ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ
ನಿನ್ನ ಚೆಲುಮೈಯ ಬಯಲಲ್ಲಿ ಕುಳಿಗಳು ತೆರೆದು,
ಜನ ಮೆಚ್ಚಿ ದಿಟ್ಟಿಸುವ ಹರೆಯದೀ ಸಿರಿತೊಡಿಗೆ
ಏನೇನೂ ಬೆಲೆಯಿರದ ಹರಕು ಜೂಲಾಗುವುದು.
ನಿನ್ನ ಹಿಂದಿನ ಚೆಲುವದೆಲ್ಲಿ, ಜ್ವಲಿಸುವ ಹರೆಯ
ತಂದ ಸಂಪತ್ತೆಲ್ಲಿ? ಎ೦ದು ಕೇಳಿದರೆನ್ನು.
ನೋಡು ಈ ಕುಳಿಬಿದ್ದ ಕಣ್ಣನ್ನು ಎನ್ನುವೆಯ?
ಎಂಥ ನಾಚಿಕೆಗೇಡು! ಅದು ಹೊಗಳಿಕೆಯೆ? ಮಣ್ಣು!
ನೋಡಿ ಈ ನನ್ನ ಮುದ್ದಿನ ಕಂದ, ಈ ಚೆಲುವು
ನನ್ನ ವೃದ್ಧಾಪ್ಯಕ್ಕೆ ನಾನಿತ್ತ ಪರಿಹಾರ
ಎನಲಾಗುವಂತೆ ಮೈ ಬಳಸಿದೆಯೊ ಅದು ಗೆಲುವು!
ನಿನ್ನ ಮಗು ನಿನ್ನ ಚೆಲುವನ್ನು ಉಳಿಸುವ ವರ.
ಮುದುಕನಾಗುವನಿಗಿದು ಕಾಯಕಲ್ಪದ ಹಾಗೆ,
ಚಳಿಯಲ್ಲು ಒಳಗೆ ಬಿಸಿರಕ್ತ ಉಕ್ಕುವ ಹಾಗೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 2
When forty winters shall besiege thy brow…