ಬಹಳ ಹೊತ್ತಿನಿಂದಲೂ ಅವಳು ಆ ಮುರುಕು ಬೆಂಚಿನ ಮೇಲೆಯೇ ಕುಳಿತಿದ್ದಾಳೆ. ಯಾರಿಗೋ ಕಾಯುತ್ತಿದ್ದಳೇನೋ ಕುಳಿತಲ್ಲಿಯೇ ಚಡಪಡಿಸುತ್ತ ದಾರಿಯುದ್ದಕ್ಕೂ ದೃಷ್ಟಿ ನೆಟ್ಟಿದ್ದಾಳೆ. ಕಣ್ಣುಗಳಲಿ ನಿರೀಕ್ಷೆ ಮನದಲಿ ಭಾವನೆಗಳ ಸಮೀಕ್ಷೆ.
ಅದೊಂದು ಪಾರ್ಕಾಗಿದ್ದರೂ ಹಾಳು ಬಿದ್ದಿದೆ. ಹೂ ಗಿಡ, ಹಸಿರು ಮರ, ಚಿಮ್ಮುವ ಕಾರಂಜಿಗಳಿಲ್ಲದೆ ಬೋಳು ಬೋಳಾಗಿದೆ. ಎಂದೋ ಪಾರ್ಕಾಗಿದ್ದ ಕುರುಹು ಎಂಬಂತೆ
ಅಲ್ಲೊಂದು ಇಲ್ಲೊಂದು ಕಲ್ಲು ಬೆಂಚುಗಳು ಒಣಗಿ ನಿಂತಿರುವ ಮರದ ಬೊದ್ದೆಗಳು ಅಂತಹುದೇ ಮರದ ಬೊದ್ದೆಯೊಂದರ ಕೆಳಗಿರುವ ಮುರುಕು ಬೆಂಚಿನ ಮೇಲೆ
ಕುಳಿತ್ತಿದ್ದಾಳೆ.
ನೋಡಿ ನೋಡಿ ಕಣ್ಣು ಸೋತವೇ ವಿನಃ, ಅಲ್ಲಿ ಯಾರ ಆಗಮನವೂ ಆಗಿಲ್ಲ. ಸೋತ ಕಣ್ಣುಗಳನ್ನು ಒಮ್ಮೆ ಮುಚ್ಚುತ್ತಾಳೆ. ಕೆಲ ನಿಮಿಷದಲ್ಲಿ ದಿಗ್ಗನೆ ಕಣ್ತೆರೆದು
ಹಾದಿಯತ್ತ ಮತ್ತೇ ದೃಷ್ಟಿ ತೂರುತ್ತಾಳೆ. ಬೇಸತ್ತು ಎದ್ದು ನಿಲ್ಲುತ್ತಾಳೆ. ಅಲ್ಲಲ್ಲಿ ಬಿದ್ದ ಎಲೆಗಳನ್ನು ನೋಡುತ್ತಾಳೆ. ಶ್ರದ್ಧೆಯಿಂದ ಮಹಾಕೆಲಸ ಎಂಬಂತೆ ಆರಿಸಿ ಬೆಂಚಿನ ಮೇಲೆ ಗುಡ್ಡೆ ಮಾಡುತ್ತಾಳೆ. ಮತ್ತು ಹಾದಿಯತ್ತ ದೃಷ್ಟಿ ನೆಟ್ಟರೆ ಅಲ್ಲೇನಿದೆ? ನಿರಾಶೆಯಿಂದ ನಿಟ್ಟುಸಿರು ಬಿಡುತ್ತ ನಿಧಾನವಾಗಿ ಎದ್ದು ನಿಲ್ಲುತ್ತಾಳೆ. ಏಳಲೋ ಬೇಡವೊ ಎಂದು ಎದ್ದು ಇಡಲೋ ಬೇಡವೋ ಎಂದು ಹೆಚ್ಚೆ ಹಾಕುತ್ತ ಮುಂದೋಗುತ್ತಿದ್ದಾಳೆ.
ಯಾರೀಕೆ? ದಿನಾ ಇಲ್ಲೇಕೆ ಬರುತ್ತಾಳೆ. ಯಾರಿಗಾಗಿ ಕಾಯುತ್ತಿದ್ದಾಳೆ ನಿರಾಶೆಯಿಂದ ಹಿಂತಿರುಗುತ್ತಾಳೆ. ಮತ್ತೇ ಬಂದು ಯಾರನ್ನೂ ನಿರೀಕ್ಷಿಸುತ್ತಾ ಕುಳಿತಿರುತ್ತಾಳೆ. ಮತ್ತೇ ನಿರಾಶೆ. ಮತ್ತೇ ಕಾಯುವಿಕೆ. ಇಡೀ ಪಾರ್ಕಿಗೆ ಬರುವವರು ನಾವಿಬ್ಬರೇ ಇರಬೇಕು. ಈ ಪಾಳು ಬಿದ್ದ ಪಾರ್ಕೆಂದರೆ ನನಗಿಷ್ಟ ಎಷ್ಟೋ ದಿನಗಳಿಂದ ತಾನಿಲ್ಲಿಗೆ ಬರುತ್ತಿದ್ದೇನೆ. ಈಕೆ ಇತ್ತೀಚೆಗಷ್ಟೆ ಇಲ್ಲಿ ಕಾಣಸಿಗುತ್ತಾಳೆ. ಅವಳಿಗೂ ಈ ಪಾರ್ಕೆಂದರೆ ಇಷ್ಟವೇ?
ಇಡೀ ಪಾರ್ಕಿನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದಾನೆ ಎಂಬ ಪರಿವೇ ಇಲ್ಲದೆ, ಕಂಡರೂ ಕಾಣದಂತಹ ನಿರ್ಲಕ್ಷ್ಯ ತೋರಿ, ಯಾರಿಗಾಗಿಯೋ ಕಾಯುತ್ತ ಕಾಯುತ್ತ ಚಡಪಡಿಸುತ್ತಾ, ನಿರೀಕ್ಷೆ ಸುಳ್ಳಾದಾಗ ನಿರಾಶೆಯಿಂದ ಸೋತ ಹೆಜ್ಜೆ ಇರಿಸುತ್ತ ಹೊರಡುವ ಪರಿಯೇ ವಿಚಿತ್ರವೆನಿಸುತ್ತದೆ.
ಹೆಚ್ಚು ಕಡಿಮೆ ಇಬ್ಬರೂ ಒಂದೇ ಸಮಯಕ್ಕೆ ಬಂದಿರುತ್ತೇವೆ. ಆಕೆ ಆ ದ್ವಾರದಿಂದ ಬಂದರೆ ತಾನು ಈ ದ್ವಾರದಿಂದ ಅವಳು ಅದೇ ಜಾಗದಲ್ಲಿ ನಾವು ಇದೇ ಜಾಗದಲ್ಲಿ. ಪ್ರತಿದಿನ ನೋಡಿ ನೋಡಿ ಅವಳ ಕ್ರಿಯೆಗಳೆಲ್ಲ ನನಗೆ ಪರಿಚಿತವಾಗಿ ಬಿಟ್ಟಿದೆ. ನನ್ನ ದೃಷ್ಟಿಯನ್ನು ಸಂಧಿಸಿದಾಗಲೂ ಆಕೆಯಲ್ಲಿ ಯಾವ ಭಾವಗಳನ್ನು ಕಾಣಲಾಗಿರಲಿಲ್ಲ.
ಇಂದು ಬರುವುದೇ ಬೇಡ ಎಂದು ಕೊಂಡಿದ್ದವನು ಮನಸ್ಸು ಬದಲಿಸಿ ನಿತ್ಯ ಬರುವ ಸಮಯಕ್ಕಿಂತ ಕೊಂಚ ಬೇಗನೇ ಬಂದುಬಿಟ್ಟ. ತನ್ನ ಜಾಗದಲ್ಲಿ ಕುಳಿತು ಎದುರಿಗೆ ನೋಟ ಚೆಲ್ಲಿದ. ಆ ಮುರುಕು ಬೆಂಚು ಖಾಲಿಯಾಗಿತ್ತು. ಏಕೋ ಇಡೀ ಪಾರ್ಕು ಖಾಲಿ ಖಾಲಿ ಎಂದು ಭಾಸವಾಗುವುದೇನೋ ಇಡೀ ಪಾರ್ಕೇ ಖಾಲಿ. ಎಂದೂ
ಈ ಖಾಲಿತನದ ಅನುಭವವಾಗಿರಲಿಲ್ಲ.
ಆ ಮೋಟು ಕೂದಲಿನ ಕುದುರೆ ಜುಟ್ಟಿನವಳೇಕೆ ಇನ್ನೂ ಬಂದಿಲ್ಲ. ತನ್ನ ಹೋಲಿಕೆಗೆ ನಗು ಬಂತು. ಗಟ್ಟಿಯಾಗಿ ನಕ್ಕು ಬಿಟ್ಟ. ತಕ್ಷಣವೇ ಸುತ್ತ ನೋಡಿ ಸದ್ಯ
ಯಾರೂ ತನ್ನ ನಗುವನ್ನು ಗಮನಿಸಲಿಲ್ಲವಲ್ಲ ಎಂದುಕೊಂಡ. ಯಾರಾದರೂ ಇದ್ದರಲ್ಲವೇ ಗಮನಿಸಲು. ಅಬ್ಬಾ ಅದೇನು ಧೀಮುಕು ಕುದುರೆ ಜುಟ್ಟಿನವಳಿಗೆ.
ತಿಳಿಯಾಗಿಲ್ಲದ ಬಣ್ಣ, ಸದಾ ಬಿಗಿದಿರುವ ಮೋರೆ, ಥೂ ಇಂತವಳಿಗಾಗಿ ಅದ್ಯಾವ ಮಹಾಪುರುಷ ಕಾಯುತ್ತಿದ್ದಾನೋ. ಪಾಪ ದಿನವೂ ಕಾಯುತ್ತಿದ್ದಾಳೆ. ಕೈಕೊಟ್ಟನೋ ಏನೋ ಅವಳಿಗೆ ಹಾಗೆ ಆಗಬೇಕು. ಜಂಬದ ಕೋಳಿ. ನನ್ನನ್ನೇ ಅಲಕ್ಷಿಸುತ್ತಿದ್ದಾಳೆ. ಕಡೇ ಪಕ್ಷ ತನ್ನತ್ತ ನೋಡುವ ಸೌಜನ್ಯವೂ ಬೇಡವೇ? ನಾನೇಕೆ ಅವಳನ್ನು ನೋಡಬೇಕು ಇವತ್ತೇನಾದ್ರೂ ಬಂದರೆ ಅವಳ ಕಡೆ ನೋಡಲೇ ಬಾರದು.
ತನ್ನವಳ ನೆನಪಾಯಿತು. ನೆನಪಾದೊಡನೆ ಮೈಮನದಲ್ಲೇನೋ ಸುಗಂಧ ಪರಿಮಳ, ಇಡೀ ತನುಮನವನು ಆವರಿಸಿದ ತನ್ಮಯತೆ, ಆಹ್ಲಾದಕರ ಉನ್ಮಾದತೆ ವಾಹ್ ಯಾಕಿನ್ನು ಬರಲಿಲ್ಲ. ನನ್ನ ಈ ಕಾಯುವಿಕೆ ಆಕೆಗೆ ಆರ್ಥವಾಗುತ್ತಿಲ್ಲವೇ, ಅರ್ಥವಾದರೂ ಆಟವಾಡಿಸುವ ಬಯಕೆಯೇ, ಈ ಕಾಯುವಿಕೆಯಿಂದ ಪ್ರೇಮದ, ನಿರೀಕ್ಷೆಯ ಕಾತುರದ ಹಣ್ಣು ಮಾಗುತ್ತದೆ ಅಲ್ಲವೇ.
(ಹಾಲಿನಲಿ ಚಂದನ ಬೆರೆತ ಹೊಂಬಣ್ಣ, ಕಣ್ಣುಗಳ ಪ್ರಖರತೆಗೆ ಎದುರಿಗಿದ್ದವರ ತಲ್ಲಣ, ಮಾತು ಮಾತಿಗೂ ಎಸೆಯುವ ನಗೆಯ ಹೂಬಾಣ ಆ ಬಿಂಕ ಬಿನ್ನಾಣ, ಆ ನೀಳ ಜಡೆ, ಮುಡಿ ತುಂಬಾ ಮಲ್ಲೆ ಮಾಲೆ. ಹೃದಯವ ಬಡಿತಕ್ಕೆ ಸ್ಪಂದಿಸುವ ಮೃದು ನಡೆ ನುಡಿ ದಣಿದು ಬಂದವನಿಗೆ ತೋಳು ನೀಡಿ ಆಧರಿಸಿ, ಸುಖದ ಉತ್ತುಂಗ ಶಿಖರಕ್ಕೇರಿಸುವ ರಸಿಕತೆ ಈ ಪ್ರಪಂಚದಲ್ಲಿಯೇ ಅವಳಂತಹ ಇನ್ನೊಂದು ಹೆಣ್ಣು ಕಾಣಸಿಗದು ತನ್ನವಳಲ್ಲಿ ಈ ಗಂಟುಮೋರೆಯ ಮೋಟು ಜುಟ್ಟಿನವಳಲ್ಲಿ)
ಅರೆ ಯಾವಾಗಲೋ ಬಂದು ತನ್ನ ಮುರುಕು ಬೆಂಚಿನ ಮೇಲೆ ಕುಳಿತು ಬಿಟ್ಟಿದ್ದಾಳೆ. ಥೂ ಈ ಸಾಧಾರಣ ಹೆಣ್ಣಿನ ಗೊಡವೆಯೇಕೆ ಎಂದುಕೊಂಡರೂ ಅಪ್ರಯತ್ನವಾಗಿ ಅವನ ದೃಷ್ಟಿ ಅವಳೆಡೆಗೆ ಹರಿಯಿತು. ನಿಧಾನವಾಗಿ ಎದ್ದು ಅವಳ ಬೆಂಚಿನ ಇನ್ನೊಂದು ತುದಿಗೆ ಕುಳಿತಿದ್ದು ಯಾವುದೂ ಅರಿಯದಂತೆ ಎತ್ತಲೋ ಧ್ಯಾನ, ಎಲ್ಲೋ ಕಳೆದುಹೋಗಿದ್ದಾಳೆ. ಮೊಗದಲ್ಲಿ ಕಿರುನಗೆ ಯಾವುದೋ ಸಂಭ್ರಮದಲ್ಲಿ ತೇಲಿ ಹೋಗುತ್ತಿದ್ದಾಳೆ. ತುಟಿಗಳಲ್ಲಿ ಅದೇನೋ ರಾಗ, ಮೆಲ್ಲನೆ ಕೆಮ್ಮಿದ.
ತಟ್ಟನೆ ಇಹಕ್ಕೆ ಬಂದವಳೇ ಅವನನ್ನು ನೋಡಿಯೂ ನೋಡದಂತೆ ಎದ್ದು ನಿಂತಳು. ಅವನ ಅಹಂಗೆ ಪೆಟ್ಟೆನಿಸಿತು. ಸೆಟೆದು ಕುಳಿತ. ಪ್ರಪಂಚದ ಯಾವ ಹೆಣ್ಣಾದರೂ ತನ್ನತ್ತ ಅರೆಕ್ಷಣವಾದರೂ ದೃಷ್ಟಿ ನಿಲ್ಲಿಸುವಂತಹ ವ್ಯಕ್ತಿತ್ವ ತನ್ನದು. ಆದರೆ ಇವಳು… ಇವಳು…. ಏನಿವಳ ಉದ್ಧಟತನ, ತನ್ನ ರೂಪಕ್ಕೆ ಸ್ವಲ್ಪವೂ ಸ್ಪರ್ಧಿಸಲಾರದ ಅವಳು, ಒಮ್ಮೆ ಕೂಡ ತನ್ನತ್ತ ನೋಟ ಹರಿಸಲಾರಳಲ್ಲ. ನೋಟ ಹರಿಸಿದರೂ ಅಲ್ಲೊಂಮ ದಿವ್ಯ ನಿರ್ಲಕ್ಷ್ಯತನ.
ಛೇ ಕುಳಿತಲ್ಲಿಯೇ ಚಡಪಡಿಸಿದ. ಅವನೂ ಮಾತನಾಡಲಿಲ್ಲ. ಇವಳೂ ಮಾತನಾಡಲಿಲ್ಲ. ಬಿಗುಮಾನದ ಅಡ್ಡಗೋಡೆ ತಡೆಯಿತು ಅವನನ್ನು.
ಅವಳು, ಅವಳ ಭಾವನೆಗಳೂ ಒಂದೂ ಅರ್ಥವಾಗಲಿಲ್ಲ. ಇಲ್ಲಿಗ್ಯಾಕೆ ಬರುತ್ತಾಳೆ, ಬಂದು ಮನಸ್ಸಿನ ಭಾವನೆಗಳನ್ನು ಕದಡುತ್ತಾಳೆ. ಇವಳಿಲ್ಲದೆ ಹೋಗಿದ್ದರೆ ತನ್ನವಳ ಕನಸಿನಲ್ಲಿ ಮುಳುಗಿ ಹೋಗಿರುತ್ತಿದ್ದೆ. ಹಾಳಾದವಳು ಎಲ್ಲವನ್ನು ಹಾಳು ಮಾಡಿ ಮನಸ್ಸಿನ ಸಮಾಧಾನವನ್ನು ಕೆದಕಿ ಬಿಟ್ಟಳು. ಇಲ್ಲೇಕೆ ಬಂದಿದ್ದೆ ಎಂಬುದನ್ನು ಮರೆತು ತಲೆಕೆಟ್ಟವನಂತೆ ದಡ ದಡ ಹೊರಡುತ್ತ ಸುತ್ತ ನೋಡಿದರೆ ಅವಳು ಯಾವಾಗಲೋ ಹೋಗಿ ಬಿಟ್ಟಿದ್ದಾಳೆ.
ಅಂದು ಸಂಜೆ ಕಾಲು ಅವನಿಗರಿವಿಲ್ಲದಂತೆ ಪಾರ್ಕೊಳಗೆ ಎಳೆದೊಯ್ದವು. ನಿರೀಕ್ಷೆಯಂತೆ ಅವಳು ಅಲ್ಲಿಯೇ ಕುಳಿತಿದ್ದಾಳೆ. ಮೊದಲಿನ ನಿರಾಶೆ ಕಾಣುತ್ತಿಲ್ಲ. ಕನಸು ಕಾಣುವ ಕಣ್ಣುಗಳಲ್ಲಿ ನವಿಲಿನ ನರ್ತನ. ತುಟಿಗಳಲ್ಲಿ ಗುನು ಗುನು ಹಾಡು. ಯಾವ ರಾಗವೋ ಅವಳ ಸಂತೋಷವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ತನಗೆ ದೊರೆಯದ ಸಂತೋಷ, ತನಗೆ ದೊರೆಯದ ಅದು ಅವಳಿಗೇಕೆ? ಈರ್ಷೆ ಕ್ಷಣದಲ್ಲಿ ತಲೆದೋರಿತು. ಸೀದಾ ಬಂದು ಅವಳ ಬೆಂಚಿನ ತುದಿಯಲ್ಲಿ ಕುಳಿತ.
ಕಿರುಗಣ್ಣಿನಿಂದ ಅವನೆಡೆ ನೋಡಿದಳು. ಮಿಂಚು ಹರಿದಂತಾಯ್ತು. ಮೈ ಬಿಸಿಯಾಯ್ತು. ಇಂತಹ ನೋಟ ಎಂದೂ ಬೀರಿರಲಿಲ್ಲ. ಮೆಲ್ಲನೆ ಕಿರುನಗೆ ಬೀರಿದ.
ಅವಳೂ ನಕ್ಕಳು, ಬೆಳ್ಳನೆ ಹಲ್ಲು ಮಿಂಚಿದವು.
‘ಮೊದ್ಲೇ ಬಂದು ಬಿಟ್ಟಿದ್ದಿರಾ’ ಮೊದಲ ಮಾತು.
“ಹೂಂ, ನೀವ್ಯಾಕೆ ಲೇಟು” ಇನಿದನಿ, ಪರವಾಗಿಲ್ಲ ಧ್ವನಿ ಇಂಪಾಗಿದೆ.
ದಿನಾ ನನ್ನಂತೆ ಇವಳೂ ಗಮನಿಸುತ್ತಾ ಇದ್ದಾಳೆ. ಖುಷಿ ಆನಿಸಿತು.
ಮತ್ತೆಲ್ಲೋ ಕಳೆದು ಹೋಗುತ್ತಿದ್ದಾಳೆ ಎನಿಸಿ ಅವಳನ್ನ ನೋಡತೊಡಗಿದೆ.
“ಏನ್ರಿ” ಎಚ್ಚರಿಸಿದ. “ಯಾವ ಲೋಕಕ್ಕೆ ಹೋಗಿದ್ದಿರಿ”.
“ಹಾಂ”, ನನ್ನವರನ್ನು ನೆನಸಿಕೊಳ್ತ ಇದ್ದೆ. ತುಂಬಾ ಒಳ್ಳೆಯವರು ಕಣ್ರಿ. ನನ್ನ ಹಾಡು ಅಂದ್ರೆ ಅವರಿಗೆ ತುಂಬಾ ಇಷ್ಟವಾಗಬೇಕು. ನಾ ಹಾಡ್ತಾ ಇದ್ರೆ, ನನ್ನೆದುರು ಕುಳಿತು ಸ್ಫೂರ್ತಿಯಾಗಬೇಕು, ನಾನು ಹಾಡಿ ಹಾಡಿ ದೊಡ್ಡ ಗಾಯಕಿ ಆಗಿ ಹೆಸರು ತಗೋಬೇಕು ಅವರಿಗಾಗಿ ದಿನಾ ಕಾಯ್ತಾ ಇದ್ದೀನಿ, ಯಾವಾಗ ಬರ್ತಾರೋ” ಆಸೆ ಅವರಿಗಿರಬೇಕು. ದೀರ್ಘ ಉಸಿರು ಬಿಟ್ಟಳು ನಿರಾಶೆಯಿಂದ.
ಓಹ್ ನನ್ನ ಕೇಸೇ ಇದು. ನನ್ನವಳಿಗಾಗಿ ನಾನು ಕಾಯುತ್ತಿದ್ದರೆ, ಅವಳೂ ತನ್ನವನಿಗಾಗಿ ಕಾಯುತ್ತಿದ್ದಾಳೆ. ಅವಳು ದಿನಾ ಬರ್ತಾಳೆ. ಇವನೂ ದಿನ ಬರ್ತಾನೆ ಪಾಳು ಬಿದ್ದ ಪಾರ್ಕು ಕೂಡ ಇವರಿಗಾಗಿ ಕಾಯ್ತ ಇರುತ್ತೇ.
ದಿನಗಳು ಕಳೆದಂತೆ ತಾನು ಕಾಯುತ್ತಿದ್ದ ತನ್ನಾಕೆ ಇವಳೇ ಎಂದು ಅವನಿಗೆ ಅನಿಸತೊಡಗಿದಂತೆ, ಅವಳಿಗೂ ತನ್ನವನು ಇವನೇ ಎನಿಸತೊಡಗಿತು. ಪರಿಣಾಮವೇ ಇವರಿಬ್ಬರು ಈಗ ಗಂಡ ಹೆಂಡತಿ.
ಒಂದೆರಡು ವರ್ಷ ಕಳೆದಿವೆ. ಮೋಟು ಜಡೆಯ, ಗಂಟು ಮೋರೆಯ ಅವಳು ಇಡೀ ಅವನ ಬದುಕಾಗಿದ್ದಾಳೆ. ಇವಳಂತಹ ಹೆಣ್ಣು ಮತ್ತೊಬ್ಬಳಿಲ್ಲ ಎನ್ನುತ್ತಲೇ ಅವಳ
ಹಾಡನ್ನು ಸಹಿಸುತ್ತಾನೆ.
ತನ್ನ ಹಾಡಿಗೆ ಸ್ಪೂರ್ತಿಯಾಗದಿದ್ದರೂ, ದೊಡ್ಡ ಗಾಯಕಿಯಾಗುವ ಎಲ್ಲಾ ಕನಸುಗಳನ್ನು ಮರೆತು ಅವನಲ್ಲಿಯೇ ಉಸಿರ ಇರಿಸಿಕೊಂಡಿದ್ದಾಳೆ. ಸ್ಫೂರ್ತಿಗಾಗಿ ಕಾಯದೆ
ಹಾಡುತ್ತಲೇ ಇರುತ್ತಾಳೆ.
ಒಮ್ಮೊಮ್ಮೆ “ಮೋಟು ಜಡೆ, ಗಂಟುಮೋರೆಯವಳೇ ನೀ ಎಲ್ಲಿದ್ದೆ ನನ್ನ ಬದುಕೇ ಹಾಳಾಯಿತಲ್ಲೇ, ನೀ ಹಾಡಬೇಡ ನನ್ನೆದಿರು” ಕೂಗಾಡಿ ಹಾರಾಡಿ ನೀಳ ಜಡೆ, ಮೊಲ್ಲೆ
ಮಾಲೆಯ ಕೇಸರಿ ಬೆರೆಸಿದ ಹೊಂಬಣ್ಣದ ಕನಸಿನ ಕನ್ಯೆ ನೆನೆಸಿಕೊಂಡು ಹಲುಬುತ್ತಾನೆ ಅವಳ ಹಾಡನ್ನು ದ್ವೇಷಿಸುತ್ತಾನೆ. ಅವಳನ್ನೂ ದ್ವೇಷಿಸುತ್ತಾನೆ. ಸಿಟ್ಟಿಳಿದ ಕೂಡಲೇ ಸಾರಿ ಎನ್ನುತ್ತಾನೆ.
ಸಂಜೆಯಾಗುತ್ತಿದ್ದಂತೆಯೇ ಇಬ್ಬರೂ ಅದೇ ಪಾಳು ಬಿದ್ದ ಪಾರ್ಕಿಗೆ ಬರುತ್ತಾರೆ ಅದೇ ಮುರುಕು ಬೆಂಚಿನ ಮೇಲೆ ಕೂರುತ್ತಾರೆ. ಅವಳು ಸಣ್ಣಗೆ ಯಾವುದೋ ರಾಗವನ್ನು
ಗುನು ಗುನು ಎಂದು ಗುನುಗುತ್ತಿದ್ದರೇ, ಆತ ಮೈ ಮರೆತು ಯಾವುದೋ ಕನಸಿನಲ್ಲಿ ತೇಲುತ್ತಿರುತ್ತಾನೆ. ಕತ್ತಲೆ ಆವರಿಸುತ್ತಿದ್ದಂತೆಯೇ ಅವನನ್ನು ಎಚ್ಚರಿಸುತ್ತಾಳೆ. ಇಬ್ಬರೂ ಹೆಜ್ಜೆ ಹಾಕುತ್ತಾ ಪಾರ್ಕಿನಿಂದ ಹೊರಬೀಳುತ್ತಾರೆ.
“ಮಗುಗೇ ಜ್ವರ ಇದ್ದರೂ, ನೀ ಹಾಡೋಕೆ ಹೋಗ್ಲೇ ಬೇಕಾ, ನೀ ಹೋಗಬೇಡ” ಜಬ್ಬರಿಸುತ್ತಿದ್ದರೇ, ಅವನು,
“ಇವತ್ತು ನೀವೇ ನೋಡಿಕೊಳ್ಳಿ”, ತಣ್ಣಗೆ ನುಡಿದು ಕಣ್ಣಿನಲ್ಲಿ ನೀರು ತುಂಬಿಸಿಕೊಂಡೇ ಹೊರಗಡಿ ಇಡುತ್ತಾಳೆ ಅವಳು.
ಅಂದೆಲ್ಲ ಹೊರ ಹೋಗದೆ ಮಗುವಿನ ಪಕ್ಕವೇ ಇದ್ದು ಬಿಡುತ್ತಾನೆ. ಕುದಿಯುತ್ತಿದ್ದ ಮನಸ್ಸು ಮಗುವಿನ ಜ್ವರ ಇಳಿದಂತೆ ತಣ್ಣಗಾಗ ತೊಡಗಿತು. ಛೇ ತಾನು ಬೆಳಗ್ಗೆ ರೇಗಬಾರದಿತ್ತು. ಹಾಡುವ ಅವಳ ಸಂತೋಷವನ್ನು ತಾನೇಕೆ ಕಸಿಯಬೇಕು, ಹಾಡಿಕೊಳ್ಳಲಿ ಪಾಪ. ಅವಳ ಬಗ್ಗೆ ಪರಿತಾಪ ಪಟ್ಟನು.
ತಾನೊಬ್ಬಳೇ ಮಗುವನ್ನು ನೋಡಿಕೊಳ್ಳಬೇಕೇ, ಅಪ್ಪನಾಗಿ ಅವನಿಗೆ ಜವಾಬ್ದಾರಿ ಇಲ್ಲವೇ, ನೋಡಿಕೊಳ್ಳಲಿ. ಹಟದಿಂದಲೇ ಹೊರ ಬಂದಿದ್ದವಳಿಗೆ ನೆಮ್ಮದಿಯಾಗಿ
ಇರಲಾಗಲೇ ಇಲ್ಲ. ಅವನ ಕೋಪ ಒಂದೆಡೆಯಾದರೆ, ಮಗುವಿನ ಆರೋಗ್ಯ ಒಂದೆಡೆ. ಇವೆರಡು ಸೇರಿ ಹಾಡುವ ಉತ್ಸಾಹವೇ ಬತ್ತಿ ಹೋಯಿತು. ಹೇಗೋ ಹಾಡಿ ಮನೆ
ಸೇರಿಕೊಂಡರೆ, ಮಗು ನೆಮ್ಮದಿಯಾಗಿ ಮಲಗಿದೆ. ಪಕ್ಕದಲ್ಲಿಯೇ ಪುಸ್ತಕ ಹಿಡಿದು ಮಲಗಿದ್ದ ಅವನು ಅವಳನ್ನು ಕಂಡೊಡನೆ “ಹೇಗೆ ಹಾಡಿದೆ, ಚೆನ್ನಾಗಿ ಬಂತಾ” ಕೇಳುತ್ತಿದ್ದರೆ ಅಚ್ಚರಿಯಿಂದ ಅವನೆಡೆ ನೋಡಿಯೇ ನೋಡಿದಳು. ಸದಾ ಈತ ಹೀಗೆಯೇ ಇರಬಾರದೇ ಎಂದುಕೊಳ್ಳುತ್ತಲೇ ಮಗುವಿನ ಹಣೆ ಮುಟ್ಟಿ ನೋಡಿ ಜ್ವರ ಇಲ್ಲದ್ದನ್ನು ಕಂಡು ನೆಮ್ಮದಿಯಾಗಿ ಉಸಿರು ಬಿಟ್ಟಳು.
ಹೊರ ಹೋಗುವ ಸಿದ್ಧತೆ ನಡೆಸುತ್ತಿದ್ದವನನ್ನು ಕಂಡು “ಏನ್ರಿ ನಾನು ಬಂದ ಕೂಡಲೇ ಹೊರಗೆ ಹೋಗಬೇಕಾ” ರಾಗ ತೆಗೆದಳು. “ಬೆಳಗ್ಗೆಯಿಂದ ನಿನ್ನ ಮಗನ್ನ ನೋಡಿಕೊಂಡು ಸಾಕಾಗಿದೆ. ಪಾರ್ಕಿಗಾದ್ರೂ ಹೋಗಿ ಬರ್ತೀನಿ” ಚಪ್ಪಲಿ ಮೆಟ್ಟಿಕೊಂಡು ಹೊರ ನಡೆದದ್ದನ್ನು ಕಂಡು ವಿಚಿತ್ರ ಸ್ವಭಾವದವರು, ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರಲ್ಲ ಪುಣ್ಯಾತ್ಮ” ಮಗುವಿನ ಪಕ್ಕ ಉರುಳಿಕೊಂಡಳು. “ಎಲ್ಲಿ ಜಾರಿತೋ ಮನಸ್ಸು, ಎಲ್ಲೇ ಮೀರಿತೋ” ಎಲ್ಲಿಂದಲೋ ತೇಲಿ ಬರುತ್ತಿದ್ದ ಹಾಡಿಗೆ ಮೈಮರೆತಳು.
*****
ಪುಸ್ತಕ: ದರ್ಪಣ