ನವಿಲುಗರಿ ತೊಟ್ಟ ಹಸ್ತದ
ಮೋಹನಾಂಗನ ಕಂಡಾಗಲೆಲ್ಲಾ
ನನಗೋ ನವಿಲಾಗುವ ಬಯಕೆ
ಕುಣಿವ ಮನದ ತಹಬದಿಯ ತಂತು
ಅದೇಕೋ ಬಿದಿರು ಕೋಲಿಗೆ ದಕ್ಕಿದ್ದು.
ಹುಸಿಭರವಸೆಗಳ
ಕಪಟಮಾತುಗಳೊಡಯ
ಅದೆಷ್ಟು ನಂಬುವೆ ನಾನು ನಿನ್ನ.
ಯಮುನೆ ತಟದ ಜುಳುಜುಳು ಗಾನದ
ಹೊರತಾಗಿಯೂ
ಯಾವ ಝರಿಯ ನಾದ
ನಿನ್ನ ಕಾಡುತಿದೆಯೋ
ಅದ ಕೇಳಬೇಕೆನ್ನಿಸುವುದಿಲ್ಲ.
ಗೆಜ್ಜೆ ಹಿಡಿಯುವ ಕಲೆ
ನಿನಗೆ ಕಲಿಸಬೇಕೆಂದಿಲ್ಲ.
ನೀನು ಉಸಿರಿಟ್ಟ ಕಡೆಗೆಲ್ಲಾ ಸುಳಿವ
ನೀಳನಾಸಿಕದ ಗೋಪಿಯರ
ಸಪೂರ ಸೊಂಟದ ಸುತ್ತ
ಬಳಸಿದ ನಿನ್ನ ಕೈಗಳ
ಕಟ್ಟಿಹಾಕಬೇಕೆನ್ನಿಸುವುದಿಲ್ಲ.
ಉನ್ಮತ್ತ ಶೃಂಗದ ಹಾಸು
ಸಿಕ್ಕಿದ ಭ್ರಮೆಯಲ್ಲಿ
ಕಾಡಾನೆ ಮದವೇರಿ ತನ್ನ ಬುಡವನ್ನೇ
ಹೊಸಕಿಹಾಕಿದಂತೆ
ಮನ ಮಾರಿಕೊಂಡಾದ ಮೇಲೆ
ಬೇಲಿ ಗಟ್ಟಿಗೊಳಿಸಬೇಕೆನ್ನಿಸುವುದಿಲ್ಲ.
ಆದರೂ ಸುಖಾತೀಸುಖದ ಹೆಮ್ಮೆ
ಹೊತ್ತ ಮುಖಗಳ ಸವರಿಕೊಂಡು
ಬಂದ ಗಾಳಿ ಕಾರಣವೇ
ಇಲ್ಲದೇ ನನ್ನ ಕೆಣಕುತ್ತದೆ.
ನನ್ನ ಪೇಲವ ಮುಖದ ಮ್ಲಾನತೆಗೆ
ನಿನ್ನ ನಿರಾಕರಣೆ ಕಾರಣ
ಎನ್ನಬೇಕೆನ್ನಿಸುವುದಿಲ್ಲ.
ಮುಂಗುರುಳ ಹೆರಳುಗಳು
ನಿನ್ನ ಕೈ ಬೆರಳ ಸಂದಿಯಲ್ಲಿ
ಹೊರಳಿ ನರಳಿ
ಬೆಳಕಾದವಂತೆ.
ನನಗೇನೂ ಈ ಬಂಧಕ್ಕೆ
ಹೆಸರಿಡಬೇಕೆಂದು ಅನ್ನಿಸುವುದೇ ಇಲ್ಲ.
*****