ನಾನು ಹಿಂದೆ ಒಂದು ಮರದಲ್ಲಿ ವಾಸವಾಗಿದ್ದೆನು. ಅದೇ ಮರದಲ್ಲಿ ಕೆಳಗೆ ಒಂದು ಗುಬ್ಬಿಯು ಒಂದು ಪೊಟರೆಯಲ್ಲಿ ಇತ್ತು. ನಾವಿಬ್ಬರೂ ಆಗಾಗ ಅಷ್ಟು ಹೊತ್ತು ಸೇರುವೆವು: ದೇವರ್ಷಿ ಬ್ರಹ್ಮರ್ಷಿಗಳ ಪುರಾಣ ಕಥೆಗಳನ್ನೂ ನಾವು ಹೋಗಿ ಬಂದ ಕಡೆಯಲ್ಲಿ ಕ೦ಡ ವಿಚಿತ್ರಗಳನ್ನೂ ಹೇಳಿಕೊಳ್ಳುತ್ತ ವಿನೋದವಾಗಿ ಅಷ್ಟು ಹೊತ್ತು ಕಳೆಯುವೆವು.
ಹೀಗೆ ಇರಲು, ಒಂದು ಆ ಗುಬ್ಬಿಯು ಸ್ನೇಹಿತಿನೊಡನೆ ಭತ್ತವು ಕಳಿತಿದ್ದ ಇನ್ನೊಂದು ಗ್ರಾಮಕ್ಕೆ ಹೋಯಿತು. ಅಲ್ಲಿ ಕೆಲವು ದಿನವಿದ್ದು ಹಿಂತಿರುಗಿ ಬರುವ ವೇಳೆಗೆ ಆ ಗುಬ್ಬಿಯಿದ್ದ ಪೊಟರೆಗೆ ಒಂದು ಮೊಲವು ಬಂದು ಸೇರಿಕೊಂಡಿತ್ತು. ನಾನು “ಎಷ್ಟು ದಿನವಾದರೂ ಈ ಗುಬ್ಬಿಯು ಬರಲಿಲ್ಲ. ಪಾಪ ಏನಾಯಿತೋ?” ಎಂದು ವ್ಯಥೆಪಡುತ್ತ ಅದನ್ನೇ ಅಲ್ಲಿಂದ ಓಡಿಸಲಿಲ್ಲ.
ಕೆಲವು ದಿನವಾದಮೇಲೆ ಭತ್ತವನ್ನು ಚೆನ್ನಾಗಿ ತಿಂದು ಕೊಬ್ಬಿದ ಗುಬ್ಬಿಯು ಹಿಂತಿರುಗಿ ಬಂತು. ಕೇಳಿಲ್ಲವೆ?
ಸ್ವರ್ಗಕೆ ಹೋದರು ಸುಖವಿಲ್ಲ ॥
ಬಗ್ಗಿದ ಮನೆ ಬಿಟ್ಟಿನ್ನಿಲ್ಲ ॥ ೧೮ ॥
ಅದು ಬಂದು ಪೊಟರೆಯಲ್ಲಿರುವ ಮೊಲವನ್ನು ನೋಡಿ “ಎಲೆ ಮೊಲವೆ, ನೀನು ಮಾಡಿರುವುದು ಸರಿಯಲ್ಲ. ನನ್ನ ಮನೆಗೆ ನುಗ್ಗಿರುವುದು ನ್ಯಾಯವಲ್ಲ. ಬಿಟ್ಟು ಹೋಗು” ಎಂದಿತು. ಮೊಲವು, “ಈ ಮನೆಯು ನಿನ್ನದಲ್ಲ. ಬಾವಿ, ಕೊಳ ಗುಡಿ, ಮೊದಲಾದವುಗಳಲ್ಲಿ ಯಾರು ಇದ್ದರೆ ಅವು ಅವರವು. ಮನುಷ್ಯರಾದರೆ ಹತ್ತು ವರ್ಷ ಇದ್ದರೆ ಆ ಸ್ಥಳವು ಅವರದಾಗುವುದು. ಮೃಗಗಳಿಗೂ ಪಕ್ಷಿಗಳಿಗೂ ಯಾರು ಯಾರು ಎಲ್ಲಿ ಎಲ್ಲಿ ಇದ್ದರೆ ಆಯಾ ಸ್ಥಾನವು ಅವರವರದು. ಅದರಿಂದ ಇದು ನನ್ನದೇ! ನಿನ್ನದಲ್ಲ” ಎಂದಿತು.
“ನೀನು ಧರ್ಮಶಾಸ್ತ್ರವನ್ನು ಹೇಳುವುದಾದರೆ ಬಲ್ಲವರಹತ್ತಿರ ಹೋಗೋಣ, ಬಾ. ಅವರು ಹೇಳಿದಂತೆ ಇಬ್ಬರೂ ಕೇಳೋಣ” ಎಂದು ಗುಬ್ಬಿಯು ಹೇಳಿತು. ಅದೂ ಸರಿಯೆಂದು ಒಪ್ಪಿಕೊಂಡಿತು. ಇಬ್ಬರೂ ನ್ಯಾಯವನ್ನು ಹುಡುಕಿಕೊಂಡು ಹೊರಟವು. ನಾನೂ ಇದು ಏನಾಗುವುದೋ ನೋಡೋಣ ಎಂದು ಹಿಂದೆಯೇ ಹೋದೆನು.
ಇಷ್ಟರಲ್ಲಿ ಇವರಿಬ್ಬರ ಜಗಳವನ್ನು ಕೇಳಿದ ಒಂದು ಕಾಡು ಬೆಕ್ಕು, ದಾಳಿಯಲ್ಲಿ ದರ್ಭೆಯನ್ನು ಕೈಯಲ್ಲಿ ಹಿಡಿದುಕೊಂಡು, ಕಣ್ಣು ಮುಚ್ಚಿಕೊಂಡು, ಕೈಗಳನ್ನೆತ್ತಿಕೊಂಡು ಕಾಲು ಅರ್ಧ ಊರಿ ನಿ೦ತು, ಸೂರ್ಯನನ್ನು ನೋಡುತ್ತ ಧರ್ಮೋಪದೇಶವನ್ನು ಆರಂಭಿಸಿತ್ತು: “ಈ ಸಂಸಾರವೆಂಬುದು ಅಸಾರವು. ಪ್ರಾಣಗಳು ಯಾವದಲ್ಲಿ ಹಾರಿ ಹೋಗುವುವೋ ಯಾರೂ ತಿಳಿಯರು. ನೆಂಟರಿಷ್ಟರು ಸೇರುವುದೆಲ್ಲ ಕನಸಿನಂತೆ. ಮನೆ ಮಠ ಅವುಗಳೆಲ್ಲ ಇಂದ್ರ ಜಾಲದಂತೆ, ಅದರಿಂದ ಧರ್ಮವನ್ನು ಹಿಡಿಯಿರಿ. ಬೇರೆ ಗತಿಯಿಲ್ಲ.
ಕೇಳಿಲವೇ?
ರಾಗ – ಕೇದಾರಗೌಳ
ದೇಹ, ನಿತ್ಯವಲ್ಲ| ವಿಭವವು ಶಾಶ್ವತವಲ್ಲ ॥ ಪ ॥
ಮರಣ, ಬೆನ್ನಹಿಂದಿದೆ | ಮಾಡಿರಿ ಧರ್ಮ ॥ ಅ ॥
ಧರ್ಮವ ಬಿಟ್ಟವ | ಬದುಕಿದರೇನಂತೆ ॥
ಕಮ್ಮಾರ ನಂಗಡಿ | ತಿದಿಯಂತೆ ಉಸಿರಾಡಿ ॥ ೧ ॥
ಹೂವಿಗಿಂತಲು ಹಣ್ಣು | ಮೊಸರಿಗಿಂತಲು ತುಪ್ಪ ॥
ಹಿಂಡಿಗಿಂತಲು ಎಣ್ಣೆ | ಮಿಗಿಲು ಭೋಗಕೆ ಧರ್ಮ ॥ ೨ ॥
ನುಡಿಯೊಂದರಲ್ಲಿಯೆ | ಹೇಳುವೆ ಧರ್ಮವ ॥
ಉಪಕಾರವೇ ಪುಣ್ಯ | ಹಿಂಸೆಯೇ ಪಾಪ ॥ ೩ ॥
ತನಗೆ ಬಲ್ಲದುದೊಂದೂ | ಅನ್ಯರಿಗೇಕೆಂದು ॥
ತನ್ನಂತೆ ಇತರರ | ಭಾವಿಸುವುದೇ ಧರ್ಮ ॥ ೪ ॥ ॥೧೯ ॥
ಹೀಗೆ ಧರ್ಮೋಪದೇಶ ಮಾಡುತ್ತಿರುವ ಬೆಕ್ಕನ್ನು ಕಂಡು ಮೊಲವು ಹೇಳಿತು: “ಎಲೈ ಗುಬ್ಬಿಯೇ, ಈ ನದೀ ತೀರದಲ್ಲಿ ಯಾವನೋ ಒಬ್ಬ ತಪಸ್ವಿಯು ಧರ್ಮವನ್ನು ಹೇಳುತ್ತಿರುವನು. ಈತನನ್ನು ಕೇಳೋಣ” ಎನ್ನಲು, ಗುಬ್ಬಿಯು, “ಇದು ಬೆಕ್ಕು, ಹುಟ್ಟುತ್ತಲೇ ಇದು ನಮಗೆ ಶತ್ರುವು. ಅದರಿಂದ ದೂರದಲ್ಲಿ ಇರೋಣ. ನಮ್ಮನ್ನು ನೋಡಿ ಇದಕ್ಕೆ ಆಸೆ ಹುಟ್ಟಿ ಇದರ ವ್ರತವು ಕೆಟ್ಟೀತು” ಎಂದಿತು.
ಅದರಂತೆಯೇ, ಅವೆರಡೂ ದೊರದಿಂದಲೇ ಆ ತಪಸ್ವಿಗೆ ನಮಸ್ಕಾರ ಮಾಡಿ “ಎಲೈ ಧರ್ಮೋಪದೇಶಕನೆ ನಮ್ಮದೊಂದು ವಿವಾದವುಂಟು. ಅದನ್ನು ಶಾಸ್ತ್ರಕ್ಕೆ ಸಮ್ಮತವಾಗಿ ನಿರ್ಣಯಿಸಿ ಕೊಡು. ಸುಳ್ಳು ಹೇಳಿ ಅಧರ್ಮವಾಡಿದವನನ್ನು ನೀನು ತಿಂದು ಬಿಡಬಹುದು. ಎಂದು ಹೇಳಿಕೊಂಡನು. ಅದಕ್ಕಾ, ಬೆಕ್ಕು “ಹಾ, ಹಾ, ಹಾಗೆನ್ನ ಬೇಡಿ. ನರಕಕ್ಕೆ ಹೋಗುವ ಆ ಮಾರ್ಗವನು ನಾನು ಬಿಟ್ಟರುವೆನು. ನಾನೀಗ ಪ್ರಾಣಿಹಿಂಸೆ ಮಾಡುವುದಿಲ್ಲ. ಅಹಿಂಸೆಯೇ ಧರ್ಮವು, ಕೇಳಿಲ್ಲವೇ? ಸೊಳ್ಳೆ, ತಿಗಣೆ, ಹೇನು, ಮೊದಲಾದ ಪ್ರಾಣಿಗಳನ್ನೂ ಕೊಲ್ಲಬಾರದು ಎಂದು ಬಲ್ಲವರು ಹೇಳುವರು. ಹಿಂಸೆ ಮಾಡುವ ಪ್ರಾಣಿಗಳನ್ನೂ ಹಿಂಸೆ ಮಾಡಬಾರದು. ಪ್ರಾಣಿಹಿಂಸೆ ಮಾಡುವವನಿಗೆ ನರಕವು ತಪ್ಪುವುದಿಲ್ಲ. ಸ್ವರ್ಗವು ಸಿಕ್ಕುವುದಿಲ್ಲ ಯಜ್ಞದಲ್ಲಿಯೂ ಪಶುಹಿಂಸೆ ಮಾಡಬಾರದು. ಹಾಗೆ ಮಾಡುವವರು ವೇದಾರ್ಥವನ್ನು ಬಲ್ಲವರಲ್ಲ. ಯಜ್ಞದಲ್ಲಿ ಅಜನನ್ನು ಕೊಲ್ಲುವರು ಎಂದು ಶಾಸ್ತ್ರವಿದೆಯಲ್ಲ ಎಂದರೆ ಅಲ್ಲಿ ಅಜವೆಂದರೆ ಆಡಲ್ಲ. ಧಾನ್ಯಗಳು. ಎಳು ವರ್ಷ ಇರುವ ಧಾನ್ಯಕ್ಕೆ ಅಜ ಎಂದು ಹೆಸರು.
ಕೇಳಿಲ್ಲವೆ?
ಕಡಿದು ಮರಗಳ ಕೊಂದು ಪಶುಗಳ |
ಹರಸಿ ನೆಲದೊಳು ರಕ್ತ ಕೊಡಿಗಳ |
ಸಾರುವೆವು ನಾವು ಸ್ವರ್ಗಕೆನಲಾಗಿ ||
ಹೋಗುವರು ಯಾರು ನರಕಕ್ಕೆ ಹೇಳು ||೨೦||
ಅದರಿಂದ ನಾನು ಯಾರನ್ನೂ ತಿನ್ನುವುದಿಲ್ಲ. ಕೇವಲ ಜಯ, ಪರಾ ಜಯಗಳನ್ನು ನಿರ್ಣಯಿಸುವೆನು. ನಾನು ಮುದುಕನು. ನನಗೆ ಕಿವಿಯು ಚೆನ್ನಾಗಿ ಕೇಳುವುದಿಲ್ಲ. ಅದರಿಂದ ನನ್ನ ಹತ್ತಿರ, ಮೊಖದ ಹತ್ತಿರ ಬಂದು ನಿಮ್ಮ ಜಗಳವನ್ನು ಹೇಳಿ. ಜಗಳದ ಕಾರಣವನ್ನು ತಿಳಿದು ಧರ್ಮವನ್ನು ಹೇಳಬೇಕು. ಇಲ್ಲದಿದ್ದರೆ ಪರಲೋಕವು ಇಲ್ಲವಾಗುವುದು. ಹಾಗಾಗದಿರಲಿ. ಕೇಳಿಲ್ಲವೇ?
ಮಾನದಿಂದಲೋ ಲೋಭದಿಂದಲೋ ಭೀತಿಯಿಂದಲೋ ॥
ನ್ಯಾಯ ಬಿಟ್ಟು ನ್ಯಾಯವಾಡಲು ನರಕ ತಪ್ಪುವುದೇ ॥೨೧॥
ಅದರಿಂದ ನಿರ್ಭಯವಾಗಿ ನಿಮ್ಮ ವಾದವನ್ನು ನನ್ನ ಕಿವಿಯಲ್ಲಿ ಹೇಳಿ.” ಎಂದು ಅವರಿಗೆ ಹೇಳಿತು.
ಕಥೆಯನ್ನು ಬೆಳೆಸಿ ಫಲವೇನು? ಹೀಗೆ ಆ ಕಪಟಿಯು ಅವರಿಬ್ಬರನ್ನೂ ನಂಬಿಸಿ ಹತ್ತಿರಕ್ಕೆ ಬರಮಾಡಿಕೊಂಡು ಒಂದನ್ನು ಪಂಜದಿಂದ ಹೊಡೆದು ಇನ್ನೊಂದನ್ನು ಹಲ್ಲುಗಳಿಂದ ಹಿಡಿದು ಪೂರೈಸಿತು. ಹಾಗಾಗಬಾರದು ಎಂದು ನಾನು “ಅರಸು ಕೀಳನಾಗಬಾರದು” ಎಂದು ಹೇಳಿದೆನು. ಹಕ್ಕಿಗಳಾದ ನಮಗೆ ರಾತ್ರಿ ಕಾಣಿಸುವುದಿಲ್ಲ. ಈ ಗೂಗೆಯು ಹಗಲು ಕುರುಡನು. ನಾವು ಎದ್ದಿರುವಾಗ ಮಲಗಿದ್ದು ನಾವು ಮಲಗಿದಾಗ ಹೊರಗೆ ಹೊರಡುವನು. ಇವನು ನಮಗೆ ಬೆಕ್ಕು, ಮೊಲ, ಗುಬ್ಬಿಗಳಿಗೆ ಮಾಡಿದಂತೆ ಮಾಡುವುದಿಲ್ಲ ಎನ್ನುವುದಕ್ಕೆ ಏನು ನಂಬಿಕೆ? ಇದೆಲ್ಲವನ್ನೂ ಯೋಚಿಸಿ ಕೆಲಸಮಾಡಿ” ಎಂದಿತು. ಹಕ್ಕಿಗಳು “ಇದು ಹೇಳಿದ್ದು. ಸರಿ. ಈ ಕೆಲಸ ಈಗ ಬೇಡ. ಇನ್ನೊಂದು ಸಲ ಮಾಡೋಣ.” ಎ೦ದು ಹೇಳಿಕೊಂಡು ಎಲ್ಲವೂ ತಮ್ಮ ಮನ ಬಂದಂತೆ ಹೊರಟು ಹೋದುವು. ಭದ್ರಾಸನದಲ್ಲಿ ಕುಳಿತಿದ್ದ ಗೂಗೆಯು ಮಾತ್ರ ಉಳಿಯಿತು. ಅದು ಹಗಲು ಕುರುಡನಾದುದರಿಂದ ಅದಕ್ಕೆ ಹಕ್ಕಿಗಳು ಹೊರಟು ಹೋದುದೂ ತಿಳಿಯಲಿಲ್ಲ. ಅದು “ಯಾರಲ್ಲಿ? ಏಕೆ ಇನ್ನೂ ಅಭಿಷೇಕವಾಗಲಿಲ್ಲ?” ಎಂದು ಕೇಳಿತು. ಅದನ್ನು ಕೇಳಿ ಯಾರೋ “ಅಯ್ಯಾ ನಿನ್ನ ಅಭಿಷೇಕವು ನಿಂತುಹೋಯಿತು; ಕಾಗೆಯು ಅಡ್ಡಿ ತಂದಿತು. ಹಕ್ಕಿಗಳೆಲ್ಲವೂ ಹೊರಟು ಹೋದುವು. ಕಾಗೆಯು ಮಾತ್ರ ಇದೆ. ನಡೆ. ಇನ್ನು ನಮ್ಮ ಮನೆಗೆ ಹೋಗೋಣ” ಎಂದು ಹೇಳಿದರು. ಅದನ್ನು ಕೇಳಿ ಗೂಗೆಯು “ಅಯ್ಯೋ, ಹಾಳು ಕಾಗೆಯೇ, ನಾನು ನಿನಗೆ ಏನು ಅಪರಾಧ ಮಾಡಿದ್ದೆ. ನನಗೆ ಆಗುತ್ತಿದ್ದ ರಾಜ್ಯಾಭಿಷೇಕನನ್ನು ತಪ್ಪಿಸಿದೆಯಲ್ಲ. ಇಕೋ, ಇದೇ ಮೊದಲು, ನಮ್ಮ ವಂಶದವರಿಗೂ ನಿನ್ನ ವಂಶದವರಿಗೂ ಶಾಶ್ವತವಾದ ವೈರವು ಇದ್ದು ಹೋಗಲಿ. ಕೊಡಲಿಯಿಂದ ಕಡಿದರೂ ಮರವು ಮತ್ತೆ ಚಿಗುರುವುದು. ಕೆಟ್ಟ ಮಾತಿನಿಂದ ಹೊಡೆದು ಮಾಡಿದ ಗಾಯವು ಮಾತ್ರ ಆರುವುದೇ ಇಲ್ಲ” ಎಂದು ಹೇಳಿ ಮನೆಗೆ ಹೋಯಿತು.
ಕಾಗೆಯೂ “ಏನು ಅನ್ಯಾಯವಾಯಿತು? ನಾನಾದರೂ ಏಕೆ ಹೀಗಾಡಿ ಇಲ್ಲದ ವೈರವನ್ನು ಕಟ್ಟಿಕೊಂಡೆ? ದೇಶ, ಕಾಲಗಳನ್ನು ಅರಿಯದೆ. ಲಾಭವಿಲ್ಲದ ಅಪ್ರಿಯ ವಚನಗಳನ್ನು ಆಡಿ ನಾನು ಲಘುವಾದೆನು. ಕಾರಣವಿಲ್ಲದೆ ಮಾತನಾಡಿದರೆ ಅದು ವಿಷವಾಗುವುದರಲ್ಲಿ ಆಶ್ಚರ್ಯವೇನು? ಬಲವಂತನಾಗಲಿ, ಬುದ್ಧಿವಂತನಾಗಲಿ, ತಾನಾಗಿ ವೈರವನ್ನು ಹುಡುಕಿಕೊಂಡು ಹೋಗಬಾರದು. ವೈದ್ಯನಿದ್ದಾನೆಯೆಂದು ಯಾರಾದರೂ ವಿಷವನ್ನು ತಿನ್ನುವುದುಂಟೆ? ತುಂಬಿದ ಸಭೆಯಲ್ಲಿ ಒಬ್ಬರನ್ನು ತಿರಸ್ಕಾರ ಮಾಡಬಾರದು ಎಂಬ ನೀತಿಯು ನನಗೆ ಮರೆತು ಹೋಯಿತಲ್ಲಾ! ಸ್ನೇಹಿತರು, ಆಪ್ತರು, ಮೊದಲಾದವರಲ್ಲಿ ಹೇಳಿ ಕೇಳಿ, ತಾನೂ ತನ್ನಬುದ್ಧಿಯಿಂದ ವಿಚಾರ ಮಾಡಿ ನೋಡಿ, ಕೆಲಸ ಮಾಡುವವನೇ ಬುದ್ಧಿವಂತನು. ಅಂಥವನಿಗೆ ಯಶಸ್ಸೂ ಐಶ್ವರ್ಯವೂ ದೊರಕುವುವು. “ಹುಂ ಮೀರಿ ಹೋಯಿತು.” ಎಂದು ಕಾಗೆಯೂ ಹೊರಟು ಹೋಯಿತು. ಅಂದಿನಿಂದ ನಮಗೂ ಗೂಗೆಗಳಿಗೂ ಈ ವೈರವು ನಿಂತು ಹೋಗಿದೆ ಎಂದು ಹೇಳಿತು.
ಆಗ ಮೇಘವರ್ಣನು ಕೇಳಿತು:- “ತಾತ, ಹಾಗಾದರೆ ಈಗ ನಾವು ಏನು ಮಾಡಬೇಕು?” ಸ್ಥಿರ ಜೀವಿಯು ಹೇಳಿತು:-“ವತ್ಸ. ಹೀಗೆ ಈ ಹಿಂದೆ ಹೇಳಿದ ರಾಜ ನೀತಿಗಳು ಆರೂ ಬಿಟ್ಟು ಇನ್ನೊಂದು ಮಾರ್ಗವಿದೆ. ಅದನ್ನು ನಾನೇ ಆಚರಿಸಿ ನಿಮಗೆ ವಿಜಯವನ್ನು ಸಂಪಾದಿಸಿಕೊಡುವೆನು. ರಿಪುಗಳನ್ನು ವಂಚಿಸಿ ಸಂಹಾರ ಮಾಡುವೆನು. ಬುದ್ಧಿವಂತರು ಮೂವರು ಸೇರಿಕೊಂಡು ಧೂರ್ತತನದಿಂದ ಬ್ರಾಹ್ಮಣನನ್ನು ವಂಚಿಸಿ ಆಡು ಹೊತ್ತುಕೊಂಡು ಹೋದಂತೆ ಮಾಡುವೆನು.
ಮೇಘವರ್ಣನು ಅದು ಹೇಗೆ ಎಂದು ಕೇಳಲು ಸ್ಥಿರಜೀವಿಯು ಹೇಳಿತು:-
*****
ಧೂತರು ವಂಚಿಸಿದ ಕಥೆ ಓದಿ