ನಾನು
‘ಅವನನ್ನು’ ಕಾಣ ಹೋದೆ
ಬೇಡಿಕೆ ಪಟ್ಟಿ
ಹನುಮನ ಬಾಲದಂತಿತ್ತು.
ಎದುರಿಗೆ ನಿಂತು
ಇಲ್ಲದ ಭಯ, ಭಕ್ತಿ ನಟಿಸುತ್ತ
“ನೀನೆ ನನಗೆ ಎಲ್ಲ
ನಿನ್ನದೇ ಇದು ಎಲ್ಲ
ನಾನು, ನನ್ನದೆಂಬುದೇನೂ ಇಲ್ಲ”
ನನ್ನ ಊನ, ವಕ್ರ ನೋಡಬೇಡ
ನಿನಗೇನು ಗುನ್ನ ಗೂಸ ಇಲ್ಲ
ಯಾರೂ… ಏನು ಬೇಕಾಗಿಲ್ಲ;
ನೀನು ನಾವಲ್ಲ!
ಧ್ಯಾನಿಸಬೇಕೆಂಬುದರ ವಿನಃ
ಅನ್ಯ ನಿರೀಕ್ಷೆಯಿಲ್ಲ.
ನೀನು ನಮ್ಮ ಧಣಿ!
ನಮ್ಮ ಕೋರಿಕೆ ಸಲ್ಲಿಸು
ನಿನ್ನನ್ನು ನೀನು ಸಾಬೀತು ಮಾಡಿಕೊ…
ಎಂದೊದರಿದೆ
ಎಂದಿನಂತೆ ಒಂದೇ ಉಸಿರಿಗೆ.
ಅವನು
ಮುಸು, ಮುಸು ನಕ್ಕಂತಾಗಿ
ಗಲಿ, ಬಿಲಿಗೊಂಡೆ.
ಇಲ್ಲಿ
ಎಲ್ಲವನ್ನು ಸೃಷ್ಟಿಸಿ
ಬಿಟ್ಟಿಹನು.
ನಾವು
ಯಾವುದು ಎಷ್ಟು ಬೇಕೋ ಅಷ್ಟು
ಬಳಸಿಕೊಳ್ಳಬೇಕು
ಬದುಕು ಕಟ್ಟಿಕೊಳ್ಳಬೇಕು.
ಬಾಳಿನಲ್ಲಿ
ಕಷ್ಟ, ಸುಖದ ತಟ್ಟೆಗಳು
ಎಂದೆಂದಿಗೂ ಸರಿದೂಗವೆಂದು
ಯಾರಿಗೆ ತಿಳಿದಿಲ್ಲ ?
ಮಕ್ಕಳಂತೆ
ದಿಗಿಲು ಬಿದ್ದು
ಪ್ರತಿ ಬಾರಿ ಓಡಿಹೋಗಿ
ದುಂಬಾಲು ಬೀಳೋದು
ನಮಗೆ, ನಮ್ಮದಕ್ಕೆ, ಅರ್ಥವನ್ನು ತರುವುದೇ?
ಜಿಜ್ಞಾಸೆ ಎದ್ದಿತು
ಸುಮ್ಮನೆ ಹೊರಬಂದೆ.
*****