ಗಗನದಿಂದ ಧರಣಿಗೆ ಮುತ್ತಿನಸರದಂತೆ ಉದುರುವ ಹನಿಗಳು. ತುಸು ಒದ್ದೆಯಾದ ಭಾರ ಮೋಡಗಳು – ಪ್ರೀತಿಯ ತುಳುಕುವ ಹೃದಯದಂತೆ- ಬಿಡಲಾರದೆ ಸುರಿಯುತ್ತಿವೆ.
ಮಾಳಿಗಿ ಮೇಲೆ ನಿಂತು ಕೆಳಗೆ ನೋಡಿದರೆ ಹೋದೋಟ- ಪ್ರತಿ ಹೂ ಪ್ರತಿ ಎಲೆ, ಒಂದು ಹನಿಯನ್ನೂ ಬಿಡದೆ ಅದೇನು ಸ್ನಾನ ಮಾಡುವುದು! ಸಂಜೆ ವರೆಗೂ ಮುಚ್ಚಿದ ಬಾಗಿಲ ಹಿಂದೆ ಕಂಪ್ಯೂಟರ್ ಗಳ ಕೋಣೆ ಯಲ್ಲಿದ್ದ ಸುಸ್ತು ಮಾಯವೇ ಆಯಿತು. ದೀಪಕ್ ಬರುತ್ತಿದ್ದ ವೇಳೆ, ಆಗಲೇ- ಚಿಕ್ಕ ಚಿಕ್ಕ ಹೂಗಳಿರುವ ಛತ್ರಿ ಕೈಯಲ್ಲಿ- ಮಳೆಯ ವೇಳೆ ಸಿಗುವ ಆನಂದಕ್ಕೆ ರೂಪ ಕಟ್ಟಿದಂತೆ!
“ಅರೆ, ಇದು ಹೆಂಗಸರ ಛತ್ರಿ ಯಲ್ವೋ ದೀಪಕ್?” ನಗುತ್ತಾ ಸ್ವಾಗತ ನೀಡಿದೆನು.
“ಅದೆಂಥಾ ಗಂಡು-ಹೆಣ್ಣು ಭೇದ ಛತ್ರಿ ಯಲ್ಲಿ? ಎಷ್ಟು ಸುಂದರವಾಗಿದೆ ನೋಡು!”
ಪ್ರತಿ ಒಂದು ಸಣ್ಣಾಪುಟ್ಟ ವಿಷಯಕ್ಕೂ ಕೋಮಲತೆ- ಒಂದೊಂದು ಸಾರಿ ಮಿತಿಯಿಲ್ಲದ ಸೌಂದರ್ಯದೃಷ್ಟಿ. ಭಾವುಕುರಂತೆ ಕೂದಲಲ್ಲಿ ಹೂ ಮುಡುಕೊಂತಾನೋ ಅನಿಸುವುದುಂಟು.
“ಯೋಚನೆ ಯಾತಕೇ ಜವ್ವನೀ! ಮುಸ್ಸಂಜೆಯ ಮಳೆಯನ್ನು ಸವಿಯೋಣ!”
-ಹುಡುಕಿದರೂ ’ಪುರುಷತ್ವದ ಕಠಿಣತೆ ’ ಸಿಗದಂತಹಾ ಮಧುರ ಸ್ವರವದು.
ಮಂದ ಸ್ವರದಿಂದ ಅಂದ-” ಕೌಮುದೀ, ಇವತ್ತು ಈ ಮಾತನ್ನ ಹೇಳಲೇಬೇಕನ್ನಿಸ್ತುತ್ತಿದೆ.”
“ನಿನ್ನ ಶಂಕೆಯ ಬಿಟ್ಟು ನನ್ನಹತ್ತಿರ ನಿಂತು ನೋಡು.”ನಂಗೇ ಹೇಳುತ್ತಿರುವನು. ಅರ್ಥ ವಾಗುತ್ತಿದೆ. ವಿಚಲಿತವಾದೆ! ನವ ಯೌವನದ ಕಾಲಗಳಲ್ಲಿ ಇಂಥಾ ಮಾತುಗಳನ್ನು ಓದಿದಾಗ ಎಷ್ಟು ಕನಸುಗಳು ಕಂಡಿದ್ದೆ!
ನನ್ನ ಸುತ್ತಿಬಂದ ಆತನ ಕೈ, ಆತನ ಎದೆಯಮೇಲೆ ನನ್ನ ಕೆನ್ನೆಯ ಆನಿಸಿ, ಕಣ್ಣು ಮಾತ್ರ ಎತ್ತಿ ಆ ಪ್ರಿಯವದನವ ವೀಕ್ಷಿಸುವದು- ಕಲ್ಪನೆ ಅದೆಷ್ಟು ಅಪರೂಪವೆನ್ನಿಸಿವುದು!
ಆದರೆ ಈಗ- ಇಷ್ಟು ವರ್ಷ ಕಳೆದನಂತರ ಈ ಮಾತು ಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಿರುವೆನೇ? ವಾಸ್ತವಕ್ಕೆ ಬರಲು ಪ್ರಯತ್ನ ಮಾಡುತ್ತಾ ಒಳೆಗಡೆ ಬಂದೆ. ಅಶೋಕ್ ಇನ್ನೂ ಮನಿ ಸೇರಲಿಲ್ಲ. ಆಫೀಸ್ ಆದಮೇಲೆ ಅದೆಷ್ಟೋ ವ್ಯಾಸಂಗ ಆತನಿಗೆ. ಅದರಲ್ಲಿ ಯಾವುದೊಂದೂ ನನಗೆ ಹಿತವಾಗಿದ್ದಲ್ಲ ಎನಿಸಿದ ಕಾರಣ ನಾನು ಕಲ್ಪಿಸುಕೊಳ್ಳುವುದಿಲ್ಲ.
ಅನನ್ಯ ಗೆ ಇವತ್ತು ಸಾಲಿ ಇಲ್ಲ. ಟೀವಿ ಯಲ್ಲಿ ಕಾರ್ಟೂನ್ ನೆಟ್ ವರ್ಕ್ ನೋಡುತ್ತಿದ್ದಾಳೆ. ಈಗಲೇ ಆ ಮೂಡ್ ನಿಂದ ಹೊರಗೆ ಬರಲ್ಲ.
ಮಳೆ ಹನಿಗೆ ಲಿಲ್ಲೀ ಬಿರಿದಂತಿದೆ.ಬಾಲ್ಕನೀ ತುಂಬಿದ ಸುಗಂಧ ಪರವಶಗೊಳಿಸುತ್ತಿದೆ. ದೊಡ್ಡ ಗಾತ್ರದ ಲಿಲ್ಲಿ ಯಂತಿರುವ ಈ ವಿರಳವಾದ ಹೂಜಾತಿ ಮಳೆಕಾಲ ಬರುವತನಕ ಏನಾಗುತ್ತೋ?
ನಾನು ತಂದು ಕೊಟ್ಟಿರುವ ಹಾಟ್ ಚಾಕ್ಲೆಟ್ನ ಸಿಪ್ ಮಾಡುತ್ತಾ ಅಂದ ದೀಪಕ್-“ನಾಳೆ ನಿನ್ನ ಹುಟ್ಟಿದಬ್ಬ ಅಲ್ವೇ ಕೌಮುದೀ? “ಎಷ್ಟು ನೆನಪು ಈತನಿಗೆ!
“ಮುವ್ವತ್ತು ವರ್ಷ ದಾಟುವ ವೇಳೆ ಇನ್ನೂ ಏನು ಬರ್ತ್ ಡೇ ಬಿಡು” ಅಂದೆ.
ಕೇಳಿಸಿಕೊಳ್ಳದಂತೆ ನನ್ನ ಹತ್ತಿರ ಬಂದು- “ನಿಜವಾಗಲೂ ಎಷ್ಟು ಒಳ್ಳೆಯ ದಿನ ನಾಳೆ! ನೀನು ಈ ಪ್ರಪಂಚದೊಳಗೆ ಬರುವುದು ಅದೆಷ್ಟು ದೊಡ್ ವಿಷಯ!” ನನ್ನ ಕೈ ಆತನ ಕೈಯಲ್ಲಿ – ಬೆಚ್ಚಗೆ- ಉದ್ವೇಗ ತಿಳಿಯುತ್ತಿದೆ. ಕಣ್ಣಲಿ ತುಂಬಿ ತುಳುಕುವ ಅನುರಾಗಾಮೃತ-ಆ ಮೇಲೆ ತೇಲುತ್ತಿರುವ ನೊರೆ ಯಂತಹಾ ವಾಂಛೆ- ಗ್ರಹಿಸಿ ಚಲಿಸಿದೆ,ಕಂಪಿಸಿದೆ.
“ಹೌದು ಕೌಮುದೀ-ನಿನ್ನ ನೋಡಿದ ಆ ಕ್ಷಣದಿಂದಾ ಹೇಳಬೇಕಂತಿದ್ದೆ. ಇವತ್ತು ಕೇಳು. ನೀನು ನಂಗೆ ಬೇಕು-ನನ್ನವಳಾಗಿ ಎಂದಿಗೂ!ಬಂದುಬಿಡು ನನ್ನ ಜೊತೆ!”
“ಏನು, ಸೇರಿಕೊಂಡ್ರೇನು ಫ್ರೆಂಡ್ಸ್ ಇಬ್ಬರೂ?” ಅಶೋಕ್ ಬಂದ.-ಮುಖವೆಲ್ಲಾ ತುಂಬಿದ ದರಹಾಸದೊಂದಿಗೆ.ವಾತಾವರಣ ಹಗುರವಾಯಿತು. ಹಾಯಾಗಿ ದೀಪಕ್ ಜೊತೆ ಕೂತು ಮಾತನಾಡುತ್ತಿದ್ದಾನೆ ಅಶೋಕ್. ಮಾತು- ಅಭ್ಯಾಸವಾಗಿದ್ದವು-ಭೂಮಿ ಯಿಂದ ಒಂದು ಅಡಿಯಷ್ಟೂ ಹಾರದಮಾತು-ಬೆಳೆದ ಮಾತು. ಒಂದು ನಿಮಿಷದ ಹಿಂದೆ ಈತ ತನ್ನ ಹೆಂಡತಿ ಯನ್ನು ಪ್ರಪೋಸ್ ಮಾಡಿದ್ದನು ಅಂತ ಗೊತ್ತಾದರೆ ಏನಂತಾನೋ!
ಯಾವುದೇ ಸುಂದರಅನುಭೂತಿಯನ್ನು ಕಾಣದೆಯೇ ಆತನ್ನ ಮದ್ವೆ ಯಾಗಿ ಹತ್ತು ವರ್ಷ ಆಯಿತು. ನನ್ನ ಕೋಮಲತೆಗೆ ಆಲಂಬನೆಯಾಗುತ್ತಾನೆಂದು ಕನಸು, ಆಶೆ ಮದುವೆ ಮುಂಚೆ- ಆದ ಹೊಸತನದಲ್ಲಿ- ಮಂಜಾಗಿ ಕರಗಿ ಹೋಯಿತು. ಮೊದಲು ಸಣ್ಣ ಸಣ್ಣ ಆಶಾಭಂಗವಾದರೇನೇ ಹೃದಯಾಘಾತವಾಗುತ್ತಿತ್ತು. ಕ್ರಮಕ್ರಮವಾಗಿ ಅಭ್ಯಾಸಗೊಂಡಿದೆ.
ಸ್ಥಾಯೀಭೇದ- ಅದೇ ನಮ್ಮ ನಡುವೆ ಇರುವದು. ನನ್ನ ಚಲಿಸುವಂತೆ ಮಾಡುವ ಅನೇಕ ವಿಷಯಗಳು ಆತನಿಗೆ ಅರ್ಥವೇ ಆಗುವದಿಲ್ಲ. ನನಗಾಗಿ ಇರಬೇಕೆಂದು ಪ್ರಯತ್ನಪಟ್ಟರೂ ನನ್ನ ಸ್ವಾಪ್ನಿಕತೆಯಲ್ಲಿ ಆತನಿಗೆ ನಿಲ್ಲುವದಕ್ಕಾಗಲ್ಲ.ಆದರೆ ನನ್ನ ಮೇಲೆ ಗೌರವ ಇದೆ- ತನ್ನ ಹೆಂಡತಿ ಸ್ವಲ್ಪ ವಿಶೇಷವಾದವಳೆಂದು ತಿಳಿದಿದೆ. ಮೆಲ್ಲಗೆ ಆತನ ಫ್ರೀಕ್ವೆನ್ಸೀ ಗೆ ಹೋಗಿ ಯೋಚಿಸುವದು, ಮಾತನಾಡುವದು ತಿಳಿದುಕೊಂಡೆ. ಕಳೆಯುವ ಕಾಲದಲ್ಲಿ ಬೆಳೆದಿದ ಸಾಮೀಪ್ಯ, ನಮ್ಮಿಬ್ಬರ ಅನನ್ಯ ನಮ್ಮನ್ನೂ ದಂಪತಿಗಳಂತೆ ಮಾಡಿದವು. ಕೋಪ, ನಿರಾಶೆ ಯಿಂದ ಯಾವುದನ್ನೂ ಹಿಡಿಸಿಕೊಂತಿದ್ದಿಲ್ಲ ಮೊದಲು. ಆತನೇ ಎಲ್ಲವೂ ನೋಡಿಕೊಳ್ಳುವುನು. ನನ್ನ ತಿಳಿವಳಿಕೆ, ವಿವೇಚನೆ ಯನ್ನು ನಮ್ಮ ಸಂಸಾರದಲ್ಲಿ ಬಳಸಲೇ ಇಲ್ಲ. ಎಲ್ಲವೂ ಆತನ ಯೋಜನಯೇ, ಸೋಕಾಲ್ಡ್ ಸಕ್ಸೆಸ್ ಫುಲ್ ಪ್ಲಾನಿಂಗ್. ನನ್ನ ಗಾಯ ವಾಸಿ ಯಾಗುವುದು, ಮತ್ತೆ ಹಸಿಯಾಗುವುದು. ರಾಗಾಲಾಪನೆ ಬಿಟ್ಟಿದ ಹೃದಯವು. ನನ್ನ ಕೊರತೆ ಯೆಲ್ಲಾ ನನ್ ಒಳಗೇ ಇತ್ತು. ಮೇಲೆ ಏನೂ ಕಾಣಿಸಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ಸ್ಥಿಮಿತವಾಗಿದೆ ಜೀವನವೀಗ. ಕಣ್ಣೇ ಇಲ್ಲದವರು ಬೆಳಕಿನ ಆಶೆಯ ಅದೆಷ್ಟು ದಿನ ಬೆಳಿಸಿಕೊಳ್ಳುತ್ತಾರೆ? ಮತ್ತಿನ್ನೇನೂ ಇರುವುದಿಲ್ಲ ನಿಜಜೀವನದಲ್ಲಿ ಎಂದು ನಂಬಲು ಆರಂಭಿಸಿದೆ.
ಆ ಶುಷ್ಕತ್ವ ದಿಂದಾ, ಹಾಗೆ ಆತನ ಪರಿಚಯ. ಹೊಸದಾಗಿ ನಮ್ಮ ಕನ್ಸಲ್ಟೆನ್ಸೀಗೆ ಸೇರಿದ್ದ. ಎರಡು ಮೂರು ವರ್ಷ ನನಗಿಂತ ಸಣ್ಣವನಾಗಿರಬಹುದು.ಆಗಲೇ ತಂದು ಕಟ್ಟಿದ ಮಲ್ಲಿಗೆ ಹುವ್ವಂತ ನೆನಪುಗಳು ಆತನ ಕಂಡರೆ. ಜೀವನದ ಕಹಿ ಎನ್ನುವುದು ತಿಳಿಯದ ತಾಜಾತನ ತುಂಬಿದ ಮುಖ.
ಅವತ್ತು ಆಫೀಸ್ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಂದಿನಂತೇ ನನ್ನ ಭಾವಗೀತೆ- ನನ್ನ ವಾಣಿಯಲಿ ವಸಂತರಾಗವು. ಎಂದಿನಂತೇ ಯಾಂತ್ರಿಕತೆ ತುಂಬಿದ ಅಭಿನಂದನೆಗಳ ಮಧ್ಯದಲಿ- “ಯಾರದು ಈ ದಯಾಜ್ಯೋತ್ಸವೀ ಏಕಾಂತ ನಿಶೀಥಿಯಲಿ!” ನನಗೆ ಮಾತ್ರ ಕೇಳಿಸುವಷ್ಟು ಹತ್ತಿರದಲ್ಲಿ ಬಂದು ಆಡಿದ ಮಾತು. ಕನಸಲಿ ಕೇಳಿದೆನೋ- ನಿಜವೋ- ಈ ಗೀತೆಯಲಿ ಕವಿ ಹೃದಯವು ನೆನೆಸಿದ ಏಕಾಂತ ನಿಶೀಥಿ ಯಾರಿಗೆ ಗೊತ್ತಾಯಿತು? ಇಷ್ಟದಿಂದ ನೋಡಿದೆ-ಕೃತಜ್ಞಳಾಗಿ- ಏನೂ ಮಾತಾಡಲಾರದೆ!
ಅದು ಆರಂಭವಷ್ಟೆ-ಸಹಚರ್ಯದ ಸೌರಭದಲ್ಲಿ ಚಕಿತಳಾಗುವದಕ್ಕೆ. ಅದು ಮೊದಲಾಗಿ ನಿಲ್ಲಲಿಲ್ಲ ಆ ಒಂದಾನೊಂದು ಮಿಂಚುನೋಟ. ಹೇಗೆ ನೋಡುತ್ತಾನಂದರೆ ನನ್ನ- ಅಪರೂಪವಾಗಿ, ಅಚ್ಚರಗೊಂಡು- ನಾನು’ ನಾನಾಗುವುದೇ’ ಒಂದು ಅದ್ಭುತವಾದಂತೆ. ಹೇಗೆ ಮಾತಾಡುತ್ತಾನಂದರೆ- ಲೋಕದಲ್ಲಿ ಯಾರಾದರೂ ಇಂಥಹಾ ಅನುಭೂತಿಗಳ ಮಾತುಗಳಾಗಿ ಹೇಳುವುದು ಸಾಧ್ಯವೇ ಇಲ್ಲ ಎಂದಂತೆ. ಎಷ್ಟು ವರ್ಷದ ಶೂನ್ಯವೋ ತುಂಬಿ ಹೋಯ್ತು ಈ ಬೆಳಕಲಿ. ಇದು ಭಾಳಾ ಆಳವಾಗಿ ಹೋಗುತ್ತಿರುವ ಬಂಧವೆಂದು ಒಳಗೊಳಗೆ ಗೊತ್ತಾಗದೇನಿಲ್ಲ. ಕಡೆಗೆ ಇದೋ ಇವತ್ತು- ದೀಪಕ್ ಹೀಗೆ……!
*** *** *** ***
ಯು ಎಸ್ ನಲ್ಲಿ ರುವ ಅಣ್ಣನ ಬಳಿ ಅಮ್ಮಾ ಅಪ್ಪಾ ಹೋದನಂತರ ಈ ಎರಡು ವರ್ಷಗಳಲಿ ಹುಟ್ಟಿದಬ್ಬದ ನೆನಪೇ ಇಲ್ಲ. ಮುಂಜಾನೇ ಅವರಿಂದ ಕಾಲ್- ಒಂದೇಸಾರ್ತಿ ಚಿಕ್ಕುಡುಗಿ ಆದೆ. ಶ್ರದ್ಧೆ ಯಿಂದ ತಯಾರಾದೆ. ಸ್ಟೀರಿಯೋದಲಿ ಜಲತರಂಗಿಣಿ- ಹಂಸಧ್ವನಿಯಲಿ. ಒಂದು ಗೊತ್ತಾಗದ ನೆಮ್ಮದಿ ಮುಖದಲ್ಲಿ ತಿಳಿದಿರಬೇಕು-ಅನನ್ಯ ಅಂದಳಲ್ಲಾ- ಎಷ್ಟು ಚೆನ್ನಾಗಿದ್ದೀಯಮ್ಮಾ ಇವತ್ತು.” ಅಂತ. ಅವಳನ್ನ ಹತ್ತಿರ ಕರಕೊಂಡು ಥಾಂಕ್ಸ್ ಹೇಳಿ ಸ್ಕೂಲ್ ಗೆ ಕಳುಹಿಸಿದೆ.
ಅಶೋಕ್ ಪೂಜೆಯ ಮಾಡಿಕೊಂಡು ಬಂದರು. ಎಂದಿನಂತೇ ಮಾರ್ನಿಂಗ್ ವಿಷ್ ಆಗಿ ಮುಗುಳ್ನಗೆ ಯಿಂದ ಸ್ವಲ್ಪಹೊತ್ತು ಮಾತನಾಡಿ ನಿಷ್ಕ್ರಮಿಸಿದರು. ಆತನಮೇಲೆ ಸಿಟ್ಟು ಮಾಡಿಕೊಳ್ಳುವುದು ಬಿಟ್ಟು ಬಹಳ ದಿನ ಆಯಿತು. ಆಫೀಸ್ ಗೆ ಹೋಗಬೇಕಂದರೆ ಮನಸು ಉದ್ವಿಗ್ನವಾಗುತ್ತಿದೆ. ಏನು ಕೇಳಬೇಕೊ? ಏನು ಹೇಳಬೇಕೋ?
“ಬಂದುಬಿಡು ಕೌಮುದೀ, ಕಲೆತು ಇರೋಣ ಇನ್ನುಮೇಲೆ.” ಆತನ ಕಣ್ಣಲಿ ಕಾಂಕ್ಷೆ- ಇವತ್ತು ತೀಕ್ಷಣವಾಗಿತ್ತು. ನನಗೂ ಇದೆಯಾ- ಎಚ್ಚರದಿಂದ ಗಮನಿಸಿಕೊಂಡೆ. ಗೊತ್ತಾಗಿಲ್ಲ. ನನ್ನ ಕಡೆ ಯಿಂದ ಈ ರಿಲೇಷನ್ ಷಿಪ್ ನ ಆಸ್ವಾದಿಸುವುದು ನಿಜ- ಗಂಡುಸು ಕಡೆ ಯಿಂದ ಪರ್ಯವಸಾನ ಹೇಗೆ ಇರುತ್ತೆ ಎನ್ನುವುದು ಇಷ್ಟು ವರೆವಿಗೂ ತೋಚಲಿಲ್ಲ.ತಪ್ಪೇ- ಅಷ್ಟು ಆರಾಧಿಸುವವರು ನನ್ನ ವಾಂಛಿಸುವುದು ತಪ್ಪೇ? ಆ ದೃಷ್ಟಿಕೋನ ದಲ್ಲಿ ಯೋಚಿಸಿದರೆ ಯಾವುದೂ ತಪ್ಪೆನಿಸುತ್ತಿಲ್ಲ.
“ಮತ್ತೆ ಅನನ್ಯ….?”
“ನಮ್ಮಜೊತೆಯಲೇ ಇರುತ್ತಾಳೆ- ನಿನ್ನಬಿಟ್ಟು ಅವಳಾದರೂ ಹೇಗಿರುತ್ತಾಳೆ?”
“ಅಶೋಕ್ ಸಹ ನಮ್ಮಜೊತೆಯಲ್ಲೇ ಇರಬಹುದಲ್ವೇ!”-ನಾನಾ ಮಾತು ಅರಿಯದೆ ಅಂದೆನೋ, ಇಲ್ಲ ಸ್ತ್ರೀ ಸಹಜವಾದ ಸಿಡುಕುತನವು ನನ್ನಲ್ಲಿ ಬಂತೋ ನನ್ನಗೀಗಲೂ ಅರ್ಥವಾಗದಮಾತು. ಅಶೋಕ್ ಇಲ್ಲದೇ ಜೀವಿಸುವುದು ಎನ್ನುವ ಯೋಚನೆ ಬಾರದ್ದೋ, ಅಮ್ಮ, ಅಪ್ಪ, ಅಣ್ಣ, ಅನನ್ಯ ರಂತೆಯೇ ಅಶೋಕ್ ಸಹ ನನಗೆ ಆಪ್ತನಾದನೋ. ದೀಪಕ್ ಮುಖ ಕೆಂಪೇರಿತು.
“ವಿನೋದಕ್ಕಲ್ಲ ನಾನು ಮಾತಾಡುವುದು ಕೌಮುದೀ!”
ನಾವಿಬ್ಬರು ಅಶೋಕ್ ನ್ನ ಬಿಟ್ಟು ಬಂದರೆ- ಮನಸ್ಸು ಕಳುಕ್ಕಂತು. ಏನಂತ ಹೇಳಿ ಬೇರೆ ಯಾಗಬೇಕು-ಆತನಿಗೆ ಬಾರದ್ದನ್ನು, ಕೈಲಾಗದ್ದನ್ನು ಆತನಿಂದ ಆಶಿಸಿ, ಕೊಡಲಾರನೆಂದು – ಬೇರೇ ಯಾಗಬಹುದೇ?- ತುಂಬಿ ತುಳುಕುವ ಪ್ರೀತಿ ಇಬ್ಬರ ನಡುವೆ ಯಿಲ್ಲವೆಂದು ಬೇರೇ ಯಾಗಬೇಕೆ?
“ಇನ್ನೇನು ಯೋಚನೆ ಕೌಮುದೀ- ನಾವಿಬ್ಬರು ಒಬ್ಬರಿಗಾಗಿ ಒಬ್ಬರು ಸೃಷ್ಟಿಸಪಟ್ಟವರು. ಅದು ಸ್ವಲ್ಪ ನಿಧಾನವಾಗಿ ತಿಳಿದಿದೆ ಯಷ್ಠೇ- ಇನ್ನೂ ಬೇರೇ ಇರುವುದೇ? ನಾನು ಬೇಡವೇ ನಿನಗೆ?”
ಹೌದು- ಬೇಡ ಎನ್ನುವುದೇ ಈತನನ್ನ?- ನನ್ನ ಜೀವನಸಾಫಲ್ಯವನ್ನ?
“ಅಶೋಕ್ ಗೇನು- ಮತ್ತೆ ಮದಿವಿ ಆಗಬಹದಲ್ಲವೇ? ನಿನ್ನ ಬೆಲೆ ಗೊತ್ತಾಗದ ಆತನಿಗಾಗಿ ನಿಂತಿರುವೆಯೇ?”
ನನಗೆ ತಲೆ ಸುತ್ತಿ ಬಂದಂತಾಯಿತು.
“ಹೋಗಲಿ, ಹೀಗೇ ಇರಬಹದಲ್ಲವೇ- ಬದಲಾವಣೆ ಯಾದರೂ ಏಕೆ?” ಕನಿಕರ ಹುಟ್ಟುವಂತೆ ಕೇಳಿದೆನೋ? ಅರ್ಥವಿಲ್ಲದಂತೆ ಕೇಳಿದೆನೋ?
“ಇಲ್ಲ ಇಲ್ಲ ನೀನು ನಂಗೆ ಬೇಕು- ಸಂಪೂರ್ಣವಾಗಿ ನನ್ನವಳಾಗಿರಬೇಕು.”
ಆತನ ನೋಟ, ಸ್ಪರ್ಶದಲ್ಲಿ ತಪ್ಪಿಸಿಕೊಳ್ಳಲಾರದದೇನೋ ಇದೆ- ಇನ್ನು ಸ್ವಲ್ಪ ಹೊತ್ತು ಇದ್ದರೆ ಏನಾಗುವೆನೋ ಎಂದು ಹೆದರಿಕೊಂಡು- ತಿರಿಗಿಬಂದೆ.
ಅನಿಶ್ಚಿತತೆ- ಸಂದಿಗ್ಧತೆ. ನಾನು- ನನ್ನ ನೇಪಥ್ಯ- ನನ್ನ ಕೂಸು-ನನ್ನ ತಾಯಿತಂದೆ- ಸಾಮಾಜಿಕ ಭದ್ರತೆ-ನನ್ನ ರಕ್ತ ಸುಳಿದಾಡುತ್ತಿದೆ.
*** *** *** ***
ಮನೆಗೆ ಬಂದು ನೋಡಿದರೆ ಬಾಗಲಲ್ಲಿ ನಿಂತ ಮ್ಯಾಟೀಸ್ ಕಾರು. ಮನ ಸಂತೋಷದಿಂದ ನಾಟ್ಯವಾಡಿತು. ಗುರ್ತಿಟ್ಟುಕೊಂಡು ಜ್ಯೋತ್ಸ್ನ ಬಂದೇ ಬಿಟ್ಟಿದ್ದಾಳೇ. ಹೆಸರು ಹೇಗೋ ಹಾಗೇ ಅವಳು ನನಗೆ ಪರ್ಯಾಯವಾದವಳು. ಫ್ರೆಷ್ ಆಗಿ ಹೊಳೆಯುತ್ತಾ ಹಾಲಲ್ಲಿ ಕೂತಿದ್ದ ಅವಳನ್ನ ನೋಡಿದರೆ ಪ್ರಾಣ ಎದ್ದುಬಂದಂತಾಯ್ತು.
“ಮೆನೀ ಹಾಪೀ ರಿಟರ್ನ್ಸ್ ಕಾಮೂ!” ಬಿರಿದ ಗುಲಾಬಿಗಳಿಂದಾ ಆಹ್ವಾನಿಸಿದಳು. ಮನೆಯೇ ಬೇಸಗಿ ಬಿಡಿದಿ ಯಾದಂತಿತ್ತು. ನನ್ನ ಸುಸ್ತು ಬಿಡುವಂತೆ ಹಾಯಾಗಿ ಸ್ನಾನ ಮಾಡಿ ಆರಾಮದ ಬಟ್ಟೇ ಹಾಕಿಕೊಂಡು ಬಂದೆ. ರೂಮು ತುಂಬಾ ಗುಲಾಬಿ ಅಲಂಕರಿಸಿದ್ದಾಗಿದೆ. ಆ ಪರಿಮಳ ಅದ್ಭುತವಾಗಿದೆ. ಉಪೋದ್ಘಾತವೇ ಬೇಕಾಗದು ನಮ್ಮ ನಡುವೆ. ಕೇಳೇ ಬಿಟ್ಟೆ -“ಪ್ರೀತಿ- ದೈವೀಕವೂ ಮಹಿಮಾನ್ವಿತವೂ ಆದ ಪ್ರೀತಿ – ಎದುರಾದರೇ ಅದಕ್ಕೆ ಮರ್ಯಾದೆ ಬೇಡವೇ? ಅದಕ್ಕಾಗಿ ಸಮಸ್ತವೂ ತ್ಯಾಗ ಮಾಡಬಾರದೇ?”
ತಾನಂದಳು-“ಶಾಶ್ವತವೇ ಅನ್ನುತ್ತೀಯಾ? ಆ ಮಾತು ಹೇಳಲಿಲ್ವೆ? ಮತ್ತು ಯಾರನ್ನ ನೋಡಿದರೇನೂ ಹೃದಯವು ಸ್ಪಂದಿಸದೇ? ಸ್ಪಂದಿಸಿದರೇ ಅಂಥಹಾ ಪ್ರೀತಿ ಇದ್ದಾಗೋ ಅಥವಾ ಹೋದಾಗೋ? ಹೋಯಿತೆಂದರೇ ಆ ಇನ್ನೊಬ್ಬರ ಜೊತೆ ಮತ್ತೂ ಹೊಸಜೀವನ ಮಾಡುವುದೇ? ಇಬ್ಬರಲ್ಲಿ ಒಬ್ಬರಿಗೆ ಪ್ರೀತಿ ಹೋಗಿ ಮತ್ತೊಬ್ಬರಿಗೆ ಉಳಿದರೆ ಆಗೇನು ಮಾಡುವುದು?” ನೇರ ಉತ್ತರ ಕೋಡಲಾರದೆ ನಿಂತೆ.
“ಹೋಗಿಬಿಡಬೇಕೆನಿಸುತ್ತಿದೆ ನನಗೆ. ಒಬ್ಬಳೇ ಆತನ ಜೊತೆಯಲಿ. ತಾಳಲಾರದಿದ್ದೇನೆ.”
“ಆಳವಾದ ಘಾಟಿಗಳನ್ನು ನೋಡಿದಾಗ ಆ ಸೌಂದರ್ಯವು ಭರಿಸಲಾರದ ಆ ಆಳವನ್ನು ಮುಟ್ಟಬೇಕನಿಸುವುದಿಲ್ಲವೇ- ಹಾಗೇ” ಅಂದಳು ಜ್ಯೋತ್ಸ್ನ.
“ಬಂದುಬಿಡು ಅಂತಿದ್ದಾನೆ ಜ್ಯೋತ್ಸ್ನಾ- ಕಾದಂಬರಿಯಲ್ಲಿ ಇರುವಂತೆ!”
“ಸಿಕ್ಕುಬಿಟ್ಟೆ ಕಾಮೂ! ಕಾದಂಬರಿ ಯಲ್ಲಿರುವ ಪಾತ್ರವಾಗಲಿ, ಬರೆಯುವವರಾಗಲಿ ಹೀಗೆ ಹೋದರೇ ಮತ್ತು ಯಾರನ್ನೂ ವಾಂಛಿಸುವುದಿಲ್ಲ ಎಂದು ಇಲ್ವಲ್ಲ. ಹೌದು ತಾನೆ?”
“ಅದು ಬೇರೇ ಜ್ಯೋತ್ಸ್ನಾ”
“ಹೇಗೆ ಬೇರಾಯಿತು? ಎಷ್ಟೇ ದೊಡ್ಡ ಪ್ರೀತಿ ಅನುಭೂತಿ ಯಿರಲೀ, ಅದನ್ನು-ಅಗ್ನಿಯ ಕೈಯಲ್ಲಿ ಹಿಡಿದಂತೆಯೇ- ಬಂಧಿಸಲಾರವು ಎಂದಿಗೂ. ಈ ಉದ್ವೇಗ, ಉನ್ಮತ್ತತೆ ಎಂದಿಗೂ ಹೀಗೇ ಇರುತ್ತದೆಯೇ? ಇರದು . ಆಗ ಉಳಿಯೋದಾದರೂ ಏನು? – ಹೇಗೋ ಒಟ್ಟಾಗಿ ಇರುವುದು ಗತಕಾಲದ ಮಾಧುರ್ಯವನ್ನ ನೆನುಸುತ್ತಾ-ಅಷ್ಟೇ ತಾನೆ? ಆ ಸ್ಥಿತಿ ಈಗ ನೀನಿರುವುದಕ್ಕಿಂತಾ ಪ್ರಶಾಂತವಾಗಿ ಇರುತ್ತೇಂತ ನೀನಂದುಕೊಂಡರೇ ನಿನ್ನಿಷ್ಟ.!”
ಮತ್ತೂ ಅಂದಳು ಸ್ವಲ್ಪ ತೀವ್ರವಾಗಿ-“ಅಶೋಕ್ ನಿನಗೆ ಅಷ್ಟು ಹಿಡಿಸಿಲಿಲ್ಲ ಅಂದರೇ ಅನನ್ಯಾಳಿಗೆ ಜನ್ಮ ನೀಡಬಾರದಿತ್ತು.’ಎಲ್ಲರಿಗೂ ಅರ್ಥವಾಗುವಾಗ, ಅರ್ಥವಾಗುವಷ್ಟು ಬಾಧಿಸದ ತಂದೆ’ನ ಬಿಟ್ಟ ತಾಯಿಯನ್ನು ಮಕ್ಕಳು ಕ್ಷಮಿಸಲಾರರೇನೋ”
ನಾಚಿಗೆ ಅನಿಸಿತು ನಂಗೆ.
“ಪರಿಧಿಗಳಲ್ಲಿ ಒದುಗುವುದು ಅನಾವಶ್ಯವಾದ ನಾಗರಿಕತೆ ಅಂದುಕೊಂಡರೇ, ಆದಿಮತ್ವದ ಸ್ವೇಚ್ಛ ಕೋಸ್ಕರ ಪ್ರಯಾಣವೂ ಬಹಳಷ್ಟು ಆಕರ್ಷಣೀಯವಾದ ಆದರ್ಶವಾಗುವುದಷ್ಟೇ. ಆದರೇ ಅದು ಇಡೀ ಜೀವನವೂ ಮಾಡಬೇಕಾದಂತಹಾ ಕಠಿಣ ವ್ಯಾಯಾಮ. ಮಾಡಬಲ್ಲೆಯಾ , ಇಲ್ವಾ ನೋಡಿಕೋ”
ಬಾಡುವುದು ಸಹಿಸಬಲ್ಲೆನಾ?
“ಜೀವನ ಒಂದುದಿನದ ಸುದ್ದಿ ಯಲ್ಲ. ಇವತ್ತು ಬಿಟ್ಟ ಹೂವು ನಾಳೆಗೆ ಬಾಡುತ್ತವೆ. ಜೀವನಾದರ್ಶವು ಶಾಂತಿ- ನಿನಗೂ ನಿನ್ನ ಸುತ್ತಲೂ ಇರುವವರಿಗೆ ಶಾಂತಿ.- ಅದನ್ನು ಭಂಗಪಡಸುವ ಯಾವುದನ್ನೂ ಎದುರಿಸಿ ಹೋರಾಟ ಮಾಡಲೇಬೇಕು.”
ಇನ್ನೂ ಹೀಗಂದಳು.” ಸ್ತ್ರೀ ತನ್ನನ್ನು – ಮುಖ್ಯವಾಗಿ ಶಾರೀರಿಕ ವಾಗಿ ಸಮರ್ಪಿಸಿಕೊಂಡನಂತರ- ಪುರುಷನಾಗಿದ್ದವನು ಅಷ್ಟು ವರೆಗೂ ಇಲ್ಲದ ಅಧಿಕಾರವನ್ನು ಫ಼ೀಲ್ ಆಗುತ್ತಾನೆ. ನನಗೆ ಗೊತ್ತಿದ್ದ ವರೆಗೂ ಯಾವ ಗಂಡುಸೂ ಇದಕ್ಕೆ ಅಪವಾದವಲ್ಲ.- ಎಂತಹಾ ರಸಜ್ಞನೇ ಆಗಿರಲಿ!”
“ಅಂದರೇ ಆದಮೇಲೆ ಏನಾಗುತ್ತೋ ಅಂತ ಹೆದರಿಕೊಂಡು ಮುಂದಿನ ಹೆಜ್ಜೆಯೇ ಹಾಕಬಾರದೇ ?”
“ನಿನ್ನಿಷ್ಟ-ನಿನ್ನಿಷ್ಟ ಕೌಮುದೀ!”
ತನ್ನ ದನಿ ಯಲ್ಲಿ ಯಾವು ಭಾವವೂ ಇಲ್ಲ. ಅವಳು ಹೇಳಿದ್ದನ್ನೆಲ್ಲಾ ಒಪ್ಪಿದೆನೋ ಇಲ್ಲವೋ ಹೇಳಲಾರೆ. ಆದರೆ ನನ್ನ ಆದ್ಯತೆಗಳ ಬಗ್ಗೆ ಆಗ ಯೋಚಿಸಿದೆ. ವಾಸ್ತವಿಕತೆ, ನಿಯಮಿತತೆ, ಬಾಧ್ಯತೆ- ಹೃದಯಸ್ಪಂದನೆ ಯಿಂದ ಎಂದಿಗೂ ಒಂದಾಗ ಲಾರವು. ಆದರೇ ಇದು ಅವನ್ನೆಲ್ಲಾ ಮೀರಿ ನಾನಾಗಿ ನಿಶ್ಚಯಿಸುಕೊಳ್ಳಬೇಕಾದ ವಿಷಯ ಎಂದು ಅರ್ಥವಾಯಿತು.
ಹೌದು, ಸಮಯ ಮೀರಿದೆ.ದೀಪಕರಾಗವನ್ನು ಅದಕ್ಕೇ ತಕ್ಕ ವೇಳೆ ಬಿಟ್ಟು ಅವೇಳೆಯಲ್ಲಿ ಹಾಡಿದರೆ ದೀಪ ಬೆಳಗುವುದಿಲ್ಲವಂತೆ. ದೇಹವೇ ಸುಟ್ಟುಹೋಗುತ್ತಂತೆ. ದೀಪಕ್ ನನ್ನ ಬಾಳಲ್ಲಿ ವೇಳೆ ಮೀರಿದನಂತರ ಪ್ರವೇಶಿಸಿದ್ದಾನೆ.
ನಾನು ಕೌಮುದಿ- ಬೆಳದಿಂಗಳು! ನನಗೆ ಬೇರೇ ಬೆಳಕು ಬೇಕಿಲ್ಲವೇನೋ ನೋಡುತ್ತೇನೆ. ಪ್ರಯತ್ನಿಸುತ್ತೇನೆ ಹೊಳೆಯುತ್ತಿರಲು!
*****
ತೆಲುಗು ಮೂಲ: ಡಾ|| ಮೈಥಿಲಿ ಅಬ್ಬರಾಜು