ಹೈದರಾಬಾದು ಮತ್ತು ಸಿಕಂದರಬಾದುಗಳ ನಡುವೆ ಸೀತಾಪಲಮಂಡಿ ಎಂಬ ಒಂದು ಸಣ್ಣ ಪೇಟೆಯಿದೆ. ಹಣ್ಣು ಬಿಡುವ ಕಾಲದಲ್ಲಿ ಸುತ್ತಮುತ್ತಲ ಪೇಟೆಗಳಲ್ಲಿ ಕೂಡ ಸೀತಾಫಲ ಧಾರಾಳ ದೊರೆಯುತ್ತಿದ್ದು ಈ ಪೇಟೆಗೆ ಮಾತ್ರ ಸೀತಾಪಲಮಂಡಿ ಎಂತ ಯಾಕೆ ಹೆಸರು ಬಂತೋ ತಿಳಿಯದು. ಹೈದರಾಬಾದಿನ ಇತರ ಪೇಟೆಗಳಲ್ಲಿ ಸಿಗುವಂತೆ ಸೀತಾಪಲಮಂಡಿಯಲ್ಲೂ ಬೀದಿಯ ಅಕ್ಕಪಕ್ಕಗಳಲ್ಲಿ ಕಾಣಿಸಿದ ತಿಂಡಿಗಳು ದೊರೆಯುತ್ತವೆ; ಮೆಣಸು, ಬೋಂಡ, ವಡೆ, ತೇಂಗೊಳಲು ಇತ್ಯಾದಿ.
ಇಲ್ಲಿ ಆರ್ಯಸಮಾಜದ ಗ್ರಂಥಾಲಯದ ಪಕ್ಕ ಲಚ್ಚಮ್ಮನಿಗೆ ಇಂಥ ತಿಂಡಿಗಳ ವ್ಯಾಪಾರವಿದೆ. ಇವಳು ಮೆಣಸಿನ ಲಚ್ಚಮ್ಮನೆಂದೇ ಪ್ರಸಿದ್ಧಿ. ಇವಳ ಮನೆಯದುರೇ ವ್ಯಾಪಾರ. ಮನೆಯಿಂದರೆ ಮನೆಯೇನಲ್ಲ ಅದು. ಬೀದಿ ಬದಿಯೇ ಉದ್ದ ಕಟ್ಟಡವೊಂದರಲ್ಲಿ ಬಾಡಿಗೆ ಹಿಡಿದ ಒಂದು ಕೋಣೆ. ಬೀದಿಯ ಕಡೆಗೆ ಒಂದು ಬಾಗಿಲು, ಹಿಂದೆ ಒಂದು ಕಿಟಿಕಿ,ಇಷ್ಟೆ. ಆಚೀಚೆ ಇಂಥದೇ ಹತ್ತಾರು ಕೋಣೆಗಳಲ್ಲಿ ಇತರ ಯಾರು ಯಾರೋ ಇದ್ದಾರೆ. ಈ ಒಂದು ಕೋಣೆಯಲ್ಲಿ ಲಚ್ಚಮ್ಮ, ಗಂಡ ಆಂಜನೇಯಲು, ಎರಡು ವರ್ಷದ ಮಗು ಚೊಕ್ಕ – ಇವರ ವಾಸ್ತವ್ಯ.
ಮನೆಯೆದುರು ಹಂಚಿನ ಮಾಡಿಗೆ ತಟ್ಟಿಗಳನ್ನು ಕಟ್ಟಿ ಸ್ವಲ್ಪ ಇಳಿಸಿದ್ದಾರೆ. ಕೆಳಗೆ ಒಂದು ಒಲೆ, ಒಲೆಯ ಮೇಲೊಂದು ಬಾಣಲೆ. ಸಂಜೆ ಜನರು ಅಂಗಡಿ ಸಾಮಾನು ಕೊಳ್ಳುವುದಕ್ಕೆಂದೋ ಗಾಳಿ ಸೇವನೆಗೆಂದೋ ಹೊರಡುವ ಸಮಯವಲ್ಲದೆ ವ್ಯಾಪಾರ ಸುರುವಾಗುವಂತಿಲ್ಲ. ಆಯಾ ದಿನಕ್ಕೆ ಬೇಕಾದ ಎಣ್ಣೆ, ಮೆಣಸು, ಕಡ್ಲೆ ಹಿಟ್ಟು ಇತ್ಯಾದಿ ಕಚ್ಚಾ ಸಾಮಗ್ರಿಗಳನ್ನು ಬೆಳಗ್ಗೇನೇ ಖರೀದಿಸಿ ತರುತ್ತಾನೆ ಆಂಜನೇಯಲು. ಆಮೇಲೆ ಆತ ಏನಾದರೂ ಕೂಲಿ ಕೆಲಸಕ್ಕೆ ಹೊರಟು ಹೋಗುತ್ತಾನೆ. ಕೂಲಿ ಕೆಲಸದ್ದೇನೂ ಖಂಡಿತವಿಲ್ಲ. ಸಿಕ್ಕಿದ ದಿನ ಸಿಕ್ಕಿತು. ಇಲ್ಲದ ದಿನ ಇಲ್ಲ. ಮಧ್ಯಾಹ್ನದ ಹೊತ್ತಿಗೆ ಹಿಟ್ಟುಗಳನ್ನು ಬೇಕಾದ ಹಾಗೆ ರುಬ್ಬಿ, ಉಪ್ಪು ಬೆರೆಸಿ ಇಟ್ಟಿರುತ್ತಾಳೆ ಲಚ್ಚಮ್ಮ.
ಸಂಜೆ ಸುಮಾರು ಐದು ಐದೂವರೆ ಸಮಯ ವ್ಯಾಪಾರ ಸುರು. ಮಳೆಗಾಲದ ತುಂತುರು ಮಳೆಯ ದಿನಗಳಲ್ಲಿ ಬೇಗನೆ ಸುರುವಾಗುವುದೂ ಇದೆ. ಜನರ ಬಯಕೆ ಯನ್ನು ಹೊಂದಿಕೊಂಡು ತಿಂಡಿಗಳು ತಯಾರಾಗಬೇಕು.
ಇವೆಲ್ಲ ಧೀಡಿರ್ ತಿಂಡಿಗಳು, ಗಿರಾಕಿಗಳ ಆಸೆಯಂತ ಬಿಸಿಬಿಸಿಯಾಗಿ ಅವರೆದುರಲ್ಲಿ ಕರಿದೇ ಕೊಡುವುದುಂಟು. ಕೂಲಿಗೆ ಹೋಗದ ದಿನಗಳಲ್ಲಿ ಆಂಜನೇಯಲು ಒಲೆಯ ಮುಂದೆ ಕುಳಿತುಕೊಳ್ಳುತ್ತಾನೆ. ಆತನಿಲ್ಲದ ದಿನಗಳಲ್ಲಿ ಲಚ್ಚಮ್ಮ ಚೊಕ್ಕನನ್ನು ತೊಡೆಯ ಮೇಲೇರಿಸಿಕೊಂಡು ತಿಂಡಿಗಳ ವ್ಯಾಪಾರ ಮಾಡುತ್ತಾಳೆ.
ಕಮ್ಮಂ ಜಿಲ್ಲೆಯ ಹಳ್ಳಿಯೊಂದರಿಂದ ಗತಿಯಿಲ್ಲದೆ ಹೈದರಾಬಾದಿಗೆ ಬಂದಾಗ ತಿಂಡಿ ವ್ಯಾಪಾರ ಮಾಡುತ್ತೇವೆಂದು ಆಂಜನೇಯಲು ವಾಗಲಿ ಲಚ್ಚಮ್ಮನಾಗಲಿ ಕನಸೂ ಕಂಡಿರಲಿಲ್ಲ. ಬಂದ ಹೊಸತಿಗೆ-ಆಗ ಚೊಕ್ಕ ಹುಟ್ಟಿರಲಿಲ್ಲ- ವಾಸಕ್ಕೆ ಸ್ಥಳ ಕೂಡ ದೊರೆಯದೆ ಕೆಲವು ದಿನ ರೈಲ್ವೇ ಸ್ಟೇಷನ್ನಿನ ಹೊರಗಡೆ ಬಿಡಾರ ಮಾಡಿ ಇಬ್ಬರೂ ಉಪವಾಸ ಬಿದ್ದದ್ದುಂಟು. ಆಮೇಲೆ ಕೂಲಿ ನಾಲಿ ಮಾಡುತ್ತ ದಿನ ಕಳೆದರು. ನಿಧಾನವಾಗಿ ಕುಳಿತಲ್ಲೇ ಗೋಣಿ ಹೊದೆಸಿದ ಒಂದು ಗುಡಿಸಲು ಮೇಲೆ ಬಂತು.
ಗುಡಿಸಲು ಕಟ್ಟುವ ಸಂದರ್ಭದಲ್ಲಿ ಹಲವು ಅಡಚಣೆಗಳು ಬಂಡವು. ಪೊಲೀಸರು ತಡೆಯೊಡ್ಡಿದರು. ದಾದಾಗಳು ಬೆದರಿಸಿದರು. ಆಂಜನೇಯಲುಗೆ ಭಯನಾಟಿತು. ಇಲ್ಲಿಂದ ಕಾಲು ಕೀಳುವ ಎಂದ ಲಚ್ಚಮ್ಮನಿಗೆ. ಎಲ್ಲಿಗೆ ಎಂದರೆ ಎಲ್ಲಾದರೂ ಸರಿ ಇಲ್ಲಿಂದ ಹೊರಡುವ ಮೊದಲು ಎಂದ. ಇಂಥವರು ಬೇರೆ ಕಡೆ ಇರೋದಿಲ್ಲವೆ? ಹೀಗೆ ವಲಸೆ ಹೋಗ್ತಾ ಇರೋದಕ್ಕೇನು ಹಳ್ಳಿಯಿಂದ ಪೇಟೆಗೆ ಬಂದದ್ದು? ಇವರನ್ನೆಲ್ಲ ನಾನು ನೋಡಿಕೊಳ್ತೇನೆ, ಸುಮ್ಮನಿರು ನೀನು ಎಂದು ಲಚ್ಚಮ್ಮ ಅವನಿಗೆ ಧೈರ್ಯ ಹೇಳಿದಳು. ಕೊನೆಕೊನೆಗೆ ಯಾರೂ ಅವರ ಹಿಂಸೆಗೆ ಬರಲಿಲ್ಲ. ಲಚ್ಚಮ್ಮ ಯಾವ ವಿದ್ಯೆ ಪ್ರಯೋಗಿಸಿದಳೋ ಆಂಜನೇಯಲುವಿಗೆ ತಿಳಿಯದು. ಮೊದಮೊದಲು ಹೆದರಿಸಿದವರೇ ಈಗ ಭಾರೀ ಸ್ನೇಹಿತರಂತೆ ಗುಡಿಸಲಿನಲ್ಲಿ ಒಕ್ಕರಿಸಲು ಸುರು ಮಾಡಿದರು.
ಒಂದು ದಿನ ಜಗಳವಾಯಿತು- ಆಂಜನೇಯಲು ಮತ್ತು ಲಚ್ಚಮ್ಮನಿಗೆ. ಅದೊಂದು ನಿರ್ಣಾಯಕ ಮಟ್ಟದ ಜಗಳ. ಎರಡರಲ್ಲಿ ಒಂದು ನಿಶ್ಚಯವಾಗಲೇ ಬೇಕು ಎಂಬ ಹಠದಲ್ಲಿ ಸುರುವಾದ ಜಗಳ. “ನಿನಗೀಗ ನಾನು ಬೇಡವಾದರೆ ಬೇಕಾದಲ್ಲಿಗೆ ಹೊರಟು ಹೋಗು.” ಎಂದಳು ಲಚ್ಚಮ್ಮ ಗಂಡನಿಗೆ. ಲಚ್ಚಮ್ಮ ಆಗ ಬಸುರಿ. ಬಸುರಿಯನ್ನು ಬಿಡುವುದಕ್ಕೆ ನಾನೇನು ಶ್ರೀರಾಮನೇ ಎಂದು ಆಂಜನೇಯಲು ಉಳಿದ. ಹೊಸ ಜೀವನಕ್ಕೆ ಹೊಂದಿಕೊಂಡ. ಹೀಗೆ ಜಗಳ ಲಚ್ಚಮ್ಮನ ಪರವಾಗಿ ತನಗೆ ತಾನೇ ತೀರ್ಮಾನವಾಯಿತು.
ಆದ್ಧರಿಂದಲೇ ಆಮೇಲೆ ಸೀತಾಪಲಮಂಡಿಯಲ್ಲಿ ಐನೂರು ರೂಪಾಯಿ ಮುಂಗಡ ತೆತ್ತು ಕೋಣೆ ಹಿಡಿಯುವುದಕ್ಕೆ ಮತ್ತು ತಿಂಡಿ ವ್ಯಾಪಾರ ತೆರೆಯುವುದಕ್ಕೆ ಸಾಧ್ಯವಾಯಿತು. ಹೊಸಮನೆ ಮಾಡುವುದಕ್ಕೆ ಲಚ್ಚಮ್ಮನದೇ ಪ್ರೇರೇಪಣೆ. ಇಲ್ಲಿಗೆ ಬಂದಮೇಲೆ ಲಚ್ಚಮ್ಮ ಪೊಲೀಸರು ಅಥವಾ ದಾದಾಗಳನ್ನು ಕಣ್ಣೆತ್ತಿ ಕೂಡ ನೋಡಿದವಳಲ್ಲ. ಹಾಗೆಂದು ಒಂದೆರಡು ಬಾರಿ ದುಡ್ಡಿನ ಕುಳಗಳು ತನ್ನ ಮನೆಗೆ ಯಾವಾಗಲೋ ಬಂದು ಯಾವಾಗಲೋ ಹೋಗುವುದನ್ನು ಆಂಜನೇಯಲು ಕಂಡಿದ್ದಾನೆ. ಆ ಕುರಿತು ಹೆಂಡತಿಯೊಡನೆ ಕೇಳುವುದು ಮನೆಯ ಶಾಂತಿಗೆ ತೊಂದರೆಯೆಂದು ಅವನಿಗೆ ಗೊತ್ತು.
ಹೀಗಿರುವಾಗ ಒಮ್ಮೆ ಇವರಿಗೊಂದು ಕಂಟಕ ವಕ್ರಿಸಿತು. ಅದೊಂದು ಮಳೆಗಾಲದ ಸಂಜೆ ಸುಮಾರು ಏಳು ಗಂಟೆ. ಬೀದಿ ದೀಪಗಳು ಹೊತ್ತಿದ್ದವು. ಮಳೆ ಹನಿ ಹಾರುತ್ತಿತ್ತು. ಆಂಜನೇಯಲು ಒಲೆ ಮುಂದೆ ಕುಳಿತು ಮೆಣಸಿನ ಬೊಂಡ ಕರಿಯುತ್ತಿದ್ದ. ಆಗ ಸುಮಾರು ಮೂವತ್ತು ವರ್ಷದ ಒಬ್ಬ ವ್ಯಕ್ತಿ. ಒಳ್ಳೆ ಗಟ್ಟಿ ಮುಟ್ಟಿನ ಜನ ಬಂದು ಕರಿದಿಟ್ಟ ಮೆಣಸಿಗೆ ಕೈ ಹಾಕಿತು. ಒಂದೆರಡನ್ನೆತ್ತಿ ಜಗಿದು ಚಪ್ಪರಿಸುವುದಕ್ಕೆ ಸುರು ಮಾಡಿತು.
ಆಂಜನೇಯಲು ಅವನನ್ನು ಗಮನಿಸಿ ನೋಡಿದ. ಸಾಧಾರಣ ಗಿರಾಕಿಗಳು ಯಾರೂ ಬೆಲೆ ಕೇಳದೆ, ಖರೀದಿಸದೆ ತಿಂಡಿಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿರಲಿಲ್ಲ. ಈ ಗಿರಾಕಿಯ ರೀತಿ ಹೊಸದು, ಈತ ಕೆಂಪು ಲುಂಗಿ, ಅದರ ಮೇಲೊಂದು ಕಪ್ಪು ಬನೀನು, ತಲೆಗೆ ಕೆಂಪಿನದೇ ಕರವಸ್ತ್ರ ತೊಟ್ಟುಕೊಂಡಿದ್ದ. ಮೀಸೆಯಿತ್ತು. ಕೈಯಲ್ಲೊಂದು ಮಡಚಿಟ್ಟ ಚೊರಿ. ಒಬ್ಬ ದಾದಾನಲ್ಲಿರಬೇಕಾದ ಸಕಲ ಲಕ್ಷಣಗಳೂ ಇವನಲ್ಲಿದ್ದವು. ಸೀತಾಪಲಮಂಡಿಯಲ್ಲಿ ದಾದಾರ ಕಾಟ ಈ ವರೆಗೆ ಇರಲಿಲ್ಲ. ಇದ್ದರೂ ತಿಂಡಿ ಕಾಯಿಸಿ ಮಾರಿ ಹೊಟ್ಟೆ ಹೊರೆಯುವ ಚಿಲ್ಲರೆ ಜನರ ಮೇಲೆ ಅವರ ದೃಷ್ಟಿ. ಈವರೆಗೆ ಬಿದ್ದದ್ದಿಲ್ಲ. ಇಲ್ಲಿಗೆ ಬಂದ ಒಂದು ವರ್ಷದಲ್ಲಿ ಆಂಜನೇಯಲುಗೆ ಒಂದು ವರ್ಷದಲ್ಲಿ ಆಂಜನೇಯಲುಗೆ ಅಂಥ ಅನುಭವ ಆಗಿರಲಿಲ್ಲ.
“ರೂಪಾಯಿಗೆ ಹತ್ತು.”ಎಂದ ಆಂಜನೇಯಲು ಹಲ್ಲು ತೆರೆದು.
“ಒಲೆಯಲ್ಲಿರೋದನ್ನ ತೆಗೆ” ಎಂದ ದಾದಾ.
ಆಂಜನೇಯಲು ಬಾಣಲೆಯಲ್ಲಿ ಅರಳುತ್ತಿದ್ದ ಮೆಣುಸುಗಳನ್ನು ಸೌಟಿನಿಂದ ಆಚೀಚೆ ಆಡಿಸಿ ಮೇಲೆ ತೆಗೆದು ಬುಟ್ಟಿಗೆ ಹಾಕಿದ.
“ನಾಲ್ಕು ವಡೆ ಕಾಯ್ಸು ನೋಡೋಣ” ಎಂದ ದಾದಾ, ಬಿಸಿ ಮೆಣಸೊಂದನೆ ಬಾಲವನ್ನು ಹಲ್ಲುಗಳೆಡೆಯಲ್ಲಿ ಕಚ್ಚಿಹಿಡಿದು. ಆಂಜನೇಯಲು ವಡೆ ತಟ್ಟಿ ಎಣ್ಣೆಗೆ ಹಾಕಿ ತೊಳಸುತ್ತ ಕುಳಿತ. ಎದುರಿಗೆ ದಾದಾ ಮೆಣಸುಗಳನ್ನು ಒಂದೊಂದಾಗಿ ನಾಶ ಮಾಡುತ್ತ ಕುಳಿತ, ಆಂಜನೇಯಲು ವಡೆಗಳನ್ನು ಮೇಲೆತ್ತಿ ಹಾಕಿದ. ದಾದಾ ಈಗ ವಡೆಗಳನ್ನು ರುಚಿರುಚಿಯಾಗಿ ತಿನ್ನತೊಡಗಿದ. ಸ್ವತಃ ಆಂಜನೇಯಲು ಕೂಡ ಹೀಗೆ ತಿಂದದ್ದಿಲ್ಲ; ಮುಗಿದು ಹೋಗುತ್ತಲ್ಲ ಎಂಬ ಭೀತಿಯಿಂದ. ಅವನಿಗೀಗ, ಆಸೆ, ಅಸೂಯೆ, ಭಯ, ಸಿಟ್ಟು ಒಮ್ಮೆಗೇ ಆಯಿತು. ಆದರೇನೂ ಮಾಡುವಂತಿಲ್ಲ.
ತಿಂದು ಮುಗಿಸಿದ ದಾದಾನ ಮುಖದಲ್ಲಿ ಇಲಿಯೊಂದನ್ನು ಕಚ್ಚಿ ತಿಂದ ಬೆಕ್ಕಿನ ಕಳೆಯಿತ್ತು.
“ತಿಂಡಿ ಪರವಾಯಿಲ್ಲ. ಸರಿ ಇನ್ನು ನಾಳೆ ಕಾಣುವಾ” ಎಂದು ದಾದಾ ಎದ್ದು ಹೊರಟ. ಕಷ್ಟ! ಇನ್ನು ನಾಳೆಯೂ ಇವನ ಬರೋಣ ಇದೆಯೇ ಎಂದು ಆಂಜನೇಯಲು ಕುಳಿತಲ್ಲೇ ಕುಸಿದ. ಅಷ್ಟರಲ್ಲಿ ಒಳಗಿನಿಂದ ಧಾವಿಸಿದ ಲಚ್ಚಮ್ಮ “ದುಡ್ಡು ಕೊಟ್ಟು ಹೋಗು ಧಾಂಡಿಗಿನೆ” ಎಂದು ಅರಚೆದಳು. ಹೊರಡುವುದರಲ್ಲಿದ್ದ ದಾದಾ ತಿರುಗಿ ನಿಂತು ಲಚ್ಚಮ್ಮನತ್ತ ಕಣ್ಣು ಹಾಯಿಸಿ ನಕ್ಕ.
“ಗಲಾಟೆ ಮಾಡಿದರೆ ನಿನ ಗಂಡನನು ಬಾಣಲೆಯಲ್ಲಿ ಹಾಕಿ ಹುರಿದು ತಿಂದೇನು” ಎಂದು ಆಂಜನೆಯಲುವಿನ ತಲೆ ಕೂದಲು ಹಿಡಿದು ಒಮ್ಮೆ ಎತ್ತಿ ಹಿಂದಕ್ಕೆ ತಳ್ಳಿದ. ಆಂಜನೇಯಲು ಕಡಲೆ ಹಿಟ್ಟಿನ ಮೇಲೆ ಬಿಡ್ಡು ಅವನ ಕಿವಿಯೊಳಕ್ಕೆ ಹಿಟ್ಟು ಹೋಗಿ ತಲೆ ಕೊಡವತೊಡಗಿದ.
“ನಾಳೆ ಬರ್ತೇನೆ” ಎಂದು ಲಚ್ಚಮ್ಮನತ್ತ ಕೈಬೆರಳುಗಳನ್ನಾಡಿಸಿ ದಾದಾ ಹೊರಟು ಹೋದ. ಲಚ್ಚಮ್ಮ ಗಂಡನನ್ನು ಒಳಕ್ಕೆಳೆದುಕೊಂಡು ಹೋದಳು.
ಮರುದಿನ ಸಂಜೆ ವ್ಯಾಪಾರ ತೆರೆದದ್ದು ಲಚ್ಚಮ್ಮ. ದಾದಾ ಬರ್ತಾನೋ ಹೇಗೆ ಎಂದು ಅರ್ಧ ಮುಚ್ಚಿದ ಬಾಗಿಲಿನಿಂದ ಹೊರಕ್ಕೆ ನೋಡುತ್ತಿದ್ದ ಆಂಜನೇಯಲು. ಮುಂದಾಗಲಿರುವ ನಾಟಕದ ಸಂಶಯ ಕೂಡ ಇಲ್ಲದೆ ಚೊಕ್ಕ ಒಂದು ಮೂಲೆಯಲ್ಲಿ ನಿದ್ದೆ ಮಾಡುತ್ತಿದ್ದ.
ಹೊರಗೆ ದೊಡ್ಡ ಮಳೆ ಹನಿಗಳು ಬೀಳುತ್ತಿದ್ದವು. ಗಾಳಿ ಥಂಡಿಯಾಗಿತ್ತು. ಇಂಥ ಹವೆ ಕಾಯ್ಸುವ ತಿಂಡಿಗಳಿಗೆ ಒಳ್ಳೇದು. ಕೆಲವರು ಬಂದು ವಡೆ ಮೆಣಸುಗಳನ್ನು ಕೊಂಡು ಹೋದರು. ಲಚ್ಚಮ್ಮ ಮಂಡಿಯೂರಿ ಇನ್ನಷ್ಟು ವಡೆ
ಗಳನ್ನು ಬಾಣಲೆಯಲ್ಲಿ ಹಾಕಿದಳು. ಶೀತಕ್ಕೆಂದು ಒಂದು ಮೆಣಸು ಕಚ್ಚಿ ತಿನ್ನ ತೊಡಗಿದಳು. ಇದೆಲ್ಲ ಒಂದು ವಿಧ ದಾದಾರನ್ನು ಎದುರಿಸುವ ತಯಾರಿ ಎಂದು ಆಕೆಗೂ ಗೊತ್ತು. ಒಳಗೆ ಹೆದರಿ ಕುಳಿತ ಆಕೆಯ ಗಂಡನಿಗೂ ಗೊತ್ತು.
ನಿನ್ನೆಯದೇ ಹೊತ್ತಿಗೆ ಸುಮಾರಿಗೆ ಎಲ್ಲಿಂದಲೋ ಅವತರಿಸಿದ ದಾದಾ. ನಿನ್ನೆಯದೇ ಉಡುಪು. ಬೇರೆ ಇಲ್ಲವೇನೂ ಇವನಿಗೆ. ಎಲ್ಲಿಂದಲೋ ಕೆಲಸ ಕಳಕೊಂಡು ಅಥವಾ ಜೈಲಿನಿಂದ ಹೊರಬಂದು ಅಲೆಮಾರಿಯಾಗಿ ಈಗ ಗೂಂಡಾ ಆಗುವ ಪ್ರಯತ್ನ ಇವನದು ಎಂದುಕೊಂಡಳು ಲಚ್ಚಮ್ಮ. ತನ್ನ ಗಂಡ ಒಳಗೆ ಅಡಗಿ ಕುಳಿತಿದ್ದಾನೆ. ಅವನನ್ನು ಅಟ್ಟಿ ಇವನನ್ನೇ ಗಂಡ ಮಾಡಿದರೆ ಹೇಗೆ ಎಂಬ ವಿಚಾರವೂ ಅವಳಲ್ಲಿ ಕ್ಷಣ ಸುಳಿಯದೆ ಇರಲಿಲ್ಲ. ಛೇ ಚೇ ಇಂಥವರನ್ನು ನಂಬಲಿಕ್ಕಾಗುವುದಿಲ್ಲ. ಆಂಜನೇಯಲುವಾದರೆ ಹೇಳಿದ್ದು ಕೇಳಿಸಿಕೊಂಡು ಅನುಕೂಲವಾಗಿರ್ತಾನೆ ಅಥವಾ ಹಾಗೆಲ್ಲ ಮಾಡುವುದಕ್ಕೆ ತಾನೇನು ಗಯ್ಯಾಳಿಯೇ. ಒಂದು ಕುಟುಂಬ ಅಂತ ಬೇಡವೆ ಎಂದುಕೊಂಡಳು.
ಆದರೆ ಈಗ ಈ ದಾದಾನನ್ನು ಎದುರಿಸುವುದು ಹೇಗೆ? ಆಸೆ ಆಮಿಷವೆ? ಬೆದರಿಕೆಯೆ? ಆಂಜನೇಯಲು ಒಬ್ಬ ನೆಟ್ಟಗೆ ನಿಂತಿದ್ದರೆ ಇವನನ್ನು ಓಡಿಸಬಹುದಿತ್ತು. ಇಲಿಯಂತೆ ಮೂಲೆ ಸೇರಿ ಜಗಳಕ್ಕೆ ನನ್ನನ್ನು ಬಿಟ್ಟಿದ್ದಾನೆ.
ದಾದಾ ಬಂದು ಬದಿಯಲ್ಲಿ ಕೂತ. ಕಣ್ಣು ಮಿಟುಕಿಸಿ ಒಂದು ವಡೆ ಎತ್ತಿ ಬಾಯಲ್ಲಿ ಹಾಕಿ ಚಪ್ಪರಿಸಿದ. ಲಚ್ಚಮ್ಮ ಸ್ವಲ್ಪ ನಕ್ಕಳು. ಇದರಿಂದ ಧೈರ್ಯಗೊಂಡ ದಾದಾ “ಎಲ್ಲಿ ನಿನ್ನ ಗಂಡ?” ಎಂದ. ’ಗಂಡ’ ಎಂಬ ಶಬ್ದಕ್ಕೆ ’ಕಸ’ ಎಂಬ ಅರ್ಥ ಹಾಕಿ. ’ಗಂಡ’ ಎಂದಳು ಲಚ್ಚಮ್ಮ ಅದೇ ಅರ್ಥವನ್ನು ಸಮರ್ಥಿಸುತ್ತ. ಇದನ್ನು ಕೇಳಿ ಒಳಗಿದ್ದ ಆಂಜನೇಯಲು ಅರ್ಥಕ್ಕೆ ಇಳಿದ.
ದಾದಾ ಮತ್ತು ಲಚ್ಚಮ್ಮ ಇಬ್ಬರೂ ನಕ್ಕರು. ದಾದಾ ಇನ್ನಷ್ಟು ವಡೆಗಳನ್ನು ಕಬಳಿಸಿದ. “ಭಾರೀ ಜೋರಿದ್ದೆಯಲ್ಲ ಹೆಣ್ಣೆ ನಿನ್ನೆ” ಎಂದ. “ಬದುಕಬೇಕಲ್ಲ” ಎಂದಳು ಗೋಗರೆಯುವ ರೀತಿಯಲ್ಲಿ. ಸೀರೆಯನ್ನು ಬೇಕೆಂದೆ ಮೊಣಕಾಲಿನವರೆಗೆ ಸರಿಸಿದಳು. ಇವರಿಬ್ಬರ ಚಕ್ಕಂದ ನೋಡುತ್ತಿದ್ದ ಆಂಜನೇಯಲುವಿಗೆ ರೈಲ್ವೇ ಸ್ಟೇಷನ್ನಿನ ಹಿಂದೆ ಕಳೆದ ದಿನಗಳ ನೆನಪಾಗಿ ಭಯವಾಯಿತು. ಸೀತಾಪಲಮಂಡಿಗೂ ಆಯ್ತಲ್ಲ ಗತಿ. ಇನ್ನು ನಾಲ್ಕು ಜನರಿಗೆ ಗೊತ್ತಾಗುವುದೊಂದು ಬಾಕಿ. ಮನೆಗೂ ಚಾರ್ ಮಿನಾರಿನ ಸೊಳೆಗೇರಿಗೂ ವ್ಯತ್ಯಾಸ ಇರೋದಿಲ್ಲ. ಮನೆ ಮಾಲಿಕರು ಮೆಟ್ಟಿ ಓಡಿಸ್ತಾರೆ ಆಮೇಲೆ, ಮತ್ತೆ ರೈಲ್ವೇ ಸ್ಟೇಷನೋ ಮಾರ್ಕೆಟ್ಟೋ ಅಂತ ಹುಡುಕ ಬೇಕು. ಆಂಜನೇಯಲುವಿಗೆ ಹೆಂಡತಿಯ ಮೇಲೆ ಅಗಾಧವಾದ ಸಿಟ್ಟು ಬಂತು. ಗೋಡೆಗೆ ಒದ್ದ.
ಬೇಕಾದಷ್ಟು ವಡೆ ಮೆಣಸುಗಳನ್ನು ತಿಂದ ಮೇಲೆ ದಾದಾನ ದೃಷ್ಟಿ ಲಚ್ಚಮ್ಮನ ಸಮೀಪ ಇದ್ದ ದುಡ್ಡಿನ ಪೆಟ್ಟಿಗೆಯೊಳಗೆ ಇಳಿಯಿತು. ಚಿಲ್ಲರೆಗಾಯಿತು ಎಂದು ಆಕೆ ಒಂದು ರೂಪಾಯಿನ ನೋಟುಗಳನ್ನೂ ನಾಲ್ಕಾಣೆ ಎಂಟಾಣೆ ಪಾವಲಿಗಳನ್ನೂ ಅದರಲ್ಲಿ ಹಾಕಿ ಇಟ್ಟಿದ್ದಳ್ಳು. ದಾದಾ ಅದಕ್ಕೆ ಕೈ ಹಾಕಿ ಐದು ರೂಪಾಯಿಗಳನ್ನು ತೆಗೆದ. ವಾಸ್ತವವಾಗಿ ಐದು ರೂಪಾಯಿಗಳನ್ನು ಬೇಕೆಂತಲೆ ತೆಗೆದದ್ದಲ್ಲ ಅವನು. ಅವನ ಅಗತ್ಯಗಳಿಗೆ ಐದು ರೂಪಾಯಿಗಳೇನೂ ಸಾಲವು. ಲಚ್ಚಮ್ಮನಂಥ ತಿಂಡಿ ವ್ಯಾಪಾರಿಯಿಂದ ಒಮ್ಮೆಲೆ ಐದು ರೂಪಾಯಿಗಳನ್ನೆತ್ತವುದು ಹೆಚ್ಚೆಂಬುದನ್ನೂ ಆತ ಬಲ್ಲ. ಆದರೆ ಈಗ ಐದು ರೂಪಾಯಿಗಳನ್ನೆತ್ತಿದ ಆತನ ಉದ್ದೇಶವೇ ಬೇರೆ. ಈಕೆ ಯಾವ ರೀತಿ ಮಾತೆತ್ತುತ್ತಾಳೆ, ಕೂಗುತ್ತಾಳೋ: ಮೊರೆ ಹೋಗುತ್ತಾಳೋ, ಏನು ಮಾಡುತ್ತಾಳೆ ನೋಡೋಣ ಎಂದು.
ಲಚ್ಚಮ್ಮ ಮಾಡಿದ್ದು ಅವನ ಉಹೆಗೂ ನಿಲುಕದ್ದು. ಹಿಟ್ಟಿನ ಸೌಟನ್ನು ತೆಗೆದಳು. ದಾದಾ ಒಂದು ರೂಪಾಯಿನ ಐದು ನೋಟುಗಳನ್ನು ಎಣಿಸುತ್ತಲಿದ್ದ. ಬಾಣಲೆಯಲ್ಲಿ ಎಣ್ಣೆ ಕುದಿಯುತ್ತಿತ್ತು. ಲಚ್ಚಮ್ಮ ಒಂದು ಸೌಟು ತುಂಬ ಬಿಸಿ ಎಣ್ಣೆ ತೆಗೆದು ಅವನ ಮುಖಕ್ಕೆ ರಾಚಿದಳು. ಇದು ಕಣ್ಣು ಮೂಗು ಬಾಯಿಗಳಲ್ಲಿ ಹರಡುವ ಮೊದಲೆ ಇನ್ನೊಂದು ಸೌಟು ಎಣ್ಣೆ ಅವನ ನೆತ್ತಿಯಲ್ಲಿ ಸುರಿಯುತು. ಮೇಲೆ ಆಚೀಚೆ ಇನ್ನೆರಡು ಸೌಟು ಎರಚುವುದರೊಳಗಾಗಿ ದಾದಾ ಉರುಳಿ ಬೀದಿಗೆ ಬಿದ್ದಿದ್ದ.
ಅವನು ಮಾಡಿದ ಬೊಬ್ಬೆಗೆ ಆಚೀಚೆನಿಂದ ಜನ ಸೇರಿದರು. ಏನು ನಡೆಯಿತೆಂಬ ಸಂಗತಿ ಯಾರಿಗೂ ಗೊತ್ತಾಗಲಿಲ್ಲ. ದಾದಾ ನೋವಿನಿಂದ ಬೀದಿ ತುಂಬ ಹೊರಳುತ್ತಿದ್ದ. ಬಿಸಿ ಎಣ್ಣೆ ಗಾಯಕ್ಕೆ ಮಳೆ ನೀರು ತಾಗಿ ಅವನ ಮುಖದ ಮೇಲೆ ದೊಡ್ಡ ದೊಡ್ಡ ಗುಳ್ಳೆಗಳೆದ್ದಿದ್ದುವು. ನೆತ್ತಿಯಲ್ಲಿ ಕೂದಲು ಸುಟ್ಟು ಬೊಕ್ಕೆ ಬಂದಿತ್ತು. ಲಚ್ಚಮ್ಮ ಕುಳಿತಲ್ಲಿಂದ ಎದ್ದು, ಸೇರಿದ ಜನಕ್ಕೆ ತಿಳಿಸಿದಳು : “ಅಯ್ಯೋ ಪಾಪ! ಮೆಣಸಿಗೆಂದು ಬಂದಿದ್ದ. ಕೆಸರಿಗೆ ಕಾಲು ಜಾರಿ ಬಾಣಲೆಗೆ ಬಿದ್ದ. ಯಾರಾದರೂ ಸ್ವಲ್ಪ ಆಸ್ಪತ್ರೆಗೆ ಸಾಗ್ಸಿಯಪ್ಪಾ ಅವನ್ನ.”
“ಅರ್ಧ ಮೈಲು ದೂರದ ಆಸ್ಪತ್ರೆಗೆ ಅವನನ್ನು ಆಟೋರಿಕ್ಷಾದಲ್ಲಿ ಹಾಕಿ ಸಾಗಿಸಿದರು. ಈ ಮಧ್ಯೆ ಕೋಣೆಯೊಳಗೆ ಎಚ್ಚರವಾದ ಬೊಕ್ಕ ಕುಯ್ಯೋಂ ಮುಯ್ಯೋಂ ಬೊಬ್ಬೆ ಹಾಕುವುದರಲ್ಲಿದ್ದಾಗ ಆಂಜನೇಯಲು ಅವನ ಬಾಯಿ ಮುಚ್ಚಿ ಹಿಡಿದು ತೊಡಗೆ ರೋಷದಿಂದ ಚಿವುಟಿದ. ಮಗುವನ್ನು ಈ ಅವಸ್ಥೆಯಲ್ಲಿ ಹಿಡಿದುಕೊಂಡು ಅವನು ಎಲ್ಲ ಗಲಾಟಿ ಮುಗಿಯುವವರೆಗೆ ಒಳಗೆ ಕದಿದ್ದು, ದಾದಾನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಮೇಲೆ ಮೆಲ್ಲ ಹೊರಗೆ ಬಂದ.
ಸೌಟು ಹಿಡಿದು ಸೊಂಟಕ್ಕೆ ಕೈಯಿಟ್ಟು ನಿಂತು ಲಚ್ಚಮ್ಮ ಇತರ ಹೆಂಗಸರಿಗೆ ಆ ವ್ಯಕ್ತಿ ಬಾಣಲೆಗೆ ಬಿದ್ದರೂ ಬಾಣಲೆ ಯಾಕೆ ಅವನ ಮೇಲೆ ಮಗುಚಲಿಲ್ಲ ಎಂಬುದನ್ನು ವಿವರಿಸ್ತುತ್ತಿದ್ದಳು. ಹೊರ ಬಂದ ಆಂಜನೇಯಲುವನ್ನು ನೋಡಿ ಆಕೆ ಸಣ್ಣಗೆ ಗಂಟಲು ಕೆರೆದು ಬೀದಿಗೆ ಉಗುಳಿದಳು.
ಆಂಜನೇಯಲುವಿಗೆ ಮೊದಲು ಬಾರಿಗೆ ತನ್ನ ಜೀವದ ಬಗ್ಗೆ ಭೀತಿ ಹುಟ್ಟಿತು. ಈ ಹೆಂಗಸಿನೊಡನೆ ರಾತ್ರಿ ಮಲಗಬೇಕಲ್ಲ ಎಂದು ಭಯವಾಯಿತು.
*****
ಕೀಲಿಕರಣ: ಬುಸಿರಾಜು ಲಕ್ಷ್ಮೀದೇವಿ ದೇಶಾಯಿ