ಭದ್ರಶೆಟ್ಟಿ ನಾಲ್ಕಾರು ಜನ ಅಣ್ಣತಮ್ಮಂದಿರೊಡಗೂಡಿ, ಸಂತೆ ಸಾರಿಗೆ ವ್ಯಾಪಾರ ಮಾಡಿ ಹೇಗೆ ಹೇಗೋ ದುಡ್ಡು ದುಡಿಯುತ್ತಿದ್ದ. ಘಟ್ಟದ ಕೆಳಗೆ ಹೋಗಿ, ಹೊನ್ನಾವರ-ಕುಮ್ಮಟ ಇಲ್ಲೆಲ್ಲ ಸಾರಿಗೆ ಮಾಡಿಯೂ ಜೀವನ ಸಾಗಿಸಿದ್ದ. ಬಯಲುಸೀಮೆಗೂ, ಭತ್ತ, ಅಕ್ಕಿ ವ್ಯಾಪಾರಕ್ಕಾಗಿ ಗಾಡಿ ಹೊಡೆದುಕೊಂಡು ಹೋಗುತ್ತಿದ್ದುದುಂಟು. ವಾರಕ್ಕೊಂದು ದಿನವೊ ಅಥವ ಎರಡು ದಿನವೂ ಊರಲ್ಲಿದ್ದರೆ ಅದೇ ಹೆಚ್ಚು. ದುಡಿಮೆಯ ಗೀಳು ಹತ್ತಿದರೆ ಹಾಗೆಯೆ. ಮನೆ ಎಲ್ಲಿಯೊ, ಮಲಗುವುದೆಲ್ಲಿಯೊ, ಊಟ ಇನ್ನೆಲ್ಲಿಯೋ, ಹೀಗೆ.
ಈ ಅಣ್ಣ ತಮ್ಮಂದಿರೆಲ್ಲ ದುಡಿಮೆ ಮಾಡಿದವರೆ. ಅಲ್ಲಲ್ಲಿ ಆಸ್ತಿ ಮಾಡಿ ಕೊಂಡಿದ್ದರು. ಒಂದು ದಿನ, ಏಕೆ ಬಹಳ ದಿನ ಆಸ್ತಿಗಾಗಿ ಕಿತ್ತಾಟಗಳಾದವು. ಕೊನೆಗೆ ವಿಧಿಯಿಲ್ಲದೆ, ಪಂಚಾಯಿತಿ ನಡೆಯಲೇಬೇಕಾಯಿತು. ಸರಿ, ಒಂದು ದಿನ ಪಾಲಾದರು. ಬೇರೆ ಬೇರೆ ಸಂಸಾರಗಳಾದವು.
ಭದ್ರಸೆಟ್ಟಿ ಕಳ್ಳಗಂಟು ಕೂಡಿಹಾಕಿದ್ದನಂತೆ. ಪಾಲಾದ ಕೂಡಲೆ ಒಂದು ಮನೆ ಬಯಲು ಕೊಂಡ; ಅಲ್ಲಿ ಮನೆ-ಮಂಗಳೂರು ಹೆಂಚಿನ ಮನೆ ಎದ್ದಿತು. ಚಿಕ್ಕ ಪ್ರಾಯದ ಹುಡುಗಿಯನ್ನು ಮದುವೆ ಮಾಡಿಕೊಂಡು ಮನೆ ತುಂಬಿಸಿದ. ಮನೆಯಲ್ಲಿ ಸಂಸಾರ ನಡೆಯಿತು.
ಜೀವನ ಮೊದಲಿನಂತೆಯೆ, ಸಂತೆ-ಅಲೆಯುವುದು ; ವ್ಯಾಪಾರ ದೂರದ ಊರುಗಳಲ್ಲಿ, ವಾರಕ್ಕೆ ಒಂದೆರಡು ದಿನವೊ, ಅಥವ ತಿಂಗಳಿಗೆ ಮೂರು ನಾಲ್ಕು ದಿನವೊ ಮನೆಯಲ್ಲಿದ್ದರೆ ಅದೇ ಹೆಚ್ಚು. ಆದರೆ ಮಳೆಗಾಲದಲ್ಲಿ ಮಾತ್ರ ಊರು ಬಿಟ್ಟು ಹೋಗಲಾಗುವುದಿಲ್ಲ. ಮಳೆ ಜೀರೆಂದು ಹಿಡಿದು ಇಡೀ ಜಗತ್ತನ್ನೆ ನೆನೆಸಿ ಒದ್ದೆ ಮಾಡಿದಂತಿರುವಾಗ ಯಾವ ವ್ಯಾಪಾರ ನಡೆದೀತು!
ಭದ್ರಸೆಟ್ಟಿಗೆ ನೆರೆಯಾತ ನಿಂಗ. ಆತನಿಗೆ ಕಳ್ಳತನದ ಅಪರಾಧಕ್ಕೆ ಶಿಕ್ಷೆಯಾಗಿತ್ತು. ಇಬ್ಬರಿಗೂ ನೆರೆಹೊರೆಯಾದರೂ ಮಾತು ಎಷ್ಟೊ ಅಷ್ಟು. ಆಗಾಗ ಈ ಮನೆಗಳ ಸುತ್ತ ಹಿತ್ತಲಲ್ಲಿ ಹಾಕಿದ್ದ ಇಟ್ಟಿಗೆಯೊ, ಸೌದೆಯೋ, ಇಲ್ಲವೆ ಮನೆ ಹೆಂಚುಗಳೊ, ಅಥವ ಗಳುಗಳೊ ರಾತ್ರಿ ಕಳೆದು ಬೆಳಗಾಗುವುದರೊಳಗೆ ಹೇಗೋ ಬಯಲು, ಸಾಮಾನು ಕಳೆದುಕೊಂಡವರು ಬೈದಾಡಿದರೆ ಭದ್ರ ಶೆಟ್ಟಿ ಹೋಗಿ-“ನೋಡ್ರಿ, ಕಳ್ಳ- ಮಕ್ಕಳು ನಮ್ಮ ಮನಿ ಹುಲ್ಲಿನ ಪಿಂಡೀ ಎಲ್ಲಾ ಕದ್ದಾರೆ,” ಎನ್ನುತ್ತಾನೆ. ತನ್ನ ಮನೆ ಸೌತೆಕಾಯಿ ಬಳ್ಳಿಯ ಮಿಡಿ ಗಾಯಿ, ಮನೆಯ ಮೇಲೆ ಬಿಟ್ಟಿದ್ದ ಕುಂಬಳಕಾಯಿ ಪತ್ತೆಯಿಲ್ಲದುದನ್ನು ತೋರಿಸುತ್ತಾನೆ. ವ್ಯಾಪಾರದಲ್ಲಿ ಬಹಳ ಚೌಕಾಸಿ, ಒಂದು ಬಿಲ್ಲಿ (ಮೂರು ಕಾಸು,) ಒಬ್ಬರಿಗೂ ಸೋಲ. ದುಡ್ಡು-ದುಡ್ಡು-ಅದು ಹೇಗೋ ಬರಲೇ ಬೇಕು.
ಆದರೂ ಊರಲ್ಲಿ ತಾನಿದ್ದಾಗ ಸೋಮವಾರ ಬಂದಿತೆಂದರೆ ಮನೆಗೆ ಒಬ್ಬ ಜಂಗಮರು ಮಾಮೂಲಾಗಿ ಬರಲೇಬೇಕು. ಈತ ಅವರನ್ನು ಪೂಜೆ ಮಾಡಿ ತೀರ್ಥ ಪ್ರಸಾದ ತೆಗೆದುಕೊಂಡು, ಅವರಿಗೆ ಭೋಜನ ಮಾಡಿಸಿ, ದಕ್ಷಣೆ ಆರು ಕಾಸು ಇತ್ತು ಕಳಿಸಬೇಕು. ಏನೇ ಬರಲಿ ಈ ವ್ರತಕ್ಕೆ ತಪ್ಪ. ಬೆಳಗಿನಲ್ಲಿ ಎದ್ದು ಹೊರಕ್ಕೆ ಬಂದಾಗ ಯಾರಾದರೂ ಜಂಗಮರು ಕಣ್ಣಿಗೆ ಬಿದ್ದರೆ-ಅದು ಬೇಡ-ಒಬ್ಬ ಚಿಕ್ಕ ಜಂಗಮ ಬಾಲಕ ಕಣ್ಣಿಗೆ ಕಾಣಿಸಿದರೆ ಆತನ ಪಾದಗಳಿಗೆರಗಿ ಕಣ್ಣಿಗೊತ್ತಿಕೊಂಡು ಹೋಗಬೇಕು ಈತ. ಆ ದಿನವೆಲ್ಲ ಈತ ಶುಭವೆಂದು ಭಾವಿಸುತ್ತಾನೆ.
ಒಂದು ದಿನ ಇವನ ಹೆಂಡತಿ ಸತ್ತಳು. ಇವನಿಗಾಗ ನಲವತ್ತೈದು ವರ್ಷ ಇವನಿಗೆ ಹೆಣ್ಣು ಇನ್ನಾರು ಕೊಡುತ್ತಾರೆ? ಮಕ್ಕಳಿಲ್ಲ, ನಿಜ. ಅಷ್ಟಕ್ಕೆ ಕೊಟ್ಟಾರೆ?
ತಾನೊಬ್ಬನೆ ಆದರೂ ದುಡಿಯುತ್ತಾನೆ. ಸಾರಿಗೆ ಬಿಟ್ಟಿಲ್ಲ. ಮನೆಯಲ್ಲಿ ತಾಯಿ ಬೇಯಿಸಿ ಹಾಕುವಳು. ಹಬ್ಬದ ದಿನ, ವಿಶೇಷ ದಿನಗಳಲ್ಲಿ ಜಂಗಮ (ಅವನು ಇವನ ಮನೆಗೆ ಖಾಯಂ ಆಸಾಮಿ) ಬಂದೇ ಬರುತ್ತಾನೆ. ಎಂದಿನಂತೆಯೇ ಅವನಿಗೆ ಎರಡು ಬಿಲ್ಲಿ ದಕ್ಷಿಣೆಯೇ ದೊರೆಯುವುದು.
ಊರಲ್ಲಿ ಕಳ್ಳತನಗಳು ಸುಮಾರಾಗಿ ಹೆಚ್ಚಿಕೊಂಡವು. ಕಳ್ಳತನವೆಂದ ಕೂಡಲೆ, ಸಾಧಾರಣವಾಗಿ ಕೆಲಸವಿಲ್ಲದೆ ಅಲೆಯುವವರ ಮೇಲೆ ಆರೋಪಿಸುವುದು ಸಹಜ. ದಸ್ತಗಿರಿ ಮಾಡಿರಬಹುದೆ? ದುರ್‍ಗ ಅಂಥವನೆ ಇರಬೇಕು. ಹೀಗೆಲ್ಲ ಆಯಾಜನಗಳಮೇಲೆ ಆರೋಪಿಸುವುದಕ್ಕೆ ಆರಂಭವಾಯಿತು.
ಪ್ಯಾಟಿಮಠದ ವೀರಯ್ಯನವರ ಗಾಡಿ ಹೊಸಗಾಡಿ ಮನೆಯ ಮುಂದೆ ರಾತ್ರಿ ಬಿಟ್ಟು, ಬೆಳಗಿನಲ್ಲಿ ನೋಡಿದಾಗ ಇಲ್ಲ. ಹಿತ್ತಲುಮನಿ ಮೋದೀನ್ ಸಾಬನ ಹೊಸ ಎತ್ತುಗಳು, ಹಾಸನದ ಜಾತ್ರೆಯಲ್ಲಿ ತಂದ ದಿವ್ಯವಾದ ಎತ್ತುಗಳು ಅದೇ ರಾತ್ರೆ ಅದೃಶ್ಯವಾಗಿವೆ. ಅಪ್ರಸಿದ್ದವಾಗಿ ಇನ್ನೆಷ್ಟು ಕಳ್ಳತನಗಳು ನಡೆದವೊ.
ಪತ್ತೆ ಮಾಡಲು ಬಹಳ ಪ್ರಯತ್ನವಾಯಿತು. ಎಲ್ಲೆಲ್ಲೋ ಸುತ್ತಿ ಅರಸಿದರೂ ಸುಳಿವು ಗೊತ್ತಾಗಲಿಲ್ಲ. ಪೋಲೀಸಿನವರು ಪೇಚಿಗೆ ಬಿದ್ದರು. ಗುಮಾನಿ ಆಸಾಮಿಗಳನ್ನೆಲ್ಲ ಹಿಡಿದು ಹಿಂಸಿಸಿ ಕೇಳಿದರು. ಹಿಂದೆ ಎತ್ತು ಕದ್ದು ಪತ್ತೆಯಾಗಿ ಶಿಕ್ಷೆ ಅನುಭವಿಸಿದ್ದ ನಿಂಗನನ್ನೂ ಚಾವಡಿಗೆ ಕರೆಸಿ ಗಡರು ಹಾಕಿದರು. ಅವನಿಂದ ಏನೂ ಹೊರಡಲಿಲ್ಲ. ಹಿಂದಿನ ಅಪರಾಧದ ಬಗ್ಗೆ ಹೇಳುವಾಗ ತಾನು ನಿರಪರಾಧಿ ಎಂದೂ, ಏನೊ ದೈವ ಮೋಸಮಾಡಿದ್ದರಲ್ಲಿ ತಾನು ಉಳಿದುಕೊಳ್ಳಲಾರದೆ ಹೋದೆನೆಂದೂ ಹೇಳಿದ. ಅದರಲ್ಲಿ ಏನೋ ಸುಳಿವು ಪೋಲೀಸಿನವರಿಗೆ ಗೊತ್ತಾಯಿತೊ, ಇಲ್ಲವೋ, ತಿಳಿಯದು.
ಇಷ್ಟೆಲ್ಲ ಆಗಿ ಒಂದೆರಡು ತಿಂಗಳು ಕಳೆದ ಮೇಲೆ ಒಂದು ದಿನ ಮೋದೀನ್ ಸಾಬು ಬೆಳಿಗ್ಗೆ ಎದ್ದು ಕೊಟ್ಟಿಗೆಯಲ್ಲಿ ನೋಡಿದರೆ ಇವನ ಎತ್ತು ಇವೆ! ಇವನಿಗೆ ಪರಮಾಶ್ಚರ್‍ಯ. ಹೌದೊ? ಅಲ್ಲವೋ? ಹತ್ತಿರ ಹೋಗಿ ಮೈದಡವಿ, ಗುರುತು ನೋಡಿ ಸಂತೋಷಪಟ್ಟುಕೊಂಡ. ಅತಿಶಯ ಸಂತೋಷ ಹೊಂದಿದ.
ನಿಂಗನಿಂದ ಈ ಸಮಯದಲ್ಲಿ ಒಂದು ಅಚಾತುರ್‍ಯದ ಕೆಲಸ ನಡೆಯಿತು. ಬಂದ ಕುತ್ತು ಅನಾಯಾಸವಾಗಿ ಪರಿಹಾರವಾದ ಸಂತೋಷದಲ್ಲಿ ಹಿಂದು ಮುಂದು ಯೋಚಿಸದೆ, ಆತ ಮೋದೀನ್ ಸಾಬಿಯ ಕೊಟ್ಟಿಗೆಗೆ ಹೋಗಿ ಎತ್ತುಗಳನ್ನು ನೋಡಿಕೊಂಡು, ಮೋದೀನನ್ನು ಮಾತನಾಡಿಸಿಕೊಂಡು ಬಂದಿದ್ದ.
ಮಾರನೆ ದಿನ ಸಮರಾತ್ರಿ ಮೋದೀನನ ಕೊಟ್ಟಿಗೆಯಲ್ಲಿ ಏನೋ ಶಬ್ಬ. ಆತ ಎದ್ದು ನೋಡಿದಾಗ ಕೊಟ್ಟಿಗೆಯಲ್ಲಿ ದಡ! ದಡ! ಶಬ್ದವಾಗುತ್ತಿತ್ತು. ದೀಪ ಹಚ್ಚಿಕೊಂಡು ಬರುವುದರಲ್ಲಿ ಯಾರೊ ಒಬ್ಬ ಕೊಟ್ಟಿಗೆಯಿಂದ ಹಾರಿ ದೌಡಾಯಿಸಿದ್ದ. ಕಳ್ಳ! ಕಳ್ಳ! ಹಿಡೀರಿ! ಪಕಡೊ! ಪಕಡೊ! ಅನ್ನುವುದರೊಳಗಾಗಿ ಆತ, ಅಲ್ಲಿ ಹಾರಿ, ಇಲ್ಲಿ ಹಾರಿ ಹೇಗೊ ಮರೆಯಾಗಿಯೇ ಬಿಟ್ಟ. ಮೋದೀನನ ಕೂಗಿಗೆ ಜನ ಬಂದು, ಏನಾಯಿತು ? ಕ್ಯಾ ಹೋಗಯಾ ? ಕಿದಿರ್ ಹೈ? ಹೀಗೆಲ್ಲ ಕೇಳುತ್ತ ಬಂದು ಮುತ್ತಿಕೊಂಡರು.
ಬೀದಿಯಲ್ಲಿ ಜನ ನಿಂತು ಗಿಜಿಬಿಜಿ ಮಾಡುವಾಗ, ಕೊಟ್ಟಿಗೆಯಲ್ಲಿ ದಡ! ಬಡ! ಶಬ್ಬವಾಗಿ ದನಗಳ ಗಂಟಲೊಳಗೆ ಗರ್ರ್! ಎನ್ನಿಸುವ ಶಬ್ಬ ಕೇಳಿಸಿತು. ಬಂದು ನೋಡಿದರೆ ಎರಡು ಎತ್ತುಗಳೂ ಬಿದ್ದು ಸತ್ತು ಹೋಗಿವೆ. ಜನಗಳ ಕಳವಳಕ್ಕೆ ಪಾರವಿಲ್ಲದಾಯಿತು. ಮೋದೀನ್ ತಲೆಯ ಮೇಲೆ ಕೈ ಹೊತ್ತು ಕುಳಿತ. ಬೆಳಗಾಯಿತು. ಎಲ್ಲ ತಿಳಿಯಾಗಿ ನಾಲ್ಕು ಜನರ ಯೋಚನೆಗೆ ಈ ವಿಚಾರ ಗೊತ್ತಾಗಿ, ವಿಷಹಾಕಿದುದರಿಂದ ಎತ್ತು ಸತ್ತವೆಂದೂ, ರಾತ್ರಿ ಬಂದಿದ್ದವನೆ ವಿಷಹಾಕಿ ಹೋದನೆಂದೂ ನಿಶ್ಚಯವಾಯಿತು. ಅವನೆಂತಹ ಚಾಂಡಾಲನಿರಬೇಕು. ಎತ್ತುಗಳಿಗೆ ವಿಶಹಕಿ ಕೊಂದವನು! ಎಂದು ಜನರಾಡಿಕೊಂಡರು.
ಎತ್ತು ಹಿಂದೆ ಕಳುವಾಗಿದ್ದವು. ವಾಪಸ್ ಬಂದುದಕ್ಕೆ ಕಾರಣ, ಕದ್ದವನು ಹೇಗೊ ಪತ್ತೆಯಾದೀತೆಂದು ಭಯಪಟ್ಟು ತಂದುಬಿಟ್ಟನೆಂದೂ, ಅವು ಬದುಕಿದ್ದರೆ ಕಳ್ಳತನ ಬಯಲಾದೀತೆಂದೂ, ಆದ್ದರಿಂದ ಅವು ಸತ್ತು ಹೋದರೆ ಅವುಗಳನ್ನು ಕದ್ದು ತಂದಾಗ ನೋಡಿದ್ದವರು ಅವೇ ಇಲ್ಲದಿದ್ದಾಗ ಗುರುತಿಸಲಾರರೆಂದೂ, ಅವುಗಳ ಚರ್‍ಯೆ ಬಗ್ಗೆ ಖಚಿತ ವಿವರ ಕೊಡಲಾರರೆಂದೂ ನಂಬಿ, ಕಳ್ಳ ಆ ರೀತಿ ವಿಷ ಇಟ್ಟು ಎತ್ತುಗಳನ್ನು ಸಾಯಿಸಿರಬೇಕು ಎಂಬುದು ಸಿದ್ದಾಂತವಾಯಿತು.
ಇಂತಹ ಕೃತ್ಯ ಯಾರು ಮಾಡಿರಬೇಕು? ಎತ್ತು ನೋಡಲು ಬಂದಿದ್ದವರಲ್ಲಿ ನಿಂಗನೂ ಒಬ್ಬ. ಅವನೆಂದೂ ಮೋದೀನನ ಮನೆಗೆ ಬಾರದವನು ಆಗ ಎರಡು ದಿನಗಳ ಹಿಂದೆ ಎತ್ತು ನೋಡುವ ನೆಪದಲ್ಲಿ ಬಂದಿದ್ದ. ಸರಿ, ಒಂದಕ್ಕೊಂದು ಹೊಂದಿಕೆಯಾಯಿತು. ನಿಂಗನನ್ನು ಹಿಡಿದು ಸ್ಟೇಷನ್ನಿಗೆ ಕೂಡಿದರು. ಕೇಸು ಹೂಡಿದರು. ಅವನನ್ನು ಬಿಡಿಸಲು ಯಾರೂ ಜಾಮೀನಾಗಲಿಲ್ಲ. ಬಸವಣ್ಣಗಳನ್ನು ಕೊಂದ ಪಾಪಿ! ಚಾಂಡಾಲ!- ಎಂದು ಜನ ಬೈದರು.
ನಿಂಗ ಪೋಲೀಸು ಠಾಣೆಯಲ್ಲಿ ಬಂದಿಯಾಗಿದ್ದರೂ, ಹೇಗೊ ಏನೊ ಮಾಡಿ ಗಾಡಿ ಕಳೆದುಕೊಂಡ ಮಠದ ವೀರಯ್ಯನಿಗೆ ಹೇಳಿಕಳಿಸಿದ. ವೀರಯ್ಯ ಬಹಳ ಒತ್ತಾಯದ ಮೇಲೆ ಬಂದರೂ ಅವನಿಗೆ ಈತನ ಮೇಲೆ ಬಹಳ ಕೋಪವಿತ್ತು. ಹೀನಮಾತುಗಳಿಂದ ಬಯ್ಯುವವನಿಗೆ ನಿಂಗನದು ಒಂದೇ ಮಾತು. “ಸ್ವಾಮಿ, ನಿಮ್ಮ ಪಾದದಾಣೆಗೂ ನಾನು ಕದ್ದವನಲ್ಲ. ನಾನು ಎತ್ತು ಕೊಂದವನೂ ಅಲ್ಲ. ಬೆಂಕಿಯಲ್ಲಿ ನಿಂತು ಪ್ರಮಾಣ ಮಾಡೆಂದರೂ ಮಾಡುತ್ತೇನೆ.” ವೀರಯ್ಯನ ಮನಸ್ಸಿಗೂ ಏನೊ ಬೋಧೆಯಾಯಿತು-ಇವನು ನಿರಪರಾಧಿಯಿರಬೇಕು. ನಿಂಗ ತನಗೆ ಬಂದ ಗುಮಾನಿ ಹೇಳಿ, ಅದರ ಸುಳಿವನ್ನು ತಿಳಿಸಿದ್ದಕ್ಕೆ ವೀರಯ್ಯ- ಇರಲಿ, ದೇವರಿದ್ದಾನೆ,” ಎನ್ನುತ್ತ ಹೋದ.
ವೀರಯ್ಯ ಸಮಾಚಾರ ಸಂಗ್ರಹಿಸಲು ಅಲ್ಲಲ್ಲಿ ಸುತ್ತಿ ತನ್ನ ಗಾಡಿ ಕಳವು ಪತ್ತೆಹಚ್ಚಿದೆ, ಎಂದುಕೊಂಡು ಪೋಲೀಸಿಗೆ ತಿಳಿಸಿದರೂ ಪೋಲೀಸರು “ನಿಮಗೆಲ್ಲಿಯೊ ಹುಚ್ಚು! ಆ ಮನುಷ್ಯ ಅಂಥವನಲ್ಲ. ಈ ಕೆಲಸ ಈ ಬದ್ಮಾಷ್ ನಿಂಗನದೇ!” ಎಂದು ದಬಾವಣೆ ಮಾಡಿದರು.
ವೀರಯ್ಯನಿಗೆ ಹಟ ಹುಟ್ಟಿ, ಹೋದುದು ಹೋಗಲಿ, ಒಬ್ಬ ನಿರಪರಾಧಿಯನ್ನು ಉಳಿಸಬೇಕು ಎಂಬ ಛಲ ಬಂದಿತು. ಹೇಗೊ ಸಮಾಚಾರಗಳನ್ನು ಹರಿಬಿಟ್ಟ. ಅವು ಎಲ್ಲಿಯೋ ಬಿದ್ದು, ಎಲ್ಲಿಯೂ ಹರಡಿ, ಹೇಗೊ ಬಯಲಿಗೆ ಬಂದವು.
ಜನ ನಂಬದಾದರು. ಅವನು ಈ ಹೀನ ಕೆಲಸ ಮಾಡಿಯಾನೆ ? ಅವನ ಜಾತಿ ಅಂಥಾದ್ದೆ? ಅವನ ಕಸಬು ಅಂಥಾದ್ದೆ? ಅವನಿಗೇನು ಕಡಿಮೆ? ಎತ್ತು ಗಾಡಿ ಕದ್ದು ಅವನು ಯಾರಿಗೆ ಕೂಡಿಡಬೇಕು? ಜಂಗಮನ ಗಾಡಿ ಕದ್ದು ಕೊಂಡಾನೆ? ಎತ್ತುಗಳಿಗೆ ವಿಷಹಾಕಿಯಾನೆ? ಹೇಳುವುದಕ್ಕೂ ತಾರತಮ್ಯ ಬೇಡವೆ? ಅವನ ಬಂಧು ಬಳಗ ಬಹಳವಾಗಿ ಕ್ರೊಧಕೊಂಡು, ‘ಯಾವ ನೀಚ ಈ ಮಾತು ಹೇಳೋವನು? ಗೊತ್ತಾಗಲಿ, ಅವನ ಜೀವ ತೆಗಿತೀವಿ’ ಹೀಗೆಲ್ಲ ಮಾತನಾಡಿಕೊಳ್ಳುತ್ತಿದ್ದರು.
ಒಂದು ದಿನ ಭದ್ರಶೆಟ್ಟಿಯನ್ನು ಹಿಡಿಯಲು ವಾರೆಂಟ್ ಹುಟ್ಟಿತು. ಅಂದಿನಿಂದ ಕಳ್ಳ ಜಾರಿದ. ಎಲ್ಲಿ ಹೋದ? ಒಬ್ಬರೂ ಹೇಳರು. ಆಗ ಜನ ‘ಅವನಿಗೇನು ಬಂದಿತ್ತು ಈ ಕೆಲಸ ಮಾಡಲು!’ ಎಂದು ಹೇಳತೊಡಗಿದರು. ಆರು ತಿಂಗಳಾಯಿತು. ಪತ್ತೆಯಾಗಲಿಲ್ಲ. ನಿಂಗನ ಬಿಡುಗಡೆಯಾಯಿತು.
ಆದರೆ ಈ ಪ್ರಸಂಗದಲ್ಲಿ ಕಳ್ಳನನ್ನು ಪತ್ತೆ ಮಾಡುವ ಭಾರ ಪೋಲೀಸಿನವರದಾಗದೆ ಮಠದ ವೀರಯ್ಯನದೇ ಆಯಿತು. ಆತ ಜೀವದ ಹಂಗು ತೊರೆದು, ಪಿಸ್ತೂಲೊಂದನ್ನು ಬಾರು ಮಾಡಿಟ್ಟು ಕೊಂಡು, ಕಾಡು-ಊರು-ಬಳ್ಳಿಸಂತೆ-ಪೇಟೆ ಎಲ್ಲ ತಿರುಗತೊಡಗಿದೆ. ತನ್ನ ವ್ಯವಹಾರವನ್ನೂ ಒಪ್ಪಿ ಈ ಕಳ್ಳನನ್ನು ಬಯಲಿಗೆಳೆಯಲೇಬೇಕೆಂಬುದೇ ಅವನ ಗೀಳಾಯಿತು.
ಯಾರೋ ಒಬ್ಬನ ಕೈಯಲ್ಲಿ ಪೋಲಿಸ್ ಅಧಿಕಾರಿಗೆ ಹೇಳಿಸಿದ, ಭದ್ರ ಆ ಊರಲ್ಲಿದ್ದಾನೆ, ಎಂಬ ಗುಮಾನಿ ಕೇಳಿದೆ.’ ’ಸೈಕಲ್ ಕೊಡುತ್ತೇನೆ; ಹೋಗಿ ಪತ್ತೆ ಮಾಡಿಕೊಂಡು ಬನ್ನಿ,’ ಎನ್ನಬೇಕೆ ಆತ!
ಮತ್ತೆ ನಾಲ್ಕಾರು ತಿಂಗಳು ಕಳೆದವು. ವೀರಯ್ಯ ರೊಚ್ಚು ಹತ್ತಿ, ಈ ಕಳ್ಳನನ್ನು ಹುಡುಕುತ್ತಲೆ ಇದ್ದ. ಒಂದು ದಿನ ಮಳೆಗಾಲದಲ್ಲಿ ಇವರ ಊರಾಚೆ ನಲವತ್ತು ಮೈಲಿದೂರದ ಊರಿನಲ್ಲಿ ಒಬ್ಬ ಕೊಡೆ ಹಿಡಿದುಕೊಂಡು, ಕ್ಷೌರಮಾಡಿಸದೆ ಗಡ್ಡ ಬಿಟ್ಟು ಕೊಂಡು, ತಲೆಗೆ ಮುಸುಕು ಹಾಕಿಕೊಂಡು ಬರುತ್ತಿದ್ದುದು ವೀರಯ್ಯನಿಗೆ ಕಾಣಿಸಿತು. ವೀರಯ್ಯ ಆತನನ್ನು ದೂರದಿಂದಲೆ ದಿಟ್ಟಿಸಿ ನಡಿಗೆ, ಎತ್ತರ, ಮೈಕಟ್ಟು ಇವನ್ನೆಲ್ಲ ಗಮನಿಸಿ ಒಂದೇ ಬಾರಿಗೆ ಹಾರಿ ಹೋದ. ಜಂಗಮಯ್ಯನಾದರೂ ಮೈ ಕಸವು, ಪೆಡಸು ಬಹಳ ಇತ್ತು. “ಲೇ! ಭದ್ರಾ! ತೆಗಿಯೋ ಮುಸುಕು?”
ಅದೇ ಕಣ್ಣುಗಳು! ಭದ್ರ ಧ್ವನಿ ಕೇಳಿ ತನ್ನ ಹತ್ತಿರ ಓಡಿ ಬರುವವನನ್ನು ಕಂಡು ಕೂಡಲೆ ಓಡಿದ. ವೀರಯ್ಯ ಹಿಂದಿನಿಂದ ಬೆನ್ನಟ್ಟಿದ್ದಾನೆ ಕೂಗಿ ಕೊಂಡು, ಜನ ಒಂದೂ ತಿಳಿಯದೆ ನೋಡುತ್ತಿದ್ದಾರೆ.
“ಕಳ್ಳ! ಹಿಡೀರಿ! ಹಿಡೀರಿ!” ಯಾರನ್ನು ಹಿಡಿಯುವುದು? ಯಾರು ಕಳ್ಳ? ಯಾವುದೋ ಓಣಿಯಲ್ಲಿ ಭದ್ರ ತಿರುಗಿದ್ದರೂ ಇವನು ಅಟ್ಟಿಸಿಕೊಂಡೇ ಬಂದ. ಇಬ್ಬರೂ ಸಂಧಿಸಿದರು. ಭದ್ರ ಎತ್ತಿ ಒಂದು ಕಲ್ಲು ಇವನ ಮೇಲೆ ಎಸೆಯಬೇಕೆನ್ನುವ ಹೊತ್ತಿಗೆ ವೀರಯ್ಯ ಪಿಸ್ತೂಲು ಹಿಡಿದು ‘ಕಲ್ಲು ಕೆಳಗೆ ಹಾಕು, ಹಾಕದಿದ್ದರೆ ಸುಟ್ಟೇನು!’ ಎಂದ. ಕಲ್ಲು ಕೆಳಗೆ ಬಿತ್ತು. ವೀರಯ್ಯ ಅವನ ಗಂಟಲು ಹಿಡಿದು ಅದುಮಿಕೊಂಡಿದ್ದಾಗ ಜನ ಬಂದರು. ವೀರಯ್ಯ ಕಳ್ಳನನ್ನು ಹಿಡಿದನಂತೆ-ಎಂದು ಜನಕ್ಕೆ ತಿಳಿಯಿತು.
ಭದ್ರ ಶೆಟ್ಟಿಯನ್ನು ಹಿಡಿದು ಲಾಕಪ್ಪಿನಲ್ಲಿ ಹಾಕಿ ಅವನ ಮೇಲೆ ಕೇಸು ನಡೆಸಿದರು.
ಕೇಸು ನಡೆಯಿತು. ಮಾರನೆ ದಿನ ತೀರ್ಮಾನವಿತ್ತು. ಬೆಳಿಗ್ಗೆ ಬಂದೀ ಖಾನೆ ಬಾಗಿಲು ತೆಗೆದು ನೋಡಿದಾಗ ಭದ್ರಶೆಟ್ಟಿಯ ದೇಹ, ಉಟ್ಟ ಪಂಚೆ ಹರಿದು ಹೊಸೆದು ಹಗ್ಗ ಮಾಡಿ ಅದರಿಂದ ನೇಣುಹಾಕಿಕೊಂಡ ದೇಹ-ಜಂತೆಗೆ ಜೋತಾಡುತ್ತಿತ್ತು.
ಇವನ ಪರ ಕಟ್ಟಿ ಹಿಂದೆ ವಾದಿಸಿದ್ದ ಇವನ ಬಂಧು ಬಳಗ ಇವನ ದೇಹಕ್ಕೆ ಅಂತ್ಯಕ್ರಿಯೆ ನಡೆಸಲಿಲ್ಲ ಕೂಡ. ಆಸ್ಪತ್ರೆಯವರು ದೇಹ ಕೊಯ್ದು ತಮ್ಮ ಪರೀಕ್ಷೆ ಮುಗಿಸಿದ ಮೇಲೆ ಅದನ್ನೊಂದು ಗುಂಡಿಯಲ್ಲಿ ಮುಚ್ಚಿಸಿದರು. ಆಸ್ಪತ್ರೆಯವರು ಮುಟ್ಟಿದ್ದ ದೇಹವನ್ನು ಮುಟ್ಟಿದರೆ ಮೈಲಿಗೆ ಎಂದರು ಅವನ ಬಂಧುಗಳು.
ಭದ್ರ ಕಳ್ಳತನದ ದುಡಿಮೆ ನಡೆಸಿದ್ದಾಗ?
*****