ಬಿದ್ದ ಮರಗಳ ಬುಡಕ್ಕೆ ಹತ್ತಿದ ಗೆದ್ದಲು
ನಿಗಿ ನಿಗಿ ಕೆಂಡಕ್ಕೆ ಕಣ್ಣೀರು ಬಿದ್ದು ಬರಿ ಇದ್ದಿಲು
ದಾರಿ ಬದಿಯಲ್ಲಿ ದುಗುಡ ತುಂಬಿದ ಗಿಡ
ಮೇಲೆ ನೋಡಿದರೆ ನಡುಗುತ್ತಿರುವ ಮೋಡ.
ಬಿದ್ದ ಮನೆಯ ಜಂತೆಗಳಲ್ಲಿ ಕಂತೆಕಂತೆ ಕತೆಗಳು
ಸಂತೆ ಗದ್ದಲದ ನಡುವೆ ಮೌನಕವಿತೆಗಳು
ರಕ್ಕೆ ಸುಟ್ಟ ಹಕ್ಕಿಯೊಳಗೆ ನಿಂತ ನಾದಗಳು
ಬೇರಲ್ಲೇ ಬೋರಲಾಗಿ ಬಿದ್ದ ಜೀವಬಳ್ಳಿಗಳು.
ಎಲ್ಲಿ ಹೋದರು ಅವರು ಎತ್ತಿ ಆಡಿಸಿದವರು?
ತೋಳ ತುಂಬ ಭಾವ ತುಂಬಿಕೊಂಡ ಜನರು!
ಬಂದೆಯಾ ಮಗುವೆ ಈ ನೆಲದ ನಗುವೆ
ಎನ್ನುತ್ತ ಮನದುಂಬಿ ಹಾಡಾಗಿ ಮಿಡಿದವರು
ಮನೆತನವ ಮೀರಿ ಗೆಳತನದ ಹಣತೆಯಲ್ಲಿ
ಉರಿದು ಕರಕಾದ ಹಟ್ಟಿಯ ಅಜ್ಜಂದಿರು
ಮುಟ್ಟಿ ಮಲ್ಲಿಗೆ ಮಾಡಿದವರು.
ಎಲೆ ಸಾವೇ ನೀನೇಕೆ ಜೀವಂತ?
ಎಲ್ಲರ ಜೀವ ಕಳೆಯುವ ಧಾವಂತ!
ಭೂಮಿಯೊಳಗಿಂದ ಎದ್ದುಬರುವೆ
ಆಕಾಶದಿಂದ ಬಿದ್ದು ಸುರಿವೆ
ಬೆಂಕಿಯಾಗಿ ಬಿರುಗಾಳಿಯಾಗಿ
ಹರಿವ ನೀರೊಳಗಿನ ಉರಿಯಾಗಿ
ಜೀವ ಕಳೆಯುತ್ತಲೇ ಜೀವಕಳೆಯಾಗುತ್ತಿರುವೆ.
ಹೊಕ್ಕುಳಲ್ಲಿ ಹುಟ್ಟಿದ ಸಾವೇ
ಬಳ್ಳಿಗೆ ಕೊಳ್ಳಿಯಿಡುವುದು ತರವೆ?
ಮಗುವಿನ ಮೊದಲ ಅಳು
ನಗುವಾಗುವ ಮೊದಲೇ
ಸಿಡಿಯಾಗಿ ಹಿಡಿಯುವ ಉಡವೇ,
ಬೆನ್ನು ಬಿಡದ ಬಾಳ ಗಡುವೇ,
ಮಾತುಗಳನ್ನು ಮೌನದಲ್ಲಿ ಒಸಗುತ್ತೀಯ
ನಗುವನ್ನು ನಡುವಲ್ಲೇ ಕತ್ತರಿಸುತ್ತೀಯ
ಹಾವಿನ ಸೇಡಿಗೆ ಹತ್ಯೆಯಾಗುತ್ತೀಯ
ನೋವಿನ ನೇಣಿಗೆ ಆತ್ಮಹತ್ಯೆಯಾಗುತ್ತೀಯ
ಪೊಲೀಸರ ಗುಂಡಾಗುತ್ತೀಯ
ಹೆಣ್ಣಿಗೆ ಗಂಡಾಗುತ್ತೀಯ
ಕುರ್ಚಿಯಲ್ಲಿ ಕೂತ ಭರ್ಜಿಯಾಗುತ್ತೀಯ
ಎಲ್ಲರೊಳಗಿದ್ದೂ ಎದುರುಬದರಾಗುತ್ತೀಯ
ನೀನಲ್ಲವೆ ನಿಜವಾದ ಆತ್ಮ!
ಸಾವಿಲ್ಲದ ಅಂತರಾತ್ಮ!
ಸಾವು ಶಿಖರವಾಗಿ ಪರ್ವತಾರೋಹಿಗಳೇ ಎಲ್ಲ
ಆಮ್ಲಜನಕ ಯಾರ ಬಳಿಯಲ್ಲೂ ಇಲ್ಲ!
*****