ಇಳೆಯನೆಲ್ಲ ತುಂಬಿನಿಂತು
ನಾಟ್ಯವಾಡುತಿರುವ ರೂಹೆ !
ಅಲ್ಲಿ-ಇಲ್ಲಿ ಎಲ್ಲೆಡೆಯಲಿ
ಇದ್ದ ನಿನ್ನ ನಿಲುಕದೂಹೆ !
ಮನವ ಸೆಳೆದುಕೊಳ್ಳುವ ಶಕ್ತಿ !
ನಿನ್ನ ಮಿರುಗಮಿಂಚಿದೇನು ?
ಬಣ್ಣ ಬಣ್ಣಗಳನ್ನು ತೋರ್‍ವ
ನಿನ್ನ ಸಹಜ ಸೃಷ್ಟಿಯೇನು ?
ಬಂದ ಮಾವಿನಡಿಗೆ ನಿಂತು
ನಿನ್ನ ಚೆಲುವ ನೋಡಬಹುದು
ನಿನ್ನ ಲತೆಗಳೊಡನೆ ಕೂಡಿ
ಕೇಳ್ದ ವರವ ಪಡೆಯಬಹುದು
ಅಲ್ಲಿ ಇಲ್ಲಿ ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !
ನಿಜ ಮನೋಜವಿಹ ವಿಶಾಲ
ದೃಷ್ಟಿಯೊಂದು ಕೊನರುತಿಹುದು.
ಬುದ್ಧಿಗಿರುವ ಕಣ್ಣಿನಲ್ಲಿ
ಮತ್ತೆ ಮತ್ತೆ ಹೊಳೆಯುತಿಹುದು.
ಬಿದ್ದು ನಿದ್ರೆಗೈವ ದಿನ್ನೆ
ಯಮನ ಕೋಣವಾಗಬಹುದು.
ಬಳಿಗೆ ಸುಳಿವ ಮರ್‍ತ್ಯಕನ್ಯೆ
ಸ್ವರ್‍ಲಲನೆಯೆ ಆಗಬಹುದು.
ಸನಿಯಕಿರುವ ಗೆಳೆಯನೆದೆಯು
ಅಲ್ಲವೇನು ಸ್ಪರ್‍ಶಮಣಿಯು ?
ತಿಳಿದು ನೋಡೆ,- ಭುವನವಿದು
ಅಲ್ಲವೇನು ಮುದ್ದು ಕಣಿಯು !
ಅಲ್ಲಿ- ಇಲ್ಲಿ- ನೋಡಿದಲ್ಲಿ
ಎಸೆಯುತಿಹುದು ನಿನ್ನ ಬಳ್ಳಿ !
ಆದರಿಂಧ ದೃಷ್ಟಿ ಕಳೆದು
ಹುಟ್ಟುಗುರುಡ ಕಂಗಳೇಕೆ ?
ದಿವ್ಯಧಾಮವನ್ನು ಕಂಡ
ಮನವ, ಮಾಯೆ ಸೆಳೆಯಬೇಕೆ ?
ಮತ್ತೆ ನಿಶೆಯು ಕವಿದು ಹಿರಿಯ
ನೋಟವಿಲ್ಲದಾಗುತಿಹುದು
ನೋಡಿದತ್ತ ಕಾಳ್ಗತ್ತಲೆ
ಮೇರೆವರಿದು ಘೂರ್‍ಣಿಸುವದು
ಮತ್ತೆ ಕಾಮ-ಮೋಹ ಬೆರಸಿ
ಸೃಜಿಸಿದ ಪುತ್ತಳಿಯು,-ಹೆಣ್ಣು.
ಪ್ರಕೃತಿಯತುಲ ಸೌಂದರ್‍ಯ-
ಕಿರುವ ಸ್ಫುರಣ, ಬರಿಯ ಮಣ್ಣು
ಅಲ್ಲಿ-ಇಲ್ಲಿ ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !
ಮಾನವಾಭ್ಯುದಯದ ದೇವಿ !
ನಿನ್ನ ಪ್ರೀತಿಗೆಂದು ಲಲ್ಲೆ-
ಯಿಂದ ಬುವಿಯ ಹಿರಿಯಣುಗರು
ತಮ್ಮ ಬಾಳ ತೊರೆಯಲಿಲ್ಲೆ
ಆತ್ಮಯಜ್ಞವನ್ನೆ ಹೂಡಿ
ನಿನ್ನ ಹಸಿವ ಹಿಂಗಿಸಿದರು.
‘ಏಕೆ ತೆರೆಯನೆತ್ತಲೊಲ್ಲೆ?’
ಎಂದು ನಿನ್ನ ಹಂಗಿಸಿದರು
‘ಮುಂದೆ ಬರುವ ವಂಶಕಿರಲಿ
ಶಾಂತಿ ಕಾಂತಿಯಮಿತವಾಗಿ,
ತಾಯೆ ! ರಜನಿ ಮುಗಿಯಲೆ ’ಂದು
ಪ್ರಾರ್ಥಿಸಿದರು ಪ್ರಾಣ ನೀಗಿ.
ಆದರೇನು? ನೋಡಿದಲ್ಲಿ
ಕಾಳರೂಪವೆಸೆವುದಿಲ್ಲಿ !
ವ್ಯರ್‍ಥವವರ ತ್ಯಾಗ ಮತ್ತೆ
ನೀ ಕೇಳಲು ಬಲಿಯನಿಂದು !
ವ್ಯಕ್ತಿಯೊಳನುರಕ್ತಳೆನುವೆ.
ಇಡಿ ಕುಲಕೀ ಭಾಗ್ಯವೆಂದು !
ಆಡಿದಾಟವನ್ನೆ ಆಡಿ
ಬರೆದುದನ್ನೆ ಬರೆಯುತಿರುವೆ.
ಒಂದೆ ಲಿಪಿಯ ನೀ ಪುನರಪಿ
ಬರೆಯುತಳಿಸಿ ಬರೆಯುತಿರುವೆ !
ಗೆದ್ದುದನ್ನೆ ಮತ್ತೆ ಗೆಲಲು
ಮುನ್ನಡೆಯುವರೇನು ? ತಾಯೆ !
ಇಹೆಯಾ ಮಾಯೆಯಂಕಿತದಲಿ ?
ನಿನ್ನೂಳಿಗದವಳು ಮಾಯೆ !
ಆದರೇನು ? ಬೆಳಕು, ನಿಶೆಯು,-
ಇದುವೆ ನಿನ್ನ ಗಮನದಿಶೆಯು !
*****