ಮೂಲ: ತಮಿಳು. ತಮಿಳಿನ ಬರಹಗಾರರ ಹೆಸರು ತಿಳಿಸಿಲ್ಲ.
ಹೋದವರುಷ ದೀಪಾವಳಿ ಹಬ್ಬ ಹಾಗಾಯಿತು-ಜಗಳವೂ, ಮನಸ್ತಾಪವೂ, ದುಃಖವೂ, ಅಳುವದೂ ಆಗಿ ಹೋಯಿತು. ನಾಳೆ ರಾತ್ರಿ ದೀಪಾವಳಿ ಪ್ರಾರಂಭವೆಂದರೆ, ಈ ದಿನ ರಾತ್ರಿ ಗೀತಾ (ನನ್ನ ಮಡದಿ) ಮೂನ್ನೂರಾಎಪ್ಪತ್ತು ರೂಪಾಯಿ ಬೆಲೆಬಾಳುವ ಮೂಗು ಬೊಟ್ಟನ್ನು ಕಳೆದು ಕೊಂಡು ನನ್ನೆದುರು ಬಂದು ನಿಂತಳು. “ಹೋದರೆ ಹೊಗಲಿ” ಎನ್ನುವ ಸ್ಥಿತಿಯಲ್ಲಾದರೂ ಇದ್ದೇವೆಯೇ ನಾವು!
ಗೀತಾ ತುಸು ಸಿಡಕು ಸ್ವಭಾವದಳು, ಅವಳು ಮನೆಗೆ ಬಂದಾಗಿನಿಂದಲೂ ಅವಳ ಮಾತು ನಾನು ಕೇಳುವದೇ ಹೊರ್ತು ನನ್ನ ಮಾತು ಅವಳು ಒಮ್ಮೆ ಸಹ ಕೇಳಿದವಳಲ್ಲ. ಆಯಿತು, ತನ್ನ ಇಷ್ಟದಂತೆ ಮಾಡಲಿ ಎಂದು ನಾನು ಸುಮ್ಮನಾಗಿ ಬಿಟ್ಟಿರುವೆನು. ನಾನು ಹೇಳಿದಂತೆ ಕೇಳಿದ್ದರೆ. ಮೂಗುಬೊಟ್ಟು ಕಳೆದು ಹೋಗುತ್ತಿತ್ತೆ?
ನಮ್ಮ ಬಂಗ್ಲೆಯ ಪಕ್ಕದ ಬಂಗ್ಲೆಯವರ ಮನೆಯವಳ ಜೊತೆಗೆ ನಮ್ಮವಳ ಸ್ನೇಹ. ಆ ನಿರ್ಮಲಾನ ಸ್ನೇಹ ಮಾಡಬೇಡವೆಂದು ಎಷ್ಟು ಸಲ ಹೇಳಿದರೂ ನಮ್ಮ ಗೀತಾ ನನ್ನ ಮಾತು ಕೇಳಲಿಲ್ಲ. `ನಿರ್ಮಲಾ’ ಅಂದರೆ ತೀರ ಸುಧಾರಕ ಪಂಥಕ್ಕೆ ಸೇರಿದವಳು. ಕ್ಲಬ್ಬಿಗೆ ಹೋಗುವಳು. ನಾಟಕ, ಸಿನೇಮಾ, ವ್ಯಾಖ್ಯಾನ, ಫುಟಬಾಲ, ಮ್ಯಾಚ, ಎಲ್ಲಿ ನೋಡಿದಲ್ಲಿ ನಿರ್ಮಲಾ ಇದ್ದೇ ಇರುವಳು. ಅವಳ ಜೊತೆಗೆ ಗೀತಾ ಇರದಿದ್ದರೆ ನಡೆದೀತೇ? ಆ ದಿನ ಸಂಜೆಗೆ ನಿರ್ಮಲೆಯ ಜೊತೆಗೆ ಗೀತಾ ಹೋಗಿ ಊರು ಸುತ್ತಾಡಿ ಬಂದಳು, ಮೂಗುಬಟ್ಟು ಕಳೆದು ಕೊಂಡಳು.
ಆ ಮೂಗುಬಟ್ಟು ಅವಳ ತೌರು ಮನೆಯ ಆಸ್ತಿ. ಅವಳ ತಂದೆಯಿಂದ ಆ ಮೂಗು ಬಟ್ಟನ್ನು ಕಸೆಯಲು ನಮ್ಮ ತಂದೆ ಹೂಡಿದ ಆಟ, ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಗೀತಾನ ತಂದೆಯೇನು ಸಾಮಾನ್ಯರೇ ಅಬಾ! ಬಾ!…. ಗೀತಾಳ ತಂದೆ ಕಲ್ಲಿನಿಂದ ನೀರು ತೆಗೆಯುವ ವ್ಯಕ್ತಿ. ನಮ್ಮ ತಂದೆ ಮರಳನ್ನು ನೀರಿನಂತೆ ಹರಿಬಿಡಬಲ್ಲ. ಗೀತಾಳ ತಂದೆ, ಅದೇಕೆ ನನ್ನ ಮಾವಂದಿರು ಅಂದು ಬಿಡೋಣ, ದೊಡ್ಡ ಹುದ್ದೆದಾರರು, ಪೋಲೀಸ ಇನಸ್ಸೆಕ್ಟರರು. ತಿಂಗಳಿಗೆ ನಾನೂರು ರೂಪಾಯಿ ಸಂಬಳ, ಮಹಾ ಕೃಪಣ. ಜೀವ ಬಿಡುವೆನೆಂದರೂ ಒಬ್ಬರಿಗೆ ಒಂದು ಕಾಸು ಕೂಡ ಕೊಡುವವನಲ್ಲ. ಕಡಿಮೆ ಖರ್ಚಿನಲ್ಲಿ ವರಸಿಕ್ಕಬೇಕೆಂಬ ಹವಣಿಕೆಯಲ್ಲಿಯೇ ಗೀತಾಗೆ ಹತ್ತೊಂಬತ್ತು ವರುಷಗಳು ಕಳೆದು ಹೋದವು. ಮಗಳ ಮದುವೆಯ ಪ್ರಸ್ತಾಪ ತಗೆದು ನನ್ನ ಅತ್ತೆಯವರು ಮಾವನ ಕೂಡ ದಿನಾಲು ಜಗಳ ವಾಡುತ್ತಿದ್ದರಂತೆ. “ಏನು ಮಾಡು ಅನ್ನುತ್ತೀ. ಸಿಕ್ಕ ಸಿಕ್ಕವರಿಗೆ ಮಗಳನ್ನು ಕೊಟ್ಟು ಬಿಡು ಅನ್ನುವಿಯಾ? ಒಂದು ಪರೀಕ್ಷೆ ಪಾಸಾಗುವರೋ ಇಲ್ಲವೋ ೨ ಸಾವಿರ ೪ ಸಾವಿರ ವರದಕ್ಷಿಣೆ ಕೇಳುವರು, ಅಯೋಗ್ಯರು. ತಡಿ, ವೇಳೆ ಬರುವದು. ಯಾವುದಕ್ಕೂ ವೇಳೆ ಬರಬೇಕು” ಎನ್ನುವರು. “ದುಡ್ಡು ಯಾರ ಸಲುವಾಗಿ ಗಳಿಸುವಿರಿ? ಎನ್ನುವಳು ನನ್ನ ಅತ್ತೆ, ಇವರಿಗೆ ಸುರಿಯಲಿಕ್ಕೇನು? ಎಂದು ಸಿಟ್ಟಿನಿಂದ ಬುಸುಗುಟ್ಟುತ್ತ ನನ್ನ ಮಾವಂದಿರು ಹೋಗಿಬಿಡುವರು.
ನನ್ನ ತಂದೆಯ ಆಶೆಗೂ ಮಿತಿ ಇಲ್ಲ. ನಾನು B.A. ಆದ ಮೇಲೆ ಎರಡು ವರುಷ ಮನೆ ಹಿಡಿದು ಕುಳಿತೆನು. ಎಲ್ಲಿಯಾದರೂ ನೌಕರಿ ನೋಡೋಣವೆಂದರೆ ತಂದೆಯವರ ಅಡ್ಡಿ. “ಹೋಗೋ ಮುರ್ಖಾ, ಸುಮನಿರೋ ನನಗೆಲ್ಲಾ ಗೊತ್ತಿದೆ. ನಿನಗೆ ನೌಕರಿ ಕೊಡುವವರಾದರೂ ಯಾರು? ಒಂದು ವೇಳೆ ಸಿಕ್ಕರೆ ತಿಂಗಳು ೪೦ ರೂಪಾಯಿಗಿಂತ ಹೆಚ್ಚಿನ ಸಂಬಳದ ನೌಕರಿ ನಿನಗೆ ಸಿಕ್ಕದು. ಅಷ್ಟು ಸಂಬಳದಲ್ಲಿ ಇದ್ದಿಯಾದರೆ ನಿನಗೆ ಕನ್ಯಾ ಕೊಡುವವರು ವರದಕ್ಷಿಣೆ ಎಷ್ಟು ಕೊಡುವರು? ಮಗನು ಆಯ್. ಸಿ. ಎಸ್. ಓದುವವನಿದ್ದಾನೆಂದು ನಾನು ದೇಶದಲ್ಲೆಲ್ಲ ಸುದ್ದಿ ಬೀರಿದ್ದೇನೆ. ಅಂದರೆ ಎಂಟು ಹತ್ತು ಸಾವಿರ ರೂಪಾಯಿ ವರದಕ್ಷಿಣೆ ಕೊಡುವವನು ಮುಂದೆ ಬಂದಾನು. ಒಮ್ಮೆ ಲಗ್ನವಾಗಿ ಬಿಟ್ಟರೆ ನೀನು ಎಥೇಷ್ಟವಾಗಿ ನೌಕರಿಗೆ ಹೋಗಬಹುದು. ಅಲ್ಲಿಯವರೆಗೂ ಬೇಡ.” ಎಂದರು. ಆದರೆ ಇವನ್ನೆಲ್ಲ ಕೇಳಿಯೂ ಗೀತಾನ ತಂದೆಯು ವರದಕ್ಷಿಣೆ, ವರೋಪಚಾರ, ಬೆಳ್ಳಿ ಹಿತ್ತಾಳೆ ಪಾತ್ರೆಗಳು ಎಲ್ಲವನ್ನೂ ಸೇರಿಸಿ ಎರಡು ಸಾವಿರದ ಮೇಲೆ ಒಂದು ಕಾಸೂ ಆಗದೆಂದರು.
ಕಡೆಗೆ ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ. ಗೀತಾನೇ ನನಗೆ ಗಂಟು ಬಿದ್ದಳು. ಆಗ ಅವಳ ಕಿವಿಯಲ್ಲಿ ವಜ್ರದ ಬೆಂಡೋಲೆ, ಕುತ್ತಿಗೆಯಲ್ಲಿ ಎರಡು ಎಳೆಗಳಸರ, ಕೈಯಲ್ಲಿ ಮೂರು ಜೊತೆ ಬಳೆಗಳು, ಮೂಗಿನಲ್ಲಿ ವಜ್ರದ ಮೂಗುಬೊಟ್ಟು ಹಾಕುತ್ತೇವೆಂದು ಮಾತನಾಡಿದರು. ಬಂಗಾರದ ಪಟ್ಟಿಯನ್ನು ಹಾಕುವದಾಗಿ ನಮ್ಮ ಮಾವನವರು ಅಂದರು. ಮೂಗು ಬೊಟ್ಟನ್ನು ಬಿಟ್ಟು ಉಳಿದ ಎಲ್ಲ ಒಡವೆಗಳು ಮದುವೆಯಲ್ಲಿ ಬಂದಂತಾದವು ಮೂಗುಬೊಟ್ಟಿಗಾಗಿ ನನ್ನ ತಂದೆಯವರು ಜಗಳ ಕೂಡಿದರು. “ಪಟ್ಟಿಯನ್ನು ಕೊಡುವಾಗ ಅದನ್ನು ಕೊಡುತ್ತೇವೆ” ಎಂದು ಹೇಳಿ ನನ್ನ ಮಾವನವರು ವಿವಾಹ ಮುಗಿಸಿದರು.
ಇನ್ನೇನು? ತಂದೆಯ ಇಚ್ಛೆಯಪ್ರಕಾರ ನಾನು ನೌಕರಿಗಾಗಿ ಅಲೆಯಲು ಅಡ್ಡಿ ಇಲ್ಲ. ಆಕೌಂಟೆಂಟ್ ಜನರಲ್ ಆಫೀಸದಲ್ಲಿ ನನಗೆ ೪೫ ರೂ, ಒಂದು ನೌಕರಿ ಸಿಕ್ಕಿತ್ತು. ಇದಾಗಿ ಒಂದು ವರುಷವಾದರೂ ನನ್ನ ಮಾವನವರು ಬಂಗಾರದ ಪಟ್ಟಿ ಯನ್ನಾಗಲೀ, ಮೂಗುಬೊಟ್ಟನ್ನಾಗಲೀ ನನ್ನ ಹೆಂಡತಿಗೆ ಕೊಡಲಿಲ್ಲ. ನನ್ನ ತಂದೆಯವರು ಸಿಟ್ಟಿಗೆದ್ದು ಕಾಗದದ ಮೇಲೆ ಕಾಗದ ಬರೆದರು. ನನ್ನ ಮಾವನವರೂ ಬಹಳ ಸಿಟ್ಟಿನವರು. ಅವರೂ ಅನೇಕ ಪತ್ರ ಬರೆದರು. ಇಬ್ಬರಲ್ಲಿಯೂ ಜಗಳವಾಯಿತು, ಮಧ್ಯಸ್ತಿಕೆ ಮಾಡಿ ಊರವರೆಲ್ಲರೂ ಇಬ್ಬರನ್ನೂ ಶಾಂತ ಪಡಿಸಿದರು. ಕಡೆಗೆ ಮೂಗುಬೊಟ್ಟು, ಕೊಡುವದಾಗಿ ಪಂಚರು ತೀರ್ಮಾನಿಸಿದರು. ಅದರ ಬೆಲೆ ಮುನ್ನೂರಾ ಎಪ್ಪತ್ತು ರೂಪಾಯಿಗಳೆಂದು ಮಾವನವರು ಹೇಳಿದರು. ಇನ್ನೂರಾದರೆ ಇದಕ್ಕೆ ಬೆಲೆ ಹೆಚ್ಚಾಯಿತೆಂಬುದು ತಂದೆಯವರ ಅಭಿಪ್ರಾಯ.
ಇಷ್ಟು ಕಷ್ಟ ಪಟ್ಟು ಸಂಪಾದಿಸಿದ ಮೂಗುಬೊಟ್ಟು ಈಗ ಗೀತಾ ಕಳೆದು ಬಿಟ್ಟಿದ್ದಾಳೆ.
ಮೂಗುಬೊಟ್ಟು ಕಳೆದು ಹೋದರೆ ಅದರ ಬದಲು ಇನ್ನೊಂದು ತಂದು ಕೊಡುವದಾಗುತ್ತದೆಯೇ ಈಗಿನ ಕಾಲದಲ್ಲಿ? ನನ್ನ ಯೋಗ್ಯತೆ ಏನು? ಎರಡು ವರುಷದ ನೌಕರಿ ಆದ ಮೇಲೆ ತುಟ್ಟಿ ಭತ್ತೆ, ಅದು ಇದೂ ಸೇರಿ ನನಗೆ ಬರುವದು ತಿಂಗಳಿಗೆ ೬೭ ರೂ. ಗಳು, ಇದರಲ್ಲಿ ಪ್ರಪಂಚವಾದರೂ ಸಾಗಬೇಕೋ ಬೇಡವೋ? ಮೂಗುಬೊಟ್ಟು ಕಳೆದು ಹೋದದ್ದು ಗೀತಾಗೆ ಗೊತ್ತೇ ಇರಲಿಲ್ಲ. ನಾನು ಹೇಳಿದ ಮೇಲೆಯೇ ಅವಳಿಗೆ ಗೊತ್ತು. ಅಂದು ಸಾಯಂಕಾಲ ಆಫೀಸಿನಿಂದ ಮನೆಗೆ ಬಂದೆನು, ಗೀತಾ ಬಹಳ ಸಂಭ್ರಮದಿಂದ ನನ್ನೆದುರು ಬಂದು “ಇದನ್ನು ಕೊಂಡು ಕೊಂಡಿದ್ದೆನೆ ಚನ್ನಾಗಿದೆಯೇ ನೋಡಿ” ಎಂದು ಒಂದು ರೇಶಿಮೆಯ ಜರದಂಚಿನ ಖಣವನ್ನು ತೋರಿಸುವದರಲ್ಲಿ ಲೀನಳಾಗಿದ್ದಳು.
ನಾನು ಅವಳ ಮುಖವನ್ನು ನೋಡಿದೆ, ಏನೋ ಬೋಳು ಬೋಳು ಕಾಣಿಸಿತು. ಒಮ್ಮೆಲೆ ಕೇಳಿದೆ “ಸರಿ-ಆದರೆ ನಿನ್ನ ಮಗುಬೊಟ್ಟು ಎಲ್ಲಿ?”
“ಎಲ್ಲಿ ಆ೦ದ್ರೆ?” ಗೀತಾ ತನ್ನ ಮೂಗಿಗೆ ಕೈ ಒಯ್ದಳು, “ಅಯ್ಯೋ ಎಲ್ಲಿ ಹೋಯಿತು?” ಎಂದು ಬರಿಯಾಗಿ ಅಡಿಗೆ ಮನೆಗೆ ಓಡಿದಳು.
ನಾನು ಸೂಟಬೂಟ ತೆಗೆಯುತ್ತಲೇ ಕೂಗಿದೆ, “ಸಿಕ್ತೇನೇ, ಏನೇ! ಎಲ್ಲಿಯಾದರೂ ಕಳೆದು ಹೋಯಿತೇನು? ಅಥವಾ ಎಲ್ಲಿಯಾದರೂ ತೆಗೆದಿಟ್ಟು ಮರೆತಿದ್ದಿಯೋ?……..”
“ಅಯ್ಯೋ ಎಲ್ಲಿಯ ಬಿಚ್ಚಿ ಇಡಲಿಲ್ಲ……” ಎಂದು ದೊಡ್ಡ ಧ್ವನಿ ತೆಗೆದು ಅಳಹತ್ತಿದಳು.
“ಎಲ್ಲಿಯಾದರೂ ಬಿಚ್ಚಿಟ್ಟಿರಬಹುದು. ನಿಧಾನಿಸಿ ಹುಡುಕು- “ಎಂದು ಉಪಚರಿಸತೊಡಗಿದೆ. “ಅಲ್ಲ ಅಳಹತ್ತಿದರೆ ಮತ್ತೇನು ಮಾಡಲಿ!”
ನಾನು ರ೦ಬಿಸಿದ ಹಾಗೆಲ್ಲ ಮತ್ತಿಷ್ಟು ಜೋರಾಗಿ ಅಳಹತ್ತಿದಳು. ನಮ್ಮ ಕ೦ಪೌ೦ಡಿನಲ್ಲಿಯೇ ನಿಂತು ನಿರ್ಮಲೆಯನ್ನು ಕೂಗಿದಳು. “ಏನಮಾ. ನಿರ್ಮಲಾ! ನನ್ನ ಮೂಗುಬೊಟ್ಟು ಎಲ್ಲಿಯೋ ಬಿದ್ದು ಬಿಟ್ಟಿತು. ಭಾ೦ಡೀ ಅಂಗಡಿಗೆ ನಿನ್ನ ಸಂಗಡ ಬಂದಿದ್ದೆನಲ್ಲಾ. ಆಗ ನನ್ನ ಮೂಗಿನಲ್ಲಿ ಮೂಗು ಬೊಟ್ಟು ಇತ್ತೇ ಏನಮ್ಮಾ?……” ಎಂದಳು.
“ನಾನು ಗಮನಿಸಲಿಲ್ಲ. ಗೀತಾ, ಎಲ್ಲಿ ಹೋಗುತ್ತೆ! ಮನೆಯಲ್ಲಿ ಹುಡುಕಿ ನೋಡಿದೆಯಾ? ಎಲ್ಲಿಯೂ ಹೋಗಲಾರದು. ಬನ್ನಿ, ನಾನೂ ಬರುತ್ತೇನೆ. ಹೋಗಿ ನೋಡೋಣ” ಎಂದು ನಿರ್ಮಲಾ ಗೀತಾ ಇಬ್ಬರೂ ಮನೆ ಝಡತಿ ಮಾಡತೊಡಗಿದರು. ಪೆಟ್ಟಿಗೆಯೊಳಗಿನ ಅರಿವೆಗಳನ್ನೆಲ್ಲ ಕಿತ್ತೊಗೆದರು. ಒಂದು ಜಾಗ ಬಿಡದೇ ಎಲ್ಲವನ್ನೂ ಹುಡುಕಿದರು, ಮೂಲೆ ಮೂಲೆಯನ್ನೂ ಬಿಡದೆ ಮನೆಯಲ್ಲಾ ಕಸಗೂಡಿಸಿ ಕಸದಲ್ಲಿ ಹುಡುಕಿದರು. ಮೂಗುಬೊಟ್ಟು ಸಿಗಲಿಲ್ಲ.
– ಮೂನ್ನೂರಾ ಎಪ್ಪತ್ತು ರೂಪಾಯಿಗಳು ಹೋದವಲ್ಲಾ ಎಂದು ಒಂದು ಸಂಕಟ. ಇವಳಿಗೆ ಆದ ಪ್ರಾಯಶ್ಚಿತ್ತ ಯೋಗ್ಯವದೆ ಎಂಬ ಕೋಪ ನನ್ನ ಎದೆಯನ್ನು ಸುಡುತ್ತಿದ್ದವು.
-ಎಲ್ಲಿಯೋ ಬಿದ್ದು ಹೋಗಿದೆ! ಏನುಮಾಡಲಮಾ! ಏನು ಮಾಡಲಿ ಅದನ್ನು ಇನ್ನು ಹೇಗೆ ಕಂಡೇನು?” ಎಂದು ಅಳುತ್ತ ಗೀತಾನನ್ನಲ್ಲಿಗೆ ಬಂದಳು.
ಅವಳನ್ನು ಕಾಣುತ್ತಲೂ ನನ್ನ ಕೋಪ ಮಾಯವಾಯಿತು, ಕರುಣ ದೋರಿತು.
– ಎಲ್ಲಾ ಚನ್ನಾಗಿ ಹುಡುಕಿದೆಯಾ? ಎಂದನು.
– ನೋಡಿದೆ. ಎಲ್ಲಿಯೂ ಇಲ್ಲ. ಹೊರಗೇ ಬಿದ್ದಿರಬೇಕು” ಎಂದು ಹಲುಬಿದಳು.
“ಇವತ್ತು ಮನೆ ಬಿಟ್ಟು ಎಲ್ಲೆಲ್ಲಿ ಹೋಗಿದ್ದಿ ಜ್ಞಾಪಿಸಿಕೊ!?
“ಎಲ್ಲಿಯೂ ಇಲ್ಲ, ಭಾಂಡೀ ಅಂಗಡಿಗೆ, ಮತ್ತು ಜವಳಿ ಅಂಗಡಿಗೆ ಹೋಗಿ ಈ ಖಣವನ್ನು ತಂದೆ, ನಿರ್ಮಲಾ ಕರೆದಳು. ನಾನು ಹೋದೆ, ದೇವರೇ! ಈ ದಿನ ಪೇಟೆಗೆ ಹೋಗಲು ನನಗೆ ದುರ್ಬುದ್ದಿ ಏಕೆ ಬಂದಿತು? ಎಂದು ಅತ್ತಳು.
ನನ್ನ ಮನಸ್ಸು ಕರಗಿತು. ನನಗೂ ತುಸು ದುಃಖವಾಯಿತು. ಇರಲಿ ಬಿಡು ಹೋದರೆ ಹೋಗಲಿ, ನಿನ್ನ ಲಭ್ಯದಲ್ಲಿ ಅದು ಇಲ್ಲ ಎಂದು ಕೋ…. ಹಸಿವಾಗಿದೆ ಅಡಿಗೆ ಏನು” ಎಂದು ವಿಷಯ ಬದಲಿಸಿದೆನು.
ಏನೋ ಮಾಡಿದ್ದೇನೆ…….. ಗೀತಾ ಕಣ್ಣೊರಿಸಿಕೊಂಡಳು. ನಿಮಗೆ ಪಿತ್ತವಾಗಿದೆಯಂದಿದ್ದಿರಲ್ಲಾ ಅದಕ್ಕಾಗಿ ಬೇವಿನ ಹೂವಿನ ಸಾರು ಮಾಡಿ ಹಪ್ಪಳ ಸುಟ್ಟಿದ್ದೇನೆ-ಎಂದಳು. ಇದು ಹೋದ ದೀಪಾವಳೀ ಪ್ರಕರಣ.
ಮೂಗುಬೊಟ್ಟಿಲ್ಲದೇ ಮುತ್ತೈದೆಯರಿರುವದಾಗದೆಂದು ೫ ರೂಪಾಯಿಯ ರಂಗೂನ ಡಾಯಮಂಡದ ಒಂದು ಮೂಗುಬಟ್ಟನ್ನು ತಂದುಕೊಟ್ಟೆನು. ಅದನ್ನ ಭಾಗ್ಯವೆಂದು ಗೀತಾ ಸ್ವೀಕರಿಸಿದ್ದಾಳೆ.
ಮೂಗುಬೊಟ್ಟು, ಕಳೆದುಕೊಂಡ ವಿಷಯವನ್ನು ಗೀತಾ ತನ್ನ ತಂದೆಗೆ ಬರೆದುಕೊಂಡಳು. ಅದನ್ನು ಅವರು ನಂಬಲೇ ಇಲ್ಲವಂತ- ಇಬ್ಬರೂ ಸೇರಿ ಕೊಂಡು ಅದನ್ನು ಮಾರಿ ತಮಾಶೆ ಮಾಡಿರಬೇಕೆಂದೂ ನನಗೆ ಈ ರೀತಿ ಬರೆದು ನನ್ನನ್ನು ಸಮಾಧಾನ ಪಡಿಸಿದರೆಂದೂ ಅಂದುಕೊಂಡರಂತೆ. ಇದನ್ನು ಅಲ್ಲಿಂದ ಬಂದವರು ನನಗೆ ಹೇಳಿದರು, ನನ್ನ ತಂದೆಯೂ ನಂಬಲಿಲ್ಲ. “ಶಿರಿವಂತರ ಮಗಳನ್ನು ಕಟ್ಟಿಕೊಂಡು ಷೋಕಿಸೋದಿದ್ದರೆ ದಿನವೂ ಒಂದೊಂದು ಮಾರಬೇಕಾಗುವದು. ಅವನ ಪ್ರಾರಭ್ಧ. ಎಂದು ತಂದೆಯವರು ಅಂದರೆಂಬ ಸುದ್ದಿಯೂ ಬಂದಿತು. “ಬಡವರ ವಿಷಯವೇ ಹೀಗೆ ಎಂದು ನಿಟ್ಟು ಸುರುಬಿಟ್ಟು ಸುಮ್ಮನಾದೆನು;
ಗೀತಾ ಈ ವಿಷಯವನ್ನು ಮರೆತಳೋ ಮನದಲ್ಲಿಟ್ಟುಕೊಂಡಳೋ ನನಗೆ ಗೊತ್ತಿಲ್ಲ. ಆದರೂ ಈ ವಿಷಯ ನನ್ನ ಹೃದಯವನ್ನು ಯಾವಾಗಲೂ ಸುಡುತ್ತಿತ್ತು. ಮೂಗುಬೊಟ್ಟು ಕಳೆದಿದೆಯಂದರೆ ಯಾವನೂ ನಂಬಲಿಲ್ಲ; ತಂದೆಯೂ ನಂಬಲಿಲ್ಲ. ಬೇಕಾದಷ್ಟು ಕಷ್ಟವಾಗಲಿ. ಒಂದು ಅಷ್ಟೇ ಬೆಲೆ ಬಾಳುವ ಮೂಗುಬೊಟ್ಟನ್ನು ದೊರಕಿಸಬೇಕೆಂದು ನಿಶ್ಚಯಿಸಿದೆನು. ಆದಕ್ಕಾಗಿ ಒಬ್ಬ ಹಣವಂತರ ಮಗನಿಗೆ ಓದು ಹೇಳುವದನ್ನು ಗೊತ್ತು ಮಾಡಿಕೊಂಡೆನು. ಹುಡುಗ ಇಂಟರ ಕ್ಲಾಸಿನಲ್ಲಿದ್ದನು. ಬುದ್ದಿ ತುಸು ಮಂದ, ತಿಂಗಳವೇತನೆಯೇನೂ ಬೇಡವೆಂದೂ ವರ್ಷದ ಕೊನೆಗೆ ಒಮ್ಮೆಲೆ ನನಗೆ ನಾಲ್ಕು ನೂರು ರೂಪಾಯಿಗಳನ್ನು ಕೊಡಬೇಕೆಂದೂ ಗೊತ್ತು ಮಾಡಿ ಕೊಂಡೆನು. ಹುಡುಗನು ಸೆಪ್ಟಂಬರ ತಿಂಗಳ ಪರೀಕ್ಷೆಗೆ ಕುಳಿತನು. ನವ ದೀಪಾವಳಿ ಹಬ್ಬದ ಕೆಲದಿನ ಮುಂಚೆ ಪರೀಕ್ಷೆಯ ಪರಿಣಾಮ ತಿಳಿಯಿತು. ನನ್ನ ವಿದ್ಯಾರ್ಥಿ ಪಾಸಾದನು: ಕೈಯಲ್ಲಿ ನಾಲ್ಕು ನೂರು ರೂಪಾಯಿಗಳ ಚೆಕ್ಕೂ ಬಂದಿತು.
ಆದಿನ ಸಂಜೆಗೆ ಆ ಚೆಕ್ಕನ್ನು ಕೋಟಿನ ಕಿಸಿಯಲ್ಲಿ ಭದ್ರವಾಗಿಟ್ಟು ಕೊ೦ಡು ಮನೆಯ ದಾರಿ ಹಿಡಿದೆನು. ಗೀತಾಗೆ ಅಂತಹದೇ ಒಂದು ವಜ್ರದ ಮೂಗುಬೊಟ್ಟನ್ನು ಅಷ್ಟೇ ಕಿಮ್ಮತ್ತಿನಲ್ಲಿ ತಂದು ಕೊಡಬೇಕೆಂಬ ವಿಚಾರದಲ್ಲಿಯೇ ಮನೆಗೆ ಬಂದೆನು.
“ಏನು ಈ ದಿನ ಇಷ್ಟು ಹೊತ್ತು?” ಎಂದು ಸಂಭ್ರಮದಿಂದ ಗೀತಾ ನನ್ನೆದುರು ಬಂತುನಿಂತಳು. ಏನೋ ದುಶ್ಚಿನಃ ಕಟ್ಟಿಟ್ಟದೆಯೆಂದು ಮೋರೆ ಮುದುರಿಸಿಕೊಂಡು ತೆಳಗೆ ಮಾಡಿದೆ. “ತುಸು ಕೆಲಸವಿತ್ತು” ಅಂದೆನು.
“ಇಲ್ಲಿ ನೋಡೀ….ಹೀಗೆಕೆ ಕೆಳಗೆಮುಖ ಹಾಕಿದ್ದೀರಿ ನನ್ನ ಕಡೆ ನೋಡಿ”
“ಹೇಳು ಏನು ?
“ನನ್ನ ಕಡೆ ನೋಡಿ.”
ಯಾವ ವಿಪತ್ತು ಬಂದರೂ ಎದುರಿಸಲೇ ಬೇಕಲ್ಲವೇ ಎಂದು ಧೈರ್ಯ ತಂದು ಮುಖ ಮೇಲೆಮಾಡಿದೆ. ಗೀತಾಳನ್ನು ನೋಡಿದೆ, ಆಶ್ವರ್ಯ, ಪರಮಾಶ್ಚರ್ಯ, ಅವಳ ಮೂಗಿನಲ್ಲಿ ಮೂಗುಬೊಟ್ಟಿದೆ. ಅವಳು ಸಂತೋಷದಿಂದ ನಗುತ್ತಿದ್ದಾಳೆ. ನನಗೂ ಹರ್ಷವಾಯ್ತು. ಆದರೆ ಅದು ಇದೇ ಹೇಗೋ ಎನ್ನುತ್ತ ಅದರ ಮೇಲೆ ಬೆರಳಾಡಿಸಿದೆ.
“ಏನಿದು ಗೀತಾ?”
“ಏನಂದರೇನು? ಇದು ಮೂಗುಬೊಟ್ಟು. ಕಳೆದು ಹೋದ ಮೂಗು ಬೊಟ್ಟು. ಹೋದ ದೀಪಾವಳಿಯಲ್ಲಿ ಕಳೆದದ್ದು…….
“ಈಗೆಲ್ಲಿ ಸಿಕ್ಕಿತು?”
“ಹೋದ ವರುಷ ದೀಪಾವಳಿಗೆ ಹಿಂದಿನ ದಿನ ನಿಮಗೆ ಪಿತ್ತವಾಗಿತ್ತೆಂದು ಬೇವಿನ ಹೂವಿನ ಸಾರು ಮಾಡಿದ್ದೆ, ಜ್ಞಾಪಕವಿದೆಯೇ. ಆ ಹೂ ತೆಗೆಯುವಾಗ ಡಬ್ಬಿಯಲ್ಲಿ ಇಣಿಕಿ ನೋಡಿದೆ. ಮೂಗುಬೊಟ್ಟು ಯಾವ ಮಾಯೆಯಿಂದ ಅದರಲ್ಲಿ ಬಿತ್ತೋ ದೇವರೇ ಬಲ್ಲ. ಆ ಡಬ್ಬಿ ಹಾಗೆಯೆ ಇಟ್ಟು ಬಿಟ್ಟಿದ್ದೆ. ಈ ದಿನ ಮಧ್ಯಾನ್ಹ ಗೋಡಂಬಿ ಹಾಕುವದಕ್ಕೆ ಖಾಲೀ ಡಬ್ಬಿಗಳಿರಲಿಲ್ಲ, ಆ ಡಬ್ಬಿಯನ್ನು ತೆರವು ಮಾಡಿದೆ. ಆದರಲ್ಲಿತ್ತು……. ಎಂದು ಸಂತೋಷದಿಂದ ಮನಃಪೂರ್ವಕವಾಗಿ ನಗತೊಡಗಿದಳು, ನಾನೂ ನಗಹತ್ತಿದೆನು. “ಇಂದು ಸುಖದ ದಿನ ಗೀತಾ” ಎಂದೆನು.
“ಈ ಐದು ರೂಪಾಯಿಯ ಮೂಗುಬೊಟ್ಟಿನ ಕಾಲ್ಗುಣದಿಂದ ಕಳೆದು ಹೋದ ವಜ್ರದ ಮೂಗುಬೊಟ್ಟು ಸಿಕ್ಕಿತು, ಯಾವುದನ್ನು ಧರಿಸಲಿ?”
“ನಾನೇನು ಹೇಳಲಿ ನಿನಗೆ ಯಾವದು ಇಷ್ಟವೊ…..”
“ನೀವು ಹೇಳಿರಿ”
“ನೀನು ಯಾವುದನ್ನು ಧರಿಸಿದರೂ ನನಗೆ ಚಂದವಾಗಿಯೇ ಕಾಣುವಿ ಇರಲಿ, ಇಲ್ಲಿ ತುಸುಬಾ, ಇನ್ನೂ ಬಾ………
“ಯಾಕೆ ಹೇಳಿ, ಏನದು ಕೈಯಲ್ಲಿ ಹಿಡಿದದ್ದು?”
ಚೆಕ್ಕನ್ನ ಅವಳ ಕೈಯಲ್ಲಿ ಕೊಟ್ಟೆನು. ನಾಲ್ಕು ನೂರು ರೂಪಾಯಿಗಳು ಬರುವವೆಂದು ಹೇಳಿದೆನು. ಗೀತಾ ಸಣ್ಣ ಹುಡುಗಿಯಂತೆ ಜಿಗಿದಾಡಿದಳು.
“ಹೇಗೂ ನನ್ನ ನಿಮ್ಮ ತಂದೆಗಳು “ಷೋಕಿ ಮಾಡುವರು” ಎಂದು ನಮ್ಮನ್ನು ಟೀಕಿಸುವತು. ಈ ದೀಪಾವಳಿಯಲ್ಲಿ ಷೋಕಿ ಆಗಿಹೋಗಲಿ ” ಎನ್ನುತ್ತ ಒಂದೇ ಏಟಿಗೆ ಅಡಗಿಯ ಮನೆಗೆ ಓಡಿದಳು. ಏನೋಹಾಡನ್ನು ಗುಣುಗುಟ್ಟತೆ ತಾಟುಮಣೆಗಳನ್ನು ಇಡತೊಡಗಿದಳು.
*****

















