Home / ಬಾಲ ಚಿಲುಮೆ / ಕಥೆ / ವೈರ ಸಾಧಿಸುವುದು

ವೈರ ಸಾಧಿಸುವುದು

ಹೊಸಗನ್ನಡ ಪ್ರಂಚತಂತ್ರದಲ್ಲಿ “ವೈರ ಸಾಧಿಸುವುದು”
ಎಂಬ ಮೂರನೆಯ ತಂತ್ರವು. ಅದರ ಮೊದಲನೆಯ ಶ್ಲೋಕವಿದು:–
ನಂಬಲು ಬಾರದು ಪೂರ್ವ ವಿರೋಧಿಯ ॥
ಗೆಳೆಗೊಂಡಿದ್ದರು ಹಿಂದಿನ ಹಗೆಯ ॥
ನೋಡೈ ಗೂಗೆಗಳಿದ್ದಾ ಗುಹೆಯ ॥
ಸುಟ್ಟುವು ಕಾಗೆಗಳಗ್ನಿಯನೊಟ್ಟೆ ॥೧॥
ಆ ಕಥೆ ಎಂತು ಎಂದರೆ:-
ದಕ್ಷಿಣದೇಶದಲ್ಲಿ ಮಹಿಲಾರೋಪ್ಯ ಎಂಬ ನಗರವೊಂದುಂಟು, ಅದರ ಸಮೀಪದಲ್ಲಿ ವಿಶಾಲವಾದ ಆಲದಮರವೊಂದುಂಟು. ಆ ಮರದಲ್ಲಿ ಮೇಘವರ್ಣನೆಂಬ ಕಾಗೆಗಳ ಅರಸು ತನ್ನ ಪರಿವಾರವನ್ನೆಲ್ಲ ಇಟ್ಟುಕೊಂಡು ಸುಖವಾಗಿದ್ದನು.
ಹಾಗೆಯೇ ಇನೊಬ್ಬ ಗೂಗೆಗಳ ಅರಸನು ಒಂದು ಬೆಟ್ಟದ ಗುಹೆಯಲ್ಲಿ ತನ್ನ ಪರಿವಾರದೊಂದಿಗೆ ಇದ್ದನು. ಅವನ ಹೆಸರು ಅರಿಮರ್ದನ. ಆ ಅರಿಮರ್ವನನು ತನ್ನ ಲೆಕ್ಕವಿಲ್ಲದಷ್ಟು ಪರಿವಾರದೊಂದಿಗೆ ರಾತ್ರಿ ರಾತ್ರಿಯೂ ಬಂದು ಆ ಆಲದ ಮರವನ್ನು ಬಳಸುವನು. ಆ ಅರಸನಿಗೆ ಕಾಗೆಗಳ ಮೇಲೆ ಮೊದಲಿನಿಂದಲೂ ವೈರವೆಂದರೆ ವೈರ. ಅದರಿಂದ ಯಾವುದಾದರೂ ಒಂದು ಕಾಗೆಯು ಅಪ್ಪಿ ತಪ್ಪಿ ಕೈಗೆ ಸಿಕ್ಕಿದರೆ ಅದನ್ನು ಹತಮಾಡಿ ಬಿಡುವನು. ಹೀಗೆ ದಿನ ದಿನವೂ ಆಗುತ್ತಿದ್ದುದರಿಂದ ಆಲದ ಮರದ ಕಾಗೆಗಳ ಗುಂಪು ಬರ ಬರುತ್ತಾ ಕರಗಿಹೋಯಿತು. ಕೇಳಲಿಲ್ಲವೆ?
ವೈರಿಯನು ರೋಗವನು ತಡೆಯದೇ ಬಿಟ್ಟರೆ ॥
ಸ್ವೇಚ್ಚೆಯಿಂ ಬೆಳೆ ಬೆಳೆದು ಕೊಲ್ಲುವುದು ಕೊನೆಗೆ ॥ ೨ ॥
ಒ೦ದು ದಿನ ವಾಯಸ (ಕಾಗೆ) ರಾಜನು ತನ್ನ. ಮಂತ್ರಿಗಳನ್ನೆಲ್ಲ ಕರೆದು ಹೇಳಿದನು:- “ಎಲೈ ಮಿತ್ರರೆ, ಗೂಗೆಯು ನಮ್ಮ ಶತ್ರುವು. ಅವನು ದಿನ ದಿನವೂ ನಮ್ಮನ್ನು ಕೊಲ್ಲುತ್ತಿರುವನು. ಇದನ್ನು ತಪ್ಪಿಸುವುದು ಹೇಗೆ? ಅವನು ಬರುವುದು ರಾತ್ರಿಯಲ್ಲಿ.  ನಮಗೆ ರಾತ್ರಿಯಲ್ಲಿ ಕಣ್ಣು ಕಾಣಿಸುವುದಿಲ್ಲ. ಅವನು ಎಲ್ಲಿರುವನೆಂಬುದು ನಮಗೆ ತಿಳಿಯುವುದಿಲ್ಲ” ನಾವು ಹೋಗಿ ಹಗೆಯನ್ನು ತೀರಿಸಿಕೊಳ್ಳುವಂತಿಲ್ಲ. ಅದರಿಂದ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೈದೀಭಾವ, ಎ೦ಬ ಈ ಆರು ಉಪಾಯಗಳಲ್ಲಿ ಯಾವುದನ್ನು ಮಾಡಬೇಕು ಎಂಬುದನ್ನು ಚೆನ್ನಾಗಿ ವಿಚಾರಮಾಡಿ ಹೇಳಿ.”
ಅವರು ಹೇಳಿದರು:- “ದೇವ, ನೀನು ಕೇಳಿದ್ದು ಬಹಳ ಸರಿ. ಮಂತಿಗಳಾದವರು ಕೇಳದೆಯೇ ಈ ವಿಚಾರದಲ್ಲಿ ಸಲಹೆಯನ್ನು ಕೊಡಬೇಕು:  ಕೇಳಿದಮೇಲಂತೂ ಯಾವುದು ಸರಿ, ಯಾವುದು ಪಥ್ಯ, ಯಾವುದು ಸಾಧ್ಯ, ಯಾವುದು ಪ್ರಿಯ, ಎಂಬುದನ್ನು ವಿಚಾರಿಸಿ ಹೇಳಬೇಕು. ಯಾವ ಮಂತ್ರಿಯು ಹಿತವೂ ಕೊನೆಗೆ ಸುಖವೂ ಆಗುವುದನ್ನು ಕೇಳಿದರೂ ಹೇಳುವುದಿಲ್ಲವೋ ಅವನು ಶತ್ರುವೇ ಹೊರತು ಮಂತ್ರಿಯಲ್ಲ. ಆದರೆ, ಈ ಕಾರ್ಯವು  ಏಕಾಂತದಲ್ಲಿ ಆಗಬೇಕು. ಅದರಿಂದ ಯಾರೂ ಇಲ್ಲದೆಡೆಯಲ್ಲಿ ನಾವು ನಾವೇ ಕುಳಿತು ಗೊತ್ತು ಮಾಡಬೇಕು.”
ಅದರಂತೆ ಅರಸನು, ಹಿಂದಿನಿಂದಲೂ ತನಗೆ ಮಂತ್ರಿಗಳಾಗಿದ್ದ ಉಜ್ಜೀವಿ, ಸಂಜೀವಿ, ಅನುಜೀವಿ, ಪ್ರಜೀವಿ, ಚಿರಂಜೀವಿ, ಎಂಬ ಐದು ಮಂತ್ರಿಗಳನ್ನು ಕರೆಸಿಕೊಂಡು. ಏಕಾಂತದಲ್ಲಿ ಕುಳಿತು ಮುಂತ್ರಾಲೋಚನೆಯನ್ನು ಮಾಡಿದನು.
ಮೊದಲನೆಯ ಮಂತ್ರಿಯಾದ ಉಜ್ಜೀವಿಯು ಹೇಳಿದನು :- ಅರಸಾ, ಶತ್ರುವು ಬಲವಂತನಾಗಿದ್ದರೆ ಅವನೊಡನೆ ಯುದ್ಧವನ್ನು ಮಾಡಬಾರದು. ಬಲವಂತನಿಗೆ ಕೈ ಮುಗಿದುಕೊಂಡು ಕಾಲ ಹರಣ ಮಾಡುತ್ತಿದ್ದರೆ, ಆಪತ್ತುಗಳು, ನದಿಯ ನೀರು ತಾನಾಗಿ ಹರಿದು ಹೋಗುವಂತೆ ಹರಿದುಹೋಗುವುವು. ಶತ್ರುವು ಆರ್ಯನೂ ಧಾರ್ಮಿಕನೂ ಆಗಿದ್ದರಂತೂ ತಪ್ಪದೆ ಸಂಧಿಯನ್ನು ಮಾಡಿಕೊಳ್ಳಲೇ ಬೇಕು. ಶತ್ರುವು ಪ್ರಬಲನಾಗಿದ್ದು, ತನಗೆ ಪ್ರಾಣಕ್ಕೇ ಅಪಾಯವುಂಟಾಗಿದ್ದರೆ, ಶತ್ರುವು ಅನಾರ್ಯನಾಗಿದ್ದರೂ ಸಂಧಿಯೇ ಸರಿಯು. ಏಕೆಂದರೆ ಪ್ರಾಣವಿದ್ದರೆ ಎಲ್ಲವೂ ಇದ್ದಂತೆ. ಶತ್ರುವು ಹಲವು ಯುದ್ಧಗಳನ್ನು ಗೆದ್ದವನಾಗಿದ್ದರಂತೂ ತಪ್ಪದೆ ಸಂಧಿಯನ್ನು ಮಾಡಿ ಕೊಳ್ಳಲೇಬೇಕು. ಶತ್ರುಗಳು ಬಲವಾಗಿರುವಾಗ ಜೊಂಡಿನಂತೆ ಇರಬೇಕೇ ಹೊರತು ಹಾವಿನಂತೆ ಇರಬಾರದು. ಜೊಂಡು ನೀರು ಬಂದಾಗ ಬಗ್ಗುವುದು. ನೀರಿನ ಪ್ರವಾಹವು ಹೋದಮೇಲೆ ಎದ್ದು ನಿಂತುಕೊಳ್ಳುವುದು. ಅದರಿಂದ ಅದು ಬದುಕಿರುವುದು. ಹಾವು ಕೆಣಕಿದಕೂಡಲೇ ಹೆಡೆಯನ್ನು ಎತ್ತಿ ಹೊಡೆಸಿಕೊಂಡು ಸಾಯುವುದು. ಆಮೆಯು ಕೈಕಾಲುಗಳನ್ನು ಮುದುರಿಕೊಂಡು ಬಿದ್ದರೆ ಎಂಥಹ ಏಟು ಬಿದ್ದರೂ ಸಹಿಸಿಕೊಳ್ಳುವುದು. ಅದರಿಂದ, ಜೊಂಡಿನಂತೆ, ಅಮೆಯಂತೆ, ಬಂದ ಆಪತ್ತನ್ನು ಕಳೆದುಕೊಂಡು ಸಮಯ ಬಂದಾಗ ಕೃಷ್ಣ ಸರ್ಪದಂತೆ ಸಿಕ್ಕಿದನ್ನು ನುಂಗಿಬಿಟ್ಟು ತೆಪ್ಪಗಿರಬೇಕು.
ಇದಕ್ಕೆ ದಶರಥನ ಮದುವೆಯ ಕಥೆಯೇ ಸಾಕ್ಷಿ ಎನ್ನಲು, ಅರಸನು ಅದೆಂತು ಎಂದು ಕೇಳಿದನು. ಮಂತ್ರಿಯು ಹೇಳಿದನು.
*****
ದಶರಥನ ಮದುವೆಯ ಕಥೆ ಓದಿ
Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...