Home / ಕವನ / ಅನುವಾದ / ಇರುಳ ದೇವಿ

ಇರುಳ ದೇವಿ

ಬೇಗ ಪಡುವ ತೆರೆಯ ತುಳಿದು,
ಇರುಳ ದೇವಿ, ಬಾ.
ಮಬ್ಬುಗವಿಯೊಳೊಬ್ಬಳಿದ್ದು,
ಹಗಲು ಸಮೆಯದಾಗ ಹೆಣೆದ
ಸೊಗದ ಭಯದ ಕನಸ ಬೀರಿ,
ಉಬ್ಬಿಸುತ್ತ, ಬೆದರಿಸುತ್ತ,
ಬಾ, ಬೇಗ, ಬಾ.
ಅರಿಲ ಹೂವು ನೆಯ್ದ ಕಪ್ಪು
ದುಗುಲವುಟ್ಟು ಬಾ.
ಹಗಲ ಕಣ್ಗೆ ಕುರುಳ ಕವಿಸಿ,
ಮುತ್ತುಕೊಟ್ಟು ದಣಿಸಿ ಕಳಿಸಿ,
ಸುತ್ತ ಸುಳಿದು, ನಾಡಿನಲ್ಲಿ
ಮಂಕು ತಳಿದು, ಶಂಕೆಯಳಿದು
ಅರಸುವೆನಗೆ ಬಾ.
ಕರಗಿ ಮಂಜು, ಬೆಳಕು ಬರಲು,
ನಿನಗೆ ಸುಯ್ದೆನು.
ಅರಳ ತಳಿರ ಮೇಲೆ ಬಿಸಿಲ
ಹೊರೆಯ ಹೇರಿ, ಏರಿ ಹಗಲು
ಬೇಡವಾದ ಬಳಗದಂತೆ,
ಕಾಡಿ ತಂಗುತಿರಲು, ಬಾಡಿ
ನಿನಗೆ ಸುಯ್ದೆನು.
ನಿನ್ನ ತಮ್ಮ ಸಾವು ಬಂದು,
ವರಿಸು ಎಂದನು.
ನಿನ್ನ ಕಂದ ನಿದ್ದೆ ಬಂದು,
ಕಣ್ಣ ಹೊಸಕಿ, ಜೇನ ಮುಸುಕಿ,
ಅಪ್ಪಿಕೊಳಲೆ, ಬಳಿಯೊಳೊರಗಿ?
ಒಪ್ಪು, ನಲ್ಲೆ ಎಂದನದಕೆ
ಒಲ್ಲೆ ಎಂದೆನು.
ನೀನು ಸತ್ತಮೇಲೆ ಸಾವು
ಬೇಗ, ಆಗಲೇ!
ನೀನು ಹೋದಮೇಲೆ ನಿದ್ದೆ-
ಕೇಳಬಲ್ಲೆ ವರವನವರ,
ಕೇಳಿಕೊಳ್ಳುವೆನಮ್ಮ ನಿನ್ನ,
ಒಲುಮೆಯಿರುಳೆ, ಬಯಕೆ ಸಲಿಸು
ಬೇಗ, ಬಾ, ಬಾ.
*****
SHELLEY : To The Night
Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...