Home / ಕವನ / ಕವಿತೆ / ಕವಿಮಹೋನ್ನತಿ

ಕವಿಮಹೋನ್ನತಿ

ಇಂದು ರಾಜಸಭೆಯಲಿ ಗಾಯನವು ಧ್ವನಿಗೂಡಲಿಲ್ಲ,
ವೀಣೆ ಅಪಸ್ವರ ನುಡಿದು, ತಂದಿತು ಚಿತ್ತಚಾಂಚಲ್ಯ;
ಸ್ವರಕುಗ್ಗಿ ನುಡಿದುದ ಕಂಡು ರಾಜನಿಂತೆಂದ-
“ಕವಿವರ್ಯರೇಕಿಂದು ಚಪಲರಾಗಿರುವರೆಂದು.”
ಅರಸನಾನುಡಿಗೆ ಬೆರೆಸಿದನು ಮತ್ತೊಬ್ಬ ಚಾಟುಗಾರ
“ಕವಿ ಎತ್ತೋ ಮನವ ಸರಿಸಿದಂತಿದೆ” ಯೆಂಬೀವಿಚಾರ.
ನಾಚಿದನು ರಾಜಕವಿ, ಈ ಉಪಹಾಸ ತಿಳಿದು
ಮುಗಿಸಿದನು ಗಾಯನವ ವೀಣೆ ಒಲ್ಲದು ಎಂದು.
“ಕಾಶ್ಮೀರಿ ನರ್ತಕಿಯ ನೃತ್ಯ ನಡೆಯಲಿ” ಎಂದು
ಅರಸನಿತ್ತನು ಆಣತಿ ನರ್ತನಕೆ ಮುಂದು.
“ರೂಪಿಣಿಯ ನೋಡಿ ಸವಿಯಲಿ ಕವಿಯು”
ಎಂದು ನುಡಿದನು ಅರಸ, ಚಾಟಿನಲಿ ಎಣೆಯು
ನರ್ತಕಿಗೆ ಹೊರಟಿತು, ರಾಜನಾಮಂತ್ರಣ
ಕವಿಹೃದಯ ಒಡೆದಿತ್ತು ಕೇಳೀನಿರೂಪಣ
ಪ್ರಾರ್ಥಿಸಿದನವನು ಮನಸಿನೊಳಗಂದು
“ಎನ್ನ ಭಾವನೆ ಮುಂದೆ ಹೊರಗೆಡಹದಿರಲೆಂದು.”

ಝಣಝಣರ ನೂಪುರಧ್ವನಿ ಕೇಳಿಬಂತಲ್ಲಿ
ತಾಳಕ್ಕೆ ಒರೆಯಾಗಿ ಪೈಜಣವ ಬಾರಿಸಿದರಲ್ಲಿ
ಕವಿಮೊಗದಿಕೂಡಿತ್ತು ಬರಿ ಬವಣೆಶೂನ್ಯ,
ಮಿಂಚಿತ್ತು ಝಣರದನಿ ರಾಜಸಭೆಗಣ್ಯ
ರೂಪಮಾಧುರ್ಯ, ಕ್ರೀಡಿಸಿತು ರಾಜಸಭೆ
ಚಂಚಲಾಕೃತಿ ಬೆರಗು ವಂಚಿಸಿತು ಕವಿಪ್ರಭೆ;
ರಾಜನಿತ್ತನು ಚಂಚಲೆಗೆ ಕೊರಳಮಣಿಹಾರ
ಮಿಂಚುಹೊಳೆ ಧರಿಸಿದಳು ಮಣಿದು ಸ್ವೀಕಾರ.
* * *

ರಾಜಸಭೆಯಲಿ ಜರುಗಿತು ದಿನವಿಹೀ ನರ್ತನ,
ಮೆಚ್ಚುಗೆಗೆ ಇತ್ತನವ ಕಾಣಿಕಾನೂತನ.
ಎಲ್ಲ ತುಂಬಿದರಲ್ಲಿ, ನರ್ತನಕೆ ಪ್ರೇಕ್ಷನಕೆ,
ಕೇಳದಾದರು ಯಾರು! ಕವಿ ಗಾಯನಾವಾದನಕೆ,
ಕವಿವರ್ಯ ಬಿಟ್ಟುಕೊಟ್ಟನು ಪದವಿ ಸಹಿಸದವನಾಗಿ,
ವೀಣೆ ಹೊರಟಿತು ಹಿಂದೆ ದಣಿಯ ಅನುವಾಗಿ;
ಮುಗಿಲಲ್ಲಿ ಕಾಣಿದವು ಬರಿ ಬವಣೆಶೂನ್ಯ,
ಮರುಗಿ ಸೊರಗಿದನವನು ರಾಜಾಶ್ರಯದಮಾನ್ಯ;
ದಿನಗಳುರಿಳಿತು ಹೀಗೆ, ಹಲವಾರು ವರ್ಷ,
ಮರೆಯದಾದನು ಅವನು ಆ ನೋವಗಾತ್ರ;
ಅಲೆದು ಬಳಲಿದನು ಹಲವಾರು ವರ್ಷಪರ್ಯ೦ತ,
ತಿರುಗಿ ಸೇರಿದನವನು ಪುರಭವನ ಜಯವಂತ;
ಸುಳಿದುಬಂದಿತು ಹಿಂದೆ ಮೋಹಕದೃಶ್ಯ,
ಮರುಗಿ ಚಿಂತಿಸಿದನವನು, ಕವಿರಾಜ ಆದರ್ಶ;
ಕೇಳಿಬಂದಿತು ಒಮ್ಮೆ ನೂಪುರಧ್ವನಿ ಮಂದಹಾಸ,
ಅದುವೆಗತಿಸಿತು ಅಲ್ಲಿ ಪೂರ್ಣ ಇತಿಹಾಸ;
ಮೊಗವೆತ್ತಿ ನೋಡಿದನು ಕವಿ, ರೂಪದರ್ಶನ
ಕಾಂತಿಹೀನಸ್ಫುರಣ ನರ್ತಕೀವರ್ತನ

“ನಾನೇ ನರ್ತಕಿ; ನಿನ್ನ ಪ್ರೇಯಸಿ” ಎಂದು ನುಡಿದಳಾರಮಣಿ
“ಬಂದೆಲ್ಲಿಗೆ ಕಾಣಬಯಸಲು” ಎಂದಳಾರೂಪಿಣಿ
“ಬಂದೆ ಏತಕೆ? ನೀನೆ, ಚಪಲಮತಿ”
“ಹೀನೆ! ಮರೆಯಾಗೆಂದು” ನುಡಿದನು ರಾಜಮಕುಟಪತಿ
“ರಾಜ ಸಿಲುಕಿದ ನಿನ್ನ ಅದ್ವಿತೀಮೋಹಜಾಲದಲಿ,
ನೀನೆ ಬೆಳೆಸಿದೆ ದೇಹ ಪೂರ್ಣಾಶ್ರಯದತೆಕ್ಕೆಯಲಿ;
ನಿನ್ನೀ ರೂಪ ಮರುಳರಲಿ ಉದರಾಶ್ರಯ,
ರಾಜಸಭೆಯಲ್ಲಿ ತೋರಿರುವೆ ನೀನೀ ಅತಿಶಯ;
ತೊಲಗು ತೊಲಗಿಲ್ಲಿಂದ, ಪ್ರಣಯವಿಕ್ರಯಿಣಿ!
ಮರೆಯುವೆನು ಈ ರೂಪಧಿಕ್ಕಾರ! ನೀ ಅಭಿಸಾರಿಣಿ!”
ಜರೆದು ನಡೆದುಬಿಟ್ಟನು, ಕವಿಯು; ನರ್ತಕಿಯ ತ್ಯಜಿಸಿ
ದೃಷ್ಟಾಂತ ಏಕವನು ಸೃಷ್ಟಿಯಲ್ಲಿ ನಡೆಸಿ;
ಮುಗಿದಿತ್ತು ಇಲ್ಲಿಗೆ, ನಿರಾಕರಣೆ ಪೂರ್ತಿ;
ಇಳೆಯಲ್ಲಿ ಮೆರೆಸಿದನು ರಾಜಕವಿಮಹೋನ್ನತಿ.
*****

Tagged:

Leave a Reply

Your email address will not be published. Required fields are marked *

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...