citಸಕ್ಕರೆ, ಬೆಲ್ಲ, ಬೇಳೆ, ಚಹಾಪುಡಿ, ರವಾ ಮುಂತಾದ ಸಾಮಾನುಗಳನ್ನು ಕಾರಿನಲ್ಲಿ ತುಂಬಿಕೊಂಡು ಮಂಜಪ್ಪ ರೈ ವೇಗವಾಗಿ ಮನೆಗೆ ಮರಳುತ್ತಿದ್ದರು. ಡ್ಯಾಶ್ ಬೋರ್ಡಿಗೆ ಜೋಡಿಸಿದ್ದ ಕ್ಯಾಸೆಟ್ ಪ್ಲೇಯರಿನಿಂದ ಬೆಸ್ಟ್ ಆಫ಼್ ರಫ಼ಿ ಹಾಡುಗಳು ಬರುತ್ತಿದ್ದರೂ ಅವರ ಮನಸ್ಸು ಇನ್ನೇನೋ ಚಿಂತಿಸುತ್ತಿತ್ತು. ಹಿಂದಿನ ಸೀಟಿನಿಂದ ಆಗಾಗ ಹೊರಡುತ್ತಿದ್ದ ಬೆಕ್ಕಿನ ಕೂಗು ಬಹಳ ಹೊತ್ತಿನ ತನಕ ಅವರಿಗೆ ಕೇಳಿಸಲೇ ಇಲ್ಲ. ಅದು ಬಹುಶಃ ಸಂಗೀತದ ಹಿನ್ನೆಲೆಗೋ ಅಥವಾ ಕಾರಿನ ಸದ್ದಿ ಗೋ ಸಹಜವಾಗಿ ಹೊಂದಿಕೊಂಡಿರಬೇಕು. ಬೆಕ್ಕಿನ ಕೂಗು ಅವರ ಗಮನಕ್ಕೆ ಬಂದುದು ರಫ಼ಿಯ ಒಂದು ಹಾಡು ನಿಂತು ಕರತಾಡನ ಮುಗಿದು, ಎದುರುಗಡೆಯಿಂದ ಬರುತ್ತಿದ್ದ ವಾಹನವೊಂದಕ್ಕೆ ದಾರಿಬಿಡಲೆಂದು ಕಾರಿನ ವೇಗವನ್ನು ತಗ್ಗಿಸಿದಾಗ, ಮಂಜಪ್ಪ ರೈ ಕತ್ತು ಹೊರಳಿಸಿ ನೋಡಿದರು. ನಂತರ ಕಾರಿನಿಂದಿಳಿದು ಹಿಂದಿನ ಬಾಗಿಲು ತೆರೆದು ಒಳಗೆ ಇಣುಕಿ ಪರೀಕ್ಷಿಸಿದರು. ಅಲ್ಲಿ ಸಾಮಾನುಗಳ ಕಟ್ಟುಗಳೆಡೆಯಲ್ಲಿ ಎಲ್ ಜಿ ಅಸಫೊಟೆಡಾ ಬ್ರಾಂಡಿನ ಕೈ ಚೀಲವೊಂದು ಮಾಯಾಚೀಲದಂತೆ ಕುಣಿದಾಡುತ್ತಿತ್ತು. ಅದರ ಬಾಯಿಯನ್ನು ಗೋಣಿ ನಾರಿನ ಹುರಿಯಿಂದ ಬಂಧಿಸಿದ್ದು, ಬೆಕ್ಕಿನ ಕೂಗು ಬರುತ್ತಿದ್ದುದು ಚೀಲದೊಳಗಿಂದಲೇ ಎಂಬುದರಲ್ಲಿ ಸಂದೇಹವೇ ಇರಲಿಲ್ಲ. ಚೀಲವನ್ನು ಎತ್ತಿ ನೋಡಿದರು. ಭಾರವಾಗಿತ್ತು. ಸಾಕಷ್ಟು ದೊಡ್ಡ ಬೆಕ್ಕೇ ಇರಬೇಕು. ಚೀಲವನ್ನು ಹಾಗೆಯೇ ಮಾರ್ಗದ ಬದಿಯಲ್ಲೆಸೆದು ಹೋಗುವ ಆರಂಭದ ವಿಚಾರವನ್ನು ಬದಲಾಯಿಸಿ, ಬೆಕ್ಕಿನ ಬಂಧವಿಮೋಚನೆ ಮಾಡಲು ಅನುವಾದರು. ಜೇಬಿನಿಂದ ಕಿರುಗತ್ತಿಯನ್ನು ತೆಗೆದು ಚೀಲದ ಕಟ್ಟನ್ನು ತುಂಡರಿಸಿ ಮಾರ್ಗದಲ್ಲಿ ಬಿಟ್ಟು ಬಿಟ್ಟರು. ಒಂದೆರಡು ಬಾರಿ ತಕತಕನೆ ಕುಣಿದು ಬೆಕ್ಕು ದಾರಿ ಕಾಣಿಸಿದ ಕೂಡಲೆ ನೆಗೆದು ಮುಗ್ಗರಿಸಿ ಓಡತೊಡಗಿತು. ಮಂಜಪ್ಪ ರೈ ತಲೆಯಾಡಿಸಿದರು. ಬೇಡವಾದ ಬೆಕ್ಕನ್ನು ಈ ರೀತಿ ಸಾಗ ಹಾಕುವ ಉಪಾಯದಲ್ಲಿ ಹೊಸತೇನೂ ಇರಲಿಲ್ಲ. ಆದರೆ ತಾವೇ ಇದಕ್ಕೆ ಗುರಿಯಾದ್ದು ಇದೇ ಮೊದಲ ಸಲ. ಅವರು ಕಾರ್ ಸ್ಟಾರ್ಟ್ ಮಾಡಿದರು.
ಜಾಗುವಾ ಸುತ್ತಲೂ ನೋಡಿತು. ಮನೆ ಮಠಗಳಿಲ್ಲದ ಹಾಸುಗಲ್ಲಿನ ಬಟ್ಟಂಬಯಲು. ಬಿಸಿಲಿಗೆ ಕಾವಲಿಯಂತೆ ಸುಡುತ್ತಿತ್ತು. ಓಡಿ ಬಂದುದರಿಂದಲೂ, ಬಹಳ ಹೊತ್ತು ಚೀಲದೊಳಗೆ ಬಂಧನದಲ್ಲಿದ್ದುದರಿಂದಲೂ ಆದಕ್ಕೆ ಬವಳಿ ಬರುವಂತೆ ಆಗುತ್ತಿತ್ತು. ಸ್ವಲ್ಪ ಸುಧಾರಿಸಿಕೊಳ್ಳಲೆಂದು ಆ ಬಯಲಿನ ನಡುವೆ ಕಾಣಿಸಿದ ಏಕ ಮಾತ್ರ ಮರದ ಕೆಳಗೆ ಹೋಗಿ ಕುಳಿತುಕೊಂಡಿತು. ಚೀಲದಿಂದ ಹೊರಗೆ ಬಂದಿದ್ದರೂ ಅದರಿಂದ ಪೂರ್ತಿಯಾಗಿ ಇನ್ನೂ ಬಿಡುಗಡೆಯಾಗಿರಲಿಲ್ಲ. ಚೀಲ ಕೈಯ ಉಗುರಿಗೆ ಸಿಲುಕಿಕೊಂಡಿದ್ದು ಅದರ ಜತೆಯಲ್ಲೇ ಬರುತ್ತಿತ್ತು. ಅದನ್ನು ಹರಿದು ತೆಗೆಯುವ ಯತ್ನದಲ್ಲಿ ಚೀಲವಷ್ಟೇ ಅಲ್ಲ, ಉಗುರು ಕೂಡ ಕಿತ್ತು ಬಂತು.
ಕತ್ತಲೆಗೆ ಮೊದಲೇ ಯಾವುದಾದರೊಂದು ಊರನ್ನು ಸೇರಿಕೊಳ್ಳಬೇಕಷ್ಟೆ. ಬೆಕ್ಕು ಹುಲಿಯ ಕುಟುಂಬಕ್ಕೇ ಸೇರಿದ್ದೆಂದು ಹೇಳುತ್ತಾರೆ. ಹುಲಿಯ ಅಣಕದಂತೆ ದೈವ ಬೆಕ್ಕನ್ನು ಸೃಷ್ಟಿಸಿರಬೇಕು. ಮನುಷ್ಯರ ಆಶ್ರಯವಿಲ್ಲದೆ ಬೆಕ್ಕಿಗೆ ಬದುಕುವುದು ಕಷ್ಟ. ಹುಲಿ ಸ್ವತಂತ್ರವಾದ್ದರಿಂದ ಅನಾಥಪ್ರಜ್ಞೆ ಅದನ್ನೆಂದೂ ಕಾಡುವುದಿಲ್ಲ. ಬೆಕ್ಕನ್ನು ಕಾಡುತ್ತದೆ. ಜಾಗುವಾ ಕುಳಿತ ಸ್ಥಳ ಉತ್ತರದಲ್ಲಿತ್ತು. ಅಲ್ಲಿಂದ ನೋಡಿದರೆ ಪಶ್ಚಿಮದ ಸಮುದ್ರ ಏಪ್ರಿಲಿನ ಝಳದಲ್ಲಿ ಕುದಿಯುವುದು ಕಾಣಿಸುತ್ತಿತ್ತು. ಹುಟ್ಟೂರಿನಿಂದ ಹೆಚ್ಹು ದೂರವೇನೂ ಬಂದಿರಲಿಲ್ಲ. ಬಂದ ದಾರಿಯಲ್ಲೇ ನಡೆದರೆ ಊರು ಸೇರಬಹುದು. ಆದರೆ ಯಾವ ಊರಿನಿಂದ ತಾನು ಹೊರಹಾಕಲ್ಪಟ್ಟಿತ್ತೋ ಆ ಊರಿಗೆ ಮರಳುವುದಕ್ಕೆ ಮನಸ್ಸು ಬರಲಿಲ್ಲ. ವಿಧಿಯನ್ನರಸುವವನಂತೆ ಅಪರಿಚಿತವಾದ ಮೂಡಣದ ದಾರಿ ಹಿಡಿಯಿತು.
ಸಂಜೆ ಹೊತ್ತಿಗೆ ತಲಪಿದ್ದು ಸುಮಾರು ಅರವತ್ತು ಮನೆಗಳ ಒಂದು ಹಳ್ಳಿಯನ್ನು. ಮೂರೋ ನಾಲ್ಕೋ ಹೋಟೆಲುಗಳು, ಒಂದು ಕಳ್ಳಿನಂಗಡಿ, ಐದಾರು ದಿನಸಿ, ಕಿರಾಣಿ ಅಂಗಡಿಗಳು, ಪಂಚಾಯತು, ಸೊಸಾಯಿಟಿ, ಗ್ರಾಮೀಣ ಬ್ಯಾಂಕಿನ ಕಟ್ಟಡಗಳು, ಒಂದು ಶಾಲೆ – ಶಾಲೆಯ ಬೊರ್ಡಿನಿಂದ ಊರ ಹೆಸರು ಉದಯಗಿರಿ ಎಂದು ಗೊತ್ತಾಯಿತು. ಎಲ್ಲಾ ಶಾಲೆಗಳಂತೆ ಅದೂ ಸಾಕಷ್ಟು ಕೊಳಕಾಗಿತ್ತು. ಮಾಸಿದ ಹೆಂಚುಗಳು, ಜೀರ್ಣಗೊಂಡ ಕಿಟಿಕಿ ಬಾಗಿಲುಗಳು, ಕೆಟ್ಟ ಚಿತ್ರಗಳನ್ನು ಬಿಡಿಸಿದ ಗೋಡೆಗಳು. ಒಂದು ಕಿಟಿಕಿ ತೆರೆದಿತ್ತು. ಜಾಗುವಾ ಒಳಗೇನಿದೆ ನೋಡೋಣವೆಂದು ಒಳಕ್ಕೆ ಹಾರಿತು. ಹಾರುತ್ತಲೇ ’ಕೆಟ್ಟೆ’ ಅನಿಸಿತು. ಕಾರಣ, ಅಂದುಕೊಂಡದ್ದಕ್ಕಿಂತಲೂ ಕೋಣೆ ಆಳವಾಗಿತ್ತು. ಮೆಟ್ಟೆಲಿಲ್ಲದಲ್ಲಿ ಇದೆಯೆಂದು ಭ್ರಮಿಸಿ ಕಾಲಿಟ್ಟ ಹಾಗಾಯಿತು. ಮೇಲೆ ನೋಡಿದರೆ ಕಿಟಿಕಿಯೆಂಬುದು ಆಕಾಶದಲ್ಲಿ ಕೊರೆದಕಿಂಡಿಯಂತೆ ಕಾಣಿಸುತ್ತಿತ್ತು. ರಾತ್ರಿಯೆಲ್ಲಾ ಈ ಸೆರೆಮನೆಯಲ್ಲಿ ಕಳೆಯುವುದೇ ಅಥವಾ ಹೊರ ಬರಲು ಯತ್ನಿಸುವುದೆ? ರಾತ್ರಿ ಕಳೆದು ಬೆಳಗಾದರೂ ಯಾರಾದರೂ ಬಂದು ಬಾಗಿಲು ತೆರೆದು ತನ್ನನ್ನು ರಕ್ಷಿಸುತ್ತಾರೆಂದು ಹೇಳುವುದು ಹೇಗೆ? ಇದು ಬೇಸಿಗೆಯ ರಜೆಯ ಕಾಲ. ಜೀವನವೆನ್ನುವುದು ದೈನಂದಿನ ಆಕಸ್ಮಿಕಗಳ ಮೇಲೆ ಹೊಂದಿರುವುದಾದರೆ ಅದೆಂಥ ಜೀವನ!
ಅದು ಹೊರಬರಲು ನಿರ್ಧರಿಸಿ ಕಿಟಿಕಿಯತ್ತ ಎಲ್ಲ ಶಕ್ತಿಯನ್ನೂ ಸ್ನಾಯುಗಳಲ್ಲಿ ಕ್ರೋಢೀಕರಿಸಿ ನೆಗೆಯಿತು. ಕೇವಲ ಒಂದಿಂಚಿನ ಅಂತರದಿಂದ ಕೆಳಗೆ ಬಿದ್ದು ಬಿಟ್ಟಿತು. ಉಗುರು ಕಿತ್ತುಕೊಳ್ಳದೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲ ಅನಿಸಿತು. ಚೀಲದಿಂದ ಬಿಡಿಸಿಕೊಳ್ಳಲು ಅಷ್ಟೊಂದು ಆತುರಪಡಬಾರದಿತ್ತು. ಕಿಟಿಕಿಯತ್ತ ಇನ್ನೊಮ್ಮೆ ಜಿಗಿಯಿತು. ಈಗ ಎರಡಿಂಚಿನಷ್ಟು ಕಡಿಮೆಯಾಯಿತು. ಮೂರನೆ ಬಾರಿ ಮೂರಿಂಚಿನಷ್ಟು! ಎಂದರೆ ಪ್ರತಿ ಬಾರಿ ಜಿಗಿದಾಗಲೂ ಒಂದಿಂಚಿನಷ್ಟು ಶಕ್ತಿ ಕುಂದುತ್ತಿದೆ! ಇದು ಮಧ್ಯ ವಯಸ್ಸಾದ ಸೂಚನೆಯೆ? ಹೊಟ್ಟೆ ಹಸಿವಿನ ಪರಿಣಾಮವೇ? ಇನ್ನು ವ್ಯರ್ಥ ಜಿಗಿದು ಉಪಯೋಗವಿಲ್ಲವೆಂದು ಸುತ್ತ ಕಣ್ಣಾಡಿಸಿದಾಗಲೇ ಕಣ್ಣಿಗೆ ಬಿದ್ದುದು ಕಪ್ಪು ಹಲಗೆಯ ತ್ರಿಪಾದ. ಅದರ ಮೇಲೆ ವಿಜ್ಞಾನದ ಪಾಠ ನಡೆದಿತ್ತು. ಜೇಡನ ಬಲೆ; ಬಲೆಯ ಮಧ್ಯೆ ಜೇಡ. ಎಷ್ಟು ಸಹಜವಾಗಿತ್ತೆಂದರೆ ಅದು ನಿಜವಾದ ಜೇಡವಾಗಿರಬಹುದೇ ಎಂಬ ಭ್ರಮೆ ಬರುವಂತಿತ್ತು. ಬೇಸಿಗೆ ರಜೆಯ ಆತುರದಲ್ಲಿ ಅದನ್ನು ಅಳಿಸಿ ಹಾಕುವಷ್ಟು ವ್ಯವಧಾನವಿದ್ದಿರಲಾರದು. ಜಾಗುವಾ ತ್ರಿಪಾದದ ಶಿಖರಕ್ಕೆ ಮೊದಲು ನೆಗೆಯಿತು. ಅಲ್ಲಿಂದ ಕಿಟಿಕಿಯನ್ನು ತಲಪಿ ಹೊರಗೆ ಬರುವುದು ಕಷ್ಟವಾಗಲಿಲ್ಲ.
ಕರಾವಳಿಯ ಉದ್ದಗಲಕ್ಕೂ ಕಾಣಿಸುವ ಎಲ್ಲಾ ಹಳ್ಳಿಗಳಂತೆಯೇ ಉದಯಗಿರಿ ಕೂಡ. ಜನ ಹೆಚ್ಚಿನ ಗೊಂದಲವಿಲ್ಲದೆ ತಮ್ಮ ದೈನಂದಿನ ವ್ಯವಹಾರಗಳಲ್ಲಿ ತೊಡಗಿರುತ್ತಾರೆ. ಹೊಟೆಲು ನಡೆಸುವವರು ಹೊಟೆಲು ನಡೆಸುತ್ತಾರೆ. ತರಕಾರಿ ಬೆಳೆಸುವವರು ತರಕಾರಿ ಬೆಳೆಸುತ್ತಾರೆ. ಆಗಾಗ ನಡೆಯಬಹುದಾದ ಜಗಳಗಳು. ಮದುವೆ ಮುಂಜಿಗಳು ಮಳೆಯಲ್ಲಿ ಬರುವ ನೀರಗುಳ್ಳೆಗಳಂತೆ ಫ಼ಕ್ಕನೆ ಕಾಣಿಸಿ ಮಾಯವಾಗುವಂಥವು. ಜನರು ಮೂಲತಃ ದುಷ್ಟರಾಗಲಿ, ವಂಚಕರಾಗಲಿ ಅಲ್ಲ. ಆದರೂ ವಿಧಿ ಜಾಗುವಾನ ಜತೆ ಉದಯಗಿರಿಯಲ್ಲಿ ವಿಚಿತ್ರವಾದ ಆಟವಾಡಲು ನಿರ್ಧರಿಸಿರಬೇಕು.
ಒಮ್ಮೆ ಅನಾಥವಾದ ಬೆಕ್ಕು ಎಂದೆಂದಿಗೂ ಅನಾಥವೇ ಎಂಬುದು ಜಾಗುವಾನಿಗೆ ಗೊತ್ತಿದ್ದ ಸತ್ಯ. ಆದರೂ ಉದಯಗಿರಿಯ ಹಲವು ಅಂಗಡಿಯ ಮನೆಗಳ ಮುಂದೆ ಅದು ಸುಳಿದಾಡಿತು. ಬೆಕ್ಕಿನ ಮರಿಯನ್ನಾದರೂ ಮನುಷ್ಯರು ಆದರಿಸಬಹುದು. ಆದರೆ ಬೆಳೆದು ತಿರುಗುವ ಬೆಕ್ಕನ್ನು ಮಾತ್ರ ವೈರಿಗಳಂತೆ ನೋಡುತ್ತಾರೆ. ಯಾರೂ ಆಶ್ರಯ ನೀಡುವ ಸೂಚನೆ ಕಾಣಿಸಲಿಲ್ಲ. ಕೆಲವು ಮನೆಗಳಲ್ಲಿ ಈಗಾಗಲೆ ಬಿಕ್ಕಲಾದ ಬೆಕ್ಕುಗಳಿದ್ದುವು. ಅವು ಜಾಗುವಾನನ್ನು ಸಂದೇಹದಿಂದಲೂ ವಿರೋಧದಿಂದಲೂ ನೋಡಿದುವು. ಇನ್ನು ಕೆಲವಡೆ ಕ್ರೂರಿಗಳಾದ ನಾಯಿಗಳಿದ್ದುವು. ಅಂಥ ಕಡೆ ಕಾಲಿಡುವಂತೆಯೇ ಇಲ್ಲ. ಜಾಗುವಾ ಬಹಳ ನಿರಾಶೆಯಿಂದ ಇವೆಲ್ಲರಿಂದಲೂ ತಪ್ಪಿಸಿಕೊಂಡು ಆಹಾರವನ್ನೂ ಆಶ್ರಯವನ್ನೂ ಅರಸುತ್ತಾ ತಿರುಗಾಡತೊಡಗಿತು. ಬೀದಿಗೆ ಬಿಸಾಡಿದ ಆಹಾರ ಪದಾರ್ಥಗಳು ಕೆಲವೊಮ್ಮೆ ಸಿಗುತ್ತಿದ್ದವು. ಕೆಲವೊಮ್ಮೇ ಕಪ್ಪೆಗಳನ್ನೋ ಇಲಿಗಳನ್ನೋ ಹಿಡಿದು ತಿನ್ನುವ ಗತಿ. ಜಾಗುವಾ ಮೂಲತಃ ಸಸ್ಯಾಹಾರಿಯಾಗಿತ್ತು. ಇಂಥ ಕೆಟ್ಟ ಆಹಾರ ಒಗ್ಗದೆ ವಾಂತಿ ಭೇದಿ ಯಾಗಿ ಒಂದು ವಾರ ಮಲಗಿತು. ಉಮೇಶನಾಯಕರ ಹೋಟೆಲು ಅದರ ಕಣ್ಣಿಗೆ ಬಿದ್ದುದು ಇದೇ ತೀಕ್ಷಣ ಸಂದರ್ಭದಲ್ಲಿ.
ಊರ ಐದು ಹೋಟೆಲುಗಳಲ್ಲಿ ನಾಯಕರದು ತುಂಬಾ ಪಳತು. ಹಳತೆಂದರೆ ಎಲ್ಲಾ ವಿಧದಲ್ಲೂ ಹಳತೆ – ಕಟ್ಟಡದಿಂದ ಹಿಡಿದು ಗ್ಲಾಸು ತಟ್ಟೆಗಳ ತನಕ. ಅವರ ಗಿರಾಕಿಗಳೂ ಹಳಬರು. ಆದರೂ ತುಂಬಾ ನಿಷ್ಟಾವಂತರು. ಊರಲ್ಲಿ ಬೇರೆ ಹೋಟೆಲುಗಳು ಬಂದರೂ ಅವರು ನಾಯಕರಲ್ಲಿಗೇ ಬರುವಂಥವರು. ಬಂದು ಅದು ಇದು ಮಾತಾಡಿ ಕಾಫ಼ಿ ತಿಂಡಿ ಸ್ವೀಕರಿಸಿ ಹೋಗುತ್ತಾರೆ. ಅವರಲ್ಲಿ ಕೆಲವರಿಗೆ ಅವಲಕ್ಕಿ ಚಟ್ನಿ ಪ್ರಿಯ. ಇನ್ನು ಕೆಲವರಿಗೆ ಸಜ್ಜಿಗೆ, ಖಾರದ ಶಾವಿಗೆ. ಎಲ್ಲರನ್ನೂ ತೃಪ್ತಿ ಪಡಿಸುವ ನಾಯಕರು ಇಂಥ ಅಷ್ಟಿಷ್ಟು ತಿಂಡಿಗಳನ್ನು ಕಪಾಟಿನಲ್ಲಿ ಇರಿಸಿಕೊಂಡಿರುತ್ತಾರೆ. ಒಂದು ದಿನ ಜೋಯಿಸರೆಂಬುವರು ಬಂದು, “ಏನು ಶೆಕೆ! ಏನು ಶಕೆ!” ಎನ್ನುತ್ತ ತಮ್ಮ ಮಾಮೂಲಿ ಜಾಗದಲ್ಲಿ ಕುಳಿತರು.
“ನಿನ್ನೆ ಉಪ್ಪಿನಂಗಡಿಯಲ್ಲಿ ಭರ್ಜರಿ ಮಳೆಯಂತೆ.” ಎಂದರು ನಾಯಕರು.
“ರಾತ್ರಿ ಇಲ್ಲೂ ಬರುವ ಲಕ್ಷಣವಿದೆ. ಕುಂಬಳೆಯಲ್ಲಿ ಸುರತ್ಕಲ್ಲಿನವರ ಆಟ.”
“ಮಳೆ ಬಂದರೆ ಆಟ ಪೇಚಾಟ. ಕಳೆದ ವರ್ಷ ಆದ ಕಲೆಕ್ಷನು ಈ ವರ್ಷ ನೀರಿನಲ್ಲಿ ಹೋಗುತ್ತದೆ. ತಿನ್ನುವುದಕ್ಕೇನು ಕೂಡಲಿ?”
“ಅವಲಕ್ಕಿ ಇದೆಯೆ?”
ನಾಯಕರು ಪ್ಲೇಟು ತೆಗೆದುಕೊಂಡು ಕವಾಟಿಗೆ ಹೋಗಿ ನೋಡುತ್ತಾರೆ. ಅವಲಕ್ಕಿ ಅದೃಶ್ಯವಾಗಿದೆ! ಒಂದು ಕ್ಷಣ ತಮ್ಮ ಕಣ್ಣುಗಳನ್ನೇ ನಂಬದಾದರು. ಅರ್ಧಗಂಟೆ ಹಿಂದೆಯಷ್ಟೆ ಕಲಸಿಟ್ಟ ನಾಲ್ಕು ಹಿಡಿ ಅವಲಕ್ಕಿ ಏನಾಯಿತು? ಅಚ್ಚರಿಯನ್ನು ತಡೆಹಿಡಿದುಕೊಂಡು, “ಅವಲಕ್ಕಿ ಇಲ್ಲ; ಖಾರದ ಶಾವಿಗೆ ಆಗಬಹುದೆ” ಎಂದು ಜೋಯಿಸರಿಗೆ ಖಾರದ ಶಾವಿಗೆ ತಿನಿಸಿದ್ದಾಯಿತು. ಆದರೂ ಅವಲಕ್ಕಿ ಅದೃಶ್ಯವಾದ ಗುಟ್ಟು ಬಗೆಹರಿಯಲಿಲ್ಲ.
ಅಷ್ಟೊಂದು ರುಚಿಕರವಾದ ಅವಲಕ್ಕಿ ಚಟ್ನಿಯನ್ನು ಜಾಗುವ ಹಿಂದೆಂದೂ ತಿಂದಿರಲಿಲ್ಲ. ಆದ್ದರಿಂದಲೆ ತಟ್ಟೆಯನ್ನು ಎರಡೇ ನಿಮಿಷಗಳಲ್ಲಿ ಖಾಲಿ ಮಾಡಿಬಿಟ್ಟಿತ್ತು. ಮರುದಿನ ಹಸಿವಾಗಲಿಲ್ಲ. ಸುಮ್ಮನೆ ಮಲಗಿ ನಿದ್ದೆ ಮಾಡಿತು. ಎರಡು ದಿನ ಬಿಟ್ಟು ಖಾರದ ಶಾವಿಗೆಯನ್ನು ತಿಂದಿತು. ಇನ್ನೊಂದು ದಿನ ಸಜ್ಜಿಗೆಯನ್ನು ಮೆದ್ದಿತು. ನಾಯಕರ ಹೋಟೆಲು ಆದರ ಪಾಲಿಗೊಂದು ಅಕ್ಷಯ ಪಾತ್ರೆಯ ಹಾಗಾಯಿತು. ಎಲ್ಲ ಪ್ರಾಣಿಗಳಿಗೂ ಸಹಜವಾದ ತಿಂಡಿಪೋತತನ ಜಾಗುವಾನನ್ನು ಬಾಧಿಸಿರಬೇಕು. ಇಲ್ಲದಿದ್ದರೆ ಮೇಲಿಂದ ಮೇಲೆ ಅದು ನಾಯಕರ ಹೋಟೆಲಿಗೇ ಏಕೆ ದಾಳಿಯಿಡಬೇಕಿತ್ತು? ಆದರೆ ನಿಜಕ್ಕೂ ಜಾಗುವಾ ತಿಂಡಿಪೋತನೇನೂ ಅಲ್ಲ. ನಾಯಕರ ಹೋಟೆಲನ್ನೇ ಅದು ಆರಿಸುವುದಕ್ಕೆ ನಿಜವಾದ ಕಾರಣವಿತ್ತು – ನಾಯಕರ ಕೆಲಸಗಳು ನಿಯಮಬದ್ಧವಾಗಿ ಸಾಗುತ್ತಿದ್ದುವು. ದಿನ ಬೆಳಿಗ್ಗೆ ಆರುಗಂಟಿಗೆ ಹೋಟೆಲು ತೆರೆಯುವರು. ರಾತ್ರಿ ಎಂಟು ಗಂಟಿಗೆ ಬಂದ್. ಪೂರ್ವಾಹ್ನ ಹತ್ತು ಗಂಟಿಗೆ ಹಾಗೂ ಅಪರಾಹ್ನ ನಾಲ್ಕು ಗಂಟೆಗೆ ನೀರು ತಂದು ತುಂಬುತ್ತಿದ್ದರು. ಇವೆರಡು ನಾಯಕರು ಹೋಟೆಲಿನಲ್ಲಿಲ್ಲದ ಕಾಲ. ಆದರೆ ಹೋಟೆಲು ಮಾತ್ರ ತೆರೆದೇ ಇರುತ್ತಿತ್ತು. ಇದಕ್ಕಿಂತಲೂ ಮುಖ್ಯ ವಿಚಾರವೆಂದರೆ ತಿಂಡಿಯಿಡುತ್ತಿದ್ದ ಕವಾಟಿನ ಒಂದು ಭಾಗದ ಗಾಜು ಒಡೆದು ಹೋಗಿದ್ದದು. ಎಂಥ ಬೆಕಿಕೂ ಆದರ ಮೂಲಕ ಯಾತಾಯಾತ ಸುಲಭವಾಗಿತ್ತು.
ಹೋಟೆಲಿನಿಂದ ತಿಂಡಿ ತಿನಿಸು ಮಾಯವಾಗುವ ರಹಸ್ಯವನ್ನು ಪತ್ತೆ ಹಚ್ಚುವುದು ನಾಯಕರಿಗೆ ಅನಿವಾರ್ಯವಾಗಿ ಒಂದು ಸಂಜೆ ನೀರುತರಲು ಹೋಗುವಂತೆ ನಟಿಸಿದರು. ಆದರೆ ನಿಜಕ್ಕೂ ನೀರು ತರಲು ಹೋಗದೆ ಒಲೆಯ ಹಿಂದೆ ಆವಿತು ಕುಳಿತರು. ಒಂದು ಕಳ್ಳಬೆಕ್ಕು ಕಿಟಿಕಿಯಿಂದ ಒಳಕ್ಕೆ ಬಂದು ನೇರವಾಗಿ ಕವಾಟನೊಳಕ್ಕೆ ಹಾರಿ ಮೈಸೂರುಭಜಿಯನ್ನು ಧ್ವಂಸ ಮಾಡತೊಡಗಿತು. ನಾಯಕರು ಬಿಟ್ಟ ಕಣ್ಣುಗಳಿಂದ ನೋಡುತ್ತಲೇ ಇದ್ದಾರೆ. ಬೆಕ್ಕು ಅತಿ ವೇಗದಲ್ಲಿ ಭಜಿಯನ್ನು ತಿನ್ನುತ್ತಿದೆ! ನಾಯಕರಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಒಲೆಯಲ್ಲಿ ಮರಳುತ್ತಿದ್ದ ನೀರಿನ ಕಡೆ ನೋಡಿದರು. ಲೋಟ ಕೈಗೆತ್ತಿಕೊಂಡರು.
ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ಅದಕ್ಕಿಂತಲೂ ಪ್ರಸ್ತುತವಾದ ಇನ್ನೊಂದು ಸಂದರ್ಭ ಜಾಗುವಾನ ಜೀವನದಲ್ಲಿ ಒದಗುತ್ತಿರಲಿಲ್ಲ. ಆದರೆ ಬೆಕ್ಕುಗಳಿಗೆ ಆತ್ಮಹತ್ಯೆ ವಿಧಿಸಿಲ್ಲವಾದ್ದರಿಂದ ಎಂಥ ನೋವನ್ನಾದರೂ ಸಹಿಸಲೇಬೇಕು. ಎಂಥ ಪರಿಸ್ಥಿತಿಯಲ್ಲೂ ಬದುಕುವುದೊಂದೇ ಉದ್ದೇಶ. ನೋವಿನಿಂದ ತಪ್ಪಿಸಿಕೊಳ್ಳಲೆಂಬಂತೆ ಜಾಗುವಾ ನೆಲದಲ್ಲಿ ಬಿದ್ದುಹೊರಳಾಡಿತು. ಮರಹತ್ತಿ ಇಳಿಯಿತು. ಬಯಲಲ್ಲಿ ಓಡಿತು. ಕೂಗಿ ರಂಪ ಎಬ್ಬಿಸಿತು. ನಿದ್ದೆ ಆಹಾರಗಳಿಲ್ಲದೆ ಅಲೆಯಿತು. ಕೆಲವು ನೋವುಗಳು ಮಾಯಲು ಹಲವು ದಿನಗಳು ಬೇಕಾಗುತ್ತವೆ; ಇನ್ನು ಕೆಲವು ಎಂದಿಗೂ ಮಾಯುವುದಿಲ್ಲ. ಕುದಿವ ನೀರು ಬಿದ್ದ ಬೆನ್ನಿನ ಉದ್ದಕ್ಕೂ ಚರ್ಮ ಕಿತ್ತು ಬಂದು ಹುಣ್ಣಾಗಿತ್ತು. ಹುಣ್ಣಿಗೆ ನೊಣಗಳು ಮುತ್ತಿಕೊಂಡವು. ಒಂದು ಕಾಲಕ್ಕೆ ಕಾಣಲು ಆಕರ್ಷಕವಾಗಿದ್ದ ಜಾಗುವಾ ಈಗ ಎಲ್ಲರೂ ಹೇಸಿಕೊಳ್ಳುವಂತಾಯಿತು. ಊರವರ ಕೆಟ್ಟ ದೃಷ್ಟಿಗೆ ಆದು ಬಿದ್ದಿತು. ಪುಂಡರು ಕಲ್ಲು ಬೀರಲು ಸುರು ಮಾಡಿದ ಮೇಲೆ ಹಗಲು ಹೊತ್ತು ಹೊರಗೆ ಕಾಣಿಸುವುದಕ್ಕೆ ಅದಕ್ಕೆ ಭಯವಾಯಿತು. ಹೊಟ್ಟೆ ಹಸಿವು ತೀವ್ರಗೊಂಡಿತು. ಸ್ವಾಭಿಮಾನವನ್ನು ಗಾಳಿಗೆ ತೂರಿತು.
ಉದಯಗಿರಿಯ ಅಂಚೆನಲ್ಲಿರುವುದೇ ಶ್ರೀಪತಿ ಉಡುಪರ ಮನೆ. ಹಾಲು ಬೆಣ್ಣೆ ವ್ಯಾಪಾರದಿಂದ ಜೀವನ ಸಾಗಿಸುವವರು ಅವರು. ಅಷ್ಟೇನೂ ಶ್ರೀಮಂತರಲ್ಲ. ಅತ್ಯಂತ ಬಡವರೂ ಅಲ್ಲ. ಹಗ್ಗದ ಸೇತುವೆಯಂಥ ಬದುಕು. ಉಡುಪರು ತುಂಬಾ ದೈವ ಭಕ್ತರು. ಪ್ರತಿ ರಾತ್ರೆ ಪೂಜೆ ನಡೆಯಲೇಬೇಕು. ಸಂಜೆಯಿಂದಲೇ ಸಾಮೂಹಿಕ ಭಜನೆ ಆರಂಭವಾಗುತ್ತದೆ. ನಂತರ ಪೂಜೆ, ಪ್ರಸಾದ ವಿತರಣೆ ಇತ್ಯಾದಿ. ಒಂದು ದಿನ ಜಾಗುವಾ ಊರ ಹೊರ ವಲಯದಲ್ಲಿ ಸುಳಿದಾಡುತ್ತಿರುವಾಗ ಕೊನೆಯ ಮನೆಯಿಂದ ಗದ್ದಲ ಕೇಳಿಸುತ್ತದೆ. ಇದೇನೆಂದು ಹೋಗಿ ನೋಡಿತು. ಹೊರ ಪಡಸಾಲೆಯಲ್ಲಿ ಕೆಲವು ಮಂದಿ ಕುಳಿತು ಭಜನೆಯಲ್ಲಿ ನಿರತರಾಗಿದ್ದಾರೆ. ಒಬ್ಬ ಹಾರ್ಮೋನಿಯಂ ನುಡಿಸುತ್ತಿದ್ದಾನೆ. ಇನ್ನೊಬ್ಬ ತಬಲಾ ಬಡಿಯುತ್ತಿದ್ದಾನೆ. ಒಬ್ಬಳು ಹುಡುಗಿ ಹಾಡುತ್ತಿದ್ದಾಳೆ. ಇತರರು ಅನುಸರಿಸುತ್ತಿದ್ದಾರೆ. ಒಳಗಿನಿಂದ ಬಾದಾಮಿ ಸಕ್ಕರೆ ಹಾಕಿ ಕಾಯಿಸಿದ ಹಾಲಿನ ಪರಿಮಳ ಬರುತ್ತಿದೆ. ಜಾಗುವಾ ಇಣುಕಿ ನೋಡಿತು. ಪರಿಮಳ ಬರುತ್ತಿರುವುದು ದೇವರ ಕೋಣೆಯಿಂದ ಎಂದು ಗೊತ್ತಾಯಿತು. ಉಗುರುಗಳನ್ನು ಒಳಕ್ಕೆಳೆದುಕೊಂಡು ಸದ್ದಾಗದಂತೆ ಜಗಲಿಗೆ ಹತ್ತಿತು. ದೇವರ ಕೋಣೆಯೊಳಗೆ ನಂದಾದೀಪ ಉರಿಯುತ್ತಿದೆ. ಇನ್ನು ತಡಮಾಡಬಾರದೆಂದು ಕಿಟಿಕಿಯ ಸರಳುಗಳ ಮೂಲಕ ಒಳಗಿಳಿಯಿತು. ಹಾಲಿರಿಸಿದ್ದ ಪಾತ್ರೆಯ ಮುಚ್ಚಳವನ್ನು ಮೆಲ್ಲನೆ ಸರಿಸಿತು. ಅದು ಕೆಳಗೆ ಬಿದ್ದು ಸದ್ದಾದರೂ ತಬಲದ ಹುಡುಗ ಜೋರಾಗಿ ಬಾರಿಸುತ್ತಿದ್ದುದರಿಂದ ಯಾರ ಗಮನವನ್ನೂ ಸೆಳೆಯಲಿಲ್ಲ. ತಬಲದ ಹುಡುಗ ಚೆನ್ನಾಗಿ ಬಾರಿಸುತ್ತಾನೆ. ಬಹಳ ಚುರುಕು ಎಂದೆನಿಸಿ ಜಾಗುವಾನಿಗೆ ಸಂತೋಷವಾಯಿತು. ಇದು ದೇವರಿಗೆಂದು ಇರಿಸಿದ ಹಾಲು; ಕುಡಿಯುವುದು ಸರಿಯೇ ಎಂದು ಒಂದು ಕ್ಷಣ ಅಳುಕಿದರೂ ಹಾಲು ಕುಡಿಯುವುದರಲ್ಲಿ ತಪ್ಪೇನು ಎಂದುಕೊಂಡು ಪೂರ್ತಿಯಾಗಿ ಕುಡಿದು ಮುಗಿಸಿತು. ಹೊರಗೆ ಅದೇ ಕಿಟಿಕಿಯ ಮೂಲಕ ಬರುವಾಗ ಹೊಟ್ಟೆ ತುಸು ದೊಡ್ಡದಾಗಿರುವುದು ಗಮನಕ್ಕೆ ಬಂದು ತನಗೆ ತಾನೇ ನಗು ಬಂತು.
ಇತ್ತ ಭಜನೆ ಮುಗಿದು ಉಡುಪರು ಪೂಜೆ ಮುಗಿಸಲು ಕುಳಿತಾಗಲೇ ಗೊತ್ತಾದುದು ಹಾಲು ಅದೃಶ್ಯವಾದ ಸಂಗತಿ. ಇದೇನು ಎಂದುಕೊಂಡು ಎಲ್ಲರನ್ನೂ ವಿಚಾರಿಸಿದರು. ಯಾರಿಗೂ ಗೊತ್ತಿರಲಿಲ್ಲ. ಕೃಷ್ಣದೇವರೇ ಹಸಿದು ಕುಡಿದುಬಿಟ್ಟನೆ? ಈ ಕಲಿಯುಗದಲ್ಲಿ ಅಂಥ ಪವಾಡಗಳು ನಡೆಯುತ್ತವೆಯೆ? ಯಾಕೆ ನಡೆಯಬಾರದು? ಅಂತೂ ಆ ದಿನದ ಪೂಜೆ ಬಾಳೆಹಣ್ಣುಗಳಲ್ಲಿ ಪೂರ್ಣಗೊಂಡಿತು. ಮಾರನೆ ಬೆಳಿಗ್ಗೆ ಯಾರೂ ಈ ಘಟನೆಯ ಬಗ್ಗೆ ಚಿಂತಿಸಲಿಲ್ಲ. ಆದರೆ ಅದೇ ರೀತಿ ಅಕ್ಕಿ ಪಾಯಸಕ್ಕೂ ಅದರ ಮರುದಿನ ಪಂಚ ಕಜ್ಜಾಯಕ್ಕೂ ಇದೇ ಗತಿ ಬಂದುದು ಮನೆ ಮಂದಿಯ ಗಮನ ಸೆಳೆಯದಿರುತ್ತದೆಯೇ? ಇದು ಪವಾಡವೊ ಅಥವಾ ಇನ್ನೇನಾದರೂ ವಿದ್ಯಮಾನವೋ?
“ಇದು ಜಾಗುವಾನ ಕೆಲಸ!” ಎಂದ ಗೋಪಾಲ. ಗೋಪಾಲನೆಂದರೆ ಉಡುಪರ ಕೊನೆಯ ಮಗ. ತಬಲಾ ನುಡಿಸುವವನು ಅವನೆ.
“ಜಾಗುವಾ ಅಂದರೆ ಯಾರು?” ಉಡುಪರ ಪ್ರಶ್ನೆ.
“ಜಾಗುವಾ ಗೊತ್ತಿಲ್ಲವೆ? ಅದೊಂದು ಕಳ್ಳಬೆಕ್ಕು. ಒಂದು ತಿಂಗಳಿನಿಂದ ಈ ಊರಿನಲ್ಲಿ ಕೀಟಲೆ ಮಾಡುತ್ತಿದೆ.”
“ಓಹೋ!”
“ಜಾಗುವಾನನ್ನು ನಾನು ಹಿಡಿಯುವೆ. ನಾಳೆ ಪೂಜೆಗೆ ಬಾದಾಮಿ ಹಾಲು ಕಾಯಿಸಿಡಮ್ಮ. ಸ್ವಲ್ಪ ಹೆಚ್ಚೇ ಇರಲಿ.”
“ಬಾದಾಮಿ ಹಾಲೇ, ಯಾಕೋ?”
ಗೋಪಾಲ ಅದಕ್ಕೆ ಉತ್ತರಿಸಲಿಲ್ಲ. ಜಾಗುವಾನಿಗೆ ಅದೇಕೋ ಬಾದಾಮಿ ಹಾಲು ಪ್ರಿಯವಾದೀತು ಎಂಬುದು ಬಹುಶಃ ಅವನ ನಂಬಿಕೆ. ಆದರೆ ಜಾಗುವಾ ನನ್ನು ಹಿಡಿಯುವುದು ಹೇಗೆಂಬುದು ರಾತ್ರಿಯೆಲ್ಲಾ ಅವನನ್ನು ಕಾಡುವ ಸಮಸ್ಯೆಯಾಯಿತು.
ಜಾಗುವಾ ಮಾತ್ರ ಮರುದಿನ ಪುಂಡು ಹುಡುಗರ ಕಲ್ಲಿಗೆ ಗುರಿಯಾಗಿ ಕಾಲುನೋವು ತಂದುಕೊಂಡು ಇಡಿಯ ಉದಯಗಿರಿಯ ಕುರಿತು ಬೇಸರ ಬಂದು ಈ ಊರನ್ನೇ ತ್ಯಜಿಸಿ ಹೋಗುವುದರಲ್ಲಿತ್ತು. ಅರ್ಧ ಮೈಲಿ ಹಾಗೆ ಖಿನ್ನತೆಯಿಂದ ನಡೆದೂ ನಡೆಯಿತು. ಆದರೆ ಇನ್ನೊಂದು ಊರು ಇದಕ್ಕಿಂತ ಚೆನ್ನಾಗಿರುತ್ತದೆಂಬ ಭರವಸೆಯಾದರೂ ಏನು? ಮನುಷ್ಯ ಸ್ವಭಾವವೂ ಪ್ರಾಣಿ ಸ್ವಭಾವವೂ ಹೆಚ್ಚು ಕಡಿಮೆ ಎಲ್ಲಾ ಕಡೆ ಒಂದೇ ರೀತಿ ಇರುತ್ತವೆ.ಅಲ್ಲದೆ ಅದೀಗ ದೂರ ಪ್ರಯಾಣ ಕೈಗೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ. ಹೇಗಿದ್ದರೂ ಜಾಗುವಾನ ಕೊನೆ ಬೇರೊಂದು ರೀತಿಯಲ್ಲಿ ಸಂಭವಿಸುವುದಿತ್ತು. ಆದ್ದರಿಂದಲೆ ಉದಯಗಿರಿಗೆ ಮರಳುವುದಕ್ಕೆ ಆದಕ್ಕೆ ಪ್ರೇರಣೆಯುಂಟಾಯಿತು. ರಾತ್ರಿಯ ಹೊತ್ತು ಅಭ್ಯಾಸ ಬಲ ಅದನ್ನು ಎಳೆದುಕೊಂಡು ಒಂದುದು ಉಡುವರ ಮನೆಗೆ. ಎಂದಿನಂತೆ ಭಜನೆ ಭರ್ಜರಿಯಾಗಿ ಸಾಗುತ್ತಿತ್ತು. ಪೂಜೆಗೆ ಬಾದಾಮಿ ಹಾಲು ಸಿದ್ಧವಾದಂತಿದೆ. ಆದರ ಹಿತವಾದ ಪರಿಮಳ ಮೂಗನ್ನು ಕೊರೆಯುತ್ತಿದೆ.
ಜಾಗುವಾ ಕಿಟಿಕಿಯಿಂದ ಒಳ ಹೊಕ್ಕಿತು. ನಂದಾದೀಪದ ಬೆಳಕಿನಲ್ಲಿ ಪ್ರಕಾಶಿಸುತ್ತಿರುವ ದೇವರ ವಿಗ್ರಹಕ್ಕೆ ಮನಸ್ಸಿನಲ್ಲೆ ನಮಸ್ಕರಿಸಿತು. ಎಂದಿಗಿಂತಲೂ ಹೆಚ್ಚು ಹಾಲು ಈ ದಿನವಿದೆ. ಹಾಲು ಕುಡಿಯುತ್ತಾ ಜಾಗುವಾ ಅಂದುಕೊಂಡಿತು ಯಾಕೆ ತಬಲಾದ ಧ್ವನಿಯೇ ಕೇಳಿಸುತ್ತಿಲ್ಲ? ತುಂಬಾ ಚೆನ್ನಾಗಿ ಬಾರಿಸುತ್ತಿದ್ದನಲ್ಲ ಆ ಹುಡುಗ? ಆತನಿಗೇನಾಯಿತು? ಹೀಗೆಂದುಕೊಂಡು ಹಾಲು ಮುಗಿಸಿ ಬಾಯಿ ಚಪ್ಪರಿಸಿ ಎಂದಿನಂತ ಕಿಟಿಕಿಯ ಮೂಲಕವೆ ಹೊರಕ್ಕೆ ಜಿಗಿಯಿತು. ಹಾಗೆ ಜಿಗಿದಾಗ ಮಾತ್ರ ಅದು ಸೇರಿದುದು ಒಂಡು ದೊಡ್ಡ ನೈಲಾನ್ ಬಲೆಯನ್ನು. ಆ ಕೂಡಲೆ ಭಜನೆಯ ಸದ್ದು ನಿಂತಿತು.
ಜಾಗುವಾನನ್ನು ಅವರು ಬಲೆಯಿಂದ ತೆಳುವಾದ ಗೋಣಿ ಚೀಲವೊಂದಕ್ಕೆ ಹಾಕಿ ಚೀಲವನ್ನು ಬಂಧಿಸಿದರು. ಈಗ ಅದನ್ನೇನು ಮಾಡುವುದೆಂಬುದು ದೊಡ್ಡ ಸಮಸ್ಯೆಯಾಯಿತು.
“ಬೆಕ್ಕನ್ನು ಕೊಲ್ಲುವಂತಿಲ್ಲ. ಕೊಂದರೆ ಮಹ ಪಾಪ. ಕೊಂದವರ ತಲೆ ಸೂತ್ರದ ಗೊಂಬೆಯಂತೆ ಅಲ್ಲಾಡಲು ತೊಡಗುತ್ತದೆ. ಎಲ್ಲಾದರೂ ದೂರ ಬಿಟ್ಟುಬಿಡು. ಹೋಗಿ ಬದುಕಿಕೊಳ್ಳಲಿ.” ಎಂದರು ಉಡುಪರು.
“ಬಿಟ್ಟರೆ ಬೇರೆ ಊರಲ್ಲಿ ಬಿಡಬೇಕು. ಇಲ್ಲದಿದ್ದರೆ ಮತ್ತೆ ಬಂದು ಬಿಡುತ್ತದೆ”
“ಯಾವುದಾದರೂ ಬಸ್ಸಿನಲ್ಲೋ ಲಾರಿಯಲ್ಲೋ ಹಾಕಿಬಿಡು.”
“ಗೊತ್ತಾದರೆ ನನ್ನ ತಿಥಿ ಮಾಡುತ್ತಾರೆ.”
“ಗೊತ್ತಾಗದಂತೆ.”
ಯಾರೂ ಎದುರಾಗದಿರಲಿ ಎಂದು ಮನಸ್ಸಿನಲ್ಲೆ ಆಶಿಸುತ್ತ ಚೀಲವನ್ನೆಳೆದುಕೊಂಡು ಕತ್ತಲಲ್ಲಿ ಬೀದಿಯಲ್ಲಿ ನಡೆಯುತ್ತಿದ್ದ ಗೋಪಾಲನಿಗೆ ಅವನ ಅಧ್ಯಾಪಕರಾದ ಮಾಧವರಾವ್ ಎದುರಾದರು. ಅವರು ಪದ್ಧತಿಯಂತೆ ಬ್ಯಾಡ್ ಮಿಂಟನ್ ಆಡಿ ಬ್ಯಾಟ್ ಹಿಡಿದುಕೊಂಡು ಬರುತ್ತಿದ್ದರು. ವಿಜ್ಞಾನದ ಅಧ್ಯಾಪಕರಾದ ಮಾಧವರಾವ್ ನ್ನ ಕಂಡರೆ ಗೋಪಾಲನ ಸಮೇತ ಎಲ್ಲ ವಿದ್ಯಾರ್ಥಿಗಳೂ ಅಂಜುತ್ತಿದ್ದರು.
“ಏನೋ ಉಡುಪ? ಎಲ್ಲಿ ಹೊರಡೋಣಾಗಿದೆ?”
“ಒಂದು ಕಳ್ಳ ಬೆಕ್ಕನ್ನು ಹಿಡಿದಿದ್ದೀನಿ ಸಾರ್. ಊರೆಲ್ಲ ಕದ್ದು ತಿಂತಾ ಇತ್ತು.”
“ಬಹಳ ಒಳ್ಳೆ ಕೆಲಸ ಮಾಡಿದೆ. ಈಗೆಲ್ಲಿಗೆ ಕೊಂಡೊಯ್ತಾ ಇದೀಯಾ?”
“ಎಲ್ಲಾದರೂ ಬಿಟ್ಟು ಬಿಡಬೇಕೂಂತ ಸಾರ್. ಬಸ್ ಸ್ಠಾಂಡಿಗೆ ಹೋಗ್ತಾ ಇದೀನಿ.”
“ಬಸ್ ನಲ್ಲಿ ಹಾಕ್ತಿಯಾ?”
“ಹೌದು ಸಾರ್.”
“ಎಷ್ಟು ಕೆಟ್ಟದಾಗಿ ಓಡ್ತದೆ ಕಣೋ ನಿಮ್ಮಂಥವರ ತಲೆ! ಈ ಊರಿನ ಉಪಟಳಾನ ಇನ್ನೊಂದು ಊರಿಗೆ ಸಾಗ ಹಾಕುವುದೆ? ನೀನು ಓದು ಬರಹ ಕಲಿತದ್ದಕ್ಕೆ ಸಾರ್ಥಕ ಆಯ್ತು.”
“ಬೆಕ್ಕನ್ನ ಕೊಂದ್ರೆ ಪಾಪ ಅಂತ ಅಪ್ಪ ಹೇಳ್ತಾರೆ ಸಾರ್.”
“ತಲೆ ಅಲ್ಲಾಡುತ್ತದೆ ಅಂತ ಹೇಳಿದರೆ?”
“ಹೂಂ ಸಾರ್.”
“ಅದೆಲ್ಲಾ ಮೂಢನಂಬಿಕೆ ಕಣೋ. ತಲೆ ಅಲ್ಲಾಡುವುದು ಸ್ನಾಯುಗಳ ದೌರ್ಬಲ್ಯದಿಂದ. ಬೆಕ್ಕನ್ನು ಕೊಂದದ್ದರಿಂದ ಅಲ್ಲ. ನಿನಗಿಂಥ ಮೂಢನಂಬಿಕೆ ಗಳಿವೆಯೇನೋ?”
“ನನಗಿಲ್ಲ ಸಾರ್. ಅಪ್ಪನಿಗಿದೆ.”
ಈ ಮಧ್ಯೆ ಗೋಣಿ ಚೀಲದೊಳಗೆ ಜಾಗುವಾ ಜೀವನ್ಮರಣ ಹೋರಾಟ ನಡೆಸಿತ್ತು. ಒಂದೆಡೆ ತೂತು ಮಾಡಿ ಅದರ ಕೈಯೊಂದು ಹೊರಬಂದಿದ್ದು ಅದನ್ನು ಹಿಂದೆ ಎಳೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೊರಕ್ಕೆ ಬರಲೂ ಆಗುತ್ತಿರಲಿಲ್ಲ. ಆದ್ದರಿಂದ ಕೂಗು ಹಾಕುತ್ತಿತ್ತು. ಅದನ್ನು ಸುಮ್ಮನಿರಿಸಲೆಂದು ಗೋಪಾಲ ಇಡಿಯ ಚೀಲವನ್ನೇ ನೆಲಕ್ಕೆ ತದಕುತ್ತಿದ್ದ. ಮಾಧವರಾವ್ ಮೂಢ ನಂಬಿಕೆಗಳ ಬಗ್ಗೆ ಅವನಿಗೆ ತಿಳಿಹೇಳುತ್ತಿದ್ದರು.
“ಈಗೇನು ಮಾಡಲಿ ಸಾರ್?” ಎಂದ ಗೋಪಾಲ ತುಸು ಹತಾಶನಾಗಿ.
“ಕೆರೆಯಲ್ಲಿ ಮುಳುಗಿಸಿಬಿಡಬೇಕು ಇಂಥ ಪ್ರಾಣಿಗಳನ್ನು, ಇಲ್ಲದಿದ್ದರೆ ಆರೋಗ್ಯಕ್ಕೆ ತುಂಬಾ ಹಾನಿಕರ. ಏನೇನೋ ರೋಗ ರುಜಿನಗಳಿಗೆ ಇವು ವಾಹಕಗಳಾಗುತ್ತವೆವ”
“ಕೆರೆಯಲ್ಲಿ?”
“ಹೌದು, ಮುಳುಗಿಸುವಾಗ ಒಂದು ಭಾರವಾದ ಕಲ್ಲನ್ನು ಕಟ್ಟುವುದೊಳ್ಳೇದು. ಇಲ್ಲದಿದ್ದರೆ ಇದು ಮುಳುಗೋದಿಲ್ಲ. ಈಜಿಕೊಂಡು ದಡ ಸೇರುತ್ತೆ.”
ಗೋಪಾಲನಿಗೆ ಹೆಚ್ಚು ಯೋಚಿಸುವುದಕ್ಕೆ ಸಮಯಾವಕಾಶವಿರಲಿಲ್ಲ. ಒಂದೆಡೆ ಮಾಧವರಾಯರ ಒತ್ತಾಯ. ಇನ್ನೊಂದೆಡೆ ಜಾಗುವಾನ ಒದ್ದಾಟ. ಗೋಪಾಲ ಚೀಲವನ್ನೆಳೆದುಕೊಂಡು ನೇರವಾಗಿ ಕೆರೆದಂಡೆಗೆ ಬಂದ. ದೊಡ್ಡದೊಂದು ಕಲ್ಲನ್ನು ಅದಕ್ಕೆ ಕಟ್ಟಿದ. ಯಾರಾದರೂ ನೋಡುತ್ತಾರೆಯೇ ಎಂದು ಆಚೀಚೆ ದೃಷ್ಟಿ ಹಾಯಿಸಿದ. ಈ ಹೊತ್ತಿನಲ್ಲಿ ಅಲ್ಲಿ ಯಾರೂ ಇರುತ್ತಿರಲಿಲ್ಲ. ಇದ್ದರೂ ಇಂಥ ಕತ್ತಲಲ್ಲಿ ಕಾಣಿಸುವುದು ಕಷ್ಟ. ಮೂಢ ನಂಬಿಕೆಗಳಲ್ಲಿ ಅವನಿಗೆ ವಿಶ್ವಾಸವಿಲ್ಲದಿದ್ದರೂ ಒಳಗೊಳಗೇ ಅಳುಕು. ಈ ಪರಿಸರದಲ್ಲಿ ಹೆಚ್ಚು ಹೊತ್ತು ನಿಲ್ಲುವುದೇ ಸರಿಯಲ್ಲವೆಂದುಕೊಂಡು ಚೀಲವನ್ನು ಬೀಸಿ ಕೆರೆಯ ಮಧ್ಯಕ್ಕೆ ಎಸೆದೇ ಬಿಟ್ಟ.
*****