`ಈ ಮನೆಯ ಬಳ್ಳಿ ನನೆಕೊನೆ ಹೋಗಿ ಮುದ್ದು ಮಗು-
ಗಳ ಮಧುರನಗೆಯ ಹೂಬಿಡಲಿ ನರುಗಂಪಿಡಲಿ
ತಲೆತಲೆಯ ಹಳನಡತೆ ಬೇರೂರಿ ಪಸರಿಸಲಿ ‘
ಎಂಬ ಕನಸನು ಹೊತ್ತು ನನಸುಗೊಳಿಸಲಿಕೆಂದು
ಕಲ್ಪವಲ್ಲರಿಯಂತೆ ತುಂಬಿದುಕ್ಕಂದದಲಿ
ನೀನೆಮ್ಮ ಸಂಸಾರದಲಿ ಬೆರೆತು ಬಂದೆಯೌ.
ಕೈ ಹಿಡಿದ ನಲ್ಲೆಯನು ಹಡೆದ ತಾಯಾಗಿ ನೀ
ಬೆಳೆವೆನ್ನ ಮನೆತನಕೆ ಹಿರಿಸಾಕುತಾಯಾದೆ.
ಹತ್ತೆಂಟುವರ್ಷಗಳ ಹಿಂಬಾಳ ನೆನಸಿದರೆ
ಕಂಬನಿಯ ಮಂಜುತೆರೆಮರೆಗೊಂಡು ಬೇಯುವುದು
ಕುದಿಕುದಿವ ಈ ಎದೆಯು, ಕಂಡುದೊಂದುಂಡುವದು
ಬೇರೊಂದು ತೋರುತಿರೆ, ದುರ‍್ವಿಧಿಯ ಕಟ್ಟಣಕ-
ದಿದಿರೆಳ್ಳನಿತುಸಹಿತ ಸಾಗದಿರೆ ನಿನ್ನಾಟ.
‘ಕಾಯವ್ವ ಕುಲದೇವಿ ಎಲ್ಲವ್ವ ಈ ಮನೆಯ-
ನೆಂದು ನೀ ದಿನದಿನವು ಬೇಡಿ, ಬಾಯ್ದಿಡುತಿರಲು,
ಬೇನೆ ಕುಲದೇವತೆಯು, ಕಣ್ಣೀರೆ ನಿಟ್ಟುಸಿರೆ
ಕದಲದಾರತಿಯಾಗಿ ಸಾವ ಕೌನೆರಳಲ್ಲಿ
ಕಾಲವನು ನೂಕಿದೆವು ಹೆದರಿಕೆಯ ಜಪತಪದಿ.
ಮನೆಮಡದಿ ನಲಿದೊಲಿದು ಬಾಳಬನವನು ಸೇರಿ
ತಿರುತಿರುಗಿ ಹೆರಿಗೆಹಾವಿನ ಕಚ್ಚುನಂಜೇರಿ
ಪಾಡಳಿದು ತಾಯ್ಸೊಗಕೆ ಎರವಾಗಿ ಸೋತಿಹಳು.
ಮನೆಬಳ್ಳಿ ಬೆಳೆವುದೆಲ್ಲಿಯಮಾತು, ಬನ್ನ ಬಿರು-
ಬಿಸಿಲಿಂದ ಮುರುಟ ನೀರಸವಾಗಿ ಬದುಕಿಹುದು
ಮೊದಲಮಗುಮುಗುಳು, ತಾನರಳದಲೆ ಕೈ ಕಾಲು
ಜೋಲಾಗಿ ಪೂರ‍್ವಕರ‍್ಮದ ಪಿಂಡ ಕರಗದಿದೆ.
ಹಲಹಸುಳೆ ನನೆಯಲ್ಲಿ ಕೊನೆಗಂಡು ಕಣ್ಣೀರ
ಹರಿಸಿದವು, ಹುಟ್ಟಿ ಬೆಳೆವೊಂದು ಚೆಲುಗಂಡುಹೂ
ಅರಿದಾಗಿ ಕೈಬಿಟ್ಟು ಹೋಯ್ತು ಕಣ್ಮರೆಯಾಗಿ.
ಈ ಎಲ್ಲ ಕಹಿಯುಂಡು ಸೇವೆಯಲಿ ಜೀವವನು
ತೇದು ನೀ ಮರುಕದುರಿಯಲಿ ಬೆಂದು ಬಸವಳಿದೆ.
ಹಳೆಯ ಸಾರಾಸಾರವೆಲ್ಲದರ ಸಂಕೇತವೇ
ನೀನಾಗಿ ವ್ರತನಿಯಮಗಳ ಕಠಿಣಕಟ್ಟಳೆಗೆ
ಮೈಮಣಿಸಿ ಸಂಕಲ್ಪ ಸಾಧನದಿ ಮುಂದಾದೆ ;
ನಮ್ಮ ಕರ‍್ಮದ ಮುಂದೆ, ಇದಿರು ಬೆಟ್ಟವಕೊರೆದು
ಮುನ್ನುಗ್ಗಲೆಳಸುತಿಹ ಕಾಳ್ಪುರದ ತೆರನಾಗಿ
ನಿನ್ನಯ ಹಟಾಟೋಪ ಹರಿಗಡಿದು ಹೋಯಿತೌ,
ಆಶೆ ಅಸ್ತಮಿಸಿದೊಲು, ಸೇವೆಸವೆದಳಿದಂತೆ,
ನಿನ್ನಯಾ ಕನಸುಮನೆ ಕೆಳಗುರುಳುವುದ ಕಂಡು
ಹೊರಳಿ ನೋಡದೆ ನೀನು ಕಂಬನಿಯನುರುಳಿಸುತ
ಸಾವಿನುರಿಗುಂಡದಲಿ ಬಯಸಿದೆಲು ಸೇರಿಹೋದೆ.
ಸೋದರತ್ತೆಯೆ, ನಿನಗೆ ಸಾದರತಿಲಾಂಜಲಿಯು !
ಮರೆಯದೆಂದಿಗು ನನಗೆ ನಿನ್ನ ಸೇವೆಯ ಬಲಿಯು !
ನಿನ್ನ ಕನಸದು ಈಗ ಮರಳುವನೆಯಾದರೂ
ಮಂಗಳವು ತಿಂಗಳನ ತೆರದಿಂದ ಮರಳೀತು,
ಒಲವು ಫಲಿಸದೆ ಇರದು, ಭಕ್ತನಿಗೆ ಅಳಿವಿಲ್ಲ.
ದುಷ್ಕರ‍್ಮ ಹಣ್ಣಿದೊಲು ಸತ್ಕರ‍್ಮ ಸುಸ್ವಪ್ನ
ಹಣ್ಣಿಯೇ ತೀರುವವು, ತಾಳ್ಮೆಯಲಿ ಬಾಳುವೆಯ
ತಿರುಳಿಹುದು, ಜೀವನದಿ ನಂಬಿಕೆಯ ಬಲಪಡಿಸಿ
ತಿಳಿನೋಟದಲಿ ಹೊಳೆದು ಹೊಳೆಯಂತೆ ಹರಿಯುವೊಲು
ನಿನ್ನ ಒಲವಿನ ಹರಕೆ ನಮ್ಮ ತಲೆಮೇಲಿರಲಿ !
*****








