ದೊರೆಗಳಾಗಿದ್ದ ಚಾಮರಾಜ ಒಡೆಯರವರು ಬಹಳ ಭಕ್ತರಾಗಿದ್ದರು. ಮನೆ ದೇವತೆಯಾದ ಚಾಮುಂಡೇಶ್ವರಿಯಲ್ಲಂತೂ ಅವರಿಗೆ ಅತಿಶಯವಾದ ಭಕ್ತಿಯಿತ್ತು. ಪಟ್ಟವನ್ನೇರಿದ ಮೇಲೆ ಒಡೆಯರು ಒಂದು ಅಮಾವಾಸ್ಯೆಯ ರಾತ್ರಿ ಅಮ್ಮನವರ ಪೂಜೆಗೆಂದು ಪರಿವಾರದೊಡನೆ ಮಡಿಯುಟ್ಟು ಬೆಟ್ಟಕ್ಕೆ ಹೊರಟರು. ಗಾಢಾಂಧಕಾರ; ಪಂಜುಗಳನ್ನು ಹಿಡಿಸಿಕೊಂಡು ದಾರಿಯನ್ನು ಕಳೆದು ಬೆಟ್ಟವನ್ನು ಹತ್ತಲು ದೊರೆಗಳು ಮೊದಲಿಟ್ಟರು. ಅದೇ ವೇಳೆಗೆ ಸರಿಯಾಗಿ ಆಕಾಶದಲ್ಲಿ ಕಾರ್ಮೋಡಗಳು ಕವಿದುಕೊಂಡು ಗುಡುಗು ಮಿಂಚೂ ಮೊದಲಾಯಿತು. ಬೆಟ್ಟವನ್ನು ಹತ್ತುತ್ತ ಗುಡುಗು ಇನ್ನೂ ಹೆಚ್ಚಾಯಿತು. ಕಿಬ್ಬಿಯು ಭಯಂಕರವಾಗಿತ್ತು. ಇದ್ದಕ್ಕಿದ್ದ ಹಾಗೆಯೇ ಗಗನವನ್ನು ಭೇದಿಸಿಕೊಂಡು ಪ್ರಳಯ ಕಾಲದಲ್ಲಿ ನಡೆಯುವಂತೆ ಬರಸಿಡಿಲು, ರಾಜರ ಸಮೀಪದಲ್ಲಿಯೇ ಬಿತ್ತು. ಎಲ್ಲಿದ್ದವರು ಅಲ್ಲಿಯೇ ನೆಲಕ್ಕೆ ಬಿದ್ದುಬಿಟ್ಟರು; ಅನೇಕರು ಮೂರ್ಛಿತರಾದರು; ಸಿಡಿಲು ಬಿದ್ದುದು, ಹೋದುದು ಯಾರಿಗೂ ತಿಳಿಯಲಿಲ್ಲ. ಎಲ್ಲರೂ ನಿಶ್ಚೇಷ್ಟಿತರಾಗಿದ್ದರು ಎರಡು ತಾಸುಗಳ ಕಾಲ. ತರುವಾಯ ದೊರೆಗಳೆದ್ದು ಕುಳಿತು ಸುತ್ತಲೂ ನೋಡಿದರು. ಆಕಾಶವೇನೊ ಸ್ತಬ್ಧವಾಗಿತ್ತು; ಕಗ್ಗತ್ತಲು; ಮಳೆ ಯಿಲ್ಲ; ಆದ ಗಿಡಬಳ್ಳಿಗಳು ಗಾಳಿಗೆ ಸಿಕ್ಕಿ ಸುಯ್ಸುಯ್ ಎಂದು ನಿಟ್ಟುಸಿರುಬಿಡುತ್ತಿದ್ದಂತಿದ್ದವು. ರಾಜರೆದ್ದು ಪಕ್ಕದಲ್ಲಿ ಬಿದ್ದಿದ್ದವನನ್ನು ಎಚ್ಚರಿಸಲು ಪ್ರಯತ್ನಿಸಿದರು. ಪ್ರಾಣವೇ ಇಲ್ಲ; ಒಬ್ಬೊರನ್ನಾಗಿ ನೋಡುತ್ತಿರಲು ಕಡೆಗೆ ಒಬ್ಬನು ಮೂರ್ಛೆ ತಿಳಿದೆದ್ದು ಕುಳಿತು ಸ್ವಲ್ಪ ಕಾಲ ಬೆಪ್ಪಾಗಿ ನೋಡುತ್ತಲಿದ್ದು ಆಮೇಲೆ ಪಂಜನ್ನು ಹೊತ್ತಿಸಿ ರಾಜರನ್ನು ಗುರುತಿಸಿ ಅಳುತ್ತ “ಏನಾಯಿತು! ಮಹಾಸ್ವಾಮೀ! ಏನಾಯಿತು!!” ಎಂದು ಗದ್ಗದ ಸ್ವರದಿಂದ ಕೇಳಿದನು. ದೂರೆಗಳಿಗೆ ತಿಳಿಯಲಿಲ್ಲ; ಇವನು ಹೆದರಿದ್ದಾನೆಂದು “ಭಯಪಡಬೇಡವಯ್ಯ; ಇದು ದುರ್ಗಿಯ ಆಟ ಮಾತ್ರ! ಎಲ್ಲವೂ ಶಾಂತವಾಯಿತು. ಇನ್ನೇಕೆ ಅಳುಕು? ” ಎಂದು ಸಮಾಧಾನ ಪಡಿಸಿದರು. ಅದಕ್ಕೆ ಅವನು ಹೆದರಿಕೆಯಿಲ್ಲ, ಪ್ರಭು, ಅದರೆ ತಮ್ಮ…. ಜುಟ್ಟು, ಜುಟ್ಟು!” ಎಂದನು. ದೊರೆಗಳು ಆಗ ತಲೆಯನ್ನು ಸವರಿಕೊಂಡು ನೋಡಿಕೊಂಡರು-ತಲೆಯ ಕೂದಲೆಲ್ಲಾ ಉದುರಿಹೋಗಿ ಬೋಳಾಗಿಬಿಟ್ಟಿತ್ತು.

ಆಗ ರಾಜರು “ಇದಕ್ಕೇ ನಿನಗೆ ದುಃಖ! ಹೋಗಲಿ ಬಿಡು ಅಮ್ಮನವರಿಗೆ ಇಷ್ಟಕ್ಕೆ ತೃಪ್ತಿಯಾಯಿತು! ಪ್ರಾಣಕ್ಕೆ ಹಾನಿಯಲ್ಲವಲ್ಲ” ಎಂದರು. ತರುವಾಯ ಇಬ್ಬರೂ ಪೂಜೆ ಮುಗಿಸಿಕೊಂಡು ಅನುಚರರೊಡನೆ ಹಿಂತಿರುಗಿದರು.
*****
[ವಂಶರತ್ನಾಕರ, ಪುಟ ೨೦ ; ವಂಶಾವಳಿ, ಪುಟ ೧೭]