Home / ಬಾಲ ಚಿಲುಮೆ / ಕಥೆ / ಚತುರ್ದಂತನ ಕಥೆ

ಚತುರ್ದಂತನ ಕಥೆ

ಒಂದಾನೊಂದು ಕಾಡಿನಲ್ಲಿ ಚತುರ್ದಂತನೆಂಬ ಮಹಾ ಗಜವಿತ್ತು. ಅದು ಒ೦ದು ಹಿಂಡಿಗೆ ಸಲಗವಾಗಿ ಸುಖವಾಗಿತ್ತು. ಆ ಆನೆಯ ಕಾಡಿನಲ್ಲಿ ಒಂದು ಸಲ ದೊಡ್ಡ ಅನಾವೃಷ್ಟಿಯು ಬಂದು, ಮಳೆಗಳು ಇಲ್ಲದೆ ಹೋದುವು. ಕೆರೆಗಳು, ಮಡುಗಳು, ಸರೋವರಗಳು ಒಣಗಿ ಹೋದುವು. ಆಗ ಆನೆಗಳೆಲ್ಲ ಆ ಸಲಗನನ್ನು ಕುರಿತು “ದೇವಾ, ಮರಿಗಳೆಲ್ಲ ಬಾಯಾರಿಕೆಯಿಂದ ಸಾಯುವಂತಾಗಿವೆ: ಕೆಲವು ಸತ್ತೂ ಹೋಗಿನೆ. ಅದರಿಂದ ಎಲ್ಲಾದರೂ ನೀರಿರುವ ಕಡೆಯನ್ನು ನೋಡಬೇಕು. ಸದ್ಯಕ್ಕೆ ನೀರು ಕುಡಿದು ಬದುಕೋಣ” ಎಂದುವು. ಅಗ ಆನೆಯು ಹಾಗೇ ನಿಂತುಕೊಂಡು ಬಹುವಾಗಿ ಯೋಚನೆಮಾಡಿ ಕೊನೆಗೆ ಹೇಳಿತು: “ಜನಗಳು ಹೋಗುವುದಕ್ಕೆ ಆಗದಿರುವ ಕಡೆಯಲ್ಲಿ ಒಂದು ದೊಡ್ಡ ಮಡುವಿದೆ. ಅದು ಯಾವಾಗಲೂ ಪಾತಾಲ ಗಂಗಾಜಲದಿಂದ ಪೂರ್ಣವಾಗಿಯೇ ಇರುತ್ತದೆ. ಅಲ್ಲಿಗೆ ಹೋಗೋಣ” ಎಂದು ಹೇಳಿ ಆನೆಗಳ ಹಿಂಡನ್ನು ಕರೆದು ಕೊಂಡು ಐದು ರಾತ್ರಿಗಳು ನಡೆದು ಅಲ್ಲಿಗೆ ಹೋಯಿತು. ಆನೆಗಳೂ ಅಲ್ಲಿ ಬೆಳಗಿನಿಂದ ಸಂಜೆಯವರೆಗೂ ತಮಗೆ ಮನಬಂದಂತೆ ನೀರಿನಲ್ಲಿ ಆಡುತ್ತಿದ್ದು ಹೋದುವು.
ಆ ಸರೋವರದ ಸುತ್ತಲೂ ಮೊಲಗಳು ಮನೆಮಾಡಿ ಕೊಂಡಿದ್ದುವು. ಆ ಆನೆಗಳು ಬಂದು ಹೋಗುವಾಗ ಅವುಗಳ ಕಾಲಿಗೆ ಸಿಕ್ಕಿ ಎಷ್ಟೋ ಮೊಲಗಳು ಹತವಾದುವು. ಮೊಲಗಳ ಬಿಲಗಳಂತೂ ಹೇಳಲು ಹೆಸರಿಲ್ಲದೆ ಹೋದುವು. ಅವುಗಳಿಗೆ ಸಿಕ್ಕಿ ಬದುಕಿ ಕೊಂಡರೂ ಅಂಗಭಂಗವನ್ನು ಹೊಂದಿ ಸತ್ತಂತೆ ಆದುವು. ಅವೆಷ್ಟೋ ಹೀಗೆ ಆಗಲು ಕೊನೆಗೆ ಅವುಗಳೆಲ್ಲಾ, ಆನೆಗಳು ಹೋದ ಮೇಲೆ ಸಭೆ ಮಾಡಿದುವು: “ಹೀಗಾದರೆ ನಾವು ಬದುಕುವಂತಿಲ್ಲ. ಆ ಆನೆಗಳ ಹಿಂಡು ದಿನವೂ ಬರುವುದು. ಅದಕ್ಕೆ ಇನ್ನೆಲ್ಲೂ ನೀರಿಲ್ಲ. ಅವು ಒ೦ದು ಸಲ ಬಂದು ಹೋದರೇನೇ ನಮಗೆ ಇಷ್ಟು ಅವಸ್ಥೆಯೆಂದ ಮೇಲೆ, ದಿನ ದಿನವೂ ಬಂದರೆ ನಮ್ಮ ಗತಿಯೇನು? ನಾವು ಉಳಿಯುವಂತೆಯೇ ಇಲ್ಲ. ಕೇಳಿಲ್ಲವೆ?
ಮುಟ್ಟಿ ಮುಟ್ಟುತಲೆ ಕೊಲ್ಲುವುದು ಆನೆ ॥
ಮೂಸಿ ಮೂಸುತಲೆ ಕೊಲ್ಲುವುದು ಹಾವು ॥ 
ನಗುತ ನಗುತಲೇ ಕೊಲ್ಲುವನು ಅರಸು ॥ 
ಮಾನ ತೋರುತಲೆ ಕೊಲ್ಲುವನು ದುಷ್ಟ ॥೧೨॥ 
ಅದರಿಂದ ಏನಾದರೊಂದುಪಾಯ  ಮಾಡಲೇಬೇಕು” ಎಂದು ಎಲ್ಲವೂ ಏಕ ಕಂಠದಿಂದ ಹೇಳಿದುವು. ಒ೦ದು ಹೇಳಿತು; “ಈ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗೋಣ. ಮನುವೂ. ಮನುವೂ ವ್ಯಾಸನೂ ಹೇಳಿಲ್ಲವೆ?
ಕುಲಕಾಗಿ ಬಿಡುವುದೊಬ್ಬನನು| ಕುಲವನೇ ಬಿಡು ಗ್ರಾಮಕಾಗಿ॥ 
ಗ್ರಾಮವನು ಬಿಡು ದೇಶಕಾಗಿ| ಧರೆಯ ಬಿಡಬೇಕ ತನಗಾಗಿ ॥೧೩॥ 
ಕ್ಷೇಮವನು ತಪ್ಪದೆಯೆ ಕೊಟ್ಟು| ಸಸ್ಯಗಳ ಚೆನ್ನಾಗಿ ಬೆಳೆವ | 
ಪಶುವೃದ್ಧಿಗೈವ ಭೂಮಿಯನು। ನೃಪತಿ ಬಿಡಬೇಕು ತನಗಾಗಿ ॥೧೪॥ 
ಆಪದಕೆ ಧನವ ನಿಡಬೇಕು| ಧನವ ಬಿಡಬೇಕು ಸತಿಗಾಗಿ॥ 
ಧನವನಾಗಲಿ ಸತಿಯನಾಗಲಿ | ಸತತೆ ಬಿಡಬೇಕು ತನಗಾಗಿ ॥೧೫॥ 
ಇನ್ನು ಕೆಲವರು ಹೇಳಿದರು:- ಉಂಟೆ, ತಾತ ಮುತ್ತಾತರಿಂದ ಇದ್ದು ಕೊಂಡಿರುವ ಈ ಸ್ಥಾನವನ್ನು ಥಟ್ಟನೆ ಬಿಡುವುದು ಎಂದರೆ ಹೇಗೆ? ಆ ಆನೆಗಳು ಮತ್ತೆ ಬರುವುದಕ್ಕಿಂತ ಮುಂಚೆಯೇ ಅವುಗಳನ್ನು ಹೆದರಿಸುವುದಕ್ಕೆ ಏನಾದರೊಂದು ಉಪಾಯವನ್ನು
ಮಾಡಿ. ಕೇಳಿಲ್ಲವೆ?
ವಿಷವಿಲ್ಲದಿದ್ದರೂ ಹಾವು ಹೆಡೆಯೆತ್ತಬೇಕು | 
ವಿಷವಿರಲಿ ಇರದಿರಲಿ ಹೆಡೆ ನೋಡೆ ಭೀತಿಯಹುದು ॥೧೬॥ 
ಮಿಕ್ಕವರು ಅದಕ್ಕೆ ಒಪ್ಪಿದರು. ಒಂದು ಉಪಾಯವನ್ನೂ ಒಬ್ಬರು ಹೇಳಿದರು:- ಅವರನ್ನು ಹೆದರಿಸುವುದಕ್ಕೆ ಒಂದು ಒಂದು ಉಪಾಯವಿದೆ. ನಮ್ಮ ರಾಜನಾದ ವಿಜಯದತ್ತನೆಂಬುವನು ಚಂದ್ರ ಮಂಡಲದಲ್ಲಿ ಇದ್ದಾನೆ. ಅವನು ಕಳುಹಿಸಿದನೆಂದು ಒಬ್ಬ ದೂತನನ್ನು ಈ ಸಲಗನ ಹತ್ತಿರಕ್ಕೆ ಕಳುಹಿಸೋಣ. ಆ ದೂತನು “ಚಂದ್ರನು ನೀವು ಇಲ್ಲಿಗೆ ಬರುವುದನ್ನು ನಿಷೇಧಿಸಿದ್ದಾನೆ” ಎಂದು ಹೇಳಲಿ. ಆಗ ಚಂದ್ರನು ಬೇಡವೆಂದನೆಂದು ಹೆದರಿ ಅವು ನಿಂತು ಹೋಗುವುವು.”
ಇತರರು ಹೇಳಿದರು:- “ಉಪಾಯವೇನೋ ಚೆನ್ನಾಗಿದೆ. ನಮ್ಮ ಲಂಬಕರ್ಣನು ದೂತನಾಗಿ ಹೋಗಲಿ. ಅವನು ರಚನೆ ರಚನೆಯಾಗಿ ಮಾತು ಆಡಬಲ್ಲವನು. ದೂತನು ಏನು ಮಾಡಬೇಕೆಂದು ಅರಿತವನು” ಎಂದರು. ಅದರಂತೆಯೇ ಲಂಬಕರ್ಣನು ಚಂದ್ರದೂತನಾಗಿ ಹೋಗುವುದು ಎಂದಾಯಿತು.
ಲಂಬಕರ್ಣನು ಆನೆಗಳ ಹಿಂಡು ಬರುವ ಮಾರ್ಗದಲ್ಲಿ ಎತ್ತರವಾದ ಬಂಡೆಯ ಮೇಲೆ ಕುಳಿತು, ಆ ಸಲಗನನ್ನು ಮಾತನಾಡಿಸಿದನು: “ಎಲೆ ದುಷ್ಟಗಜ, ಏನೂ ಲಕ್ಷ್ಯವಿಲ್ಲದೆ, ಕೊಂಚವೂ ಹೆದರಿಕೆಯಿಲ್ಲದೆ ಚಂದ್ರನ ಸರೋವರಕ್ಕೆ ಬರುತ್ತಿದ್ದೀಯೇ? ನೀನು ಬರಕೂಡದು. ಹಿಂತಿರುಗಿ ಹೋಗು” ಎಂದುದನ್ನು ಕೇಳಿ, ಆನೆಯು ಆಶ್ಚರ್ಯಪಟ್ಟು, “ಅಯ್ಯಾ, ನೀನು ಯಾರು?” ಎಂದಿತು. ಅದಕ್ಕೆ ಆ ಮೊಲವು “ನಾನು ಚಂದ್ರ ಮಂಡದಲ್ಲಿರುವ ಲಂಬಕರ್ಣನು. ಭಗವಾನ್ ಚಂದ್ರನು ನಿನ್ನ ಬಳಿಗೆ ಅಟ್ಟಿದ ದೂತನು.” ಎಂದಿತು. ಆನೆಯು “ಭಗವಾನ್ ಚಂದ್ರನು ಏನು ಅಪ್ಪಣೆ ಮಾಡಿರುವನೋ ಹೇಳು.” ಎನ್ನಲು, ಮೊಲವು “ಹಿಂದಿನ ದಿವಸ ನೀನು ನಿನ್ನ ಹಿ೦ಡಿನೊಡನೆ ಇಲ್ಲಿಗೆ ಬಂದಾಗ ಎಷ್ಟು ಸಾವಿರ ಮೊಲಗಳಿಗೆ ಕೇಡಾಯಿತು ಬಲ್ಲೆಯಾ? ಮೊಲಗಳು ನಮ್ಮವರೆ೦ದು ಕಾಣೆಯಾ?” ಅದರಿಂದ ಬದುಕಬೇಕೆಂದಿದ್ದರೆ ಹಿಂದಿರುಗು. ಇನ್ನು ಇಲ್ಲಿಗೆ ಬರಬೇಡ. ಎಂದು ಭಗವಾನ್ ಚಂದ್ರನ ಅಪ್ಪಣೆಯಾಗಿರುವುದು. ಈಗ ಚಂದ್ರನೂ ತನ್ನ ಕಡೆಯವರ ದುಃಖವನ್ನ ವಿಚಾರಿಸಲು ಈ ಸರೋವರಕ್ಕೆ ಬಂದಿರುವನು ನೋಡು,” ಎಂದು ನೀರಿನಲ್ಲಿ ಪ್ರತಿಬಿಂಬಿಸಿದ್ದ ಚಂದ್ರನ ಬಿಂಬವನ್ನು ತೋರಿಸಿತು.
ಆನೆಯು ನೀರಿನಲ್ಲಿರುವ ಚಂದ್ರನ ಪ್ರತಿಬಿಂಬವನ್ನು ನೋಡಿತು. ಅದು ಅಲೆಗಳಿಗೆ ಸಿಕ್ಕಿ ಹುಣಿಯುರಲು, ಆನೆಗೆ ಚಂದ್ರನು ಕೋಪಗೊಂಡು ಹಾರಾಡುತ್ತಿರುವನು ಎನ್ನಿಸಿತು. ಆ ಬಿಂಬಕ್ಕೆ ಕೈ ಮುಗಿದು “ದೇವ, ಅಪರಾಧವನ್ನು ಮನ್ನಿಸು. ಇನ್ನೂ ಇತ್ತ ಕಡೆ ಬರುವುದಿಲ್ಲ. ಎಂದು ತನ್ನವರನ್ನು ಕರೆದುಕೊಂಡು ಹೊರಟು ಹೋಯಿತು. ಮೊಲಗಳು ಸುಖವಾಗಿದ್ದುವು. ಅದರಿಂದ ನಾನು “ಚಂದ್ರಮನ ಹೆಸರೆತ್ತಿ ಬದುಕಿದುವು ಮೊಲಗಳು” ಎಂದು ಹೇಳಿದುದು. ಹಾಗಿಲ್ಲದೆ, ಕೀಳಾದವನನ್ನು ಕಟ್ಟಿಕೊಂಡರೆ ಆದೀತೆ? ಕೇಳಿಲ್ಲವೆ?
ಮೊಲವು ಹಕ್ಕಿಯು ಕಾದಿದುವು| ನ್ಯಾಯ ಕೇಳಲು ಹೋದುವು ॥ 
ಬೆಕ್ಕು ಹೇಳಿತು ನ್ಯಾಯವಾ। ತಿಂದು ಬಿಟ್ಟಿತು ಇಬ್ಬರಾ ॥೧೭॥ 
ಹಕ್ಕಿಗಳು “ಅದು ಹೇಗೆ?” ಎಂದು ಕೇಳಿದುವು. ಕಾಗೆಯು
ಹೇಳಿತು:-
*****
ಗುಬ್ಬಿ ಮೊಲ ಮತ್ತು ಬೆಕ್ಕಿನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...