Home / ಕಥೆ / ಸಣ್ಣ ಕಥೆ / ರೈತರ ಬಂಡಾಯ

ರೈತರ ಬಂಡಾಯ

ಶ್ರೀರಂಗಪಟ್ಟಣವು ಕೈಸೇರಿದ ಮೇಲೆ ಒಡೆಯರ ರಾಜ್ಯವು ಕ್ರಮವಾಗಿ ಬಳೆಯಿತು; ರಾಜ್ಯವು ಹೆಚ್ಚಿದಂತೆ ವೆಚ್ಚವೂ ಹೆಚ್ಚಿತು. ರಾಜಒಡೆಯರು ಉಪಾಯದಿಂದ ನಿರ್ವಹಿಸುತ್ತಿದ್ದರು. ಕಂಠೀರವ ಒಡೆಯರು ಹಣದ ತೊಂದರೆ ಬಂದಾಗ ಒಂದು ಉಪಾಯವನ್ನು ಮಾಡಿದರು; ಧನಿಕರೆಂದು ಹೆಸರಾದವರನ್ನು ಹಿಡಿದು ಅವರಿಂದ ಹೆಚ್ಚಾದ ದ್ರವ್ಯವನ್ನು ತೆಗೆದುಕೊಳ್ಳುತ್ತಿದ್ದರು. ಅರಸರು ಬಲಿಷ್ಟರಾಗಿದ್ದುದರಿಂದ ಅವರ ವಿರೋಧವನ್ನು ಕಟ್ಟಿಕೊಳ್ಳುವುದಕ್ಕೆ ಅಂತಹವರು ಹೆದರುತ್ತಿದ್ದರು. ಚಿಕ್ಕದೇವರಾಜ ಒಡೆಯರಿಗೆ ರಾಜ-ಭಾರದಲ್ಲಿ ಬೊಕಸವನ್ನು ತುಂಬಬೇಕೆಂದು ಬಲವಾದ ಆಸೆಯಾಯಿತು.

ಕಾಲಕಳೆಯುತ್ತ ಈ ದೊರೆಗೆ ಹಣದ ಯೋಚನೆಯೇ ಬಹಳವಾಯಿತು. ರಾಜಾದಾಯ ಹೆಚ್ಚುವಂತೆ ಮೊದಲು ಈ ದೊರೆಗಳು ನೆಲಗಂದಾಯವನ್ನು ಹೆಚ್ಚಿಸಿದರು. ಆಗ ಕೆಲವು ರೈತರು “ಅರಮನೆಗೆ ಕೊಡತಕ್ಕ ಕಂದಾಯ, ವಾರದ ದವಸ ಮುಂತಾದುವನ್ನು ನಾವು ಕೊಡುವದಿಲ್ಲ. ಕಾಡಭೂಮಿಯನ್ನು ಬಸವಣ್ಣನು ಉಳುತ್ತಾನೆ. ದೇವೇಂದ್ರನು ಮಳೆಯನ್ನು ಕರೆಯುತ್ತಾನೆ, ನಾವು ಕಷ್ಟ ಪಟ್ಟು ಪೈರುಮಾಡಿ ನಿಮಗೇತಕ್ಕೆ ಕೊಡಬೇಕು” ಎನ್ನುತ್ತ ಕಂದಾಯವನ್ನು ಸಲ್ಲಿಸದೆ ದಂಗೆಯೇಳುವ ಯೋಚನೆಯಲ್ಲಿದ್ದರು. ಆಗ ಒಡೆಯರವರು ಮುಖ್ಯರಾದ ರೈತರನ್ನು ಹಿಡತರಿಸಿ ಶಿಕ್ಷೆಗೆ ಗುರಿ ಮಾಡಿಸಿದರು; ದಂಗೆಯು ಏಳುವುದಕ್ಕೆ ಮೊದಲೇ ಅಡಗಿ ಹೋಯಿತು.

ನೆಲಗಂದಾಯವೇ ಅಲ್ಲದೆ ಇತರ ಅನೇಕ ಮಾರ್ಗಗಳಲ್ಲಿ ಈ ದೊರೆಗಳು ಹಣವನ್ನು ಶೇಖರಮಾಡಿದರು. ನಿತ್ಯವೂ ೨೦೦೦ ವರಹಗಳು ನಾಮತೀರ್ಥದ ವೇಳೆಗೆ ಅರಮನೆಗೆ ಸಂದಾಯವಾಗತಕ್ಕದ್ದೆಂದು ಕಟ್ಟಳೆಮಾಡಿದ್ದರು; ಎಂದಾದರೂ ಹಣ ಬರುವುದು ಸಾವಕಾಶವಾದರೆ ದೊರೆಗಳು ರಾಮಾಯಣ ಪಾರಾಯಣದಲ್ಲಿಯೇ ಕಾಲ ಕಳೆದು ೨೦೦೦ ವರಹ ಬಂದ ಬಳಿಕ ಅವುಗಳನ್ನು ಖಾಸಾ ಬೊಕ್ಕಸಕ್ಕೆ ಕಳುಹಿಸಿ ಅನಂತರ ಆರೋಗಣೆಯನ್ನು ಒಪ್ಪಿಸಿಕೊಳ್ಳುತ್ತಿದ್ದರು.

ಇದರಿಂದ ಇವರಿಗೆ ನೆರೆನಾಡುಗಳಲ್ಲಿ ಲೋಭಿಗಳೆಂಬ ಹೆಸರು ಸಾಧಾರಣವಾಯಿತು. ಮಧುರೆಯ ರಾಜ್ಯದಲ್ಲಿ ಚಿಕ್ಕದೇವರಾಜ ಒಡೆಯರ ಹೆಸರನ್ನು ಹಂಗಿಸುವಂತಹ ಹಾಡುಗಳು ಜನರ ಬಾಯಿಗಳಲ್ಲಿ ಆಡುತ್ತಿದ್ದುವು; ಏಕೆಂದರೆ ಮಧುರೆಯಲ್ಲಿ ಅದೇ ಕಾಲದಲ್ಲಿ ಆಳುತ್ತಿದ್ದ ಮಂಗಮ್ಮನೆಂಬಾಕೆಯು ಅನೇಕ ಧರ್ಮ ಕಾರ್ಯಗಳನ್ನು ಮಾಡಿಸಿ ಔದಾರ್ಯಕ್ಕೆ ಪ್ರಸಿದ್ದಿಯಾಗಿದ್ದಳು. ಚಿಕ್ಕದೇವರಾಜ ಒಡೆಯರು ಹಣವನ್ನು ಸಂಪಾದನೆ ಮಾಡುವುದರಲ್ಲಿ ಇಂಗ್ಲೆಂಡಿನ ೭ನೆ ಹೆನ್ರಿಯಂತಿದ್ದರು. ಅವರಿಗೆ ಈ ರೀತಿ ಕೆಟ್ಟ ಹೆಸರು ಬಂದರೂ ಅವರು ಗಳಿಸಿದ ಹಣದಿಂದ ರಾಜ್ತವು ಭದ್ರವಾಯಿತು.
*****
[ವಂಶರತ್ನಾಕರ ಪುಟ ೧೨೧, ೧೨೪; ವಂಶಾವಳಿ ಪುಟ ೧೨೩, ೧೨೬; ಸತ್ಯನಾಥಯ್ಯರ್ರವರ ಮಧುರೆ ನಾಯಕರ ಚರಿತ್ರೆ ಮತ್ತು ಹೊಸ ಗೆಜಟಿಯರ್]

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...