ತುಮ್ ತುಮ್ ತುಮ್‌ತುಮ್ ತುಮ್‌ತುಮ್ ತುಮ್ ತುಮ್
ತುಂಬಿ ಬಂದಿತ್ತಽ ತಂಗೀ
ತುಂಬಿ ಬಂದಿತ್ತು ॥ ಪಲ್ಲ ॥
ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳಿಗಿಸಿ ಬಿಟ್ಟಿತಽ ತಂಗೀ
ತುಂಬಿ ಬಂದಿತ್ತು ॥ ತುಮ್ ತುಮ್
ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿದ್ಹಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತಽ ತಂಗೀ
ತುಂಬಿ ಬಂದಿತ್ತು ॥ ತುಮ್‌ತುಮ್
ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಽಗಿದಂತಿತ್ತ
ಇರುಳು ಮಬ್ಬಿನಾಗ ಹಗಲಿನ ಬೆಳಕು
ಕರಽಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತಽ ಈಗ
ತುಳಿಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು ॥ ತುಮ್‌ತುಮ್
*****








