ನಿನ್ನದು ಆ ತೀರ – ನನ್ನದು ಈ ತೀರ.
ನಟ್ಟ ನಡುವಿನ೦ತರ- ತೊರೆಯ ಅಭ್ಯಂತರ,
ಕಿರಿದಹುದು, ಕಿರಿದಲ್ಲ ; ಹಿರಿದಲ್ಲ, ಹಿರಿದಹುದು ;
ಕಿರು ತೊರೆಯ ಅಂತರ ಕಡಲಿನಂತರ!
ಹರಿಯುವಲೆಗಳಂತೆನ್ನ ಮನಸಿನಾತುರ
ಹರಿಯುತಿದೆ, ಕೊರೆಯುತಿದೆ ಒಲವ ಕಾತರ.
ಮೌನದಲ್ಲಿ ಮರುಗಿಸಿದೆ ಹೃದಯದ ಭಾರ.
ಕಿರು ತೊರೆಯ ಅಂತರ ಕಡಲಿನಂತರ!
ಮುಗಿಲಿನ ಮಡಲಿನಲ್ಲಿ ಮೋಡದ ಮರೆಗೆ
ಮಿಣುಕುತಿರುವ ತಾರೆಗಿಂತ ದೂರ ಆಚೆಗೆ
ಸಾಗುವಾಸೆ ಆಗಿಹೋಯ್ತು, ಎದೆಯ ಸುಡುಹೊಗೆ.
ಕಿರು ತೊರೆಯ ಅಂತರ ಕಡಲಿನಂತರ!
ಈ ತೀರ, ಆ ತೀರ, ಎಂದೆಂದು ಬಲು ದೂರ.
ಸಂಧಿಸಲು ಹವಣುಂಟು, ನಟ್ಟ ನಡುವಿನಂತರ
ಬಲು ಕಿರಿದು, ನಾಲ್ಕು ಗೇಣು; ಹವಣೆಲ್ಲ ಹುಡಿದಾರ.
ಕಿರು ತೊರೆಯ- ಕಡಲಿನಂತರ!
*****