ನೂರೆಂಟು ಕನಸುಗಳ ಚಿತ್ತಾರ ರಾತ್ರಿಯೆಲ್ಲಾ
ನನ್ನ ಪಕ್ಕದಲಿ ನೀನು ಕುಳಿತಂತೆ
ಹೇಗೆ ಮೋಹಗೊಂಡೆನೋ ಏನೋ, ರಾತ್ರಿ
ಬಾಗಿಲು ತಟ್ಟಿದ ಸಪ್ಪಳಕೆ ಬಿಚ್ಚಿದೆ
ತೆರೆದೆ ಬಾಗಿಲನು, ಸುಳಿಗಾಳಿ ಮೈ ಸೋಕಿದಾಗ
ಮನದಲ್ಲಿ ಹಾವು ಹರಿದಾಡಿದಂತಾಗಿ
ಹಾಸಿಗೆಯಲಿ ಪುನಃ ಒರಗಿದೆ, ದುಗುಡತೆಯಿಂದಲಿ
ನೀನಿಲ್ಲದ ಈ ಮನ ಹಾಳಾದ ಬೋರು
ಈ ಜೀವಕೆ ಪ್ರಾಣವಾಯು ನೀನು
ಕತ್ತಲಲಿ ಕುಳಿತು ಹುಡುಕಾಡಿದೆ ನಿನ್ನಾಬಿಂಬ
ನೀನಿಲ್ಲದೆ ಎನ್ನ ಹೃದಯ ಕಡು
ಬೇಸಿಗೆಯ ನದಿಯಂತೆ
ಇಷ್ಟೇ ಸಾಕೆನೆಗೆ
ಸಿಡಿಲು ಬಡಿದ ಮರದಂತಾಗಲು
ನಿನ್ನಾ ಹೆಸರ್‍ಹೇಳಿದರಷ್ಟೇ
ಎನಗೆ ಮಾನ ಸಮ್ಮಾನ ಸ್ವರ್ಗದಲಿ
ನೀ ಬಂದರೆ ವಿವಷವಾದ ಮನಕೆ, ಸಂಭ್ರಮದ
ಸಂತಸದ ಮಹಾದಾನಂದದ ಹೊನಲು
ಅತ್ತಿತ್ತ ಹೊರಳಾಡಿದರೆ ಬರುವುದೇ ನಿದ್ದೆ
ನೀನು ನನ್ನ ಪಕ್ಕದಲ್ಲಿದ್ದಂತೆ
ನಿನ್ನಾ ಹೆಜ್ಜೆಯ ಗೆಜ್ಜೆ ನಾದಕೆ
ಅಡುಗೆ ಮನೆಯ ಬಳೆಯ ಸದ್ದಿಗೆ
ಬಂದು ನೋಡಿದರೆ
ಕನಸೇ
ಹೂವು ಮುಡಿಸಿದಂತೆ
ಕೆನ್ನೆ ಸವರಿದಂತೆ
ನೀನಿಲ್ಲದಿದ್ದರೆ ಮನದ ಜ್ಯೋತಿ ಏಕೆ?
ದೀವಟಿಗೆಯು ಕೂಡ ಹೊತ್ತಲೊಲ್ಲದು
ಬಾ ಬೇಗ, ಪ್ರೀತಿಯ ತುಂತುರಿನ ಸಿಂಚನ ನೀಡು
ಸ್ನಾನಕ್ಕಿಟ್ಟು ಬಕೆಟ್ ನೀರಿನಲ್ಲಿ ನಿನ್ನ ಕಾಣುವೆ
ರಾತ್ರಿಯೆಲ್ಲಾ ಹೀಗೆ ಕನಸು ನಿಲ್ಲಲಾರವು
ಜೊಂಪು ಹತ್ತುವುದು, ಪುನಃ ಎಚ್ಚರವಾಗುವುದು
ನಡುವೆ ಒಂದೊಂದೇ ಕನಸು.
ರಾಜ ರಾಣಿಯರ ಕನಸಿನ ಸೊಗಸುಗಾರಿಕೆ
ಆನೆ ಅಂಬಾರಿಯಲಿ ನಿನ್ನಾಪಕ್ಕದಲ್ಲಿ ನನ್ನ ಕಂಡದ್ದು
ಅಂತಃಪುರದ ಪಲ್ಲಂಗದಲಿ ಆಕೆಯ ಕಂಡರೆ
ಕನಸೇ
ಸಾವೇ ಇಲ್ಲದ ಕನಸುಗಳು
ಓ, ಕನಸುಗಳೇ ಬನ್ನಿ!
ಜೀವ ಕೊಡಿ ಈ ಶಿಲ್ಪಕೆ
ಚೆಂದುಳ್ಳ ಕನಸುಗಳೇ
ನಿಮ್ಮ ಜೊತೆಗೆ ಚದುರಂಗದಾಟವೇ
ಹಣೆ ಕಪೋಲದ ಮೇಲೆ ಸುಳಿದಾಡಿ
ಮನವ ಅಲ್ಲೋಲ ಕಲ್ಲೋಲ ಮಾಡಿ
ಕದ್ದು ಮಾಯವಾಗುವ ಕನಸುಗಳೇ
ಆ ಕನಸುಗಳಲಿ ಕಾಂತೆಯ ಕಂಡು
ಬೆಚ್ಚಿಬಿದ್ದು ಮುಖವೆತ್ತಿ ನೋಡಿದರೆ
ಕನಸೇ
ಏನೂ ಕಾಣದಿದ್ದರೂ ಮನದಲ್ಲೇನೋ ಸಂತಸ
ಸ್ವಪ್ನಗಳೇ ಹೀಗೆ
ಮುಗಿಯಲೊಲ್ಲವು
ಕಾಡುವುದನು ಬಿಡಲೊಲ್ಲವು
ಕಣ್ಣು ತೆರೆದು ಕುಳಿತರೆ ಬೇರೊಂದು ಕನಸು
ಅಂಬಾರಿಯಿಲ್ಲ, ಸಂಭ್ರಮವಿಲ್ಲ
ಯಾರ ಬಿಂಬವೂ ಇಲ್ಲ, ಹೆಜ್ಜೆಯ ಗೆಜ್ಜೆನಾದವಿಲ್ಲ,
ಬಳೆ ಸಪ್ಪಳವಿಲ್ಲ, ಮುಖದಲಿ
ಸಂತಸ, ನಗು ಮೊದಲಿಲ್ಲ,
ಬಸ್ಸು, ಕಾರು, ಓಡಿದ ಸಪ್ಪಳ
ಜನಗಳ ಮಾತು, ಗದ್ದಲದ ನಡುವೆ
ಪಕ್ಕದ ಮನೆಯ ರೇಡಿಯೋ ಹಾಡಿಗೆ
ಹೋಯಿತು ಮನ
ಜಾರಿದವು ಕನಸುಗಳು
ಜಾರಿದವು ಕನಸುಗಳು.
*****
೧೯೯೮ ರ ಕರ್ಮವೀರ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟ