ಇದು ಅಲ್ಲಮನ ಮಾತು. ನಮ್ಮ ಜನ ಆಚಾರದ ಬಗ್ಗೆ ಮಾತಾಡುತ್ತಾರೆ. ರೀತಿ ಅನ್ನುತ್ತಾರೆ. ರಿವಾಜು ಅನ್ನುತ್ತಾರೆ. ಪದ್ದತಿ ಅನ್ನುತ್ತಾರೆ. ಆದರೆ ದಿನ ನಿತ್ಯದ ಆಡು ಮಾತಿನಲ್ಲಿ ಸಂಸ್ಕೃತಿ ಅನ್ನುವ ಮಾತನ್ನು ಬಳಸುವುದಿಲ್ಲ. ಸಂಸ್ಕೃತಿ ಅನ್ನುವುದು ಸಂಸ್ಕೃತದ ಪದವೂ ಅಲ್ಲ. ಕುತೂಹಲವಿದ್ದರೆ ಸಂಸ್ಕೃತ ನಿಘಂಟುಗಳನ್ನು ನೋಡಿ, ಶಬ್ದಾರ್ಥ ಕಲ್ಪದೃಮ ಎಂಬ, ಪ್ರತಿ ಸಂಸ್ಕೃತ ಪದವೂ ಬಳಕೆಯಾಗಿರುವ ನಿದರ್ಶನಗಳನ್ನೂ ಒಳಗೊಂಡಿರುವ ಮಹಾ ಕೃತಿಯನ್ನೆ ನೋಡಿ, ಎಲ್ಲೂ ಸಂಸ್ಕೃತಿ ಎಂಬ ಪದ ಕಾಣುವುದಿಲ್ಲ. ಕನ್ನಡದಲ್ಲಂತೂ ಸಂಸ್ಕೃತಿ ಎಂಬ ಪದ ಬಳಕೆಯಾಗತೊಡಗಿದ್ದು, ನನಗೆ ಕಂಡಂತೆ, ೧೯೧೫ರ ಸುಮಾರಿನಲ್ಲಿ. ರೆವರೆಂಡ್ ಫಾದರ್ ಚನ್ನಪ್ಪ ಉತ್ತಂಗಿ ಅವರು ಬರೆದ ಬನಾರಸ್‌ಗೆ ಬೆತ್ಲಹೇಮ್‌ನ ವಿನಂತಿ ಎಂಬ ಪುಸ್ತಕದಲ್ಲಿ. ನಾವು, ಅಂದರೆ ಶಾಲೆ ಕಾಲೇಜು ಕಲಿತವರು ಸಂಸ್ಕೃತಿ ಎಂಬ ಮಾತನ್ನು ಕಲ್ಪಿಸಿಕೊಂಡಿದ್ದೇವೆ.
ಯಾವುದೇ ಪರಿಕಲ್ಪನೆಯು ಕಲ್ಪನೆಯೇ ಹೊರತು ವಾಸ್ತವವಲ್ಲ. ಆದರೂ ಚರ್ಚೆಗೆ ಅನುಕೂಲವಾಗಲೆಂದು, ನಮ್ಮ ನಮ್ಮ ತಿಳಿವಳಿಕೆಯನ್ನು ಪರಸ್ಪರ ಹಂಚಿಕೊಳ್ಳಲೆಂದು ಇಂಥ ಕಲ್ಪನೆಗಳೂ ಬೇಕು ಎನ್ನುವುದೂ ನಿಜ. ಆದರೆ ಸಂಸ್ಕೃತಿ ಎಂಬುದು ಒಂದು ಇದೆ, ಅದು ‘ಖಚಿತ’ವಾದದ್ದು, ‘ಸ್ಪಷ್ಟ’ವಾದದ್ದು ಎಂದು ನಂಬುವುದು ಮಾತ್ರ ತಪ್ಪು. ಏಕೆಂದರೆ ನಾವು ಯಾವುದನ್ನು ಸಂಸ್ಕೃತಿ ಎಂದು ತಿಳಿದಿದ್ದೇವೆಯೋ ಅದು ನಮ್ಮ ಎಳವೆಯಿಂದಲೂ ನಮ್ಮ ನಮ್ಮ ಸುಪ್ತ ಮನಸ್ಸಿನಲ್ಲಿ ಸಂಗ್ರಹಗೊಂಡಿರುವ ನೆನಪುಗಳ, ಹೇಳಿಕೆಗಳ ಮೊತ್ತವಷ್ಟೇ. ಈ ನೆನಪು, ಈ ಹೇಳಿಕೆಗಳು ನಮ್ಮ ವರ್ತನೆಗಳನ್ನೂ ಆಚರಣೆಗಳನ್ನೂ ನಿರ್ಧರಿಸುತ್ತ ಇರುತ್ತವೆ. ನಮಗೆ ಸಂಸ್ಕೃತಿ ಅಧ್ಯಯನಕ್ಕೆ ದೊರೆಯುವುದು ಇಂಥ ಆಚರಣೆಗಳು, ಆಚರಣೆಯ ದಾಖಲೆಗಳು ಮಾತ್ರವೇ ಹೊರತು ಆಚರಣೆಯ ಹಿಂದಿರುವ, ಸುಪ್ತ ಮನಸ್ಸಿಗೆ ಸೇರಿರುವ ವಿಚಾರಗಳಲ್ಲ. ಅದಕ್ಕೇ ಅಲ್ಲಮ ಆಚರಣೆಯನೇ ಕಂಡರು, ವಿಚಾರವನ್ನು ಕಾಣರು ಅಂದದ್ದು.
ಸಂಸ್ಕೃತಿ ಖಚಿತವಾದದ್ದು, ಸುಸ್ಪಷ್ಟವಾದದ್ದು, ಅದೇನೆಂದು ವಿವರಿಸುವ ಅಗತ್ಯವಿಲ್ಲ ಎಂಬಂತೆ ದೊಡ್ಡ ದೊಡ್ಡ ಮಾತುಗಳನ್ನು ಕಿಂಚಿತ್ತೂ ಸಂಕೋಚವಿಲ್ಲದೆ, ಅನುಮಾನವಿಲ್ಲದೆ, ಆಡಿಬಿಡುತ್ತೇವೆ.
ಸಂಸ್ಕೃತಿ ಎಂಬ ಪದವನ್ನು ನಾವು ಯಾವ ಯಾವ ಸಂದರ್ಭದಲ್ಲಿ ಬಳಸುತ್ತೇವೆ? ನಾವು ಯಾರನ್ನು ಅನ್ಯರು ಎಂದು ತಿಳಿದಿದ್ದೇವೆಯೋ, ಯಾವುದೆಲ್ಲ ನಮ್ಮ ಪರಿಚಿತ ಬದುಕಿಗೆ ಅಪಾಯಕಾರಿ ಎನ್ನಿಸುತ್ತದೆಯೋ ಅವನ್ನು ನಿರಾಕರಿಸುವುದಕ್ಕೆ ವಿರೋಧಿಸುವುದಕ್ಕೆ ‘ಅದು ನಮ್ಮ ಸಂಸ್ಕೃತಿ ಅಲ್ಲ’ ಅನ್ನುತ್ತೇವೆ. ನಾವು ಸರಿ ಎಂದುಕೊಂಡದ್ದನ್ನು ಸಮರ್ಥಿಸುವುದಕ್ಕೆ, ಮಾಡುತ್ತಿರುವ ಕೆಲಸ ಒಳ್ಳೆಯದು ಎಂದು ಒಪ್ಪಿಸುವುದಕ್ಕೆ ‘ಇದು ನಮ್ಮ ಸಂಸ್ಕೃತಿ ಅಲ್ಲವೇ’ ಅನ್ನುತ್ತೇವೆ. ನಮ್ಮ ಗತಕಾಲದ ಬಗ್ಗೆ ಹೆಮ್ಮೆಯನ್ನು ಪಡುವುದಕ್ಕೆ, ಸಂಸ್ಕೃತಿಯ ಬಗ್ಗೆ ಕೊಚ್ಚಿಕೊಳ್ಳುತ್ತೇವೆ. ದ್ವೇಷಕ್ಕೆ ಸೌಜನ್ಯದ ಬಣ್ಣ ಬಳಿಯಲು ‘ಸಂಸ್ಕೃತಿ ರಕ್ಷಣೆ’ ಯ ಮಾತನಾಡುತ್ತೇವೆ. ಸಂಸ್ಕೃತಿ ಹಳತಾದಷ್ಟೂ ಅದಕ್ಕೆ ಬಲು ದೊಡ್ಡ ಅಧಿಕಾರವೂ ಪ್ರಾಪ್ತವಾಗಿಬಿಡುತ್ತದೆ.
ಸಂಸ್ಕೃತಿಯ ಬಗ್ಗೆ ಮಾತನಾಡುವವರು ಸಾಮಾಜಿಕವಾಗಿ ಒಂದಲ್ಲ ಒಂದು ರೀತಿಯ ‘ಅಧಿಕಾರ’ ವನ್ನು ಅನುಭವಿಸುತ್ತಿರುವವರು ಅಥವ ಸಮಾಜದ ಬದುಕಿನಲ್ಲಿ ಅಧಿಕಾರದ ಪಾಲು ಪಡೆಯಲು ಬಯಸುವವರಾಗಿರುತ್ತಾರೆ. ಸಂಸ್ಕತಿಗೂ ಅಧಿಕಾರಕ್ಕೂ ಬಿಡಿಸಲಾಗದ ನಂಟು ಇದೆ. ಭೌತಿಕ ಅಧಿಕಾರಕ್ಕಿಂತ ಮನಸ್ಸುಗಳ ಮೇಲೆ ಅಧಿಕಾರವನ್ನು ಸ್ಥಾಪಿಸಬೇಕೆಂಬುದು ಮನುಷ್ಯರ ಮನಸ್ಸಿನ ಆಳದಲ್ಲಿರುವ ಬಯಕೆ. ನಾವು ಯಾವುದನ್ನು ಸಾಹಿತ್ಯ, ಕಲೆ, ಚರಿತ್ರೆ ಇತ್ಯಾದಿಯಾಗಿ ಕರೆಯುತ್ತೇವೆಯೋ ಅವೆಲ್ಲ ಒಟ್ಟಾರೆ ಜನ ಸಮೂಹ ಏನನ್ನು ನೆನಪಿಡಬೇಕೆಂದು, ಏನನ್ನು ಮರೆಯಬೇಕೆಂದು ನಿರ್ಧರಿಸುವ ಆಸೆಯ ಹೊರ ರೂಪಗಳು.
‘ನಮ್ಮ ಸಂಸ್ಕತಿ’, ಏನು ಹಾಗೆಂದರೆ ? ನಾವು ಎಂದು ಕರೆದುಕೊಳ್ಳುತ್ತಿರುವಾಗ ಆ ‘ನಾವು’ ಎಂಬ ಮಾತಿನಲ್ಲಿ ಯಾರೆಲ್ಲ ಸೇರುತ್ತಾರೆ, ಅಥವ ಯಾರೆಲ್ಲ ಹೊರಗೆ ಉಳಿಯುತ್ತಾರೆ? ಸಂದರ್ಭಕ್ಕೆ ತಕ್ಕ ಹಾಗೆ ನಾವು ಎಂಬ ಮಾತಿನ ನಿರ್ವಚನ ಆಗುತ್ತಿರುತ್ತದೆ. ನಾವು ಎಂದರೆ ನಾನು, ನನ್ನ ಹೆಂಡತಿ ನನ್ನ ಮಕ್ಕಳು; ನಾವು ಎಂದರೆ ನಾನು ಆಡುವ ಭಾಷೆಯನ್ನೇ ಆಡುವವರು; ನಾವು ಎಂದರೆ ನಮ್ಮ ಬೀದಿಯ ಜನ; ನಮ್ಮ ಜಾತಿಯ ಜನ; ನಮ್ಮ ರಾಜ್ಯದ ಜನ; ನಮ್ಮ ದೇಶದ ಜನ; ಅಥವಾ ಮಾತು ಆಡುತ್ತಿರುವಾಗ ನಮ್ಮ ಸುತ್ತ ಮುತ್ತ ಇರುವ ಜನ ಮಾತ್ರವೋ? ಬದುಕು ಎನ್ನುವುದು ಎಷ್ಟು ಚಂಚಲವೋ, ಸದಾ ಬದಲಾಗುತ್ತಲೇ ಇರುವಂಥದೋ, ಅಷ್ಟೇ ಚಂಚಲವೂ ಬದಲಾಗುತ್ತಲೇ ಇರುವಂಥದೂ ಆಗಿರುತ್ತದೆ ನಾವು ಬಳಸುವ ಮಾತುಗಳ ಅರ್ಥ.
ಆಚರಣೆಯನ್ನು ತೀರ ಆಳವಾಗಿ ಪರಿಶೀಲಿಸಿ ಕಂಡುಕೊಂಡಲ್ಲದೆ ಅದರ ಹಿಂದಿರುವ ವಿಚಾರ ನಮ್ಮ ಅರಿವಿಗೆ ಬರುವುದು ಸಾಧ್ಯವಿಲ್ಲ. ಸಂಸ್ಕತಿಯು ಕೇವಲ ಸಾಹಿತ್ಯ, ಸಂಗೀತ, ನರ್ತನ, ಸದ್ವರ್ತನೆಗಳಿಗೆ ಸಂಬಂಧಪಟ್ಟಿದ್ದಲ್ಲ. ಲೋಕವನ್ನು ನಾವು ಗ್ರಹಿಸಿಕೊಳ್ಳುವ, ವಿವರಿಸಿಕೊಳ್ಳುವ ಎಲ್ಲವನ್ನೂ ಸ್ಮೃತಿರೂಪದಲ್ಲಿರುವ ಸಂಸ್ಕೃತಿ ಎಂಬ ಕಲ್ಪನೆ ಆಳುತ್ತಿರುತ್ತದೆ. ನಮ್ಮ ನಮ್ಮ ವೈಯಕ್ತಿಕ ಬದುಕನ್ನು, ಸಮಾಜದ ಬದುಕನ್ನು ಬದಲಾಯಿಸಿಕೊಳ್ಳುವ ಬಯಕೆ ನಮ್ಮದಾಗಿದ್ದರೆ ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಆಳುವ ಸಂಸ್ಕೃತಿಯನ್ನು ಅರಿಯುವುದು ಅಗತ್ಯ. ನಮ್ಮ ಪ್ರತಿಯೊಂದು ಆಚರಣೆಗಳನ್ನೂ ಪರಿಶೀಲಿಸಿಕೊಳ್ಳುತ್ತ, ಅದರ ಹಿಂದಿರುವ ವಿಚಾರಗಳನ್ನು ಕಂಡುಕೊಳ್ಳುವುದು ಸಂಸ್ಕೃತಿ ವಿಮರ್ಶೆ ಎನ್ನಿಸಿಕೊಳ್ಳುತ್ತದೆ. ಹೀಗೆ ಕಂಡುಕೊಳ್ಳುವುದಾದರೂ ಏಕೆ ಅಗತ್ಯ?
ಇದು ಕೇವಲ ಬೌದ್ದಿಕ ಕುತೂಹಲ ಮಾತ್ರವಾದರೆ ಅದಕ್ಕೆ ಹೆಚ್ಚಿನ ಬೆಲೆ ಇಲ್ಲ. ಮಾತಿನ ತರ್ಕದಲ್ಲಿ, ಬೌದ್ಧಿಕ ವಿಲಾಸದಲ್ಲಿ ದೊರೆಯುವ ಗೆಲುವು, ಆಗುವ ಸೋಲುಗಳಿಗೆ ಯಾವ ಮಹತ್ವವೂ ಇಲ್ಲ. ಸಂಸ್ಕೃತಿ ಎಂಬುದು ನಮ್ಮ ದಿನದಿನದ ಬದುಕಿನ ಕ್ರಿಯೆಗಳನ್ನು ನಿಯಂತ್ರಿಸುವ ನೆನಪುಗಳ ಉಗ್ರಾಣವೇ ಆಗಿರುವುದರಿಂದ ಸಂಸ್ಕೃತಿ ಪರಿಶೀಲನೆ ಎಂಬುದು ಅಂತಿಮವಾಗಿ ನಮ್ಮ ವೈಯಕ್ತಿಕ ನಂಬಿಕೆಗಳ, ನಮ್ಮ ಸಮಾಜದ ನಂಬಿಕೆಗಳ ಪರಿಶೀಲನೆಯೇ ಅಗಿರುತ್ತದೆ. ಅಂಥ ಪರಿಶೀಲನೆಯಿಲ್ಲದ ಕೇವಲ ಆಚರಣೆಗಳ ಅನುಸರಣೆಯೇ ಸಂಸ್ಕತಿ, ಅಂಥ ಅನುಕರಣೆಯಿಂದಲೇ ಸಂಸ್ಕೃತಿ ಸಂರಕ್ಷಣೆ ಎಂದು ತಿಳಿಯುವುದು ಸರಿಯಲ್ಲ.
ಸಂಸ್ಕೃತಿ ಎಂಬುದು ಬಹುವಚನವೇ ಹೊರತು ಏಕವಚನವಲ್ಲ. ಸಂಸ್ಕೃತಿ ಎಂಬುದು ಲೋಕದ ಗ್ರಹಿಕೆಯ ಕ್ರಮ, ಬದುಕಿನ ರಿವಾಜು, ಬದುಕಿನಲ್ಲಿ ಯಾವುದು ಬೆಲೆಯುಳ್ಳದ್ದು ಎಂದು ನಿರ್ಧರಿಸುವ ಅಳತೆಗೋಲು ಎಂಬುದು ಹೌದಾದರೆ ಯಾವುದೇ ಒಂದು ದೇಶದಲ್ಲಿ ಒಂದಲ್ಲ ಹಲವು ಸಂಸ್ಕೃತಿಗಳು ಇರುತ್ತವೆ. ಇವುಗಳಲ್ಲಿ ಒಂದು ಹೆಚ್ಚು ಇನ್ನೊಂದು ಕಡಮೆ ಎಂದು ಪರಿಶೀಲನೆ ಇಲ್ಲದೆ ನಿರ್ಧರಿಸಿಕೊಂಡು ತೀರ್ಮಾನಗಳಿಗೆ ದುಡುಕುವ ಬುದ್ದಿ ಇದ್ದರೆ ಸಂಸ್ಕೃತಿ ವಿಮರ್ಶೆ ಸಾಧ್ಯವಿಲ್ಲ. ಯಾವುದನ್ನು ನಮ್ಮ ಸಂಸ್ಕೃತಿ ಎಂದು ತಿಳಿದಿದ್ದೇವೆಯೋ ಅದರ ಮಿತಿ, ದೌರ್ಬಲ್ಯ, ಅನುಪಯುಕ್ತತೆಗಳನ್ನೂ ಕಾಣುವ, ಒಪ್ಪಿಕೊಳ್ಳುವ, ಅಗತ್ಯಬಿದ್ದರೆ ಬೇಡವೆಂದು ತಿರಸ್ಕರಿಸುವ ಧೈರ್ಯವೂ ಇರಬೇಕು. ಸಂಸ್ಕೃತಿ ವಿಮರ್ಶೆಯ ಮೂಲಕ ತಿಳಿವನ್ನು ಪಡೆಯುವ, ತಿಳಿವಿನ ಮೂಲಕ ಕ್ರಿಯೆಯಲ್ಲಿ ತೊಡಗುವ ಪ್ರಾಮಾಣಿಕ ಹಂಬಲ ಇರಬೇಕು. ಎಲ್ಲಕ್ಕಿಂತ ಮುಖ್ಯವಾದ ಮಾತೆಂದರೆ ಯಾವುದೇ ಸಂಸ್ಕೃತಿಯನ್ನೂ ತಿರಸ್ಕರಿಸುವ ಅಥವ ಸಮರ್ಥಿಸುವ ಉದ್ದೇಶವಿಲ್ಲದೆ ಅರಿಯುವುದೇ ಮುಖ್ಯ ಗುರಿಯಾಗಿರಬೇಕು. ಆಗ ಕೇವಲ ಆಚಾರಗಳು ಮಾತ್ರವಲ್ಲದೆ ಅವುಗಳ ಹಿಂದಿರುವ ವಿಚಾರಗಳೂ ಕಾಣತೊಡಗುತ್ತವೆ. ಕಂಡದ್ದು ನಮ್ಮಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವ ಕ್ರಿಯೆಗಳಿಗೆ ಕಾರಣವಾಗುತ್ತವೆ.
ಆಚಾರ ಎಂದರೆ ಕೇವಲ ಧಾರ್ಮಿಕ ಆಚರಣೆಗಳು ಮಾತ್ರವಲ್ಲ. ನಾವು ದಿನದಿನದ ಬದುಕಿನಲ್ಲಿ ಇದೇ ಸಹಜ ಎಂದುಕೊಂಡು ಮಾಡುವ ಎಲ್ಲ ಕೆಲಸಗಳೂ ಆಚಾರಗಳೇ. ಈ ಆಚಾರ ಹೀಗೇ ಇರಬೇಕಾದದ್ದು ಎಂಬಂತೆ ನಮ್ಮನ್ನು ಒಪ್ಪಿಸಿಬಿಟ್ಟಿರುವ ಸಂಗತಿಯೇ ಸಂಸ್ಕೃತಿ, ಸಂಸ್ಕೃತಿ ವಿಮರ್ಶೆಯು ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿ.
*****