ಮೂಲ: ಗಾಯ್ ಡಿ ಮೊಪಾಸಾ / Guy de Maupassant – The Mad Woman
ಫ್ರಾಂಕೋ-ಪೃಸಿಯನ್ ಯುದ್ಧದಲ್ಲಿ ಭೀತಿಪ್ರದವಾದ ಕತೆಯೊಂದು ಇನ್ನೂ ಮೊನ್ನೆ ಮೊನ್ನೆ ಆದಂತೆ ತನಗೆ ನೆನಪಾಗುತ್ತದೆಂದು ಮೆಸ್ಸು ಅರ ಅಂಡಾಲನೆಂದನು.
ಅವನ ಮನೆ ಫಾಬರ್‍ಗ ಕಾಮೇಲಿನಲ್ಲಿ. ಪೃಸಿಯನ್ನರು ಮುತ್ತಿಗೆ ಹಾಕಿದಾಗ ಅವನು ಅಲ್ಲಿಯೇ ವಾಸಿಸುತ್ತಿದ್ದನು. ತನ್ನ ಮನೆಗೆ ಹೊಂದಿದ ನೆರೆಮನೆಯಲ್ಲಿ ಒಂದು ತರಹದ ಹುಚ್ಚು ಹಿಡಿದ ಹೆಂಗುಸೊಬ್ಬಳಿದ್ದಳು. ಒಂದರ ಮೇಲೊಂದು ಒದಗಿದ ದುರ್‍ದೈವದ ಆಘಾತಗಳಿಂದ ಅವಳ ತಲೆಯು ಕೆಟ್ಟು ಹೋಗಿತ್ತು. ಅವಳ ೨೫ನೆಯ ವರುಷಕ್ಕೆ ತಂದೆಯು ತೀರಿದನು. ಮುಂದೊಂದು ತಿಂಗಳು ತುಂಬುವದರಲ್ಲಿಯೆ ಅವಳ ಗಂಡನೂ, ಅದೇ ಹುಟ್ಟಿದ ಹಸುಗೂಸೂ ಕೈಬಿಟ್ಟು ತೆರಳಿದ್ದವು. ಸಾವು ಒಮ್ಮೆ ಒಂದು ಮನೆಯಲ್ಲಿ ಕಾಲಿಕ್ಕಿತೆಂದರೆ ತಿರುಗೂಮುರುಗೂ ಆ ಮನೆಯನ್ನೇ ತಿಕ್ಕಿ ಮುಕ್ಕುತ್ತದೆ; ತನ್ನ ಆಟವನ್ನು ಬೇಕಾದ ಹಾಗೆ ಹೂಡುತ್ತದೆ.
‘ಈ ಹೆಣ್ಣು ಮಗಳು ದುಃಖಾತಿರೇಕದಿಂದ ಹಾಸಿಗೆಯನ್ನು ಹಿಡಿದು ಆರು ವಾರಗಳು ಕಳೆದಿದ್ದವು; ಮೇಲಾಗಿ ಸನ್ನಿ ಪಾತವೂ ಕೂಡಿಕೊಂಡಿತ್ತು. ತಂದೆ, ಗಂಡ, ಮಗುವಿನ ಹಾದಿಯನ್ನೇ ಇವಳೂ ಬೇಗನೆ ಹಿಡಿಯಬಹುದೆಂಬ ಸಂಭವವು ಹೆಚ್ಚಾಗಿದ್ದಿತು. ಅವಳಿಗೆ ಏನೂ ದಕ್ಕುತ್ತಿರಲಿಲ್ಲ. ಯಾವುದೂ ಗಂಟಲಿನಲ್ಲಿ ಇಳಿಯುತ್ತಿದ್ದಿಲ್ಲ. ಹುಳು ಹುಳು ಕಣ್ಣು ಮಾತ್ರ ಬಿಡುತ್ತ ಹಾಸಿಗೆಯಲ್ಲಿ ಬಿದ್ದಿರುತ್ತಿದ್ದಳು. ಯಾವದಾದರೊಂದು ಔಷಧ ಕೊಟ್ಟು ಗುಣಪಡಿಸುವ ಅನೇಕ ಉಪಾಯಗಳು ಅನೇಕ ಸಲ ವ್ಯರ್‍ಥವಾದುವು. ಸಮೀಪದಲ್ಲಿ ಯಾರಾದರೂ ಬಂದರೂ ಕೂಡ, ತನ್ನನ್ನು ಕೊಲ್ಲಬೇಕೆಂದು ಮಾಡಿರುವ ಹಂಚಿಕೆಯೆಂದು ಅವಳು ಬಗೆದು ಹೌಹಾರುವಂತೆ ಚೀರಿಕೊಳ್ಳುವಳು, ದೊಪ್ಪನೆ ಬಿದ್ದು ಕೊಳ್ಳುವಳು. ಆದುದರಿಂದ ಅವಳನ್ನು ಹಾಸಿಗೆಯಲ್ಲಿಯೇ ಬಿಡದ ಹೊರತು ಬೇರೆ ಹಾದಿಯುಳಿದಿರಲಿಲ್ಲ. ಬೇರೆ ಬಟ್ಟೆಗಳನ್ನು ತೊಡಿಸಿ ಮತ್ತೊಂದು ಹಾಸಿಗೆಗೆ ಅವಳನ್ನು ಸಾಗಿಸಬೇಕಾದರೆ ಕೃತಾವಸ್ಥೆಯಾಗುತ್ತಿತ್ತು!
‘ಅವಳನ್ನು ನೋಡಿಕೊಳ್ಳಲು ಅವರ ಮನೆಯಲ್ಲಿಯೇ ಮಾಡುತ್ತ ನೌಕರಿ ಮಾಡುತ್ತ ಮುಪ್ಪಾದ ಆಳುಮಗನೊಬ್ಬನೇ ಮಾತ್ರ ಈಗಿದ್ದವನು. ಅವನು ಕಷ್ಟ ಪಟ್ಟು ಅವಳಿಗೆ ಮೇಲಿಂದ ಮೇಲೆ ಏನಾದರೂ ಕುಡಿಸುವನು-ಹಾಲು, ಗಂಜಿ, ನೀರು, ಅವಳಿಗೇನಾಗಿ, ತಲೆಯಲ್ಲಿ ಏನು ಸೇರಿಕೊಂಡಿತ್ತೋ, ಏನೂ ತಿಳಿಯಲವಕಾಶವಿರಲಿಲ್ಲ. ಅವಳೆಂದೂ ತುಟಿ ಎರಡು ಮಾಡದ್ದರಿಂದ ಯಾರಿಗೂ ಅದರ ಸುಳಿವು ಕೂಡ ಹತ್ತುವದು ಕಠಿಣವಾಗಿತ್ತು. ಸತ್ತವರಿಗಾಗಿ ಅವಳು ಈ ಪರಿಯಾಗಿರಬಹುದೇ? ಅಥವಾ ಏನಿತ್ತು-ಏನಾಯಿತೆಂಬ ಬಾಳಿಗಾಗಿ ಹಳಹಳಿಸುತ್ತ ನೊಂದ ಬೆಂದ ಹಳವಂಡಗಳನ್ನು ಕಾಣುತ್ತಿದ್ದಳೇ? ನಿಂತ ನೀರಿನಂತೆ ಅವಳ ಮನಸು ಮಲೆತು ಹೋಗಿರಬಹುದೇ? ಏನೋ- ದೇವರೇ ಬಲ್ಲ-ಅವಳ ಈ ಸ್ಥಿತಿಯನ್ನು.
‘ಅವಳು ಹೀಗೆಯೇ ೧೫ ವರುಷಗಳ ವರೆಗೆ ಮಂಕು ಹಿಡಿದ ಸ್ಥಿತಿಯಲ್ಲಿಯೇ ತನ್ನಷ್ಟಕ್ಕೆ ತಾನೆ ಏಕಾಂತಲೋಕದಲ್ಲಿದ್ದು ಬಿಟ್ಟಿದ್ದಳು.
‘ಯುದ್ಧದ ರಣಗೊಂಬು ದಿಗಂತವನ್ನು ವ್ಯಾಪಿಸಿ-ಎದೆಯನ್ನು ಬಿರಿಯಿಸಿತು. ಡಿಶಂಬರದ ಆರಂಭಕ್ಕೆ ಜರ್‍ಮನ್ನರು ಕಾರ್‍ಮೇಲಿಯಕ್ಕೆ ದಾಳಿಯಿಟ್ಟರು. ನಿನ್ನೆ-ಮೊನ್ನೆ ಜರುಗಿದ ಬಿಸಿ ಸುದ್ದಿಯೆಂಬಂತೆ ನನಗೀಗಲೂ ಎಲ್ಲವೂ ನೆನಪಿದೆ. ಮಿತಿಮೀರಿದ ಚಳಿ; ಹಿಮ ಬೀಳುತ್ತಿದ್ದುದರಿಂದ ಕಲ್ಲುಗಳೂ ಹೆಪ್ಪುಗಟ್ಟಿದ್ದವು. ಅವರ ದಾಳಿ ಮನೆ ಮುಂದೆಯೇ ಬಂದಿತು. ನನಗೆ ಸಂದುಬೇನೆಯಾಗಿದ್ದರಿಂದ ನನಗೆತ್ತೆತ್ತಲೂ ಅಲುಗಾಡಲು ಬರುತ್ತಿದ್ದಿಲ್ಲ. ಅವರ ಕಿವಿ ಬಿರಿಯುವ ಸಪ್ಪಳ ಕೇಳಿ ನಾನು ಒಂದು ಆರಾಮುಕುರ್‍ಚಿಯ ಮೇಲೆ ಬಿದ್ದು ಕೊಂಡೇ ಕಿಡಿಕಿಯೊಳಗಿಂದ ಅವರು ದಾಟಿಹೋಗುವದನ್ನು ಕಣ್ಣೆಳಗೆ ಕಣ್ಣಿಟ್ಟುಕೊಂಡು ನೋಡುತ್ತ ಬಿದ್ದು ಕೊಂಡಿದ್ದೆ. ನಿಚ್ಚಳವಾಗಿ ಎಲ್ಲವೂ ಕಾಣುತ್ತಿತ್ತು.
‘ಪೃಸಿಯನ್ನರ ದಂಡು-ಒಬ್ಬರ ಹಿಂದೊಬ್ಬರು ದಡದಡನೆ ಹೆಜ್ಜೆ ಹಾಕುತ್ತ, ಜಯಧ್ವನಿಯನ್ನು ಮಾಡುತ್ತ ವೈಭವದಿಂದ ಸಾಗಿದ್ದಾರೆ. ಸಾಲಿಗೆ ಸಾಲೇ ಬರುತ್ತಿತ್ತು. ಮೇಲಧಿಕಾರಿಗಳು ಸ್ಥಳನಿವಾಸಿಗಳ ಮನೆಗಳಿಗೆ ತಮ್ಮ ಜನಗಳನ್ನು ಊಟಕ್ಕಾಗಿ ಹಂಚಿಹಂಚಿ ಅಟ್ಟಿ ಹಾಕಿದರು. ಅದರಲ್ಲಿ ನನ್ನ ಪಾಲಿಗೆ ೧೭ ಟೊಣಪರ ತಂಡವೊಂದು ಒಕ್ಕರಿಸಿತು. ನನ್ನ ನೆರೆಮನೆಯಾಕೆಗೆ ೧೨ ಜನರ ಗುಂಪೊಂದು ಬೀಗರಾಗಿ ಆಗಮಿಸಿತು. ಅವರಲ್ಲೊಬ್ಬನೆ ಮಾತ್ರ ಮೇಲಧಿಕಾರಿಯೆಂದು ಒಡೆದು ಕಾಣುತ್ತಿತ್ತು. ಅವನು ಒಂದೇ ಸವನೆ-ತೆರಪಿಲ್ಲದೆ ಮಾತಾಡಿಯೇ ಮಾತಾಡುತಿದ್ದನು ಕಟ್ಟಿಗೆಯ ಬಾಯಿಯಾಗಿದ್ದರೆ ಒಡೆದು ಹೋಗಬಹುದಾಗಿದ್ದಿತು; ನೋಡಲೂ ಕ್ರೂರವಾಗಿ ಕಾಣುತ್ತಿದ್ದನು.
‘ಮೊದಮೊದಲಿನ ಕೆಲ ದಿನಗಳು ಯಾವುದಕ್ಕೂ ಕೊರತೆಯಿಲ್ಲದೆ ಸುಸೂತ್ರವಾಗಿ ಕಳೆದುವು. ತಮ್ಮ ಪ್ರಸ್ತವು ಸರಿಯಾಗಿ ನೆಲೆಯೂರಿತೆಂದು ಅವರು ಮೈಮರೆತವರಾಗಿದ್ದರು. ಆ ಮನೆಯ ಯಜಮಾನತಿಗೆ ಮೈಯಲ್ಲಿ ಚೆನ್ನಾಗಿಲ್ಲೆಂಬ ಸುದ್ದಿಯು ಆ ಅಧಿಕಾರಿಗೆ ಕರ್‍ಣೋಪಕರ್‍ಣವಾಗಿ ತಿಳಿದು ಬಂದಿತು. ಅದಕ್ಕವನು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ಆದರೂ ಆ ಹೆಣ್ಣು ಮಗಳಿಗೆ ಆಗಿರುವದಾದರೂ ಏನು, ಎಂಬುದನ್ನರಿತುಕೊಳ್ಳಲು ಅವನಿಗೆ ಕುತೂಹಲವುಂಟಾಯಿತು. ಯಾಕಂದರೆ ಇಷ್ಟು ದಿನ ಅವಳ ಮನೆಯಲ್ಲಿಯೇ ತನಗೆ ತನ್ನ ಕೈ ಕೆಳಗಿನವರಿಗೆ ಅಳಿಯತನ ಸಾಗಿದರೂ ಅವಳು ಯಾರೊಬ್ಬರ ಕಣ್ಣಿಗೂ ಬೀಳದ್ದರಿಂದ ಅವನು ಇತ್ಯರ್‍ಥ ಮಾಡಿಕೊಳ್ಳಬೇಕೆಂದು ನಿರ್‍ಧರಿಸಿಕೊಂಡನು. ಅವಳಿಗಾದ ಬೇನೆ ಯಾವುದೆಂಬುದನ್ನು ಹೊರಗೆಡಹಲು ವಿಚಾರಿಸತೊಡಗಿದನು. ಎಂದಿಗೂ ಮಾಯದ ದುಃಖದಿಂದ ಅವಳು ೧೫ ವರುಷಗಳಿಂದ ಹಾಸಿಗೆ ಹಿಡಿದಿರುವಳೆಂದು ಗೊತ್ತು ಹಚ್ಚಿದನು. ಆದರೂ ಅಧಿಕಾರಿಯು ಇಷ್ಟಕ್ಕೆ ನಂಬದೆ, ಮತ್ತಾವುದಾದರೊಂದು ಗೂಢವಾದ ಹಂಚಿಕೆಯಿರಬೇಕೆಂದು ಕಲ್ಪಿಸಿಕೊಂಡನು. ಪೃಸಿಯನ್ನರ ಹತ್ತಿರ ಬರಬಾರದು; ಮಾತಾಡಬಾರದು; ಅಥವಾ ಕಣ್ಣೆತ್ತಿ ನೋಡಬಾರದೆಂಬ ಹೆಮ್ಮೆಯಿಂದ ಅವಳು ಹಾಸಿಗೆಯಿಂದೇಳದೆ ಉರಿಯುತ್ತ ಬಿದ್ದಲ್ಲಿಯೇ ಬಿದ್ದಿರಬೇಕೆಂದು ತನ್ನ ಮನಸಿನಲ್ಲಿಯೇ ಆ ಅಧಿಕಾರಿಯು ಕಲ್ಪಿಸಿ, ವಿಚಾರಗಳ ಗೊಂದಲದಲ್ಲಿ ಸಿಕ್ಕಿಕೊಂಡನು.
‘ಅವಳು ತನ್ನನ್ನು ಬರಮಾಡಿಕೊಳ್ಳಬಹುದೆಂದು ಬಹು ತವಕ ಪಡ ಹತ್ತಿದನು. ಅವಳ ಕೋಣೆಯೊಳಹೊಕ್ಕು ಒರಟುತನದಿಂದ ಯಜಮಾನಿಯೇ, ನೀನು ಹಾಸಿಗೆ ಬಿಟ್ಟೇಳಲೇಬೇಕು; ಕೆಳಬಂದು ನಮ್ಮೆಲ್ಲರಿಗೂ ದರ್‍ಶನ ಕೊಡಬೇಕು’ ಎಂದು ಅವಳಿಗೆ ಅನಿವಾರ್‍ಯವಾಗಿ ಮೊದಲು ಬಿನ್ನವಿಸಿಕೊಂಡನು.
‘ಅವಳು ಏನೊಂದೂ ಮರುಮಾತನಾಡಲಿಲ್ಲ. ಕೇಳಿಸದವರಂತೆ ಸುಮ್ಮನಿದ್ದುಬಿಟ್ಟಳು. ಅವಳ ದೊಡ್ಡ ಕಣ್ಣುಗಳ ನೋಟವು ಮಾತ್ರ ಅವನೆದೆಯಲ್ಲಿ ನೆಟ್ಟಿತು.
ಅಧಿಕಾರಿಯು ಇದನ್ನು ಸಹಿಸಿಕೊಂಡು ಮಾತು ಮುಂದರಿಸಿದನು:
‘ಯಾರ ಸೊಕ್ಕನ್ನೂ ಸೈರಿಸುವ ಸಹನಶೀಲತೆಯು ನನಗಿರುವದಿಲ್ಲ; ನಿನ್ನಷ್ಟಕ್ಕೆ ನೀನೇಳದಿದ್ದರೆ ಮಾತ್ರ, ಯಾರ, ಯಾವ ನೆರವೂ ಇಲ್ಲದೆ ಎಬ್ಬಿಸುವಂಥ ಉಪಾಯಗಳನ್ನು ನಾನು ಉಪಯೋಗಿಸಬೇಕಾದೀತು’-ಎಂದು ಅಧಿಕಾರವಾಣಿಯು ಹೊರಬಿತ್ತು.
‘ಆದರೇನು? ಇವನ ಉಸಿರುಗಳು ಆಕೆಯ ಕಿವಿಗೆ ತಾಕಿದವೋ ಇಲ್ಲವೊ ಎಂಬ ಸೂಚನೆಯ ಭಾವದಿಂದ ಅವಳಿದ್ದಳು. ಏನೂ ಮಿಸು ಕಾಡದೆ ಬಿದ್ದು ಕೊಂಡಿದ್ದಳು.
‘ಅವಳ ಮೌನವು ತನ್ನನ್ನು ತೀರ ಅಪಮಾನಗೊಳಿಸಿತೆಂದು ಅವನು ಕೆಟ್ಟ ಮೋರೆ ಮಾಡಿದನು. ರಕ್ತವು ಕುದಿಯಲಾರಂಭಿಸಿತು.
‘ನಾಳೆ ನೀನು ಕೆಳಗೆ ಬರದಿದ್ದರೆ…………’ ಎಂದಂದುಕೊಳ್ಳುತ್ತ ಕೋಣೆಯಿಂದ ಕಾಲಪ್ಪಳಿಸುತ್ತ ಕೆಳಗಿಳಿದನು.
‘ಮರುದಿನ ಅವಳ ಆಳುಮಗನು ಅವಳ ಬಟ್ಟೆಯನ್ನು ಬದಲಾಯಿಸ ಬೇಕೆಂದು ಬಂದನು; ಆದರೆ ಅವಳು ಅವನ ಮೈ ಮೇಲೇರಿಹೋಗಿ ತನ್ನ ಎಲ್ಲ ಶಕ್ತಿಯಿಂದ ಅವನನ್ನು ಬಲವಾಗಿ ದೂಡಿದಳು. ಅದೇ ವೇಳೆಗೆ ಅಧಿಕಾರಿಯು ಗಡಿಬಿಡಿಯಿಂದ ಅಟ್ಟವನ್ನೇರಿ ಬಂದನು. ಅವಳನ್ನು ಅಧಿಕಾರಿಯ ಕಾಲಮೇಲೆ ಹಾಕಿ, ಆ ಆಳುಮಗನು ‘ಅಧಿಕಾರಿಯೇ, ಅವಳು ಕೆಳಗೆ ಬರಲಾರಳು. ಕ್ಷಮಿಸಬೇಕು. ಅವಳು ಏಳಲಾರದ ಸ್ಥಿತಿಯಲ್ಲಿದ್ದಾಳೆ ನೋಡಬಾರದೇ’ ಎಂದು ಒಂದೇಸವನೆ ಬೇಡಿಕೊಂಡನು.
‘ಸಿಟ್ಟಿನ ಭರದಲ್ಲಿ ಅಧಿಕಾರಿಯು ದಿಗಿಲುಗೊಂಡನು; ವಿಚಾರ ಮಾಡಮಾಡುತ್ತ ಅವಳನ್ನು ಹೊರಗೆಳೆತರಲು ತನ್ನ ಶಿಪಾಯಿಗಳಿಗೆ ಅಪ್ಪಣೆಕೊಡುವಷ್ಟು ಧೈರ್‍ಯವನ್ನು ಅವನು ಒಮ್ಮೆಲೆ ಮಾಡಲಿಲ್ಲ. ಸ್ವಲ್ಪ ಹೊತ್ತು ಕಳೆದ ಮೇಲೆ ಅಧಿಕಾರಿಯು ಬಿದ್ದು ಬಿದ್ದು ನಗುತ್ತ ಜರ್‍ಮನ್ ಭಾಷೆಯಲ್ಲಿ ಸಿಪಾಯಿಗಳಿಗೆ ಆಜ್ಞೆ ಮಾಡಿದನು.
ಗಾಯಗೊಂಡ ಮನುಷ್ಯನನ್ನು ಹೊತ್ತು ಕೊಂಡು ಬರುವಂತೆ ಕೆಲ ಸಿಪಾಯಿಗಳು ಕೂಡಲೆ ಅವಳ ಹಾಸಿಗೆಯನ್ನೇ ಹೊತ್ತು ಕೊಂಡು ಬಂದರು. ಅಲ್ಲಿಯಾದರೂ ಅವಳು ತೆಪ್ಪಗೆ ಬಿದ್ದಿದ್ದಳು; ಮಿಸುಕಾಡಲಿಲ್ಲ. ಈಗಾದರೂ ತುಟಿ ಎರಡು ಮಾಡಲಿಲ್ಲ. ಅಲ್ಲಿ ಏನು ನಡೆದಿತ್ತೊ ಅದರ ಕಡೆಗೆ ಅವಳ ಲಕ್ಷವೇನೂ ಇರಲಿಲ್ಲ. ಅವಳ ಹಿಂದೆ ಸಿಪಾಯಿಯೊಬ್ಬನು ಅವಳ ಬಟ್ಟೆ-ಬರೆಯ ಗಂಟನ್ನೊಂದು ಹೊತ್ತುಕೊಂಡು ಸಾಗಿದ್ದನು. ಅಧಿಕಾರಿಯು ಕೈಗಳನ್ನು ತಿಕ್ಕುತ್ತ ‘ನೀನೆ ನಿನ್ನ ಬಟ್ಟೆಯನ್ನು ಹಾಕಿ ಕೊಳ್ಳಲು ಎದ್ದು ಬರುವಿಯೋ ಇಲ್ಲವೋ ನೋಡೋಣ’ ಎಂದನು. ಅವಳಿಂದ ಉತ್ತರ ಬಾರದ್ದರಿಂದ ಅಧಿಕಾರಿಗೆ ಅಪಮಾನ ಸಹಿಸದಂತಾಯಿತು. ಸನ್ನೆಯಿಂದಲೇ ಅಪ್ಪಣೆ ಮಾಡಿದನು.
‘ಇಮಾ ವಿಲೆಯರಣ್ಯದ ದಾರಿ ಹಿಡಿದು ಮೆರವಣಿಗೆಯು ಸಾಗಿತ್ತು. ಎರಡು ತಾಸುಗಳಲ್ಲಿ ಸಿಪಾಯಿಗಳು ಮರಳಿದರು. ಅವಳನ್ನು ಎಲ್ಲಿ ಗೊಯ್ದರು-ಏನು ಮಾಡಿದರು ಎಂಬುದು ಯಾರಿಗೂ ತಿಳಿಯದ ಮಾತು; ಏನೂ ಗೊತ್ತಾಗುವಂತಿಲ್ಲ.
‘ಹಗಲಿರುಳು ಹಿಮವು ತೆರಪಿಲ್ಲದೆ ಬೀಳುತ್ತಿತ್ತು. ಬಟ್ಟ ಬಯಲು, ದಟ್ಟಡವಿ ಕೂಡ ಹಿಮದಿಂದ ಹೊಚ್ಚಿ ಹೋಗಿತ್ತು. ನರಿಗಳು ನಮ್ಮ ಮನೆಯ ಬಾಗಿಲಿಗೇ ಬಂದು ಕೂಗಾಡಲಾರಂಭಿಸಿದವು.
‘ಪಾಪ! ಆ ಬಡಪ್ರಾಣಿ-ಹುಚ್ಚಿಯ ಚಿತ್ರವು ಯಾವಾಗಲೂ ನನ್ನ ಕಣ್ಣೆದುರು ನಿಂತಂತೆ ಕಾಣವದು. ಆಕೆಯ ವಿಚಾರವೇ ವಿಚಾರ ನನ್ನ ತಲೆಯಲ್ಲಿ. ಪೃಸಿಯನ್ನ ಅಧಿಕಾರಿಗಳನ್ನು ಹಲವು ಸಲ ಬಿನ್ನವಿಸಿ ಕೊಂಡೆನು. ಅವಳ ಬಗ್ಗೆ ಏನಾದರೂ ಸುದ್ದಿ ಸಿಕ್ಕಿತೆಂದು ನಾನು ಅವಳ ಶೋಧಮಾಡಲು ಹುಚ್ಚೆದ್ದು ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ. ಆದರೇನು? ತಿಲಮಾತ್ರವೂ ನೆಲೆ ಹತ್ತಲಿಲ್ಲ. ಮನಸಿನ ಹಳಹಳಿ ದಿನ ದಿನಕ್ಕು ಬೆಳೆಯಿತು.
‘ಧ್ವಜಹಾಕಿದ ಪೃಸಿಯನ್ನರು ವಸಂತಮಾಸವು ಬಂದೊಡನೆಯೆ ಇಲ್ಲಿಂದ ಕಾಲು ಕಿತ್ತಿದರು. ಊರಲ್ಲಿಯ ಗದ್ದಲವು ಕಡಿಮೆಯಾಯಿತು. ಆದರೆ ನನ್ನ ನೆರೆಮನೆ ಮಾತ್ರ ಕದ ಕಟ್ಟಿಬಿಟ್ಟಿತ್ತು. ಎಂದಿನಂತೆ ಮನೆಯಲ್ಲ ಹಾಳು ಹಾಳು ಸುರಿಯುತ್ತಿದೆ ಮನೆಯ ಮುಂದಿನ ಕೈದೋಟದಲ್ಲಿ, ತಿರುಗಾಡುವ ದಾರಿಯಲ್ಲಿ ಎದೆಯುದ್ದ ಹುಲ್ಲು ದಟ್ಟಾಗಿ ಬೆಳೆದು ನಿಂತಿದೆ. ಚಳಿಗಾಲದಲ್ಲಿಯೇ ಆ ಮುದುಕ ಆಳುಮಗನು ಎಂದೋ ತೀರಿಕೊಂಡಿದ್ದನು. ದಿಕ್ಕಿಲ್ಲದ ಆತನ ಮರಣಕ್ಕೆ ಮರುಗುವವರು ಯಾರು? ನಾನೊಬ್ಬನೇ ಮಾತ್ರ ಹೆಜ್ಜೆ ಹೆಜ್ಜೆಗೆ ನೆನೆಸುತ್ತಲೇ ಇದ್ದೆ. ಅವಳ ಮನೆ ಕಣ್ಣಿಗೆ ಬಿದ್ದೊಡನೆ ಅವಳ ಇಡಿಕಿಡೀ ಚಿತ್ರವು ನನ್ನನ್ನು ದಿಗಿಲುಗೊಳಿಸುತ್ತಿತ್ತು. ಆ ಹೆಣ್ಣು ಮಗಳನ್ನೂಯ್ದು ಅವರೇನು ಮಾಡಿದರು? ಅಡವಿಯಿಂದ ಪಾರಾಗಿ ಅವಳೆಲ್ಲಿಗಾದರೂ ಓಡಿ ಹೋದಳೇ? ಅನಾಥದೆಸೆಗೀಡಾದ ಅವಳು ಯಾವನಾದರೊಬ್ಬ ಪರೋಪಕಾರಿ ಜೀವಿಯ ಕೈಗೆ ಸಿಕ್ಕಿರ ಬಹುದೇ? ಮಾತಾಡದ ಮೂಕಿಯಾದ ಅವಳನ್ನು ಅವನು ಅಂತಃಕರಣ ಪಟ್ಟು ದವಾಖಾನೆಗೆ ಸೇರಿಸಿರಬಹುದೇ? ಕೂತಲ್ಲಿ-ನಿಂತಲ್ಲಿ ನನಗೆ ಈ ಎಲ್ಲ ಸಂಶಯಗಳು ನಿರಸನವಾಗಲು ಯಾವ ಸಂದರ್‍ಭಗಳೂ ಒದಗಿಬರಲಿಲ್ಲ. ಆದರೆ ಕಾಲವು ನನ್ನ ಮನೋವ್ಯಥೆಯನ್ನು ಕ್ರಮೇಣ ಮರೆಮಾಡ ಹತ್ತಿ ಸಮಾಧಾನವನ್ನುಂಟುಮಾಡಿತು.
‘ಶರತ್ಕಾಲದಲ್ಲಿ ಕಾಡಕೋಳಿಗಳ ಹಿಂಡಿಗೆ ಹಿಂಡೇ ಅಡವಿಯಲ್ಲಿ ಮನಬಂದಂತೆ ಅಲೆದಾಡುವದು. ನನ್ನ ಸಂದುಬೇನೆ ಸ್ವಲ್ಪು ಸಡಿಲಾದ್ದರಿಂದ ಅಡವಿಯ ವರೆಗೆ ಮೆಲ್ಲಮೆಲ್ಲಗೆ ನಡೆಯುತ್ತ ಬಂದೆ. ನನ್ನ ಕೈಗುರಿ ಕಡಿಮೆಯಿರಲಿಲ್ಲ. ನಾಲ್ಕೈದು ಹಕ್ಕಿಗಳನ್ನು ಒಂದೇ ಹೊಡೆತಕ್ಕೆ ಸಾಯಗೊಂದಿದ್ದೇನೆ. ಬೇಟೆಯ ಉತ್ಸಾಹ ಇಮ್ಮಡಿಯಾಯಿತು. ಮತ್ತೊಂದು ಹಕ್ಕಿಯನ್ನು ಹೊಡೆದೆ. ಅದು ಟೊಂಗೆಗಳ ಝಡುಪಿನಲ್ಲಿ ಬಿತ್ತು. ನನ್ನ ಪಾಲಿನದಾದುದರಿಂದ ನಾನದನ್ನು ಝುಡುಪಿನೊಳಗಿನಿಂದ ಹೊರತರಲೇ ಬೇಕೆಂದು ಆ ಹೊದರಿನೊಳಹೊಕ್ಕೆ. ಮೈಗೆ ನಟ್ಟ ಮುಳ್ಳಿನ ಪರಿವೆಯಿಲ್ಲದೆ ಸತ್ತ ಹಕ್ಕಿಯನ್ನು ನೋಡಿದೆ. ಅಲ್ಲೊಂದು ಮನುಷ್ಯಡವಿಗೆ ಕಂಡಿತು. ಹಕ್ಕಿಯು ಅದರ ಬದಿಗೆ ಬಿದ್ದಿತ್ತು. ಏನೋ ಒಮ್ಮೆಲೇ ನೆನಪಾಯಿತು. ಆ ಡವಿಗೆ-ಆ ಹುಚ್ಚು ಹೆಣ್ಣ ಮಗಳು. ಏನಿದು ವಿಚಿತ್ರ! ಅವಳದೇ ಈ ಡವಿಗೆ. ಎಲ್ಲ ನೆನಪಾಯಿತು. ಆ ಕೇಡುಗಾಲ ವರ್‍ಷದಲ್ಲಿ ಇನ್ನೂ ಅದೆಷ್ಟು ಜನರು ಈ ಹಾಡಿಗೀಡಾಗಿರಬಹುದು! ಆದರೂ ನಿಶ್ಚಯವಾಗಿ ನಾನು ಹೇಳಬಲ್ಲೆ-ಅದೇಕೋ ನನಗೇ ತಿಳಿಯಲೊಲ್ಲದು- ನಾನು ನಿಂತರಕಿಲೆ ಅಲ್ಲಿಯೇ ದೊಪ್ಪನೆ ಬಿದ್ದೆ.
‘ಎಷ್ಟು ಹೊತ್ತು ಬಿದ್ದಿದ್ದೆನೋ ಏನೋ ಈಗ ನೆನಪಾಗಲೊಲ್ಲದು. ಎದ್ದೆ. ತೀರ ಸಂಜೆಯಾಗಿತ್ತು. ಎಲ್ಲವೂ ಪೂರ್‍ವಜನ್ಮದಂತೆ ಮನದ ಮುಂದೆ ನಿಂತಿತು. ಇದೆಲ್ಲವೂ ಕಲ್ಪನಾಮಯವೇ ಎಂದು ಬಂದ ಸಂಶಯವು ಸುಳ್ಳಾಯಿತು. ಜನಶೂನ್ಯವಾದ ಅಡವಿಯಲ್ಲಿ ಅವಳನ್ನು ಮೈ ಬಿರಿಯುವಂತಹ ಚಳಿಯಲ್ಲಿಯೇ ಆ ಹಾಸಿಗೆಯ ಮೇಲೆಯೇ ಬಿಟ್ಟು ಹೋಗಿದ್ದಾನೆ. ತನ್ನ ಛಲಕ್ಕೆ ಅಪನಂಬಿಕೆಯಾಗದಂತೆ, ಕೈ ಕಾಲುಗಳನ್ನು ನಸುವೂ ಅಲುಗಾಡಿಸದೆ ಹಿಮದ ಹಚ್ಚಡದಲ್ಲಿಯೇ ಅವಳು ತನ್ನ ಕಡೆ ಗಾಲವನ್ನು ತಂದುಕೊಂಡುಬಿಟ್ಟಳು’ ಎಂದು ಅವನು ಉದ್ಗಾರ ತೆಗೆದನು.
ಉಳಿದುದೇನು? ರಕ್ತಮಾಂಸ ನಾಯಿ-ನರಿ-ಹದ್ದುಗಳ ಪಾಲು ಅವಳ ಹರಿದು ಚಿಂದಿಯಾದ ಹಾಸಿಗೆ ಹಕ್ಕಿಗಳ ಗೂಡುಗಳ ಪಾಲು. ಅಸ್ಥಿ-ಅವಳ ಸ್ಮಾರಕ, ತನ್ನ ಪಾಲೆಂದು ಅವನು ಎದೆಗಪ್ಪಿಕೊಂಡನು. ಕಣ್ಣೀರು ಸುರಿಸುತ್ತ, ತಮ್ಮ ಮಕ್ಕಳು-ಮರಿಗಳು ಯುದ್ಧವನ್ನೆಂದಿಗೂ ನೋಡಬಾರದೆಂದು ಗಟ್ಟಿಯಾಗಿ ಚೀರಿಕೊಳ್ಳುತ್ತ ಮನೆಯನ್ನು ಮುಟ್ಟಿದೆನು. ಜನಗಳಿಗೂ ಕೇಳಿಸಿತೋ ಏನೋ ಯಾರು ಬಲ್ಲರು?
*****


















