ವಿಶ್ವವು ಒಂದಾಗಲಿ… ಬಾಳಲಿ
ಏಳಿಗೆ ಕಹಳೆಯು ಮೊಳಗಲಿ ದಿಗ್ದೆಸೆಗಳಲಿ
ತಪ್ಪಾಗದೆ ಇರಲಿ ಎನ್ನುವ ಪ್ರೇಮದ ಕೂಗು,
ವ್ಯಾಪಕವಾಗಿ ತಬ್ಬುತಲಿರುವಾಗ
ಒಡೆಯುವ ಮಾತನು ಆಡದಿರಿ; ಸಣ್ಣವರಾಗದಿರಿ
ಕನ್ನಡಕ್ಕೆ ದ್ರೋಹವ ಬಗೆಯದಿರಿ
ಆದಿಕವಿ ಪಂಪನಿಗೆ ಇರಿಯದಿರಿ.
ಇಲ್ಲಿರುವವರು ಯಾರು ?
ಅಣ್ಣ, ತಮ್ಮ, ಬಂಧು ಮಿತ್ರರಲ್ಲದೆ
ಅನ್ಯರಿರುವರೇನು ?
ಒಬ್ಬೊಬ್ಬರು ಬೇರೆ ಬೇರೆಯಾಗಿ
ಕೊನೆಗೆ ಉಳಿಯುವುದೇನು ?
ಸಹನೆಯಿರಲಿ ಕೂತು, ಚರ್ಚಿಸಿ.
ಕೊಡುವ, ಪಡೆವ ಬಾಳುವ ಮಾತು, ಕೆಲಸ ಮಾಡಿರಿ.
ಒಡೆದು ಹೋಗಿ ನರಳಿ
ಬಹು ಪ್ರಯಾಸದಿಂದ ಒಂದುಗೂಡಿ
ಕೆಟ್ಟ ಮೇಲೂ ಬುದ್ದಿ ಕಲಿಯಲಿಲ್ಲವಿವರು
ಏನು ಜನ ?
ಕೊಂದರೆಮ್ಮನೆನ್ನರೆ ಆಲೂರು ವೆಂಕಟರಾಯರಾದಿ ಹಿರಿಯರು.
ಅಂದಿಗಿಂದಿಗೂ ಬೆಳಕ ದಾರಿ ತೋರಿದ ಕನ್ನಡಿಗರು ನಾವು
ನಾವೇ ಅಡ್ಡದಾರಿ ತುಳಿದರೆ
ಕಾಲದೂರದೇನು ?
ಚರಿತ್ರೆಯಲ್ಲಿ ಉಳಿವ
ಮಾತು, ಕೃತಿ, ಚಿಂತನೆ ಕಡೆ ಗಮನ ಕೊಡಿ.
*****