Home / ಕವನ / ಕವಿತೆ / ಇವನಾರೆ?

ಇವನಾರೆ?

ಪರಿವರ್ಧಿನಿ

೧
ಎ೦ದಾಗುವುದೋ ಧರ್ಮಗ್ಲಾನಿಯು,
ಮುಂದಾಗುವುದೆಂದೋ ದುರ್ನೀತಿಯು,
ಅಂದೇ ತಪ್ಪದೆ ತಾನವತಾರವ-
ನೆಸಗುವನಿವನಾರೇ?

ಸಂದಾ ದುಷ್ಟರ ಭಾರವ ಸಹಿಸದೆ,
ಬಂದಡಿವಿಡಿ ದಿಹ ಭೂವನಿತೆಯ ಬಗೆ-
ದಂದುಗವಟ್ಟಲು ಮಾನಿಸವುಟ್ಟೊಳು
ಪುಟ್ಟಿದನಿವನಾರೇ?

೨
ಶಯ್ಯಾ ಶೇಷನ ದಿಟ್ಟಿಸಿ, ‘ನೀನೀ-
ಗೊಯ್ಯನೆ ರೋಹಿಣಿಯುದರದಿ ಜನಿಸುತ,
ರಯ್ಯಂ ಮಿಗೆ ಬಲರಾಮಾಕಾರದೊ
ಳಗ್ರಜನೆನಗಾಗು’

ಒಯ್ಯಾರದೊಳಿಹ ಮಾಮಾಯೆಯನಾ-
ರಯ್ಯುತ, ‘ನಂದಜೆಯಾಗುತ, ಮುಂ ಸಾ-
ಹಾಯ್ಯವನೆನಗೆಸಗಲು ಜನಿಸೆನ್ನುವ
ಸೂತ್ತಿಕನಿವನಾರೇ?

೩
ಬಂಧನ ಗೃಹದಲಿ, ಕತ್ತಲೆ ಕೋಣೆಯ
ಸಂದಿನೊಳಿರುತಿಹ ಮಾತೆಯ ಬಳಿಯಲಿ,
ಸು೦ದರ ಕಾಯದ ಹೊಳಪಿನ ಕದಿರುಗ-
ಳೆತ್ತಲು ಪಸರಿಸಿರೆ,
ಅ೦ದದೊಳಾಯುಧವಿಡಿದಿಹ ನಾಲ್ದೋ-
ಳೊ೦ದಿದ ಬಂಧುರದಾಕೃತಿಯೊಪ್ಪಿರೆ,
ಮು೦ದಿಹ ಜನನಿ-ಜನಕರೊಳ೦ದದಿ
ಭಾಷಿಪನಿವನಾರೇ?

೪
“ತ೦ದೆಯೆ! ತಾಯಿಯೆ! ನಿಮ್ಮನು ಸುಮ್ಮನೆ
ಬ೦ಧನಮೊ೦ದಿಸಿ, ಮುಂ ಪುಟ್ಟಿದ ಶಿಶು
ವೃಂದಮನೆಲ್ಲವ ಕಲ್ಲೆದೆಯಿಂ ಕ-
ಗ್ಗಲ್ಲಿಗೆ ಸಲ್ಲಿಸುತ,

ಕೊಂದಿಹ ಮೂಢ ನೃಶಂಸನ ಕಂಸನ
ಸಂದೆಯವಿಲ್ಲದೆ, ಶಮನನ ಸದನ-
ಕ್ಕೊಂದಿಪೆ” ನೆನ್ನುತ, ಮು೦ಗಜ್ಜವನೊರೆ-
ದರಿಪಿದನಿವನಾರೇ?

೫
ಶ್ರಾವಣ ಮಾಸದೊಳಷ್ಟಮಿ ಯಾಮಿನಿ
ತೀವಿರೆ ಬುವಿಯನು, ಕಾರ್ಗಾಲದ ಸರಿ-
ಯಾವರಿಸಲ್, ವಸುದೇವನ ಕೈಯ್ದಾ-
ವರೆಯಲ್ಲಿವನಾರೇ?

ಈ ವಿಧ ಕಷ್ಟವನಟ್ಟಲು, ದೇವನ
ಭಾವಕ್ಕನುಗತನಾಗುತ ಬಂದಿಹ,
ಹಾವೆರೆಯನ ಹೆಡೆ ಕೂಡೆ, ಮಣಿ ದೀವಿಗೆ
ಯಾದವನಿವನಾರೇ?

೬
ಯಮುನೆಯು ದಾರಿಯ ಬಿಟ್ಟರೆ, ಮಧ್ಯದಿ
ಗಮಿಸುವ ಜನಕನ ಕೈಯಲ್ಲಿ ಮಲಗಿಹ,
ಸುಮ ಕೋಮಲ ವರ ಕಾಯದೊಳೊಪ್ಪುವ
ನವ ಶಿಶುವಿವನಾರೇ?

ಮಮತೆಯ ನಂದ-ಯಶೋದ ಕ೦ದನು
ಸಮನಿಸೆ ತಾನತಿ ಮುದದಲ್ಲಿ ಬಳೆಯುತ-
ಲಮರಲು ಗೋವಳರವರಾ ಮಡಿಲಿನೊ-
ಳಾಡುವನಿವನಾರೇ?

೭
‘ಜೋ ಜೋ ಹರಿಗೋವಿಂದನೆ! ಕಂದನೆ!
ಜೋ ಜೋ ಕರಿ ಸಿರಿ ಮೈಯನೆ! ಚೆಲುವನೆ!
ಜೋ ಜೋ ಗೋಕುಲ ಗೋಪಾನಂದಕ!
ಕೃಷ್ಣನೆ! ಜೋ’ ಯೆನುತ

ಸಾಜದೆ ಗೋಪಿಕೆಯರು ಸಂತೋಷದಿ
ಮೆಲ್ಜೋಗುಳವನು ಪಾಡಲು ತೊಟ್ಟಿಲೊ-
ಳೋಜೆಯೊಳೊರಗುತ ಕಿವಿಗಳ ನಿಮಿರಿಸಿ,
ಪಟ್ಟಿಹನಿವನಾರೇ?

೮
ಭೀಕರ ಕಾಯದ ರಕ್ಕಸಿಯೊರಗಿರ-
ಲಾಕೆಯ ವಕ್ಷಸ್ಥಲದಲಿ ಹೊರಳುತ
ಲಾ ಕುಚವೆರಡರ ಹೀರುತಲಸುವನು
ಹಿ೦ಡಿದನಿವನಾರೇ?

ಆ ಕಂಸನ ಮತದಿಂದೈತಂದಿಹ
ಆಕುಲ ಶಕಟಾಸುರನನು ಕಾಲಿಂ-
ದೌಕುತಲುರುಳಿಸಿ, ಕೆಡೆ ಬೀಳಿಸಿ, ಮಡು-
ಹಿದ ಮಗುವಿವನಾರೇ?

೯
‘ಈ ಕೃಷ್ಣನ ವಧಿಸುತ, ಹೆಸರಳಿಯಿಸ-
ಬೇಕೆಂ’ ದಾಗಲೆ ಸುಳಿಗಾಳಿಯ ತೆರ-
ದಾಕೃತಿಯಾ೦ತ ತೃಣಾವರ್ತನ ಕ-
ತ್ತೊತ್ತಿದವನಾರೇ?

ಲೋಕವ ಹಿಂಸಿಸಲೈತಹ ದನುಜರ-
ನೇಕರ ತನ್ನಯ ಬಾಲಕ ಲೀಲಾ-
ನೀಕದಿ ನಾಶಿಸಿ, ತಿರೆಹೊರೆಯಿಳುಹಿದ
ಚಿಕ್ಕವನಿವನಾರೇ?

೧೦
ತಾಯಿಯು ಹೆದರಿಸಿ, ‘ಮಣ್ಣನು ಮೆದ್ದಿಹೆ
ಬಾಯನು ಬಿಚ್ಚೆ’ನೆ ತೆರೆಯಲು, ಅದರೊಳ-
ಗಾಯತ ಲೋಕವ ಕಾಣಿಸಿ, ವಿಸ್ಮಯ-
ಗೊಳಿಸಿದನಿವನಾರೇ?

ತಾಯಿಗೆ ಮನೆಯಲಿ ಕೆಲಸವನೆಸಗಲ-
ದೀಯದೆ ಕೆಣಕಲು, ಹಗ್ಗದಿ ಕಟ್ಟುತ
ನೋಯಿಪೆ’ ನೆನ್ನುತ ಬಂಧಿಸೆ, ಕಟ್ಟಿಗೆ
ಸಿಲುಕದನಿವನಾರೇ?

೧೧
ಹರಿದೋಡುವನಂ ಸೈರಿಸದಮ್ಮನು
ಒರಳಲಿ ದಾವಿಂ ಕಟ್ಟುತಲಗಲಲು,
ಸರಿಯುತ, ಮತ್ತಿಯಳ್ಮರದಿರುಕಿನೊ-
ಳಿರುವವನಿವನಾರೇ?

ತರುಗಳವೆರಡುಂ ಮುರಿದುರುಳಲ್‌, ಬಂ-
ದರು ಶಾಪವನುಳಿದುತ್ತರ ಪತಿಯಣು-
ಗರು; ಬಳಿಕವರಿಂ ನತಿ-ನುತಿಯಾ೦ತಿಹ
ಯದುಸುತನವನಾರೇ ?

೧೨
ಎಳವೆಯೊಳು೦ಡರೆ ಹಾಲ್ಮೊಸರಳೆಯಂ,
ಬಳವಿಯು ಕಳೆವೆತ್ತೊಲಿಯುವುದೆಂಬುದ
ತಿಳಿಸಲು ಲೋಕಕೆ, ಹಸಿ ಹಾಲ್ಬೆಣ್ಣೆಯ
ಮೆದ್ದವನಿವನಾರೇ?

ಎಳೆಗೊಲ್ಲತಿಯರ ನಲ್ಮೆಯನಾನುತ,
ಬಳೆಯುತ, ತುರುವಳರೆಳೆಯರ ಕೆಳೆತನ-
ದೊಳು ದನಗಾಯುತ, ಗೋರಕ್ಷೆಯನಿಳೆ-
ಗರಿಪಿದನಿವನಾರೇ?

೧೩
ತುರು-ಕರು ಕಾಯುವ ಕಾಲದಿ ವ್ರಜದಲಿ
ತರುಗಳ ತಣ್ಣೆಳಲನ್ನಾಶ್ರಯಿಸುತ,
ಸುರುಳೆಲೆ ಸುಳಿಯಿಂ ಪೀಪಿಯನೂದುತ್ತ
ವಿಹರಿಪನಿವನಾರೇ?

ಮರಿಗೋಗಿಲೆಗಳ ಕುಹುಕುಹು ರವವನು-
ಕರಣೆಯಗೈಯುತಲಣಕಿಸಿ ನಗುತಲಿ,
ಕರ ತಾಡನ ಪರನಾಗಿಹ ಚೆಲುವಿನ
ಚೆನ್ನಿಗನಿವನಾರೇ?

೧೪
ಕಲಕಲ ನಾದದಿ ಹರಿಯುವ ಯಮುನೆಯ
ಸುಲಲಿತ ವೇದಿಕೆಯಗ್ರದಿ, ಮುದದಲಿ
ನಲಿಯುವ ಮಂಜುಳ- ಮೋಹನ-ಲೀಲಾ
ವಿಗ್ರಹನಿವನಾರೇ?

ಕೊಳಲನ್ನೂದುತ, ಸರಸದಿ ತೀರದೊ-
ಕಲೆಯುವ, ಮುಗ್ಧ-ಮನೋಹರ ಕಾಯದ
ಅಲಕ ವಿಚಿತ್ರಿತ ವದನ ಸರೋರುಹ
ಸು೦ದರನಿವನಾರೇ?

೧೫
ಪುಲಿನದಿ ಲೀಲಾ ಕಮಲವ ಬರೆಯತ,
ಲಲಿತ ಕ್ರೀಡೆಯನಾಡುತಲೊಡುತ,
ಸಲಿಲ ವಿಹಾರ ವಿಮೋಹಿತ ಮಾನಸ-
ನಾಗಲು ನಲಿವಿನಲಿ

ವಲಿತ-ವಿಲೋಲ-ತರ೦ಗಿತ ಯಮುನಾ-
ಜಲದಲಿ ‘ಜಲಕ’ ವ ನಾಡುವ, ನೂತನ
ಜಲಧರ ಶ್ಯಾಮಲ, ಕೋಮಲ ಕಾಯ, ಕಿ-
ಶೋರನು ಇವನಾರೆ?

೧೬
ಕಂದರನೆಲ್ಲರನಂತೆಯೆ ದನಗಳ
ಮಂದೆಯ ತನ್ನಯ ವಿಷದಿಂ ಮೂರ್ಚೆಯ-
ನೊ೦ದಿಸೆ ಕಾಳಿಯನವನಾ ಹೆಡೆಯಲಿ
ಕುಣಿದವನಿವನಾರೇ?

ವೃಂದಾವನದಲ್ಲಿರಲೊಂದು ದಿನಂ
ಮುಂದಿನ ತಾಳವನಕ್ಕೆಯ್ದಲ್ ಮುನಿ-
ಸಿ೦ದ೦ ಬ೦ದಾ ಧೇನುಕ ರಾಸಭ-
ನಸು ಹಿಳಿದಿವನಾರೇ?

೧೭
ತನ್ನಯ ಸುತ್ತಲು ತುರುವಿಂಡೊಲಿದಿರೆ,
ಉನ್ನತ ಶಿಲೆಯಲಿ ಮ೦ಡಿಸಿ ಮುದದಲಿ
ಸನ್ನುತ ಮುರಲಿಯ ಬಾಜಿಸಿ ಮೋಹಿಪ
ಮೋಹನನಿವನಾರೆ?

ಕನ್ನೆಯರೆಲ್ಲರು ರಾಸ ಕ್ರೀಡಾ-
ಸನ್ನೆಯರಾಗುತ, ಸುತ್ತಲು ಕುಣಿಯಲು,
ಚೆನ್ನೆನೆ ವೇಣುವನೂದುತ ಮಧ್ಯದಿ
ನಲಿದವನಿವನಾರೆ?

೧೮
ಆ ಕಡೆ ಈ ಕಡೆ ಸೈನಿಕ ಸಾಗರ
ವೇಕೀಭವಿಸಿರಲದರೊಳನುಗ್ಗುವ
ಶ್ರೀಕರ ಪಾರ್ಥ ಸ್ಯಂದನವಟ್ಟುವ
ಸಾರಥಿಯಿವನಾರೇ?

`ಏಕೆನ ಗಾಜಿಯು ಸಾಕೆಂ’ ದೆನ್ನುತ
ವ್ಯಾಕುಲ ನಾದಾ ವಿಜಯನ ಮನವ-
ನ್ನಾ ಕಾಳಗಕನುವಾಗಿಸಿ, ಗೀತೆಯ-
ನರಿಪಿದನಿವನಾರೇ?
*****
೧೯೩೬

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...