Home / ಕಥೆ / ಅನುವಾದ / ಕುಸಿದು ಬಿದ್ದಂದು…

ಕುಸಿದು ಬಿದ್ದಂದು…

ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : Anacleto Morones

‘ಅದಾಗಿದ್ದು ಸೆಪ್ಟೆಂಬರಿನಲ್ಲಿ. ಈ ವರ್ಷ ಅಲ್ಲ, ಹೋದ ವರ್ಷ ಸೆಪ್ಟೆಂಬರ್. ಇಲ್ಲಾ, ಇನ್ನೂ ಮೊದಲೇ ಆಯಿತೋ ಮೆಲಿಟನ್?’

‘ಇಲ್ಲ, ಕಳೆದ ವರ್ಷ ಆಗಿದ್ದು,’

‘ಹೌದು, ಹೌದು, ಜ್ಞಾಪಕ ಇದೆ. ಹೋದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ, ಸುಮಾರು ಇಪ್ಪತ್ತೊಂದನೆಯ ತಾರೀಕಿನ ಹಿಂದೆ ಮುಂದೆ. ಅಲ್ಲವಾ ಮೆಲಿಟನ್, ಭೂಕಂಪ ಆಗಿದ್ದು ಸೆಪ್ಟೆಂಬರ್ ಇಪ್ಪತ್ತೊಂದು ಅಲ್ಲವಾ?’

’ಸ್ವಲ್ಪ ಮೊದಲೇ, ಸೆಪ್ಟೆಂಬರ್ ಹದಿನೆಂಟು ಇರಬೇಕು.’

‘ಕರೆಕ್ಟು ನೀನು ಹೇಳಿದ್ದು. ಆ ಹೊತ್ತಿನಲ್ಲಿ ನಾನು ಟಕ್ಸಾಕ್ಯುಯೆಸ್ಕೋ ಪಟ್ಟಣದಲ್ಲಿದ್ದೆ. ಮನೆಗಳು ಬಿಸ್ಕತ್ತಿನಲ್ಲಿ ಕಟ್ಟಿದ ಮನೆಗಳ ಹಾಗೆ ಕುಸಿದಿದ್ದು ನೋಡಿದೆ. ಮುಖ ಸೊಟ್ಟ ಮಾಡುವ ಹಾಗೆ ಗೋಡೆಗಳು ತಿರುಚಿಕೊಂಡವು, ಪುಡಿಪುಡಿಯಾಗಿ ನೆಲಕ್ಕೆ ಬಿದ್ದವು. ಬಿದ್ದ ಗೋಡೆಗಳ ರಾಶಿಯಿಂದ ಜನ ಎದ್ದು ಬಂದರು. ಸೀದಾ ಚರ್‍ಚಿಗೆ ಓಡಿ ಹೋದರು. ದಾರಿ ಉದ್ದಕ್ಕೂ ಕಿರುಚುತ್ತಾ ಇದ್ದರು. ಆದರೆ, ಮೆಲಿಟನ್, ಒಂದು ನಿಮಿಷ. ಟೆಕ್ಸಾಕ್ಯುಯೆಸ್ಕೋದಲ್ಲಿ ಚರ್ಚು ಇಲ್ಲ ಅಲ್ಲವಾ? ನಿನಗೆ ಜ್ಞಾಪಕ ಇದೆಯಾ?’

‘ಚರ್ಚು ಇಲ್ಲ. ಬಿರುಕು ಬಿಟ್ಟ ಗೋಡೆಗಳಿವೆ. ಇನ್ನೂರು ವರ್ಷದ ಹಿಂದೆ ಅಲ್ಲಿ ಚರ್ಚು ಇತ್ತು ಅಂತ ಜನ ಅನ್ನುತ್ತಾರೆ. ಅದು ಹೇಗೆ ಇತ್ತೋ ನೋಡಿದವರು ಯಾರೂ ಇಲ್ಲ. ಅಂಜೂರದ ಗಿಡ ಬೆಳೆದ ಹಾಳುಬಿದ್ದ ಕೊಟ್ಟಿಗೆ ಥರ ಕಾಣತದೆ.’

‘ನೀನಂದಿದ್ದು ಸರಿ. ಹಾಗಾದರೆ ನಾನು ಭೂಕಂಪ ನೋಡಿದ್ದು ಟೆಕ್ಸಾಕ್ಯುಯೆಸ್ಕೋದಲ್ಲಿ ಅಲ್ಲ. ಎಲ್ ಪೊಚೋಟೆ ಹಳ್ಳಿ ಇರಬೇಕು. ಎಲ್ ಪೊಚೋಟೆ ಹುಲ್ಲುಗಾವಲು, ಅಲ್ಲವಾ?’

‘ಹೌದು. ಅಲ್ಲೊಂದು ಪುಟ್ಟ ಚಾಪೆಲ್ ಇದೆ. ಜನ ಅದನ್ನೇ ಚರ್ಚು ಅನ್ನುತ್ತಾರೆ. ಲಾಸ್ ಅಲ್ಕಟ್ರಾಸ್ ತೋಟದ ಮನೆ ದಾಟಿ ಮುಂದೆ ಹೋದರೆ ಸಿಗತದೆ.’

‘ಹಾಗಾದರೆ ಅಲ್ಲೇ, ಅಲ್ಲೇ ನಾನು ಭೂಕಂಪಕ್ಕೆ ಸಿಕ್ಕಿಬಿದ್ದಿದ್ದು. ಭೂಮೀನ ಒಳಗಡೇನೇ ಯಾರೋ ಕಡೆಯುತ್ತಿದ್ದಾರೆ ಅನ್ನುವ ಹಾಗೆ ಹಿಂದೆ ಮುಂದೆ ಓಲಾಡಿತು. ನಾಕೈದು ದಿನ ಆದಮೇಲೆ ಅಂತ ಕಾಣತದೆ, ನಾವಿನ್ನೂ ಬಿದ್ದ ಗೋಡೆಗಳನ್ನ ರಿಪೇರಿ ಮಾಡತಾ ಇದ್ದೆವು. ಆಗ ಗೌರ್‍ನರ್ ಬಂದ. ನಮಗೆಲ್ಲ ಏನು ಸಹಾಯ ಮಾಡಬಹುದು ಅಂತ ನೋಡಿಕೊಂಡು ಬರುವುದಕ್ಕೆ ಸರ್ಕಾರ ಕಳಿಸಿತ್ತು. ನಿಮಗೆಲ್ಲ ಗೊತ್ತಲ್ಲ, ಗೌರ್ನರ್ ಬಂದರೆ, ಅವನು ಜನದ ಕಣ್ಣಿಗೆ ಬೀಳತಾ ಇದ್ದರೆ ಎಲ್ಲಾ ಸರಿಯಾಗಿ ನಡೆಯುತಾ ಇರತದೆ. ಕೊನೇ ಪಕ್ಷ ಈ ಆಫೀಸರು ಬಂದಿದ್ದ. ಬಂದವನು ಆರ್ಡರು ಮಾಡುತ್ತ ಮನೆ ಒಳಗೆ ಕೂರಲಿಲ್ಲ. ಅವನು ಬಂದರೆ ಎಲ್ಲ ಸರಿ ಹೋಗತದೆ ಅಂದುಕೊಂಡು ಜನ, ತಮ್ಮ ತಲೇ ಮೇಲೇ ಮನೆ ಕುಸಿದು ಬಿದ್ದಿದ್ದರೂ ಅವನನ್ನ ನೋಡುವುದಕ್ಕೆ ಸಂತೋಷಪಟ್ಟುಕೊಂಡು ಬಂದರು. ಯಾವಾಗಲೂ ಹೀಗೇ ಅಲ್ಲವಾ ಮೆಲಿಟನ್?’

‘ಹೂಂ, ಹಾಗೇನೇ.’

‘ಅದೇ, ಹೇಳತಾ ಇದ್ದೆನಲ್ಲ, ಹೋದ ವರ್ಷಸೆಪ್ಟೆಂಬರಿನಲ್ಲಿ ಭೂ ಕಂಪ ಆದಮೇಲೆ ಅನಾಹುತಗಳನ್ನು ನೋಡುವುದಕ್ಕೆ ಪ್ರಾಂತದ ಗೌರ್ನರ್ ಬಂದಿದ್ದ ಅಂದುಕೊಳ್ಳಬೇಡ. ಜೊತೆಗೆ ಸೈಂಟಿಸ್ಟುಗಳನ್ನ, ಆಫೀಸರುಗಳನ್ನ ಕರಕೊಂಡು ಬಂದಿದ್ದ. ಗೌರ್ನರ್ ಮತ್ತೆ ಜೊತೆಗೆ ಬಂದಿದ್ದವರಿಗೆಲ್ಲ ಊಟ ಹಾಕುವುದಕ್ಕೆ ಎಷ್ಟು ಖರ್ಚಾಗಿರಬಹುದು, ಗೊತ್ತ?’

‘ಏನು ಒಂದು ನಾಲ್ಕು ಸಾವಿರ ಪೆಸೋ ಖರ್ಚಾಗಿರಬಹುದಾ?’

‘ಅವರು ಇದ್ದಿದ್ದು ಒಂದೇ ದಿನ. ರಾತ್ರಿ ಆಗುತಿದ್ದ ಹಾಗೇ ಹೊರಟು ಬಿಟ್ಟರು. ಅವರು ಇನ್ನೂ ಇದ್ದಿದ್ದರೆ ಮತ್ತೆ ಎಷ್ಟು ಸಾಲಮಾಡಬೇಕಾಗುತಿತ್ತೋ ಯಾರಿಗೆ ಗೊತ್ತು. ನಿಜ ಹೇಳಬೇಕು ಅಂದರೆ ನಮಗೆಲ್ಲ ತುಂಬಾ ಖುಷಿಯಾಗಿತ್ತು. ಜನ ಕೊಕ್ಕರೆ ಕತ್ತು ಮಾಡಿಕೊಂಡು ಗೌರ್‍ನರನನ್ನು ನೋಡುತಿದ್ದರು. ಒಂದು ಇಡೀ ಗ್ವಜಲೋಟೆ ಟರ್ಕಿ ಕೋಳಿ ಹೇಗೆ ತಿಂದ, ಮೂಳೆ ಹೇಗೆ ಚೀಪಿದ, ಒಂದಾದ ಮೇಲೆ ಒಂದು ಟೋರ್ಟಿಲ ಆಮ್ಲಟ್ಟು ಹೇಗೆ ಬಾಯಿಗೆ ಹೋಗುತಿತ್ತು, ಆಮ್ಲಟ್ಟಿಗೆ ಹೇಗೆ ಗ್ವಕಮೋಲೆ ಸಾಲ್ಸ ಹಚ್ಚಿಕೊಳ್ಳುತ್ತಿದ್ದ ಅನ್ನುವುದನ್ನ ತಮ್ಮಲ್ಲೇ ಹೇಳಿಕೊಳ್ಳುತಿದ್ದರು. ಎಲ್ಲಾ ಸಂಗತಿ ಗಮನ ಇಟ್ಟು ನೋಡುತಿದ್ದರು. ಅವನು ಅಷ್ಟು ಆರಾಮವಾಗಿ, ಅಷ್ಟು ಗಂಭೀರವಾಗಿ ಇದ್ದ. ಕೈಯನ್ನ ಕಾಲುಚೀಲಕ್ಕೆ ಒರೆಸಿಕೊಳ್ಳುತಿದ್ದನೇ ಹೊರತು ಕರ್ಚೀಫು ಕೊಳೆ ಮಾಡುತ್ತಿರಲಿಲ್ಲ. ಅದೇನಿದ್ದರೂ ಮೀಸೆ ಒರೆಸಿಕೊಳ್ಳುವುದಕ್ಕೆ ಅಷ್ಟೇ. ಆಮೇಲೆ, ದಾಳಿಂಬರೆ ಡ್ರಿಂಕು ತಲೆಗೆ ಏರಿ ಎಲ್ಲಾರೂ ಒಟ್ಟಿಗೆ ಹಾಡು ಶುರು ಮಾಡಿದರು, ಮುರುಕಲು ರೆಕಾರ್ಡಿನ ಹಾಗೆ ಒಂದೇ ಸಾಲು ಹೇಳುತಾ ಇದ್ದರಲ್ಲ, ಯಾವ ಹಾಡು ಅದು ಮೆಲಿಟನ್?’

‘ಆತ್ಮದ ಅಳಲು ನೀನರಿಯೇ ಅನ್ನುವ ಪಲ್ಲವಿ.’

‘ನಿನ್ನ ಜ್ಞಾಪಕಶಕ್ತಿ ಚೆನ್ನಾಗಿದೆ ಮೆಲಿಟನ್. ಇಂಥದೆಲ್ಲ ಎಷ್ಟೊಂದು ಚೆನ್ನಾಗಿ ನೆನಪಿದೆ ನಿನಗೆ ಅದೇ ಹಾಡು ಹೇಳಿದ್ದು. ಗೌರ್ನರ್ ನಗುತಿದ್ದ. ಬಾತ್ ರೂಮ್ ಎಲ್ಲಿದೆ ಅಂತ ಕೇಳಿದ. ಮತ್ತೆ ಬಂದು ಕೂತು ಟೇಬಲ್ಲಿನ ಮೇಲಿದ್ದ ಕಾರ್ನೇಶನ್ ಹೂವುಗಳನ್ನು ಮೂಸಿ ನೋಡಿದ. ಹಾಡುತಾ ಇದ್ದವರನ್ನ ನೋಡಿದ. ನಗುನಗುತ್ತಾ ತಾಳಕ್ಕೆ ತಕ್ಕ ಹಾಗೆ ತಲೆ ಆಡಿಸಿದ. ಅವನಿಗೆ ಖುಷಿಯಾಗಿತ್ತು. ಅನುಮಾನವೇ ಇಲ್ಲ. ಯಾಕೆ ಅಂದರೆ ಜನಕ್ಕೆ ಸಂತೋಷವಾಗಿತ್ತು. ಅವನ ತಲೆಯಲ್ಲಿ ಏನು ಯೋಚನೆ ಓಡತಾ ಇದೆ ಅನ್ನುವುದು ಕೂಡ ಗೊತ್ತಾಗುತಿತ್ತು. ಭಾಷಣ ಶುರುವಾದವು. ಅವನ ಕಡೆಯವರಲ್ಲಿ ಒಬ್ಬ ನಿಂತು, ಮಾತಾಡಿದ. ಎಡಗಣ್ಣು ಸ್ವಲ್ಪ ಕೋಸಾಗಿತ್ತು ಅವನಿಗೆ. ಮಾತಾಡಿದ. ಅನುಮಾನವೇ ಇಲ್ಲ. ಅವನು ಜು‌ಆರೆಝ್ ಬಗ್ಗೆ ಭಾಷಣ ಮಾಡಿದ. ನಾವು ಜು‌ಆರೆಝನ ಬೊಂಬೆಯನ್ನ ಸಂತೇ ಚೌಕದಲ್ಲಿ ನಿಲ್ಲಿಸಿದ್ದೆವು. ಅದು ಜು‌ಆರೆಝ್ ಅಂತ ಈಗ ಗೊತ್ತಾಯಿತು. ಅದು ಯಾರ ವಿಗ್ರಹ ಅಂತ ಯಾರೂ ನಮಗೆ ಹೇಳಿರಲೇ ಇಲ್ಲ. ಅದು ರಾಜವಂಶದ ಶ್ರೀಮಂತ ಹಿಡಾಲ್ಗೋ, ಇಲ್ಲಾ ಸ್ವಾತಂತ್ರ ಹೋರಾಟದ ನಾಯಕ ಪಾದ್ರಿ ಮೋರೆಲೋಸ್, ಇಲ್ಲಾ ಅಂದರೆ ಕ್ರಾಂತಿ ವೀರ ಬೆನುಸ್ಟಿಯಾನೋ ಕಾರಾನ್ಝಾ ಇರಬೇಕು ಅದುಕೊಂಡಿದ್ದೆವು. ಅವರ ಹುಟ್ಟಿದ ಹಬ್ಬಗಳು ಬಂದಾಗ ಅಲ್ಲಿ ಸಭೆ ಮಾಡುತಿದ್ದರು. ಈ ಮನುಷ್ಯ ಈಗ ಬಂದು ಅದು ಐದು ಸಾರಿ ಅಧ್ಯಕ್ಷನಾಗಿದ್ದ ವಕೀಲ ಡಾನ್ ಬೆನಿಟೋ ಜು‌ಆರೆಝ್ ಅಂತ ಹೇಳಿದ. ಏನೇನೆಲ್ಲ ಹೇಳಿದ. ನಿನಗೆ ಜ್ಞಾಪಕ ಇದೆಯಾ ಮೆಲಿಟನ್? ಅಂಥ ವಿಷಯವೆಲ್ಲ ನಿನಗೆ ಯಾವಾಗಲೂ ಜ್ಞಾಪಕ ಇರುತ್ತಲ್ಲಾ?’

‘ಇದೆ. ಅದನ್ನೆಲ್ಲ ಹೇಳಿ ಹೇಳಿ ತಲೆ ಚಿಟ್ಟು ಹಿಡಿದು ಹೋಗಿದೆ.’

‘ಬೇಡ ಬಿಡು. ಈ ಜನ ಒಳ್ಳೆಯ ಮಾತು ಕೇಳುವುದು ತಪ್ಪಬಾರದು ಅಂತ ಕೇಳಿದೆ ಅಷ್ಟೆ, ಹೋಗಲಿ, ಗೌರ್ನರ್ ಹೇಳಿದ್ದನ್ನ ಹೇಳುವುದಕ್ಕೆ ಇಷ್ಟವಿರಬಹುದು ನಿನಗೆ.

‘ಏನಪ್ಪ ಅಂದರೆ, ಗೌರ್ನರ್ ಬಂದಿದ್ದು ನೊಂದವರನ್ನು ಕಾಣುವುದಕ್ಕೆ, ಮನೆ ಕಳಕೊಂಡವರನ್ನ ನೋಡುವುದಕ್ಕೆ ಅಂತಾದರೂ ಕುಡಿತದ ಹಬ್ಬ ನಡೆದು ಹೋಯಿತು. ಅಂಥಾ ಕುಡಿತ ಕಂಡಿರಲಿಲ್ಲ. ಜೊತೆಗೆ ಟೆಪೆಕ್‌ ಬ್ಯಾಂಡಿನ ಸಂಗೀತ ಇತ್ತು. ಆ ಬ್ಯಾಂಡಿನವರು ಲೇಟಾಗಿ ಬಂದರು. ಎಲ್ಲಾ ಬಸ್ಸೂ ಗೌರ್ನರನ ಕಡೆಯವರನ್ನು ಕರೆದುಕೊಂಡು ಬರುವುದಕ್ಕೆ ಹೋಗಿದ್ದವು. ಸಂಗೀತದವರು ವಾದ್ಯ ಬಾರಿಸಿಕೊಂಡು ನಡೆದುಕೊಂಡೇ ಬಂದರು. ಎಂಥಾ ಆವೇಶ ಇತ್ತು ಅಂದರೆ ಸ್ವತಃ ಗೌರ್ನರ್ ಕೋಟು ಬಿಚ್ಚಿ, ಟೈ ಸಡಿಲ ಮಾಡಿಕೊಂಡು ಕುಣಿದ, ಪಾರ್ಟಿ ಜೋರಾಗಿ ನಡೆಯಿತು. ಸೆಣಬಿನ ಬುಟ್ಟಿಯಲ್ಲಿಟ್ಟಿದ್ದ ದೊಡ್ಡ ದೊಡ್ಡ ಬಾಟಲುಗಳಲ್ಲಿ ಮದ್ಯ ಬಂತು. ಆತುರಾತುರವಾಗಿ ಜಿಂಕೆ ಮಾಂಸ ಬೇಯಿಸಿದರು. ನಿನಗೆ ನಂಬುವುದಕ್ಕೆ ಮನಸ್ಸಿಲ್ಲದೆ ಇರಬಹುದು, ಅವರಿಗೆ ಗೊತ್ತಿಲ್ಲದೆ ಇರಬಹುದು, ಆ ಸುತ್ತಮುತ್ತಲಲ್ಲಿ ಮಾಂಸದ ಊಟಕ್ಕೆ ಜಿಂಕೆಗಳು ಧಾರಾಳವಾಗಿ ಸಿಗುತಿದ್ದವು. ಬಯಲಲ್ಲಿ ಬೇಯಿಸಿದ ಬಾರ್ಬೆಕ್ಯೂ ತುಂಬ ಚೆನ್ನಾಗಿದೆ ಅಂದರು, ಅಲ್ಲವಾ ಮೆಲಿಟನ್ ಅವರು ಯಾವುದನ್ನು ಬಾರ್ಬೆಕ್ಯು ಅನ್ನುತ್ತಾರೋ ಅದು ನಮಗೆ ಅದುವರೆಗೂ ಗೊತ್ತೇ ಇರಲಿಲ್ಲ. ನಿಜ ಏನಂದರೆ ಪ್ಲೇಟಿನಲ್ಲಿ ಒಂದು ತುಂಡು ಹಾಕಿ ಕೊಡುತಿದ್ದ ಹಾಗೇ ಅದನ್ನು ತಿಂದು ಇನ್ನೊಂದು ಬೇಕು ಅನ್ನುತಿದ್ದರು. ಕೇಳಿದಷ್ಟೂ ಬಡಿಸುವುದಕ್ಕೇ ಅಲ್ಲವಾ ನಾವಿದ್ದದ್ದು? ಟಿಂಬರ್ ಆಫೀಸರು, ಯಾವತ್ತೂ ಕಾಸು ಬಿಚ್ಚದವನು, ಅವತ್ತು ‘ಈ ಸಮಾರಂಭಕ್ಕೆ ಅಂತ ನಮಗೆ ದುಡ್ಡು ಖರ್ಚಾಗುತ್ತದೆ ಅನ್ನುವುದು ಮುಖ್ಯ ಅಲ್ಲ. ದುಡ್ಡು ಒಳ್ಳೆಯ ಕೆಲಸಕ್ಕೆ ಖರ್ಚಾಗಬೇಕು,’ ಅಂದ. ಮತ್ತೆ, ಮೆಲಿಟನ್, ಆ ದಿನದಲ್ಲಿ ಆಗ ಮೇಯರ್ ಆಗಿದ್ದವನು, ‘ಐಸು ಹಾಕಿದ ಮದ್ಯ ಧಾರಾಳವಾಗಿ ಹಾಕಿ, ಇಂಥ ಸಮಾರಂಭ ಅಪರೂಪದ್ದು.’ ಅಂದನಲ್ಲ ಆಗ ನೀನು ನನಗೆ ಗುರುತೇ ಸಿಕ್ಕಿರಲಿಲ್ಲ. ವೈನು ಬಿದ್ದು ಟೇಬಲ್ ಕ್ಲಾತುಗಳು ಕೂಡ ಕೆಂಪಾಗಿದ್ದವು. ಆ ಜನದ ಹೊಟ್ಟೆಗೆ ತಳ ಅನ್ನುವುದೇ ಇರಲಿಲ್ಲ. ಗೌರ್ನರ್ ಕೂತಲ್ಲಿಂದ ಅಲ್ಲಾಡಲಿಲ್ಲ ಅನ್ನುವುದು ಗಮನಿಸಿದೆ. ಕೈ ಕೂಡ ಮುಂದೆ ಚಾಚಲಿಲ್ಲ. ಜನ ಅವನ ಮುಂದೆ ಏನೇನು ತಂದಿಟ್ಟರೋ ಅದನ್ನೆಲ್ಲ ತಿಂದ. ಬಾಲ ಆಡಿಸಿಕೊಂಡು ಸೇವೆ ಮಾಡುತಿದ್ದವರು ಎಷ್ಟೊಂದು ತಂದು ತಂದು ಇಡುತಿದ್ದರು ಅಂದರೆ ಅವನು ಕೈಗೆತ್ತಿಕೊಂಡ ಉಪ್ಪಿನ ಡಬ್ಬಿ ಇಡುವುದಕ್ಕೆ ಮೇಜಿನ ಮೇಲೆ ಜಾಗವೇ ಇಲ್ಲದೆ ಕೈಯಲ್ಲೇ ಹಿಡಿದುಕೊಂಡಿದ್ದು, ಕೊನೆಗೆ ಜೇಬಲ್ಲಿ ಇಟ್ಟುಕೊಂಡ. ನಾನು ಅವನ ಹತ್ತಿರ ಹೋಗಿ ‘ಉಪ್ಪು ಬೇಕಾ ಧಣೀ?’ ಅಂದಾಗ ಅವನು ನಗುತ್ತಾ ಜೇಬಲ್ಲಿದ್ದ ಉಪ್ಪಿನ ಡಬ್ಬಿ ತೋರಿಸಿದ್ದರಿಂದ ನನಗೆ ಅದು ಗೊತ್ತಾಯಿತು.

‘ಅವನು ಮಾತಾಡಲು ಎದ್ದು ನಿಂತಾಗ ಕಳೆಕಟ್ಟಿತು. ಏನು ಮಾತಾಡುತ್ತಾನೋ ಅನ್ನುವ ನಿರೀಕ್ಷೆಯಲ್ಲಿ ಎಲ್ಲರೂ ರೋಮಾಂಚನ ಅನುಭವಿಸಿದ್ದರು. ಮೆಲ್ಲಗೆ, ತುಂಬಾ ಮೆಲ್ಲಗೆ ಎದ್ದು ನಿಂತ. ಕುರ್ಚಿಯನ್ನು ಕಾಲಲ್ಲೇ ಹಿಂದೆ ತಳ್ಳಿ, ಮೇಜಿನ ಮೇಲೆ ಕೈ ಊರಿ, ತಲೆ ತಗ್ಗಿಸಿಕೊಂಡು, ಮೇಲೆ ಹಾರಲು ಸಿದ್ಧವಾದವನ ಹಾಗೆ ನಿಂತುಕೊಂಡ. ಕೆಮ್ಮಿದ. ಅವನ ಕೆಮ್ಮು ನಮ್ಮನ್ನೆಲ್ಲ ನಿಶ್ಯಬ್ದ ಮಾಡಿತು. ಅವನು ಏನಂದ ಮೆಲಿಟನ್?’

‘ಪ್ರಿಯ ನಾಗರಿಕ ಬಂಧುಗಳೇ, ನನ್ನ ವಾಗ್ದಾನಗಳಿಗೆ ಕಾರಣವಾದ ನಾನು ಸಾಗಿ ಬಂದ ಪಥವನ್ನು ನೆನೆದುಕೊಂಡು ಮತ್ತೆ ಜೀವಂತಗೊಳಿಸಿಕೊಳ್ಳುವುದು ಮಾತ್ರವೇ ಈ ನುಡಿಗಳಿಗೆ ಕಾರಣವಾಗಿದೆ. ಈ ಮೊದಲು ನಾನು ಈ ಊರಿಗೆ ಅಧ್ಯಕ್ಷಸ್ಥಾನದ ಸ್ಪರ್ಧಿಯ ಅನಾಮಧೇಯ ಸಹಚರನಾಗಿ ಆಗಮಿಸಿದ್ದೆ. ಯಾವ ಪ್ರತಿನಿಧಿಯ ಪ್ರಾಮಾಣಿಕತೆಯು ಎಂದೂ ರಾಜಕೀಯ ಪ್ರಣಾಳಿಕೆಯ ಸಂದರ್ಭದ ವ್ಯಕ್ತರೂಪವೇ ಆಗಿತ್ತೋ ನಮ್ಮ ಗಣರಾಜ್ಯದ ಪರಮೋಚ್ಚ ಪ್ರಜಾಪ್ರಭುತ್ವದ ಆದರ್ಶಗಳ ಸಾಕಾರ ರೂಪವಾಗಿ ಕ್ರಾಂತಿಕಾರೀ ಆದರ್ಶ ಮತ್ತು ಅದರ ಸಾಕ್ಷಾತ್ಕಾರಗಳ ಮಾದರಿಯೇ ಆಗಿದ್ದರು ಅವರು.
‘ಆಗ ಜನ ಚಪ್ಪಾಳೆ ಹೊಡೆದರು, ಅಲ್ಲವಾ ಮೆಲಿಟನ್?’

‘ಹೌದು, ಅವನು ಮಾತು ಮುಂದುವರೆಸಿದ:
‘ಪ್ರಿಯ ಬಂಧುಗಳೇ, ನಾನೂ ಅದೇ ಪಥದಲ್ಲಿ ಸಾಗುವ ಪಯಣಿಗ. ಈ ಹಿಂದೆ ನಾನು ತೀರ ಕೆಲವೇ ವಾಗ್ದಾನಗಳನ್ನು ನೀಡಿದ್ದೆ. ನಾನು ಯಾವ ವಾಗ್ದಾನಗಳನ್ನು ನೆರವೇರಿಸಬಹುದೋ, ಹಾಗೆ ನೆರವೇರಿದಾಗ ಕೇವಲ ಕೆಲವರಿಗೆ ಮಾತ್ರವಲ್ಲ ಇಡೀ ನಾಗರಿಕ ಸಮುದಾಯಕ್ಕೇ ಉಪಯುಕ್ತವಾಗಬಲ್ಲುದೋ ಅಂಥ ವಾಗ್ದಾನ, ಆಶ್ವಾಸನೆಗಳನ್ನು ಮಾತ್ರವೇ ಇದುವರೆಗೂ ಜನತೆಗೆ ನೀಡಿದ್ದೇನೆ. ನಮ್ಮ ಸರ್ಕಾರದ ಯಾವ ಯೋಜನೆಗಳಲ್ಲೂ ಕಾರ್ಯಕ್ರಮಗಳಲ್ಲೂ ಕಾಣಸಿಗಂಥ ನೈಸರ್ಗಿಕ ವಿಕೋಪವೆಂಬ ವಿರೋಧಾಭಾಸದ ಸಂದರ್ಭದಲ್ಲಿ ನಾವಿಂದು ಇಲ್ಲಿ ನೆರೆದಿದ್ದೇವೆ…’

‘ಕರೆಕ್ಟು, ನನ್ನಪ್ಪಾ! ಸರಿಯಾಗಿ ಹೇಳಿದೇ ತಂದೇ ಅಂತ ಯಾರೋ ಒಬ್ಬ ಕೂಗಿದ.

‘ಈ ಸಂದರ್ಭದಲ್ಲಿ, ಪರಂತು, ನಿಸರ್ಗವು ನಮಗೆ ದಂಡನೆ ವಿಧಿಸಿದಂತೆ ತೋರುತ್ತಿರುವಾಗ ಭೂಕಂಪನದ ಕೇಂದ್ರವೇ ಆಗಿದ್ದ ಈ ನೆಲದ ಮೇಲೆ, ಕುಸಿದುಬಿದ್ದ, ನಮ್ಮವೇ ಆಗಬಹುದಾಗಿದ್ದ, ನಮ್ಮವೇ ಎಂದು ನಾನು ಭಾವಿಸಿಕೊಂಡಿರತಕ್ಕಂಥಾ ಮನೆಗಳಿರುವ ನೆಲದ ಮೇಲೆ ನಿಮ್ಮ ಅಳಲನ್ನು ಆಲಿಸಿ ಸ್ವೀಕರಿಸಲು ಬಂದು ನಿಂತಿದ್ದೇನೆ. ಪ್ರಾಚೀನ ಕಾಲದಲ್ಲಿ ನೀರೋ ಚಕ್ರವರ್ತಿಯು ತನ್ನ ಪ್ರಜೆಗಳ ದುಃಖವನ್ನು ಸಂತೋಷದಿಂದ ಅನುಭವಿಸುತ್ತ ನೆರವು ನೀಡುತ್ತಿದ್ದನಲ್ಲ ಹಾಗಲ್ಲ, ಪರಂತು, ನಾವು ಕರುಣೆ ತುಂಬಿದ ಹೃದಯಗಳಿಂದ ಉದಾರವಾದ ಧನಸಹಾಯ, ಪ್ರೋತ್ಸಾಹಧನಗಳನ್ನು ನೀಡುತ್ತಾ ನಾಶಗೊಂಡ ಮನೆಗಳ ಪುನರ್‌ ನಿರ್ಮಾಣ ಕಾರ್ಯದಲ್ಲಿ ಸಮರೋಪಾದಿಯಲ್ಲಿ ತೊಡಗುವುದಾಗಿ ಭರವಸೆ ನೀಡುವುದಕ್ಕೆ ಸಂತೋಷವಾಗುತ್ತದೆ. ಯಾವ ಮನೆಗಳ ನಾಶದಿಂದ ಜೀವ ಹಾನಿಯಾಗಿದೆಯೋ ಅವರೆಲ್ಲರೂ ನಮ್ಮ ಒಡ ಹುಟ್ಟಿದ ಬಂಧುಗಳೆಂದೇ ಭಾವಿಸಿ ಈ ಮೂಲಕ ನನ್ನ ಸ್ವಾಂತನವನ್ನು ತಿಳಿಸಲು ಇಷ್ಟಪಡುತ್ತೇನೆ. ಅನೇಕ ವರ್ಷಗಳ ಹಿಂದೆ ಈ ಊರಿಗೆ ಭೇಟಿ ನೀಡಿದ್ದೆ. ಆಗ ನಾನು ಅಧಿಕಾರದಿಂದ ದೂರವಿರುವ ಸಾಮಾನ್ಯನಾಗಿದ್ದೆ. ಆ ಸಂತೋಷದ ದಿನಗಳನ್ನು ಮನಸ್ಸಿಗೆ ತಂದುಕೊಂಡರೆ ನೋವು ತುಂಬಿದ ಈ ಮನೆಗಳ ದೃಶ್ಯ ನನಗೆ ಅತೀವವಾಗಿರತಕ್ಕಂಥ ದುರ್ಭರವಾದ ದುಃಖವನ್ನುಂಟುಮಾಡುತ್ತಿದೆ ಎಂದು ಹೇಳದೆ ವಿಧಿಯಿಲ್ಲ. ನಿಜ ನನ್ನ ಬಂಧುಗಳೇ. ಬದುಕಿರುವವರ ವೇದನೆ, ಸ್ವತ್ತಿನ ನಾಶದಿಂದಾದ ಅಪಾರವಾದ ಹಾನಿ, ಮರಣಿಸಿದವರಿಗಾಗಿ ಮಡುಗಟ್ಟಿನಿಂತಿರುವ ಶೋಕ, ಕಲ್ಲು ರಾಶಿಗಳ ನಡುವೆಯೇ ಸಿಕ್ಕಿಬಿದ್ದಿರುವ ಶವಗಳ ರಾಶಿ ಇವನ್ನೆಲ್ಲ ಕಂಡು ನನ್ನ ಮನಸ್ಸು ಮಮ್ಮಲ ಮರುಗುತ್ತಿದೆ.’

‘ಈ ಮಾತಿಗೂ ಚಪ್ಪಾಳೆ ಇತ್ತು, ಅಲ್ಲವಾ ಮೆಲಿಟನ್?’

‘ಇಲ್ಲ. ಆ ಹೊತ್ತಿಗೆ ಮೊದಲು ಕಿರುಚಿದ್ದ ಅದೇ ಮನುಷ್ಯ, ‘ಕರೆಕ್ಟು, ಸರಿಯಾಗಿ ಹೇಳಿದೆ ನನ್ನ ತಂದೇ,’ ಅಂತ ಮತ್ತೆ ಜೋರಾಗಿ ಅಂದ. ನಮ್ಮ ಹತ್ತಿರ ಇದ್ದವರು ಯಾರೋ, ಆ ಕುಡುಕನ ಬಾಯಿ ಮುಚ್ಚಿಸಿ,’ ಅಂದರು.

‘ಹ್ಞಾ, ಹೌದು. ಟೇಬಲ್ಲಿನ ಆ ತುದಿಯಲ್ಲಿ ಗಲಭೆ ಆಗುವ ಹಾಗಿತ್ತು. ಗೌರ್ನರ್ ಮತ್ತೆ ಮಾತು ಶುರು ಮಾಡಿದ ತಕ್ಷಣ ಎಲ್ಲ ತಣ್ಣಗಾಯಿತು.’

‘ಪ್ರಿಯ ಟೆಕ್ಸಾಕ್ಯುಯೆಸ್ಕೋ ಪ್ರಜೆಗಳೇ, ಮತ್ತೊಮ್ಮೆ ಹೇಳುತಿದ್ದೇನೆ. ಮಹಾಪುರುಷ ಬೆರ್‍ನಾಲ್, ಯೋಧನಾಗಿದ್ದು, ಗ್ವಾಟೆಮಾಲದ ಗೌರ್ನರ್ ಆಗಿ ಪುಸ್ತಕಗಳನ್ನು ಬರೆದ ಬೆರ್‍ನಾಲ್ ಡಿಯಾಸ್ ಕ್ಯಾಸ್ಟಿಲೋ ಒಮ್ಮೆ ಹೇಳಿದ್ದ ಸತ್ತವರು ಸಾಯುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಂದಿದ್ದ. ಆದರೆ ನನ್ನ ಸಹಜ ಮಾನವೀಯತೆಯ ಕಾರಣದಿಂದ ನನ್ನ ಹೃದಯ ಅಪಾರವಾದ ವೇದನೆಯನ್ನು, ಚಿಗುರುತ್ತಿರುವ ಮರವನ್ನು ಕಡಿದುರುಳಿಸಿದಾಗ ಆಗತಕ್ಕಂಥ ವೇದನೆಯನ್ನು ಅನುಭವಿಸುತ್ತಿದೆ ಅನ್ನುವವನು. ನನ್ನ ಎಲ್ಲ ಅಧಿಕಾರ, ಸರ್ಕಾರದ ಎಲ್ಲ ಸಾಮರ್ಥ್ಯ ಬಳಸಿಕೊಂಡು ನಾವು ಯಾರೂ ಬಯಸಿರದ, ನಿರೀಕ್ಷಿಸಿರದ ಈ ಅವಗಢದ ಸಂದರ್ಭದಲ್ಲಿ ನಿಮ್ಮೆಲ್ಲರ ನೆರವಿಗೆ ಕಟಿಬದ್ಧರಾಗಿದ್ದೇವೆ. ಈ ನನ್ನ ವಾಗ್ದಾನಗಳನ್ನು ಪೂರೈಸದೆ ನಾವು ಯಾರೂ ಒಂದು ಕ್ಷಣವೂ ವಿಶ್ರಮಿಸುವುದಿಲ್ಲ. ಅಲ್ಲದೆ ದೇವರು ಒಡ್ಡಿರುವ ಈ ಪರೀಕ್ಷೆ ನಮ್ಮ ಎದೆ ಗುಂದಿಸದೆ…

‘ಅಲ್ಲಿಗೆ ಅವನ ಮಾತು ಮುಗಿಯತು. ಮುಂದೆ ಅವನೇನು ಹೇಳಿದನೋ ಕೇಳಲಿಲ್ಲ. ಊಟದ ಮೇಜಿನ ಗಲಭೆ ಹೆಚ್ಚಾಗಿ ಮಾತು ಕೇಳಿಸಿಕೊಳ್ಳುವುದಕ್ಕೆ ಆಗಲಿಲ್ಲ…’

‘ನಿಜ, ಮೆಲಿಟನ್. ಅದು ಹೇಳುವಂಥದಲ್ಲ, ಕಣ್ಣಾರೆ ಕಾಣಬೇಕಾದದ್ದು. ಅವರ ಜೊತೆಯಲ್ಲಿ ಬಂದಿದ್ದ ಮನುಷ್ಯ, ‘ಕರೆಕ್ಟು, ನನ್ನಪ್ಪಾ, ಸರಿಯಾಗಿ ಹೇಳಿದೆ ತಂದೇ,’ ಅಂತ ಆಚೆ ಬೀದಿಗೂ ಕೇಳುವ ಹಾಗೆ ಕೂಗುತಿದ್ದ. ಅವನನ್ನು ಸುಮ್ಮನೆ ಮಾಡಲು ನೋಡಿದರು. ಅವನು ಜೇಬಿನಿಂದ ಪಿಸ್ತೂಲು ತೆಗೆದು ಢಂ ಢಂ ಗುಂಡು ಹಾರಿಸಿದ, ಚಾವಣಿಗೆ. ಗುಂಡಿನ ಸದ್ದು ಕೇಳಿದ ಜನ ದಿಕ್ಕಾಪಾಲಾಗಿ ಓಡಿದರು. ಊಟದ ಮೇಜು ಬಿತ್ತು. ಗುಂಡು ಹಾರಿಸುತಿದ್ದವನ ಮೇಲೆ ತಟ್ಟೆ, ಲೋಟ, ಬಾಟಲಿ, ಪಾತ್ರೆಗಳನ್ನು ಎತ್ತಿ ಬೀಸಿ ಎಸೆದರು. ಅವೆಲ್ಲ ಅವನಿಗೆ ತಗಲುವ ಬದಲು ಗೋಡೆಗೆ ಅಪ್ಪಳಿಸಿದವು. ಅವನು ಖಾಲಿಯಾದ ಪಿಸ್ತೂಲಿಗೆ ಮತ್ತೆ ಗುಂಡು ತುಂಬಿ ಎತ್ತೆತ್ತಲಿಂದಲೂ ಹಾರಿ ಬರುತಿದ್ದ ಪಾತ್ರೆ ಪಡಗಗಳಿಂದ ತಪ್ಪಿಸಿಕೊಳ್ಳುತ್ತ ಅತ್ತ ಇತ್ತ ವಾಲಾಡುತ್ತ ಮತ್ತೂ ಗುಂಡು ಹಾರಿಸುತ್ತಲೇ ಇದ್ದ.

‘ಎದ್ದು ನಿಂತಿದ್ದ ಗೌರ್ನರನನ್ನು ಆಗ ನೋಡಬೇಕಾಗಿತ್ತು ನೀನು. ಹುಬ್ಬು ಗಂಟಿಕ್ಕಿಕೊಂಡು, ಗಂಭೀರವಾಗಿ, ಗಲಾಟೆಯನ್ನೆಲ್ಲ ಕಣ್ಣಿನ ದುರುದುರು ನೋಟದಲ್ಲೇ ಅಡಗಿಸುವವನ ಹಾಗೆ ನೋಡುತ್ತಾ ಇದ್ದ.

‘ಹಾಡು ನುಡಿಸಿ ಅಂತ ವಾದ್ಯದವರಿಗೆ ಯಾರು ಹೇಳಿದರೋ ಯಾರಿಗೆ ಗೊತ್ತು. ಅವರೋ ತಕ್ಷಣ ರಾಷ್ಟ್ರಗೀತೆ ನುಡಿಸಿದರು. ಕಹಳೆ ಊದುತಿದ್ದವನ ಕೆನ್ನೆ ಸಿಡಿದು ಹೋಗುವ ಹಾಗೆ ಉಬ್ಬಿತ್ತು. ಅಷ್ಟು ಕಷ್ಟಪಟ್ಟು ರಾಷ್ಟ್ರಗೀತೆ ನುಡಿಸಿದರು. ಗಲಾಟೆ ಮಾತ್ರ ಹಾಗೇ ಇತ್ತು. ಹೊರಗೆ, ಬೀದಿಯ ಮೇಲೆ ಹೊಡೆದಾಟ ನಡೆಯುತಿತ್ತು. ಜನ ಕೊಡಲಿ ಹಿಡಿದು ಒಬ್ಬರನ್ನೊಬ್ಬರು ಕೊಚ್ಚುತಿದ್ದಾರೆ ಅಂತ ಗೌರ್ನರಿಗೆ ಯಾರೋ ಬಂದು ಹೇಳಿದರು. ಆ ಮಾತು ನಿಜ ಅನ್ನುವ ಹಾಗೆ ಹೊರಗೆ ಹೆಂಗಸರ ಕೂಗಾಟ ಕೇಳುತಿತ್ತು. ‘ಯಾರಾದರೂ ಬಿಡಿಸಿ’, ‘ಅಯ್ಯೋ, ನನ್ನ ಗಂಡನ ಜೀವ ತೆಗೆದ, ಹಿಡಿದುಕೊಳ್ಳಿ ಅವನನ್ನ,’ ಅನ್ನುವ ಕೂಗು ಕೇಳಿಸಿದವು.

‘ಗೌರ್ನರ್ ಸುಮ್ಮನೆ ನಿಂತಿದ್ದ. ಅಲ್ಲಾಡಿ ಕೂಡ ಅಲ್ಲಾಡಲಿಲ್ಲ. ಏಯ್ ಮೆಲಿಟನ್, ಹಾಗೆ ಇರುವವರನ್ನ ಏನೋ ಅನ್ನುತ್ತಾರಲ್ಲ, ಏನದು..’

‘ನಿರ್ಭೀತ.’

‘ಹೂಂ, ನಿರ್ಭೀತನಾಗಿ ನಿಂತಿದ್ದ. ಹೊರಗೆ ಗಲಾಟೆ ಜಾಸ್ತಿ ಆದಮೇಲೆ ಒಳಗೆ ಶಾಂತವಾಗಿತ್ತು. ‘ಕರೆಕ್ಟಾಗಿ ಹೇಳಿದೆ ತಂದೇ,’ ಅನ್ನುತಿದ್ದ ಕುಡುಕ ನಿದ್ದೆ ಹೋಗಿದ್ದ. ಯಾರೋ ಎಸೆದ ಬಾಟಲಿ ಅವನ ತಲೆಗೆ ತಾಕಿ ಕಾಲು ಹಿಗ್ಗಲಿಸಿಕೊಂಡು ನೆಲದ ಮೇಲೆ ಎಚ್ಚರವಿಲ್ಲದೆ ಬಿದ್ದಿದ್ದ, ಗೌರ್ನರ್ ಹೊರಗೆ ಬಂದ. ಪಿಸ್ತೂಲನ್ನು ಇನ್ನೂ ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದುಕೊಂಡೇ ಎಚ್ಚರ ತಪ್ಪಿ ಬಿದ್ದಿದ್ದವನನ್ನು ನೋಡಿದ. ಯಾರನ್ನೋ ಕರೆದು ಪಿಸ್ತೂಲು ತಗೊಳ್ಳಿ ಅಂದ. ಹುಷಾರು ಅವನ ಕೈಗೆ ಪಿಸ್ತೂಲು ಮತ್ತೆ ಸಿಗದ ಹಾಗೆ ನೋಡಿಕೊಳ್ಳಿ ಅಂದ.

‘ಯಾಕೋ ಏನೋ ಗೊತ್ತಿಲ್ಲ. ಸಂಗೀತದವರು ರಾಷ್ಟ್ರಗೀತೆಯನ್ನು ಒಂದೇ ಸಮ ನುಡಿಸುತ್ತಲೇ ಇದ್ದರು. ಮೊದಲು ಮಾತಾಡಿದ್ದ ಆಫೀಸರು ಕೈ ಬೀಸುತ್ತಾ, ಸದ್ದು, ಸುಮ್ಮನಿರಿ, ಬಲಿಯಾದವರ ಆತ್ಮಕ್ಕೆ ಶಾಂತಿಯನ್ನು ಕೋರಿ ಅಂದ. ಅಲ್ಲಾ ಮೆಲಿಟನ್, ಯಾರ ಸಾವಿಗೆ ಶಾಂತಿ ಕೋರಬೇಕು ಅಂದದ್ದು ಅವನು?’

‘ಗಲಾಟೆಗೆ ಬಲಿಯಾದರಲ್ಲ ಅವರ ಆತ್ಮಕ್ಕೆ.’

‘ಹೂಂ. ಅದೇ ಮತ್ತೆ. ಆಮೇಲೆ ಎಲ್ಲರೂ ಸೇರಿ ಮೇಜು ಕುರ್ಚಿ ಸರಿಯಾಗಿ ಜೋಡಿಸಿ ಕುಡಿಯುತ್ತ ಕೂತರು. ಸಂಗೀತದವರು ಈಗ ‘ಆತ್ಮದ ಅಳಲು ನೀನರಿಯೇ,’ ಅನ್ನುವ ಹಾಡು ಹೇಳುತಿದ್ದರು.

‘ಇದೆಲ್ಲ ಆಗಿದ್ದು ಸೆಪ್ಟೆಂಬರ್ ೨೧ರ ಹೊತ್ತಿಗೆ. ನನಗೆ ಜ್ಞಾಪಕ ಇದೆ. ಯಾಕೆ ಅಂದರೆ ಅವತ್ತು ನನ್ನ ಹೆಂಡತಿಗೆ ಹೆರಿಗೆ ಆಗಿತ್ತು. ಗಂಡು ಮಗು-ಮರೆನ್ಸಿಯೋ- ಹುಟ್ಟಿದ್ದ. ಮನೆಗೆ ಹೋದಾಗ ಕುಡಿದು ತೂರಾಡುತಿದ್ದೆ. ಹೆಂಡತಿ ಒಂದು ವಾರ ನನ್ನ ಜೊತೆ ಮಾತು ಬಿಟ್ಟಿದ್ದಳು-ಅಂಥ ಹೊತ್ತಿನಲ್ಲಿ ಅವಳ ಜೊತೆಗೆ ನಾನು ಇರದೆ ಒಬ್ಬಳನ್ನೇ ಬಿಟ್ಟು ಹೋಗಿದ್ದೆ ಅಂತ. ‘ಗಂಡನಾಗಿ ನೀವು ಸೂಲಗಿತ್ತಿಯನ್ನೂ ಕರೆಯಲಿಲ್ಲ, ದೇವರು ನನಗೆ ಎಷ್ಟು ಬುದ್ಧಿ ಕೊಟ್ಟಿದ್ದಾನೋ ಅಷ್ಟರಲ್ಲೇ ಮಗುವನ್ನು ಹೆತ್ತೆ’ ಅಂತ ಅವಳ ಮನಸ್ಸು ಚೆನ್ನಾಗಿದ್ದಾಗ ಹೇಳಿದಳು.
*****

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...