Home / ಕವನ / ಕವಿತೆ / ಸೋಮಾರಿ

ಸೋಮಾರಿ

ಬರಿದೇ ಬೈವರು ಜನ ಸೋಮಾರಿಯ!
ಕೋಣಕೆ ಸಮನೆನುತಲಿ ಛೀಮಾರಿಯ
ಮಳೆ ಸುರಿಸುತ ಮುದಗೊಳ್ಳುತಲಕಟ
ತೊಡಿಪರು ಬೈಗುಳ ಮುಳ್ಳಿನ ಮುಕುಟ!
“ಕೆಲಸಕೆ ಕುಳಿತರೆ ಒಂದೇ ಎರಡೇ?
ಅದನು ನೆಚ್ಚಿದರೆ ಜೀವನ ಬರಡೇ!”
ಎಂಬ ಸತ್ಯವನು ಅರಗಿಸಿಕೊಂಡಿಹ
ಸೋಮಾರಿಯೆ ಜಗದೊಬ್ಬನೆ ಗಂಡಹ!
ಕಾಲಚಕ್ರಕಡಿಯಾಳಾಗಿಹ ರವಿ
ಬೆಟ್ಟವನೆಬ್ಬಿಸುತಿರೆ ಮೈದಡವಿ
ಅದಕೂ ಮುನ್ನವೆ ಎಚ್ಚತ್ತಿರೆ ಬುವಿ
ಬೆಚ್ಚನೆ ಕಂಬಳಿ ಮುಸುಕೊಳದೇಂ ಸವಿ!
ದೂರದ ರೇಡಿಯೊ ಗಾನವ ಕಿವಿಯು
ಚಪ್ಪರಿಸುತ್ತಿರೆ ಇನ್ನೂ ಸವಿಯು!
ಇಂತು ಮುಳುಗಿರಲು ಅರೆನಿದ್ದೆಯೊಳು
ಎಚ್ಚರಕೂ ಹೊಳೆಯದ ಭಾವಗಳು
ಸುಳಿಯುವುವಹ ಮನವನು ನಸು ಕೆಣಕಿ
ಹುಡುಗಾಟಕೆ ಮಗು ನೋಡುವೊಲಿಣುಕಿ
“ಎಲ್ಲ ಸುಖಗಳಿಗೆ ಮಿತಿಯೊಂದುಂಟು!”
ಎನೆ ಗಡಿಯಾರವು ಬಾರಿಸಲೆಂಟು
“ಆರಿತು ಕಾಫಿಯು ಏಳಿರಿ ಸಾಕು!”
ಎನ್ನುತಲಿರೆ ಮನೆಯಾಕೆಯ ಕಾಕು,
ಮತ್ತೀ ಜಗಕೇ ಬರುವೊಲು ಮೆದುಳು
“ಏಳಪ್ಪಾ” ಎನೆ ಮಗುವಿನ ತೊದಲು
ಎಳೆಯನ ಚುರುಕಭಿಮಾನವ ಕೊರೆಯೆ
ಕಂಬಳಿ ಮುಸುಕನು ಕೊಂಚವೆ ತೆರೆಯೆ
ಕಿಟಿಕಿಯು ಚೆಲ್ಲಿಹ ನೆರಳನು ಕಂಡು,

ಎದ್ದು, ಮೈಮುರಿದು ಆ ಸುಖವುಂಡು
ಕಾಲ ಹೊರಗಿಡಲದೆಂತಹ ನೋಟ!
ಕಣ್ಗಳಿಗೆಂತಹ ಹಬ್ಬದ ಊಟ!-
ಎಲ್ಲೆಲ್ಲೂ ತೂಕಡಿಸುವ ಮಂಜು!
ಬಣ್ಣ ಬಣ್ಣಗಳ ಹೂಗಳ ಪಂಜು!
ಕಾಣದ ವಿಧವಿಧ ಖಗಗಳ ಗಾನ!-
ಸಗ್ಗಕೆ ಒಯ್ಯುವ ದನಿಗಳ ಮೇನ!
ಇರುಳೆಲ್ಲಾ ಬಿಳಿ ಮಂಜನು ಹೀರಿ
ತಲೆದೂಗುತ್ತಿದೆ ಕುಡಿ ಮತ್ತೇರಿ!
ಹುಲ್ಲು ಧರಿಸಿಹವು ಬೆಳ್ಳಿ ಮುಲಾಮ
ಕಣ್ಣಿಟ್ಟವರಿಗೆ ಹಾಕಿ ಸಲಾಮ!
ನಿದ್ದೆಯ ಕಂಗಳು ರವಿಕರ ಸ್ಪರ್ಶದಿ
ಮುದಗೊಳ್ಳುತ ತೇಲುವುವಹ ಹರ್ಷದಿ!
“ಎಂಟಕೆ ಏಳ್ವುದೆ ದೊಡ್ಡ ಪುರಾಣ!
ಮುಖ ತೊಳೆವುದರೊಳು ಹೋಹುದು ಪ್ರಾಣ!”
ಎನ್ನುವ ಗೃಹಿಣಿಯ ಸಿಡಿನುಡಿ ಕಿವಿಗೆ
ಸೊದೆಯೆರೆಯುತ್ತಿರೆ ಇಳಿದೀ ಬುವಿಗೆ
ಪ್ರಕೃತಿಯ ಪಾಡಿಗೆ ಪ್ರಕೃತಿಯ ಬಿಡಲು
ಬಚ್ಚಲ ಮನೆಯೊಳು ಕಾಲ್ಗಳನಿಡಲು
ಒಲೆಯ ಪ್ರಲೋಭನ ಜಾಲಕೆ ಸಿಲುಕಿ
ಮುಂಗಡೆ ಕೂರುತ ಹೆಂಡತಿಗಳುಕಿ
ಬೆಂಕಿಯ ಜೊತೆಯೊಳು ಆಡುತಲಿರಲು
ಅಲ್ಲಿಗು ಹೆಂಡತಿ ಬಂದೆರಗಿರಲು
“ಬೆಂಕಿಯ ಶಾಖವೆ ಎಷ್ಟೋ ಮೇಲು!
ಅದಕೂ ಬಿಸಿ ಕಿಡಿನುಡಿಗಳ ಸಾಲು!”
ಎನ್ನುತಲವಳನು ರೇಗಿಸಿ, ನಗಿಸಿ
ಮುಖಮಾರ್ಜನಗಳ ಶಾಸ್ತ್ರವ ಮುಗಿಸಿ

ಬಂದು ಬಿಸಿ ಕಾಫಿ ಹೀರುತಲಿರಲು
ಚೆಲುವಿನ ಮನೆಯಾಕೆಯ ಸವಿಗೊರಲು
“ಎಣ್ಣೆಯ ಸ್ನಾನಕೆ ಏಳಿರಿ” ಎನಲು
ಬೇಡೆನ್ನುತ್ತಿರೆ, ತೈಲವ ತರಲು
ತಲೆಗೊತ್ತುತಲಿರೆ ಆ ಸುಖ ಸವಿದ
ಬಳಿಕ ನುಗ್ಗುತಲಿ ಕತ್ತಲೆ ಕವಿದ
ಸ್ನಾನದ ಕೋಣೆಗೆ, ಎಣ್ಣೆಯ ತರಿಸಿ
ಲೇಪಿಸಿ ಮೈಯ್ಯಿಗೆ, ಉಗುರೊಳು ತುರಿಸಿ
ವಿಧ ವಿಧ ಚಿತ್ತಾರಗಳನು ಬರೆಯುತ
ಕೋಣೆಯ ಹೊರಗಣ ಜಗವನೆ ಮರೆಯುತ
ಕನಸನು ಕಾಣುತಲಂತೇ ನಿಂದಿರೆ
ಬೆನ್ನಿಗೆ ಎಣ್ಣೆಯ ಲೇಪಿಸಲಿಂದಿರೆ
ಇದಕೂ ಮಿಕ್ಕಿಹ ಸುಖವಿನ್ನುಂಟೆ?
ಸುಮ್ಮನೇತಕೋ ಕೆಲಸದ ತಂಟೆ?
ಬಿಸಿ ಬಿಸಿ ನೀರಿನ ಮಣಿಗಳ ಕೈಯೊಳು
ಹಿಡಿಯುತಲವುಗಳ ಧರಿಸಿ ಮೈಯೊಳು
ಬಿಸಿಲಿನ ಕೋಲಿಗೆ ಮೈಯನು ಒಡ್ಡಿ
ನೀರಿನ ಮಣಿಗಳ ಮಿಸುನಿಯೊಳದ್ದಿ
ಅವುಗಳ ಗೃಹಿಣಿಗೆ ತೋರಿಸಿ ನಲಿಯುತ,
“ಹುಡುಗಾಟವಿದೇನೇಳಿರಿ” ಎನ್ನುತ
ಸಿಡುಕಲು, ಆಕೆಯ ಕೆನ್ನೆಗೆ ಚಿಮುಕಿಸೆ
ನೀರನು ನಗುತಲಿ ಕಣ್ಣನು ಮಿಟುಕಿಸೆ,
“ಅಯ್ಯೋ! ಮುಖಕ್ಕೆ ಹಾರಿತು ಎಣ್ಣೆ!”
ಎನ್ನುತ ಕೋಪದೊಳೊರೆಯಲು ಚೆನ್ನೆ,
ಅಂತೂ ಇಂತೂ ಸ್ನಾನವ, ಆಡುತ
ಮುಗಿಸುತ, ಕಂಬಳಿ ಮುಸುಕೊಳಗಡಗುತ
ಬಿಸಿ ಬಿಸಿ ಕಾಫಿಯು ಬರಲಿನ್ನೊಮ್ಮೆ

ಕುಡಿದಾಕೆಯ ಸೆಳೆಯುತ ತುಟಿಗೊಮ್ಮೆ
ಬಿಸಿಯ ಮುತ್ತನೊತ್ತುತ್ತಿರೆ ಸುಖದಿ
ಸೋಮಾರಿಯೆ ಸರಿ ಓಡುವ ಜಗದಿ!

ದಿಟವೈ ಈ ಜಗ ನಿಲದೋಡುತಿದೆ
ಗಳಿಗೆ ಗಳಿಗೆಗೂ ಮುಂದಕೋಡುತಿದೆ
ಏಕಿದಾತುರವೊ ಅರಿಯೆನು ನಾನು!
ತಲೆ ಹೋಹಂತಹ ಕೆಲಸವದೇನು!
ಧೂಳನೆಬ್ಬಿಸುತ ಓಡುವ ಕಾರು
ತೆರಳಲು ಗಂಟೆಗೆ ಮೈಲಿನ್ನೂರು
ಏನುಪಯೋಗವೊ? ಅದರಲಿ ಕುಳಿತ
ಪೆದ್ದಗೆ ಬರುವುದೆ ಬುದ್ಧಿಯು ಬಲಿತ?

ಎದ್ದರು ನೇಸರಿಗಿಂತಲು ಮುನ್ನವೆ
ಸೂರ್ಯೋದಯವನೆ ಸನಿಯದ ಬನ್ನವೆ!
ಎದ್ದು ಗಡಿಬಿಡಿಯೊಳೋಡಾಡುತ್ತ
ಮಲಗಿರುವವರನು ಬೈದಾಡುತ್ತ
“ಶುದ್ಧ ಸೋಮಾರಿ! ಏಳದೆ ಉಂಟೆ?”
ಎನ್ನುತ ಬರಿದೇ ಗೈಯುತ ತಂಟೆ,
ಒಲೆ ಹತ್ತದೆಯೇ ಇದ್ದರು ಕೂಡ
“ಕಾಫಿ ಆರಿತು” ಎನ್ನುತ ದಡಬಡ
ಸದ್ದನು ಮಾಡಿ ಪಾತ್ರೆಯ ಕೆಡವಿ
ಮೊಲೆಗೂಸನು ಸಹ ಎಬ್ಬಿಸಿ ತಡವಿ
ಇಷ್ಟಾದರು ಮಲಗಿಹರನು ದೂಷಿಸಿ
ಕಿವಿ ಕಣ್ಣುಗಳಿಗೆ ನೀರನು ಚಿಮುಕಿಸಿ
“ತಣ್ಣೀರಿದ್ದರೆ ತಣ್ಣೀರೇ ಸರಿ!
ಬಿಸಿನೀರಿದ್ದರೆ ಹೂಂ ಅದಕೂ ಸರಿ!”
ಎನ್ನುತ ನೀರನು ಮೈಯ್ಯಿಗೆ ಎರಚಿ

ಚುಟುಕೊಳು ಸ್ನಾನವ ಮುಗಿಸುತ, ಅರಚಿ
ಏನೇನೋ ಮಂತ್ರಗಳನು ಬಾಯೊಳು,
ಗಟಗಟ ಕಾಫಿಯ ಸುರಿದು ಗಂಟಲೊಳು
ಮನೆಯಾಕೆಯ ಕಡೆ ತಿರುಗುತ ಮಂದ-
ಹಾಸವೊಂದನೂ ಬೀರದೊಲವಿಂದ
ಓಡುವರೆಲ್ಲಿಗೊ ಅವಸರದಿಂದ
ಸವಿಯದೆ ಸುತ್ತಣ ಪ್ರಕೃತಿಯ ಚೆಂದ!
ಈ ಅವಸರವೇತಕೊ ನಾ ಕಾಣೆ!
ಇದರಿಂದೇನುದ್ಧಾರವೊ ಕಾಣೆ!

“ಆತುರಗಾರಗೆ ಬುದ್ಧಿಯೆ ಮಟ್ಟು!”
ಅವ ಕೈ ಹಾಕಿದ ಕಾರ್ಯನೆ ಛಟ್ಟು!
ಆತುರ ಮರವುಗಳೆರಡಕು ನಂಟು!
ಅದರಿಂ ತಾಪತ್ರಯ ನೂರೆಂಟು!-
ಏನನೊ ಬರೆಯುತ ಕುಳಿತಿರೆ, ಚೆನ್ನೆ
ಕಾಫಿಯ ಮುಂದಿಡೆ, ಲೋಟವದನ್ನೆ
ಮಸಿಯ ಕುಡಿಕೆಯಿದು ಎನ್ನುತ ಭ್ರಮಿಸಿ
ಅದರೊಳೆ ಲೇಖನಿಯದ್ದುತ ಕಸಿವಿಸಿ
ಪಡುವುದೇತಕೋ! ಬಳಿಕ ಗೃಹಿಣಿಯನು
ಬೈವುದೇತಕೋ! ಕಣ್ಣಿನ ಮಣಿಯನು
ನೋಯಿಸಿ, ಸಂಸಾರದ ಸೊದೆಗಡಲೊಳು
ಹುಳಿಯ ಹಿಂಡುವುದಕಿಂತಲು, ಜಗದೊಳು
ಜಡತನದಿಂದಿರುವುದೆ ಮೇಲಲ್ಲವೆ?
ಇಲ್ಲದೊಡೀ ಬಾಳ್‌ ವ್ಯರ್ಥವಲ್ಲವೆ?

ಚೆಲುವ ಸವಿಯಲೂ ಇವರಿಗಾತುರವು!
ಇಲ್ಲವೆ ಇಲ್ಲವು ನಿಲ್ವ ಕಾತರವು!-
ಪೆಪ್ಪರಮೆಂಟನು ಕೊಟ್ಟರೆ ತೆಗೆದು

ಚಪ್ಪರಿಸದೆ ಅದ ಕಚಕಚನಗಿದು
ನುಂಗುವರೀ ಜನಕೇನು ಹೇಳಲಿ!
ಜಗವನೆ ಹೊತ್ತಿಹರೇನೊ ತೋಳಲಿ
ಎನ್ನುವ ತೆರದೊಳು ಓಡಾಡುವರು!
ಸೋಮಾರಿಯ ತನ್ನಷ್ಟಕೆ ಬಿಡರು!

ಪಾದರಸವು, ದಿಟ ಚುರುಕ ತವರೂರು!
ಏನುಪಯೋಗವೊ? ಬಿದ್ದರೆ ಚೂರು!
ಬೆಣ್ಣೆಯು ಜಗದೊಳು ಮೊದ್ದಿನ ಮುದ್ದೆ!
ನೆಲಕ್ಕೆ ಬಿದ್ದರು ಒಡೆವುದೆ ಪೆದ್ದೆ?

ಇನ್ನೇತಕೆ ಬರಿ ಚರ್ಚೆಯು ಸಾಕು!
ಓಡುವಿಳೆಗೆ ಸೋಮಾರಿಯೆ ಬ್ರೇಕು!
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...