ಪಸರಿಸಿದ ಗಂಧ

ಬಾಲ್ಕನಿಯಲ್ಲಿ ಕುಳಿತು ಉಯ್ಯಾಲೆ ತೂಗಿಕೊಳ್ಳುತ್ತಿದ್ದವಳಿಗೆ ತನ್ನ ಮನಸ್ಸು ಕೂಡ ಹೀಗೆ ಉಯ್ಯಾಲೆಯಂತೆ ಆಡುತ್ತಿದೆ ಎನಿಸಿತು. ಅತ್ತಲೋ ಇತ್ತಲೋ ದ್ವಂದ್ವತೆಯ
ಶಿಖರಕ್ಕೇರಿ ಇಳಿಯಲು ದಾರಿ ಕಾಣದೆ, ಥೂ ನನಗೇಕೆ ಈ ಉಸಾಬರಿ, ತನ್ನಷ್ಟಕ್ಕೇ ತಾನಿರಬೇಕಿತ್ತು. ಅವಿನಾಶ್ ಫೋನ್ ಮಾಡಿದಾಗ ತಾನಿರುವುದಿಲ್ಲ ಎಂದು ಬಿಟ್ಟಿದ್ದರೆ ಈ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಬಹುದಿತ್ತು. ಏನಾಗಿತ್ತು ತನಗೆ ಸುಮ್ಮನೆ ಒಪ್ಪಿಕೊಂಡು ಬಿಟ್ಟೆನಲ್ಲ. ಮೊನ್ನೆ ಅವಿನಾಶ್ ಫೋನಿನಲ್ಲಿ “ಪ್ರತೀಕ್ಷಾ, ಎಲ್ಲಾ ವಿಚಾರಗಳು ನಂಗೆ ಗೊತ್ತಿದೆ. ನೀನು ಏನು ಹೇಳ್ತಿಯೋ ಅದನ್ನೆ ನಾನು ನಂಬುವುದು. ನಾ ಕೇಳಿದ್ದೆ ಸತ್ಯವಾಗಿದ್ದರೆ ಮಗಳನ್ನು ಕರೆದುಕೊಂಡು ದೀಕ್ಷಾಳ ಸಂಬಂಧವನ್ನು ಹರಿದುಕೊಂಡು ವಾಪಸ್ಸು ಬಂದು ಬಿಡುತ್ತೇನೆ. ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡುವ ಸ್ವಭಾವ ನನ್ನದು ಅಂತ ನಿಂಗೆ ಗೊತ್ತೇ ಇದೆ. ದೀಕ್ಷಳ ಬಗ್ಗೆ ನಾನು ಕೇಳಿದ್ದೆಲ್ಲ ಸುಳ್ಳು ಅಂತ ಒಂದೇ ಒಂದು ಮಾತು ನೀನು ಹೇಳಿದ್ರೂ ಸಾಕು. ಆ ಪರಿಸರದಿಂದಲೇ ಅವಳನ್ನು ಕರ್ಕೊಂಡು ದೂರ ಇದ್ದು ಬಿಡ್ತೀನಿ” ಗಂಭೀರವಾಗಿ ಹೇಳಿದ್ದನ್ನು ಹಗುರವಾಗಿ ಪರಿಗಣಿಸುವಂತಿರಲಿಲ್ಲ. ಹೇಳಿದಂತೆ ಮಾಡುವನೇ ಈ ಅವಿ. ಆದರೆ ಈ ದೀಕ್ಷಾ ಯಾಕೆ ಹೀಗೆ ಮಾಡಿಕೊಂಡು ಬಿಟ್ಟಳು. ಈಗ ಅವಳ ಬದುಕೇ ಛಿದ್ರವಾಗುವುದರಲ್ಲಿದೆ. ಇವರಿಬ್ಬರ ಬದುಕಿನಲ್ಲಿ ನನ್ನ ಪಾತ್ರವೇನು? ನಾನೀಗ ಯಾವ ನಿರ್ಧಾರ ಮಾಡಲಿ. ಮನಸ್ಸು ಪ್ರಕ್ಷುಬ್ಧಗೊಂಡಿತು.

ಮೊದಲಿನಿಂದಲೂ ಈ ದೀಕ್ಷಾ ಹೀಗೆಯೇ. ಇವಳನ್ನು ಇವತ್ತು ನೋಡಬೇಕೇ? ಕಾಲೇಜಿನ ದಿನಗಳಲ್ಲಿಯೇ ಹಾರಾಡುತ್ತಿದ್ದಳು. ಸದಾ ಚೆಲ್ಲು ಚೆಲ್ಲಾಗಿ ಆಡುವ ಅವಳ
ಬಗ್ಗೆ ಅಂತಹ ಆತ್ಮೀಯತೆಯೇನೂ ಇರಲಿಲ್ಲ. ಗಂಡು ಹುಡುಗರೊಡನೆ ಕುಲುಕುಲು ನಗುತ್ತ ಸಿನಿಮಾ ಷಾಪಿಂಗ್ ಅಂತ ಸದಾ ಒಬ್ಬೊಬ್ಬನೊಂದಿಗೆ ಸುತ್ತುತ್ತಿದ್ದ ದೀಕ್ಷಾಳಿಗೂ ನನ್ನ ಬಗ್ಗೆ ಸ್ನೇಹ ಬೆಳೆಸುವ ಆಸಕ್ತಿ ಇರಲಿಲ್ಲ. ಆದರೆ ಅವಿಗಾಗಿ ನನ್ನ ಹಿಂದೆ ಬಿದ್ದಿದಳು. ಅವಿ ನಾನು ಜೊತೆಯಲ್ಲಿ ಆಡಿ ಬೆಳೆದವರು. ನಮ್ಮಿಬ್ಬರ ನಡುವೆ ಆತ್ಮೀಯ ಸ್ನೇಹವಿತ್ತು.

ದೀಕ್ಷಾಳ ಬಗ್ಗೆ ಯಾವ ಒಲವೂ ತೋರಿಸದಿದ್ದ ಅವಿ ಅದು ಹೇಗೆ ಅವಳ ಪ್ರೇಮಪಾಶಕ್ಕೆ ಸಿಲುಕಿದನೋ, ಅವಳನ್ನೆ ಮದುವೆಯಾಗುವುದಾಗಿ ಹಟ ಹಿಡಿದು ಮನೆಯವರನ್ನೆಲ್ಲ ಒಪ್ಪಿಸಿದ. ಈ ಹುಡುಗಿ ಅವನೊಂದಿಗೆ ಅದು ಹೇಗೆ ಬಾಳಿಯಾಳೋ ಎಂಬ ಆತಂಕವಂತೂ ನನಗಿತ್ತು. ಆದರೆ ಅವರ ಅನ್ಯೋನ್ಯ ದಾಂಪತ್ಯ ಮುದ್ದು ಮಗಳು ವರ್ಷದೊಳಗೆ ಭುವಿಗಿಳಿದಿದ್ದನ್ನು ಕಂಡು ಸಮಾಧಾನವಾಗಿತ್ತು. ಎಲ್ಲವೂ ಸರಿಯಾಗಿತ್ತು. ಅವನಿಗೆ ದುಬೈಯಲ್ಲಿ ಕೆಲಸ ಸಿಕ್ಕಿ ಅವನೊಬ್ಬನೆ ಅಲ್ಲಿಗೆ ಹಾರಿ ಹೋದಾಗ ಅವನ ಸಂಸಾರದಲ್ಲಿ ಅಪಸ್ಪರ ಕೇಳಲಾರಂಭಿಸಿತ್ತು.

ಮನೆಯಲ್ಲಿ ಬೇಸರವೆಂದು ದೀಕ್ಷಾ ತಮ್ಮ ಅಫೀಸಿನಲ್ಲಿಯೇ ಕೆಲಸಕ್ಕೆ ಸೇರಿದಾಗ ಕಸಿವಿಸಿಯಾದರೂ ತನಗೂ ಜೊತೆಯಾಯಿತೆಂದು ಅಂದುಕೊಂಡಳು. ಆದರೆ ದೀಕ್ಷಾಳ ಗಂಭೀರವಲ್ಲದ ನಡವಳಿಕೆಯಿಂದಾಗಿ ಇಡೀ ಆಫೀಸಿನವರು ಅವಳ ಬಗ್ಗೆ ಹಗುರವಾಗಿ ವರ್ತಿಸುತ್ತಿದ್ದುದು ತನಗಂತು ಇರಿಸು ಮುರಿಸು ಉಂಟಾಗುತ್ತಿತ್ತು. ದೀಕ್ಷಾಳಂತೂ ಯಾವುದಕ್ಕೂ ಕೇರ್ ಮಾಡದೆ. ಆಫೀಸಿನ ಗಂಡಸರೊಂದಿಗೆ ಸಲುಗೆಯಿಂದಲೇ ಇದ್ದು ಬಿಡುತ್ತಿದ್ದಳು. ವರ್ಷಕ್ಕೊಮ್ಮೆ ಬರುವ ಅವಿಗೆ, ಸಂಸಾರವನ್ನು ಅಲ್ಲಿಗೇ ಕರೆದುಕೊಂಡು ಹೋಗು, ಇಲ್ಲದಿದ್ದರೆ ಅಲ್ಲಿನ ಕೆಲಸ ಬಿಟ್ಟು ಇಲ್ಲಿಗೆ ಬಂದಿರು ಎಂದು ಸೂಕ್ಷ್ಮವಾಗಿ ಎಚ್ಚರಿಸಿದ್ದೆ. ಆದರೆ ಆ ಸೂಕ್ಷ್ಮತೆ ಅವನಿಗರ್ಥವೇ ಆಗಿರಲಿಲ್ಲ. ಅಲ್ಲಿ ಮನೆ ಮಾಡಿ ಸಂಸಾರ ನಿರ್ವಹಿಸುವುದು ತುಂಬಾ ಖರ್ಚಿನ ವಿಚಾರ. ಒಬ್ಬನೇ ಇದ್ದರೆ ಸಾಕಷ್ಟು
ಉಳಿಸಬಹುದು. ಅಲ್ಲದೆ ಮಗಳು ಶಾಲೆಗೆ ಸೇರಿದ್ದಾಳೆ. ಅಲ್ಲೇನು ತಾನು ಪರ್ಮನೆಂಟಾಗಿರುವುದಿಲ್ಲ. ಒಂದಿಷ್ಟು ದುಡಿದು ಬಂದು ಬಿಡ್ತೀನಿ ಎಂದು ಬಾಯಿ ಮುಚ್ಚಿಸಿ
ಬಿಡುತ್ತಿದ್ದ. ಹೆಚ್ಚು ಹೇಳಲಾರದೆ ನಾನು ಸುಮ್ಮನಾಗಿ ಬಿಡುತ್ತಿದ್ದೆ. ಆಡಲಾರದೆ ಅನುಭವಿಸಲಾರದೆ ಒಳಗೊಳಗೆ ಒದ್ದಾಡುತ್ತಿದ್ದ ನನಗೆ ದೀಕ್ಷಾಳ ವರ್ತನೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ನನ್ನ ಯಾವ ಮಾತುಗಳಿಗೂ ಬೆಲೆ ಕೊಡದ ದೀಕ್ಷಾಳನ್ನು ನಾನಾದರೂ ಹೇಗೆ ತಿದ್ದಬಹುದಿತ್ತು.

ಆದರೆ ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ. ದೀಕ್ಷಾಳ ಬದುಕು ಮೂರಾಬಟ್ಟೆಯಾಗಿದೆ. ನನ್ನ ಮಾತುಗಳನ್ನು ನಿರ್ಲಕ್ಷಿಸಿದ ದೀಕ್ಷಾ ಪವನನೊಂದಿಗಿದ್ದ
ಸ್ನೇಹದಿಂದಾಗಿ ಅವಳ ಸಂಸಾರ ನುಚ್ಚು ನೂರಾಗುತ್ತದೆ. ಸದಾ ಅವನೊಂದಿಗೆ ಸಿನಿಮಾ, ಹೋಟೆಲ್ ಎಲ್ಲಾ ಆಗಿ ಕೊನೆಗೆ ಊಟಿಗೂ ಜೊತೆಯಲ್ಲಿಯೇ ಹೋಗಿ ಬಂದರೆಂದು
ತಿಳಿದು ಕಂಗಾಲಾಗಿ ಹೋಗಿದ್ದೆ. ಜೊತೆಯಲ್ಲಿರ ಬೇಕಾದ ಗಂಡ ದೂರದ ದೇಶದಲ್ಲಿದ್ದಾನೆ. ಒಬ್ಬಳೆ ಇರಲಾರೆ ಕರೆದುಕೊಂಡು ಹೋಗಿ ಎಂದು ಎಷ್ಟು ಹೇಳಿದರೂ
ಒಂಟಿಯಾಗಿ ಹೆಂಡತಿಯನ್ನು, ಅವಿ ಬಿಟ್ಟು ಹೋಗಿ ದೊಡ್ಡ ತಪ್ಪು ಮಾಡಿದ. ಎಲ್ಲರೂ ಅವರವರ ಗಂಡಂದಿರ ಜೊತೆ ಸುಖವಾಗಿ ಸಂಸಾರ ನಡೆಸುತ್ತಿರಬೇಕಾದರೆ, ಇಲ್ಲಿ ಒಂಟಿಯಾಗಿ ಜಾತಕ ಪಕ್ಷಿಯಂತೆ ಗಂಡನಿಗಾಗಿ ಕಾಯುತ್ತ ನಿರ್ಲಿಪ್ತವಾಗಿ ಇರಲು ದೀಕ್ಷಾಳೇನೂ ಸನ್ಯಾಸಿಯೇ. ಅವಳಿಗೂ ಬಯಕೆಗಳಿರುವುದಿಲ್ಲವೇ. ಸಂಯಮ ಬೇಕಿತ್ತು ನಿಜಾ. ಆದರೆ ದೀಕ್ಷಾಳಂತ ಹೆಣ್ಣಿನಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ. ಹೊಟ್ಟೆ ತುಂಬಿರುವಾಗಲೇ ಅತ್ತ ಇತ್ತ ನೋಡುವ ಚಪಲದ ಹೆಣ್ಣು ದೀಕ್ಷಾ. ಅಂತಹುದರಲ್ಲಿ ಹೊಟ್ಟೆ ಹಸಿದಿರುವಾಗ ಬೇರತ್ತ ನೋಡದೇ ಇರುವವಳೇ?” ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳುವ ಪವನನ ಗಾಳಕ್ಕೆ ದೀಕ್ಷಾ ಸುಲಭವಾಗಿ ಬಿದ್ದಿದ್ದಾಳೆ. ಹೆಣ್ಣು ಮೈಮೇಲೆ ಬಿದ್ದು ಬಂದರೆ ಪವನ್ ಬಿಟ್ಟಾನೆಯೇ ಇಬ್ಬರೂ ಸೇರಿ ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೇ ತಿಳಿಯದೇ, ಇಡೀ ಆಫೀಸಿನ ತುಂಬಾ ಇದೇ ಮಾತು ಇದೇ ಚರ್ಚೆ ಕೊನೆಗೆ ಮನೋಹರ್ ಕಿವಿಗೂ ಈ ಸುದ್ದಿ ತಲುಪಿ “ಏನಿದು ಪ್ರತೀಕ್ಷಾ ನಿನ್ನ ಫ್ರೆಂಡ್ ಕಥೆ. ಅಲ್ಲಿ ನೋಡಿದ್ರೆ ಅವಿನಾಶ್ ಹೆಂಡತಿ ಮಗಳಿಗಾಗಿ ದುಡಿತಾ ಇದ್ದಾನೆ. ಇಲ್ಲಿ ನೋಡಿದ್ರೆ ಇವಳು ಹೀಗೆ ಹೆಸರು ಕೆಡಿಸಿಕೊಳ್ತಾ ಇದ್ದಾಳೆ. ಅವಿಗೆ ಗೊತ್ತಾದ್ರೆ ಏನಾಗುತ್ತೋ” ಅಸಹನೆಯಿಂದ ಸಿಡಿದಿದ್ದರು.

ದೀಕ್ಷಾ ನಮ್ಮ ಮನೆಗೆ ಬರೋದೂ, ಅವಳ ಮಾತೂ ಒಂದೂ ಹಿಡಿಸದೆ ಸಹನೆ ಮೀರಿದ್ದರೂ, ಮೊದಲಿನಿಂದಲೂ ದೀಕ್ಷಾಳನ್ನು ಕಂಡರೆ ಮನುಗೂ ಅಷ್ಪಕ್ಕಷ್ಟೆ. ನನಗಾಗಿ, ಅವಿಗಾಗಿ ಅವಳನ್ನು ಸಹಿಸಿದರು.

ಒಮ್ಮೆಯಂತೂ ನಮ್ಮ ಮನೆಯಲ್ಲಿ ಅವಿ, ನಾನು, ದೀಕ್ಷಾ, ಮನೋಹರ್, ಅವರ ಗೆಳೆಯರು ಎಲ್ಲಾ ಸೇರಿದ್ದಾಗ ಎಲ್ಲರ ಮುಂದೂ “ಪ್ರತೀಕ್ಷಾ ಕಾಲೇಜಿನಲ್ಲಿರುವಾಗ ಯಾರ ಜೊತೆನಾದ್ರೂ ಓಡಿ ಹೋಗ್ತಿಯಾ ಅಂದುಕೊಂಡಿದ್ದೆ. ಆದ್ರೆ ನೀನು ಓಡಿ ಹೋಗಲಿಲ್ಲ. ನಾನೇ ಓಡಿ ಹೋಗಬೇಕಾಯ್ತು. ಆ ಅವಿ ಜೊತೆ” ಅಂತ ಹೇಳಿದಾಗ ನಾನು ಶಾಕ್
ಹೊಡೆದಂತೆ ನಿಂತು ಬಿಟ್ಟಿದ್ದೆ ಅಬ್ಬಾ, ಇವಳ್ಯಾಕೆ ಹಾಗೆ ಮಾತನಾಡಿದಳು. ನಾನು ಎಲ್ಲರೊಂದಿಗೆ ಸ್ನೇಹದಿಂದಿರುತ್ತಿದ್ದೆ ನಿಜ. ಅವಿಯೊಂದಿಗೆ ತುಂಬಾ ಸಲುಗೆ ಇತ್ತು. ಅವನು ನನ್ನ ಬಾಲ್ಯದ ಗೆಳೆಯ. ಒಟ್ಟಿಗೆ ಆಡಿ ಬೆಳೆದವರು. ಅದೇ ಸ್ನೇಹ ಇಂದಿಗೂ ಇತ್ತು. ಅದನ್ನೇ ಅಪಾರ್ಥ ಮಾಡಿಕೊಂಡು, ನನ್ನನ್ನೂ ತನ್ನಂತೆಯೇ ಎಂದು ಭಾವಿಸಿ ಬಿಟ್ಟಿದ್ದಳೇ.

ಆಗ ತಟ್ಟನೆ ಮನೋಹರ್ “ಹಳದಿ ಕಣ್ಣಿನವರಿಗೆ ಲೋಕವೇ ಹಳದಿಯಂತೆ. ನೀವು ಓಡೋದ್ರಲ್ಲಿದ್ದಿರಲ್ಲ ಅದಕ್ಕೆ ನಿಮ್ಗೆ ಎಲ್ಲರೂ ನಿಮ್ಮಂತೆ ಇರಬಹುದು ಅಂತ
ಅಂದುಕೊಂಡಿರೇನೋ. ಎಷ್ಟೇ ಆಗಲಿ ನೀವು ನಮ್ಮ ಅವಿನ ಓಡಿಸಿಕೊಂಡು ಬಂದವರಲ್ಲವೇ” ಎಂದು ಕಟುವಾಗಿ ಕೆಣಕಿದ್ದರು.

ಅವಿ ದುಬೈಗೆ ಹೋದ ಮೇಲಂತೂ ದೀಕ್ಷಾ ಮನೋಹರ್ ಜೊತೆ ಹೆಚ್ಚು ಸಲಿಗೆ ಬೆಳಿಸಿಕೊಳ್ಳಲು ಪ್ರಯತ್ನಿಸಿದ್ದಳು. ತಾನೇ ಮೇಲೆ ಬಿದ್ದು ಹೋಗುವುದನ್ನು ಕಂಡು ಅಸಹನೆ ತರಿಸುತ್ತಿತ್ತು. ಆದರೆ ಮನು ಬಗ್ಗೆ ನನಗೆ ನಂಬಿಕೆ ಇತ್ತು. ಮನು ಎಂತವರೆಂದು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರಿಂದ ಅವಿಗಾಗಿ ಜೊತೆ ಸೇರುವುದನ್ನು ತಪ್ಪಿಸಿಕೊಳ್ಳುತ್ತಿದ್ದರು.

“ಏನಪ್ಪ ನೀವು ನನ್ನ ಜೊತೆ ಬಂದ್ರೆ ನಿಮ್ಮನೇನು ತಿಂದು ಹಾಕಿ ಬಿಡ್ತೀನಾ, ಒಳ್ಳೆ ಸತಿವ್ರತರಂತೆ ಆಡ್ತೀರಪ್ಪ. ಒಂದು ಕ್ಷಣಾನೂ ಪ್ರತೀಕ್ಷಾನಾ ಬಿಟ್ಟಿರೋಲ್ಲ ಅಂತೀರಾ, ಯಾವಾಗಲೂ ಪ್ರತೀಕ್ಷಾ, ಪ್ರತೀಕ್ಷಾ ಅಂತ ಹಿಂದೆ ಮುಂದೆ ಸುತ್ತೋದು ನೋಡಿದ್ರೆ ನಂಗೆ ಹೊಟ್ಟೆ ಕಿಚ್ಚಾಗುತ್ತೆ. ಈ ಅವಿ ನೋಡಿ ಮೆಚ್ಚಿಮೆಚ್ಚಿ ಮದುವೆ ಆದ್ರೂ ನನ್ನ ಬಿಟ್ಟು ಹೇಗೆ ದೂರ ಇದ್ದಾರೆ” ಅಂತ ಗೊಣಗಾಳಾಡುತ್ತಲೇ ಮನೋಹರ್ಗೆ ನನ್ನ ಮೇಲಿದ್ದ ಪ್ರೀತಿಯನ್ನು ನೇರವಾಗಿಯೇ ಆಕ್ಷೇಪಣೆ ಧನಿಯಲ್ಲಿ ಹೇಳುತ್ತಾ ಅಸೂಯೆಗೊಳ್ಳುತ್ತಿದ್ದಳು.

“ಆಗ ನನಗೂ ಅನ್ನಿಸುತ್ತಿತ್ತು. ಪಾಪ ದೀಕ್ಷಾ ಗಂಡನ ಜೊತೆಯಲ್ಲಿ ನಲಿದಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಸಹಜವಾದ ಬಯಕೆಗಳನ್ನು ಹತ್ತಿಕ್ಕಿಕೊಂಡು ಒಂಟಿಯಾಗಿ ಇರುತ್ತಿದ್ದಾಳೆ ಅಂತ ಕನಿಕರ ಉಕ್ಕಿ ಬರುತ್ತಿತ್ತು. ಅವಳು ಒಂಟಿಯಾಗಿ ಇರದಂತೆ ಮನೋಹರನಿಗೆ ಅಸಹನೆ ಎಂದು ಗೊತ್ತಿದ್ದರೂ ನಮ್ಮೊಂದಿಗೆ ಸೇರಿಸಿಕೊಳ್ಳುತ್ತಿದ್ದೆ. ಶಾಪಿಂಗ್, ಔಟಿಂಗ್ ಎಂದು ಹೋದಾಗಲೆಲ್ಲ ಅವಳನ್ನೂ ಕರೆದೊಯ್ಯುತ್ತಿದ್ದೆ. ಆದರೆ ಹಾಗೆ ಹೋದಾಗ ನನ್ನ ಮನುವಿನ ಅನ್ಯೋನ್ಯತೆ ಕಂಡು ಅಸ್ವಸ್ಥಳಾಗುತ್ತಿದ್ದಳು. ಮನು ಸದಾ ನನ್ನ ಕಾಡಿಸಿ, ರೇಗಿಸಿ ಅಕ್ಕರೆ, ಪ್ರೇಮ ತೋರುತ್ತಿದ್ದುದ್ದು ಅವಳ ಕೊರಗನ್ನು, ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಅರಿಯದೆ ಹೋದದ್ದು ನನ್ನ ಹೆಡ್ಡತನವಾಗಿತ್ತು. ನನ್ನ ಕಾಳಜಿ, ಮನುವಿನ ನಿರ್ಲಕ್ಷ್ಯದಿಂದಾಗಿ ವ್ಯರ್ಥವಾಗುತ್ತಿತ್ತು. ದೀಕ್ಷಾ ಕೊನೆ ಕೊನೆಗೆ ನಮ್ಮ ಜೊತೆಗೆ ಬರುವುದನ್ನು ನಿಲ್ಲಿಸಿಬಿಟ್ಟಳು. ಮನೆ ಖಾಲಿ ಮಾಡಿ ತಾಯಿ ಮನೆ ಸೇರಿಕೊಂಡಳು. ಮಗುವನ್ನು ತಾಯಿಯ ಜವಾಬ್ದಾರಿಗೆ ಒಪ್ಪಿಸಿ ಕೆಲಸಕ್ಕೆ ಸೇರಿಕೊಂಡಳು. ಇಲ್ಲಿ ಹೀಗಾಯಿತು. ಅವಿ ಬರುತ್ತಿದ್ದಾನೆ. ನನ್ನ ಮೇಲೆ ಎಲ್ಲ ಜವಾಬ್ದಾರಿ ಹೊರಿಸಿ ನನ್ನನ್ನು ಈ ಇಕ್ಕಟ್ಟಿಗೆ ಸಿಲುಕಿಸಿದ್ದಾನೆ. ನಾನೇನು ಹೇಳಲಿ, ಇದ್ದ ವಿಚಾರ ತಿಳಿಸಿ ಒಂದು ಸಂಸಾರವನ್ನು ಛಿದ್ರಗೊಳಿಸಲೇ, ಸುಳ್ಳು ಹೇಳಿ ದೀಕ್ಷಾಳ ಬದುಕನ್ನು ಸರಿಪಡಿಸಿ ಬಿಡಲೇ
ಎಂದು ಹಣ್ಣಾದಳು.

ನಮ್ಮ ಮನೆಯ ದಾರಿಯನ್ನೇ, ಮರೆತಿದ್ದ ದೀಕ್ಷಾ ನನ್ನನ್ನು ಹುಡುಕಿಕೊಂಡು ಬಂದಿದ್ದು ನನಗೆ ತುಂಬಾ ಆಶ್ವರ್ಯವಾಯಿತು. ಕಳಾಹೀನವಾಗಿದ್ದ ಆ ಮುಖದಲ್ಲಿ
ಗೆಲುವೆಂಬುದೇ ಕಾಣಲಿಲ್ಲ. ಇವಳೇನಾ ದೀಕ್ಷಾ ಎನ್ನುವಷ್ಟು ಅಚ್ಚರಿ ಹುಟ್ಟಿಸಿದ್ದಳು. ಅವಳ ಕಣ್ಣುಗಳಲ್ಲಿ ಪಶ್ಚಾತ್ತಾಪ ಪ್ರತಿಫಲಿಸುತ್ತಿತ್ತು. ಕಮ್ಮಟಕ್ಕೆಂದು ಹೋಗಿದ್ದ ದೀಕ್ಷಾ ಪವನ್ ಉಳಿದಿದ್ದ ಹೋಟೆಲಿನಲ್ಲಿಯೇ ಉಳಿದುದ್ದಾಗಿಯೂ ಕಮ್ಮಟಕ್ಕೆಂದು ಬಂದಿದ್ದವರಿಗೆಲ್ಲ ಒಂದೇ ಹೋಟೆಲ್ನಲ್ಲಿ ರೂಮ್ ಅರೆಂಜ್ ಮಾಡಿದ್ದುದ್ದಾಗಿಯೂ, ತಾನು ಖಂಡಿತ ತಪ್ಪು ಮಾಡುವ ಯಾವುದೇ ಯೋಚನೆ ಇಲ್ಲದೆ ಅವನೊಂದಿಗೆ ಸಲುಗೆಯಾಗಿದ್ದುದು ನಿಜವೇ ಆದರೂ, ಯಾವುದೋ ಕೆಟ್ಟ ಗಳಿಗೆಯಲ್ಲಿ ಮೈ ಮರೆತು ಇಷ್ಟೆಲ ಅನಾಹುತಕ್ಕೆ ಕಾರಣಳಾಗಿ ಬಿಟ್ಟೆ ಅಂತ ಭೋರೆಂದು ಅತ್ತಾಗ ಮನಸ್ಸು ದ್ರವಿಸಿದ್ದು ಸತ್ಯ. ಆದರೆ ತಪ್ಪು ತಪ್ಪು ತಾನೇ. ಅಲ್ಲಿ ಇವಳಿಗಾಗಿ ಅವಿ ಒಂಟಿಯಾಗಿದ್ದುಕೊಂಡು ಕಷ್ಟಪಡುತಿದರೆ ಇಲ್ಲಿ ಇವಳ ಈ ಚೆಲ್ಲಾಟ ಅಸಹ್ಯ ಮೂಡಿತ್ತು.

“ಪ್ರತೀಕ್ಷಾ, ಅವಿನಾ ಬಿಟ್ಟು ಬದುಕೋ ಶಕ್ತಿ ನಂಗಿಲ್ಲ ಕಣೆ. ಅವಿ ಏನಾದರೂ ನನ್ನ ಕ್ಷಮಿಸದೇ ಇಲ್ಲೆ ಬಿಟ್ಟು ಹೋಗ್ತೀನಿ ಅಂದ್ರೆ ಅವನ ಕಣ್ಣೆದುರೇ ಸತ್ತು ಹೋಗಿ ಬಿಡ್ತೀನಿ” ಅಳುತ್ತಲೇ ಆಡಿದ ಆ ಮಾತು ಬೆಚ್ಚುವಂತಾಯಿತು. ಜೋಲಾಡುತ್ತಿದ್ದ ಮನಸ್ಸು ಒಂದು ನಿರ್ಧಾರಕ್ಕೆ ಬಂದಿತು. ಪಶ್ಚಾತ್ತಾಪಕ್ಕಿಂತಲೂ ದೊಡ ಶಿಕ್ಷೆ ಬೇಕೆ.

“ದೀಕ್ಷಾ, ನೀನು ಮಾಡಿದ್ದು ತಪ್ಪು ಅಂತ ನಿಂಗೆ ಅರ್ಥ ಆಗಿದೆಯಲ್ಲ ಸಾಕು. ಈ ತಪ್ಪನ್ನು ನನ್ನ ಮುಂದೆ ಒಪ್ಪಿಕೊಂಡಂತೆ ಅವಿ ಮುಂದೆ ಒಪ್ಪಿಕೊಂಡು ಬಿಡಬೇಡ. ನಾನೇನು ತಪ್ಪು ಮಾಡಿಲ್ಲ ಎಂದೇ ಸಾಧಿಸು ನೋಡೋಣ ಅವಿ ಮನಸ್ಸು ಹೇಗಿದೆಯೋ, ಇವತ್ತು ದೊಡ್ಡ ಮನಸ್ಸಿನಿಂದ ನಿನ್ನ ಕ್ಷಮಿಸಿಬಿಟ್ಟರೂ, ಮುಂದೆ ಅದರ ಕಲೆ ನಿರಂತರವಾಗಿ ಉಳಿದು ನಿನ್ನ ಸಂಸಾರದ ನೆಮ್ಮದಿನಾ ಹಾಳು ಮಾಡಬಹುದು. ನೀ ಮಾಡಿದ್ದು ತಪ್ಪೆ, ಮುಂದೆ ಅಂತಹ ತಪ್ಪು ನಡೆಯದಂತೆ ನಿನ್ನನ್ನು ನೀನು ಬದಲಾಯಿಸಿಕೊಳ್ಳಬೇಕು. ಸೂರ್ಯನ ಬೆಳಕೆ ನಿನ್ನ ಬಾಳಿನಲ್ಲಿ ಇರುವಾಗ ಯಾವುದೋ ಮಿಂಚು ಹುಳದ ಗೂಡವೆ ಏಕೆ ಹೇಳು”. “ಈಗಾಗ್ಲೆ ಅವಿಗೆ ವಿಷಯ ಗೊತ್ತಾಗಿದೆ. ಅದಕ್ಕೆ ಅವನು ಬರ್ತಾ ಇರೋದು. ನಾ ಹೇಳಿದ್ದನ್ನು ನಂಬ್ತಾನಾ ಪ್ರತೀಕ್ಷಾ” ಸಂಶಯಿಸಿದಳು.

“ನಂಬಿಸಬೇಕು. ತಪ್ಪು ಮಾಡಿದ್ದೀನಿ ಅನ್ನೋ ಫೀಲಿಂಗ್ಸ್‌ನಿಂದ ಬೇಗ ಬಂದು ಬಿಡು. ಅವಿಗೆ ಯಾವತ್ತೂ ಕೂಡ ಇದು ಗೊತ್ತಾಗಬಾರದು.”

ಈ ಸಾರಿ ನೀನು ಅವಿನ ಒಂಟಿಯಾಗಿ ಹೋಗಲು ಬಿಡಬೇಡ. ಅವನ ಮನಸ್ಸನ್ನು ಒಲಿಸಿಕೊಂಡು ನೀನೂ ಅವನ ಜೊತೆ ಹೊರಟು ಬಿಡು. ಒಂದಿಷ್ಟು ವರ್ಷ ಇಲ್ಲಿಗೆ
ನೀವು ಬರೋದೇ ಬೇಡ. ಅಷ್ಟು ಹೊತ್ತಿಗೆ ಜನ ಇದನ್ನೆಲ್ಲ ಮರೆತಿರುತ್ತಾರೆ. ಸಧ್ಯಕ್ಕೆ ನೀನು ಧೈರ್ಯವಾಗಿರಬೇಕು. ಈ ಅಳು ಪಶ್ಚಾತ್ತಾಪ ಎಲ್ಲಾ ಮರೆಯಾಗಲಿ” ಸಂತೈಸಿದಳು. ಪ್ರತೀಕ್ಷಾ ಹೇಳಿದ್ದಕ್ಕೆಲ್ಲಾ ದೀಕ್ಷಾ ತಲೆಯಾಡಿಸಿದ್ದಳು.

ಅವಿ ಬರ್ತಾ ಇರೋದು, ಸೀದಾ ನನ್ನ ಮನೆಗೆ ಬಂದು ನನ್ನಿಂದಲೇ ಎಲ್ಲಾ ವಿವರ ಕೇಳ್ತಾನೆ. ನನ್ನ ಮಾತುಗಳನ್ನು ಮಾತ್ರ ನಂಬುತ್ತಾನೆ ಎನ್ನುವ ಯಾವ ವಿಚಾರವನ್ನೂ ದೀಕ್ಷಾಳಿಗೆ ಗೊತ್ತಾಗದಂತೆ ಎಚ್ಚಿರಿಕೆ ವಹಿಸಿದಳು. ಅವಿ ನನ್ನೊಬ್ಬಳನನ್ನೇ ನಂಬಿರುವುದು, ನಾನವನ ಆಪ್ತ ಗೆಳತಿ. ಬಾಲ್ಯ ಸಖಿ. ನನ್ನನ್ಯಾಕೆ ಈ ಇಕ್ಕಟ್ಟಿನಲ್ಲಿ ಅವಿ ಸಿಕ್ಕಿಸಿಬಿಟ್ಟ. ಮನೋಹರ್ ಅಂತೂ ಅವಿಗೆ ಎಲ್ಲಾ ವಿಷಯ ತಿಳಿಸಿ ಬಿಡ್ತಾರೆ. ನಿನ್ನ ಜೊತೆ ಬಾಳೋ ಅಂತ ಹೆಣ್ಣಲ್ಲ ಅವಳು. ಅವಳನ್ನು ಬಿಟ್ಟು ಬಿಡು ಎಂದೇ ಹೇಳಿಯಾರು. ಛೇ ಅವಿ ಬದುಕಲ್ಲಿ ದೀಕ್ಷಾ ಯಾಕೆ ಬಂದಳೋ, ಮನೂಗೆ ಏನೂ ಬಾಯಿ ಬಿಡದಂತೆ ಹೇಳಿ ಒಪ್ಪಿಸಲು ಹರಸಾಹಸವೇ ಪಡಬೇಕಾಯಿತು. ಅವಿ, ಬಂದವನೇ ಒಂದೆರಡು ದಿನಗಳಲ್ಲಿ ಹೊರಟು ನಿಂತನು. ಮತ್ತೇ ಇಲ್ಲಿಗೆ ಬರುವ ಆಲೋಚನೆ ಇಲ್ಲದ ಅವಿಯನ್ನು ಮತ್ತೆ ನೋಡುವುದು ಯಾವಾಗಲೋ ನೆನೆಸಿಕೊಂಡು ಕಣ್ತುಂಬಿ ಬಂದಿತ್ತು. “ಯಾಕೆ ಅಳ್ತೀಯಾ, ನನ್ನ ಮಗಳನ್ನು ಸೊಸೆ ಮಾಡ್ಕೋ ಅಂತ ಕೇಳೋಕೆ ಮತ್ತೇ ಬಂದೇ ಬತ್ತೀನಿ. ಆಗ
ಬೀಗತ್ತಿ ಗತ್ತು ತೋರಿಸಬೇಡ ಗೊತ್ತಾಯ್ತಾ” ಎನ್ನುತ್ತ ರೇಗಿಸುತ್ತಲೇ ದೀಕ್ಷಾಳೊಂದಿಗೆ ವಿಮಾನ ಏರಿ ಅಲ್ಲಿಂದಲೇ ಕೈ ಬೀಸಿದ. “ಪ್ರತೀಕ್ಷಾ ನೀನು ತಪ್ಪು ಮಾಡಿಬಿಟ್ಟೆ. ದೀಕ್ಷಾಳಂತ ಹೆಣ್ಣಿಂದ ಅವಿಗೆ ಬಿಡುಗಡೆ ಸಿಗೋ ಅವಕಾಶ ತಪ್ಪಿಸಿಬಿಟ್ಟೆ. ಅವನಿಗೆ ಮೋಸ ಮಾಡಿದೆ ನೀನು ವಿಮಾನ ಕಣ್ಮರೆಯಾಗುತ್ತಿದ್ದಂತೆ ಮನೋಹರ್ ಪ್ರತೀಕ್ಷಾಳನ್ನು ತೀವ್ರವಾಗಿ ಆಕ್ಷೇಪಿಸಿದ.”

ಮನೋಹರನ ಅಸಮಾಧಾನ, ಆಕ್ಷೇಪಣೆ ಸರಿ ಎನಿಸಿದರೂ “ಖಂಡಿತಾ ತಪ್ಪು ಮಾಡಿಲ್ಲ ಮನೋಹರ್. ನಾನೇನಾದರೂ ನಿಜವನ್ನೇ ಹೇಳಿ ಬಿಟ್ಟಿದ್ದರೇ ದೀಕ್ಷಾಳ ಬದುಕಿನ ಜೊತೆ ಅವಿ ಬದುಕೂ ಕೂಡ ಛಿದ್ರ ಛಿದ್ರವಾಗುತ್ತಿತ್ತು. ಹೆಣ್ಣಿನ ಮೇಲಿನ ನಂಬಿಕೆಯನ್ನು ಅವಿ ಕಳೆದುಕೊಂಡು ಬಿಡುತ್ತಿದ್ದ. ದೀಕ್ಷಾ ತಪ್ಪು ಮಾಡಿದ್ದಾಳೆ. ಆದರೆ ಮುಂದೆ ಅಂತಹ ತಪ್ಪು ನಡೆಯುವ ಸಂದರ್ಭ ಖಂಡಿತ ಅವಳಿಗೆ ಬರೊಲ್ಲಾ. ಅವಿನಾ ಪ್ರೀತಿಸಿ ಮದುವೆಯಾಗಿದ್ದಾಳೆ. ಅವನಲ್ಲಿ ಪ್ರಾಣನೇ ಇಟ್ಟುಕೊಂಡಿದ್ದಾಳೆ. ಅವಳ ಮೇಲೆ ನನಗೆ ಭರವಸೆ ಇದೆ. ಬದುಕಿನ ಬೆಲೆ ಅವಳಿಗೆ ಅರ್ಥವಾಗಿದೆ. ಅವಿನೇ ಒಂದು ವೇಳೆ ತಪ್ಪು ಮಾಡಿದ್ರೆ ದೀಕ್ಷಾ ಕ್ಷಮಿಸಲಿ ಅನ್ನೋ ಈ ಸಮಾಜ ಹೆಣ್ಣು ತಪ್ಪು ಮಾಡಿದ್ರೆ ಯಾಕೆ ಕ್ಷಮಿಸಲಿ ಅಂತ ಹೇಳೊಲ್ಲ. ಮನು, ಎಡವಿದ ಕಾಲನ್ನು ತುಂಡರಿಸಿ ಬಿಡೋದು ನ್ಯಾಯವಾ, ದೀಕ್ಷಾಳಿಗೆ ತಿದ್ದಿಕೊಳ್ಳೋಕೆ ಒಂದು ಅವಕಾಶ ಸಿಕ್ಕಿದೆ. ನೋಡ್ತಾ ಇರಿ ಇಬ್ಬರೂ ಅನ್ಯೋನ್ಯವಾಗಿ ಬದುಕ್ತಾರೆ” ವಿಶ್ವಾಸದಿಂದ ಹೇಳಿದಳು. ತನ್ನ ವಿಶ್ವಾಸ
ಹುಸಿಯಾಗದೆಂಬ ನಂಬಿಕೆ ಕೂಡ ಅವಳಲ್ಲಿತ್ತು.
*****

ಪುಸ್ತಕ: ದರ್ಪಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೬೧
Next post ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ….

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…