“ಅಯ್ಯೋ! ಆ ಮನೆಯನ್ನು ಬಾಡಿಗೆಗೆ ಹಿಡಿದಿರಾ? ಈ ಪೇಟೆಯಲ್ಲಿ ಬೇರೆಲ್ಲಿಯೂ ನಿಮಗೆ ಮನೆ ಸಿಗಲಿಲ್ಲವೆ”?
“ಆ ಮನೆಗೇನಾಗಿದೆ? ಅಚ್ಚುಕಟ್ಟಾದ ಮನೆ! ದೊಡ್ಡ ಅದೆಗಳು; ಗಾಳಿಬೆಳಕು ಚೆನ್ನಾಗಿ ಬರುವಂತಿದೆ; ಅಡಿಗೆ ಕೋಣೆ, ಬಚ್ಚಲು, ಹಟ್ಟಿ ಕೊಟ್ಟಿಗೆ, ಇವೆಲ್ಲಾ ಈಗಿನ ರೀತಿಗೆ ಹೇಗೆ ಬೇಕೋ ಹಾಗೆ! ಮೇಲಾಗಿ, ವಿಸ್ತಾರವಾದ ವಟಾರ; ತಂಪಗೆ ಇರುವಷ್ಟು ಮರಮಟ್ಟುಗಳು! ಅಂತಹ ಮನೆಗಳು ಪೇಟೆಯಲ್ಲಿ ಎಷ್ಟಿವೆ? ಬಾಡಿಗೆ ಕೂಡಾ….”
“ಹೌದು, ಬಾಡಿಗೆ ಕಡಿಮೆ ಸೌಕರ್ಯ ಹೆಚ್ಚು ಎಂದು ನಿಮ್ಮಂತೆ ಎಷ್ಟು ಜನ ಆ ಮನೆ ಕಂಡು ಮರುಳಾಗಿ ಹೊಕ್ಕರು! ಎಷ್ಟು ಜನ ಒಂದೆರಡು ತಿಂಗಳಲ್ಲಿ ಮುಂಗಡ ಕೊಟ್ಟ ಬಾಡಿಗೆಯನ್ನೂ ಬಿಟ್ಟೋಡಿದರು, ಗೊತ್ತೇ? ಅಂತೂ ನೀವು ವಹಿಸಿಕೊಂಡಾಯಿತಲ್ಲ! ಇದ್ದು ನೋಡಿ ಕೆಲವು ದಿವಸ. ಮತ್ತೇನು ಮಾಡಲಿಕ್ಕಾಗುತ್ತೆ ಇನ್ನು?”
ನಿವೃತ್ತ ಪೋಲೀಸ್ ಇನ್ಸ್ ಪೆಕ್ಟರ್ ವಿಠಲರಾಯರು ಅಂದೇ ಆ ಮನೆಯಲ್ಲಿ ತನ್ನ ಸಂಸಾರವನ್ನಿಳಿಸಿದ್ದರು. ಸಾಯಂಕಾಲ ಪೇಟೆಗೆ ಬಂದಿದ್ದಾಗ ನೋಡ ಸಿಕ್ಕಿದ ಅವರ ಪೂರ್ವ ಪರಿಚಿತರೊಬ್ಬರಿಗೂ ಅವರಿಗೂ ನಡೆದ ಮಾತುಗಳೇ ಮೇಲಿನವು. ವಿಠಲರಾಯರು ಆ ಮನೆಯನು, ೧೫ ದಿವಸಗಳ ಹಿಂದೆ ಬಾಡಿಗೆಗೆ ಹಿಡಿದು ತನ್ನ ಗೃಹಕೃತ್ಯದ ಯಾವತ್ತು ಸಾಮಾನುಗಳನ್ನು ತರಿಸಿ ತಕ್ಕ ಸ್ಥಳಗಳಲ್ಲಿ ಅವುಗಳ ವ್ಯವಸ್ಥೆ ಮಾಡಿಸಿದ್ದರು. ವಾಸ್ತವ್ಯಕ್ಕೆ ಎಲ್ಲವೂ ಸಿದ್ಧವಾಯಿತೆಂದ ಮೇಲೆ ಅವರ ಸಂಸಾರವು ಅಂದು ಬೆಳಿಗ್ಗೆ ಬಂದಿಳಿದಿತ್ತಷ್ಟೆ. ಸಂಸಾರವೆಂದರೆ, ಅವರ ಹೆಂಡತಿ, ಅತ್ತೆ, ಐದು ಮಕ್ಕಳು-ಮೂರು ಹೆಣ್ಣು, ಎರಡು ಗಂಡು, ಬಂದವರು ಮನೆ ನೋಡಿ ತುಂಬಾ ಸಂತೋಷಪಟ್ಟಿದ್ದರು. ಅಂತಹ ಮನೆಯನ್ನು ಚುನಾಯಿಸಿ ಎಲ್ಲ ವ್ಯವಸ್ಥೆಯನ್ನೂ ಮಾಡಿಸಿಟ್ಟುದಕ್ಕಾಗಿ ಅವರ ಪತ್ನಿ ಶಾಂತಿಗಾದ ಸಂತೋಷವು ಅಷ್ಟಿಷ್ಟಲ್ಲ. ಅದನ್ನು ಕಂಡು ರಾಯರು ತಾನು ಕೃತಕೃತ್ಯನಾದನೆಂದು ಹಿರಿಹಿಗ್ಗಿದ್ದರು.
ರಾಯರು ಪೇಟೆಯಿಂದ ಮನೆ ಸೇರಿದಾಗ ದೀಪ ಹಚ್ಚುವ ಹೊತ್ತಾಗಿದ್ದಿತು. ಪೋರ್ಟಿಕೊ (ಮುಖಮಂಟಪ)ದಲ್ಲಿ ಮೇಜಿನ ಮೇಲೆ ದೀಪವಿತ್ತು. ಸುತ್ತಲೂ ಮಕ್ಕಳು ಕುಳಿತಿದ್ದರು. ಆದರೆ ಅವರು ನಿರೀಕ್ಷಿಸಿದಷ್ಟು ಉತ್ಸಾಹವು ಅಲ್ಲಿರಲಿಲ್ಲ. ರಾಯರು ಬಂದವರು ಕುರ್ಚಿಯೊಂದರಲ್ಲಿ ಕುಳಿತು ‘ಕಮಲಾ, ಆಚೆ ಕೋಣೆಯೊಳಗೆ ದೀಪ ಹಚ್ಚು’ ಎಂದರು. ಹಿರಿ ಮಗಳಿಗೆ ‘ರಮಾ ನೀನೂ ಬಾ’ ಎಂದು ಅವಳು ಕಿರಿಯಳನ್ನು ಕೇಳಿದಳು. ‘ಊಂ, ಹೂಂ! ನೀನೇ ಹೋಗು’ ಎಂದಳವಳು. ‘ಅಮ್ಮಾ, ಕೋಣೆಯಲ್ಲಿ ದೀಪಹಚ್ಚಬೇಕಂತೆ’ ಎಂದು ಕಮಲೆಯು ತಾಯನ್ನು ಕರೆದಳು. ‘ಏನೇ ಕಮಲಾ! ದೀಪಹಚ್ಚಲಿಕ್ಕೆ ತಾಯಿ ಬೇಕೇ’ ಎನ್ನುತ್ತಾ ರಾಯರು ಅಸಮಾಧಾನ ತೋರಿದರು. ಕಮಲೆಯು ಮರುಮಾತಾಡದೆ ಒಳಗೆ ಹೋದಳು. ಅವಳ ಹಿಂದೆ ರಮೆಯೂ ಸಾಗಿದಳು, ಚಿಕ್ಕಮಕ್ಕಳಲ್ಲೊಬ್ಬ ‘ಪಪ್ಪಾ, ಭೂತಾಂದ್ರೆ ಹೇಗಿರುತ್ತೆ?’ ಎಂದ. ಅಷ್ಟರಲ್ಲಿ ರಾಯರ ಹೆಂಡತಿ ಶಾಂತಾ ಬಾಯಿಯು ‘ಕೈದೀಪ ಹಿಡಿದುಕೊಂಡು ಬಂದು ಕೋಣೆಗೆ ಹೋಗಿ ದೀಪ ಹಚ್ಚಿದಳು. ರಾಯರು ಅಲ್ಲಿಗೆ ಹೋಗಿ ಅಂಗಿ ತೆಗೆದಿಡುತ್ತಾ ‘ಮಕ್ಕಳಿಗಿಂದೇನಾಗಿದೆ? ದೀಪ ಹಚ್ಚಲಿಕ್ಕೆ ಹೇಳಿದರೆ ಮುಖ ಮುಖ ನೋಡುತ್ತಾರಲ್ಲ!’ ಎಂದರು.
“ಏನೂ ಇಲ್ಲ, ಆದರೆ ಹುಡುಕಿ ಹುಡುಕಿ ನಿಮಗೆ ಇದೇ ಮನೆ ಸಿಕ್ಕ ಬೇಕೆ?”
“ಈಗೇನಾಯಿತು ಈ ಮನೆಗೆ? ಆಗ ನೀನೆ ಅಷ್ಟು ಹೊಗಳಿದ್ದೆಯಲ್ಲ?”
“ಹೌದು ಆದರೆ ಇದರಲ್ಲಿ ‘ಅಜನೆ’ ಆಗುತ್ತಂತೆ!”
“ಅಂದರೆ?”
“ಮಾಡಿನಲ್ಲಿ, ಅಟ್ಟದಲ್ಲಿ ಎಲ್ಲಾ ಶಬ್ದ ಆಗುತ್ತದಂತೆ.”
“ಇಲಿ ಹೆಗ್ಗಣ ಬೆಕ್ಕು ಏನಾದರು ಓಡಿದರೆ ಶಬ್ದ ಆಗುತ್ತೆ.”
“ಹಾಗಲ್ಲ, ರಾತ್ರೆಗೆ ಮಧ್ಯಾಹ್ನಕ್ಕೆ ಠಕ್! ಠಕ್! ಚಟಕ್ ಹೀಗೆಲ್ಲ ಶಬ್ದ ಆಗುತ್ತಂತೆ”
“ಆಗಬಹುದು. ಮನೆ ಬಹಳ ಹಳೇದಾಗಿಲ್ಲ; ಹಂಚು ಚಾವಣಿಯ ಮನೆ; ಬಿಸಿಲು ಚೆನ್ನಾಗಿ ಕಾದಾಗ ರಾತ್ರೆ ತಣ್ಣಗಾದಾಗ ನೂರಾರು ಕೀಲು ಸಂದುಗಳ ಸಾವಿರಾರು ಹಂಚುಗಳ ಬಿಗಿತವಿರುವ ಮನೆಯಲ್ಲಿ ಶಬ್ದ ವಾಗುವುದು ಆಶ್ಚರ್ಯವೆ?”
“ಕಿಟಕಿ ಬಾಗಿಲು, ಗುದ್ದಿದಂತಾಗುತ್ತದೆಯಂತೆ.”
“ಬಿಗಿಯಾಗಿ ಆಗಳಿಹಾಕಿದರೆ ಕಿಟಕಿ ಬಾಗಿಲುಗಳ ಅವಸ್ಥೆಯೇ ಹಾಗೆ! ಅದಿರಲಿ, ನಿನಗೆ ಇದೆಲ್ಲಾ ಹೇಳಿದವರಾರು?”
“ಆಚೆ ಮನೆಯ ಕೆಲಸದವಳು ಆಗ ಬಂದಿದ್ದಳು. ಅಲ್ಲದೆ ಆ ಮನೆಯವರ ಹೆಂಡತಿ ನಮ್ಮನ್ನು ನೋಡಲಿಕ್ಕೆಂದು ಬಂದರು. ಆಗ ಮಾತಾಡುತ್ತ ಹಿಂದೆ ಈ ಮನೆಯಲ್ಲಿದ್ದವರ ಸಂಗತಿ ಬಂತು, ಯಾರೂ ಒಂದೆರಡು ತಿಂಗಳ ಮೇಲೆ ನಿಂತಿದ್ದಿಲ್ಲವಂತೆ ಇಲ್ಲಿ.”
“ಅವರೆಲ್ಲ ಅಂಜುಬುರುಕರು! ಅಜ್ಞಾನಿಗಳು! ಇಲಿಯೋಡಿದರೆ ಹುಲಿಯೋಡಿತೆಂದು ಬಣ್ಣ ಕೊಟ್ಟವರು!”
“ಹಾಗೇ ನಾನೂ ಹೇಳಿದೆ. ಆದರೆ ನಡುರಾತ್ರೆ ಪಕ್ಕದ ಹಲಸಿನ ಮರದಿಂದ ಹೊಯಿಗೆ ಉದುರುವುದಂತೆ! ಮನೆ ಸುತ್ತೂ ಗಗ್ಗರಗೆಜ್ಜೆ ಕಟ್ಟಿ ಕೊಂಡು ಭೂತ ತಿರುಗುತ್ತದಂತೆ! ಬಾಗಿಲ ಸರಪಳಿ ಅಲಗಿಸುತ್ತದಂತೆ. ಒಂದೊಂದು ಸಲ ಬಾವಿಗೆ ಡುಳುಂ ಎಂದು ಹಾರುತ್ತದಂತೆ! ಹೀಗೆಲ್ಲ ಹಿಂದಿನವರು ಹೇಳಿಹೇಳಿ ಮನೆಬಿಟ್ಟು ಹೋಗಿದ್ದಾರಂತೆ.”
“ಆ ಅಂತೆ-ಕಂತೆ ನಮಗೆ ಬೇಡ. ಅವರೆಲ್ಲ ಹುಚ್ಚರು, ಸುತ್ತ ಮುತ್ತಲಿನವರು ಹೇಳಿದ್ದನ್ನು ಕೇಳಿ ಅದನ್ನೇ ಕನಸು ಕಂಡಿರಬೇಕವರು.”
“ಏನೇ ಇರಲಿ, ನಾವಿದನ್ನು ಕ್ರಯಕ್ಕೆ ತೆಗೆದುಕೊಳ್ಳಬೇಕಾದರೆ ಆರು ತಿಂಗಳಾದರೂ ಇದರಲ್ಲಿದ್ದು ನೋಡಬೇಕು. ಅವಸರ ಮಾತ್ರ ಮಾಡಬೇಡಿ ಇದರಲ್ಲಿ.”
“ಆಗಲಿ, ಹಾಗೇ ಮಾಡೋಣವಂತೆ, ಆದರೆ ನೀನೂ ಮಕ್ಕಳೂ ಪುಕ್ಕಾದುದು ಆಶ್ಚರ್ಯ! ಪೋಲಿಸ್ ಅಧಿಕಾರಿಯಾಗಿದ್ದವರ ಬಳಿಗೆ ಭೂತ ಬರುವುದು ಉಂಟೆ? ಅವರೇ ದೊಡ್ಡ ಭೂತ! ತಿಳಿಯಿತೇ.”
“ಸರಿ, ಆದರೆ ನೀವು ಮಾತ್ರ ಕೆಲವು ದಿನಗಳವರೆಗೆ ಎಲ್ಲಿಗೂ ಹೋಗಬಾರದು.”
“ನಿಮ್ಮ ಈ ಹೆದರಿಕೆಯು ಹೋಗುವ ತನಕ ಸಾಯಂಕಾಲ ೬ ಘಂಟೆಗೇ ನಾನು ಮನೆಯಲ್ಲಿದ್ದೇನೆ. ಕಮಲಾ, ರಮಾ, ಇದಕ್ಕೆನೇ ಕೋಣೆಯೊಳಗೆ ಹೋಗಿ ದೀಪಹಚ್ಚಲಿಕ್ಕೆ ಹೆದರಿದುದು? ಕೊಣೆಯ ಕತ್ತಲಲ್ಲಿ ಭೂತವಿದೆಯೇನೇ? ಭೀತನ ಹಿಂದೆ ಭೂತ! ಯಾರ ಹೃದಯದಲ್ಲಿ ಕತ್ತಲೆಯಿದೆಯೋ ಅಲ್ಲಿದೆ ಭೂತ! ಭೂತ ನಲಿಯುವುದು ಅಜ್ಞಾನಸಾಗರದಲ್ಲಿ! ಇಲ್ಲಿಗೇಕೆ ಬರುತ್ತದೆ? ಮೇಲಾಗಿ, ರಿಟಾಯರ್ಡ್ ಪೋಲೀಸು ಇನ್ಸ್‌ಪೆಕ್ಟರನನ್ನು ಕಂಡರೆ ಭೂತ ತಾನೇ ರಿಟಾಯರ್ ಆಗುತ್ತೆ! ಈ ಮನೆಸೂತ್ರಕ್ಕೆ ಬರಲಾರದು ಅದು!?”
“ಪಪ್ಪಾ, ಭೂತಾಂದ್ರೆ ಹೇಗಿರುತ್ತೆ ಅಪ್ಪ?” ಎಂದನು ತಿರುಗಿ ಸಣ್ಣ ಹುಡುಗ.
“ಕಳ್ಳನಾಯಿಯನ್ನು ಕಂಡಿದ್ದೀಯಲ್ಲಾ? ನಮ್ಮನ್ನು ಕಂಡರೆ ಬಾಲ ಅಡಿಗಿಟ್ಟು ಕೊಂಡು ಕಂಪೌಂಡಿಂದ ಓಡಿಹೋಗುತ್ತೆ ನೋಡು! ಅದಕ್ಕೇ ಭೂತಾಂತಾರೆ ಇಲ್ಲಿಯವರು!”
ಆದರೆ ಈ ಭೂತದ ಸಮಸ್ಯೆಯು ವಿಠಲರಾಯರು ಯೋಚಿಸಿದಷ್ಟು ಸುಲಭವಿದ್ದಿಲ್ಲ. ಅಂದು ಸುಮಾರು ಅರ್ಧರಾತ್ರಿಯ ಸಮಯ ಬಾಗಿಲಿಗೋ ಮಾಡಿಗೋ ಏನೋ ಬಿದ್ದಂತಾಗಿ ರಾಯರಿಗೆ ಎಚ್ಚರವಾಯಿತು. ಆಲೈಸಿದರು. ತಾನು ಮಲಗಿದ್ದ ಕೊಠಡಿಯ ಬಳಿಯಲ್ಲಿದ್ದ ಹಲಸಿನ ಮರದಿಂದ ದರದರನೆ ಹೊಯಿಗೆಯ ಮಳೆಗರೆಯಿತು. ಅನಂತರ ಎಲ್ಲ ನಿಶ್ಯಬ್ದ! ಇದೇನು ಪಿಕಲಾಟ ಎಂದು ರಾಯರು ಯೋಚಿಸುತ್ತಿದ್ದರು. ಅಂತೂ ಶಾಂತಿ ನಿದ್ದೆಯಲ್ಲಿದ್ದುದು ಚೆನ್ನಾಯಿತೆಂದು ಸಮಾಧಾನಗೊಂಡರು. ಆದರೆ “ನೋಡಿದಿರಾ ಹೊಯಿಗೆ ಬಿದ್ದುದು?” ಎಂದಳು ಆ ತನಕ ಗಾಬರಿಯಿಂದ ಮೌನವಾಗಿದ್ದ ಶಾಂತಿ. ಮರುದಿನ ರಾಯರಿಗೂ ಅವರ ಪತ್ನಿಗೂ ಈ ವಿಷಯವಾಗಿ ಬಹಳ ಚರ್ಚೆ ನಡೆಯಿತು. ರಾಯರು ಇದನ್ನು ಶೋಧನೆ ಮಾಡುತ್ತೇನೆಂದರು. ಎಂತಂತಹ ಪತ್ತೆ ಮಾಡಿ ಕೀರ್ತಿಗೊಂಡಿದ್ದ ತನಗೆ ಈ ಭೂತವನ್ನು ಹಿಡಿಯಲಿಕ್ಕಾಗದೆ? ಎಂದೇ ಅವರ ವಾದ, ಆದರೆ ಶಾಂತಿಯು ಮಾತ್ರ ಕಾಡಿ ಬೇಡಿ ಕಣ್ಣೀರಿಟ್ಟು ರಾತ್ರಿ ಹೊರಗೆ ಹೋಗ ಕೂಡದೆಂದು ಆಣೆ ಹಾಕಿದಳು. “ನಿಮಗೆಷ್ಟು ಧೈರ್ಯವಿದ್ದರೆ ಇನ್ನೂ ಕೆಲವು ದಿನ ವಾಸವಾಗಿದ್ದು ನೋಡೋಣ, ಇದರ ಉಪಟಳ ಹೆಚ್ಚಿದರೆ ಮನೆ ಬಿಟ್ಟು ಹೋಗಿಬಿಡೋಣ; ಬಾಡಿಗೆ ಕೊಟ್ಟರೆ ಬೇರೆ ಮನೆ ಸಿಗುವುದಿಲ್ಲವೆ? ಶೋಧನೆ-ಗೀದನೆಯ ಕೆಲಸವನ್ನೆಲ್ಲ ಮನೆಯ ಧನಿಯೇ ನೋಡಿ ಕೊಳ್ಳಲಿ! ನೀವು ಮಾತ್ರ ರಾತ್ರಿ ಎಷ್ಟಕ್ಕೂ ಹೊರಗೆ ಹೋಗಕೂಡದು” ಎಂದು ಶಾಂತಿಯ ತೀರ್ಮಾನವಾಯಿತು. ಈ ತೀರ್ಮಾನವು ಶಾಂತಿಯಿಂದ ಮನೆಗೆಲಸದವಳಿಗೆ ತಿಳಿಯಿತೆಂದ ಮೇಲೆ ಅದೇನೂ ಗುಟ್ಟಿನದ್ದಲ್ಲವೆನ್ನಿ. ಅಂತೆಯೇ ದಿನದಿನದ ಸುದ್ದಿ ಅವಳಿಂದ ‘ಬ್ರೊಡ್ಕಾಸ್ಟ್’ ಆಗಿ ಹಬ್ಬುತಿತ್ತು. ಆ ಸುದ್ದಿ ಗಳೇನೆಂಬಿರಾ! ಸಂಕ್ಷಿಪ್ತವಾಗಿ ಹೇಳುವುದಾದರೆ, ಮರುದಿನ ರಾತ್ರಿ ಬಾವಿಯಲ್ಲಿ ‘ಡುಳುಂ’ ಎಂದು ಶಬ್ದ! ಮೂರನೆಯ ದಿನ ಮನೆಯ ಸುತ್ತು ಯಾರೋ ನಡೆದಂತಾಗಿ ಎದುರಿನ ಬಾಗಿಲ ಸರಪಣಿ ಅಲುಗಿಸಿದ ಸದ್ದು! ನಾಲ್ಕನೆಯ ದಿನ ಗಗ್ಗರಗೆಜ್ಜೆ ಕಟ್ಟಿಕೊಂಡು ಮನೆಗೊಂದು ಸುತ್ತು ಬಂದು ಬಾವಿಗೆ ಹಾರಿದಂತೆ! ಐದನೆಯ ದಿನ ಮಧ್ಯಾಹ್ನದ ಮೇಲೆ ರಾಯರು ತನ್ನ ಪತ್ತೆದಾರಿಯ ಬುದ್ದಿಯನ್ನೆಲ್ಲ ಉಪಯೋಗಿಸಿ ಈ ಸಮಸ್ಯೆಯನ್ನು ಬಿಡಿಸಲಿಕ್ಕ ಕುಳಿತಿದ್ದರು. ಅಂದು ಶಾಂತಿಯೂ ಮಕ್ಕಳೂ ಅವಳ ಅಣ್ಣನ ಮನೆಗೆ ಹೋಗಿದ್ದರು. ಬರುವುದು ಮರುದಿನ ಆದರೆ ಅಂದು ರಾತ್ರಿ ತಾನು ಆಳುಗಳನ್ನಿಟ್ಟು ಕೊಳ್ಳುತ್ತೇನೆಂದು ಶಾಂತಿಯನ್ನು ಶಾಂತಪಡಿಸಿ ರಾಯರು ಕಳುಹಿಸಿದ್ದರು. ನೆರಮನೆಯ ಕೊಗ್ಗಣ್ಣ ಕಮ್ತಿರು ಬೀದಿಯಲ್ಲಿ ಹೋಗುತ್ತಾ ರಾಯರೊಬ್ಬರೇ ಕುಳಿತಿರುವುದನ್ನು ಕಂಡು ಒಳಗೆ ಬಂದರು, ರಾಯರಿಗೂ ಅವರೊಡನೆ ಮಾತನಾಡಬೇಕೆಂದಿತ್ತು.
“ಬನ್ನಿ, ನಿಮ್ಮೊಡನೆ ಒಂದು ವಿಚಾರ ಕೇಳಬೇಕೆಂದಿತ್ತು. ನೀವೇ ಬಂದುಬಿಟ್ಟಿರಿ! ಚೆನ್ನಾಯಿತು. ಈ ಮನೆಯ ಭೂತದ ಕಾಟದ ವಿಷಯ ನಿಮಗೇನಾದರೂ ಗೊತ್ತಿದೆಯೆ?”
“ಅಯ್ಯೋ, ನಿಮ್ಮ ಕಿವಿಗೂ ಆದು ಬಿದ್ದಿದೆಯೇ? ನಾನು ನಮ್ಮವಳ ಹತ್ತಿರ ಜಾಗ್ರತೆ ಹೇಳಿದ್ದೆ-ಎಲ್ಲಾದರೂ ಬಾಯಿತಪ್ಪಿಯಾದರೂ ಬಾಯಿ ಬಿಟ್ಟು ಬಿಡಬೇಡಾಂತ! ಆದರೆ ಅವೆಲ್ಲ ಚಿಲ್ಲರೆ ಜನರ ಮಾತು. ಇತ್ತೀಚೆಗೆ ಸುಮಾರು ಒಂದು ಒಂದೂವರೆ ವರ್ಷದಿಂದ ನಾಲ್ಕಾರು ಸಂಸಾರಗಳು ಬಂದವು; ಬಿಟ್ಟು ಹೋದುವು! ಅಜ್ಞಾನಿಗಳಯ್ಯ ಎಲ್ಲ! ಅವರ ಹೇಳಿಕೆ ನಂಬತಕ್ಕದ್ದಲ್ಲ ಸ್ವಾಮಿ, ಬರೇ ಭ್ರಮೆಯಾಗಲಿಕ್ಕೂ ಸಾಕು! ನಾನು ನಂಬ ಬೇಕಾದರೆ ತಮ್ಮಂಥವರ ಬಾಯಿಂದ ಏನಾದರೂ ಬರಬೇಕು. ತಮಗೇನಾದರೂ ತೋರಿಬಂತೇ ಹೇಳಿ.”
“ಬಾರದೆ ಕೇಳುತ್ತೇನೆಯೆ? ಏನೇನು ಸುದ್ದಿಯುಂಟೋ ಅದೆಲ್ಲ ನಡೆಯುತ್ತೆ ಇಲ್ಲಿ! ನನಗದರಲ್ಲಿ ನಂಬಿಕೆ ಇಲ್ಲದಿದ್ದರೂ ಈಗ ನಂಬಬೇಕಾಗಿದೆ.”
“ತಾವು ಹೇಳಿದ ಮೇಲೆ ನನಗಿನ್ನು ಸಂಶಯವಿಲ್ಲ; ಭೂತಗಳ ರೀತಿಯೇ ವಿಚಿತ್ರ! ಅದರಲ್ಲಿ ನಮ್ಮ ತರ್ಕದ ಬೇಳೆ ಬೇಯುವುದಿಲ್ಲ. ಅದನ್ನು ಪರೀಕ್ಷೆ ಮಾಡಹೋಗುವುದೂ ವಿಷ ಪರೀಕ್ಷಿಸುವುದೂ ಒಂದೇ. ಒಟ್ಟಾರೆ, ಹಾಗಾಗುತ್ತದೆಂದಾದ ಮೇಲೆ ತಾವು ಜಾಗ್ರತೆಯಿಂದಿರುವುದೊಳ್ಳಿತು! ಏನೇ ಆಗಲಿ, ತಾವು ಬಾಗಿಲು ತೆರೆದು ಹೊರಗೆ ಬರಬೇಡಿ, ಈ ಸುದ್ದಿ ಕೇಳಿದಂದಿನಿಂದ ನಾವ್ಯಾರೂ ರಾತ್ರಿ ಹೊರಗೆ ಬರುವುದೇ ಇಲ್ಲ. ಆದರೆ ಹಿಂದಿನವರಂತೆ ತಾವು ಇಷ್ಟು ಬೇಗನೇ ಮನೆ ಬಿಡಬಾರದು. ಮಕ್ಕಳು ಮರಿಗಳಿಗೇನಾದರೂ ಕೆಡಕಿಲ್ಲವಷ್ಟೆ? ಹಾಗೇನಾದರೂ ಆದರೆ ಆ ಮೇಲೆ ನಿಲ್ಲಬಾರದು. ಒಟ್ಟಿನ ಮೇಲೆ, ಈ ಭೂತದ ಕಾಟದಿಂದ ಈ ಮನೆಯು ಮಕ್ಕಳು ಮರಿಗಳಿಗೆ ಜನಜಾನುವಾರುಗಳಿಗೆ ಆಗುವುದಿಲ್ಲವೆಂದು ಹಿಂದಿನವರು ಹೇಳುತ್ತಿದ್ದರು. ಆದರೆ ನಾನಿಂದಿನವರೆಗೆ ನಂಬಿದ್ದಿಲ್ಲ. ಈಗ ತಮ್ಮಂತಹರ ಬಾಯಿಂದ ಬಂದ ಮೇಲೆ ನನಗೂ ಪುಕುಪುಕು ಹಿಡಿದಿದೆ. ನನ್ನ ದುರದೃಷ್ಟವೆನ್ನ ಬೇಕು!”
“ನಿಮ್ಮ ದುರದೃಷ್ಟ ಇದರಲ್ಲಿ ಎಲ್ಲಿಂದ ಬಂತು? ನಿಮ್ಮ ಮನೆಗೂ ಭೂತ ಬರುವುದೆಂದೊ!”
“ಇಷ್ಟರ ವರೆಗೆ ಹಾಗೇನೂ ಇಲ್ಲ, ಆದರೆ ಈ ಮನೆ ನನಗೆ ಒಂದೂವರೆ ಸಾವಿರ ರೂಪಾಯಿಗೆ ಈಡಾಗಿತ್ತು. ಇದನ್ನು ಯಾರಿಗಾದರೂ ಮಾರಿ ನನ್ನ ಸಾಲ ತೀರ್ಮಾನಮಾಡಬೇಕೆಂದು ಇದರ ಯಜಮಾನನ ಯೋಚನೆಯಿತ್ತು. ಯಾರಾದರೂ ಐದಾರು ಸಾವಿರ ರೂಪಾಯಿ ಕೊಡು ವಂತಹ ಮನೆ ಇದು! ಆದರೆ ಸಿಕ್ಕಾಬಟ್ಟಿ ಜನರಿಗೆ ಬಾಡಿಗೆಗೆ ಕೊಟ್ಟು ಭೂತಸಂಚಾರದ ಮನೆಯೆಂಬ ಹೆಸರು ಹಾಕಿಸಿಕೊಂಡ! ಮಾರಾಟವಾಗಲಿಲ್ಲ. ಆದರೆ ನನಗೆ ದುಡ್ಡು ಬೇಕಿತ್ತು. ದಾವಾ ಹೂಡಿ ಡಿಕ್ರಿಮಾಡಿಕೊಂಡೆ. ಈಗ ಅದು ಸುಮಾರು ಎರಡೂವರೆ ಸಾವಿರ ಆಗಬಹುದು, ಹರಾಜಿಗೆ ಇಡಿಸಿದ್ದೇನೆ ಇದನ್ನು! ನೀವು ಬಂದದ್ದು ಕೇಳಿ ನನಗೆ ತುಂಬಾ ಸಂತೋಷ ಆಗಿತ್ತು! ನಿಮ್ಮಂತಹರ ಬಾಯಿಂದ ಈ ಸುದ್ದಿಯು ಸುಳ್ಳೆಂದಾಗಿ ನೀವಾಗಲೀ ಬೇರೆಯವರಾಗಲೀ ಕ್ರಯಕ್ಕೆ ಪಡಕೊಂಡು ನನ್ನ ದುಡ್ಡು ನನಗೆ ಬಂದೀತೆಂಬ ಆಶೆಯಿತ್ತು! ನೀವೂ ಹೀಗೆ ಹೇಳಿದುದರಿಂದ ಇದೆಲ್ಲಾದರೂ ನನ್ನ ತಲೆಯ ಮೇಲೆ ಬಂದು ಬಿಡುತ್ತೆ ಎಂದು ಈಗ ಭಯವಾಗತೊಡಗಿದೆ! ಹಾಗೇನಾದರೂ ಬಂದುಬಿಟ್ಟರೆ ನಾನು ನನ್ನ ಮಕ್ಕಳುಮರಿಗಳನ್ನು ಹಾಕಿಕೊಂಡು ಇದರಲ್ಲಿ ಹೇಗೆ ಇರಲಿ, ಯಾವ ಮಂತ್ರವಾದಿಯ ಕಾಲಿಗೆ ಬೀಳಬೇಕೋ! ಏನು ಖರ್ಚೂ! ಆ ಪರಮಾತ್ಮನೇ ಬಲ್ಲ!”
“ಹಾಗಾದರೆ ನೀವಿರುವ ಆ ಮನೆ ನಿಮ್ಮ ಸ್ವಂತದ್ದಲ್ಲವೆ?”
“ಬಾಡಿಗೆಯದು ಸ್ವಾಮಿ, ಈ ಸಾಲದ ದುಡ್ಡು ಬರಮಾಡಿಕೊಂಡು ಎಲ್ಲಾದರೂ ಚಿಕ್ಕದೊಂದು ಗುಡಿ ಕಟ್ಟಿ ಕೊಳ್ಳಬೇಕೆಂದಿದ್ದೆ. ಬಾಡಿಗೆ ಕೊಟ್ಟೂ ಕೊಟ್ಟೂ ಸಾಕಾಯಿತು! ಆದರೆ ನನ್ನ ಹಣೆಯಲ್ಲಿ ಏನು ಬರೆದಿದೆಯೋ, ಆ ದೇವರಿಗೇ ಗೊತ್ತು! ಯಾರ ಸಂಗವಾದರೂ ಬೇಕು-ಭೂತದ ಸಂಗ ಬೇಡ! ಆದುದರಿಂದ ತಮಗೊಂದು ಮಾತು ಹೇಳುತ್ತೇನೆ. ಆ ‘ಅಜನೆ’ ಆದಾಗ ಹೊರಗೆ ಮಾತ್ರ ಬರಬೇಡಿ! ಎಂಥ ಭಯಂಕರ ರೂಪ ಕಾಣಿಸುತ್ತೋ! ಏನು ‘ತಾರ್‍ಕಣೆ’ ಆಗಿಬಿಡುತ್ತೊ! ನಮಗೆಷ್ಟು ಎದೆ ಧೈರ್ಯವಿದ್ದರೂ ಆ ಸಮಯಕ್ಕೆ ನೀರಾಗಿ ಹೋಗಿಬಿಡಬಹುದು! ಆದಕ್ಕೆ ಈ ಸುದ್ದಿ ಕೇಳಿದಂದಿನಿಂದ ನಾನದನ್ನು ನಂಬದಿದ್ದರೂ ಒಂದೇ ಒಂದು ರಾತ್ರಿ ಹೊರಗೆ ಬಂದವನಲ್ಲ!”
“ಹಾಗೆಲ್ಲ ಹೊರಗೆ ಬರಲಿಕ್ಕೆ ನನಗೇನಾದರೂ ಜೀವಭಾರವಾಗಿಲ್ಲ! ಇಲ್ಲವೆ, ನಾನೇನಾದರೂ ಸಂಸಾರಬಿಟ್ಟ ಬೈರಾಗಿಯೂ ಅಲ್ಲವೆನ್ನಿ! ನಮ್ಮ ಪ್ರಾಣಕ್ಕೂ ಈ ಮನೆಗೂ ಗಂಟಿಲ್ಲ. ಇನ್ನೂ ಸ್ವಲ್ಪ ದಿವಸ ನೋಡುತ್ತೇನೆ. ಹೀಗೇ ಹೆಚ್ಚಾಗುತ್ತಾ ಬಂದರೆ ಬಿಟ್ಟು ಹೋಗಿ ಬಿಡುವುದು! ದುಡ್ಡು ಕೊಟ್ಟೂ ಹೊಳೆ ಈಸಿ ಮೊಸಳೆ ಬಾಯಿಗೆ ತುತ್ತಾಗುವ ಹುಚ್ಚುತನ ನನ್ನಲ್ಲಿಲ್ಲ! ಆ ಎದೆಗಾರಿಕೆಗೆ ಹೋಗುವವನೂ ನಾನಲ್ಲ!”
“ಚಿನ್ನದಂಥಾ ಮಾತು! ಹೈಕೋರ್‍ಟು ಇಸ್ಮಿಸ್ಸಾಲ್ ತೀರ್ಪಿನ ಹಾಗೆ ತಮ್ಮ ನುಡಿಗಟ್ಟು! ಸುಮ್ಮನೆ ಬಹುಮಾನಪಟ್ಟ ಇನ್ಸ್ ಪೆಕ್ಟರಿಕೆ ಸಿಕ್ಕಿತ್ತೇ? ಆಗಾಗ ಬರುತ್ತೇನೆ ಸ್ವಾಮಿ, ಸಾವಧಾನವಾಗಿ ವಿಚಾರಮಾಡೋಣ, ಅಂತೂ ಅವಸರ ಮಾಡಬೇಡಿ; ಅಪ್ಪಣೆಯಾಗಲಿ!”
* * * *
ಅಂದು ಕಗ್ಗತ್ತಲೆ, ರಾತ್ರಿ ರಾಯರೊಬ್ಬರೇ ಪೋರ್ಟಿಕೋದಲ್ಲಿ ಕೂತು ಓದುತ್ತಿದ್ದರು. ಹತ್ತೂವರೆ ಗಂಟೆ ಹೊಡೆಯಿತು. ಆಗ ಅವರಿ ಗೇನು ಹುಚ್ಚು ಬುದ್ದಿ ಬಂತೋ! ಆ ಭೂತವನ್ನು ನೋಡಿಬಿಡಬೇಕೆಂದು ಛಲತೊಟ್ಟು ಎದೆ ಗಟ್ಟಿ ಮಾಡಿಕೊಂಡರು! ಕೈಯಲ್ಲಿ ಕಪ್ಪು ಸವರಿದ ಬಲಿಗೆಯ ದೊಣ್ಣೆ. ಆ ದೊಣ್ಣೆ ಬೀಸಿ ಎಷ್ಟೋ ಕಳ್ಳರ ಕೈಯಕತ್ತಿಗಳನ್ನು ಕೆಳ ಗುರುಳಿಸಿದ ಖ್ಯಾತಿ ಅವರಿಗಿತ್ತು. ಅದನ್ನು ಹಿಡಕೊಂಡು ಒಳಗಿನ ಬಾಗಿಲುಗಳನ್ನು ಹಾಕುತ್ತಾ ಬಂದರು. ದೀಪಗಳನ್ನು ನಂದಿಸಿದರು. ಎದುರಿನ ಬಾಗಿಲಿನ ಕೀಲಿಕೈ ತಿರುಗಿಸಿದರು. ತಾನು ಕಪ್ಪು ಬಟ್ಟೆ ಹೊದ್ದು ಬಾಗಿಲ ಎದುರು ಪೋರ್ಟಿಕೊದ ಕಂಬಕ್ಕೆ ಆಂತು ನಿಂತರು. ಹೊದ್ದ ಕಪ್ಪು ಬಟ್ಟೆ ಯಿಂದಾಗಿ ಅವರ ಮೈಯೇ ಅವರಿಗೆ ಕಾಣುತ್ತಿದ್ದಿಲ್ಲ. ಅವರೂ ಕತ್ತಲೂ ಅಷ್ಟು ಚೆನ್ನಾಗಿ ಒಂದುಗೂಡಿ ಹೋಗಿದ್ದುವು!
ಸುಮಾರು ೧೨ ಗಂಟೆಯ ಸಮಯ, ಭೂತ ಬರುವ ಹೊತ್ತು. ಬಂತೇ ಬಂತು! ಮನೆಯ ಹಿಂಬದಿಯಲ್ಲಿ ಗಗ್ಗರ ಗೆಜ್ಜೆಯ ಧ್ವನಿ ಕೇಳಿಸಿತು! ಸದ್ದು ಮುಂದೆ ಮುಂದೆ ಬಂತು! ಕಿಟಕಿಗಳನ್ನು ಗುದ್ದಿದಂತಾಯ್ತು! ಹಲಸಿನ ಮರದಿಂದ ಹೊಯಿಗೆ ಉದುರಿತು! ಗಗ್ಗರ ಗೆಜ್ಜೆಯ ಧ್ವನಿ ಮತ್ತೂ ಹತ್ತಿರ ಬಂತು! ಇನ್ನೂ ಹತ್ತಿರ, ಪೋರ್ಟಿಕೋದ ಮೇಲೆ! ಬಾಗಿಲ ಸರಪಳಿಯೂ ಗಗ್ಗರಗೆಜ್ಜೆಯೂ ಒಟ್ಟಿಗೆ ‘ಘುಲ್ ಘಲ್ ಘಲ್’ ಎಂದಿತು ಮೂರು ಬಾರಿ! ರಾಯರೆಲ್ಲಿ? ನಿದ್ದೆಹೋಗಿದ್ದರೇ? ಮೂರ್ಛೆ ಬಿದ್ದಿದ್ದರೇ? ಇಲ್ಲ! ಆಲಿಸಿ, ‘ಚಟ್! ಘೈಲ್’ ಅದೇನು? ರಾಯರು ದೊಣ್ಣೆಯನ್ನು ಬೀಸಿ ಸರಪಳಿಯು ಕುಲಕುವ ಕಡೆಗೆ ಗುರಿಯಿಟ್ಟು ಹೊಡೆದಿದ್ದರು. ಅದೇ ಚಟ್! ಭೂತದ ಕೈಯಲ್ಲಿದ್ದ ಗಗ್ಗರ ಗೆಜ್ಜೆಯು ಘೈಲ್ ಎಂದು ಕೆಳಗೆ ಬಿದ್ದಿರಬೇಕು! ಭೂತವು ಓಡುವ ಸದ್ದನ್ನು ರಾಯರು ಕೇಳಿದರು! ಬಂದ ಹಾದಿಯಾಗಿಯೇ ಓಡಿತು ಭೂತ! ರಾಯರು ಹಿಂದಿನಿಂದೋಡಿದರು. ಆದರೆ ಅವರು ಮನೆಯ ಹಿಂದೆ ಹೋಗುವಷ್ಟರಲ್ಲಿ ಅದೆಲ್ಲೋ ಕತ್ತಲೊಳಗೆ ಮಾಯವಾಗಿತ್ತು! ಅಲ್ಲೇ ನಿಂತು ಆಲಿಸಿದರು. ಅದು ಪಾಗಾರಹಳ್ಳಿ ಕೊಗ್ಗ ಕಮ್ತಿರ ಹಿತ್ತಲಿಗೆ ಹಾರಿದ ಸದ್ದು ಕೇಳಿಸಿತು!
* * * * *
ಎಂಟು ದಿವಸ ಕೊಗ್ಗ ಕಮ್ತಿರು ಮನೆಯಿಂದ ಹೊರಗೆ ಬಂದಿಲ್ಲ. ಅವರ ಎರಡು ಮುಂಗೈ ಗಂಟುಗಳೂ ಅಷ್ಟು ಬೀಗಿಕೊಂಡಿದ್ದುವಂತೆ! ಏನೇನೋ ಲೇಪಹಾಕಿ ಹಾಕಿ ಕೊನೆಗೆದು ಗುಣವಾಯಿತೆನ್ನಿ. ಇತ್ತ ಈ ಮನೆಗೆ ಭೂತದ ಕಾಟವೂ ತಪ್ಪಿತೆನ್ನಿ! ಮೊನ್ನೆ ರಾಯರೇ ಅದನ್ನು ಐದು ಸಾವಿರ ರೂಪಾಯಿ ಕೊಟ್ಟು ಕ್ರಯಕ್ಕೆ ಪಡ ಕೊಂಡರು, ಕಮ್ತಿರಿಗೆ ಇಂದು ಹಣವನ್ನು ತೆತ್ತು ರಶೀದಿ ಪಡೆದಾಗ “ಅಂತೂ ಅದು ನಿಮ್ಮ ತಲೆಯ ಮೇಲೆ ಬೀಳದಿದ್ದುದು ನಿಮ್ಮ ಪುಣ್ಯವೋ ನನ್ನ ಭಾಗ್ಯವೋ ಆ ಪರಮಾತ್ಮನಿಗೇ ಗೊತ್ತು!” ಎಂದರು. ಅಂತೂ ನನ್ನ ತಲೆಯಿಂದ ತಪ್ಪಿತಲ್ಲ!” ಎನ್ನುತ್ತ ಕೊಗ್ಗ ಕಮ್ತಿರು ಅಲ್ಲಿಂದೆದ್ದು ಹೋದರು. ಅದು ಎಂದರೆ ಯಾವುದು? ಆ ಮನೆಯೋ? ರಾಯರ ದೊಣ್ಣೆಯೊ?
*****