ಕರ್ನಾಟಕಾಂಬೆಯ ಕನ್ನಡ ಮಾತೆಯೆ
ಎಬ್ಬಿಸಮ್ಮ ತಾಯೆ ಎಬ್ಬೀಸೆ
ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ
ಹಿಂದಿನ ಕವಿಗಳ ಹಿಂದಿನ ಸಿರಿಗಳ
ಬಾಯ್ತುಂಬ ಹೊಗಳುತ್ತ ಮಲಗಿಹರ
ಇಂದಿನ ಪರಿಗಳ ಮುಂದಿನ ಗುರಿಗಳ
ಕೈಯಿಂದ ಮಾಡದೆ ಕುಳಿತಿಹರ
ಪಂಪ ರನ್ನ ಕುಮಾರವ್ಯಾಸ ಹರಿಹರರೆಂದು
ಜಪಮಾಡಿ ಕುಳಿತರೆ ಬಂದಿತೇನು?
ನೂರಾರು ಪಂಪರು ರನ್ನರು ಬರುವಂತೆ
ಸಾಹಿತ್ಯ ಬಳ್ಳಿಯ ಹಬ್ಬಿಸಮ್ಮಾ ||೧||
ಬಸವಣ್ಣ ಅಲ್ಲಮ ಅಕ್ಕಮಹಾದೇವಿ
ಹೆಸರಾಗಿ ಕೇವಲ ಉಳಿದರೇಕೆ?
ಕನಕ ಪುರಂದರ ಸರ್ವಜ್ಞ ಸಂತರು
ಕನಸಿನ ಚಿತ್ರಗಳಾದರೇಕೆ?
ಪುಲಿಕೇಶಿ ಹೊಯ್ಸಳ ಕೃಷ್ಣ ಟಿಪ್ಪುವಿನ
ನೆಲದಲ್ಲಿ ಕಲಿತನ ಮಳುಗದಂತೆ
ಚೆನ್ನಮ್ಮ ಮಲ್ಲಮ್ಮ ಹೊನ್ನಮ್ಮರ ಮನೆಯಲ್ಲಿ
ಚಿನ್ನದ ಸ್ತ್ರೀಯರುಅಳಿಯದಂತೆ ||೨||
ಹಳೆಬೀಡು ಬೇಲೂರು ಹಾಳಾದ ಹಂಪೀನ
ಗೊಮ್ಮಟ ಗುಮ್ಮಟ ನೋಡಿ ನೋಡಿ
ಮತ್ತೆ ಅಯ್ಯೋ ಆಹಾ ಎಂದರೆ ಬಂತೇ
ಕಲೆಯೆಲ್ಲ ಶಿಲೆಯಾಗಿ ಹೋಯಿತೇನು?
ರಾಜಕಾರಣದಿಸ್ಪೀಟಾಟದೆಲೆಗಳಾಗಿ
ನರಸತ್ತು ನರಳುವರನೆಬ್ಬಿಸಮ್ಮಾ
ಸಾಜ ಸ್ವಂತಿಕೆಯನ್ನು ಮರೆತ ಮಂದೆಗಳನ್ನು
ತಮ್ಮ ತಾವರಿವಂತೆ ಉಬ್ಬಿಸಮ್ಮಾ ||೩||
ಮ್ಮಸೂರಿನಾ ಬದಲು ಕರ್ನಾಟಕಾಯಿತು
ಮಾಸಿದ ಜನಮನ ತೊಳೆವರಾರು
ಒಳಗಿನಾತ್ಮವ ಬಿಟ್ಟು ಹೊದಿಕೆಯ ಹೆಸರಲ್ಲಿ
ನುಸುಳುವ ನುಸಿಗಳ ಕಳೆವರಾರು
ಹಳೆಯ ಜೀವಕೆ ಹೊಸ ಚೇತನ ನೀ ತುಂಬು
ಒಳಿತಾಗಿ ಬಾಳಲು ಹರಸು ತಾಯಿ
ಸಂಸ್ಕೃತಿ ಹಳತೀದೆ ಹೊಸ ನೀರು ಬರಲಮ್ಮ
ಸಿರಿಗನ್ನಡಂಗೆಲ್ಗೆ ಮೆರೆಸು ತಾಯಿ ||೪||
*****