ಅವನು ಗೇಟು ತರೆದು ಒಳ ಬರುವಾಗಲೇ ಅವನ ಮುಖಭಾವವನ್ನು ಗಮನಿಸಿದ್ದೆ. ಅದರಲ್ಲಿ ಭೀತಿಯಿತ್ತು. ಯಾವುದೋ ಅವ್ಯಕ್ತವಾದುದೊಂದು ಅಟ್ಟಿಸಿಕೊಂಡು ಬರುವಂತೆ ಭಯ ತುಂಬಿತ್ತು. ಗೇಟಿನ ಒಳ ಹೊಕ್ಕವನು ಎರಡು ಬಾರಿ ಶೂನ್ಯದತ್ತ ನೋಡಿ ಏನನ್ನೋ ಗೊಣಗಿದ. ಬಲಗೈಯಿಂದ ಗಾಳಿಯನ್ನು ಸೀಳಿ ಏನನ್ನೋ ಅಟ್ಟಿದ. ಗಾಬರಿ ಯಿಂದ ಬಂದವನು ಕಾಲಿಂಗ್‌ಬೆಲ್ಲನ್ನು ಒತ್ತದೆ ದಬ ದಬ ಬಾಗಿಲು ಬಡಿದ.
ನಾನು ಬಾಗಿಲು ತೆರೆದೆ. ಅವನು ಗೂಳಿಯಂತೆ ಒಳನುಗ್ಗಿದ. ಒಂದು ನಗುವಿಲ್ಲ, ನಮಸ್ಕಾರವಿಲ್ಲ. ಹಾಲಲ್ಲಿ ಸಾಲಾಗಿರಿಸಿದ್ದ ಕುರ್ಚಿಯೊಂದರಲ್ಲಿ ಕೂತ. ನೀರು ಬೇಕೆಂದು ಸನ್ನೆ ಮಾಡಿದ. ನಾನು ತಂದ ಜಗ್ಗನ್ನು ಕಸಿದುಕೊಂಡು ಗಟಗಟನೆ ಅರ್ಧ ಖಾಲಿ ಮಾಡಿದ. ಜಗ್ಗನ್ನು ಕಾಲ ಬುಡದಲ್ಲೇ ಇರಿಸಿಕೊಂಡ.
ಅವನ ತಲೆಗೂದಲು ಎಣ್ಣೆಕಾಣದೆ ಅದೆಷ್ಟು ದಿನಗಳಾಗಿದ್ದವೋ? ಕಣ್ಣ ಗುಡ್ಡೆಗಳು ಭೀತಿಯಿಂದ ಹೊರಬೀಳುವಂತಿದ್ದವು. ಅವನಂತೆ ಬರುವವರು ತಾವಾಗಿಯೇ ವಿಷಯ ಪ್ರಸ್ತಾಪ ಮಾಡುವವರೆಗೆ ಕಾಯುವುದು ನನ್ನ ವಾಡಿಕೆ. ಅವನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಕ್ಷಣ ಹೊತ್ತು ಪರಪರನೆ ತಲೆಯನ್ನು ಕೆರೆದುಕೊಂಡ. ಒಂದಷ್ಟು ಹೊಟ್ಟು ಗಾಳಿಯಲ್ಲಿ ಹಾರಿತು. ಅವನಿಗದು ಅಸಹ್ಯವೆನಿಸಲಿಲ್ಲ. ನನಗೆ ಅಸಹ್ಯವಾದೀತೆಂದು ವಿಷಾದಿಸಲಿಲ್ಲ. ನಾನು ಅವನನ್ನೇ ನೋಡುತ್ತಿದ್ದೆ. ಕೊನೆಗವನು ಬಾಯಿ ಬಿಟ್ಟ.
“ನಿದ್ದೆ ಬರುತ್ತಿಲ್ಲ ನನಗೆ. ಕಣ್ಣು ಮುಚ್ಚಿದರೆ ಏನೇನೋ ಕಾಣಿಸಿಕೊಳ್ಳುತ್ತವೆ. ನಿದ್ದೆಯಲ್ಲಿ ಅವನು ಕಾಣಿಸಿಕೊಳ್ಳುತ್ತಾನೆ. ಅವನ ಪುಟ್ಟ ಕೈಗಳು ನನ್ನ ಕುತ್ತಿಗೆಯನ್ನು ಅಮುಕಿದಂತಾಗುತ್ತದೆ. ನಾನು ಉಸಿರಿಗಾಗಿ ಚಡಪಡಿಸುತ್ತೇನೆ. ದಢಕ್ಕನೆ ಎದ್ದು ಕೂರುತ್ತೇನೆ. ಮತ್ತೆ ನಿದ್ದೆ ಬರುವುದಿಲ್ಲ. ಹಗಲೂ ಅವನ ಕೈಗಳು ಕಾಣಿಸಿಕೊಳ್ಳುತ್ತವೆ. ನನ್ನ ಪಾಲಿಗೆ ಹಗಲೂ, ರಾತ್ರಿಯೂ ಒಂದೇ ಎಂಬಂತಾಗಿದೆ. ನಿದ್ದೆ ಬಾರದಿದ್ದರೆ ಹುಚ್ಚು ಹಿಡಿಯಬಹುದು ಅಂತಾರೆ. ನನಗೆ ಹುಚ್ಚು ಹಿಡಿಯಬಹುದಾ?”
ಹೊರಗಡೆ ಜೋರು ಮಳೆ ಸುರಿಯತೊಡಗಿತು. ನಾನು ಬಾಗಿಲು ಭದ್ರಪಡಿಸಿ ಅವನೆದುರು ನಿಂತುಕೊಂಡು ಪ್ರಶಾಂತವಾಗಿ ನಕ್ಕೆ. ಅವನಂತೆ ನನ್ನಲ್ಲಿಗೆ ಬರುವವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಗು ಅದು. ಭರವಸೆ ತುಂಬುವ ದನಿಯಲ್ಲಿ ಹೇಳಿದೆ.
“ಹೆದರಬೇಡಿ. ನಿಮಗೆ ಹುಚ್ಚು ಹಿಡಿಯುವ ಸಾಧ್ಯತೆಗಳಿಲ್ಲ. ಆದರೆ, ನೀವೀಗ ಹೇಳಿದ್ದು ಪೂರ್ಣವಾದಂತಿಲ್ಲ. ನೀವಂದಿರಲ್ಲಾ, ಅವನು ಕಾಣಿಸಿಕೊಳುತ್ತಾನೆಂದು. ಅವನು ಯಾರೆಂದು ನೀವು ತಿಳಿಸಲಿಲ್ಲ. ಅವನ ಪುಟ್ಟ ಕೈಗಳು ನಿಮ್ಮ ಕುತ್ತಿಗೆಯನ್ನು ಹಿಚುಕುವಂತಾಗುತ್ತದೆ ಎನ್ನುತ್ತೀರಿ. ಅವನು ನಿಮ್ಮ ಕುತ್ತಿಗೆಯನ್ನು ಯಾಕೆ ಹಿಚುಕಬೇಕು? ರಿಲಾಕ್ಸ್, ಯಾವುದನ್ನೂ ಮನಸ್ಸಿನಲ್ಲಿಟ್ಟು ಕೊಳ್ಳಬೇಡಿ. ಅಡಗಿಸಿಡದೆ ಎಲ್ಲವನ್ನೂ ಹೇಳಿದರೆ ಪರಿಹಾರ ಹೇಳುತ್ತೇನೆ. ನಿಮ್ಮ ಭಯವನ್ನು ಬಿಡಿ. ಈ ಪ್ರಪಂಚದಲ್ಲಿ ತಪ್ಪು ಮಾಡದವರು ಯಾರಿದ್ದಾರೆ? ನಾವು ನಂಬುವ ದೇವರುಗಳೂ ತಪ್ಪು ಮಾಡಿದವರೇ. ಇನ್ನು ನಮ್ಮದು ಯಾವ ಲೆಕ್ಕ? ರಿಲಾಕ್ಸ್. ಹೇಳಿ, ನಡೆದದ್ದನ್ನೆಲ್ಲಾ ನಿಧಾನವಾಗಿ ಹೇಳಿ.”
ಅವನ ಮುಖದಲ್ಲಿ ನಿರಾಳತೆ ಕಾಣಿಸಿಕೊಂಡಿತು. ಜಗ್ಗಿನಿಂದ ಇನ್ನಷ್ಟು ನೀರು ಕುಡಿದ. ತಲೆಯನ್ನೊಮ್ಮೆ ಕೊಡವಿಕೊಂಡ. ನನ್ನನ್ನು ಭರವಸೆಯ ನೋಟದಿಂದ ನೋಡುತ್ತಾ ಹೇಳಿದ.
“ನಿಮ್ಮ ಮಾತು ಕೇಳಿ ಎಷ್ಟೋ ಸಮಾಧಾನವಾಯಿತು. ನಿಮ್ಮ ಹಾಗೆ ಆತ್ಮವಿಶ್ವಾಸ ತುಂಬ ಬಲ್ಲವರನ್ನು ನಾನು ಕಂಡಿಲ್ಲ. ಪಾಪ ಮಾಡಿದ್ದೀಯ, ಅನುಭವಿಸುತ್ತೀಯ ಎಂತಲೇ ಎಲ್ಲರೂ ಹೆದರಿಸುತ್ತಾರೆ. ನಿಜಕ್ಕೂ ಪಾಪ ಪುಣ್ಯ ಅನ್ನುವುದು ಇದೆಯಾ? ಅವುಗಳಿಗೆ ತಕ್ಕ ಪ್ರತಿಫಲ ಇರುತ್ತದಾ?”
ಸಂತೈಸುವ ಸ್ವರದಲ್ಲಿ ನಾನೆಂದೆ.
“ಪಾಪ ಪುಣ್ಯ ಅನ್ನುವುದು ಸಾಪೇಕ್ಷವಾದದ್ದು. ಅವು ಮಾನಸಿಕ ವ್ಯವಹಾರಗಳು. ಕುರಿ ಕತ್ತರಿಸಿ ಮಾರುವವ ಅದನ್ನು ಪಾಪವೆಂದುಕೊಳ್ಳುವುದಿಲ್ಲ. ದೇವಸ್ಥಾನದ ಅರ್ಚಕ ಪೂಜೆ ಮಾಡುವುದನ್ನು ಪುಣ್ಯವೆಂದು ಭಾವಿಸುವುದಿಲ್ಲ. ಆದುದರಿಂದ ಪಾಪ ಪುಣ್ಯಗಳಿಗೆ ಪ್ರತಿಫಲವೆಂಬುದಿರುವುದಿಲ್ಲ. ಆದರೆ, ಮನಸ್ಸು ದುರ್ಬಲವಾಗಿ ಬಿಟ್ಟರೆ ಅದುವೇ ನರಕ. ದುರ್ಬಲ ಮನಸ್ಸಿನವನನ್ನು ಕಾಪಾಡಲು ಯಾವ ದೇವರಿಂದಲೂ ಸಾಧ್ಯವಾಗುವುದಿಲ್ಲ.”
ಅವನು ನಿಡಿದಾದ ಉಸಿರು ಬಿಟ್ಟ.
“ಬದುಕಿದೆ. ಹಾಗಾದರೆ ಇಷ್ಟು ದಿನಗಳ ನನ್ನ ಸ್ಥಿತಿಗೆ ಮನಸ್ಸೇ ಕಾರಣವೆಂದ ಹಾಗಾಯಿತು. ಮತ್ತೆ ನಾನು ಮೊದಲ ಹಾಗಾಗಬೇಕು. ಅದಕ್ಕೆ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕು. ಸರಿ. ಹೇಳಿ, ನಿಮ್ಮ ಸಲಹೆಗೆ ನಾನೆಷ್ಟು ಫೀಜು ನೀಡಬೇಕು?”
ಅವನು ಎದ್ದು ನಿಂತ ಜೇಬಿನಿಂದ ಪರ್ಸು ತೆಗೆದು ನನ್ನ ಮುಖವನ್ನು ನೋಡ ತೊಡಗಿದ. ಅವನಿನ್ನು ಹೊರಟು ಬಿಡುವುದು ಖಾತ್ರಿಯೆನ್ನಿಸಿ ತಡೆದೆ.
“ನಿಲ್ಲಿ. ನಿಮ್ಮ ಆತುರವೇ ಎಲ್ಲಾ ಅನಾಹುತಗಳಿಗೆ ಕಾರಣವೆಂದೆನ್ನಿಸುತ್ತದೆ. ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾದರೆ ಒಳಗಿರುವುದೆಲ್ಲಾ ಹೊರಗೆ ಬರಬೇಕು. ಮನದ ಕಲ್ಮಶ, ಗೆದ್ದಲು ಹಿಡಿದ ಮರದಂತೆ. ಹೇಳಿ, ನಿಮ್ಮನ್ನು ವ್ಯಾಕುಲಕ್ಕೀಡು ಮಾಡಿರುವ ಸಂಗತಿ ಯಾವುದು?”
ಅವನು ಬಲಹೀನಂತೆ ಕುಳಿತುಕೊಂಡ. ಏನು ಹೇಳಲಿ? ನಾನು ಮರೆಯಬೇಕೆಂದಿರುವುದನ್ನು ನೀವು ನೆನಪಿಸುತ್ತಿದ್ದೀರಿ. ಹೀಗಾದರೆ ನನ್ನ ಮನಸ್ಸು ಗಟ್ಟಿಯಾಗುವುದು ಹೇಗೆ?”
ನಾನು ಮತ್ತೊಮ್ಮೆ ನಕ್ಕೆ.
“ಇಷ್ಟು ದಿವಸ ನಿಮ್ಮನ್ನು ಕಾಡಿದ್ದನ್ನು ಒಂದೇಟಿಗೆ ಮರೆಯಲು ಸಾಧ್ಯವಾಗುವುದಿಲ್ಲ. ಮನಸ್ಸು ಬಿಚ್ಚಿ ಮಾತಾಡಿ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಿ. ನಿಮ್ಮನ್ನು ನಾನು ಬರಹೇಳಿದ್ದಲ್ಲ. ನೀವಾಗಿಯೇ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಲು ಬಂದಿದ್ದೀರಿ. ನನ್ನ ಮಾತು ನಿಮಗೆ ಅಪಥ್ಯವಾದರೆ ನೀವು ಹೋಗಬಹುದು. ನಾನು ಫೀಜಿಗಾಗಿ ಸಲಹೆ ಕೊಡುವುದಿಲ್ಲ. ನಿಮ್ಮ ಆತಂಕ ದೂರವಾಗಿ ನೀವು ಮೊದಲಿನಂತಾದ ಮೇಲೆ ಏನನ್ನಾದರೂ ಕೊಡಬೇಕೆನ್ನಿಸಿದರೆ ಕೊಡಬಹುದು. ಮನಬಿಚ್ಚಿ ಮಾತಾಡುವುದಿಲ್ಲವೆಂದಾದರೆ ನನ್ನ ಸಮಯ ವ್ಯರ್ಥ ಮಾಡಬೇಡಿ.”
ಅವನೀಗ ಯೋಚಿಸತೊಡಗಿದ. ಎಲ್ಲಿಂದ ಆರಂಭಿಸಬೇಕೆನ್ನುವುದು ಅವನ ಸಮಸ್ಯೆಯೆಂದು ನನಗನ್ನಿಸಿತು. ಆಯ್ಕೆಯನ್ನು ಅವನಿಗೇ ಬಿಟ್ಟೆ. ಸ್ವಲ್ಪ ಹೊತ್ತಿನ ಬಳಿಕ ಅವನು ಹೇಳಿದ.
“ಇಲ್ಲ. ನನ್ನ ತಪ್ಪೇನಿಲ್ಲ. ನಾನು ತಪ್ಪಿತಸ್ಥನಲ್ಲವೆಂದು ಪೋಲೀಸರೂ ಒಪ್ಪಿಕೊಂಡಿದ್ದಾರೆ. ಇಲ್ಲ, ನಾನು ತಪ್ಪು ಮಾಡಿಲ್ಲ.”
ಆ ಮಾತುಗಳನ್ನು ಅವನು ಎರಡು ಬಾರಿ ಆಡಿದ. ಮತ್ತೆ ತಪ್ಪಿತಸ್ಥನಂತೆ ನನ್ನನ್ನು ದಿಟ್ಟಿಸಿದ. ನಾನು ಅವನನ್ನು ದುರುಗಟ್ಟಿಕೊಂಡು ನೋಡುತ್ತಾ ಗಂಭೀರ ಸ್ವರದಲ್ಲಿ ಹೇಳಿದೆ.
“ನೀವು ತಪ್ಪಿತಸ್ಥನೆಂದು ನಾನು ಹೇಳಿಲ್ಲ. ಆದರೆ, ನಿಮ್ಮ ಮನಸ್ಸು ಹೇಳುತ್ತಾ ಇದೆ. ಇಲ್ಲದಿದ್ದರೆ ಯಾರದೋ ಎಳೆಯ ಕೈಗಳು ನಿಮ್ಮ ಕುತ್ತಿಗೆಯನ್ನು ಹಿಚುಕಿದಂತಾಗ ಬೇಕೇಕೆ? ನಿಮ್ಮಲ್ಲಿ ಮಾತಾಡುವುದರಲ್ಲಿ ಅರ್ಥವಿಲ್ಲ. ನೀವಿನ್ನು ಹೋಗಬಹುದು.”
ಅವನು ಎಡಗೈ ಹೆಬ್ಬೆರಳು ಮತ್ತು ಮಧ್ಯದ ಬೆರಳಿಂದ ಹಣೆಯೊತ್ತಿಕೊಂಡ. ಅವನ ಮುಖದಲ್ಲಿ ಉದ್ವಿಗ್ನತೆ ಕಾಣಿಸಿಕೊಂಡಿತು.
“ಹೌದು. ಅವು ಅವನದೇ ಕೈಗಳು. ಐದು ವರ್ಷದ ನನ್ನ ಮಗನ ಕೈಗಳವು. ಅವನು ವಿಲಿವಿಲಿ ಒದ್ದಾಡಿ ಸಾಯುವಾಗ ಅವನ ಕೈಗಳು ನನ್ನತ್ತ ಬರುತ್ತಿದ್ದವು. ಆಸರೆಗೋ? ಪ್ರತೀಕಾರಕ್ಕೋ? ಅವೇ ಕೈಗಳು. ಅವೇ ಕೈಗಳು ನನ್ನ ಕುತ್ತಿಗೆಯನ್ನು ಹಿಚುಕಲು ಬರುತ್ತಿರುವುದು.”
ಅವನು ಎರಡೂ ಕೈಗಳನ್ನು ತಲೆಯ ಮೇಲಿರಿಸಿಕೊಂಡ. ಟ್ರಾನ್ಸ್ನಲ್ಲಿದ್ದಂತೆ ಬಡಬಡಿಸಿದ.
“ನಿಜವನ್ನೇ ಹೇಳುತ್ತಿದ್ದೇನೆ. ನನಗವನನ್ನು ಕೊಲ್ಲಬೇಕೆಂದಿರಲಿಲ್ಲ. ಆದರೆ ಕೊಲ್ಲಲೇ ಬೇಕಾಯಿತು. ಇಲ್ಲದಿದ್ದರೆ ಅವನು ಅದಕ್ಕೆ ಸಾಕ್ಷಿಯಾಗಿ ಬಿಡುತ್ತಿದ್ದ. ನಾನು ಪೊಲೀಸರಿಂದ ಪಾರಾಗಲು ಸಾಧ್ಯವಿರಲಿಲ್ಲ. ಇಷ್ಟೊತ್ತಿಗೆ ಗಲ್ಲಿನ ಕುಣಿಕೆ ನನ್ನ ಕತ್ತನ್ನು ಬಿಗಿದು ಬಿಡುತ್ತಿತ್ತು. ನಾನು ಬದುಕಬೇಕಿತ್ತು. ಬದುಕಲೇಬೇಕಿತ್ತು.”
ಅವನ ಹಣೆಯಲ್ಲಿ ಬೆವರ ಹನಿಗಳು ಸಾಲುಗಟ್ಟಿದ್ದವು. ಕೈ ಕಾಲುಗಳು ಕಂಪಿಸುತ್ತಿದ್ದವು. ಅವನು ಇನ್ನೂ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ. ಸ್ವರ ಹೊರಡುತ್ತಿರಲಿಲ್ಲ. ಅವನ ಬಳಿಗೆ ಹೋಗಿ ನಾನು ಹಿಪ್ನಾಟಿಕ್ ಸ್ವರದಲ್ಲಿ ಹೇಳಿದೆ.
“ಕಮಾನ್……… ಹೇಳಿ. ಹೇಳಿ. ಎಲ್ಲಾ ಹೇಳಿಬಿಡಿ. ಆಮೇಲೆ ಮಾತ್ರ ರಿಲಾಕ್ಸ್ ಆಗೋದಿಕ್ಕೆ ಸಾಧ್ಯ. ಹೇಳಿ. ನಿಮ್ಮ ಪುಟ್ಟ ಮಗ ಯಾವುದಕ್ಕೆ ಸಾಕ್ಷಿಯಾಗುತ್ತಿದ್ದ?”
ಅವನು ಈಗಲೂ ಕಣ್ಣುಗಳನ್ನು ಮುಚ್ಚಿಕೊಂಡಿದ್ದ. ಮಾತುಗಳು ಸ್ಪಷ್ಟವಾಗ ತೊಡಗಿದವು.
“ಅವನ ಅಮ್ಮನ ಕೊಲೆಗೆ; ಅವಳನ್ನು ಕೊಲ್ಲಬೇಕೆಂದು ನಾನು ಉದ್ದೇಶಿಸಿರಲಿಲ್ಲ. ಅದು ನಡೆದು ಹೋಯಿತು. ಅವಳಿಗೆ ಇಷ್ಟವಿಲ್ಲದ ಬಿಸಿನೆಸ್ಸು ಆರಂಭಿಸಿದ್ದೆ. ಮಸ್ಸಾಜ್ ಸೆಂಟರ್. ಅಲ್ಲಿ ಮಾಡ್ ಹುಡುಗಿಯರಿಂದ ಮಸಾಜ್ ಮಾಡಿಸಿಕೊಳ್ಳುವುದಕ್ಕೆ ದೊಡ್ಡವರು ಬರುತ್ತಿದ್ದರು. ಹೆಣ್ಣುಗಳು, ಹಾಟ್ ಡ್ರಿಂಕ್ಸ್; ಇವಳನ್ನು ನಾನು ದೂರ ಮಾಡತೊಡಗಿದೆ. ದಿನಾ ಜಗಳಗಳಾಗ ತೊಡಗಿದವು. ಕಳೆದ ವರ್ಷ, ಇದೇ ದಿನ, ಹೀಗೆ ಮಳೆ ಬರುತ್ತಿರುವಾಗ ಜಗಳ ಶುರುವಾಯಿತು. ಅಂದು ಚೆನ್ನಾಗಿ ವಿಸ್ಕಿ ಏರಿಸಿಕೊಂಡು ಬಂದಿದ್ದೆ. ಮಾತಿಗೆ ಮಾತು ಬೆಳೆದು ವಿಪರೀತ ಸಿಟ್ಟು ಬಂದು ಅವಳ ಕುತ್ತಿಗೆ ಬಲವಾಗಿ ಅಮುಕಿದೆ. ಅವಳು ಕೈಕಾಲು ಬಡಿಯುತ್ತಾ ಕುಸಿದು ಬಿದ್ದು ತಣ್ಣಗಾದಳು.”
ಅವನು ಮಾತು ನಿಲ್ಲಿಸಿದ. ಮತ್ತೆ ಏನನ್ನೋ ಅಸ್ಪಷ್ಟವಾಗಿ ಗೊಣಗತೊಡಗಿದ. ನಾನು ಗಂಭೀರ ಸ್ವರದಲ್ಲಿ ಆಜ್ಞಾಪಿಸಿದೆ.
“ಕಮಾನ್, ನಿಲ್ಲಿಸಬೇಡಿ. ಅದು ನಿಮ್ಮ ಹೆಂಡತಿಯ ವಿಷಯವಾಯಿತು. ಹೇಳಿ ನಿಮ್ಮ ಮಗನನ್ನು ನೀವೇಕೆ ಕೊಲ್ಲಬೇಕಿತ್ತು? ಮುಚ್ಚಿಡದೆ ಹೇಳಿ.”
ಅವನು ಕಣ್ಣು ತೆರೆಯದೆ ಹೇಳಿದ.
“ಅವಳು ತಣ್ಣಗಾಗುತ್ತಿರುವಾಗ ಅವನು ಅಮ್ಮಾ ಎಂದು ಅಳುತ್ತಾ ಓಡಿಕೊಂಡು ಬಂದ. ಅದೇ ಆವೇಶದಲ್ಲಿ ಅವನನ್ನೂ ಅಮುಕಿ ಬಿಟ್ಟೆ. ಅವನ ಕೈಗಳು ಗಾಳಿಯನ್ನು ಸೀಳುತ್ತಾ ನನ್ನತ್ತ ಬರತೊಡಗಿದವು. ಅಷ್ಟು ಹೊತ್ತಿಗೆ ಅವನೂ ತಣ್ಣಗಾದ.”
ಮಾತು ನಿಂತಿತು. ಅವನು ಕಣ್ಣುತೆರೆದ. ಮತ್ತೆ ಜಗ್ಗಿನಿಂದ ಒಂದಷ್ಟು ನೀರು ಕುಡಿದ. ಕೈ ನಡುಗಿ ಮೈಮೇಲೆ ಸ್ವಲ್ಪ ನೀರು ಚೆಲ್ಲಿಕೊಂಡ. ನನ್ನ ಮೌನ ನೋಡಿ ಕೇಳಿದ.
“ಹೇಳಿ, ನಾನು ಮಾಡಿದ್ದು ಪಾಪವಾ? ಎಲ್ಲವನ್ನೂ ಹೇಳಿ ಬಿಟ್ಟಿದ್ದೇನೆ. ಇನ್ನು ನಾನು ಮೊದಲಿನಂತಾಗುತ್ತೇನಾ?”
ಅವನ ಸಮಸ್ಯೆಗೆ ತಕ್ಷಣ ಪರಿಹಾರ ಹೊಳೆಯಲಿಲ್ಲ. ಇಂಥ ಕೇಸು ನನ್ನಲ್ಲಿಗೆ ಬರುತ್ತಿರುವುದು ಇದೇ ಮೊದಲು. ಇಡೀ ಪ್ರಕರಣವನ್ನು ಪತ್ರಿಕೆಗಳಲ್ಲಿ ಓದಿದ್ದೆ. ತಾಯಿ, ಮಗು ಆತ್ಮಹತ್ಯೆ ಎಂಬ ಸುದ್ದಿಯನ್ನು ನಾನು ನಂಬಿದ್ದೆ. ಅವನ ಮೇಲೊಂದು ಕೇಸೂ ರಿಜಿಸ್ಟರಾಗಿರಲಿಲ್ಲ. ನನಗೆ ಸಂಬಂಧಿಸಿದ್ದಲ್ಲವೆಂದು ಸುಮ್ಮನಿದ್ದೆ. ಈಗ ಅದರಲ್ಲಿ ನಾನೂ ಒಳಗೊಳ್ಳುವುದೆ? ಸದ್ಯಕ್ಕೆ ಅವನನ್ನು ಸಾಗಹಾಕುವುದೇ ಒಳ್ಳೆಯದು. ಅದೇ ಸರಿ.
“ತೀರ್ಮಾನ ಕೊಡಬೇಕಾದದ್ದು ನಿಮ್ಮ ಆತ್ಮಸಾಕ್ಷಿ. ನಿಮ್ಮದು ಪಾಪವಲ್ಲವೆಂದು ನೀವಂದು ಕೊಂಡರೆ ಮೊದಲಿನಂತಾಗುತ್ತೀರಿ. ದಿನಾ ನಡೆಯುತ್ತಿರುವ ನೂರಾರು ಅಪರಾಧ ಗಳೊಡನೆ ಹೋಲಿಸಿ ಸಮಾಧಾನ ಪಟ್ಟುಕೊಳ್ಳಿ. ಈಗ ಎಲ್ಲವನ್ನೂ ಹೇಳಿ ಹಗುರಾಗಿದ್ದೀರಿ. ನಿಶ್ಚಿಂತೆಯಿಂದ ಮನೆಗೆ ಹೋಗಿ ನಿದ್ದೆ ಮಾಡಿ. ನಾಳೆ ಮಾಮೂಲಿನಂತಾಗುತ್ತೀರಿ.”
ಅವನು ಕಿಟಕಿಯಿಂದ ಹೊರಗೆ ನೋಡಿದ. ಸುರಿಯುವ ಮಳೆ ನೋಡಿ ಬಿಳಿಚಿಕೊಂಡ. “ಕಳೆದ ವರ್ಷ ಇದೇ ದಿನ ಅದು ಸಂಭವಿಸಿದ್ದು. ಹೀಗೇ ಮಳೆಯಿತ್ತು. ನಾನೀಗ ಮನೆಗೆ ಹೋಗುವುದು ಹೇಗೆ? ಅದು ನಡೆದಂದಿನಿಂದ ಕಾರು ಡ್ರೈವ್ ಮಾಡಲಾಗಿಲ್ಲ. ಕೈ ನಡುಕ. ಇಲ್ಲಿಗೆ ಬಸ್ಸಲ್ಲೇ ಬಂದೆ. ಈಗಿನ್ನು ನಮ್ಮಲ್ಲಿಗೆ ಬಸ್ಸಿಲ್ಲ. ನಿಮಗೆ ಅಭ್ಯಂತರವಿಲ್ಲದಿದ್ದರೆ ಇಲ್ಲೇ ಉಳಕೊಳ್ಳುತ್ತೇನೆ. ನಾನು ಹೋಗಲೇಬೇಕೆಂದರೆ ನೀವು ಡ್ರಾಪ್ ಕೊಡಬೇಕಷ್ಟೆ.”
ಅವನನ್ನು ರಾತ್ರಿಯಿಡೀ ಮನೆಯಲ್ಲಿ ಉಳಿಸಿಕೊಳ್ಳಲು ಮನಸ್ಸಾಗಲಿಲ್ಲ. ಆತನನ್ನು ಹಜಾರದಲ್ಲೇ ಬಿಟ್ಟು ಒಳಹೋಗಿ ಎರಡು ಸ್ಟ್ರಾಂಗ್ ಕಾಫಿ ಮಾಡಿಕೊಂಡು ತಂದೆ. ಕಾಫಿ ಕುಡಿದು ಅವನು ಪ್ರಸನ್ನವದನ್ನಾದ. ಆಮೇಲೆ ಅವನನ್ನು ಹೊರಡಿಸಿ ಬಾಗಿಲೆಳೆದುಕೊಂಡು ಲಾಕ್ ಮಾಡಿದೆ. ಫ್ರಂಟ್ ಸೀಟಲ್ಲಿ ಕೂರಿಸಿಕೊಂಡು ಕಾರು ಓಡಿಸಿದೆ.
ಮಳೆ ಜೋರಾಗಿ ಹೊಡೆಯುತ್ತಿತ್ತು. ರಸ್ತೆಯಂಚಿನಲ್ಲಿ ನದಿಯ ಭೋರ್ಗರೆತ ಕೇಳತೊಡಗಿತು.
“ಮಳೆ ಹೀಗೆ ಸುರಿದರೆ ಇದು ರಸ್ತೆಯನ್ನು ಆಕ್ರಮಿಸುವುದು ಖಂಡಿತಾ” ಎಂದು ನಾನೆಂದದ್ದು ಅವನ ಗಮನಕ್ಕೆ ಬರಲೇ ಇಲ್ಲ. ಮಳೆಯ ಹೊಡೆತದಿಂದ ಹಾದಿ ಮಸುಕಾಗ ತೊಡಗಿತು. ನಾನು ನಿಧಾನವಾಗಿ ಡ್ರೈವ್ ಮಾಡತೊಡಗಿದೆ.
ಒಂದು ನಿರ್ಜನ ತಿರುವಿನಲ್ಲಿ ಅವನು ಇದ್ದಕ್ಕಿದ್ದಂತೆ ಕಿರಿಚಿದ: “ನಿಲ್ಲಿಸಿ.”
ನಾನು ಗಕ್ಕನೆ ಬ್ರೇಕೊತ್ತಿ ಅವನನ್ನು ಪ್ರಶ್ನಾರ್ಥಕವಾಗಿ ನೋಡಿದೆ. ಅವನು ನದಿಯನ್ನು ನೋಡುತ್ತಿದ್ದ.
ಅಲ್ಲಿ ನೋಡಿ. ಅಲ್ಲೊಂದು ಪೊದೆ ಕಾಣಿಸುತ್ತಿದೆಯಾ? ಬನ್ನಿ. ನನ್ನೋಡನೆ ಒಮ್ಮೆ ಅಲ್ಲಿಗೆ ಬನ್ನಿ. ಒಂದೇ ಒಂದು ಸಲ.
ನಾನು ಛತ್ರಿ ಬಿಡಿಸಿ ಅವನನ್ನು ಹಿಂಬಾಲಿಸಿದೆ. ಅವನು ನದಿಯತ್ತ ಧಾವಿಸುತ್ತಾ ಪೊದೆ ಸಿಕ್ಕಾಗ ನಿಂತ.
“ಹೀಗೆ, ಹೀಗೇ ಇತ್ತು. ಕಳೆದ ವರ್ಷ ಇದೇ ದಿನ, ಇದೇ ಹೊತ್ತಿಗೆ ಇಲ್ಲೇ, ಇಲ್ಲೇ ನಾನು ಆ ಹೆಣಗಳನ್ನು ನೀರಿಗೆಸೆದದ್ದು. ಇಲ್ಲೇ, ಇಲ್ಲೇ ನೋಡಿ.”
ಅವನು ಕತ್ತೆತ್ತಿ ಶೂನ್ಯದತ್ತ ನೋಡಿದ. ಅಯ್ಯೋ, ಅಯ್ಯಯ್ಯೋ, ಓ ದೇವರೇ, ಅವು ಬರುತ್ತಿವೆ. ಆ ಕೈಗಳು ಬರುತ್ತಿವೆ. ಅವೇ ಕೈಗಳು, ನನ್ನ ಕತ್ತು ಹಿಚುಕಲು ಬರುತ್ತಿವೆ. ಬಂದವು, ಬಂದವು. ಅಯ್ಯೋ, ಅಯ್ಯಯ್ಯೋ.”
ಅವನು ಕಿರಿಚುತ್ತಾ ಮುಂದಕ್ಕೆ ಓಡಿ ದಭಾಲ್ಲೆಂದು ನೀರಿಗೆ ಬಿದ್ದ. ಪ್ರವಾಹ ಅವನನ್ನು ಕೊಚ್ಚಿಕೊಂಡು ಹೋಗುವುದನ್ನು ನಾನು ಅಸಹಾಯಕನಾಗಿ ನೋಡುತ್ತಾ ನಿಂತಿದ್ದೆ.