ ಬದಲಾಗದೆ ತೆಂಕು ಪೇಟೆ, ಮತ್ತೆ ಜನರಿಗೂ ಅದೇ ಮಾತುಕತೆ, ಅದೇ ಮುಖಭಾವ, ಒಂದು ರೀತಿಯಲ್ಲಿ ಕುಂಬಳೆ ಭಕ್ತರು ಇನ್ನೊಂದು ಪೇಟೆಯ ಭಕ್ತರಾಗಲಾರರು. ವಾಸು ಅಡಿಕೆ ಮಾರಾಟಕ್ಕೋಸ್ಕರ ಅಪರೂಪಕ್ಕೆ ಮಂಗಳೂರಿಗೆ ಹೋಗಿಬರುತ್ತಿದ್ದರೂ ಅದು (ಮಂಗಳೂರು) ಅವನನ್ನು ಕುಂಬಳೆಯಂತೆ ಎಂದೂ ಸೆಳೆದಿರಲಿಲ್ಲ. ಕುಂಬಳೆಯಾದರೆ ತನ್ನದಲ್ಲದ, ತನ್ನದಲ್ಲದಿದ್ದರೂ ತನ್ನದಾದ, ಒಂದು ನೈತಿಕ ಅನೈತಿಕ ಸಂಬಂಧ. ಕುಂಬಳೆಗಿಂತ ನೂರುಪಟ್ಟು ದೊಡ್ಡದಾಗಿದ್ದೂ ಮಂಗಳೂರು ಅಂಥ ಸಂಬಂಧವನ್ನು ಒಡ್ಡುವುದರಲ್ಲಿ ಯಶಸ್ವಿಯಾಗಿರಲಿಲ್ಲ.
ವಾಸು ಕುಂಬಳೆಗೆ ಹೋಗಿ ಮಾಡುವುದಾದರೂ ಏನು? ಮಾಡುವುದಕ್ಕೆ ತುಂಬಾ ಕೆಲಸ ಕಾರ್ಯಗಳಿದ್ದವು – ಮುಖ್ಯವಾಗಿ ಅಡ್ಡಾಡುವುದು; ಅಡ್ಡಾಡಿ ಆಯಾಸವಾದಾಗ ಯಾವುದಾದರೊಂದು ಹೋಟೆಲಿಗೆ ನುಗ್ಗಿ ಕಾಫಿ ಫಲಾಹಾರ ಸೇವನೆ; ಕೊಂಡುಕೊಂಡಿದ್ದ ವಾರ್ತಾ ಪತ್ರಿಕೆಯ ಆಮೂಲಾಗ್ರ ಪರಿಶೀಲನೆ ; ಸಿಗರೇಟು – ಆರಂಭದಲ್ಲಿ ಕೇವಲ ಕುತೂಹಲಕ್ಕೆಂದು ಸೇದತೊಡಗಿದುದು ಈಗ ಚಟವಾಗಿ ಪರಿಣಮಿಸಿತು. ಅಷ್ಟರಲ್ಲಿ ಸಂಜೆಯ ದೀಪಗಳು ಜಗ್ಗನೆ ಹತ್ತುತ್ತವೆ. ಈಗ ಇನ್ನೊಮ್ಮೆ ನಗರಪ್ರದಕ್ಷಿಣೆ. ಮೊದಮೊದಲು ಪಾರಕ್ಕೆ ಒಂದೋ ಎರಡೋ ಬಾರಿ, ನಂತರ ದಿನ ಬಿಟ್ಟು ದಿನ, ನಂತರ ಪ್ರತಿದಿನ ಹೀಗೆ ಪೇಟೆಗೆ ಬಂದು ಹೋಗುವ ಮನುಷ್ಯನಿಗೆ ಜನರ ಪರಿಚಯವಾಗದಿರುತ್ತದೆಯೆ? ಅಂಗಡಿಗಳ ಪರಿಚಯವಾಗದಿರುತ್ತದೆಯೆ? ಬಸ್ಸು ಡ್ರೈವರುಗಳು, ಕಂಡಕ್ಟರುಗಳು, ತ್ಯಾಕ್ಸಿ ಚಾಲಕರು – ಹೀಗೆ ಪರಿಚಿತರ ಸಂಖ್ಯೆ ಹೆಚ್ಚುತ್ತ ಹೋದಂತೆ ಕಾಫಿಗೆ, ಮಾತುಕತೆಗೆ, ಚರ್ಚೆಗೆ, ಸುತ್ತಾಟಕ್ಕೆ ತೊಂದರೆಯಿಲ್ಲ. ಕೊನೇ ಬಸ್ಸಿನಲ್ಲಿ ಮೈತೂರಿಕೊಂಡು ಮರಳುವಾಗ ಹೆಚ್ಚಾಗಿ ಊರವರು ಸಿಗುತ್ತಿದ್ದರು.
“ಕುಂಬಳೆಗೆ ಹೋದುದೋ?” ಎಂಬ ಪ್ರಶ್ನೆ.
“ಹೂಂ”ಎಂಬ ಉತ್ತರ . ನಂತರ ಸೌಜನ್ಯಕ್ಕೆಂದು “ನೀವೋ?” ಎಂದು ವಿಚಾರೆಸುತ್ತಿದ್ದ.
“ಮಂಗಳೂರಿಗೆ” ಎಂಬ ಉತ್ತರ ಸಿಗುತ್ತಿತ್ತು ಹೆಚ್ಚಾಗಿ. ನಂತರ ಹಾಗೆ ಉತ್ತರಿಸಿದವರು ಅಡಿಕೆ ಧಾರಣೆ, ಮಂಡಿಯ ಸಾಹುಕಾರರ, ದಲ್ಲಾಳಿಗಳ ಗುಣಾವಗಣಗಳ ವಿಮರ್ಶೆ, ನಿನ್ನ ಅಡಿಕೆ ಮಾರಾಟವಾಯಿತೋ ಎಂಬ ವಿಚಾರಣೆ – ಹೀಗೆ ವಾಸುವಿಗೆ ಎಳ್ಳಷ್ಟೂ ಆಸಕ್ತಿಯಿಲ್ಲದ ಸಂಗತಿಗಳನ್ನು ಹಿಡಿದು ಮಾತಿಗೆಳೆಯುತ್ತಿದ್ದರು. ಬಸ್ಸಿಳಿದು, ಅವರೊಂದಿಗೆ ತನ್ನ ಕವಲುದಾರಿ ಬರುವ ತನಕ ನಡೆದು, ಗೇರು ಮರಗಳು ಸುರಿದ ಒಣ ತರಗೆಲೆಗಳ ಮೇಲೆ ಚರ್ ಚರ್ ಎಂದು ಸದ್ದು ಮಾಡುತ್ತ, ಸುತ್ತಣ ನಾಯಿಗಳಿಂದ ಬೊಗಳಿಸಿಕೊಂಡು ಮನೆ ಸೇರುವ ಹೊತ್ತಿಗೆ ಅವನು ಕೆಟ್ಟ ಮೂಡಿನಲ್ಲಿರುತ್ತಿದ್ದ. “ಪಾರ್ವತೀ!” ಎಂದು ಹೆಂಡತಿಯನ್ನು ಜೋರಾಗಿ ಕರೆದು ತನ್ನ ವಿನಾ ಕಾರಣ ಸಿಟ್ಟನ್ನು ಏನಾದರೂ ಕಾರಣ ಹುಡುಕಿ ಅವಳ ಮೇಲೆ ತೆಗೆಯುತ್ತಿದ್ದ. ಮೊದಮೊದಲು ಅವಳು, “ಯಾಕೆ ಹೀಗೆ ದಿನಾ ಪೇಟೆಗೆ ಹೋಗುತ್ತೀರ? ಏನಾದರೂ ಅಗತ್ಯವಿದ್ದರೆ ಹೋದರೆ ಸಾಲದೆ?” ಎಂದು ಕೇಳುತ್ತಿದ್ದಳು. ಅವಳೊಂದಿಗೆ ತಾಯಿ ದನಿಗೂಡಿಸುತ್ತಿದ್ದಳು. ತೋಟದ ಕೆಲಸ ಆಗಿಲ್ಲ. ಅದು ಯಾರು ಮಾಡಬೇಕು, ನೀನು ಹೀಗೆ ಅಲೆದರೆ, ಎಂದು ಮುಂತಾಗಿ. ಈಗ ಎಲ್ಲರಿಗೂ ಈ ದಿನಚರಿ ಅಭ್ಯಾಸವಾಗಿಬಿಟ್ಟಿತ್ತು. ಯಾರೂ ಅವನ ಗೊಡವೆಗೆ ಹೆಚ್ಚಾಗಿ ಬರುತ್ತಿರಲಿಲ್ಲ. ಬೆಳೆದು ದೊಡ್ಡವರಾಗುತ್ತಿದ್ದ ಮಕ್ಕಳು ಕೂಡ. ಈ ಮಕ್ಕಳು (ಎರಡೂ ಗಂಡು)ಆತ ಹಿಂದೆ ಕಲಿತ ಶಾಲೆಗೇ ಹೋಗುತ್ತಿದ್ದುದು. ಯಾಕೆ ತಾನವರನ್ನು ಕುಂಬಳೆ ಶಾಲೆಗೆ ಕಳಿಸಲಿಲ್ಲ ಎಂದು ಅವನು ತನಗೆ ತಾನೇ ಕೇಳಿಕೊಡರೂ ಅದಕ್ಕೆ ಅವನ ಬಳಿ ಸರಿಯಾದ ಉತ್ತರವಿರಲಿಲ್ಲ.
ಸೆಕೆಂಡ್ ಶೋ ಸಿನಿಮಾಕ್ಕೆ ಹೋಗುವುದೆಂದು ನಿರ್ಧರಿಸಿ, ಊಟಮಾಡಲೆಂದು ರೇಲ್ವೆ ಸ್ಟೇಷನ್ನಿನ ಎದುರುಗಡೆ ಹೊಸತಾಗಿ ತೆರೆದಿದ್ದ ಹೋಟೆಲಿಗೆ ಹೋಗಿದ್ದ. ನಿಯಾನ್ ಬೆಳಕು ಕನ್ನಡಿಯ ಶೋಕೇಸುಗಳಲ್ಲಿ ಫಳಫಳನೆ ಹೊಳೆಯುತ್ತಿದ್ದವು. ಒಂದೆಂಡೆಯಿಂದ ತುಸು ದೊಡ್ಡದಾಗಿಯೇ ರೇಡಿಯೋದ ಚಿತ್ರಗೀತೆಗಳು ಕೇಳಿಸುತ್ತಿದ್ದವು. ಅದು ಮುಸ್ಲೀಮರ ಹೋಟೆಲು. ಕೌಂಟರಿನಲ್ಲಿ ಕಟ್ಟಾ ಸಂಪ್ರದಾಯವಾದಿ ಯಂತೆ ಕಾಣಿಸುತ್ತಿದ್ದ ಮುಸ್ಲೀಮನೊಬ್ಬ ಗಡ್ಡ ನೀವುತ್ತ ಕುಳಿತಿದ್ದ.
ವಾಸು ಒಂದು ಟೇಬಲಿನ ಬಳಿ ಕುಳಿತೊಡನೆ ವೈಟರನೊಬ್ಬ ಎರಡು ಗ್ಲಾಸು ತಣ್ಣೀರು ತಂದಿಟ್ಟು ಆರ್ಡರಿಗೆ ಕಾದ.
“ಊಟ ಇದೆಯೆ?”
“ಊಟ ಮುಗಿಯಿತು. ತಿಂಡಿ ಇದೆ.”
“ಏನು ತಿಂಡಿಯಿದೆ?”
ವೈಟರ್ ಹೇಳಿದ. ವಾಸು ಕಲ್ತಪ್ಪಕ್ಕೆ ಆರ್ಡರ್ ಮಾಡಿ ಸಂಗೀತ ಕೇಳುತ್ತ ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲೇ ಬಿಸಿಯಾದ ತಿಂಡಿ ಅದರ ಜತೆ ಮಾಂಸದ ಸಾರು ಬಂತು. ಈ ಅನುಭವ ಅವನಿಗೆ ಹೊಸತಾದರೂ ಅದನ್ನು ತೋರಗೋಡದೆ ಎರಡನ್ನೂ ತಿಂದು ಮುಗಿಸಿ ದುಡ್ಡು ಕೊಟ್ಟು ಸಿಗರೇಟು ಸೇದುತ್ತ ಸಿನಿಮಾದ ಕಡೆ ಹೆಜ್ಜಿ ಹಾಕಿದ. ಅತ್ಯಂತ ಸೆಕ್ಸೀ ಚಿತ್ರವೆಂದು ಜಾಹಿರಾತು ನಡೆದುದರಿಂದ ತುಂಬಾ ಜನ ಸೇರಿದ್ದರು. ಪೋಸ್ಟರಿನಲ್ಲಿ ಯುವತಿಯೊಬ್ಬಳ ಬ್ರಾ ಕಳಚುವ ಚಿತ್ರವನ್ನು ದೊಡ್ಡದಾಗಿ ಹಾಕಿತ್ತು. ಒಂದಿಬ್ಬರು ಪೊಲೀಸರು ಡ್ಯೂಟಿಯ ಮೇಲೆ ನಿಂತಿದ್ದರು. ಅಲ್ಲಿ ಸುತ್ತಾಡುತ್ತಿರುವಾಗ ಅವನಿಗೆ ಮಹಾಬಲ ಪೂಜಾರರು ಕಾಣಸಿಕ್ಕಿ ಅವರ ಜತೆ ಸೇರುವುದು ಅನಿವಾರ್ಯವಾಯಿತು. ರಾಷ್ಟ್ರೀಯ ಮಟ್ಟದ ರಾಜಕೀಯ ಪಕ್ಷವೊಂದರ ಬ್ಲಾಕ್ ಪ್ರೆಸಿಡೆಂಟರಾಗಿದ್ದ ಪೂಜಾರರು ಕುಂಬಳೆ ಪಂಚಾಯತು ಚುನಾವಣೆಯಲ್ಲಿ ಸಕ್ರಿಯ ಭಾಗವಹಿಸುತ್ತ ಎಲ್ಲೆಡ ಕಾಣಸಿಗುತ್ತಿದ್ದರು. ಇತ್ತೀಚಿಗೆ ಕೆಲವು ಕಾಲದಿಂದ ವಾಸು ಇವರ ಆತ್ಮೀಯನಾಗಿ ಕುಂಬಳೆ ರಾಜಕೀಯದ ಒಳತಿರುವುಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದ. ನೆಲೆಯಿಲ್ಲದ ಪೇಟೆ ಸುತ್ತುತ್ತಿದ್ದವನಿಗೀಗ ಪಕ್ಷದ ಕಚೇರಿ ಒಂದು ನೆಲೆಯೊದಗಿಸಿದ್ದು ಮಾತ್ರವಲ್ಲ ; ಅವನಿಗೊಂದು ಗುರುತು, ಒಂದು ಹೆಸರು, ಮಾತಿಗೊಂದು ಬೆಲೆ ಬಂದಿತ್ತು. ತೆರೆಯ ಮೇಲೆ ಚಿತ್ರ ಓಡುತ್ತಿದ್ದಂತೆ ಪೂಜಾರರು ಅವನಿಗೆ ಚುನಾವಣೆಯ ಕೆಲಸ ಕಾರ್ಯಗಳನ್ನು ವಿವರಿಸತೊಡಗಿದರು.
“ಯಾವುದಾದರೊಂದು ೨. ವಾರ್ಡಿನಿಂದ ನಿಮ್ಮನ್ನು ನಿಲ್ಲಿಸೋಣವೆಂದು ತುಂಬಾ ಪ್ರಯತ್ನ ಮಾಡಿದೆ. ಆದರೆ ಎಷ್ಟೋ ವರ್ಷದಿಂದ ಕೆಲಸ ಮಾಡುತ್ತ ಬಂದವರಿದ್ದಾರೆ – ಏನು ಮಾಡುವುದಕ್ಕಾಗುತ್ತದೆ? ನೋಡೋಣ; ಏನಾದರೂ ಚಾನ್ಸು ಬರುತ್ತದೆ.” ಎಂದು ಮಾತಿನ ಮಧ್ಯೆ ಅವರು ಹೇಳಿದರು.
ವಾಸು ಸುಮ್ಮನೆ ನಕ್ಕು, “ನನಗೆ ವೈಯಕ್ತಿಕವಾಗಿ ಏನೂ ಬೇಡ. ಪಾರ್ಟಿ ಗೆದ್ದರೆ ಸಾಕು.” ಎಂದ.
“ನಿಜ, ವ್ಯಕ್ತಿಗಿಂತ ಪಾರ್ಟಿ ಮುಖ್ಯ. ಆದರೆ ಈಗಿನ ಕಾಲದಲ್ಲಿ ನಿಸ್ವಾರ್ಥ ಸೇವೆ ಮಾಡುವವರು ಎಷ್ಟು ಜನ?”
“ನಾನೇನು ಮಾಡಬೇಕೋ ಹೇಳಿ.”
“ಯಾವದಾದರೊಂದು ವಾರ್ಡಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತೀರಾ?”
“ಮಾಡುತ್ತೇನೆ.”
“ಮತ್ತೆ ಮನೆಗೆ ಹೋಗಿ ಪ್ರತಿ ಮತದಾರರನ್ನೂ ಕಾಂಟೆಕ್ಟ್ ಆಗಿ ಅವರ ಮನವೊಲಿಸಬೇಕು. ಜತೆಗೆ ಒಬ್ಬ ಕಾರ್ಯಕರ್ತನನ್ನು ತೆಗೆದುಕೊಳ್ಳಿ. ಎರಡು ದಿನಗಳಲ್ಲಿ ಕರಪತ್ರಗಳು ಪ್ರೆಸ್ಸಿನಿಂದ ಬರುತ್ತವೆ. ಏ ವಾರ್ಡಿಗೆ ನಿಮ್ಮನ್ನು ಹಾಕಲೆ?”
“ಹಾಕಿ.”
“ಏ ವಾರ್ಡಿನಲ್ಲಿ ನಮ್ಮ ಉಮೇದುವಾರರು ಉಮೇಶ ನಾಯ್ಕರು. ಅವರೂ ಇರುತ್ತಾರೆ ಅಗತ್ಯವಾದಾಗ.”
“ನಾಯ್ಕರು ನನಗೆ ಗೊತ್ತು.”
“ಪ್ರತಿ ಪಂಚಾಯತು, ಮುನಿಸಿಪಾಲಿಟಿಗಳನ್ನು ಹಿಡಿಯುವ ತಂತ್ರ ನಮ್ಮದು. ಮುಂದೆ ಅಸೆಂಬ್ಲಿ ಇಲೆಕ್ಷನಿಗೆ ಇದರಿಂದ ಉಪಯೋಗವಾಗುತ್ತದೆ…..”
ತೆರೆಯ ಮೇಲೆ ಹೆಂಗಸೊಬ್ಬಳು ಸ್ನಾನದ ಕೋಣೆ ಹೊಕ್ಕು ಬಟ್ಟೆ ಬರೆ ಕಳಚುವ ದೃಶ್ಯ. ಎಲ್ಲರೂ ಚುರುಕಾಗಿ ಎದ್ದು ಕುಳಿತು ನೋಡುತ್ತಿದ್ದಂತೆ ಅವಳು ಬ್ರಾ ತೆಗೆದು ಆಚೆಗೆ ಒಗೆದು ಜನರಿಗೆ ಎದೆ ತೋರಿಸಿಯೂ ತೋರಿಸದಂತೆ ನಿಂತು ಸ್ನಾನ ಸುರು ಮಾಡಿದಳು. ಸ್ನಾನ ಮಾಡುತ್ತಲೇ ಅವಳು ಹಾಡು ಕೂಡ ಹೇಳುತ್ತಿದ್ದಳು. ಈ ದೃಶ್ಯದಲ್ಲೇ ಮುಂದೆ ಆಕೆಯ ಕೊಲೆಯಾಗುವುದು. ಪೂಜಾರರು ಒಂದು ಕಣ್ಣು ಒಂದು ಕಿವಿ ಆ ಕಡೆ ಇಟ್ಟು ಮಾತಾಡುತ್ತಿದ್ದರು. ಕೊನೆಗೆ, “ನಾಳೆ ಪಾರ್ಟಿ ಆಫ಼ೀಸಿನಲ್ಲಿ ಸಿಕ್ಕಿ; ಬಾಕಿ ವಿವರ ತಿಳಿಸುತ್ತೇನೆ. ಒಂದು ವೇಳೆ ನಾಳೆ ನಾನು ಬರುವುದಾಗದಿದ್ದರೆ ನಾಡಿದ್ದು ಸಿಗುವೆ. ಏನೇನೋ ಕೆಲಸಕಾರ್ಕಗಳಿರುವುದರಿಂದ ತುಂಬಾ ಕಡೆ ಅಲೆದಾಡಬೇಕಾಗುತ್ತದೆ. ಚುನಾವಣೆಯ ಖರ್ಚಿಗೆ ಜಿಲ್ಲಾ ಘಟಕದಿಂದ ಒಂದಿಷ್ಟು ಹಣ ಮಂಜೂರಾಗುವಂತೆ ಪ್ರಯತ್ನ ಮಾಡುತ್ತಿದ್ದೇನೆ.” ಎಂದು ತೆರೆಯ ಕಡೆ ತಿರುಗಿದರು. ವಾಸು ಗೊತ್ತಾಯಿತೆಂಬಂತೆ ತಲೆದೂಗಿದ, ಬಹಳ ಧೈರ್ಯದಿಂದ ತೆಗೆದ ಚಿತ್ರ ಅದು ಎನಿಸಿತು. ನಾಯಕಿಯ ಎದೆ ಮೇಲಿಂದ ಇಳಿದ ನೀರು ಅವಳ ಮೊಲೆತೊಟ್ಟಿನಿಂದ ಕೆಳಗೆ ಧುಮುಕುತ್ತಿತ್ತು.
ಚುನಾವಣೆ ಬಂತು, ಹೋಯಿತು. ಪಕ್ಷಕ್ಕೆ ನಿರೀಕ್ಷಿಸಿದ ಬಹುಮತವೇನೂ ಸಿಗಲಿಲ್ಲ – ಅಥವಾ ಹಾಗೆ ನಿರೀಕ್ಷಿಸಿದವರಾದರು ಯಾರು ? ಆದರೆ ಏ ವಾರ್ಡಿನಿಂದ ನಾಯ್ಕರು ಗೆದ್ದು ಬಂದರು, ಅದು ವಾಸುವಿಗೆ ತನ್ನ ಸ್ವಂತದ ಗೆಲುವಿನಂತೆ ತೋರಿತು. ನಂತರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆತನೂ ಭಾಗವಹಿಸಿ ಪಕ್ಷದ ಒಟ್ಟಾರೆ ಸೋಲಿಗೆ ಕಾರಣವೇನೇನು ಎಂಬ ಬಗ್ಗೆ ತನ್ನ ಅಭಿಪ್ರಾಯ ಮಂಡಿಸಿದ. ಅದೇನೇ ಇರಲಿ, ಚುನಾವಣೆಯ ಕಾರಣದಿಂದ ಅವನ ಬದುಕಿಗೆ ಇನ್ನೊಂದು ಅನಿರೀಕ್ಷಿತ ತಿರುವು ದೊರಕಿತು – ಕಲ್ಯಾಣಿ ಟೀಚರ ಸಂಬಂಧ. ತೆಲಚೇರಿ ಕಡೆಯಿಂದ ಕೆಲಸದ ಅನ್ವೇಷಣೆಯಲ್ಲಿ ಉತ್ತರಕ್ಕೆ ಬಂದ ಕಲ್ಯಾಣಿ ಒಂದೆರಡು ವರ್ಷಗಳಿಂದ ಅಕ್ಕಪಕ್ಕದ ಊರ ಶಾಲೆಗಳಲ್ಲಿ ಟೆಂಪರರಿಯಾಗಿ ಸಂಸ್ಕೃತ ಹಿಂದಿ ಹೇಳಿಕೊಡುತ್ತ ತಾಯಿ ಜತೆ ಕುಂಬಳೆಯಲ್ಲಿ ನೆಲೆಸಿದ್ದಳು. ವಾಸು ಚುನಾವಣೆ ಪ್ರಚಾರ ಕೈಗೊಂಡ ವೇಳೆ ಯಲ್ಲೇ ಆಕೆಯ ನಿಜವಾದ ಪರಿಚಯವಾದ್ದು ; ಅಷ್ಟರತನಕ ಪೇಟೆಯಲ್ಲಿ ಕಂಡಿದ್ದ ; ಎಷ್ಟು ಚೆನ್ನಾಗಿದ್ದಾಳೆ ಎಂದೂ ಅನಿಸಿತ್ತು. ಕಲ್ಯಾಣಿ ಮತ್ತವಳ ತಾಯಿ ಶಾರದಮ್ಮ ಗಲ್ಲಿಯೊಂದರಲ್ಲಿ ಚಿಕ್ಕ ಮನೆಯೊಂದನ್ನು ಬಾಡಿಗೆ ಹಿಡಿದಿದ್ದರು. ಒಂದು ಅಡುಗೆ ಕೋಣೆ, ಇನ್ನೊಂದು ಕೂರುವ, ಉಣ್ಣುವ, ಮಲಗುವ ಕೋಣೆ – ಅಷ್ಟೇ. ಎಂದಾದರೊಂದು ದಿನ ಎಲ್ಲಾದರೊಂದು ಕಡೆ ಖಾಯಮ್ಮಾದ ಕೆಲಸ ಸಿಗುತ್ತದೆ ಎಂಬುದು ಕಲ್ಯಾಣಿಯ ಆಸೆ ; ಯಾವನಾದರೂ ಪುಣ್ಯಾತ್ಮ ಮಗಳ ಕೈಹಿಡಿದು ಉದ್ಧರಿಸುತ್ತಾನೆ ಎಂಬುದು ಶಾರದಮ್ಮನ ಬಯಕೆ . ಇಬ್ಬರ ಹೆಸರೂ ವೋಟರ ಪಟ್ಟೆಯಲ್ಲಿರಲಿಲ್ಲ. ಆದರೂ ವಾಸು ಅವರ ಮನೆಗೆ ಎಡತಾಕುವುದನ್ನು ಬಿಡಲಿಲ್ಲ. ಆಕೆ ಹೇಳಿದ ಯಾವುದೋ ಮಾತು, ನಿಂತ ಯಾವುದೋ ಭಂಗಿ, ಎಸೆದ ಯಾವುದೋ ನೋಟ ಇದು ತನಕ ತನ್ನ ಹೆಂಡತಿ ಎಂದೂ ಎಬ್ಬಿಸಲಾರದಂಥ ಉದ್ರೇಕವನ್ನು ಅವನಲ್ಲಿ ಎಬ್ಬಿಸಿರಬೇಕು. ವಾಸು ಆಕೆಗೆ ಮನಸೋತ, ಅವಳ ಮನವೊಲಿಸಲು ಏನು ಬೇಕಾದರೂ ಮಾಡಲು ಸಿದ್ಧನಾದ. ಯಾವ ಯೋಗಾಯೋಗವೋ ಇಬ್ಬರನ್ನೂ ಒಂದುಗೂಡಿಸಿತು.
ಒಮ್ಮೆಲೆ ಈಗ ಅವನ ಹಣದ ಅಗತ್ಯ ಇಮ್ಮಡಿ ಮುಮ್ಮಡಿಯಾಯಿತು. ಅಡಿಕೆಯ ಫಸಲನ್ನು ಮರದಿಂದಲೇ ಮಾರತೊಡಗಿದ. ಮುಂದಿನ ಬೆಳೆಯ ಮೇಲೆ ಸಾಲ ಎತ್ತಿದ. ತೋಟದ ಬದಿಯಲ್ಲಿ ಏಷ್ಟೋ ವರ್ಷಗಳಿಂದ ಬೆಳೆದು ಹೆಮ್ಮೆರ ವಾಗಿದ್ದ ಹಲಸು, ಮಾವಿನ ಮರಗಳನ್ನು ಕಡಿದು ಮಾರಿಯೂ ಆಯಿತು. ಯಾವ ಯಾವ ಮೂಲದಿಂದ ಹಣ ಬರುತ್ತದೋ ಅದೆಲ್ಲವನ್ನೂ ದೋಚಿದ. ತೋಟದ ಕೆಲಸಕ್ಕೆ ಮಕ್ಕಳ ಶಾಲೆ ಖರ್ಚಿಗೆ, ಮನೆಯ ಅಗತ್ಯಗಳಿಗೆ ಹಣವಿಲ್ಲದಾಯಿತು. ಇದನ್ನು ಹೆಂಡತಿ, ತಾಯಿ, ಇತರ ಸಂಬಂಧಿಗಳು ಗಮನಿಸದೆ ಇರಲಿಲ್ಲ. ಕುಂಬಳೆಯ ಹೆಣ್ಣಿನ ವಿಚಾರವೂ ಬೆಳಕಿಗೆ ಬಂದಿತ್ತು. ಮನೆಯಲ್ಲಿ ನಿತ್ಯ ಜಗಳ; ಮಾವ, ಭಾವ ಎಲ್ಲರೂ ಬಂದು ಬುದ್ಧಿ ಹೇಳುವುದು. ಬೆದರಿಕೆ ಹಾಕುವುದು ಸುರುವಾಯಿತು. ವಾಸು ಯಾವುದಕ್ಕೂ ಜಪ್ಪೆನ್ನಲಿಲ್ಲ. ಹೆಚ್ಚು ಕಿರುಕುಳ ಕೊಟ್ಟರೆ ಆಸ್ತಿಯನ್ನೇ ಮಾರಿ ಬಿಡುವೆ, ಬೇಡಾ ಎಂದಿದ್ದರೆ ನನ್ನನ್ನು ನನ್ನಷ್ಠಕ್ಕೇ ಬಿಡಿ ಎಂದು ಕೊನೆಯ ಮಾತು ಹೇಳಿಬಿಟ್ಟ. ಈ ಮಧ್ಯೆ ಅವನು ಹಳೇ ಮೋಟಾರು ಸೈಕಲೊಂದನ್ನು ಕೊಂಡು ಕೊಂಡು, ರೀಪೆರಿ ಮಾಡಿಸಿ ಅದರಲ್ಲಿ ಓಡಾಡಲು ಸುರುಮಾಡಿದ್ದ. ಮನಸ್ಸಿಗೆ ಬಂದಾಗ, ಅದು ಮಧ್ಯಾಹ್ನವಾಗಿರಲಿ, ಮಧ್ಯ ರಾತ್ರಿ ಯಾಗಿರಲಿ, ಮನೆಯಿಂದ ಹೊರಟುಬಿಡುತ್ತಿದ್ದ. ಮನೆಗೆ ಮರುಳುವುದೂ ಹೀಗೆಯೇ ಅನಿರೀಕ್ಷಿತವಾಗಿ. ಮನೆ ಮಕ್ಕಳು ಅವನ ಮುಖ ಕಾಣುವುದೇ ಅಪರೂಪವಾಯಿತು. ಊರಮಂದಿಗೆಲ್ಲ ಅವನು ಮಾತಿಗೆ ಸುದ್ದಿಯಾದ.
ವಾಸು ಮೋಟಾರು ಸೈಕಲು ಕೊಳ್ಳಲು ಕಾರಣ ಕಲ್ಯಾಣಿಯನ್ನು ಹಿಂದೆ ಕೂರಿಸಿಕೊಂಡು ಬೇಕಾದಲ್ಲಿ ಸಂಚರಿಸುವುದಕ್ಕೆ. ಈಗ ಅವಳನ್ನು ಶಾಲೆಗೆ ಕರದೊಯ್ಯುವುದು, ಅಲ್ಲಿಂದ ಕರೆದುಕೊಂಡು ಬರುವುದು ಅವನ ಮೆಚ್ಚಿನ ಕೆಲಸವಾಯಿತು. ಒಂದು ದಿನ ಶಾಲೆಯಿಂದ ಮರಳುತ್ತ ಅವನು ವಾಹನವನ್ನು ಬೇರೊಂದು ದಾರಿಯಲ್ಲಿ ತಿರುಗಿಸಿದ.
“ಯಾವ ಕಡೆ ಹೋಗುತ್ತಿದ್ದೀರಿ?” ಎಂದಳು ಕಲ್ಯಾಣಿ.
“ಎಲ್ಲಾದರೂ ಸ್ವಲ್ಪ ದೂರ”, ಎಂದ ವಾಸು.
ಮೋಟಾರು ಸೈಕಲು ಅತ್ಯಂತ ವೇಗವಾಗಿ ಓಡತೊಡಗಿತು. ಕಲ್ಯಾಣಿ ಅವನ ಬೆನ್ನಿಗೆ ಜೋತುಕೊಂಡು ಒಂದು ತೋಳಿನಲ್ಲಿ ಅವನ ಸೊಂಟವನ್ನು ಬಳಸಿ ಹಿಡಿದಿದ್ದಳು. “ಇಷ್ಟೊಂದು ಸ್ಪೀಡಿನಲ್ಲಿ ಹೋಗಬೇಕೆ?” ಎಂದು ಕೇಳಿದಳು ಆಕೆ. “ಇದರಲ್ಲೇ ಇರುವುದು ಮಜಾ,”ಎಂದು ಉತ್ತರಿಸಿದ ವಾಸು. ಇಬ್ಬರೂ ಸಮುದ್ರ ತೀರ ಸೇರಿ ದೋಣಿಯೊಂದರ ಮರೆಯಲ್ಲಿ ಕುಳಿತುಕೊಂಡರು.
“ಎಷ್ಟಾದರೂ ಮನೆಯಲ್ಲಿ ಇಷ್ಟು ಖುಷಿ ಇರೋದಿಲ್ಲ.” ಎಂದ ವಾಸು.
“ಖುಷಿಯಾಗೇ ಇದ್ದೇವಲ್ಲ.”
“ನಿನ್ನ ತಾಯಿ.”
“ಅವಳೇನು ಅಡ್ಡಿ ಮಾಡಿದ್ದಾಳೆ?”
“ಏನಿಲ್ಲ.ಆದರೂ.”
“ಏನು ಮಾಡೋಕಾಗುತ್ತೆ? ಆಕೆಗೆ ನಾನಲ್ಲದೆ ಬೇರೆ ಯಾರೂ ಇಲ್ಲ.”
“ಒಂದು ದಿನ ಎಲ್ಲಾದರೂ ಹೋಗೋಣ.”
“ಎಲ್ಲಿಗೆ?”
“ಮಂಗಳೂರಿಗೆ?”
ಮಂಗಳೂರಿಗೆ ಹೋಗಿ ಒಂದು ರಾತ್ರೆ ಅಲ್ಲೇ ಇದ್ದು, ಸಿನಿಮಾ ನೋಡಿ, ಏನೇನೋ ಕೊಂಡು ಕೊಂಡು ಮರಳಿದರು. ಹೀಗೆ ಒಂದೊಂದು ಪ್ರೋಗ್ರಾಮುಗಳು ಪೂರೈಸಿದಾಗಲೂ ವಾಸು ತಲೆಯೊಳಗೆ ಇನ್ನೊಂದಕ್ಕೆ ಯೋಜನ ಹಾಕುತ್ತಿದ್ದ. ಆದರೆ ಇಂಥ ಸುಖದ ದಿನಗಳು ಎಷ್ಟು ಕಾಲ ಇರುತ್ತವೆ? ಒಂದು ದಿನ ಕಲ್ಯಾಣಿ ತನಗೆ ತನ್ನೂರಿನಲ್ಲೇ ಒಂದು ಸರಕಾರಿ ಕೆಲಸ ಸಿಕ್ಕಿದೆಯೆಂದು ಅಂಚೆಯಲ್ಲಿ ಬಂದ ನೇಮಕ ಪತ್ರ ತೋರಿಸಿದಳು. ಇದವನಿಗೆ ಅನಿರೀಕ್ಷಿತ ಸುದ್ದಿಯಾಗಿತ್ತು. ಆಕೆ ಇಂಥ ಕೆಲಸವೊಂದಕ್ಕೆ ಅರ್ಜಿ ಹಾಕಿದ್ದಾಗಲೀ, ಇಂಟರ್ವ್ಯೂ ತೆಗೆದುಕೊಂಡದ್ದಾಗಲಿ ಅವನಿಗೆ ಗೊತ್ತಿರಲಿಲ್ಲ.
“ಈಗೇನು ಮಾಡುತ್ತೀ?” ಎಂದು ಕೇಳಿದ.
“ಪರ್ಮನೆಂಟ್ ಕೆಲಸ ಇದು, ಊರ ಸಮೀಪ. ಒಂದು ವಾರದಲ್ಲಿ ಸೇರಿಕೊಳ್ಳಬೇಕು.”ಎಂದಳು. ಎಲ್ಲವೂ ಈಗಾಗಲೇ ನಿಶ್ಚಯವಾದಂತೆ.
ವಾಸು ಒಂದು ಕ್ಷಣ ಮಾತಾಡಲಿಲ್ಲ.
“ಹಾಗಾದರೆ ನಮ್ಮ ಈ ಸಂಬಂಧ – ಇದಕ್ಕೇನು ಅರ್ಥ?” ಎಂದು ಕೇಳಿದ.
ಕಲ್ಯಾಣಿ ಮೌನ ತಳಿದಳು. ಅಡಿಗೆ ಕೋಣೆಯಲ್ಲಿ ಇದಕ್ಕೆಂದೇ ಕಾಯುತ್ತಿದ್ದ ಶಾರದಮ್ಮ ಹೊರಬಂದು, “ಈ ಸಂಬಂಧ ಎಲ್ಲ ಮರೆತು ಬಿಡಬೇಕು ನೀನು, ಇನ್ನು ನೀನು ಬೇರೆ, ನಾವು ಬೇರೆ. ಹೇಗಿದ್ದರೂ ನಾವು ಒಂದು ವಾರದಲ್ಲಿ ಇಲ್ಲಿಂದ ಹೋಗುವವರು.”ಎಂದಳು.
“ಅಷ್ಟು ತರಾತುರಿಯಲ್ಲಿ ನಿರ್ಣಯಕ್ಕೆ ಬರುವ ಸಂಗತಿಯಲ್ಲ ಇದು.” ಎಂದ ವಾಸು ಸ್ವಲ್ಪ ಅಧಿಕಾರ ವಾಣಿಯಲ್ಲಿ.
“ಬೇರೆ ದಾರಿ ಯಾವುದಿದೆ? ಈ ಊರಲ್ಲಿ ಟೆಂಪರರಿ ಕೆಲಸ ನಂಬಿಕೊಂಡು ಇರಬೇಕೆನ್ನುತ್ತೀಯಾ?”
“ಇಷ್ಟು ಸಮಯ ಇರಲಿಲ್ವೆ?”
“ಸರಕಾರೀ ಆರ್ಡರ್ ಬಂದದ್ದು ಈಗ.”
“ನಿಮಗೆಲ್ಲಾ ನಾನು ಏನೂ ಅಲ್ವೆ?”
“ಏನವಳನ್ನು ಮದುವೆ ಮಾಡಿಕೊಳ್ಳುತ್ತೀಯಾ? ನಿನಗೆ ಹೆಂಡತಿ ಮಕ್ಕಳಿದ್ದಾರೆ ಊರಲ್ಲಿ.”
“ಅದು ನಿಮಗೆ ಮೊದಲೇ ಗೊತ್ತಿತ್ತು.”
“ಗೊತ್ತಿತ್ತು. ಅದಕ್ಕೇನು ಮಾಡಬೇಕೀಗ? ನೀನು ಬುದ್ಧಿ ಉಪಯೋಗಿಸಿ ವಿಚಾರ ಮಾಡುವವನೋ ಅಲ್ಲ ಹುಚ್ಚನಂತೆ ಗಲಾಟೆ ಮಾಡುವವನೋ?”
ವಾಸು ಬುದ್ಧಿ ಉಪಯೋಗಿಸುವ ಸ್ಥಿತಿಯಲ್ಲಿ ಇರಲಿಲ್ಲ. ಇದೆಲ್ಲ ನಡೆಯುತ್ತಿರ ಬೇಕಾದರೆ ಕಲ್ಯಾಣಿ ಏನೂ ಆಗದವಳಂತೆ ತಾಯಿ ಅರ್ಧ ಹೆಚ್ಚಿಟ್ಟಿದ್ದ ತರಕಾರಿಯನ್ನು ಹೆಚ್ಚತೊಡಗಿದ್ದಳು. ಏನು ಸಂಬಂಧವಿದ್ದರೂ ಅದು ಕಲ್ಯಾಣಿಯ ಮತ್ತು ತನ್ನ ನಡುವೆ. ಆದರೆ ಅವಳು ಸುಮ್ಮನಿದ್ದು ಈ ಮುದುಕಿಯನ್ನು ಜಗಳ ತೆಗೆಯಲು ಬಿಟ್ಟುದರಿಂದ ವಾಸು ಕ್ರುದ್ಧನಾಗಿದ್ದ. ನಂತರ ಅವಳು ಮಾತ್ರ ಸಿಕ್ಕಾಗ ನೋಡಿಕೊಳ್ಳುತ್ತೇನೆ ಎಂದುಕೊಂಡ. ಆದರೆ ಅವಳು ಅವನ ದೃಷ್ಟಿಯಿಂದ ತಪ್ಪಿಸಿಕೊಳ್ಳುತ್ತಿರುವಂತೆ ಕಂಡಿತು. ಅಂದು ರಾತ್ರಿ ಮತ್ತೊಮ್ಮೆ ಜಗಳವಾಯಿತು. ಕಲ್ಯಾಣಿ ತಾಯಿಯ ಜತೆಯಲ್ಲಿ ಅಡುಗೆಕೋಣೆಯಲ್ಲಿ ಮಲಗಿಕೊಂಡಳು. ಒಮ್ಮೆ ಅವಳನ್ನು ದರದರನೆ ಎಳೆದುಕೊಂಡು ಬರಬೇಕೆಂದು ಅವನಿಗನಿಸಿದರೂ ಸಿಟ್ಟನ್ನು ತಾತ್ಕಾಲಿಕವಾಗಿ ನುಂಗಿಕೊಂಡ. ಮರುದಿನ ಅವಳನ್ನು ರಮಿಸಲು ಯತ್ನಿಸಿದ. ಏನೂ ಉಪಯೋಗವಾಗಲಿಲ್ಲ. ತಾಯಿ ಮಗಳು ತನ್ನ ವಿರುದ್ಧ ಒಂದಾಗಿ ನಿಂತಿರುವಂತೆ ಅವನಿಗೆ ಕಂಡಿತು. ನಂತರದ ಅವನ ವರ್ತನೆ ತೀರ ವಿಚಿತ್ರವಾಗತೊಡಗಿತು. ಅವರು ಊರು ಬಿಡುವ ದಿನ ಸಮೀಪಿಸುತ್ತಿದ್ದಂತೆ ಅವನೊಂದು ಉನ್ಮಾದ ಸ್ಥಿತಿಯನ್ನು ತಲಪಿದ. ಅದು ಹೇಗೆ ನೀವು ಟ್ರೇನು ಹತ್ತುತ್ತೀರೋ ನೋಡೇಬಿಡ್ತೇನೆ ಎಂದು ಕೊನೆಯ ಬೆದರಿಕೆ ಹಾಕಿದ.
ಹೀಗೊಂದು ದಿನ ಅವನು ಒಂದು ಹೋಟೆಲಿನಲ್ಲಿ ಸಿಗರೇಟು ಸೇದುತ್ತ ಕುಳಿತ್ತಿದ್ದ. ಹೊರಗೆ ವೈಶಾಖದ ಸುಡುಬಿಸಿಲು ಹೊಡೆಯುತ್ತಿತ್ತು – ರೋಡಿನ ಮೇಲೆ, ಅಂಗಡಿ ಸೂರುಗಳ ಮೇಲೆ. ಯಾವುದೋ ಯೋಚನೆಯಲ್ಲಿದ್ದವನನ್ನು ಒಬ್ಬ ಪೋಲಿಸ್ ಕಾನ್ ಸ್ಟೇಬಲ್ ಬಂದು ಎಬ್ಬಿಸಿದ. “ಸ್ಟೇಷನ್ನಿಗೆ ಬರಬೇಕೆಂತೆ” ಎಂದ ಕಾನ್ ಸ್ಟೇಬಲ್.
ವಾಸುವಿಗೆ ತಟ್ಟನೆ ಭೂಮಿಗಿಳಿದ ಹಾಗಾಯಿತು. “ನಾನೇ?”ಎಂದು ಕೇಳಿದ ಆಶ್ಚರ್ಯದಿಂದ. “ಹೌದು,” ಎಂದ ಕಾನ್ ಸ್ಟೇಬಲ್, “ಯಾಕೆ?” ಎಂದು ಕೇಳಿದ ವಾಸು.” “ಅದೆಲ್ಲಾ ಗೊತ್ತಿಲ್ಲ. ಕರಕೊಂಡು ಬಾಂತ ಹೇಳಿದರು ಸಬ್ಬಿನ್ಸ್ ಪೆಕ್ಟರು,” ಎಂದ ಆತ. ವಾಸು ತುಂಬಾ ಸಂದೇಹದಿಂದಲೇ ಆತನ ಜತೆ ಹೊರಟ. ಇಷ್ಟು ವರ್ಷದಿಂದ ಇಲ್ಲಿದ್ದೂ ಪೋಲಿಸು ಡಿಪಾರ್ಟ್ ಮೆಂಟಿನ ಯಾರ ಪರಿಚಯವೂ ಅವನಿಗೆ ಇದ್ದಿರಲಿಲ್ಲ.
ಕಾನ್ಸ್ಟೇಬಲ್ ನೇರವಾಗಿ ಅವನನ್ನು ಇನ್ಸ್ಪೆಕ್ಟರ್ ಮುಂದೆ ತಂದು ನಿಲ್ಲಿಸಿದ. ಇನ್ಸ್ಪೆಕ್ಟರು ಅವನಿಗೆ ಕುಳಿತುಕೊಳ್ಳುವಂತೆ ಹೇಳಲಿಲ್ಲ. ನೇರ ವಿಷಯಕ್ಕೆ ಬಂದರು.
“ನಿಮ್ಮ ಹೆಸರು?”
“ವಾಸುದೇವ”
“ಏನು ಕಸುಬು?”
“ಕೃಷಿ”
“ಏನು ಕೃಷಿ?”
“ಅಡಿಕೆ.”
“ಅಡಿಕೆ ಎಲ್ಲಿ ಬೆಳೆಯುತ್ತದೆ?”
ಪ್ರಶ್ನೆಯ ಉದ್ದೇಶ ಅರ್ಥವಾಗದೆ ವಾಸು ತಬ್ಬಿಬ್ಬಾದ.”
“ಇಲ್ಲೇನು ಮಾಡುತ್ತೀರಿ?”
ಅದಕ್ಕೂ ವಾಸು ಮೌನ.
“ಹೆಣ್ಣು ಬೇಟೆ ಅಲ್ಲವೆ? ಗಂಡಸರಿಲ್ಲದ ಮನೆಗಳಿಗೆ ಎಡತಾಕೋದು, ಎಳೆ ಹೆಣ್ಣುಗಳ ಬೆನ್ನು ಹತ್ತೋದು, ಅವರಿಗೆ ಬೆದರಿಕೆ ಹಾಕೋದು.”
“ನಾನು ಹಾಗೇನೂ ಮಾಡಿಲ್ಲ.”ಎಂದ ವಾಸು.
“ಮಾಡಿಲ್ವೆ? ಕಲ್ಯಾಣಿ ಟೀಚರ ಮನೆಯಲ್ಲೇನು ಕೆಲಸ ನಿನಗೆ?” ಇನ್ಸ್ ಪೆಕ್ಟರ್ ಬಹುವಚನದಿಂದ ಏಕವಚನಕ್ಕೆ ಇಳಿದರು.
“ಆ ಸಂಗತಿ ಬೇರೆ.”
ಇನ್ಸ್ ಪೆಕ್ಟರ್ ಕುರ್ಚಿಯನ್ನು ಹಿಂದಕ್ಕೆ ಒದ್ದು, ಧಡ್ಡನೆ ಮೇಲೆದ್ದರು. ಅವನ ಕುತ್ತಿಗೆಗೆ ಕೈಹಾಕಿ ಹೇಳಿದರು.
“ಇನ್ನೊಂದು ಬಾರಿ ಆಕೆ ಸುದ್ದಿಗೆ ಹೋದರೆ ನೋಡಿಕೂ…..ಒಡೆದು ಕೈಯಲ್ಲಿ ಕೊಡುತ್ತೇನೆ. ನಡೀ ಹೊರಗೆ!”
ಇನ್ಸ್ ಪೆಕ್ಟರ್ ತಳ್ಳಿದ ರಭಸಕ್ಕೆ ಅವನು ಅಷ್ಟು ದೂರಕ್ಕೆ ಮುಗ್ಗುರಿಸಿದ. “ಆ ಸಂಗತಿ ಬೇರಂತೆ ಬೇರೆ! ಹ್ಹೆ!” ಎಂದು ಇನ್ಸ್ ಪೆಕ್ಟರ್ ಅರ್ಭಟಿಸುವುದು ಕೇಳಿಸಿತು. ಅಪ್ರತಿಭನಾದ ವಾಸು ಎಲ್ಲಿಗೆ ಹೋಗುವುದೆಂದು ತಿಳಿಯದೆ ನಡೆದ; ತಲಪಿದುದು ರೇಲ್ವೆ ಸ್ಟೇಷನು. ಸ್ಟೇಷನಿನ ಪಕ್ಕದಲ್ಲಿ ದೊಡ್ಡದಾಗಿ ಬೆಳೆದಿದ್ದ ಆಲಮರದ ಕೆಳಗೆ ಕುಳಿತು ಸಿಗರೇಟು ಹಚ್ಚಿ ಏನೇನೋ ಯೋಚಿಸತೊಡಗಿದ. ಆದರೆ ಮನಸ್ಸು ಮಂಕಾಗಿತ್ತು – ಅಂಥ ಮನಸ್ಸಿನೊಳಗೇನು ಯೋಚನೆ? ಆಲದ ಮರದ ಕೆಳಗೆ ಕುಳಿತಾಗ ಅವನಿಗೆ ನೆನಪಾದುದು ಒಂದು ಮಕ್ಕಳ ಕತೆ – ಹೀಗೆಯೇ ಯಾತ್ರಿಕನೊಬ್ಬ ಮಧ್ಯಾಹ್ನದ ಬಿಸಿಲ ಝಳಕ್ಕೆ ಕುಳಿತು, ಛೀ ಇಷ್ಟು ಭಾರೀಮರಕ್ಕೆ ಇಷ್ಟು ಚಿಕ್ಕ ಹಣ್ಣೆ? ನೆಲದಲ್ಲಿ ಹರಿಯುವ ಕುಂಬಳದ ಬಳ್ಳಿಗೆ ಎಷ್ಟು ದೊಡ್ಡ ಕುಂಬಳ! ಸೃಷ್ಟಿ ಕರ್ತನಿಗೆ ಬುದ್ಧಿಯಾದರೂ ಇದೆಯೇ – ಎಂದು ಯೋಚಿಸುತ್ತ ನಿದ್ದೆ ಹೋಗಿದ್ದ. ನಿದ್ದೆ ಮಾಡುತ್ತಿರುವಾಗ ಅವನ ತಲೆ ಮೇಲೆ ಟಪ್ಪೆಂದು ಆಲದ ಹಣ್ಣೊಂದು ಬಿದ್ದು ಎಚ್ಚೆರಾಯಿತು. ಆಗ ಅವನಿಗೆ ಅನಿಸಿತು. ಈ ಮರದಲ್ಲಿ ಕುಂಬಳದಷ್ಟು ದೊಡ್ಡ ಹಣ್ಣು ಗಳಿರುತ್ತಿದ್ದರೆ ತಾನೀಗ ಸತ್ತೇ ಹೋಗುತ್ತಿದ್ದೆ ಎಂದು. ಆಲದ ಮರದ ಕೆಳಗೆ ಕುಳಿತಾಗೆಲ್ಲ ವಾಸುಗೆ ಈ ಕತೆ ನೆನಪಾಗುತ್ತಿತ್ತು. ಈಗ ಈ ಮರದಲ್ಲೂ ಚಿಕ್ಕ ಚಿಕ್ಕ ಕೆಂಪು ಹಣ್ಣುಗಳು ಯಥೇಚ್ಛ ಬೆಳೇದು ಹಕ್ಕಿಗಳಿಗೆ ಆಹಾರವಾಗಿದ್ದವು. ಅವು ತಿಂದು ಉಗಿದ ಬಾಕಿಯನ್ನು ಸುತ್ತ ಮುತ್ತ ಕಾಣಬಹುದಾಗಿತ್ತು.
ಅಂದಿನಿಂದ ವಾಸುವಿನ ರೀತಿ ಗೊತ್ತುಗುರಿಯಿಲ್ಲದಾಯಿತು. ಒಂದು ರಾತ್ರೆ ಅದೆಷ್ಟೋ ಹೊತ್ತಿಗೆ ಅವನು ಕುಂಬಳೆಯಿಂದ ಬರುತ್ತಿದ್ದ. ಮೋಟಾರು ಸೈಕಲನ್ನು ಅದರ ಪರಮಾವಧಿ ವೇಗಕ್ಕೆ ಏರಿಸಿದ್ದ. ರಾತ್ರಿ ಗಾಳಿ ರಪರಪನೆ ಮುಖಕ್ಕೆ ಹೊಡೆಯುತ್ತಿತ್ತು. ನೋಡನೋಡುತ್ತಿರುವಂತೆ ಮೊದಲ ತಿರುವು ಬಂತು. ಅದನ್ನು ರುಮ್ಮನೆ ಬಳಸಿಕೊಂಡದ್ದಾಯಿತು. ಎರಡನೇ ತಿರುವೂ ಬಂತು. ಅದನ್ನೂ ದಾಟಿದ, ಮೂರನೇ ತಿರುವು-ಎಡಕ್ಕೆ ಕಡಿದಾದ ಆಳ, ಕಾಡು ಮರಗಳು, ಕಲ್ಲು ಬಂಡೆಗಳು ಕೂಡಿದ್ದು. ವೇಗ ಕಡಮೆ ಮಾಡಿ ಕಾಲಿನಿಂದ ಬ್ರೇಕು ಚಲಾಯಿಸಬೇಕು ಎಂದುಕೊಳ್ಳುತ್ತಲೇ ಅದೆರಡನ್ನೂ ಅವನು ಮಾಡಲಿಲ್ಲ. ಮೋಟಾರು ಸೈಕಲ್ಲು ಆಕಾಶಕ್ಕೆ ನೆಗೆದು ಕೆಳಗೆ ಎಷ್ಟೋ ದೂರ ಹೋಗಿ ಬಿತ್ತು. ವಾಸುವಿನ ದೇಹ ಬಂಡೆಯೊಂದಕ್ಕೆ ಅಪ್ಪಳಿಸುತು. ಇದು ಮಂದಿಯ ಗಮನಕ್ಕೆ ಬಂದುದು ಮರುದಿನ ಬೆಳಗಾದ ಮೇಲೆಯೇ. ಆತ ಅಪಘಾತದಲ್ಲಿ ಮಡಿದನೇ ಅಥವಾ ಬೇಕೆಂತಲೇ ಜೀವ ತೆಗೆದುಕೊಂಡನೇ ಎಂಬ ಬಗ್ಗೆ ಹಲವು ಊಹಾಪೋಹಗಳಾದವು. ಆದರೆ ಈ ಘಟನೆ ನಡೆದಾಗ ಅವನಿದ್ದ ಮನಸ್ಸಿನ ಸ್ಥಿತಿಯಲ್ಲಿ ಇವೆರಡರ ನಡುವೆ ಅಂತರವೇನೂ ಇದ್ದಿರಲಾರದೆಂದು ಕಾಣುತ್ತದೆ.
*****